ಉಮ್ಮತ್ತಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಮ್ಮತ್ತಾಟ್ ಕರ್ನಾಟಕಕೊಡಗು ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಜಾನಪದ ನೃತ್ಯ.ಇದನ್ನು ಕೊಡವ ಮಹಿಳೆಯರು ಮಾಡುತ್ತಾರೆ.

ಪೌರಾಣಿಕ ಹಿನ್ನಲೆ[ಬದಲಾಯಿಸಿ]

ಇದರ ಹಿನ್ನಲೆ ಹೀಗಿದೆ:ಸಮುದ್ರ ಮಥನದಲ್ಲಿ ಅಮೃತವು ಮೋಹಿನಿಯ ರೂಪದಲ್ಲಿದ್ದ ವಿಷ್ಣುವಿನ ಪಾಲಾಗುತ್ತದೆ.ಇದನ್ನೇ ಕೊಡವರು ಉಮ್ಮತ್ತಾಟ್ ರೂಪದಲ್ಲಿ ಪ್ರದರ್ಶಿಸುತ್ತಾರೆ.

ಪ್ರದರ್ಶನ[ಬದಲಾಯಿಸಿ]

ಇದರಲ್ಲಿ ಒಬ್ಬಳು ಶೃಂಗಾರ ಮಾಡಿಕೊಂಡು ಮಧ್ಯೆ ಕಲಶವನ್ನು ಹಿಡಿದುಕೊಂಡು ನಿಂತಿದ್ದರೆ ಉಳಿದ ಮಹಿಳೆಯರು ಸುತ್ತಲೂ ತಿರುಗಿಕೊಂಡು ನೃತ್ಯ ಮಾಡುತ್ತಾರೆ. ಕಲಶವು ಕೊಡವರ ಕುಲದೈವ ಕಾವೇರಿಯ ಪ್ರತೀಕ.[೧] ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ `ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ `ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.

