ಮೀಥೇನ್
ಮೀಥೇನ್ CH4 ರಾಸಾಯನಿಕ ಸೂತ್ರ ಇರುವ ಒಂದು ರಸಾಯನಿಕ ಸಂಯುಕ್ತ. ಇದರಲ್ಲಿ ಒಂದು ಇಂಗಾಲ ಅಥವಾ ಕಾರ್ಬನ್ ಪರಮಾಣು ಮತ್ತು ನಾಲ್ಕು ಹೈಡ್ರೊಜನ್ ಅಥವಾ ಜಲಜನಕ ಪರಮಾಣುಗಳು ಇರುತ್ತವೆ. ಇದೊಂದು ಅತಿ ಸರಳ ಆಲ್ಕೇನ್. ಇದು ನಿಸರ್ಗಾನಿಲದ ಪ್ರಮುಖ ಭಾಗ ಮತ್ತು ಇದನ್ನು ಉರವಲು ಆಗಿ ಬಳಸಲು ಇರುವ ತೊಂದರೆ ಎಂದರೆ ಇದನ್ನು ಶೇಖರಿಸುವುದು ಮತ್ತು ಸಂಗ್ರಹಿಸಿಡುವುದು. ಏಕೆಂದರೆ ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಇದು ಅನಿಲವಾಗಿರುತ್ತದೆ.
ಗುಣಗಳು ಮತ್ತು ರಾಸಾಯನಿಕ ಕ್ರಿಯೆಗಳು
[ಬದಲಾಯಿಸಿ]ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಇದೊಂದು ಬಣ್ಣ ರಹಿತ, ವಾಸನೆ ರಹಿತ ಅನಿಲ.[೧] ನೈಸರ್ಗಿಕ ಅನಿಲದ ವಾಸನೆಯು ಅದರಲ್ಲಿ ಸೇರಿದ ಇತರ ಅನಿಲಗಳಿಂದಾಗಿ ಬಂದಿದೆ. ಒಂದು ಅಟ್ಮಾಸ್ಪಿಯರ್ ಒತ್ತಡದಲ್ಲಿ ಇದರ ಕುದಿ ಬಿಂದು −161 °ಸೆ (−257.8 °ಎಫ್).[೨] ಮೀಥೇನಿನ ದ್ರವನಬಿಂದು -182.60C ಮತ್ತು ಕ್ವಥನಬಿಂದು 161.70C. ಈ ಅನಿಲ ವಾಯುವಿಗಿಂತ ಹಗುರ. ಇದರ ಸಾಂದ್ರತೆ 0.554. ಇದು ನೀರಿನಲ್ಲಿ ವಿಲೀನವಾಗುವುದಿಲ್ಲ. ಆದರೆ ಈಥೈಲ್ ಆಲ್ಕೊಹಾಲ್ ಮತ್ತು ಈಥರ್ ಮುಂತಾದ ದ್ರಾವಣಗಳಲ್ಲಿ ವಿಲೀನವಾಗುತ್ತದೆ.
ಮೀಥೇನಿನ ಅಣುವಿನಲ್ಲಿ ಕಾರ್ಬನ್ನಿನ ಮೇಲನ್ಸಿ ಪೂರ್ಣವಾಗಿ ತೃಪ್ತಿಯಾಗಿರುವುದರಿಂದ ಇದು ಆದೇಶ ರಾಸಾಯನಿಕ ಕ್ರಿಯೆಗಳಿಗೆ ಮಾತ್ರ ಒಳಗಾಗುತ್ತದೆ. ಮೀಥೇನನ್ನು ಕ್ಲೋರೀನಿನೊಂದಿಗೆ ಬೆರೆಸಿ ಕತ್ತಲೆಯಲ್ಲಿ ಇಟ್ಟಿದ್ದರೆ ಯಾವ ರಸ ಬದಲಾವಣೆ ಆಗುವುದಿಲ್ಲವಾದರೂ ಸೂರ್ಯನ ಬೆಳಕಿನಲ್ಲಿ ಅವೆರಡೂ ವೇಗವಾಗಿ ರಾಸಾಯನಿಕ ಕ್ರಿಯೆ ಹೊಂದಿ ಮೀಥೇನಿನಲ್ಲಿಯ ನಾಲ್ಕು ಹೈಡ್ರೊಜನ್ ಪರಮಾಣುಗಳು ಒಂದೊಂದಾಗಿ ಹೋಗಿ ಅವುಗಳ ಬದಲು ಕ್ಲೋರೀನಿನ ಪರಮಾಣುಗಳು ಅನುಕ್ರಮವಾಗಿ ಬಂದು ಮೀಥೈಲ್ ಕ್ಲೋರೈಡ್, ಮಿಥಿಲೀನ್ ಕ್ಲೋರೈಡ್, ಕ್ಲೋರೊಫಾರಮ್ ಮತ್ತು ಕಾರ್ಬನ್ ಟೆಟ್ರಕ್ಲೋರೈಡುಗಳ ಈ ರೀತಿಯ ತಯಾರಿಕೆ ಕೈಗಾರಿಕಾ ಮಟ್ಟದಲ್ಲಿಯೂ ಸಾಧ್ಯ.
ಇದರ ಜ್ವಾಲೆಯಲ್ಲಿ ಶಾಖ ಹೆಚ್ಚು. ಎಂದೇ ಇಂಧನಾನಿಲವಾಗಿ ಇದರ ಮುಖ್ಯ ಉಪಯೋಗ. ಇದು ವಾಯುವಿನೊಂದಿಗೆ ಸೇರಿಕೊಂಡು ಸ್ಛೋಟಕಮಿಶ್ರಣವಾಗಬಲ್ಲುದು. ಶೇಕಡಾ ಸುಮಾರು 5.3ರಿಂದ 13.9ರಷ್ಟು ಮೀಥೇನ್ ಇರುವ ವಾಯುವೇ ಕಲ್ಲಿದ್ದಲಿನ ಗಣಿಗಳಲ್ಲಿ ಆಗುವ ಸ್ಛೋಟಗಳಿಗೆ ಕಾರಣ.
