ವಿಷಯಕ್ಕೆ ಹೋಗು

ತೊಗಲುಗೊಂಬೆಯಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೊಗಲುಗೊಂಬೆಯಾಟದವರನ್ನು ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಕಟುಬೂಜ್ಯಾತ, ಕೋಲುಕ್ಯಾತ, ಅಸ್ತ್ರೀಕ್ಯಾತ, ಕಾಲಿಕ್ಯಾತ, ಬುಂಡೇಕ್ಯಾತ ಹೀಗೆ ಅನೇಕ ಹೆಸರುಗಳಿಂದ ಕರೆಯುವರು. ಕಿಳ್ಳೆಕ್ಯಾತರು, ಗೊಂಬೆರಾಮರು ಹಾಗೂ ಚಿತ್ರಮರಾಟರು ಎಂಬ ಹೆಸರಿನಿಂದ ತೊಗಲುಗೊಂಬೆಯಾಟ ಆಡಿಸುವವರನ್ನು ಗುರುತಿಸಬಹುದು.

ಇತಿವೃತ್ತ

[ಬದಲಾಯಿಸಿ]
  • ಇವರು ರಾಮಾಯಣದಲ್ಲಿ ಗುಹನ ವಂಶಕ್ಕೆ ಸೇರಿದವರೆಂದೂ ಗೊಂಬೆಯಾಟ ಕುಲಕಸುಬಾಗಿ ಇವರಲ್ಲಿ ಉಳಿಯಲು ಶ್ರೀ ರಾಮನ ಶಾಪವೇ ಕಾರಣವೆಂದು ದಂತ ಕಥೆಯನ್ನು ಹೇಳುವರು. ಕಿಳ್ಳೆಕ್ಯಾತರ ಬಗೆಗಿನ ಕಥೆಯೊಂದು ಈ ರೀತಿ ಇದೆ. "ಕತ್ತಾರೆ ಕಾಳಾಚಾರಿ ಎಂಬ ಮರಾಟಿ ವ್ಯಕ್ತಿ ವ್ಯವಸಾಯ ಕುಟುಂಬದ ಒಬ್ಬ ಹೆಂಗಸಿನೊಂದಿಗೆ ಗೌಪ್ಯ ಸಂಬಂಧವಿಟ್ಟುಕೊಂಡಿದ್ದನಂತೆ. ಈ ಗುಪ್ತ ಸಂಬಂಧ ಬಯಲಾದಾಗ ಆ ಹೆಣ್ಣಿನ ಮನೆಯವರು ಅವಳನ್ನು ಮಕ್ಕಳು ಸಮೇತವಾಗಿ ಹೊರಹಾಕಿದರು.
  • ಆಗ ಕಾಳಾಚಾರಿ ತೊಗಲುಗೊಂಬೆಗಳನ್ನು ಮಾಡಿಕೊಟ್ಟು ಅವರ ಜೀವನ ನಡೆಸಲು ಸಹಾಯ ಮಾಡಿದ. ಅವರೇ ಇಂದಿನ ಕಿಳ್ಳೆಕ್ಯಾತ ಜನಾಂಗದವರು". ತೊಗಲುಗೊಂಬೆಯಾಟದ ಹಿಂದೆ ಅನೇಕ ಉದ್ದೇಶಗಳಿವೆ. ಮಳೆ ಬರದೆ ಹೋದಾಗ ಗೊಂಬೆಯಾಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ತೊಗಲುಗೊಂಬೆಯಾಟ ಆಡಿಸುವುದರಿಂದ ದನಕರುಗಳಿಗೆ ಬರುವ ರೋಗದ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಜಾತ್ರೆ, ಉತ್ಸವಗಳಲ್ಲಿ ಕೂಡ ಆಟವು ನೆರವೇರುವುದು.

