ಇಂಧನಾನಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಧನಾನಿಲ ಬರ್ನರ್‌ಗಳ ನೀಲಿ ಉರಿ

ಇಂಧನಾನಿಲವೆಂದರೆ ಸಾಮಾನ್ಯ ಸ್ಥಿತಿಗಳಲ್ಲಿ ಅನಿಲರೂಪದಲ್ಲಿರುವ ಇಂಧನ. (ಮೀಥೇನ್ ಅಥವಾ ಪ್ರೋಪೇನ್‍ನಂತಹ) ಬಹುತೇಕ ಇಂಧನಾನಿಲಗಳು ಹೈಡ್ರೊಕಾರ್ಬನ್‍ಗಳು, ಜಲಜನಕ, ಕಾರ್ಬನ್ ಮೊನಾಕ್ಸೈಡ್, ಅಥವಾ ಇವುಗಳ ಮಿಶ್ರಣವನ್ನು ಹೊಂದಿರುತ್ತವೆ. ಇಂತಹ ಅನಿಲಗಳು ಶಕ್ತಿಮೂಲಗಳಾಗಿದ್ದು ಇವನ್ನು ಪೈಪ್‍ಗಳ ಮೂಲಕ ಸರಾಗವಾಗಿ ಸಾಗಿಸಿ ವಿತರಿಸಬಹುದು.

ಅನಿಲದ ಬಳಕೆ ಮತ್ತು ಸರಬರಾಜಿನ ಇತಿಹಾಸ[ಬದಲಾಯಿಸಿ]

ಕಲ್ಲಿದ್ದಲನ್ನು ಗಾಳಿಯ ಸಂಪರ್ಕವಿಲ್ಲದೆ ಕಾಯಿಸಿದಾಗ ದಹಿಸಬಲ್ಲ ಒಂದು ಅನಿಲ ಉತ್ಪತ್ತಿಯಾಗುವುದೆಂಬುದನ್ನು ಮೊದಲು ಗಮನಿಸಿದವ ಹದಿನೇಳನೆಯ ಶತಮಾನದ ಬೆಲ್ಜಿಯಂ ವಿಜ್ಞಾನಿ ವ್ಯಾನ್ ಹೆಲ್ಮಾಂಟ್. ಆದರೂ ಅಲ್ಲಿಂದ ನೂರೈವತ್ತು ವರ್ಷಗಳವರೆಗೆ ಆ ಅನಿಲವನ್ನು ದೀಪ ಉರಿಸಲು ಬಳಸಬಹುದೆಂದು ಯಾರಿಗೂ ಗೊತ್ತಾಗಲಿಲ್ಲ. ಭಾರತದಲ್ಲಿ ಹರಳೆಣ್ಣೆ ಮುಂತಾದ ಎಣ್ಣೆಗಳನ್ನು ದೀಪಗಳಿಗೆ ಉಪಯೋಗಿಸುತ್ತಿದ್ದಂತೆಯೆ ಆ ಕಾಲದಲ್ಲಿ ಪಾಶ್ಚಾತ್ಯರು ಸ್ಪರ್ಮ್ ತಿಮಿಂಗಿಲದ ಎಣ್ಣೆಯನ್ನು ಮೇಣ ಮತ್ತು ಪ್ರಾಣಿಗಳ ಕೊಬ್ಬಿನಿಂದ ಮಾಡಿದ ಮೊಂಬತ್ತಿಗಳನ್ನೂ ಉಪಯೋಗಿಸುತ್ತಿದ್ದರು. 1792ರಲ್ಲಿ ಮೊಟ್ಟಮೊದಲು ಇಂಗ್ಲೆಂಡಿನ ವಿಲಿಯಂ ಮುರ್ಡಾಕ್ ಎಂಬಾತ ಕಲ್ಲಿದ್ದಲನ್ನು ಕಬ್ಬಿಣದ ಬಟ್ಟಿ ಪಾತ್ರೆಯಲ್ಲಿ ಕಾಯಿಸಿ, ಹೊರಬಂದ ಅನಿಲದ ಸಹಾಯದಿಂದ ಕಾರ್ನ್ವಾಲ್‌ನಲ್ಲಿರುವ ತನ್ನ ಮನೆಯನ್ನು ಬೆಳಗಿದ. ಉಗಿಯಂತ್ರವನ್ನು ನಿರ್ಮಿಸಿದ ಜೇಮ್ಸ್ ವಾಟ್‌ನ ಹತ್ತಿರ ಎಂಜಿನಿಯರ್ ಆಗಿದ್ದ ಮುರ್ಡಾಕ್ ಆ ಮೇಲೆ ವಾಟ್‌ನ ಕಾರ್ಖಾನೆಗೂ ಅನಿಲದ ದೀಪಗಳನ್ನು ಒದಗಿಸಿದ.