ಮೀಥೇನ್ ಅನಿಲದ ಭಾಗಶಃ ದಹನ ತೀರ ಸವಾಲಿನದು. ಕಡಿಮೆ ಆಕ್ಸಿಜನ್ ಇರುವಾಗಲೂ ದಹನ ಮುಂದುವರೆದು ಕೊನೆಗೆ ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಉತ್ಪನ್ನವಾಗುತ್ತವೆ. ಇತರ ಹೈಡ್ರೋಕಾರ್ಬನ್‌ಗಳಂತೆ ಮೀಥೇನ್ ಸಹ ಬಲಹೀನ ಆಮ್ಲ. ಡೈಮೀಥೈಲ್ ಸಲ್ಫೇಟ್‌ನಲ್ಲಿ ಅದರ pKa (ಆಮ್ಲತೆಯ ಅಳೆಯುವ ಮಾನಕ) 56 ಎಂದು ಅಂದಾಜಿಸಲಾಗಿದೆ. ಮೀಥೇನ್‌ನ ದಹನ ತಾಪಮಾನ[೩] 55 MJ/kg. ಮೀಥೇನ್‌ನ ದಹನ ಹಲವು ಹೆಜ್ಜೆಗಳ ಕ್ರಿಯೆ. ಅದರ ಕೊನೆಯ ಉತ್ಪನ್ನವನ್ನು ಹೀಗೆ ಸೂಚಿಸಬಹುದು:
- CH4 + 2O2 → CO2 + 2H2O (ΔH = −891 k J/mol (ಮಾನದಂಡ ಪರಿಸ್ಥಿತಿಗಳಲ್ಲಿ))
ಮೀಥೇನ್ ಹ್ಯಾಲೋಜೆನ್‌ಗಳೊಂದಿಗಿನ ರಾಸಾಯನಿಕ ಕ್ರಿಯೆಯನ್ನು ಹೀಗೆ ತೋರಿಸಬಹುದು:
- X2 + UV → 2 X•
- X• + CH4 → HX + CH3•
- CH3• + X2 → CH3X + X•
ಇಲ್ಲಿಯ X ಹ್ಯಾಲೊಜನ್‌ಗಳಾದ ಫ್ಲೋರಿನ್, ಕ್ಲೋರಿನ್, ಬ್ರೋಮಿನ್ ಅಥವಾ ಅಯೊಡಿನ್ ಸೂಚಿಸುತ್ತದೆ.
ಉಪಯೋಗಗಳು
[ಬದಲಾಯಿಸಿ]ನೈಸರ್ಗಿಕ ಅನಿಲ: ಗ್ಯಾಸ್ ಟರ್ಬೈನ್ ಮತ್ತು ಎಲೆಕ್ಟ್ರಿಕಲ್ ಜನರೇಟರ್‌ಗಳಲ್ಲಿ ಮೀಥೇನ್‌ನ್ನು ಉರುವಲಾಗಿ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇತರ ಹೈಡ್ರೋಕಾರ್ಬನ್ ಉರವಲುಗಳಿಗೆ ಹೋಲಿಸಿದರೆ ಮೀಥೇನ್ ಉತ್ಪಾದಿಸಿದ ಪ್ರತಿ ಘಟಕ ಬಿಸುಪಿಗೂ ಕಡಿಮೆ ಕಾರ್ಬನ್ ಡೈಆಕ್ಸೈಡ್ ಉತ್ಪಾದಿಸುತ್ತದೆ. ಮೀಥೇನ್‌ನ ದಹನ ತಾಪಮಾನ [೩] 891 kJ/mol ಬೇರೆ ಎಲ್ಲಾ ಹೈಡ್ರೋಕಾರ್ಬನ್‌ಗಳಿಗಿಂತ ಕಡಿಮೆ. ಆದರೆ ದಹನ ತಾಪಮಾನದ (891 kJ/mol) ಅಣು ದ್ರವ್ಯರಾಶಿ (16.0 g/mol, ಇದರಲ್ಲಿ ಕಾರ್ಬನ್ ಭಾಗ 12.0 g/mol) ಯೊಂದಿಗಿನ ಅನುಪಾತವು ಇತರ ಸಂಕೀರ್ಣ ಹೈಡ್ರೋಕಾರ್ಬನ್ ಗಳಿಗಿಂತ ಪ್ರತಿ ದ್ರವ್ಯರಾಶಿಗೆ ಹೆಚ್ಚು ಬಿಸುಪು (55.7 kJ/g) ಉತ್ಪಾದಿಸುತ್ತದೆ.
