ವಿಷಯಕ್ಕೆ ಹೋಗು

ಪಾಳೇಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಜಾತ್ರೆ ಉತ್ಸವಗಳಲ್ಲಿ ಮನರಂಜನೆಗಾಗಿ ಹಾಕುವ ವಿವಿಧ ವೇಷಗಳಲ್ಲಿ ಪಾಳೆಗಾರನ ವೇಷವೂ ಒಂದು. ದಕ್ಷಿಣ ಕರ್ನಾಟಕದ ಬಹುಭಾಗಗಳಲ್ಲಿ ಕಂಡುಬರುವ ಈ ಕಲೆ ನಾಯಕ ಜನಾಂಗಗಳಲ್ಲಿ ಹೆಚ್ಚು ಪ್ರಚಲಿತವಿದೆ. ಈಚೆಗೆ ಬೇರೆಯವರೂ ಈ ವೇಷ ಹಾಕುತ್ತಿದ್ದಾರೆ. ಪಾಳೇಗಾರರದ್ದು ದರ್ಪದ ಆಢಳಿತ. ಈಗಲೂ ಹಳ್ಳಿಗಳಲ್ಲಿ ಯಾರನ್ನೂ ಲೆಕ್ಕಿಸದೆ ತಾನು ಹೇಳಿದ್ದೆ ನಡೆಯಬೇಕೆಂಬಂತೆ ವರ್ತಿಸುವವರನ್ನು 'ಅವನೇನಪ್ಪ ಪಾಳೇಗಾರ ಆಗ್ಬಿಟ್ಟವನೆ' ಎಂದು ಜನ ಆಡಿಕೊಳ್ಳುವುದು ಉಂಟು. ಆದರೆ ವಾಸ್ತವವಾಗಿ ಪಾಳೇಗಾರರು ಸ್ವಾಭಿಮಾನ, ಸಾಹಸ, ಪರಾಕ್ರಮಗಳಿಗೆ ಹೆಸರಾದವರು. ಅವರ ಕ್ರೂರ ದೃಷ್ಟಿಗೆ ಬಿದ್ದವರು ಉಳಿಯುವುದು ಕಷ್ಟ. ಕೃಪಾದೃಷ್ಟಿಗೆ ಬಿದ್ದವರಿಗೆ ಯಾವ ತೊಂದರೆಯೂ ಇಲ್ಲ.

ಇತಿಹಾಸ

[ಬದಲಾಯಿಸಿ]

ಪಾಳೇಗಾರನ ವೇಷದ ಬೆಳವಣಿಗೆಯ ಬಗ್ಗೆ ಗ್ರಾಮೀಣರು ಹೇಳುವ ಪ್ರಕಾರ "ಬ್ರಿಟೀಷರ ಕಾಲದಲ್ಲಿ ಬಲಿಷ್ಟನಾದ ಒಬ್ಬ ಪಾಳೇಗಾರನಿದ್ದು ಅವನನ್ನು ಯಾರೂ ಸೋಲಿಸಲು ಆಗಲಿಲ್ಲ, ಆಗ ಬ್ರಿಟೀಷರು ಬುದ್ದಿವಂತಿಕೆಯಿಂದ ಸಂಚುಮಾಡಿ ಅವನ ಸೂಳೆಯಿಂದಲೇ ಅವನಿಗೆ ವಿಷಕುಡಿಸಿ ಸಾಯಿಸಿದರು. ಪಾಳೇಗಾರ ಸತ್ತನಂತರ ಅವನ ವಂಶಜರಾದ ನಾಯಕರು ಪಾಳೇಗಾರನ ಪ್ರತಾಪಗಳನ್ನು ಹಾಡಿಕೊಂಡು ಅವನ ವೇಷವನ್ನು ಹಾಕುತ್ತಾ ಬಂದರು". ನಾಡಿನ ಇತಿಹಾಸದಲ್ಲಿ ಪಾಳೇಗಾರರ ಆಳ್ವಿಕೆಗೆ ಸಂಬಂದಿಸಿದಂತೆ ಅನೇಕ ಉದಾಹರಣೆಗಳು ದೊರೆಯುತ್ತವೆ.