ಅನಿಲವನ್ನು ಸಾರ್ವಜನಿಕರಿಗೆ ಸರಬರಾಜು ಮಾಡುವುದಕ್ಕೆ ಅನಿಲ ತಯಾರಿಕೆಯ ಕಂಪನಿಯೊಂದನ್ನು ಮೊಟ್ಟಮೊದಲು ಸ್ಥಾಪಿಸಿದ ಕೀರ್ತಿ ಫ್ರೆಡರಿಕ್ ಆಲ್ಬರ್ಟ್ ವಿನ್ಸರ್ ಎಂಬಾತನಿಗೆ ಸಲ್ಲಬೇಕು. ಜರ್ಮನ್ ರಾಷ್ಟ್ರೀಯನಾದ ವಿನ್ಸರ್ 1804ರಲ್ಲಿ ಇಂಗ್ಲೆಂಡಿನಲ್ಲಿ ಸ್ವಾಮ್ಯ (ಪೇಟೆಂಟ್) ಪಡೆದು 1813ರ ವೇಳೆಗೆ ಸಾರ್ವಜನಿಕವಾಗಿ ಅನಿಲವನ್ನು ಸರಬರಾಜು ಮಾಡತೊಡಗಿದ. ಅಲ್ಲಿಂದ ಅನಿಲದ ಉಪಯೋಗ ಇತರ ದೇಶಗಳಿಗೆ ಹರಡಿತು. ಅಮೆರಿಕದಲ್ಲಿ ಮೊಟ್ಟಮೊದಲು (1817) ಅನಿಲದೀಪಗಳು ಬಂದದ್ದು ಬಾಲ್ಟಿಮೋರ್ ನಗರದಲ್ಲಿ.

ನೀಲಜ್ವಾಲೆಯ ಅನಿಲಜ್ವಾಲೆಯ (ಗ್ಯಾಸ್ ಬರ‍್ನರ್) ಬಳಕೆಗೆ ಬಂದದ್ದು 1855ರಲ್ಲಿ. ಇದನ್ನು ಕಂಡುಹಿಡಿದವರು ಯಾರು ಎಂಬ ಬಗ್ಗೆ ಸ್ವಲ್ಪ ಸಂಶಯವಿದೆ. ಆದರೆ ಜರ್ಮನಿಯ ರಾಬರ್ಟ್ ವಿಲ್ಹೆಲ್ಮ್ ವಾನ್ ಬುನ್ಸನ್ ಇದನ್ನು ಮೊದಲು ನಿರ್ಮಿಸಿದನೆಂಬುದು ಸಾಮಾನ್ಯ ನಂಬಿಕೆ. ಈ ಜ್ವಾಲಕದಲ್ಲಿ ಗಾಳಿ ಮತ್ತು ದಹ್ಯಾನಿಲಗಳನ್ನು ಸೂಕ್ತಪ್ರಮಾಣದಲ್ಲಿ ಬೆರೆಸಿ ಉರಿಸುವುದರಿಂದ ಹೊಗೆಯಿಲ್ಲದ ನಸುನೀಲವರ್ಣದ ಮತ್ತು ಹೆಚ್ಚು ತಾಪದ ಜ್ವಾಲೆ ಒದಗುತ್ತದೆ. ಪದಾರ್ಥಗಳನ್ನು ಕಾಯಿಸಲು ಇದು ಬಹಳ ಸಮರ್ಪಕವಾದ ಜ್ವಾಲಕವಾದುದರಿಂದ ಅನಿಲದ ಬಳಕೆಗೆ ಇದರಿಂದ ಹೆಚ್ಚಾದ ಉತ್ತೇಜನ ದೊರಕಿತ್ತು.

ಇಂಧನಾನಿಲಗಳ ತಯಾರಿಕೆ[ಬದಲಾಯಿಸಿ]

ಕೃತಕ ಅನಿಲವನ್ನು ಸಾಮಾನ್ಯವಾಗಿ ಬಳಕೆಯಾಗುವ ಸ್ಥಳದ ಹತ್ತಿರದಲ್ಲೇ ತಯಾರಿಸುತ್ತಾರೆ. ತಯಾರಿಸಿದ ಅನಿಲಗಳನ್ನು[೧] ಮುಖ್ಯವಾಗಿ ಎರಡು ವಿಧ ಎಂದು ಹೇಳಬಹುದು.

  1. ಶಾಖದ ಸಹಾಯದಿಂದ ಕಲ್ಲಿದ್ದಲಿನಲ್ಲಿರುವ ಸಂಕೀರ್ಣವಾದ ಕಾರ್ಬನ್ ಸಂಯುಕ್ತಗಳನ್ನೊ, ನಿಸರ್ಗದತ್ತವಾದ ಪೆಟ್ರೋಲಿಯಂ ಅಥವಾ ನಿಸರ್ಗಾನಿಲದಲ್ಲಿರುವ ಹೈಡ್ರೊಕಾರ್ಬನ್ನುಗಳನ್ನೊ ವಿಭಜಿಸಿ ಉತ್ಪಾದಿಸುವ ಅನಿಲಗಳು ಒಂದು ಗುಂಪಿನವು. ಕಲ್ಲಿದ್ದಲ ಅನಿಲ, ಕೋಕ್ ಒಲೆ ಅನಿಲ, ತೈಲಾನಿಲ-ಇವು ಈ ಗುಂಪಿನ ಇಂಧನಾನಿಲಗಳು.
  2. ಕೋಕ್ ಅಥವಾ ಇದ್ದಲಿನ ಮೇಲೆ ಗಾಳಿ ಅಥವಾ ಉಗಿಯ ವರ್ತನೆಯಿಂದ ಉತ್ಪಾದಿಸುವ ಅನಿಲಗಳು ಎರಡನೆಯ ಗುಂಪಿನವು. ಜಲಾನಿಲ ಮತ್ತು ಉತ್ಪಾದಕಾನಿಲಗಳು (ಪ್ರೊಡ್ಯೂಸರ್ ಗ್ಯಾಸ್) ಈ ಗುಂಪಿನ ಅನಿಲಗಳು.

ಇವು ಮಾತ್ರವಲ್ಲದೆ ಕಾರ್ಬನಿಕ್ ಜಲಾನಿಲದಂಥ (ಕಾರ್ಬುರೇಟೆಡ್ ವಾಟರ್ ಗ್ಯಾಸ್) ಮಿಶ್ರಿತ ಅನಿಲಗಳೂ ಬಳಕೆಯಲ್ಲಿವೆ.

ಕಲ್ಲಿದ್ದಲ ಅನಿಲ, ಕೋಕ್‌ಒಲೆ ಅನಿಲಗಳ ತಯಾರಿಕೆ[ಬದಲಾಯಿಸಿ]

ಕಲ್ಲಿದ್ದಲ ಅನಿಲ, ಕೋಕ್‌ಒಲೆ ಅನಿಲ, ಇವೆರಡನ್ನು ತಯಾರಿಸುವುದೂ ಒಂದೇ ವಿಧಾನದಿಂದ. ಕಲ್ಲಿದ್ದಲನ್ನು, ಅದರಲ್ಲೂ ಮುಖ್ಯವಾಗಿ ಬಿಟುಮಿನಸ್ ಕಲ್ಲಿದ್ದಲನ್ನು ಕಬ್ಬಿಣದ ಬಟ್ಟಿ ಪಾತ್ರೆಗಳಲ್ಲಿ ಗಾಳಿಯ ಸಂಪರ್ಕವಿಲ್ಲದಂತೆ ಸುಮಾರು 10000 ಸೆಂ.ಗ್ರೇ. ತಾಪಕ್ಕೆ ಕಾಯಿಸಿ ಅನಿಲವನ್ನು ತಯಾರಿಸುತ್ತಾರೆ.[೨] ಸ್ವಲ್ಪ ಮಟ್ಟಿಗೆ ಸನ್ನಿವೇಶಗಳನ್ನು ಬದಲಾಯಿಸಿ ಮೊದಲ ವಿಧಾನದಲ್ಲಿ ಅನಿಲದ ಕಡೆಗೂ ಎರಡನೆಯ ವಿಧಾನದಲ್ಲಿ ಕೋಕ್ ಕಡೆಗೂ ಗಮನಕೊಡುತ್ತಾರೆ. ಮೊದಲ ವಿಧಾನದಲ್ಲಿ ಅನಿಲವೇ ಮುಖ್ಯ ಉತ್ಪನ್ನ, ಕೋಕ್ ಉಪೋತ್ಪನ್ನ. ಎರಡನೆಯ ವಿಧಾನದಲ್ಲಿ ಲೋಹಗಾರಿಕೆಗೆ ಅಗತ್ಯವಾದ ಹಸನಾದ ಕೋಕ್ ಉತ್ಪಾದನೆಗೆ ಗಮನ ಕೊಡುವುದರಿಂದ ಅನಿಲ ಉಪೋತ್ಪನ್ನವೆನ್ನಿಸಿಕೊಳ್ಳುತ್ತದೆ.