ಹಲವು ದಶಕಗಳಿಂದ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಗೋಬರ್‌ಗ್ಯಾಸ್ ಅಥವಾ ಬಯೋಗ್ಯಾಸ್ ಘಟಕಗಳನ್ನು ಅಡುಗೆ ಮತ್ತು ಕೆಲವೊಮ್ಮೆ ಬೆಳಕಿಗೂ ಸಹ ಬಳಸಲಾಗುತ್ತಿದೆ. ಇದರಲ್ಲಿ ಪಶುಸಂಗೋಪನೆಯ ತ್ಯಾಜ್ಯಗಳು ಮುಖ್ಯವಾಗಿ ದನಗಳ ಸಗಣಿಯನ್ನು ಬಳಸಿ ದಹನಶೀಲ ಅನಿಲವನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿ ಸಾವಯವ ಪದಾರ್ಥಗಳನ್ನು ಅನೆರೋಬಿಕ್ ಅಥವಾ ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ಸೂಕ್ಷ್ಮಜೀವಿಗಳು ದಹನಶೀಲ ಅನಿಲವಾಗಿ ಪರಿವರ್ತಿಸುತ್ತವೆ. ಈ ಅನಿಲದ ಬಹುಭಾಗ ಮೀಥೇನ್ ಆಗಿರುತ್ತದೆ.[೪] ಹಾಗೆಯೇ ಹಸೀಕಸವನ್ನು ನೀರು ಮತ್ತು ಮೀಥೇನ್ ಆಗಿ ಸೂಕ್ಷ್ಮಜೀವಿಗಳ ಮೂಲಕ ಪರಿವರ್ತಿಸುವ ಕೈಗಾರಿಕಾ ಘಟಕವೂ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದುದು ವರದಿಯಾಗಿದೆ. ಇದು ಭಾಗಶಃವಾದರೂ ಮೆಟ್ರೊಗಳ, ನಗರಗಳ ಕಸದ ಸಮಸ್ಯೆಗೆ ಪರಿಹಾರವಾಗ ಬಲ್ಲದು ಮತ್ತು ಕಸವು ಇಲ್ಲಿ ಉಪಯುಕ್ತವಾಗಿ ಬಳಸಲ್ಪಡುತ್ತದೆ ಸಹ.[೫]
ದ್ರವೀಕರಿಸಿದ ನೈಸರ್ಗಿಕ ಅನಿಲ: ಇದು ಪ್ರಮುಖವಾಗಿ ಮೀಥೇನ್ ಹೊಂದಿರುವ ಸಂಗ್ರಹ ಮತ್ತು ಸಾಗಣೆಯ ಅನುಕೂಲಕ್ಕೆ ದ್ರವೀಕರಿಸಿದ ನೈಸರ್ಗಿಕ ಅನಿಲ. ನೈಸರ್ಗಿಕ ಅನಿಲ ತೆಗೆದುಕೊಳ್ಳುವ ಸ್ಥಳಕ್ಕಿಂತ 1/600 ಕಡಿಮೆ ಸ್ಥಳವನ್ನು ಆಕ್ರಮಿಸುತ್ತದೆ. ಹೀಗೆ ದ್ರವೀಕರಿಸುವ ಮುನ್ನ ದೂಳಿನ ಕಣ, ಆಮ್ಲ ಅನಿಲಗಳು, ಹೀಲಿಯಮ್ ಮತ್ತು ನೀರನ್ನು ಅವು ಹರಿಯುವಿಕೆಗೆ ಅಡ್ಡಿಯಾಗಬಹುದಾದ ಕಾರಣಕ್ಕೆ ತೆಗೆಯಲಾಗುತ್ತದೆ. ಶುದ್ಧೀಕರಿಸಿದ ಮೀಥೇನ್ ದ್ರವವನ್ನು ರಾಕೆಟ್‌ನಲ್ಲಿ ಉರುವುಲಾಗಿಯೂ ಬಳಸಲಾಗುತ್ತದೆ.[೬]
ಇತರ ಉಪಯೋಗಗಳು: ಮೀಥೇನ್ ಅತಿದೃಢ ರಾಸಾಯನಿಕ. ಇದರ ಅಣುವನ್ನು ಒಡೆಯಲು 10000C ಉಷ್ಣತೆ ಬೇಕು. ಆಗ ಒಡೆದು ಇಂಗಾಲ ಬಿಡುಗಡೆಯಾಗುವುದು. ಈ ಗುಣ ಉಪಯೋಗಿಸಿಕೊಂಡು ಹತ್ತಿಯ ರೂಪದ ಇಂಗಾಲ (ಕಾರ್ಬನ್ ಬ್ಲ್ಯಾಕ್) ತಯಾರಿಸುತ್ತಾರೆ. ಇದನ್ನು ಟಯರ್ ತಯಾರಿಕೆಯಲ್ಲಿ ಟಯರಿಗೆ ಗಡಸುತನ ಬರಿಸಲು ಮತ್ತು ಅದರ ಸವೆತ ಕಡಿಮೆ ಮಾಡಿ ಬಾಳಿಕೆ ಹೆಚ್ಚಿಸಲು ಬಳಸುತ್ತಾರೆ.
ಇದೇ ರೀತಿಯಲ್ಲಿ ಮೀಥೇನ್ ಮತ್ತು ನೈಟ್ರಿಕ್ ಆಮ್ಲ 2:1 ರ ಪ್ರಮಾಣದಲ್ಲಿ 4750C ಉಷ್ಣತೆಯಲ್ಲಿ ಅನಿಲ ಪರಿಸ್ಥಿತಿಯಲ್ಲಿ ಸೇರಿ ನೈಟ್ರೊಮೀಥೇನ್ ತಯಾರಾಗುವುದು. ಮೀಥೇನನ್ನು ವಿದ್ಯುತ್‌ಚಾಪಕ್ಕೆ ಒಳಪಡಿಸಿ ಕೈಗಾರಿಕಾ ವಸ್ತುವಾದ ಅಸಿಟಲೀನನ್ನು ತಯಾರಿಸಬಹುದು. ಇವಲ್ಲದೆ ಮೀಥೇನಿನ ಜನ್ಯವಸ್ತುಗಳಿಗೆ ಹಚ್ಚುವ ವಾರ್ನಿಷ್ ಬಣ್ಣಗಳಿಗೆ ದ್ರಾವಕವಾದ ಮೀಥೈಲ್ ಆಲ್ಕೋಹಾಲ್, ಫಾರ್ಮಾಲ್ಡಿಹೈಡ್, ಪ್ಲಾಸ್ಟಿಕ್ ಕೈಗಾರಿಕೆಯ ಪ್ರಾರಂಭದ ವಸ್ತುವಾದ ಹೈಡ್ರೊಜನ್ ಸಯನೈಡ್ ಮುಂತಾದವು ಉದಾಹರಣೆಗಳು. 800-10000C ಉಷ್ಣತೆಯಲ್ಲಿ ಮೀಥೇನನ್ನು ನೀರಿನ ಆವಿಯೊಂದಿಗೆ ರಾಸಾಯನ ಕ್ರಿಯೆ ಹೊಂದುವಂತೆ ಮಾಡಿದಾಗ ಹೈಡ್ರೊಜನ್ ಮತ್ತು ಕಾರ್ಬನ್ ಮಾನಾಕ್ಸೈಡ್ ಅನಂತರ ಕಾರ್ಬನ್ ಡೈಆಕ್ಸೆಡ್ ಮತ್ತು ಹೆಚ್ಚು ಹೈಡ್ರೊಜನ್ ಬಿಡುಗಡೆ ಆಗುವುವು. ಹೈಡ್ರೊಜನನ್ನು ಅಮೋನಿಯ ತಯಾರಿಕೆಗೆ ಬಳಸಿಕೊಳ್ಳಬಹುದು.
