ಶ್ರೀ ಸಿದ್ಧಿ ವಿನಾಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಗಣಪತಿ ತಾತ್ತ್ವಿಕ ಪ್ರಮುಖ ಮುರೂ ದೃಷ್ಟಿಯಲ್ಲಿ ನೋಡಣವೇ?

ಯೋಗಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ ಅನೇಕ ಗಹನಸತ್ಯಗಳು ಗೋಚರವಾಗುತ್ತವೆ - ಪಳಗಿದ ಯೋಗಿಗಳ ವಿವರಣೆಗಳು ದೊರೆತಲ್ಲಿ. ಅಂತಹ ಮೂರು ವಿವರಣೆಗಳನ್ನು ಮುಂದಿಡಲು ಇಲ್ಲಿ ಯತ್ನಿಸಿದೆ.

ಮಣ್ಣಿನ ಗಣಪ

ಮೊದಲನೆಯದಾಗಿ ಪಾರ್ವತಿಯ ದೇಹದ ಮಲದಿಂದ ಗಣೇಶನ ಸೃಷ್ಟಿಯಾಯಿತೆನ್ನುವ ಮಾತು. ಪಾರ್ವತಿಯು ಪ್ರಕೃತಿಮಾತೆ. ಪ್ರಕೃತಿಯೆಂದರೆ ಕೇವಲ ಹೊರಗೆ ಕಾಣುವ ಸೃಷ್ಟಿಯೆಂದುಕೊಳ್ಳಬಾರದು. ಸಾಂಖ್ಯ-ವೇದಾಂತಗಳಲ್ಲಿ ಪ್ರಕೃತಿಯೆಂಬುದು ೨೪ ತತ್ತ್ವಗಳಿಂದಾದುದೆಂಬ ಪಾರಿಭಾಷಿಕವಿವರಣೆಯಿದೆ. ಅವುಗಳಲ್ಲೊಂದು ಕ್ರಮವಿದೆ: ಸೂಕ್ಷ್ಮದಿಂದ ಆರಂಭ; ಸ್ಥೂಲದತ್ತ ಸಾಗುವ ಬೆಳವಣಿಗೆ. ಸ್ಥೂಲತಮವೆನಿಸುವುದು ಪೃಥ್ವೀತತ್ತ್ವ. ಪಂಚಭೂತಗಳೆನ್ನುವಾಗ ಹಿಂದಿನವು ಕ್ರಮಶಃ ಜಲ-ತೇಜಸ್-ವಾಯು-ಆಕಾಶಗಳು.

ಯೋಗಶಾಸ್ತ್ರವು ಹೇಳುವಂತೆ ಷಟ್ಚಕ್ರಗಳಲ್ಲಿ ಮೊದಲನೆಯದಾದ ಮೂಲಾಧಾರವು ಪೃಥ್ವೀತತ್ತ್ವದ ಸ್ಥಾನ. "ಮಹೀಂ ಮೂಲಾಧಾರೇ" ಎನ್ನುವುದಲ್ಲವೇ, ಸೌಂದರ್ಯಲಹರಿ? ಗಣೇಶನನ್ನು ಕುರಿತಾದ ಗೇಯಸಾಹಿತ್ಯವೂ "ವಾತಾಪಿಗಣಪತಿಂ ಭಜೇ... ಮೂಲಾಧಾರಕ್ಷೇತ್ರಸ್ಥಿತಮ್" ಎಂದೇ ಹೇಳುತ್ತದೆ. ಎಂದೇ ಗಣಪತಿಯನ್ನು ಮೂಲಾಧಾರದ ಪ್ರತೀಕವಾದ ಮಣ್ಣಿನಿಂದಲೇ ಮಾಡುವುದು. ಅಲ್ಲಿ ಮನಸ್ಸು ಲಯಿಸಿದಾಗ ಗಜಮುಖವೇ ಗೋಚರವಾಗುತ್ತದೆ. ಮನೋಲಯದ ಪ್ರಕಾರವನ್ನು ಶಂಕರಭಗವತ್ಪಾದರ ಯೋಗತಾರಾವಳಿಯು ತಿಳಿಸಿಕೊಡುತ್ತದೆ.