ಕಲ್ಲಿದ್ದಲ ಅನಿಲ ಅಥವಾ ಕೋಕ್‌ಒಲೆ ಅನಿಲದ ಶಾಖೋತ್ಪಾದಕ ಸಾಮರ್ಥ್ಯ ಸ್ವಲ್ಪಮಟ್ಟಿಗೆ ಕಲ್ಲಿದ್ದಲಿನ ಗುಣ, ಕಾಯಿಸುವ ತಾಪ, ಕಾಲ-ಇವುಗಳನ್ನವಲಂಬಿಸಿರುತ್ತದೆ. ಸಾಮಾನ್ಯವಾಗಿ ಅದರ ಶಾಖೋತ್ಪಾದಕ ಸಾಮರ್ಥ್ಯ 550 ರಿಂದ 600 ಬ್ರಿಟಿಷ್ ಶಾಖಮಾನ (ಬಿ.ಟಿ.ಯು.) ಇರುತ್ತದೆ; ಅಂದರೆ ಒಂದು ಘನ ಅಡಿ ಅನಿಲದ ದಹನದಿಂದ ಅಷ್ಟು ಶಾಖ ಒದಗುತ್ತದೆ. ಈ ಅನಿಲದ 60% ಜಲಜನಕ (ಹೈಡ್ರೊಜನ್) ಮತ್ತು ಕಾರ್ಬನ್ ಮಾನಾಕ್ಸೈಡೂ, 30% ಮೀಥೇನೂ ಇದ್ದು ಉಳಿದದ್ದು ವಿವಿಧ ಹೈಡ್ರೊಕಾರ್ಬನ್ನುಗಳು, ಕಾರ್ಬನ್ ಡಯಾಕ್ಸೈಡು, ನೈಟ್ರೋಜನ್, ಹೈಡ್ರೊಜನ್ ಸಲ್ಫೈಡು-ಇವುಗಳಿಂದ ಕೂಡಿರುತ್ತದೆ. ಕಲ್ಲಿದ್ದಲು ಕಾಯಿಸಿದಾಗ ಬರುವ ಅಮೋನಿಯ, ಬೆಂಜೀನ್ ಮುಂತಾದ ಆರೊಮೇಟಿಕ್ ಸಂಯುಕ್ತಗಳು, ಹೈಡ್ರೊಜನ್ ಸಲ್ಫೈಡು, ಸಯನೈಡು ಮುಂತಾದುವುಗಳನ್ನು ತೆಗೆದು ಶುದ್ಧೀಕರಿಸಿ ಅನಿಲವನ್ನು ಬಳಕೆದಾರರಿಗೆ ಒದಗಿಸುತ್ತಾರೆ. ಈ ಅನಿಲ ಬಹು ಹಗುರವಾಗಿರುತ್ತದೆ. ಗಾಳಿಗೆ ಹೋಲಿಸಿದರೆ ಅದರ ಸಾಂದ್ರತೆ 0.4ರಷ್ಟಿರುತ್ತದೆ.