ತೊಗಲುಗೊಂಬೆಯಾಟದ ಪ್ರಾಚೀನತೆ

[ಬದಲಾಯಿಸಿ]
  • ಈ ಕಲೆಯು ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀ ಪಟ್ಟಣ, ಕೋರಂಗಿ ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ.
  • ಕೆಲವರು ಗೊಂಬೆಯಾಟದ ಪ್ರಾಚೀನತೆಯನ್ನು ಭಗವದ್ಗೀತೆಯ ಕಾಲಕ್ಕೆ ಎಂದರೆ ಕಿ.ಪೂ.೩೦೦೦ ವರ್ಷಗಳ ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ ಎಂಬುದಾಗಿ ತಿಳಿಸುತ್ತಾರೆ. ಅಲ್ಲದೆ ತೊಗಲುಗೊಂಬೆಯಾಟವನ್ನು 'ನೆರಳು ಗೊಂಬೆಯಾಟ' ಎಂಬುದಾಗಿ ಕರೆದು ಸಂಸ್ಕೃತದ 'ಮಹಾನಾಟಕ'ವನ್ನು ನೆರಳು ಗೊಂಬೆಯಾಟಕ್ಕಾಗಿಯೇ ಬರೆದುದು ಎಂದೂ ಅಭಿಪ್ರಾಯ ಪಡಲಾಗಿದೆ.

ತೊಗಲುಗೊಂಬೆಯ ರಚನೆ

[ಬದಲಾಯಿಸಿ]
  • ಗೊಂಬೆಯ ರಚನೆಗೆ ಜಿಂಕೆ ಅಥವಾ ಆಡಿನ ಚರ್ಮವನ್ನು ಉಪಯೋಗಿಸುತ್ತಾರೆ. ಕೆಲವೊಂದು ಬಾರಿ ದೇವತಾ ಪಾತ್ರಗಳಿಗೆ ಮೀಸಲಾದ ರಾಮಾಯಣ, ಮಹಾಭಾರತ ಪ್ರಸಂಗದ ಗೊಂಬೆಗಳನ್ನು ಜಿಂಕೆ ಚರ್ಮದಿಂದಲೇ ಮಾಡಬೇಕೆಂಬ ನಿಯಮವಿದೆ. ಅನಂತರ ಅದರ ಮೇಲೆ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸೀರೆಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡುತ್ತಾರೆ. ಅನಂತರ ಹದವರಿತ ಬಣ್ಣವನ್ನು ಹಾಕುತ್ತಾರೆ.
  • ಹೆಚ್ಚಾಗಿ ದೇವತಾ ಪಾತ್ರದ ಗೊಂಬೆಗಳಿಗೆ ನೀಲಿ, ನಸುಕೆಂಪು, ಹಳದಿ ಬಣ್ಣವನ್ನೂ ಉಪಯೋಗಿಸುತ್ತಾರೆ. ಬೇರೆ ಬೇರೆ ರೀತಿಯ ಗಿಡಮೂಲಿಕೆಗಳಿಂದ ಸ್ವತಃ ಅವರೇ ಬಣ್ಣವನ್ನು ತಯಾರಿಸಿಕೊಳ್ಳುತ್ತಾರೆ. ಹೀಗಾಗಿ ಬಹುಕಾಲದವರೆಗೂ ಬಣ್ಣ ಮಸುಕಾಗದಂತೆ ಈ ಗೊಂಬೆಗಳು ಉಳಿಯುತ್ತವೆ. ಗೊಂಬೆಗಳು ನೇರವಾಗಿ ನಿಂತುಕೊಳ್ಳಲು ಅನುವಾಗುವಂತೆ ಬಿದಿರಿನ ಅಥವಾ ಲಾಳದ ಕಡ್ಡಿಗಳನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆ ಗೊಂಬೆಯನ್ನು ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಹಾಕುತ್ತಾರೆ.
  • ಗೊಂಬೆಯನ್ನು ಹಿಡಿದು ಕುಣಿಸಲು ಅನುವಾಗುವಂತೆ ಕೆಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ. ಇದು ಮೂಲದ ಗೊಂಬೆಗಳ ರೂಪವಾಗಿರುವುದು. ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಅದಕ್ಕೆಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ. ಇದಕ್ಕೆ 'ಬಾದಲಿ' ಎಂದು ಹೆಸರು. ಇದು ಅವರಿಗೆ ಪೂಜ್ಯ ವಸ್ತುವಾಗಿರುವುದು. ಆ ವೃತ್ತಿಯನ್ನು ಕೈಬಿಟ್ಟವರನೇಕರು ಆ ಗೊಂಬೆಗಳನ್ನು ಮನೆಯಲ್ಲಿ ಹಾಗೆಯೇ ಬಿಡಬಾರದೆಂದು ಅವನ್ನು ನೀರಲ್ಲಿ ತೇಲಿ ಬಿಡುವ ಕ್ರಮವೂ ಇದೆ.
  • ಕರ್ನಾಟಕದಲ್ಲಿ ಮೂರು ಜಾತಿಯ ಗೊಂಬೆಗಳು ಕಂಡು ಬರುತ್ತವೆ. ಕೈಕಾಲುಗಳ ಚಲನೆ ಇಲ್ಲದ ಆದರೆ ಸುಂದರ ಹಾಗೂ ಕಲಾತ್ಮಕವಾದ ಗೊಂಬೆಗಳು. ಅವು ಬಹುತೇಕ ಉತ್ತರ ಕರ್ನಾಟಕದವು. ಕೈಕಾಲುಗಳ ಚಲನೆಯುಳ್ಳ ಚುರುಕಾಗಿ ಆಡಿಸ ಬಲ್ಲ ಗೊಂಬೆಗಳು ದಕ್ಷಿಣ ಕರ್ನಾಟಕದ ಗೊಂಬೆಗಳು. ಅವೆರಡೂ ಗೊಂಬೆಗಳು ಒಂದರಿಂದ ಮೂರು ಅಡಿ ಎತ್ತರವಿರುತ್ತವೆ. ಆಂಧ್ರ ಭಾಗದ ಗೊಂಬೆಗಳು ಚಲನೆಯುಳ್ಳ ಅಂದರೆ ಕೀಲುಗಳುಳ್ಳ ಗೊಂಬೆಗಳಾಗಿದ್ದು ಆಳೆತ್ತರ ಇರುತ್ತವೆ. ಅವುಗಳನ್ನ್ನು ನಿಂತೇ ಆಡಿಸಬೇಕು.