ಹೊರನೋಟ-ಒಳನೋಟ

ಹೊರಗಡೆ ಗೋಚರವಾಗುವುದನ್ನು ಹೋಲುವ ವಸ್ತುವಿನ ದರ್ಶನವು ಯೋಗಾನುಭವದಲ್ಲೂ ಅಂತರಂಗದಲ್ಲಿ ಆಗಬಹುದು. ಅವೆರಡಕ್ಕೂ ಕಿಂಚಿತ್ತಾಗಿ ಸಾಮ್ಯವೂ ಇರಬಹುದು. ಹಾಗೆಂದು ಪೂರ್ಣಸಾಮ್ಯವೆಂದು ಭ್ರಮಿಸಬಾರದು. ಉದಾಹರಣೆಗೆ ಹೇಳುವುದಾದರೆ, ಯೋಗಶಾಸ್ತ್ರ-ತಂತ್ರಶಾಸ್ತ್ರಗಳಲ್ಲಿ ಕುಂಡಲಿನೀ ಸರ್ಪವನ್ನು ಕುರಿತು ಹೇಳಿದೆ; ಹಾಗೆಂದು,  ನಾವು ಹೊರಗೆ ಕಾಣುವ ಸರ್ಪಗಳ ಸ್ವಭಾವಗಳೆಲ್ಲವೂ ಅಲ್ಲೂ ಇರುವುವೆಂದುಕೊಂಡುಬಿಡಲಾಗದು. ಅನ್ವಯವು ಆಂಶಿಕವಷ್ಟೆ?

ಆನೆಯ ಸೊಂಡಿಲು ಸೌಕರ್ಯಾನುಸಾರಿಯಾಗಿ ತಿರುಗುವುದು ನಮಗೆ ಗೊತ್ತೇ ಇದೆ - ಉದಾಹರಣೆಗೆ ಆಹಾರ ಮುಂತಾದುವಕ್ಕಾಗಿ. ಆದರೆ ಗಣಪತಿಯ ಉಪಾಸನೆಯಲ್ಲಿಯ  ಸೊಂಡಿಲಿನ ಇರವಿಗೆ ವಾಮಾವರ್ತ-ದಕ್ಷಿಣಾವರ್ತಗಳೆಂಬ ಲೆಕ್ಕವುಂಟು. ಎಡಮುರಿ-ಬಲಮುರಿಗಳೆಂದರೆ ಅವೇ. ಹಾಗಿರುವ ಗಣಪತಿಗಳ ಉಪಾಸನೆಯು ಕ್ರಮವಾಗಿ ಭೋಗಪ್ರದವೂ ಯೋಗಪ್ರದವೂ ಆಗುವುದು.

ಕದಿಯದ ಇಲಿ

ಗುಜ್ಜಾನೆ ಗಣಪನ ಡೊಳ್ಳು ಹೊಟ್ಟೆಯನ್ನು ಕಾಣುತ್ತಲೇ  ಸ್ವಲ್ಪ ನಗು ಬರುವಂತಾಗಬಹುದು. (ಗಣಪನು ಹಾಸ್ಯಕ್ಕೆ ಅಧಿದೇವತೆಯೇ). ಇನ್ನು ಆ ಠೊಣಪನ  ವಾಹನ ಈ ಪುಟ್ಟ ಇಲಿಯೆಂದರೆ ಇನ್ನೂ ಹಾಸ್ಯವಾಗಿಯೇ ತೋರಬಹುದು. ಏನಿದರ ಮರ್ಮ?

ಶಬ್ದಾರ್ಥಗಳ ಸರಿಯಾದ ಜ್ಞಾನ, ಪುರಾಣಪರಿಚಯ, ಹಾಗೂ ಯೋಗಶಾಸ್ತ್ರದ ದೃಷ್ಟಿ - ಇವೆಲ್ಲ ಮೇಳೈಸಿದಾಗ ತತ್ತ್ವವು ಗೋಚರವಾಗಲು ಅನುಕೂಲಿಸುವುದು. ಇಲಿಗೆ ಮೂಷಕ/ಮೂಷಿಕ ಎನ್ನುವರಲ್ಲವೇ? (ಎರಡು ಪದಗಳೂ ಸರಿಯಾದವೇ). ಈ ಪದಗಳು ಬಂದಿರುವುದು "ಮುಷ್" ಎಂಬ ಧಾತುವಿನಿಂದ. ಅದರರ್ಥ "ಕದಿಯುವುದು". "ಮುಷ ಸ್ತೇಯೇ" ಎಂಬುದಾಗಿ ಧಾತುಪಾಠ.

ನಾವು ಕಷ್ಟಪಟ್ಟು ಸಂಪಾದಿಸುವ ಯೋಗಶಕ್ತಿಗಳನ್ನು "ಕದಿಯುವ" ದುಷ್ಟಶಕ್ತಿಯೇ ಇಲ್ಲಿಯ ಈ ಮೂಷಕ. ಇದೊಂದು ಆಸುರೀ ಶಕ್ತಿ. ಅದು ಕದಿಯುವುದು ಏನನ್ನು, ಏಕೆ ಮತ್ತು ಹೇಗೆ ? – ಎಂಬ ಪ್ರಶ್ನೆಗಳು ಬರುತ್ತವೆ. ಅವಕ್ಕೆ ಉತ್ತರ ಸಾಮಾನ್ಯರ ಅರಿವಿಗೆ ಗೋಚರವಾಗದು. ಅಯಸ್ಕಾಂತಕ್ಕೆ ಬೆಂಕಿಯ ತೀವ್ರ ಶಾಖ ತಗುಲಿದರೆ ಅದರ ಅಯಸ್ಕಾಂತತ್ವ ನಾಶವಾಗುವುದು - ಎಂಬುದರ ಏಕೆ-ಹೇಗೆಗಳು ಭೌತವಿಜ್ಞಾನಿಗಷ್ಟೆ ಗೋಚರವಲ್ಲವೇ?  ಅಂತೆಯೇ ಇಲ್ಲಿಯೂ: ಯಾವ ಶಕ್ತಿಯು ಯಾವುದಕ್ಕೆ ಪೋಷಕ, ಯಾವುದಕ್ಕೆ ಮಾರಕ? - ಎಂಬುದರ ತಿಳಿವಳಿಕೆ ಯೋಗಿಮಾತ್ರಗೋಚರವಾದುದು.