ಬಟ್ಟಿ ಪಾತ್ರೆಗಳನ್ನು ಕಾಯಿಸಲು ಸಾಮಾನ್ಯವಾಗಿ ಉತ್ಪಾದಕಾನಿಲ, ಊದುಗುಲುಮೆ ಅನಿಲ ಮುಂತಾದ ಅನಿಲಗಳನ್ನುಪಯೋಗಿಸುವುದು ವಾಡಿಕೆ. ಹಾಗಿಲ್ಲದಿದ್ದರೆ ತಯಾರಿಸಿದ ಅನಿಲದಲ್ಲಿ 35% ಭಾಗ ಬಟ್ಟಿ ಪಾತ್ರೆಗಳನ್ನು ಕಾಯಿಸುವುದಕ್ಕೆ ಉಪಯೋಗಿಸಬೇಕಾಗಿ ಬರುತ್ತದೆ.

ತೈಲಾನಿಲದ ತಯಾರಿಕೆ[ಬದಲಾಯಿಸಿ]

ತೈಲಾನಿಲವನ್ನು ತಯಾರಿಸುವುದು ಪೆಟ್ರೋಲಿಯಂ ಮೂಲದಿಂದ ಬರುವ ವಿವಿಧ ರೀತಿಯ ಎಣ್ಣೆಗಳಿಂದ. ಈ ಎಣ್ಣೆಗಳಲ್ಲಿ ಅಧಿಕ ಅಣುತೂಕದ ಹೈಡ್ರೊಕಾರ್ಬನ್ನುಗಳಿರುತ್ತವೆ. ಅವುಗಳನ್ನು ಹೆಚ್ಚುತಾಪಕ್ಕೆ ಕಾಯಿಸುವುದರಿಂದ, ಇಲ್ಲವೆ ಈಚೀಚೆಗೆ ರೂಢಿಗೆ ಬಂದಿರುವಂತೆ ನಿಕಲ್ ಆಕ್ಸೈಡ್ ಮುಂತಾದ ವೇಗವರ್ಧಕಗಳೊಡನೆ ಕಾಯಿಸುವುದರಿಂದ, ಆ ಹೈಡ್ರೊಕಾರ್ಬನ್ನುಗಳು ವಿಭಜನೆ ಹೊಂದಿ ಕಡಿಮೆ ಅಣು ತೂಕದ ಹೈಡ್ರೊಕಾರ್ಬನ್ನುಗಳಾಗುತ್ತವೆ. ಇಂಥ ಕಡಿಮೆ ಅಣುತೂಕದ ಹೈಡ್ರೊಕಾರ್ಬನ್ನುಗಳು ಸಾಮಾನ್ಯ ತಾಪದಲ್ಲಿ ಅನಿಲಗಳಾಗಿರುತ್ತವೆ. ತೈಲಾನಿಲದ ಶಾಖೋತ್ಪಾದಕ ಸಾಮರ್ಥ್ಯ 900-1200 ಬಿ.ಟಿ.ಯು. ಅಷ್ಟಿರುವುದರಿಂದ ಇದನ್ನು ಜಲಾನಿಲದಂಥ ಕಡಿಮೆ ಶಾಖೋತ್ಪಾದಕ ಸಾಮರ್ಥ್ಯದ ಅನಿಲಗಳೊಡನೆ ಬೆರೆಸಿ ಸರಾಸರಿ ಶಾಖಸಾಮರ್ಥ್ಯವನ್ನು 500-600ಕ್ಕೆ ತರಲು ಉಪಯೋಗಿಸುತ್ತಾರೆ.

ಜಲಾನಿಲದ ತಯಾರಿಕೆ[ಬದಲಾಯಿಸಿ]

ಜಲಾನಿಲವನ್ನು ನೀಲಾನಿಲವೆಂದೂ (ಬ್ಲೂ ಗ್ಯಾಸ್) ಕರೆಯುತ್ತಾರೆ. ಬಿಳಿಗಾವಿಗೆ ಕಾಯಿಸಿದ ಕೋಕ್‌ನ ಮೇಲೆ ಉಗಿಯನ್ನು ಹಾಯಿಸಿದಾಗ ನಡೆಯುವ ರಾಸಾಯನಿಕ ಕ್ರಿಯೆಯಿಂದ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಜನ್‌ಗಳ ಮಿಶ್ರಣ ಉತ್ಪತ್ತಿಯಾಗುತ್ತದೆ.[೩][೪] ಈ ಮಿಶ್ರಣವೇ ಜಲಾನಿಲ.