ಕಥಾವಸ್ತುವಿಗೆ ಪೂರಕ ಗೊಂಬೆಗಳು

[ಬದಲಾಯಿಸಿ]
  • ಗೊಂಬೆಯಾಟಕ್ಕೆ ಬಳಸುವಂತಹ ಕಥಾವಸ್ತು ಬಯಲಾಟದಂತೆ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಭೀಮ, ದುರ್ಯೋಧನ, ರಾವಣರಂತಹ ಪಾತ್ರಗಳು ಹೆಚ್ಚು ಕೆಂಪು, ಕಪ್ಪು ಬಣ್ಣಗಳಿಂದ ಕೂಡಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳಲ್ಲಿ ಸಾಮಾನ್ಯವಾಗಿ ಎರಡು ವಿಧ. ರಾಣಿಯರಿಗೆ ಉಚಿತವಾದ ವೇಷಭೂಷಣಗಳಿಂದ ಕೂಡಿದ ಗೊಂಬೆಗಳು ಹಾಗೂ ಸಾಮಾನ್ಯ ವರ್ಗದ ಗೊಂಬೆಗಳು.
  • ಇವನ್ನು ಬಿಟ್ಟರೆ ರಾಕ್ಷಸೀ ವರ್ಗದ ಹಿಡಿಂಬೆ, ಶೂರ್ಪನಖಿಯರಂಥ ಗೊಂಬೆಗಳು ಪ್ರತ್ಯೇಕವಾಗಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳು ಹೆಚ್ಚಾಗಿ ನೋಡಲು ಉದ್ದನೆಯ ಮೂಗು, ಅಗಲವಾದ ಕಣ್ಣು, ಜೊತೆಗೆ ಬೈತಲೆ ತೆಗೆದು ಕಟ್ಟಿದ ತುರುಬು, ಅದಕ್ಕೆ ಹೂವು ಮುಡಿಸಿರುತ್ತಾರೆ. ಬೈತಲೆಯಿಂದ ಹಣೆಯ ಮೇಲೆ ಬಿಟ್ಟ ಆಭರಣ, ಕಿವಿಗೆ ಆಭರಣ, ಮೂಗಿಗೆ ಮೂಗುತಿ ಹಾಗೂ ಬುಲಾಕು, ಕೈಬಳೆ ಇತ್ಯಾದಿಗಳಿರುತ್ತವೆ.