ಉತ್ಪಾದನೆ
[ಬದಲಾಯಿಸಿ]ಜೈವಿಕ ಉತ್ಪಾದನೆ
[ಬದಲಾಯಿಸಿ]ನೈಸರ್ಗಿಕವಾಗಿ ಉತ್ಪಾದನೆಯಾಗುವ ಮೀಥೇನನ್ನು ಮೆಥನೊಜೆನೆಸಿಸ್ ಎಂಬ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳು ಉತ್ಪಾದಿಸುತ್ತವೆ. ಈ ಉತ್ಪಾದನೆಯ ಕೊನೆಯ ಕ್ರಿಯೆಯನ್ನು ಹೀಗೆ ಸೂಚಿಸಬಹುದು:
- CO2 + 8 H+ + 8 e− → CH4 + 2 H2O
ಮೆಥನೊಜೆನೆಸಿಸ್ ಒಂದು ರೀತಿಯ ಅನೆರೋಬಿಕ್ (ಆಕ್ಸಿಜನ್ ರಹಿತ) ಉಸಿರಾಟ. ತಿಪ್ಪೆಗಳಲ್ಲಿ, ಮೆಲುಕುಹಾಕುವ ಪ್ರಾಣಿಗಳ ಮತ್ತು ಗೆದ್ದಲುಗಳ ಹೊಟ್ಟೆಯಲ್ಲಿ ಇರುವ ಇವು ಈ ಪ್ರಕ್ರಿಯೆಯ ಮೂಲಕ ಉಸಿರಾಡುತ್ತವೆ. ಈ ಉಸಿರಾಟದಲ್ಲಿ ಮೀಥೇನ್ ಬಿಡುಗಡೆಯಾಗುತ್ತದೆ.
ಇತರ ಉತ್ಪಾದನೆಗಳು
[ಬದಲಾಯಿಸಿ]ವಿದ್ಯುಶ್ಚಕ್ತಿ ಬಳಸಿ ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನಿಂದ ಮೀಥೇನ್‌ನ್ನು ಉತ್ಪಾದಿಸಲಾಗುತ್ತದೆ. ಸಬ್ಟಿಯರ್ ಪ್ರಕ್ರಿಯೆಯಲ್ಲಿಯೂ ಇದನ್ನು ಉತ್ಪಾದಿಸಲಾಗುತ್ತದೆ. ಇಲ್ಲಿ ಹೆಚ್ಚಿನ ತಾಪಮಾನದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಹೈಡ್ರೋಜನ್‌ಗಳು ನಿಕಲ್ ವೇಗವರ್ಧಕವಾಗಿ ಇರುವಾಗ ಮೀಥೇನ್ ಉತ್ಪಾದನೆಯಾಗುತ್ತದೆ.[೭] ಮೀಥೇನ್ ಕಾರ್ಬನ್ ಮಾನಾಕ್ಸೈಡ್‌ನ ಹೈಡ್ರೋಜನೇಶನ್ (ಹೈಡ್ರೋಜನ್ ಪರಮಾಣುವನ್ನು ಸೇರಿಸುವುದು) ಪ್ರಕ್ರಿಯೆಯಲ್ಲಿ ಉತ್ಪಾದನೆಯಾಗುವ ಉಪ ಉತ್ಪನ್ನ.
ಪ್ರಯೋಗಾಲಯದಲ್ಲಿ ಮೀಥೇನನ್ನು ಅಸಿಟಿಕ್ ಆಮ್ಲದ ಸೊಡಾ ಲೈಮ್[೮][೯] ಇರುವಿಕೆಯಲ್ಲಿನ ಡಿಸ್ಟ್ರಕ್ಟಿವ್ ಡಿಸ್ಟಿಲೇಶನ್[೧೦][೧೧] ಮೂಲಕ ಪಡೆಯಬಹುದು. ಈ ಪ್ರಕ್ರಿಯೆಯಲ್ಲಿ ಅಸೆಟಿಕ್ ಆಮ್ಲ ಕಾರ್ಬಾಕ್ಸಿಲ್ ಗುಂಪನ್ನು ಕಳೆದುಕೊಳ್ಳುತ್ತದೆ.