ಕರ್ಮದ ಮರ್ಮವರಿತು ಆಚರಿಸಬೇಕು ಎಂಬುದಾಗಿ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.



ಇದರ ಹಿಂದಿರುವ ಕಥೆಯೂ ಮಾರ್ಮಿಕವಾಗಿದೆ. ಕ್ರೌಂಚನೆಂಬ ಗಂಧರ್ವನು ದೇವಸಭೆಯಲ್ಲಿ ವಾಮದೇವನೆಂಬ ಋಷಿಗೆ ಮಾಡಿದ ಅಪಚಾರದಿಂದಾಗಿ ಶಾಪವೊದಗಿ, ಅದರ ಪರಿಣಾಮವಾಗಿ ಮೂಷಕಾಸುರನಾಗಿ ಹುಟ್ಟಿದ. ಪ್ರಸಂಗತಃ ಗಣೇಶನೊಡನೆಯೇ ಸೆಣಸಹೊರಟ.  ಕೊನೆಗೆ ಸೋತು ಶರಣಾದ.  ವಾಹನಸೇವೆಯನ್ನು ಗಣೇಶನಿಗೆ ಮಾಡಿ ತಾನು ಧನ್ಯನಾಗುವ ವರವನ್ನು ಗಣೇಶನಿಂದಲೇ ಪಡೆದುಕೊಂಡ. ಗಣಪನ ಅನುಗ್ರಹವಿದ್ದವರಿಗೆ ಆತನಿಂದ ತೊಂದರೆಯಾಗದು: ಅರ್ಥಾತ್, ಯೋಗದ ಪ್ರಗತಿ ಕುಂಠಿತವಾಗದು.


ಮಹಾಗಣಪತಿಮೂರ್ತಿಯನ್ನು ಜಲಾಶಯದಲ್ಲಿ ವಿಸರ್ಜಿಸುವ ಕ್ರಮವಿದೆಯಲ್ಲವೇ?. ಇದು ಬಂದುದೇಕೆಂದರಿಯಬೇಕಲ್ಲವೇ? ಯೋಗಶಾಸ್ತ್ರದಲ್ಲಿ ತತ್ತ್ವಲಯವೆಂಬ ಕ್ರಮವೊಂದಿದೆ. ಅದರಂತೆ ಭೂ-ತತ್ತ್ವವನ್ನು ಅದಕ್ಕೆ ಹಿಂದಿನದಾದ ಜಲ-ತತ್ತ್ವದಲ್ಲೂ, ಅದನ್ನು ಅದರ ಹಿಂದಿನ ತೇಜಸ್ಸಿನಲ್ಲೂ – ಹೀಗೇ ಹಿಂದುಹಿಂದಿನ ತತ್ತ್ವಗಳಲ್ಲಿ ಲಯಗೊಳಿಸುತ್ತಾ ಹೋಗಬೇಕು. ಅದರ ಒಂದು ಪ್ರತೀಕವಾಗಿಯೇ 'ಮಣ್ಣಿನ' ಗಣೇಶನನ್ನು ಜಲದಲ್ಲಿ ವಿಸರ್ಜಿಸುವುದು.

ಮಹಾಗಣಪತಿಮೂರ್ತಿಯನ್ನು ಜಲಾಶಯದಲ್ಲಿ ವಿಸರ್ಜಿಸುವ ಮರ್ಮವಿದು: ಒಳಗೆ ಘಟಿಸುವ ಕ್ರಿಯೆಗೆ ಹೊರಗಣ ಕ್ರಿಯೆಯೊಂದನ್ನು ಪ್ರತಿಫಲಕವಾಗಿಯೂ ಪೋಷಕವಾಗಿಯೂ ಇಟ್ಟುಕೊಳ್ಳುವುದೂ ಒಂದು ತಂತ್ರ. ಹೀಗೆ ಮಾಡುವುದು ಅಂತರಂಗದ ಪ್ರಗತಿಗೆ ಪುಷ್ಟಿಕೊಡುತ್ತದೆ. ಈ ತತ್ತ್ವವನ್ನು ಶ್ರೀರಂಗಮಹಾಗುರುಗಳು ಸ್ವ - ಅನುಭವದೊಡನೆ ತಿಳಿಸಿಕೊಟ್ಟಿರುವರು.

