ವಿಷಯಕ್ಕೆ ಹೋಗು

ಜ್ವಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ಚಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕಾಂತಿ ಲೇಖನಕ್ಕಾಗಿ ಇಲ್ಲಿ ನೋಡಿ.
ಇದ್ದಿಲಿನ ಜ್ವಾಲೆಗಳು

ಜ್ವಾಲೆ (ಉರಿ) ಎಂದರೆ ಬೆಂಕಿಯ ಗೋಚರ, ಅನಿಲ ಭಾಗ. ದಹಿಸುವ ಅನಿಲದ ಅಣುಗಳಿಂದ ಹೊರಸೂಸುವ ಬೆಳಕಿನ ಕಿರಣ ಸಮೂಹವೇ ಜ್ವಾಲೆ. ದಹನ ಒಂದು ರಾಸಾಯನಿಕ ಕ್ರಿಯೆ. ಇದು ಒಂದು ತೆಳು ವಲಯದಲ್ಲಿ ನಡೆಯುವ ಬಹಳ ಬಹಿರುಷ್ಣಕ ಕ್ರಿಯೆಯಿಂದ ಉಂಟಾಗುತ್ತದೆ.[೧] ಎರಡು ರಾಸಾಯನಿಕ ವಸ್ತುಗಳು ಪರಸ್ಪರ ಕ್ರಿಯೆಗಳಿಗೆ ಒಳಗಾದಾಗ ಅಂತರ್ಗತವಾದ ಉಷ್ಣ ಹೊರಬೀಳುವುದುಂಟು. ಇದರ ಪ್ರಮಾಣ ಸಾಕಷ್ಟಿದ್ದರೆ ಅನಿಲದ ಅಣುಗಳು ಕಾದು ಉಷ್ಣದೀಪ್ತ ಸ್ಥಿತಿಯನ್ನು ಮುಟ್ಟಿದಾಗ ಉರಿಯ ರೂಪದಲ್ಲಿ ಕಂಡುಬರುತ್ತವೆ. ದಹಿಸುವ ವಸ್ತುಗಳು ಮೂಲತಃ ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತವೆ. ಬಹಳ ಬಿಸಿಯಾದ ಜ್ವಾಲೆಗಳು ಪ್ಲಾಸ್ಮಾ ಎಂದು ಪರಿಗಣಿಸಬಹುದಾದ ಸಾಕಷ್ಟು ಸಾಂದ್ರತೆಯ ಅಯಾನೀಕೃತ ಅನಿಲಾಂಶಗಳನ್ನು ಹೊಂದಿರುವಷ್ಟು ಬಿಸಿಯಾಗಿರುತ್ತವೆ.[೨]

ಸೌದೆ, ಇದ್ದಲು, ಕರ್ಪೂರ, ಮೆಗ್ನೀಷಿಯಂ ಮುಂತಾದ ಘನ ಪದಾರ್ಥಗಳೂ ಪೆಟ್ರೋಲ್, ಸೀಮೆಎಣ್ಣೆ, ಮೆಥಿಲೇಟೆಡ್ ಸ್ಪಿರಿಟ್ ಮುಂತಾದ ದ್ರವ ಪದಾರ್ಥಗಳೂ ಜಲಜನಕ, ಅಸಿಟಲೀನ್, ಬುರ್ಷೇನ್ ಗ್ಯಾಸಿನಂಥ ಅನಿಲಗಳೂ ಗಾಳಿಯಲ್ಲಿ ಉರಿಯುವುದು ನಿತ್ಯದ ಅನುಭವ. ಇಂಥ ವಸ್ತುಗಳು ಗಾಳಿಯಲ್ಲಿರುವ ಆಕ್ಸಿಜನ್ನಿನೊಂದಿಗೆ ರಾಸಾಯನಿಕ ಕ್ರಿಯೆಗೊಳಗಾಗಿ ಆಯಾ ವಸ್ತುಗಳ ಆಕ್ಸೈಡುಗಳನ್ನು