ಪ್ರಯೋಗಾಲಯದಲ್ಲಿ ಸೋಡಿಯಮ್ ಅಸಿಟೇಟನ್ನು ಸೋಡಿಯಮ್ ಹೈಡ್ರಾಕ್ಸೈಡಿನೊಂದಿಗೆ ಕಾಸುವುದು ಒಂದು ಮಾರ್ಗ. ಮೀಥೈಲ್ ಮೆಗ್ನಿಸಿಯಮ್ ಅಯೋಡೈಡಿನ (ಗ್ರೀನ್ಯಾರ್ಡ್ ರಾಸಾಯನಿಕ) ಈಥರ್ ದ್ರಾವಕದೊಂದಿಗೆ ಅದರಷ್ಟೆ ನೀರನ್ನು ನಿಧಾನವಾಗಿ ಹಾಕುವುದರಿಂದ ಮೀಥೇನ್ ಬಿಡುಗಡೆ ಆಗುತ್ತದೆ. ಇದು ತಯಾರಿಕೆಯ ಇನ್ನೊಂದು ಮಾರ್ಗ.
ನಿಸರ್ಗದಲ್ಲಿ
[ಬದಲಾಯಿಸಿ]ನಿಸರ್ಗದಲ್ಲಿ ಕಲ್ಲೆಣ್ಣೆ (ಪೆಟ್ರೋಲಿಯಂ) ಹಾಗೂ ನೈಸರ್ಗಿಕ ಅನಿಲಗಳು ಒಂದೇ ರೀತಿಯಲ್ಲಿ ಉತ್ಪಾದನೆಯಾಗುತ್ತವೆ. ನೈಸರ್ಗಿಕ ಅನಿಲದ ವಾಲ್ಯೂಮ್ (ಘನಗಾತ್ರ) ನಲ್ಲಿ ಸುಮಾರು ಶೇ 87ರಷ್ಟು ಮೀಥೇನ್ ಇರುತ್ತದೆ. ಸಾಕ್ಷೇಪಿಕವಾಗಿ ಭೂಮಿಯ ಮೇಲಿನ ಪದರಗಳಲ್ಲಿ (ಕಡಿಮೆ ಒತ್ತಡದಲ್ಲಿ) ಸಾವಯವ ಪದಾರ್ಥದ ಆಮ್ಲಜನಕ ರಹಿತ (ಅನೆರೊಬಿಕ್) ಕೊಳೆಯವಿಕೆಯಲ್ಲಿ ಮೀಥೇನ್ ಉತ್ಪಾದನೆಯಾಗುತ್ತದೆ.
ರೆಂಬೆ, ಕಾಂಡ ಮುಂತಾದ ಸಸ್ಯಸಂಬಂಧ ವಸ್ತುಗಳು ನೀರಿನಲ್ಲಿ ನಿರಾಮ್ಲಜನಕ ಪರಿಸ್ಥಿತಿಯಲ್ಲಿದ್ದಾಗ ವಿಶೇಷ ಜೀವಾಣುಗಳ ಕಾರಣವಾಗಿ ಈ ಅನಿಲ ತಯಾರಾಗುತ್ತದೆ. ಈ ರೀತಿಯ ಪರಿಸ್ಥಿತಿಯಿರುವ ಜವುಗು ಪ್ರದೇಶದಲ್ಲಿ ಇದು ಬಿಡುಗಡೆಯಾಗುವುದರಿಂದ ಇದನ್ನು ಜವುಗು ಅನಿಲ (ಮಾರ್ಷ್ ಗ್ಯಾಸ್) ಎಂದೂ ಕರೆಯುತ್ತಾರೆ. ಸಗಣಿ ಅಥವಾ ಗ್ರಾಮಸಾರವನು ಇದೇ ರೀತಿ ನಿರಾಮ್ಲಜನಕ ಸ್ಥಿತಿಯಲ್ಲಿ ಕೊಳೆಸುವುದರಿಂದ ತಯಾರಾಗಿ ಬರುವ ಗೊಬ್ಬರ ಅನಿಲ ಅಥವಾ ಗ್ರಾಮಸಾರ ಅನಿಲದಲ್ಲಿಯೂ ಮೀಥೇನ್ ಮುಖ್ಯವಾದುದು. ಸೀಮೆ ಎಣ್ಣೆಯನ್ನು ಕ್ರ್ಯಾಕಿಂಗ್ ಕ್ರಿಯೆಗೆ (ನಿರಾಮ್ಲಜನಕ ಮತ್ತು ಅತಿ ಉಷ್ಣತೆಯಲ್ಲಿ ಆಗುವ ಅಣುಛೇದನಕ್ರಿಯೆ) ಒಳಪಡಿಸಿ ತಯಾರಿಸಿದ ಅಡುಗೆ ಇಂಧನದಲ್ಲಿಯೂ ಕೋಲ್ ಅನಿಲ, ಕೋಕ್ ಓವನ್ ಅನಿಲ, ಪೆಟ್ರೋಲಿಯಮ್ ಸಂಸ್ಕರಣ ಅನಿಲಗಳಲ್ಲಿಯೂ ಮೀಥೇನಿನ ಪ್ರಮಾಣ ಹೆಚ್ಚು.