ಶ್ರೀ ಸಿದ್ದಿವಿನಾಯಕ - ತಾತ್ವಿಕ ಅರ್ಥ[ಬದಲಾಯಿಸಿ]


  • ಶ್ರೀ ಸಿದ್ಧಿ ವಿನಾಯಕ ಅಥವಾ ಗಣಪತಿಗೆ ಒಂದು ತಾತ್ವಿಕ ಅರ್ಥವಿದೆ. ಅದರ ವಿವರಣೆಯನ್ನು ಸಂಕ್ಷಿಪ್ತವಾಗಿ ಕೆಳಗೆ ಕೊಟ್ಟಿದೆ. ಬೇರೆ ಬೇರೆ ರೀತಿಯ ವಿವರಣೆಗಳೂ ಇವೆ.

ಇತಿಹಾಸ[ಬದಲಾಯಿಸಿ]


  • ಶ್ರೀ ಸಿದ್ಧಿ ವಿನಾಯಕನು ವಿಘ್ನೇಶ್ವರನೂ ಆಗಿದ್ದಾನೆ. ಹಾಗಾಗಿ ಅವನ ಪೂಜೆ ಮೊದಲು. ಸುಮಾರು ೩೫೦೦ ವರ್ಷಕ್ಕೂ ಹಿಂದಿನ ಋಗ್ವೇದದಲ್ಲಿಯೇ ಗಣಪತಿಯ ಸ್ತುತಿ ಇದ್ದರೂ, ಇತಿಹಾಕಾರರು ಅದು ಇಂದ್ರ ಅಥವಾ ಪರಮಾತ್ಮನ ಸ್ತುತಿ ಎಂದು ಭಾವಿಸುತ್ತಾರೆ. ಇಂದು ಸರ್ವತ್ರ ಪ್ರಸಿದ್ಧನಾಗಿರುವ ಗಣಪತಿಯು ಗಜಮುಖನೂ, ಮೂಷಿಕವಾಹನನೂ ಆಗಿದ್ದಾನೆ. ಆದರೆ ಈ ರೂಪವು ವೇದಪ್ರತಿಪಾದ್ಯವಲ್ಲವೆಂದು ವಿದ್ವಾಂಸರು ಹೇಳಿದ್ದಾರೆ. ಗಣಪತಿಯು ಭಾರತ ದೇಶದ ಸರ್ವ ಮತ – ಪಂಥಗಳ ಆರಾಧ್ಯ ದೈವ.
  • ಇತಿಹಾಕಾರರು ಅವನ ಪೂಜೆ ಕ್ರಿ.ಶ. ಎರಡನೆಯ ಶತಮಾನದಲ್ಲಿ ಪ್ರಾರಂಭವಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ.

ಗಣಪತಿಯ ಕಥೆ[ಬದಲಾಯಿಸಿ]


  • ಗಣೇಶನ ಕಥೆಗಳು ಅನೇಕವಿದ್ದರೂ ಮತ್ಸ್ಯ ಪುರಾಣದ ಕಥೆ ಜನಪ್ರಿಯವಾಗಿದೆ. ಪಾರ್ವತಿ ತನ್ನ ಮೈ ಕೊಳೆಯಿಂದ ಒಂದು ಮಗುವನ್ನು ಸೃಷ್ಟಿಸಿ, ತಾನು ಸ್ನಾನ ಮಾಡುವಾಗ ಯಾರನ್ನೂ ಒಳ ಬಿಡದಂತೆ ಅವನನ್ನು ಕಾವಲಿಟ್ಟಳು. ಅವನು ಶಿವನನ್ನು ತಡೆದಾಗ ಶಿವನು ಅವನ ತಲೆಯನ್ನು ತರಿದನು. ನಂತರ ಪಾರ್ವತಿಯನ್ನು ಸಮಾಧಾನ ಪಡಿಸಲು ಆನೆಯ ತಲೆಯನ್ನು ಸೇರಿಸಿ ಜೀವ ಕೊಟ್ಟು ಗಜಾನನನ್ನಾಗಿ ಮಾಡಿದನು. ಅವನನ್ನು ತನ್ನ ಗಣಗಳ ಅಧಿಪತಿಯಾಗಿ ಮಾಡಿದ್ದರಿಂದ ಅವನು ಗಣಪತಿಯಾದನು.
  • ಈ ಕಥೆಯನ್ನು ಕೇಳಿದ ಕೆಲವರು, ಪಾರ್ವತಿ ಸ್ನಾನ ಮಾಢದೆ ಎಷ್ಟು ದಿನ ಗಳಾಗಿದ್ದವು ? ಅಷ್ಟೊಂದು ಕೊಳೆ ಅವಳ ದೇಹದಲ್ಲಿ ಹೇಗೆ ಬಂದಿತು ? ಎಂದು ಕೇಳುವುದಿದೆ.
  • ಪುರಾಣದ ಕಥೆಗಳಲ್ಲಿ ಬಹಳಷ್ಟು ಕಥೆಗಳು ಸೃಷ್ಟಿ ರಹಸ್ಯ ಮತ್ತು ಅದರ ಸಂಕೀರ್ಣ ತತ್ವಗಳನ್ನು ವಿವರಿಸಲು ಹೆಣೆದ ಕಥೆಗಳು. ತತ್ವಗಳಿಗೆ ವ್ಯಕ್ತಿಯ ರೂಪ ಕೊಟ್ಟು ಘಟನೆಗಳನ್ನು ಕಥೆಗಳಾಗಿ ವಿವರಿಸುವುದೇ - ಪ್ರತಿಮೆ ಅಥವಾ ರೂಪಕ ಪದ್ಧತಿ ಎನ್ನಬಹುದು.