ರಂಗಸ್ಥಳ ಮತ್ತು ಆಟ

[ಬದಲಾಯಿಸಿ]
  • ಸಾಮಾನ್ಯವಾಗಿ ಹಳ್ಳಿಗಳು ಇಂತಹ ಮನೋರಂಜನೆ ಏರ್ಪಡಿಸುತ್ತಿದ್ದು ಸುಗ್ಗಿಯ ಕಾಲದಲ್ಲಿ ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಇಂತಹ ಮನರಂಜನೆಗೆ ತೊಡಗುತ್ತಿದ್ದರು. ಕಲಾವಿದರು ಮೊದಲಿಗೆ ಊರಿನ ಮುಖಂಡರನ್ನೇ ಕಂಡು ಗೊಂಬೆಯಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಬೇಕಾಗಿತ್ತು. ಅವರಿಂದ ಅನುಮತಿ ಸುಲಭವಾಗಿ ದೊರಕುತ್ತಿತ್ತು. ಈಡೀ ರಾತ್ರಿ ದೀಪಕ್ಕೆ ಬೇಕಾದ ಎಣ್ಣೆಯ ಖರ್ಚನ್ನು ಅವರೇ ಕೊಡುತ್ತಿದ್ದರು.
  • ಅಲ್ಲದೆ ಸಂಭಾವನೆಯ ಜೊತೆಗೆ ಒಂದಿಷ್ಟು ಧವಸ ಧಾನ್ಯವನ್ನು ಊರಿನವರಿಂದ ಸಂಗ್ರಹಿಸಿ ಕೊಡುತ್ತಿದ್ದರು. ಗೊಂಬೆಯಾಟದವರು ಅಲೆಮಾರಿಗಳಾದರು ಕೆಲವರು ಇಂತಿಷ್ಟು ಪ್ರದೇಶವೆಂದು ಹಂಚಿಕೊಂಡು ಅದಕ್ಕೆ ಸೇರಿದ ಹಳ್ಳಿಗಳಲ್ಲಿ ಮಾತ್ರ ಆಟ ಆಡಿಸುತ್ತಿದ್ದರು. ಊರಿನ ಮಧ್ಯಭಾಗದಲ್ಲಿ ವಿಶಾಲವಾದ ಜಾಗವಿರುವಡೆಯಲ್ಲಿ ಆಟದ ಎರ್ಪಾಡು ನಡೆಯುತ್ತದೆ. ಇದೊಂದು ಸಂಚಾರಿ ಕಲೆಯಾದುದರಿಂದ ಸಂಚಾರಕ್ಕೆ ಸುಲಭವಾದ ರಂಗಪರಿಕರಗಳನ್ನು ಹೊಂದಿರುವುದು ಕಂಡು ಬರುತ್ತದೆ.
  • ರಂಗಮಂದಿರಕ್ಕೆ ನೆಡುವುದಕ್ಕಾಗಿ ನಾಲ್ಕು ಬಿದಿರುಗಳು, ಮೇಲ್ಬಾಗದಲ್ಲಿ ಕಟ್ಟುವುದಕ್ಕೆ ನಾಲ್ಕು ಬಿದಿರುಗಳು, ಮೇಲ್ಭಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವನ್ನು ಉಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗುವ-ಚಾಪೆ, ತಡಿಕೆ, ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗು ಕರಿಯ ಕಂಬಳಿ ಇವಿಷ್ಟಿದ್ದರೆ ತೊಗಲು ಗೊಂಬೆಯಾಟದ ರಂಗಮಂದಿರ ಸಿದ್ದಗೊಳ್ಳುತ್ತದೆ. ಜೊತೆಗೆ ಶುಭದ ಸಂಕೇತವಾಗಿ ಮಾವಿನಸೊಪ್ಪನ್ನು ಕಟ್ಟುವ ಕ್ರಮವೂ ಇದೆ.