ಭೂಮಿಯ ಮೇಲೆ ಗೊಬ್ಬರ, ಮುನ್ಸಿಪಲ್ ಪೋಲು (ಜೈವಿಕವಾಗಿ ವಿಘಟನೆಯಾಗಬಲ್ಲದು), ಜೈವಿಕವಾಗಿ ವಿಘಟನೆಯಾಗಬಲ್ಲ ಆಹಾರ ಪದಾರ್ಥ/ಪಶು ಆಹಾರ ಆಮ್ಲಜನಕ ರಹಿತ ಕೊಳೆಯುವಿಕೆಯಲ್ಲಿ ಮೀಥೇನ್ ಉತ್ಪಾದನೆಯಾಗುತ್ತದೆ. ಭತ್ತದ ಗದ್ದೆಗಳು ದೊಡ್ಡ ಮಟ್ಟದಲ್ಲಿ ಮೀಥೇನ್ ಉತ್ಪಾದಿಸುತ್ತವೆ. ದನಗಳ ತೇಗು ವಾತಾವರಣದ ಮೀಥೇನ್‌ನ ವಾರ್ಷಿಕ ಉತ್ಪಾದನೆಯ ಶೇ 16 ರಷ್ಟಾಗುತ್ತದೆ.[೧೨] ಒಂದು ಅಧ್ಯಯನದ ಪ್ರಕಾರ ಮಾನವನ ಕಾರಣಕ್ಕೆ ಉತ್ಪಾದನೆಯಾಗುವ ಒಟ್ಟಾರೆ ಮೀಥೇನ್‌ನಲ್ಲಿ ಪಶುಸಂಗೋಪನೆಯ ಪಾಲು ಶೇ 37 ರಷ್ಟು.[೧೩] ವಾತಾವರಣದಲ್ಲಿನ ಮೀಥೇನ್ 2011ರಲ್ಲಿ 1800 ಪಿಪಿಬಿ (ಪಾರ್ಟ್ಸ್ ಪರ್ ಬಿಲಿಯನ್ ಅಥವಾ ಶತಕೋಟಿ ಭಾಗ) ಇತ್ತು ಮತ್ತು ಇದು ಕನಿಷ್ಠ 8 ಲಕ್ಷ ವರುಷಗಳಲ್ಲಿ ಅತಿ ಹೆಚ್ಚು.[೧೪]
ಭೂಮಿಯಾಚೆ
[ಬದಲಾಯಿಸಿ]ಬುಧ, ಶುಕ್ರ ಗ್ರಹಗಳಲ್ಲಿ ಮೀಥೇನ್ ಪತ್ತೆಯಾಗಿದೆ.[೧೫][೧೬] ಶನಿ, ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ ಗ್ರಹಗಳು ಮತ್ತು ಅವುಗಳ ಕೆಲವು ಚಂದ್ರಗಳಲ್ಲಿಯೂ ಮೀಥೇನ್ ಪತ್ತೆಯಾಗಿದೆ. ಭೂಮಿಯ ಚಂದ್ರನಲ್ಲಿಯೂ ಸ್ವಲ್ಪಮಟ್ಟಿನ ಮೀಥೇನ್ ಪತ್ತೆಯಾಗಿದೆ.[೧೭][೧೮] ಮಂಗಳ ಗ್ರಹದ ವಾತಾವರಣದಲ್ಲಿ 10 nmol/mol (nmol-ನ್ಯಾನೋಮೋಲ್) ಮೀಥೇನ್ ಪತ್ತೆಯಾಗಿದೆ.[೧೯] ಕುಬ್ಜ ಗ್ರಹ ಎರಿಸ್‌ನಲ್ಲಿ[೨೦], ಹ್ಯಾಲಿ ಧೂಮಕೇತುವಿನಲ್ಲಿ ಅಲ್ಲದೆ ಸೂರ್ಯ ಮಂಡಲದ ಆಚೆ ಗ್ರಹ HD 189733b ನಲ್ಲಿ ಸಹ ಕಂಡು ಬಂದಿದೆ. ಇದರ ಮೂಲದ ಬಗೆಗೆ ಮಾಹಿತಿಯಿಲ್ಲ ಏಕೆಂದರೆ ಆ ಗ್ರಹದ ಮೇಲಿನ ಹೆಚ್ಚಿನ ತಾಪಮಾನ (700 °ಸೆ) ಕಾರ್ಬನ್ ಮಾನಾಕ್ಸೈಡ್ ರೂಪಗೊಳ್ಳಲು ಪೂರಕವಾಗಿದೆ.[೨೧] ಅಂತರತಾರ ಮೋಡಗಳಲ್ಲಿಯೂ, ಎಂ-ನಮೂನೆ ತಾರೆಗಳ ವಾತಾವರಣದಲ್ಲಿಯೂ ಮೀಥೇನ್ ಕಂಡುಬಂದಿದೆ.[೨೨][೨೩]
ಹಸಿರುಮನೆ ಅನಿಲವಾಗಿ
[ಬದಲಾಯಿಸಿ]ಮೀಥೇನ್ ಒಂದು ಹಸಿರುಮನೆ ಪರಿಣಾಮ ಬೀರುವ ಅನಿಲ. ಅದು ವಾತಾವರಣದ ಬಿಸುಪನ್ನು ಹೆಚ್ಚಿಸುತ್ತದೆ. ಕಳೆದ 200 ವರುಷಗಳಲ್ಲಿ ವಾತಾವರಣದಲ್ಲಿನ ಮೀಥೇನ್ ಎರಡರಷ್ಟಾಗಿದೆ.[೨೪] ಮೀಥೇನ್‌ನ ಜಾಗತಿಕ ತಾಪಮಾನ ಏರಿಕೆ ಸಂಭ್ಯಾವತೆ[೨೫] ಕಾರ್ಬನ್ ಡೈಆಕ್ಸೈಡ್‌ಗೆ ಹೋಲಿಸಿ 100 ವರುಷಗಳ ಕಾಲಮಾನದಲ್ಲಿ 34 ಮತ್ತು 20 ವರುಷದ ಕಾಲಮಾನದಲ್ಲಿ 72.[೨೬][೨೭][೨೮] ಒಂದು ವರದಿಯ ಪ್ರಕಾರ ವಾತಾವರಣದಲ್ಲಿನ ಮೀಥೇನ್ 1750ರಿಂದ ಶೇ 150 ಹೆಚ್ಚಾಗಿದೆ. ಇದು ಎಲ್ಲಾ ದೀರ್ಘ ಕಾಲ ಉಳಿಯುವ ಮತ್ತು ಜಾಗತಿಕ ಅನಿಲ ಮಿಶ್ರಣಗಳ (ಇವುಗಳ ಅತಿದೊಡ್ಡ ಭಾಗವಾದ ತೇವಾಂಶ ಹೊರತು ಪಡಿಸಿ) ಒಟ್ಟಾರೆ ರೇಡಿಯೇಟಿವ್ ಫೋರ್ಸಿಂಗ್‌ನ [೨೯] ಶೇ 20ರಷ್ಟು ಮೀಥೇನ್ ಕೊಡುಗೆ.[೩೦]
