ವಿಷಯಕ್ಕೆ ಹೋಗು

ಮೋಡಿ ಆಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಡಿ ಆಟ

[ಬದಲಾಯಿಸಿ]

ಮೋಡಿ ಕಲೆಯು ಕರ್ನಾಟಕದಲ್ಲಿ ಬಹುತೇಕ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಕಲೆಯು ಯಾವುದೇ ಒಂದು ಕೋಮಿಗೆ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಕೆಳ ಜಾತಿಯವರಲ್ಲಿ ಈ ಕಲೆಯು ಕಂಡು ಬರುತ್ತದೆ.

ಮೋಡಿ ಮಾಡುವ ರೀತಿ

[ಬದಲಾಯಿಸಿ]

ಮೋಡಿಯಲ್ಲಿ 'ಕೈಚಳಕ' ಮತ್ತು 'ಕಣ್ಣುಕಟ್ಟು' ಪ್ರಧಾನವಾದದ್ದು. ಇದನ್ನು ಮಾಟ ಮಂತ್ರವೆಂದು ಕರೆಯುವರು. ಈ ವಿದ್ಯೆಯನ್ನು ಗುರುವಿನಿಂದ ಕಲಿಯಲಾಗುತ್ತದೆ. ಇದಕ್ಕೆ ಅಪಾರವಾದ ಧೈರ್ಯ ಇರಬೇಕಾಗುತ್ತದೆ. ಮೊದಲು ಮಂತ್ರ ವಿದ್ಯೆಯನ್ನು ಕಲಿತು ಅನಂತರ ಅಲೌಕಿಕ ಶಕ್ತಿಗಳನ್ನು ತನ್ನ ವಶಪಡಿಸಿಕೊಂಡು ಆ ಮೂಲಕ ಸಾರ್ವಜನಿಕರಿಗೆ ಮೋಡಿ ಆಟವನ್ನು ಪ್ರದರ್ಶಿಸಬೇಕೆಂದು ಕಲಾವಿದರ ನಂಬಿಕೆ. ಇವರನ್ನು ಸಾಮಾನ್ಯವಾಗಿ ಮೋಡಿಯವ ಎಂಬ ಅಡ್ಡ ಹೆಸರನ್ನು ಸೇರಿಸಿ ಎಲ್ಲ ಕಡೆಯು ಗುರುತಿಸಲಾಗುತ್ತದೆ.

ಮೋಡಿಕಾರರ ವೇಷಭೂಷಣ

[ಬದಲಾಯಿಸಿ]

ಮೋಡಿಕಾರರು ದೊಡ್ಡದಾದ ಮೀಸೆ ಉದ್ದವಾದ ತಲೆ ಕೂದಲು ಹೊಂದಿರುತ್ತಾರೆ. ಮೋಡಿಯನ್ನು ಪ್ರದರ್ಶನ ಮಾಡಲು ಎರಡು ಪಕ್ಷಗಳಿರುತ್ತವೆ. ಒಂದು ಪಕ್ಷದವರು ಆಟವನ್ನು ಹಾಕಿದರೆ, ಎದುರು ಪಕ್ಷದವರು ಆ ಆಟವನ್ನು ತೆಗೆಯಬೇಕು. ಅಂದರೆ ತಮ್ಮ ಮೋಡಿ ವಿಧ್ಯೆಯನ್ನು ಎದುರಾಳಿಗೆ ಪ್ರಯೋಗಿಸಿ ಅವರು ಒಡ್ಡಿದ ಬಲೆಯಿಂದ ಗೆಲ್ಲಬೇಕು. ಕೆಲವು ಸಂದರ್ಭಗಳಲ್ಲಿ (ಜಾತ್ರೆ, ಸಂತೆಗಳಲ್ಲಿ) ಮಾತ್ರ ಮೋಡಿ ಹಾಕುವಾಗ ಪ್ರತೀ ಪಕ್ಷಗಳಿರುವುದಿಲ್ಲ. ಬದಲಾಗಿ ಒಂದೇ ಗುಂಪಿರುತ್ತದೆ. ಮೋಡಿಕಾರನು ಸಾರ್ವಜನಿಕರಿಗೆ ಕೆಲವು ಕಣ್ಣುಕಟ್ಟು ವಿಧ್ಯೆಯನ್ನು ಪ್ರದರ್ಶಿಸುತ್ತಾನೆ. ಮುಖ್ಯವಾಗಿ ಕಾಗದದಲ್ಲಿ ರೂಪಾಯಿ ನೋಟು ಮಾಡುವುದು, ಬೇವಿನ ಸೊಪ್ಪನ್ನು ತಿಂದು ಚೇಳನ್ನು ಉಗುಳುವುದು, ಕಲ್ಲನ್ನು ಸಕ್ಕರೆ ಮಾಡುವುದು ಇತ್ಯಾದಿ. ಮೋಡಿಯಲ್ಲಿ 'ರಾಜಮೋಡಿ' ಮತ್ತು 'ರಣಮೋಡಿ' ಎಂಬ ಎರಡು ವಿಧಗಳಿವೆ. ರಾಜಮೋಡಿ ಮನರಂಜನೆಗಾಗಿ ಪ್ರದರ್ಶನಗೊಂಡರೆ ರಣ ಮೋಡಿಯು ಎದುರಾಳಿಯನ್ನು ಗೆಲ್ಲಲು ಮೀಸಲಾದುದು ಇದರಿಂದ ಕೆಲವೊಮ್ಮೆ ಪ್ರಾಣಕ್ಕೂ ಅಪಾಯವಾಗುವುದುಂಟು.