ಪ್ರಕೃತಿ ಮತ್ತು ಪುರುಷ ತತ್ವ[ಬದಲಾಯಿಸಿ]


  • ವಿಶ್ವ ರಹಸ್ಯವನ್ನು ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ವಗಳಲ್ಲಿ ಹೇಳಲಾಗುತ್ತದೆ.
  • ಪುರುಷನು ಚೇತನವಾಗಿದ್ದು, ಪ್ರಕೃತಿಯು ಸೃಷ್ಟಿ ಕ್ರಿಯೆಯ ಮೂಲ ಬೀಜರೂಪ. ಇದು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕಥೆಗಾಗಿ ಗಂಡು -ಹೆಣ್ಣೆಂಬ ಭಾವ. ಸತ್ವಗುಣ, ರಜೋಗುಣ, ತಮೋಗುಣಗಳು ಮತ್ತು ಪಂಚ ಭೂತಗಳಿಂದಾದ ಈ ಜಗತ್ತೇ ಪ್ರಕೃತಿ ಮಾತೆಯ ದೇಹ. ಗುಣತ್ರಯಗಳೇ ಅವಳ ದೇಹದ ಕೊಳೆ.

ಪ್ರಕೃತಿ-ಪರುಷ ಅಥವಾ ಪಾರ್ವತಿ ಶಿವರಿಗೆ ಈ ವಿಶ್ವ ಸೃಷ್ಟಿ ಒಂದು ಲೀಲೆ. ಈ ಲೀಲೆ ನೆಡೆಯಲು ಒಂದು ಸ್ಥಿತಿ ಕಾರಕ ಶಕ್ತಿ ಬೇಕು. ಪ್ರಕೃತಿ ಗರ್ಭದಲ್ಲಿ ಅಡಗಿದ ಸ್ಥಿತಿ ಕಾರಕ ಶಕ್ತಿಯೇ ಸಿದ್ಧಿವಿನಾಯಕ. ಶ್ರೀ ಗಣೇಶಾಥರ್ವ ಶೀರ್ಶ ಮಂತ್ರದಲ್ಲಿ, ಗಣೇಶನು ಎಲ್ಲಾ ತತ್ವಗಳ ಅಧಿದೇವತೆ ಎಂದು ವರ್ಣಿಸಿದೆ. ಅಲ್ಲದೆ ಅವನು ಕೆಂಪು ವರ್ಣದವ, ಕೆಂಪುಗಂಧ ಲೇಪನದವ, ಕೆಂಪು ವಸ್ತ್ರಧಾರಿಯೆಂದು ಹೇಳಿದೆ. ಈ ವರ್ಣನೆಯಿಂದ ಅವನು ರಜೋಗುಣ ರೂಪನೆಂದು ತಿಳಿಯುವುದು. ಬ್ರಹ್ಮ , ವಿಷ್ಣು, ಮಹೇಶ್ವರರಲ್ಲಿ ವಿಷ್ಣು ರಜೋಗುಣ ತತ್ವದ ಅಧಿದೇವತೆಯಾಗಿದ್ದು, ಸ್ಥಿತಿ ಕಾರಕನಾಗಿದ್ದಾನೆ. ಹಾಗೆಯೇ ವಿನಾಯಕನೂ ಸ್ಥಿತಿಕಾರಕ ನಾಗಿದ್ದು , ವಿಷ್ಣು ಸ್ವರೂಪನೆಂಬ ನಂಬುಗೆ ಇದ್ದು ಪುರುಷ ಸೂಕ್ತದಿಂದ ಪೂಜಿಸಲ್ಪಡುತ್ತಾನೆ.