ವೇಷಭೂಷಣ

[ಬದಲಾಯಿಸಿ]

ಪಾಳೇಗಾರ ವೇಷದಲ್ಲಿನ ಕಲಾವಿದರ ವೇಷಭೂಷಣ ವಿಶಿಷ್ಟ. ತಲೆಗೆ ಬ‌‌‌‌‌‌‌‌‌‌‌‌‌‌‍ಣ್ಣದ ಪೇಟವನ್ನು ಸುತ್ತಿಕೊಂಡಿರುತ್ತಾರೆ. ಬಿಗಿಯಾದ ಬಣ್ಣದ ಕಾಚ ಅಥವಾ ಚಡ್ಡಿಯ ಹೊರತಾಗಿ ಬರಿಮೈಯಲ್ಲಿ ಇರುತ್ತಾರೆ. ಕೆಲವರು ಚಡ್ಡಿಗೆ ಗೆಜ್ಜೆಯನ್ನು ಹೆಣೆಸಿರುತ್ತಾರೆ. ಕೆನ್ನೆ, ಹಣೆ, ಗಲ್ಲ, ಮೂಗು, ಕಿವಿಗಳಿಗೆ ಆಯಾ ಭಾಗಗಳಿಗೆ ತಕ್ಕಂತೆ ಕೆಂಪು, ಹಸಿರು, ಕಪ್ಪು, ಬಿಳಿ ಬಣ್ಣಗಳನ್ನು ವಿಚಿತ್ರ ರೀತಿಯಲ್ಲಿ ಹಚ್ಚಿರುತ್ತಾರೆ. ಈ ವೇಷದಾರಿ ದಷ್ಟಪುಷ್ಟನಾಗಿದ್ದು ವೇಷ ಆಕರ್ಷಕವಾಗಿರುತ್ತದೆ. ವೇಷಕ್ಕೆ ತಕ್ಕಂತೆ ದಪ್ಪನಾಗಿ ಹುರಿ ಮಾಡಿದ ಮೀಸೆ, ತಲೆಯಿಂದ ಕತ್ತಿನ ಮೇಲೆ ಅಕ್ಕಪಕ್ಕಗಳಿಗೆ ಇಳಿಬಿಟ್ಟ ಚೌಲಿ, ಕೊರಳಿಗೆ ಹಾರ, ಇವು ಇತರ ಅಲಂಕಾರಗಳು. ಕೆಲವು ಕಡೆ ವೇಷಧಾರಿಯು ಬಣ್ಣದ ಬಟ್ಟೆಯ ಗೌನು ಹಾಕಿಕೊಂಡಿರುತ್ತಾನೆ. ಎರಡು ತೋಳು ಮತ್ತು ಸೊಂಟಕ್ಕೆ ಕಟ್ಟಿದ ನಡುಕಟ್ಟುಗಳಿಗೆ ಹಗ್ಗವನ್ನು ಕಟ್ಟಿ ಎಂಟು-ಹತ್ತು ಅಡಿ ದೂರದಲ್ಲಿ ಮೂವರು ಆ ಹಗ್ಗವನ್ನು ಹಿಡಿದುಕೊಂಡಿರುತ್ತಾರೆ. ಆವೇಷದಿಂದ ಕುಣಿಯುವ ವೇಷದಾರಿಯ ಆರ್ಭಟದ ನಿಯಂತ್ರಣ ಇವರ ಕೆಲಸ.

ಬಳಸುವ ಸಲಕರಣೆಗಳು

[ಬದಲಾಯಿಸಿ]

ವೇಷದಾರರಲ್ಲಿ ಕೆಲವರು ಬಾಯಿಗೆ ನಿಂಬೆಹಣ್ಣು ಇಟ್ಟುಕೊಂಡರೆ ಮತ್ತೆ ಕೆಲವರು ಕೈಗೆ ದಪ್ಪನಾದ ಬಳೆ ಹಾಕಿರುತ್ತಾರೆ. ಗೆಜ್ಜೆ ಕಟ್ಟಿಕೊಂಡಿರುತ್ತಾರೆ. ವೇಷಧಾರಿ ಸಾಮಾನ್ಯವಾಗಿ ಬಲಗೈಯಲ್ಲಿ ಕತ್ತಿ ಅಥವಾ ದೊಣ್ಣೆಯನ್ನು ಎಡಗೈಯಲ್ಲಿ ಗುರಾಣಿಯನ್ನೂ ಹಿಡಿದಿರುತ್ತಾನೆ. ಕೆಲವು ಕಡೆ ಕತ್ತಿ-ದೊಣ್ಣೆಯ ಬದಲು ಬರ್ಚಿ, ಬಂದೂಕ, ಕುಡುಗೋಲುಗಳನ್ನು ಹಿಡಿದುಕೊಳ್ಳುತ್ತಾರೆ. ಬೆನ್ನಿಗೆ ಮೇಲ್ಮುಖವಾಗಿ ಸೂರ್ಯೋದಯದ ಕಿರಣಗಳಂತೆ ಅಥವಾ ಕತ್ತರಿ ಆಕಾರದಲ್ಲಿ ಕತ್ತಿಯನ್ನು ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಬೆನ್ನಹಿಂದೆ ಒಂದು ಹಳೆಯ 'ಬಟ್ಟೆಗಂಟನ್ನು' ಇಳಿಬಿಟ್ಟುಕೊಂಡಿರುತ್ತಾರೆ. ಇದಕ್ಕೆ ಪಾಳೇಗಾರ ಗಂಟು ಎಂದು ಕರೆಯುತ್ತಾರೆ. ಕಲಾವಿದ ತಮಟೆ ವಾದ್ಯದ ಗತ್ತಿಗೆ ಕುಣಿಯುವ ಗತ್ತು, ಕ್ರೂರವಾಗಿ ಕಣ್ಣು ಬಿಡುವ ರೀತಿ ಮೀಸೆ ಹುರಿ ಮಾಡುವ ಕ್ರಮ, ಕುಣಿದು ಕುಪ್ಪಳಿಸುವುದು, ಹಗ್ಗ ಹಿಡಿದು ನಿಂತವರನ್ನು ತನ್ನ ಶಕ್ತಿಯಿಂದ ಎಳೆಯುವ ರೀತಿ, ಕೈಕಾಲುಗಳ ಚಲನೆ, ಇವೆಲ್ಲವುಗಳೂ ಭಯಂಕರವೆನಿಸಿದರೂ ಒಳ್ಳೆಯ ಮನರಂಜನೆ ನೀಡುತ್ತವೆ. ಕೆಲವು ಕಡೆ ಎದುರಾಳಿಯಾಗಿ ಬಂದವರು ದೊಣ್ಣೆಯಿಂದ ಬೀಸುವ ಏಟುಗಳಿಗೆ ವೇಷಧಾರಿ ಪ್ರತಿಯಾಗಿ ಕೊಡುವ ದೊಣ್ಣೆಯ ಏಟು ರೋಮಾಂಚನಕಾರಿ.

ಉಲ್ಲೇಖ

[ಬದಲಾಯಿಸಿ]
  1. ಗೋ.ರು.ರಾಮಸ್ವಾಮಿ, ಕರ್ನಾಟಕ ಜಾನಪದ ಕಲೆಗಳ ಕೋಶ, ಕರ್ನಾಟಕ, ಪುಟ ಸಂಖ್ಯೆ: ೧೦೮-೧೦೯.
"https://kn.wikipedia.org/w/index.php?title=ಪಾಳೇಗಾರ&oldid=1047700" ಇಂದ ಪಡೆಯಲ್ಪಟ್ಟಿದೆ