ನಿರಪಾಯತೆ (ಸೇಫ್ಟಿ)
[ಬದಲಾಯಿಸಿ]ಮೀಥೇನ್ ವಿಷವಲ್ಲ ಆದರೆ ಅದು ಉಸಿರಾಡುವ ಗಾಳಿಯಲ್ಲಿ ಆಕ್ಸಿಜನ್ ಕಡಿಮೆ ಮಾಡಿ ಉಸಿರುಗಟ್ಟಿಸಬಲ್ಲದು.[೩೧] ಇದು ಸಾಮಾನ್ಯವಾಗಿ ಸ್ಥಿರ ಆದರೆ ಮೀಥೆನ್ ಮತ್ತು ಗಾಳಿಯ ಶೇ 5 ಮತ್ತು 14ರ ನಡುವಿನ ಘನಗಾತ್ರದ ಲೆಕ್ಕದ ಮಿಶ್ರಣಗಳು ಸ್ಪೋಟಿಸುತ್ತವೆ. ಈ ಮಿಶ್ರಣದ ಸ್ಫೋಟ ಹಲವು ಕಲ್ಲಿದ್ದಲ ಗಣಿಗಳಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ.[೩೨]
ಟಿಪ್ಪಣಿಗಳು ಮತ್ತು ಉಲ್ಲೇಖಗಳು
[ಬದಲಾಯಿಸಿ]- ↑ Hensher, David A. & Button, Kenneth J. (2003). Handbook of transport and the environment. Emerald Group Publishing. p. 168. ISBN 0-08-044103-3. From Wikipedia Methane
- ↑ Methane Phase change data. NIST Chemistry Webbook. From Wikipedia Methane
- ↑ ೩.೦ ೩.೧ ಹೀಟ್ ಆಫ್ ಕಂಬ್ಶನ್- ಒಂದು ಪದಾರ್ಥ ಮಾನದಂಡ ಪರಿಸ್ಥಿತಿಯಲ್ಲಿ ಆಕ್ಸಿಜನ್‌ನೊಂದಿಗೆ ಪೂರ್ಣವಾಗಿ ದಹನಗೊಂಡಾಗ ಬಿಡುಗಡೆ ಮಾಡುವ ಪೂರ್ಣ ಶಕ್ತಿ ಬಿಸುಪಿನ ರೂಪದಲ್ಲಿ. ಸಾಮಾನ್ಯವಾಗಿ ಇದನ್ನು ಶಕ್ತಿ/ಮೋಲ್ ಉರುವಲು (KJ/mol) ಅಥವಾ ಶಕ್ತಿ/ಉರುವಲಿನ ದ್ರವ್ಯ ಅಥವಾ ಶಕ್ತಿ/ಉರುವಲಿನ ಘನಗಾತ್ರದಲ್ಲಿ (ವಾಲ್ಯೂಮ್) ವ್ಯಕ್ತಪಡಿಸಲಾಗುತ್ತದೆ.
- ↑ ಕಣಜ, ಅಂತರಜಾಲ ಕನ್ನಡ ಜ್ಞಾನಕೋಶ, ಪುಸ್ತಕಗಳಿಂದ : ಶಿವಾನಂದ ಕಳವೆ : ಕಂಪ್ಯೂಟರ್ ಊಟ: ‘ಅವಳ’ ಕಣ್ಣೀರು ಒರೆಸಿದ ಸಗಣಿ ತಂ(ಮ)ತ್ರ Archived 2016-10-05 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ತ್ಯಾಜ್ಯದ ಹೊಸ ಜಾಡು, ಕರ್ನಾಟಕ ದರ್ಶನ, ಪ್ರಜಾವಾಣಿ, ಏಪ್ರಿಲ್ 21, 2015
- ↑ Thunnissen, Daniel P.; Guernsey, C.S.; Baker, R.S.; Miyake, R.N. (2004). "Advanced Space Storable Propellants for Outer Planet Exploration". American Institute of Aeronautics and Astronautics (04-0799): 28. From Wikipedia Methane
- ↑ Wikpedia Sabatier reaction retrived on 2016-11-14
- ↑ Wikipedia Soda lime retrived on 2016-11-14
- ↑ ಕ್ಯಾಲ್ಸಿಯಮ್ ಹೈಡ್ರಾಕೈಡ್, ನೀರು ಪ್ರಮುಖವಾಗಿ ಇರುವ ಒಂದು ರಸಾಯನಿಕ ಮಿಶ್ರಣ.