ಮೋಡಿಗೆ ಬಳಸುವ ಸಾಮಾಗ್ರಿಗಳು

[ಬದಲಾಯಿಸಿ]

ನಿಂಬೆಗೆ ೧೦೧ ಸೂಜಿಯನ್ನು ಮೊನಚು ಮೇಲಿರುವಂತೆ ಚುಚ್ಚಿ ಇಡುತ್ತಾರೆ, ೨೫ ಪೈಸೆ ನಾಣ್ಯ, ಕೊಳಿಮೊಟ್ಟೆ, ಕುಂಬಳಕಾಯಿ ಬೀಜ, ೧ ಅಡಿ ಉದ್ದದ ಕೋಲು (ಮಂತ್ರದಂಡ) ಚಪ್ಪಲಿ, ಪೊರಕೆ ಹಾಗು ಬಾಳೆ ಕಂಬ ಮಂಡಲ ಬರೆದು ಅದರಲ್ಲಿ ಎಂಟು ಭಾಗಗಳಾಗಿ ಮಾಡಿ ಪ್ರತಿಯೊಂದು ಮನೆಯಲ್ಲಿ ಈಮೇಲೆ ಹೇಳಿದ ಒಂದೊಂದನ್ನು ಇರಿಸುವರು. ಪ್ರತೀ ಮೋಡಿಕಾರನು ಮಂಡಳದ ಒಂದೊಂದೇ ಮನೆಯನ್ನು ಹೊಕ್ಕು ಅಲ್ಲಿರುವ ವಸ್ತುವನ್ನು ಎತ್ತಿ ತರಬೇಕು. ಇದೇ ರೀತಿ ಎಂಟು ಮನೆಗಳನ್ನು ಹೊತ್ತು ಎಲ್ಲಾ ವಸ್ತುಗಳನ್ನು ತಂದರೆ ಆತ ಜಯಶಾಲಿಯಾಗಿ ನಿಗದಿತ ಮೊತ್ತವನ್ನು ಪಡೆಯುತ್ತಾನೆ. ಸೋತರೆ ಮೋಡಿ ಹಾಕಿದಾತನು ಆ ಹಣವನ್ನು ಪಡೆಯುವನು.

ನಿಂಬೆ

[ಬದಲಾಯಿಸಿ]

ನಿಂಬೆಯನ್ನು ತೆಗೆಯಲು ಹೊರಟಾಗ ಅದನ್ನು ತೆಗೆಯಲು ಬಾರದಂತೆ ವಿಧ ವಿಧವಾದ ಅಡ್ಡಿಯನ್ನು ಎದುರು ಮೋಡಿಯವನು ಒಡ್ಡುತ್ತಾನೆ. ಮಂತ್ರ ಶಕ್ತಿಯನ್ನು ಮೀರಿ ಆತನ ಕಡೆಯವರು ಅದನ್ನು ನಿವಾರಿಸಲು, ಪ್ರತಿಯಾಗಿ ಮಂತ್ರದ ಬೂದಿ, ಮಣ್ಣು, ಅಕ್ಕಿಯನ್ನು ಎರಚುವುದರ ಮೂಲಕ ನಿಂಬೆಯನ್ನು ತೆಗೆಯಲು ಸಹಾಯ ಮಾಡುವರು.

೨೫ ಪೈಸೆ ನಾಣ್ಯ

[ಬದಲಾಯಿಸಿ]

ಇದನ್ನು ನೆಲದ ಒಳಗೆ ಹೂತಿರುತ್ತಾರೆ. ಬಾಯಿಯಲ್ಲಿ ಹೆಕ್ಕಿ ತೆಗಿಯಬೇಕು. ಆಗ ಮೋಡಿಯವನು ತಡೆಯುತ್ತಾನೆ. ಪ್ರತಿ ಪಕ್ಷದವನು ತೆಗೆಯುತ್ತಿದ್ದಂತೆ ಆ ನಾಣ್ಯವನ್ನು ಮಂತ್ರದ ಮೂಲಕ ಬೇರೆಡೆಗೆ ವರ್ಗಾಯಿಸುತ್ತಾನೆ. ಅದನ್ನು ಈತ ತನ್ನ ಮಂತ್ರ ಶಕ್ತಿಯಿಂದ ನೊಡುತ್ತಾ ಹೋಗುವನು. ಒಮ್ಮೊಮ್ಮೆ ಹತ್ತಿರದ ಎಮ್ಮೆ ಹೊಟ್ಟೆಯಲ್ಲಿ ಹೊಗಿ ಬಳಿಕ ಕೆರೆಯೋಂದರ ಕಪ್ಪೆಯ ಹೊಟ್ಟೆಯಲ್ಲಿ ಇರುತ್ತದೆ. ಆಗ ಕೆರೆಯಲ್ಲಿ ಮುಳುಗಿ ಆ ಕಪ್ಪೆಯನ್ನು ಇಡಿದು ತಂದು ಸಾರ್ವಜನಿಕರ ನಡುವೆ ಅದರ ಹೊಟ್ಟೆಯಿಂದ ೨೫ ಪೈಸೆ ನಾಣ್ಯವನ್ನು ತೆಗೆಡು ತೊರಿಸುತ್ತಾರೆ. ಇದರಿಂದ ಜನರಿಗೆ ಮೋಡಿಯ ಆಟವು ಬಹಳ ಆಶ್ಚರ್ಯವನ್ನು ತರುತ್ತದೆ.

ಕೋಳಿ ಮೊಟ್ಟೆ

[ಬದಲಾಯಿಸಿ]

ಎರಡು ಮನೆಯು ಮುಗಿದು ಮೂರನೆಯ ಮನೆಗೆ ಪ್ರತಿ ಪಕ್ಷದವನು ಬಂದಾಗ ಮೋಡಿಗಾರನು ಅಪಾರ ತೊಂದರೆಯನ್ನು ಕೊಡುವುದುಂಟು. ಅಂದರೆ ಮಂತ್ರಿಸಿದ ಕಡ್ಡಿಯನ್ನು ಹಿಡಿದು ಹಿಂಡುವುದರ ಮೂಲಕ ಈತನ ದೇಹವನ್ನು ಹಿಂಡುವಂತೆ ಮಾಡಿ ಮೊಟ್ಟೆಯನ್ನು ತೆಗೆಯಲು ಆಗದಂತೆ ಮಾಡುತ್ತಾನೆ. ಅಷ್ಟರಲ್ಲಿ ಈತನ ಕಡೆಯವರು ಅದಕ್ಕೆ ಪ್ರತಿಯಾಗಿ ಮಂತ್ರ ಹಾಕಿ ಮನೆಯನ್ನು ಪ್ರವೇಶಿಸಿ ಮೊಟ್ಟ ಹೆಕ್ಕಿ ತರುವಂತೆ ಮಾಡುವರು.

ಕುಂಬಳಕಾಯಿ ಬೀಜ

[ಬದಲಾಯಿಸಿ]