ಪ್ರಾಪಂಚಿಕ - ಸ್ಥಿತಿ ಕಾರಕ[ಬದಲಾಯಿಸಿ]


ಮಾನವರು ಈ ಜಗತ್ತಿನಲ್ಲಿ ಸುಖ ದುಃಖಗಳನ್ನು ಅನುಭವಿಸುವುದು ಪ್ರಕೃತಿ ಸಹಜವಾಗಿದೆ. ಅವರಿಗೆ ಬೇಕಾದ ಸುಖ ಭೋಗಗಳನ್ನುಕೊಟ್ಟು ಜಗತ್ತಿನ ಲೀಲೆಯಲ್ಲಿ ತೊಡಗಿಸುವವನೇ ವರ ಸಿದ್ಧಿ ವಿನಾಯಕ. ಸಹಜ ಜೀವನವನ್ನು ಧಿಕ್ಕರಿಸಿ ತಾಯಿಯ ನಿಜ ರೂಪವನ್ನು ಪ್ರಕೃತಿ ರಹಸ್ಯವನ್ನು ಅರಿಯಲು ಪ್ರಯತ್ನಿಸುವ ವಿರಾಗಿಗಳಿಗೆ ಮತ್ತು ಯೋಗಿಗಳಿಗೆ ಇವನು ವಿಘ್ನೇಶ್ವರ. ಅವನ ತಾಯಿಯು ಸ್ನಾನಕ್ಕಿಳಿದಾಗ ನಿಜ ರೂಪವನ್ನು ಎಂದರೆ ಅವಳ ಪರಬ್ರಹ್ಮ ಸ್ವರೂಪವನ್ನು ಅಥವಾ ಮೂಲ ಚಿತ್ ಸ್ವರೂಪವನ್ನು ನೋಡಲು ವಿಘ್ನೇಶ್ವರ ಬಿಡಲಾರ. ಹಾಗೆ ಬಿಟ್ಟರೆ ಪ್ರಕೃತಿಯ ಮಾಯೆ ಹರಿದು ಹೋಗುತ್ತದೆ. ವಿಘ್ನೇಶ್ವರನು ಯೋಗಿಗಳಿಗೆ, ತಪಸ್ವಿಗಳಿಗೆ, ಜಗತ್ತಿನ ಸುಖ ಭೊಗಗಳನ್ನು ಕೊಟ್ಟು ಜಗತ್ತಿನ ಲೀಲೆಯಲ್ಲಿ ಅವರನ್ನು ತೊಡಗಿಸುವನು. ಅವರನ್ನು ಜಗತ್ತಿನ ಸುಖದ ಸೆಳೆತಕ್ಕೆ ಎಳೆಯುವನು. ಅದಕ್ಕಾಗಿ ಅವನಿಗೆ ಬಲಿಷ್ಠವಾದ ಆನೆಯ ತಲೆ ಮತ್ತು ಬುದ್ಧಿ. ಅವನ ಸೆಳೆತವನ್ನು ಮೀರಿದ ನಿಜವಾದ ವಿರಾಗಿಗಳು ಶಿವನ ಕರುಣೆಯಿಂದ ವಿಘ್ನೇಶ್ವರನನ್ನು ಗೆದ್ದು , ತಾಯಿಯ ನಿಜ ರೂಪವನ್ನು ನೋಡಲು ಹೋಗಬಹುದು. ಗಣೇಶನನ್ನೇ ಶಿವನೆಂದು, ವಿಷ್ಣುವೆಂದು, ಸ್ತುತಿಸಿ ವಲಿಸಿಕೊಳ್ಳುವುದು ಮತ್ತೊಂದು ಬಗೆ.

ಮೂಲಾಧಾರ ಸ್ಥಿತ[ಬದಲಾಯಿಸಿ]


  • ಗಣೇಶನನ್ನು ಮೂಲಾಧಾರ ಸ್ಥಿತನೆಂದು ಹೇಳಿದೆ. ಪಿಂಡಾಂಡದಲ್ಲಿ ಎಂದರೆ ಮನುಷ್ಯರಲ್ಲಿ ಮೂಲಾಧಾರ ಚಕ್ರವು ಬೆನ್ನು ಹುರಿಯ ತಳ ಭಾಗದಲ್ಲಿದ್ದು , ಅಲ್ಲಿ ಬ್ರಹ್ಮಾಂಡವನ್ನು ವ್ಯಾಪಿಸಿರುವ ಕುಂಡಲಿನಿ ಶಕ್ತಿಯು ಸರ್ಪ ರೂಪದಲ್ಲಿ ಸುಪ್ತವಾಗಿರುವುದಾಗಿ ರಾಜಯೋಗ, ಹಠಯೋಗಗಳಲ್ಲಿ ಹೇಳಿದೆ. ಯೋಗಿಗಳು ಆಶಕ್ತಿಯನ್ನು ಎಬ್ಬಿಸಿ ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರದಲ್ಲಿ ತಂದು ನಿಲ್ಲಿಸಿದಾಗ ಪ್ರಕೃತಿ ಪುರುಷರ ಎಂದರೆ ಪಾರ್ವತೀ ಪರಮೇಶ್ವರರ ನಿಜ ದರ್ಶನವಾಗುವುದು. ಮೂಲಾಧಾರದಲ್ಲಿ ವಿಘ್ನೇಶ್ವರನ ಕಾವಲು ಇದೆ. ಜಗತ್ತಿನ ಆಸೆ ಆಕಾಂಕ್ಷಗಳಿಗೆ ಒಳಪಟ್ಟಿರುವವರಿಗೆ ಆ ಸಾಧನೆ ಸಾಧ್ಯವಿಲ್ಲ. ಸಾಧಕರಿಗೆ ಸುಖ - ಸಿದ್ಧಿಗಳನ್ನು ನೀಡಿ, ಅವನು ಸಿದ್ಧಿವಿನಾಯಕನಾಗಿ ಜಗತ್ತಿನ ಕಡೆಗೆ ಸೆಳೆಯುವನು. ಸಾಧಕರನ್ನು ಸುಲಭವಾಗಿ ಬಿಟ್ಟರೆ ತಾಯಿಯ ನಿಜ ದರ್ಶನದಿಂದ ಪ್ರಕೃತಿ ಲಯವಾಗಿ ಹೋಗುವುದು. - ಎಂದರೆ ಜಗದ ಮೋಹದಿಂದ ಬಿಡುಗಡೆ - ಮೋಕ್ಷ ಪ್ರಾಪ್ತಿ.