  • ಕುಳಿತುಕೊಂಡು ಕುಣಿಸುವ ಚಿಕ್ಕದಾದ ಗೊಂಬೆಗಳ ರಂಗಮಂದಿರ ಆರು ಅಡಿ ಎತ್ತರವಿದ್ದು ಎಂಟು ಅಡಿಯಷ್ಟು ಚಚ್ಚೌಕವಾಗಿರುತ್ತದೆ. ರಂಗದ ಮುಂಭಾಗದಲ್ಲಿ ಕೆಳಗಡೆ ಎರಡುವರೆ ಅಡಿಯಷ್ಟು ಕರಿಯ ಕಂಬಳಿಯನ್ನು ಕಟ್ಟುತ್ತಾರೆ . ಮೇಲ್ಭಾಗದಲ್ಲಿ ಇನ್ನುಳಿದ ಜಾಗಕ್ಕೆ ಅಪ್ಪಟ ಬಿಳಿಯ ಬಣ್ಣದ ಪಂಚೆಯನ್ನು ಕಟ್ಟುತ್ತಾರೆ. ಗೊಂಬೆಗಳನ್ನು ಅದರ ಹಿಂಬದಿಯಲ್ಲಿಯೆ ಪ್ರದರ್ಶಿಸುವುದು. ಗೊಂಬೆಗಳನ್ನು ಆಡಿಸುವವರು ಒಳಭಾಗದಲ್ಲಿಯೇ ಕುಳಿತಿದ್ದು ಕರಿ ಕಂಬಳಿಯಿಂದಾಗಿ ಅವರು ಯಾರು ಪ್ರೇಕ್ಷಕರ ಕಣ್ಣಿಗೆ ಬೀಳುವುದಿಲ್ಲ. * ಒಳಗಡೆ ಅದರ ಹಿಂಭಾಗದಲ್ಲಿ ಒಂದು ದೀಪವನ್ನು ತೂಗು ಬಿಟ್ಟರುತ್ತಾರೆ. ಇತ್ತೀಚೆಗೆ ಗ್ಯಾಸ್ ಹಾಗು ಗ್ಯಾಸ್ ಲೈಟಿನ ಬಳಕೆಯೂ ಇದೆ. ಅದರ ಬೆಳಕು ತೊಗಲುಗೊಂಬೆಗಳ ಮೇಲೆ ಬಿದ್ದು ಆ ಗೊಂಬೆಗಳ ಪ್ರತಿಫಲನ ಪಂಚೆಯ ಮೇಲೆ ಅದ್ಭುತವಾಗಿ ಕಾಣಿಸಿ ಕೊಳ್ಳುತ್ತದೆ. ಈ ರೀತಿಯ ರಂಗ ಮಂದಿರ ಚಿಕ್ಕ ಗೊಂಬೆಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು.
  • ಆಳೆತ್ತರದ ಗೊಂಬೆಗಳ ರಚನೆಯೇ ಬೇರೆ ಇದು ಬಯಲು ಸೀಮೆಯ ಬಯಲಾಟದ ರಂಗಮಂದಿರವನ್ನೇ ಹೆಚ್ಚು ಕಡಿಮೆ ಹೋಲುತ್ತದೆ. ಆಳೆತ್ತರದ ಗೊಂಬೆಗಳನ್ನು ಕುಣಿಸಬೇಕಾದರೆ ಕಲಾವಿದ ನಿಂತುಕೊಳ್ಳಬೇಕಾಗುತ್ತದೆ. ನಿಂತುಕೊಂಡೆ ಸೂತ್ರದ ಗೊಂಬೆಯನ್ನಾಡಿಸುವಂತೆ ಕಡ್ಡಿಯ ಸಹಾಯದಿಂದ ಇದನ್ನು ಆಡಿಸುತ್ತಾನೆ. ಪಾತ್ರವನ್ನು ಕುಣಿಸುವಾಗ ಜೊತೆಯಲ್ಲಿ ತಾನೂ ಕುಣಿಯುತ್ತಾನೆ.
  • ಬಯಲಾಟದ ಪಾತ್ರಧಾರಿಗಳಂತೆ ಕಾಲಿಗೆ ಗೆಜ್ಜೆಯನ್ನು ಈತ ಕಟ್ಟಿಕೊಂಡಿರುತ್ತಾನೆ. ಕೆಳಭಾಗದಲ್ಲಿ ಹಲಗೆಗಳನ್ನು ಹಾಸಿಕಟ್ಟಿಯನ್ನು ನಿರ್ಮಿಸುವುದು ವಾಡಿಕೆ. ಇದೆಲ್ಲಾ ಆದ ಬಳಿಕ ಆಡಿಸು ಭಾಗವೊಂದನ್ನು ಬಿಟ್ಟು ಉಳಿದ ಮೂರು ಕಡೆಗಳನ್ನು ಸೋಗೆಯ ಗರಿಯಿಂದಲೋ, ಚಾಪೆ ಅಥವಾ ತಡಿಕೆಯಿಂದಲೋ ಮರೆ ಮಾಡುತ್ತಾರೆ. ಮುಂಭಾಗವನ್ನು ನೀಲಿಯ ಪಂಚೆಯಿಂದ ಮುಚ್ಚುತ್ತಾರೆ. ಉಳಿದೆಲ್ಲಾ ತಂತ್ರವೂ ಕುಳಿತುಕೊಂಡು ಆಡಿಸುವ ಗೊಂಬೆಗಳ ರಂಗ ಮಂದಿರದಂತೆಯೇ ಇರುತ್ತದೆ.
  • ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಆಟ ಪ್ರಾರಂಭವಾಗುತ್ತದೆ. ತೊಗಲು ಗೊಂಬೆಯಾಟವನ್ನು ಆಕರ್ಷಣೀಯವನ್ನಾಗಿ ಮಾಡಿ ಪ್ರೇಕ್ಷಕರನ್ನು ಅಲೌಕಿಕ ಪ್ರಪಂಚಕ್ಕೆ ಕರೆದೊಯ್ಯುವ ಚಮತ್ಕಾರವು ಆಡಿಸುವವನ ಕೈಚಳಕದಲ್ಲಿರುತ್ತದೆ. ಅವನು ಚುರುಕಾಗಿದ್ದಷ್ಟೂ ಕಲೆಗಾರಿಕೆ ಉತ್ತಮವಾಗಿರುತ್ತದೆ. ಆಯಾ ಪಾತ್ರಗಳ ಗುದ್ದುಗಾರಿಕೆಗೆ ಸರಿ ಹೊಂದುವಂತೆ. ಹಾಡನ್ನು ಸಂಭಾಷಣೆಯನ್ನು ಜೊಡಿಸುತ್ತಾ ತನ್ನ ಎರಡೂ ಕೈಗಳಿಂದ ಒಂದೊಂದು ಗೊಂಬೆಯನ್ನು ಹಿಡಿದು ಕುಣಿಸು ರೀತಿ ಅಚ್ಚರಿಯನ್ನು ಉಂಟುಮಾಡುವಂತದ್ದು. * ಯುದ್ದದ ಸಂದರ್ಭ, ಬಾಣವನ್ನು ಬಿಡುವ ಗತ್ತು, ಗಧೆಯನ್ನು ಬೀಸುವ ವೈಖರಿ, ತನ್ನ ಮಾತಿನ ಗತ್ತಿನ ಕ್ರಮಕ್ಕೆ ಸರಿಹೊಂದುವಂತೆ ಕತ್ತು ಕೈಕಾಲುಗಳನ್ನು ಆಡಿಸುವ ರೀತಿ ಇವೆಲ್ಲವೂ ಅಪೂರ್ವವಾದ ದೃಶ್ಯಗಳಂತೆ ತೋರುತ್ತವೆ. ಒಂದು ಪಾತ್ರದ ಪ್ರವೇಶ, ನಿರ್ಗಮನಗಳನ್ನು ಬಹಳ ಚಮತ್ಕಾರಗಳಿಂದ ನಿರ್ವಹಿಸಬೇಕಾಗುತ್ತದೆ.
  • ನಾಲ್ಕಾರು ಪಾತ್ರಗಳು ಒಟ್ಟೊಟ್ಟಿಗೆ ಬಂದಾಗ ಅವೆಲ್ಲವುಗಳ ಸಂಭಾಷಣೆ, ಹಾಡನ್ನು ಅದಕ್ಕೆ ತಕ್ಕ ಅಭಿನಯವನ್ನು ಏಕಕಾಲದಲ್ಲಿ ಕಲಾವಿದರು ನಿರ್ವಹಿಸಬೇಕಾಗುತ್ತದೆ. ಇವೆಲ್ಲವೂ ಅಭ್ಯಾಸ ಮತ್ತು ವಿಶಿಷ್ಟ ಕಲಾಶಕ್ತಿಯಿಂದ ನೆರವೇರುತ್ತದೆ. ಮೈಸೂರು ಭಾಗದ ಗೊಂಬೆಯಾಟದಲ್ಲಿ ನಾಲ್ಕಾರು ಜನ ಕಲಾವಿದರು ಒಟ್ಟಿಗೆ ಗೊಂಬೆಯಾಡಿಸುವ ಕ್ರಮವುಂಟು.

ಉಲ್ಲೇಖಗಳು

[ಬದಲಾಯಿಸಿ]
  1. ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