C + H2O → CO+H2

ಇಲ್ಲಿ ನಡೆಯುವ ರಾಸಾಯನಿಕಕ್ರಿಯೆ ಶಾಖಶೋಷಕ ಕ್ರಿಯೆಯಾದುದರಿಂದ ಬಿಳಿಗಾವಿನ ಕೋಕ್ ಶಾಖ ಕಳೆದುಕೊಂಡು ಕೆಂಗಾವಿಗೆ ಇಳಿಯುತ್ತದೆ. ಅದನ್ನು ಪುನಃ ಬಿಳಿಗಾವಿಗೆ ತರಲು ಅದರ ಮೇಲೆ ಗಾಳಿಯನ್ನು ಹಾಯಿಸಬೇಕು. ಗಾಳಿಯಲ್ಲಿರುವ ಆಮ್ಲಜನಕದೊಡನೆ ನಡೆಯುವ ಶಾಖಜನಕಕ್ರಿಯೆಯಿಂದ ಪುನಃ ಕೋಕ್ ಬಿಳಿಗಾವಿಗೆ ಏರುತ್ತದೆ.

2C + O2 → 2CO

ಹೀಗೆ ಸರತಿಯ ಮೇಲೆ ಉಗಿಯನ್ನೂ ಗಾಳಿಯನ್ನೂ ಕಾದ ಕೋಕ್ ಮೇಲೆ ಹಾಯಿಸಿ ಬರುವ ಉತ್ಪನ್ನಗಳನ್ನು ಬೇರೆಬೇರೆಯಾಗಿ ಸಂಗ್ರಹಿಸುತ್ತಾರೆ.

ಜಲಾನಿಲದ ಸಾಂದ್ರತೆ ಸುಮಾರು 0.57 ಇದ್ದು ಅದರ ಶಾಖಸಾಮರ್ಥ್ಯ 300 ಬಿ.ಟಿ.ಯು ಅಷ್ಟಿರುತ್ತದೆ. ಸ್ಥಳೀಯವಾಗಿ ಅದನ್ನು ಉಪಯೋಗಿಸದೆ ಮನೆಗಳಿಗೆ ಮತ್ತು ಕಾರ್ಖಾನೆಗಳಿಗೆ ಒದಗಿಸುವಾಗ ಅದರೊಡನೆ ತೈಲಾನಿಲವನ್ನು ಬೆರಸಿ ಶಾಖಸಾಮರ್ಥ್ಯವನ್ನು 500-600 ಬಿ.ಟಿ.ಯು.ಗೆ ತರುತ್ತಾರೆ. ಈ ಮಿಶ್ರಣವನ್ನು ಕಾರ್ಬನಿಕ್ ಜಲಾನಿಲ ಎಂದು ಕರೆಯುವುದುಂಟು.

ಉತ್ಪಾದಕಾನಿಲದ ತಯಾರಿಕೆ[ಬದಲಾಯಿಸಿ]

ಉತ್ಪಾದಕಾನಿಲವೆನ್ನುವುದು ನೈಟ್ರೊಜನ್ ಮತ್ತು ಕಾರ್ಬನ್ ಮಾನಾಕ್ಸೈಡುಗಳ ಮಿಶ್ರಣ. ಕಾದ ಕೋಕ್‌ಮೇಲೆ ಗಾಳಿಯನ್ನು ಹಾಯಿಸಿದಾಗ ಇದು ಉತ್ಪತ್ತಿಯಾಗುತ್ತದೆ.[೫][೬]

2C + [4N2+O2] → 4N2 + 2CO

ಈ ರಾಸಾಯನಿಕ ಕ್ರಿಯೆ ಶಾಖಜನಕ ಕ್ರಿಯೆಯಾಗಿದ್ದು ಕೋಕ್ ಬೇಗ ಕಾದುಹೋಗುವುದರಿಂದ, ಉತ್ಪತ್ತಿಯಾಗುವ ಶಾಖವನ್ನು ಸಮತೂಗಿಸಲು ಸೂಕ್ತ ಪ್ರಮಾಣದಲ್ಲಿ ಉಗಿಯನ್ನು ಗಾಳಿಯೊಡನೆ ಬೆರೆಸುವುದುಂಟು. ಉತ್ಪಾದಕಾನಿಲದಲ್ಲಿ ಹೆಚ್ಚು ಭಾಗ ನೈಟ್ರೊಜನ್ನೇ ಆಗಿರುವುದರಿಂದ ಅದರ ಸಾಂದ್ರತೆ ಗಾಳಿಗಿಂತ ಸ್ವಲ್ಪ ಮಾತ್ರ ಕಡಿಮೆ ಇರುತ್ತದೆ. ಅದರ ಶಾಖೋತ್ಪಾದಕ ಸಾಮರ್ಥ್ಯ ಬಹಳ ಕಡಿಮೆ. 130-140 ಅಷ್ಟೇ. ಸಾಮಾನ್ಯವಾಗಿ ಇದನ್ನು ತಯಾರಿಸುವುದು ಸ್ಥಳೀಯ ಉಪಯೋಗಕ್ಕೆ.