ಮೂಲಾಧಾರ ಚಕ್ರ ಸೂಕ್ಷ್ಮ ಶರೀರದ (ಭೌತಿಕ ಶರೀರವಲ್ಲ) ನಾಡೀ ಕೇಂದ್ರಗಳಲ್ಲಿ ಒಂದು. ಅದಕ್ಕೆ ನಾಲ್ಕು ದಳದ ಕಮಲ ಅಥವಾ ಚೌಕ ಗುರುತು ; ಅದರ ಮುಂದಿನ ಅಥವಾ ಮೇಲಿನ ನಾಢೀ ಚಕ್ರ ಸ್ವಾಧಿಷ್ಠಾನ ; ಅದಕ್ಕೆ ಆರುದಳ ಅಥವಾ ಷಟ್ಕೋನ ವುಳ್ಲದ್ದು ; ಅದೇ ಗಣಪತಿಯ ಮಂಡಲ ; ಅದಕ್ಕೂ ಅವನೇ ಅಧಿಪತಿ ; ಆರು ಮತ್ತು ನಾಲ್ಕು ಗಣಪತಿಯ ಚಿಹ್ನೆ ಅಥವಾ ಗುರುತು

ಭಾದ್ರಪದ ಮಾಸದ - ಚೌತಿ[ಬದಲಾಯಿಸಿ]


ಆರು ಮತ್ತು ನಾಲ್ಕು ಗಣಪತಿಯ ಚಿಹ್ನೆ ಅಥವಾ ಗುರುತು ; ಆದ್ದರಿಂದ ಆರನೆಯ ತಿಂಗಳು - ಭಾದ್ರಪದ ಮಾಸದ ನಾಲ್ಕನೆಯ ದಿನ - ಚೌತಿಯಂದು ಮೃತ್ತಿಕೆಯ ಎಂದರೆ ಸುಖ ಭೋಗಗಳ ಅಥವಾ ಧರ್ಮಾರ್ಥ ಕಾಮಗಳ ಸಿದ್ಧಿ ಪ್ರದಾಯಕನಾದ ವಿಘ್ನೇಶ್ವರನ ಪೂಜೆ. ಇದೇ ರೀತಿ ಏಕದಂತ ಮತ್ತು ಚಂದ್ರ - ಗಣೇಶರ ಉಪಾಖ್ಯಾನಕ್ಕೂ ತಾತ್ವಿಕ ದೃಷ್ಟಿಯಿಂದ ಅರ್ಥ ವಿವರಣೆ ಮಾಡಬಹುದು. ರಾಜಯೋಗದಲ್ಲಿ ಎಡ ಭಾಗದ ಚಂದ್ರ ನಾಡಿ ಮಧ್ಯದ ಸುಷುಮ್ನಾ ನಾಡಿಗಳಿಗೆ ಪ್ರಾಮುಖ್ಯತೆ ಇದೆ ; ಬಲಭಾಗದ ಸೂರ್ಯ ನಾಡಿಯನ್ನು ಉದ್ರೇಕಿಸುವಂತಿಲ್ಲ ; ಅದುಉಗ್ರ ಸ್ವರೂಪದ್ದು;. ಅದಕ್ಕಾಗಿ ಏಕದಂತ -ಎಡಮುರಿ ಸೊಂಡಿಲ ಗಣಪತಿ ಶ್ರೇಷ್ಠ . ಚಂದ್ರನು ಆಜ್ಞಾ ಚಕ್ರದಲ್ಲಿ ಕಾಣುವ ತಂಪಾದ ಬೆಳಕು. ಅವನ ಹೊಟ್ಟೆ ಬ್ರಹ್ಮಾಂಡ. ಅದಕ್ಕೆ ಸುತ್ತಿದ ಹಾವು ವಿಶ್ವ ನಿಯಂತ್ರಕ ಕುಂಡಿಲಿನೀ ಶಕ್ತಿ . ಅವನ ವಾಹನ ಇಲಿ 'ಕಾಲ' - ಎಲ್ಲದರ ಆಯುಷ್ಯ ವನ್ನು ಸದಾ ಕತ್ತರಿಸುತ್ತಿರುವ ಇಲಿ (ಶ್ರೀ ಕೃಷ್ಣಗಾರುಡಿಯಲ್ಲಿ ಇಲಿಯನ್ನು ಕಾಲಕ್ಕೆ ಹೋಲಿಸಿರುವುದನ್ನು ನೆನಪಿಸಿಕೊಳ್ಳಬಹುದು); ಆತನಿಗೆ '೨೧' ಪ್ರಿಯ ; ಪಂಚ ಭೂತಗಳು, ಪಂಚ ತನ್ಮಾತ್ರೆಗಳು, ಪಂಚ ಪ್ರಾಣಗಳು, ಪಂಚೇಂದ್ರಿಯಗಳು, ಇವು ಅಥವಾ ಇವುಗಳ ಆಭಿಮಾನ ದೇವತೆಗಳು -೨೦ ; ಮತ್ತು ವಿಶ್ವ ವ್ಯಾಪಿ ಚಿತ್ತ (ಪ್ರಕೃತಿ ಮಾತೆಯ ಜ್ಞಾನಶಕ್ತಿ) , ಇವು ೨೦+ ೧ = ೨೧ -ಅವೇ ಆತನ ತಾತ್ವಿಕ ದೇಹ ಮತ್ತು ಆತ್ಮ . ಪಂಚ ಭೂತಗಳೇ ಅದರಲ್ಲೂ ಭೂಮಿ - ಪ್ರಕೃತಿಮಾತೆಯ ಮೈಮೇಲಿನ ಕೊಳೆ ; ಅದರ ಸಂಕೇತವೇ ಮೃತ್ತಿಕಾ ಗಣಪತಿ - ಮಣ್ಣಿನ ಗಣಪತಿ -ಈ ಲೋಕದ ಸುಖ ಭೋಗ ಭಾಗ್ಯ ಗಳಿಗೆ ಸಂಬಂಧಪಟ್ಟವನು.