ಉತ್ಪಾದಿಸುವುದೇ ಉರಿಗೆ ಕಾರಣ. ಈ ಆಕ್ಸೈಡುಗಳ ಶಕ್ತಿ ಕಡಿಮೆಯಾಗಿರುವುದರಿಂದ ಅವು ಉರಿಯ ರೂಪದಲ್ಲಿ ಕಂಡುಬರುವುದಿಲ್ಲ. ದಹನ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಉಷ್ಣಶಕ್ತಿ ಬೆಳಕಿನ ರೂಪದಲ್ಲಿಯೂ ಉಷ್ಣರೂಪದಲ್ಲಿಯೂ ಹೊರಬೀಳುತ್ತದೆ. ವಸ್ತುಗಳು ಉರಿಯಬೇಕಾದರೆ ಆಕ್ಸಿಜನ್ ಇರಬೇಕೆಂಬ ನಿಯಮವೇನೂ ಇಲ್ಲ, ಕ್ಲೋರಿನ್ ಅನಿಲದಲ್ಲಿ ಟರ್ಪಂಟೈನ್ ಹೊಗೆಯನ್ನು ಉಗುಳುತ್ತ ಉರಿಯುತ್ತದೆ. ಕ್ಲೋರಿನ್, ಅಮೋನಿಯ ಅನಿಲದೊಂದಿಗೆ ಸೇರುವಾಗ ಹಸಿರು-ನೀಲಿ ಬಣ್ಣದ ಉರಿ ಕಂಡುಬರುತ್ತದೆ. ಸೂರ್ಯನ ಉರಿ ಅದರಲ್ಲಿರುವ ಜಲಜನಕದ ಬೀಜಾಣುಗಳು ಒಂದಕ್ಕೊಂದು ಸೇರಿ, ಹೀಲಿಯಂ ಉತ್ಪಾದಿಸುವ ಕ್ರಿಯೆಯಲ್ಲಿ ಹೊರಬೀಳುವ ಉಷ್ಣದ ಫಲ.

ಒಂದು ಜ್ವಾಲೆಯ ಬಣ್ಣ ಮತ್ತು ತಾಪಮಾನ ದಹನದಲ್ಲಿ ಒಳಗೊಂಡ ಇಂಧನದ ಬಗೆಯನ್ನು ಅವಲಂಬಿಸಿದೆ, ಉದಾಹರಣೆಗೆ ಒಂದು ಮೇಣದ ಬತ್ತಿಗೆ ಜ್ವಾಲಕವನ್ನು ಹಚ್ಚಿದಂತೆ. ಹಚ್ಚಿದ ಶಾಖದಿಂದ ಮೇಣದ ಬತ್ತಿಯಲ್ಲಿನ ಇಂಧನ ಅಣುಗಳು ಆವೀಕರಿಸುತ್ತವೆ. ಈ ಸ್ಥಿತಿಯಲ್ಲಿ ಅವು ಆಗ ಗಾಳಿಯಲ್ಲಿನ ಆಮ್ಲಜನಕದೊಂದಿಗೆ ಸುಲಭವಾಗಿ ಪ್ರತಿಕ್ರಿಯಿಸಬಹುದು, ಇದರಿಂದಾಗುವ ನಂತರದ ಬಹಿರುಷ್ಣಕ ಕ್ರಿಯೆಯಲ್ಲಿ ಸಾಕಷ್ಟು ಶಾಖ ಹೊರಸೂಸುತ್ತದೆ, ಇದರಿಂದ ಮತ್ತಷ್ಟು ಇಂಧನ ಆವೀಕರಿಸುತ್ತದೆ, ಹೀಗೆ ಒಂದು ಸ್ಥಿರ ಜ್ವಾಲೆ ಉಳಿಯುತ್ತದೆ. ಉರಿಯ ಬಣ್ಣ ಕೆಂಪಗೆ, ಬೆಳ್ಳಗೆ ಅಥವಾ ನೇರಿಳೆಯಾಗಿ ಕಂಡುಬರುವುದು. ಉಷ್ಣತೆಯ ಪ್ರಮಾಣ ಹೆಚ್ಚಿದಂತೆಲ್ಲ ಉರಿ ಕೆಂಪುಬಣ್ಣದಿಂದ ನೇರಿಳೆ ಬಣ್ಣಕ್ಕೆ ತಿರುಗುವುದು. ಜ್ವಾಲೆಯ ಹೆಚ್ಚಿನ ತಾಪಮಾನದಿಂದ ಆವೀಕೃತ ಇಂಧನ ಅಣುಗಳು ವಿಭಜನೆಗೊಂಡು ವಿವಿಧ ಅಪೂರ್ಣ ದಹನ ಉತ್ಪನ್ನಗಳು ಮತ್ತು ಮುಕ್ತ ರ‍್ಯಾಡಿಕಲ್‍ಗಳು ರೂಪಗೊಳ್ಳುತ್ತವೆ, ಮತ್ತು ಈ ಉತ್ಪನ್ನಗಳು ನಂತರ ಪರಸ್ಪರ ಹಾಗೂ ಕ್ರಿಯೆಯಲ್ಲಿ ಒಳಗೊಂಡ ಉತ್ಕರ್ಷಣಕಾರಿಯೊಂದಿಗೆ ಪ್ರತಿಕ್ರಿಯಿಸುತ್ತವೆ. ಜ್ವಾಲೆಯಲ್ಲಿನ ಸಾಕಷ್ಟು ಶಕ್ತಿಯು ಮೆಥಿಲಿಡೈನ್ ರ‍್ಯಾಡಿಕಲ್‍ ಮತ್ತು ದ್ವಿಪರಮಾಣು ಇಂಗಾಲದಂತಹ ಕೆಲವು ಅಸ್ಥಿರ ರಾಸಾಯನಿಕ ಕ್ರಿಯಾ ಮಧ್ಯವರ್ತಿಗಳಲ್ಲಿನ ಇಲೆಕ್ಟ್ರಾನ್‍ಗಳನ್ನು ಪ್ರಚೋದಿಸುತ್ತದೆ. ಇದರಿಂದ ಗೋಚರ ಬೆಳಕಿನ ಸೂಸುವಿಕೆ ಆಗುತ್ತದೆ ಏಕೆಂದರೆ ಈ ವಸ್ತುಗಳು ತಮ್ಮ ಹೆಚ್ಚಿನ ಶಕ್ತಿಯನ್ನು ಬಿಡುಗಡೆಮಾಡುತ್ತವೆ. ಜ್ವಾಲೆಯ ದಹನ ತಾಪಮಾನ ಹೆಚ್ಚಾದಂತೆ (ಜ್ವಾಲೆಯು ಸುಡದ ಇಂಗಾಲ ಅಥವಾ ಇತರ ವಸ್ತುವಿನ ಸಣ್ಣ ಕಣಗಳನ್ನು ಹೊಂದಿದ್ದರೆ), ಜ್ವಾಲೆಯಿಂದ ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಸರಾಸರಿ ಶಕ್ತಿಯೂ ಹೆಚ್ಚುತ್ತದೆ.

ಜ್ವಾಲೆಯನ್ನು ಉತ್ಪನ್ನ ಮಾಡಲು ಆಮ್ಲಜನಕದ ಹೊರತಾಗಿ ಇತರ ಉತ್ಕರ್ಷಣಕಾರಿಗಳನ್ನು ಬಳಸಬಹುದು. ಕ್ಲೋರಿನ್‍ನಲ್ಲಿ ಸುಡುತ್ತಿರುವ ಹೈಡ್ರೋಜನ್ ಜ್ವಾಲೆಯನ್ನು ಉತ್ಪನ್ನ ಮಾಡುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ ಕ್ಲೋರೈಡ್ ಅನಿಲವನ್ನು ದಹನ ಉತ್ಪನ್ನವಾಗಿ ಹೊರಸೂಸುತ್ತದೆ. ಅನೇಕ ಸಂಭಾವ್ಯ ರಾಸಾಯನಿಕ ಸಂಯೋಜನೆಗಳಲ್ಲಿ ಮತ್ತೊಂದೆಂದರೆ ಹೈಡ್ರಜ಼ೈನ್ ಮತ್ತು ಜ್ವಲನಸಿದ್ಧವಾಗಿರುವ ನೈಟ್ರೋಜನ್ ಟೆಟ್ರಾಕ್ಸೈಡ್ ಮತ್ತು ಇದನ್ನು ಸಾಮಾನ್ಯವಾಗಿ ರಾಕೆಟ್ ಇಂಜಿನ್‍ಗಳಲ್ಲಿ ಬಳಸಲಾಗುತ್ತದೆ.