  • ‘ಉಮ್ಮತ್ತಾಟ್’ ದೈವೀ ಆರಾಧನೆಯ ಕಲೆ. ಅಂತೇ ಅದೊಂದು ಹವ್ಯಾಸಿ ಕಲೆಯೂ ಹೌದು. ಮಹಿಳೆಯರು ತಮ್ಮ ಸ್ವಸಂತೋಷಕ್ಕಾಗಿ ಸುಗ್ಗಿ ಮತ್ತು ವಸಂತ ಕಾಲದಲ್ಲಿ, ದೇವರ ಉತ್ಸವ ಮೊದಲಾದ ಸಮಾರಂಭಗಳಲ್ಲಿ ಕುಣಿದು ನಲಿಯುತ್ತಾರೆ. ಇತ್ತೀಚೆಗೆ ಉಮ್ಮತ್ತಾಟ್ ಹಾಡುಗಳಲ್ಲಿ ಸಮಕಾಲೀನ ವಿಷಯಗಳೆಲ್ಲ ಇರುತ್ತವೆ. ಈ ಕಲೆಯಲ್ಲಿ ಪಾಲುಕೊಳ್ಳುವರಲ್ಲಿ ಅವಿವಾಹಿತ ಯುವತಿಯರೇ ಹೆಚ್ಚು. ಮದುವೆಯಾದವರು ಸಂಕೋಚದಿಂದಾಗಿ ಪ್ರದರ್ಶನದಲ್ಲಿ ಸೇರಿಕೊಳ್ಳುವುದು ಕಡಮೆ.
  • `ಉಮ್ಮತ್ತಾಟ್’ ಒಂದು ಸೌಮ್ಯ ಕಲೆ. ಕೊಡಗಿನ ಮಹಿಳೆಯರು ತಮ್ಮ ವಿಶಿಷ್ಟ ಉಡುಪು ಧರಿಸಿ ಷಷ್ಠಿ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ತಲೆಗೆ ವಸ್ತ್ರ, ತುಂಬು ತೋಳಿನ ಜಾಕೆಟ್, ಹಿಂದಕ್ಕೆ ನೆರಿಗೆ ಬಿಟ್ಟು ಉಟ್ಟ ಸೀರೆ, ಮಂಗಳಕರವಾದ ಬಳೆ, ಮಣಿಮಾಲೆ, ಹಣೆಗೆ ಕುಂಕುಮದ ಬೊಟ್ಟು -ಇದು ಉಮ್ಮತ್ತಾಟ್ ಕಲಾವಿದೆಯರ ವೇಷ. ತಲೆಗೆ ಕಟ್ಟುವ ವಸ್ತ್ರಗಳು ಸಾಮಾನ್ಯವಾಗಿ ಕೆಂಪು ಬಣ್ಣದ್ದಿರುತ್ತವೆ.
  • ಕಲಾವಿದೆಯರು ಮಧ್ಯಭಾಗದಲ್ಲಿ `ಕುತ್ತ ದೀಪ ತಳಿಯ ತಕ್ಕೆ ಬೊಳಕು ಮಡಗಿ’ ಅದರ ಸುತ್ತ ವೃತ್ತಾಕಾರದಲ್ಲಿ ಹಾಡಿಕೊಂಡು ಸುತ್ತುತ್ತಾರೆ. ಪ್ರತಿಯೊಬ್ಬ ಕಲಾವಿದೆಯೂ ಕೈಯಲ್ಲಿ ಕಂಚಿನ ತಾಳ ಹಿಡಿದಿರುತ್ತಾಳೆ. (ಕಂಚಿನ ಬಗ್ಗೆ ಅವರಿಗೆ ಪವಿತ್ರ ಭಾವನೆ. ಕೊಡವರಲ್ಲಿ ಗಂಡು ಮಗು ಹುಟ್ಟಿದರೆ ಅವನು ಶೂರ ಮತ್ತು ಧೀರನೆಂಬ ಸಂಕೇತಕ್ಕೆ ಗುಂಡು ಹಾರಿಸಿ ಸದ್ದು ಮಾಡಿದರೆ, ಹೆಣ್ಣು ಹುಟ್ಟಿದಾಗ ಕಂಚಿನ ಬಟ್ಟಲು ಬಡಿದು ಸದ್ದು ಮಾಡುತ್ತಾರೆ.
  • ಕಂಚಿನ ದನಿ `ಓಂಕಾರ’ದ ಸ್ವರೂಪವಾದ್ದರಿಂದ ಅದು ಕುಲದೇವಿಯ ಆರಾಧನೆಯ ಸಂಕೇತವೆಂದು ಅವರ ನಂಬಿಕೆ. ಉಮ್ಮತ್ತಾಟ್ ಕೊಡವರ ಕುಲದೇವತೆ ಕಾವೇರಮ್ಮನ ಆರಾಧನೆಯೂ ಹೌದೆಂದು ಅವರು ಹೇಳುತ್ತಾರೆ) ಉಮ್ಮತ್ತಾಟ್‌ದಲ್ಲಿ ಜೋಡಿಗೂಡುವಂತೆ ಎಷ್ಟು ಜನರಾದರೂ ಭಾಗವಹಿಸಬಹುದು. ಹಾಡು ಹೇಳಿಕೊಡುವವರು ಪ್ರತ್ಯೇಕವಾಗಿ ಒಂದು ಕಡೆ ನಿಂತು ಪೌರಾಣಿಕ ಪ್ರಸಂಗಗಳೇ ಅಲ್ಲದೆ ಕಾವೇರಿಯ ವರ್ಣನೆ ಕುರಿತು ನೂರಾರು ಹಾಡು ಹೇಳುತ್ತಾರೆ.
  • ಆಗ ದೀಪದ ಸುತ್ತ ನಿಂತ ಕಲಾವಿದೆಯರು ಆ ಹಾಡನ್ನು ಪುನರುಚ್ಚರಿಸುತ್ತಾ ತಾಳ ಹಾಕಿಕೊಂಡು ಸುತ್ತುತ್ತಾರೆ. ಪ್ರತಿ ಹಾಡಿಗೂ ಅವರು ಸುತ್ತುವ, ತಾಳ ಹಾಕುವ ಮತ್ತು ಕುಣಿಯುವ ಗತ್ತು ಭಂಗಿಗಳು ವ್ಯತ್ಯಾಸಗೊಳ್ಳುತ್ತವೆ. ಒಮ್ಮೆ ತಮ್ಮಷ್ಟಕ್ಕೆ ತಾವೇ ತಾಳ ಹಾಕಿದರೆ, ಇನ್ನೊಮ್ಮೆ ಇಬ್ಬಿಬ್ಬರು ಎದುರಾಗಿ ತಾಳ ಕೊಡುತ್ತಾರೆ. ಮತ್ತೊಮ್ಮೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ಎದುರು ಬದುರು ತಾಳ ಕೊಡುತ್ತಾರೆ.
  • ತಾಳ ಹಾಕಿಕೊಂಡು ಹಾಡುತ್ತಾರೆ. ಯಾವ ಭಂಗಿಯಲ್ಲಿದ್ದರೂ ವೃತ್ತಚಲನೆ ನಿಧಾನವಾಗಿ ಸಾಗುತ್ತಲೇ ಇರುತ್ತದೆ. ತಾಳದ ಗತ್ತು ಮಾತ್ರ ಎಲ್ಲೂ ಕುಂಠಿತವಾಗುವುದಿಲ್ಲ. ತಾಳದ ಗತಿ ತ್ವರಿತವಾದಾಗ ಮಾತ್ರ ಕಲಾವಿದರ ಚಲನೆಯೂ ತ್ವರಿತಗೊಂಡು ಪ್ರದರ್ಶನ ಕಳೆಗೂಡುತ್ತದೆ. ಉಮ್ಮತ್ತಾಟ್ ಹಾಡುಗಳಲ್ಲಿ ಕಾವೇರಿಯ ಸ್ತುತಿಗೀತೆಗಳೇ ಹೆಚ್ಚು. ಅಂತಹ ಒಂದು ಸ್ತುತಿಯ ನಾಲ್ಕು ಸಾಲುಗಳು ಹೀಗಿವೆ:

“ಕಾವೇರಮ್ಮ ದೇವಿ ತಾಯಿ ಕಾಪಾಡೆಂಗಳಾ,
ಭಾವ ಬಟ್ಟೆ ಕಾಟಿ ತಂದ್ ಚಾಕ್ ದೇವಿ ನೀ,
ದತ್ತ್ ಮೋವಳಾಯಿತ್ ನೀ ಬ್ರಹ ದೇವಂಗೇ,
ಗೊತ್ತಿಲ್ಲತೆ ಅಗಸ್ತ್ಯ ಋಷಿ ಬುಟ್ ಪೊರಟಯಾ.”

ಹೀಗೆ ಹೇಳಿಕೊಂಡು ನಿಧಾನವಾಗಿ ಕಲಾವಿದೆಯರು ಚಲಿಸುತ್ತಿದ್ದರೆ, ಕಾವೇರಿ ನದಿಯ ಗಂಭೀರ ಗಮನದ ಸಂಕೇತವೋ ಎಂದೆನಿಸುತ್ತದೆ!

ಉಲ್ಲೇಖಗಳು[ಬದಲಾಯಿಸಿ]

  1. "FOLK ARTS & DANCES OF KARNATAKA". Archived from the original on 2015-07-10. Retrieved 29 ಜುಲೈ 2015.