ಎಲ್‍ಪಿಜಿ ತಯಾರಿಕೆ[ಬದಲಾಯಿಸಿ]

ದ್ರವೀಕೃತ ಪೆಟ್ರೋಲಿಯಂ ಅನಿಲ ಕಚ್ಚಾ ಪೆಟ್ರೋಲಿಯಂ ಅಥವಾ ನಿಸರ್ಗಾನಿಲಗಳಿಂದ ಬರಬಹುದು; ಇಲ್ಲವೆ ಪೆಟ್ರೋಲಿಯಂ ಶುದ್ಧೀಕರಣ ಸ್ಥಾವರಗಳಿಂದ ಬರಬಹುದು. ಇದು ನಿಸರ್ಗಾನಿಲದಲ್ಲಿರುವ ಹೈಡ್ರೊಕಾರ್ಬನ್‌ಗಳಿಗಿಂತ ಸ್ವಲ್ಪ ಹೆಚ್ಚು ಅಣು ತೂಕವಿರುವ, ಆದರೆ ಪೆಟ್ರೋಲ್ ಹೈಡ್ರೊಕಾರ್ಬನ್‌ಗಳಿಗಿಂತ ಸ್ವಲ್ಪ ಹೆಚ್ಚು ಅಣು ತೂಕವಿರುವ ಹೈಡ್ರೊಕಾರ್ಬನ್‌ಗಳ ಮಿಶ್ರಣ. 3, 4 ಕಾರ್ಬನ್ ಪರಮಾಣುಗಳಿರುವ ಹೈಡ್ರೊಕಾರ್ಬನುಗಳು ಇದರಲ್ಲಿರುತ್ತವೆ. ಈ ಮಿಶ್ರಣ ಸಾಮಾನ್ಯತಾಪದಲ್ಲಿ ಅನಿಲವಾಗಿದ್ದರೂ ಅದೇ ತಾಪದಲ್ಲೆ ಅಧಿಕ ಒತ್ತಡಕ್ಕೊಳಪಡಿಸಿ ದ್ರವೀಕರಿಸಬಹುದು. ಹಾಗೆ ದ್ರವೀಕರಿಸಿದ ಅನಿಲಗಳನ್ನು ಸಿಲಿಂಡರುಗಳಲ್ಲಿ ಸರಬರಾಜು ಮಾಡುತ್ತಾರೆ.

ಉಪಯೋಗಗಳು[ಬದಲಾಯಿಸಿ]