ಬುನ್ಸೆನ್ ಬರ್ನರ್ ಕಂಡುಹಿಡಿದವರು ರಾಬರ್ಟ್ ಬುನ್ಸೆನ್. ಪ್ರಯೋಗಶಾಲೆಯಲ್ಲಿ ಉಪಯೋಗಿಸುವ ಬುನ್ಸೆನ್ ಬರ್ನರಿನಲ್ಲಿ ಉರಿಯುವ ಗ್ಯಾಸ್ ಆಕ್ಸಿಜನ್ನಿನ ಪ್ರಮಾಣ ಕಡಿಮೆಯಾದಾಗ ಕೆಂಪಗೆ ಉರಿಯುವುದೂ, ಪ್ರಮಾಣ ಸರಿಯಾದಾಗ ನೇರಿಳೆಬಣ್ಣದ ಉರಿಯಂತೆ ಕಾಣುವುದೂ ವಿಜ್ಞಾನದ ವಿದ್ಯಾರ್ಥಿಗಳಿಗೆ ಪರಿಚಯವಾದ ವಿಷಯ. ಆಕ್ಸಿಅಸಿಟಲೀನ್ ಮಿಶ್ರಣ ಉರಿದಾಗ ನೇರಿಳೆಬಣ್ಣ ಕಂಡುಬರುವುದು. ಅದರ ಉಷ್ಣತೆ ಹೆಚ್ಚಿನ ಪ್ರಮಾಣದಲ್ಲಿರುವುದೇ (೩೬೦೦ ಸೆ.) ಇದಕ್ಕೆ ಕಾರಣ. ಅನಿಲಗಳು ಉರಿಯುವಾಗ ಹೊರಸೂಸುವ ಉಷ್ಣಶಕ್ತಿಯನ್ನು ಅನೇಕ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಲೋಹ ಕೈಗಾರಿಕೆಯಲ್ಲಿ, ಬೆಸುಗೆಗೆ, ಕರಗಿಸಲು ಮತ್ತು ಕೊಯ್ಯಲು ಆಕ್ಸಿಅಸಿಟಲೀನ್, ಆಕ್ಸಿಹೈಡ್ರೋಜನ್ ಮುಂತಾದ ಅನಿಲ ಮಿಶ್ರಣಗಳನ್ನು ಉಪಯೋಗಿಸುತ್ತಾರೆ. ಪ್ರಯೋಗಶಾಲೆಯಲ್ಲಿ ಸೋಡಿಯಂ, ಪೊಟಾಸಿಯಂ ಮತ್ತು ಬೇರಿಯಂ ಮುಂತಾದ ಲೋಹಗಳನ್ನು, ಅತ್ಯಂತ ಅಲ್ಪಪ್ರಮಾಣದಲ್ಲಿದ್ದರೂ ಸಹ, ಬುನ್ಸೆನ್ ಬರ್ನರಿನ ಉರಿಯ ಸಹಾಯದಿಂದ ಪತ್ತೆ ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Law, C. K. (2006). "Laminar premixed flames". Combustion physics. Cambridge, England: Cambridge University Press. p. 300. ISBN 0-521-87052-6.
  2. "Do flames contain plasma?". Science Questions with Surprising Answers (in ಅಮೆರಿಕನ್ ಇಂಗ್ಲಿಷ್). Retrieved 2022-06-26.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜ್ವಾಲೆ&oldid=1155136" ಇಂದ ಪಡೆಯಲ್ಪಟ್ಟಿದೆ