ಮೂಲಾಧಾರವು ಭೂಲೋಕಕ್ಕೆ -(ಓಂ ಭೂಃ )ಸಂಬಂಧಪಟ್ಟುದು[ಬದಲಾಯಿಸಿ]


ಶ್ರೀ ಗಣೇಶನ ಕಥೆ ಮತ್ತು ಅವನ ರೂಪಗಳು ತಾತ್ವಿಕ ಮತ್ತು ಯೋಗ ಶಾಸ್ತ್ರದ ಅರ್ಥದಿಂದ ಕೂಡಿದೆ ಎಂದು ಹೇಳಬಹುದು. ತತ್ವ ಶಾಸ್ತ್ರದಲ್ಲಿ ಅಸಾಧಾರಣ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಗಣೇಶನು ಆಕಾಶ ತತ್ವದವನೆಂದು ತಾತ್ವಿಕ ಅರ್ಥ ಮಾಡಿದ್ದಾರೆ. ಆದರೆ ಅದು ಪುರಾಣದ ಕಥೆಗೆ ಹೊಂದುವುದಿಲ್ಲ. ಮೇಲಾಗಿ ಮೃತ್ತಿಕಾ (ಮಣ್ಣಿನ) ಮೂರ್ತಿ ಪೂಜೆಗೂ, ಮೂಲಾಧಾರ ಸ್ಥಿತನೆಂಬುದಕ್ಕೂ ಹೊಂದಲಾರದು. ಮೂಲಾಧಾರವು ಭೂಲೋಕಕ್ಕೆ ಓಂ ಭೂಃ ಸಂಬಂಧಪಟ್ಟುದು . ಶ್ರೀ ಮದ್ವಾಚಾರ್ಯರು ಗಣೇಶನು ವಿಷ್ಣು ಅಂಶದವನೆಂದು ಸಾಧಿಸಲು ಆವನು ಆಕಾಶ ತತ್ವದವನೆಂದು ಹೇಳಿರಬಹುದು, ವಿಷ್ಣು ಆಕಾಶ ತತ್ವದವನು ; ಆದ್ದರಿಂದ ಬನ್ನಂಜೆಯವರೂ ಅದನ್ನು ಸಮರ್ಥಿಸಲು ಆ ರೀತಿ ಹೇಳಿರಬಹುದು. [೧][೨][೩][೪]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಮತ್ಸ್ಯ ಪುರಾಣ
  2. ರಾಜಯೋಗ
  3. ಕುಂಡಲಿನೀ ಯೋಗ
  4. ತೈತ್ತರೀಯ ಉಪನಿಷದ್ ರಹಸ್ಯ - ಯ ಸುಬ್ರಹ್ಮಣ್ಯ ಶರ್ಮಾ: ತಾತ್ವಿಕ ಅರ್ಥ ಅಥವಾ ಅಂತರಾರ್ಥ.