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಮೂಲಗಳಿಂದ ತಯಾರಿಸುವ ಹಲವಾರು ಬಗೆಯ ಈ ದಹ್ಯಾನಿಲಗಳನ್ನು ಹಿಂದೆ ದೀಪಗಳನ್ನುರಿಸಲು ಮಾತ್ರ ಉಪಯೋಗಿಸುತ್ತಿದ್ದರು. ವಿದ್ಯುದ್ದೀಪಗಳು ಹೆಚ್ಚು ಪ್ರಚಾರಕ್ಕೆ ಬಂದ ಮೇಲೆ ಈ ಅನಿಲಗಳ ಉಪಯೋಗ ಬೇರೆ ದಿಕ್ಕಿಗೆ ತಿರುಗಿತು. ಕೈಗಾರಿಕೋದ್ಯಮದಲ್ಲಿ ಮತ್ತು ಮನೆಗಳಲ್ಲಿ ಕಾಯಿಸುವುದಕ್ಕೆ, ಶೈತ್ಯಕಾರಕಗಳನ್ನು ನಡೆಸುವುದಕ್ಕೆ, ವಾಯು ನಿಯಂತ್ರಣಕ್ಕೆ ಮುಂತಾಗಿ ಅನೇಕ ಬಗೆಯ ಕೆಲಸಗಳಿಗೆ ಈ ಅನಿಲಗಳನ್ನು ಬಳಸಲಾಗುತ್ತಿದೆ. ಅಮೆರಿಕದಲ್ಲಿ ತಯಾರಿಸಿದ ಅನಿಲಗಳ ಬಳಕೆ ಈಚೆಗೆ ಕಡಿಮೆಯಾಗಿ ನಿಸರ್ಗಾನಿಲದ ಬಳಕೆ ಹೆಚ್ಚಿದೆ. ಸಾವಿರಾರು ಮೈಲಿ ಕೊಳವೆ ಸಾಲುಗಳನ್ನು ಹಾಕಿ ದೂರ ದೂರದ ಸ್ಥಳಗಳಿಗೆ ನಿಸರ್ಗಾನಿಲವನ್ನು ಸರಬರಾಜು ಮಾಡಲಾಗುತ್ತಿದೆ. ಯೂರೋಪಿನಲ್ಲಿ ಮಾತ್ರ ತಯಾರಿಸಿದ ಅನಿಲಗಳೇ ಈಗಲೂ ಪ್ರಚಾರದಲ್ಲಿವೆ.

ಒಟ್ಟಿನಲ್ಲಿ ಪಾಶ್ಚಾತ್ಯ ನಗರಗಳಲ್ಲಿ ಅನಿಲದ ಸರಬರಾಜಿಲ್ಲದ ಮನೆಗಳೇ ವಿರಳ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಗ್ರಾಮಾಂತರ ಪ್ರದೇಶಗಳೂ ಸೇರಿ ಒಟ್ಟುವಾಸದ ಮನೆಗಳಲ್ಲಿ ಮುಕ್ಕಾಲುಭಾಗ ಮನೆಗಳಿಗೆ ಅನಿಲದ ಸರಬರಾಜಾಗುತ್ತಿದೆ. ಉಳಿದ ಕಾಲುಭಾಗ ಮನೆಗಳು ಬಹುಶಃ ಗ್ರಾಮಾಂತರ ಪ್ರದೇಶದಲ್ಲಿದ್ದು ಸಾರ್ವಜನಿಕ ಸರಬರಾಜು ವ್ಯವಸ್ಥೆ ಅಲ್ಲಿಗೆ ಮುಟ್ಟಿಲ್ಲದಿರಬಹುದು. ಅವುಗಳಲ್ಲಿ ಅನೇಕ ಮನೆಗಳು ಸಿಲಿಂಡರುಗಳಲ್ಲಿ ದೊರೆಯುವ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಬಳಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Hiller, Heinz; Reimert, Rainer; Stönner, Hans-Martin (2011). "Gas Production, 1. Introduction". Ullmann's Encyclopedia of Industrial Chemistry. doi:10.1002/14356007.a12_169.pub3. ISBN 978-3527306732.
  2. Shapley,Coal Gasification Archived 2023-04-13 ವೇಬ್ಯಾಕ್ ಮೆಷಿನ್ ನಲ್ಲಿ., University of Illinois.
  3. Hiller, Heinz; Reimert, Rainer; Stönner, Hans-Martin (2011). "Gas Production, 1. Introduction". Ullmann's Encyclopedia of Industrial Chemistry. doi:10.1002/14356007.a12_169.pub3. ISBN 978-3527306732.
  4. ಟೆಂಪ್ಲೇಟು:Greenwood&Earnshaw2nd
  5. Hiller, Heinz; Reimert, Rainer; Stönner, Hans-Martin (2011). "Gas Production, 1. Introduction". Ullmann's Encyclopedia of Industrial Chemistry. doi:10.1002/14356007.a12_169.pub3. ISBN 978-3527306732.
  6. "PRODUCTION OF PRODUCER GAS, WATER-GAS, SYNTHESIS GAS FROM SOLID CARBONACEOUS MATERIAL, OR MIXTURES CONTAINING THESE GASES (synthesis gas from liquid or gaseous hydrocarbons C01B; underground gasification of minerals E21BÂ 43/295); CARBURETTING AIR OR OTHER GASES" (PDF).
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: