ಎರವರ ಕುಣಿತ

ವಿಕಿಪೀಡಿಯ ಇಂದ
Jump to navigation Jump to search

ವಿರಾಜಪೇಟೆಯ ಕಾಡುಗಳಾದ ಅಮ್ಮತ್ತಿ, ಪೊನ್ನಂಪೇಟೆ, ಗೋಣಿಕೊಪ್ಪ, ಶ್ರೀಮಂಗಲದ ಕಾಡುಗಳಲ್ಲಿ ನೆಲೆಸಿರುವಂತಹ ಎರವರು ಬುಡಕಟ್ಟು ಜನಾಂಗದವರು. ಎರವ ಮತ್ತು ಯರವ ಎಂಬ ಪದದ ಬಳಕೆಯು ಉಂಟು. ಇವರು ತಮ್ಮದೇ ಆದ ’ಯರವ’ ಎಂಬ ಸಾಮಾಜಿಕ ಉಪಭಾಷೆಯನ್ನು ಮುಂದುವರಿಸಿಕೊಂಡು, ತಮ್ಮ ಭಾಷೆಯಲ್ಲಿಯೆ ತಮ್ಮ ಜನಾಂಗದ ವೀರನ ಸಾಂಸ್ಕೃತಿಕ ವಿಚಾರಗಳನ್ನು ಕುರಿತು ಕಾವ್ಯದ ಶೈಲಿಯಲ್ಲಿ ಹಾಡುವ ಬಗೆಯು ಕಂಡುಬರುವುದು.ಹಾಡಿಗೆ ಹಿನ್ನೆಲೆಯಾಗಿ ’ದುಡಿ’ ಬಾರಿಸುವರು. ಈ ಕಾವ್ಯವನ್ನು ಕೆಲವರು ’ಪಟ್ಟೊರ‍್” , ’ಬಾಯನ’ ಎಂದು ಕರೆಯುತ್ತಾರೆ.’ಯರವ’ ಎಂಬ ಶಬ್ದವು ’ಇರುವುಳ’ ಅಂದರೆ ಬೇಡುವವ ಎಂಬ ಶಬ್ದದಿಂದ ಬಂದಿರಬಹುದು, ’ಪರವ’(ಕೇರಳ) ಎಂಬ ಶಬ್ದವೇ ಯರವ ಅಗಿದೆ ಎಂದು ಊಹಿಸಲಾಗಿದೆ.ಕೇರಳದ ವೈನಾಡು ಭಾಗದ ’ಪರವ’ರಿಗೂ ಹಾಗೂ ’ಯರವ’ರಿಗೂ ಸಾಮ್ಯವಿದ್ದು , ೧೮ನೇ ಶತಮಾನದಲ್ಲಿ ಯರವರು ವಲಸೆಬಂದಿರಬಹುದೆಂಬ ವಾದವಿದೆ. ಕೊಡಗಿನಲ್ಲಿರುವ ’ಪಂಜರಿ ಎರವ’ , ’ಫಣಿ ಎರವ’ ಹಾಗೂ ’ಬಡಗ’ ಎಂಬ ಪ್ರಭೇದಗಳಿಂದ ಬಂದಿರಬಹುದೆಂದು ಹೇಳಲಾಗುತ್ತದೆ. ಇವರು ತಮ್ಮ ಎರವ ಭಾಷೆಯ ಜೊತೆಗೆ ಕನ್ನಡ, ಕೊಡವ, ಮಲೆಯಾಳಿ ಭಾಷೆಯನ್ನು ತಿಳಿದವರಾಗಿದ್ದಾರೆ. ಎರವರು ತಮ್ಮದೇ ಆದ ಆಚಾರ, ವಿಚಾರ, ಪದ್ದತಿಗಳನ್ನು ಒಳಗೊಂಡಿರುವರು. ಗುಡ್ಡಗಾಡಿನಲ್ಲಿ ವಾಸಿಸುವಂತಹ ಇವರು ಸಾಮಾನ್ಯವಾಗಿ ಕೃಷಿಕರು. ಇವರು ಸಂಜೆಯ ಸಮಯದಲ್ಲಿ ಕೆಲಸ ಮುಗಿದ ನಂತರ ಬೇಸರ,ದಣಿವು ಕಳೆಯಲೆಂದು ಕುಣಿತವನ್ನು ಪುರುಷ ಮತ್ತು ಮಹಿಳೆಯೆಂಬ ಭೇದವಿಲ್ಲದೆ ಸಾಮೂಹಿಕವಾಗಿ ಹಾಡುಗಳ ಮೂಲಕ ಮಾಡುವರು. ಈ ಕುಣಿತವನ್ನೇ ಎರವರ ಕುಣಿತವೆಂದು ಕರೆಯುತ್ತಾರೆ. ಈ ಕುಣಿತದಲ್ಲಿ ಇಷ್ಟೇ ಜನರಿರಬೇಕೆಂಬ ನಿಯಮವೇನೂ ಇಲ್ಲ. ಕುಣಿತದ ಸಂದರ್ಭದಲ್ಲಿ ಸಿದ್ದವಾದ ವೇದಿಕೆಯು ಇರಬೇಕೆಂಬುದೇನೂ ಇಲ್ಲ. ತಮ್ಮ ಗುಡಿಸಲುಗಳ ಮುಂದೆಯೇ ಬೆಂಕಿಯ ಗುಡ್ಡೆಗಳ ಸುತ್ತಲೂ ’ದುಡಿ’ , ’ಚೀನಿವಾದ್ಯ’ಕ್ಕೆ ತಕ್ಕಂತೆ ಕುಣಿತವನ್ನು ಹಾಕುವರು.ದುಡಿಯು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗಿನ ಗಿರಿಜನರಲ್ಲಿ ಬಳಕೆಯಲ್ಲಿರುವ ಚರ್ಮವಾ‌ದ್ಯ. ಇದನ್ನು ಕುಂಬಳಿ ಮರದಿಂದ ತಯಾರಿಸುತ್ತಾರೆ.ಹದ ಮಾಡಿದ ಕೋತಿಯ ಚರ್ಮದಿಂದ ದುಡಿಯನ್ನು ಕಟ್ಟಿದರೆ ಒಳ್ಳೆಯ ದನಿಯನ್ನು ಕೊಡುತ್ತದೆ ಎಂದು ಕಲಾವಿದರು ಹೇಳುತ್ತಾರೆ.’ಚೀನಿವಾದ್ಯ’ವು ಒಂದು ಗಾಳಿವಾದ್ಯ. ಇದನ್ನು ಮರದಿಂದ ತಯಾರಿಸುತ್ತಾರೆ. ವಾದ್ಯವನ್ನು ಊದುವ ಜಾಗದಲ್ಲಿ ಕೆಂಪು ತಾಳೆ ಮಡಿಕೆಯನ್ನು ಹಾಕಿರುತ್ತಾರೆ. ಕುಣಿತದ ಸಂದರ್ಭದಲ್ಲಿ ಎರಡು ಚೀನಿವಾದ್ಯ, ಎರಡು ದುಡಿಗಳನ್ನು ಬಳಸುತ್ತಾರೆ. ಈ ಕುಣಿತವು ಎರವರಿಗೂ ಹವ್ಯಾಸವಾದರೂ ಮದುವೆ, ಹಬ್ಬ, ಉತ್ಸವಗಳಲ್ಲಿ ವಿಶೇಷವಾಗಿ ಕುಣಿಯುತ್ತಾರೆ. ಇವರ ಕುಣಿತವು ಪರಂಪರೆಯಿಂದ ಬಂದಿರುವಂತಹುದಾಗಿರುವುದು.ಕುಣಿತದ ಇವರ ವೇಷಭೂಷಣವೆಂದರೆ ಗಂಡಸರಿಗೆ ಅರೆ ತೋಳಿನ ಅಂಗಿ, ಮೊಂಡು ಪಂಚೆ, ಹೆಂಗಸರಿಗೆ ಮಲೆನಾಡಿನ ಪ್ರದೇಶದಲ್ಲಿ ಮಹಿಳೆಯರು ಧರಿಸುವಂತೆ ಕೊರಳಿಗೆ ಸೆರಗು ಬಿಗಿದ ಸೀರೆಯಾಗಿರುವುದು.