ನಾಲ್ಕನೇಯ ಮನೆಯಲ್ಲಿ ಒಂದು ಕುಂಬಳಕಾಯಿ ಬೀಜವಿರುತ್ತದೆ. ಇದನ್ನು ತನ್ನ ಮಂತ್ರ ಶಕ್ತಿಯಿಂದ ಗಿಡವಾಗಿ ಬೆಳಸಿ ಅದರಲ್ಲಿ ಕಾಯಿ ಬಿಡಿಸಿ ಅದನ್ನು ತೆಗೆಡುಕೊಂಡು ಬರಬೇಕು. ಆಗ ಮೋಡಿ ಹಾಕಿದಾತನು ಗಿಡವು ಬೆಳೆಯದಂತೆ ಕಾಯಿ ಆಗದಂತೆ ಕಾಯಿಯನ್ನು ಹೊತ್ತು ಮನೆಯಿಂದ ಹೊಗದಂತೆ ಅಡ್ಡ ಮಾಡುವನು. ಆದರೂ ತನ್ನ ಮಂತ್ರ ಬಲದಿಂದ ಬೀಜದಿಂದ ಗಿಡ ಚಿಗುರಿಸಿ ಹೂವಾಗಿ ಕಾಯಿ ಮಾಡಿ ಅದನ್ನು ಪಡೆದುಕೊಂದು ಬರುವಾಗ ಅದು ಅತೀ ಬಾರವಾಗಿ ಹೊರಲಾರದೆ ಅಲ್ಲೇ ಬಿದ್ದು ಒದ್ದಾಡುವಂತೆ ಮಾಡುವುದುಂಟು. ಆದರೂ ಬಹಳ ಶ್ರಮದಿಂದ ಗೆದ್ದು ಬರುವನು. ಒಂದು ಅಡಿ ಉದ್ದದ ಕೋಲು ಇದನ್ನು ತೆಗೆಯಲು ಹೋದಾಗ ಮಂತ್ರೋಚರಣೆ ಮಾಡಿ ಅದನ್ನು ತೆಗೆಯುವವನನ್ನು ಬಡಿಯುವುದುಂಟು. ಆಗ ತನ್ನ ಮಂತ್ರಶಕ್ತಿಯಿಂದ ದೊಣ್ಣೆಯನ್ನು ನಿಯಂತ್ರಿಸಿ ತೆಗೆದುಕೊಂಡು ಬರಬೇಕು.

ಎಕ್ಕಡ

[ಬದಲಾಯಿಸಿ]

ಇದನ್ನು ತೆಗೆಯಲು ಮಂಡಲಕ್ಕೆ ನುಗ್ಗಿದಾಗ ಅಲ್ಲಿರುವ ಎಕ್ಕಡ ಆತನನ್ನು ಹೊಡೆಯುವುದು. ಕೊನೆಗು ತನ್ನ ಮಂತ್ರಶಕ್ತಿಯಿಂದ ನಿಯಂತ್ರಿಸಿ ತನ್ನ ಹಿಡಿತಕ್ಕೆ ತಂದು ಬಾಯಿಯಿಂದ ಕಚ್ಚಿಕೊಂಡು ಬರುವನು.

ರಣಮೋಡಿ

[ಬದಲಾಯಿಸಿ]

ತಂದೆಯಿಂದ ಮಗನಿಗೆ ವಂಶಪಾರಂಪರ್ಯವಾಗಿ ಮುಂದುವರೆಯುವುದೆ ಹೆಚ್ಚು. ಮೋಡಿಕಾರರಿಗೆ ತನ್ನ ಸೀಮೆಯಲ್ಲಿ ಯಾರು ಮೊದಲಿಗರಿರಬಾರದು ಎಂಬ ಛಲ ಇರುತ್ತದೆ. ಅಷ್ಠೆ ಅಲ್ಲದೆ ಅವನ ಎಲ್ಲೆಯ ಒಳಗೆ ಬೇರೆ ಯಾರೇ ಆದರೂ ಬಂದು ಮೋಡಿಯಾಟವನ್ನು ಪ್ರದರ್ಶಿಸಿದೆ ಆಕ್ಷೇಪಣೆಗೆ ಒಳಗಾಗುತ್ತಾನೆ. ಆ ಪ್ರದೇಶದಲ್ಲಿರುವ ಪ್ರಖ್ಯಾತ ಮೋಡಿಕಾರನ ಅನುಮತಿ ಪಡೆದು ಬೇರೊಬ್ಬ ಪ್ರದರ್ಶಿಸಬೇಕು. ಈ ಸಂದರ್ಭದಲ್ಲಿ ಇಬ್ಬರು ಸಮಾನರಾದರೆ ಪ್ಯೆಪೋಟಿ ಬೆಳೆದು ಪಣ ಕಟ್ಟಿ ತಮ್ಮ ವಿದ್ಯೆಯನ್ನು ಪ್ರದರ್ಶಿಸುವುದುಂಟು. ಇದನ್ನು ರಣಮೋಡಿ ಅಥವಾ ಜಟ್ಟಿನ ಮೋಡಿ ಎಂದು ಕರೆಯುವುದುಂಟು.

ಉಲ್ಲೇಖ

[ಬದಲಾಯಿಸಿ]
  1. ಸಂಪಾದಕ: ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.
"https://kn.wikipedia.org/w/index.php?title=ಮೋಡಿ_ಆಟ&oldid=1049139" ಇಂದ ಪಡೆಯಲ್ಪಟ್ಟಿದೆ