- ↑ Wikipedia Destructive distillation retrieved on 2016-11-14
- ↑ ಹೆಚ್ಚಿನ ತಾಪಮಾನಕ್ಕೆ ಏನನ್ನಾದರೂ ಬಿಸಿಮಾಡುವುದು
- ↑ Miller, G. Tyler (2007). Sustaining the Earth: An Integrated Approach. U.S.A.: Thomson Advantage Books, ISBN 0534496725, p. 160. From Wikipedia Methane
- ↑ FAO (2006). Livestock's Long Shadow–Environmental Issues and Options. Rome, Italy: Food and Agriculture Organization of the United Nations (FAO). Retrieved October 27, 2009. From Wikipedia Methane
- ↑ IPCC AR5 WG1 (2013). "Climate Change 2013: The Physical Science Basis - Summary for Policymakers" (PDF). Cambridge University Press. From Wikipedia Atmospheric methane
- ↑ Cain, Fraser (March 12, 2013). "Atmosphere of Mercury". Universe Today. Archived from the original on April 19, 2012. Retrieved April 7, 2013. From Wikipedia Methane
- ↑ Donahue, T.M.; Hodges, R.R. (1993). "Venus methane and water". Geophysical Research Letters. 20 (7): 591–594. Bibcode:1993GeoRL..20..591D. doi:10.1029/93GL00513. From Wikipedia Methane
- ↑ Stern, S.A. (1999). "The Lunar atmosphere: History, status, current problems, and context". Rev. Geophys. 37 (4): 453–491. Bibcode:1999RvGeo..37..453S. doi:10.1029/1999RG900005. From Wikipedia Methane
- ↑ WikipediaMethane retrieval date 2016-11-14
- ↑ "Mars Express confirms methane in the Martian atmosphere". European Space Agency. Archived from the original on February 24, 2006. Retrieved March 17, 2006. From Wikipedia Methane
- ↑ "Gemini Observatory Shows That "10th Planet" Has a Pluto-Like Surface". Gemini Observatory. 2005. Retrieved May 3, 2007. From Wikipedia Methane
- ↑ Battersby, Stephen (February 11, 2008). "Organic molecules found on alien world for first time". From Wikipedia Methane
- ↑ Lacy, J. H.; Carr, J. S.; Evans, N. J. , I.; Baas, F.; Achtermann, J. M.; Arens, J. F. (1991). "Discovery of interstellar methane – Observations of gaseous and solid CH4 absorption toward young stars in molecular clouds". The Astrophysical Journal. 376: 556. Bibcode:1991ApJ...376..556L. doi:10.1086/170304. From Wikipedia Methane
- ↑ Jørgensen, Uffe G. (1997), "Cool Star Models", in van Dishoeck, Ewine F., Molecules in Astrophysics: Probes and Processes, International Astronomical Union Symposia. Molecules in Astrophysics: Probes and Processes, 178, Springer Science & Business Media, p. 446, ISBN 079234538X. From Wikipedia Methane
- ↑ Role of Methane, Climate change, The Greenhouse gasses, Retrieved on 2016-11-14
- ↑ ಹಸಿರುಮನೆ ಅನಿಲವು ಅದರ ನಿರ್ದಿಷ್ಟ ದ್ರವ್ಯವು ಹಿಡಿದಿಡುವ ಬಿಸುಪು ಅಷ್ಟೇ ದ್ರವ್ಯದ ಕಾರ್ಬನ್ ಡೈಆಕ್ಸೈಡ್ ಹಿಡಿದಿಡುವ ಬಿಸುಪಿನ ಹೋಲಿಕೆ. ಇದು ಎಷ್ಟು ಕಾಲಮಾನದ ಅವದಿಗೆ ಲೆಕ್ಕಹಾಕಲಾಗುತ್ತದೆ ಎಂಬುದರ ಮೇಲೂ ಇರುತ್ತದೆ.
- ↑ IPCC Fifth Assessment Report, Table 8.7, Chap. 8, p. 8–58 (PDF; 8,0 MB) From Wikipedia Methane
- ↑ Shindell, D. T.; Faluvegi, G.; Koch, D. M.; Schmidt, G. A.; Unger, N.; Bauer, S. E. (2009). "Improved Attribution of Climate Forcing to Emissions". Science. 326 (5953): 716–8. Bibcode:2009Sci...326..716S. doi:10.1126/science.1174760. PMID 19900930. From Wikipedia Methane
- ↑ Shindell, D. T.; Faluvegi, G.; Koch, D. M.; Schmidt, G. A.; Unger, N.; Bauer, S. E. (2009). "Improved Attribution of Climate Forcing to Emissions". Science. 326 (5953): 716–8. doi:10.1126/science.1174760. PMID 19900930. From Wikipedia Methane
- ↑ ಕೈಮೇಟ್ ಫೋರ್ಸಿಂಗ್ ಎಂದು ಸಹ ಕರೆಯಲಾದ ಇದು ಬಿದ್ದ ಸೂರ್ಯಕಿರಣಗಳಲ್ಲಿ ಭೂಮಿಯ ಹಿಂಗಿಸಿಕೊಂಡ ಹಾಗೂ ಆಕಾಶಕ್ಕೆ ಮತ್ತೆ ವಾಪಾಸು ಹೋದ ಸೂರ್ಯ ಕಿರಣಗಳ ಶಕ್ತಿಗಳ ನಡುವಿನ ವ್ಯತ್ಯಾಸ
- ↑ "Technical summary". Climate Change 2001. United Nations Environment Programme. From Wikipedia Methane
- ↑ Chemical of the Week, Methane Archived 2010-05-30 ವೇಬ್ಯಾಕ್ ಮೆಷಿನ್ ನಲ್ಲಿ. retrieved on 2016-11-14
- ↑ https://www.britannica.com/science/methane Methane, Encyclopedia Britannica, retrieved on 2016-11-14
ಪ್ರುಮುಖ ಆಧಾರ
- Wikipedia Methane
ಹೊರಗಿನ ಕೊಂಡಿಗಳು
[ಬದಲಾಯಿಸಿ]- Methane at The Periodic Table of Videos (University of Nottingham)
- International Chemical Safety Card 0291
- Gas (Methane) Hydrates – A New Frontier – United States Geological Survey (archived 6 February 2004)
- Lunsford, Jack H. (2000). "Catalytic conversion of methane to more useful chemicals and fuels: A challenge for the 21st century". Catalysis Today. 63 (2–4): 165–174. doi:10.1016/S0920-5861(00)00456-9.
- CDC – Handbook for Methane Control in Mining (PDF)