ಮಹಾಭೂತ
ಮಹಾಭೂತಗಳು ಹಿಂದೂ ಮತ್ತು ಭೌದ್ಧ ಧರ್ಮಗಳ ನಂಬಿಕೆಯಲ್ಲಿ ಬ್ರಹ್ಮಾಂಡವನ್ನು ರಚಿಸುವ ಮೂಲಭೂತ ತತ್ವಗಳು. ಈ ನಂಬಿಕೆಯ ತತ್ವದ ಪ್ರಕಾರ ಇಡೀ ವಿಶ್ವವೇ ಪಂಚಭೂತಗಳೆಂಬ ಐದು ಮೂಲವಸ್ತುಗಳಿಂದ ಮಾಡಲ್ಪಟ್ಟಿದೆ ಅಥವಾ ಪ್ರತಿನಿಧಿಸಲ್ಪಟ್ಟಿದೆ. ಇದಕ್ಕಾಗಿಯೇ ವಿಶ್ವವನ್ನು ಪ್ರಪಂಚ ಎಂದೂ ಕರೆಯುತ್ತಾರೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಹೇಳಿರುವಂತೆ ಆಯುರ್ವೇದ, ವಾಸ್ತು, ಸಿದ್ಧಿ ಬಲ ಮತ್ತು ಉನ್ನತ ಪ್ರಜ್ಞೆಗಳ ತಳಹದಿಯೇ ಈ ಪಂಚಭೂತಗಳು. ಪುರಾತನ ಕಾಲದಿಂದಲೂ ಪವಿತ್ರ ಗ್ರಂಥಗಳಲ್ಲಿ ಇವುಗಳ ಉಲ್ಲೇಖವಿದೆ.
ಪಂಚಭೂತಗಳು
[ಬದಲಾಯಿಸಿ]ಈ ಐದು ಮೂಲವಸ್ತುಗಳು ವಿಶ್ವದಲ್ಲಿ ಮತ್ತು ಮಾನವ ದೇಹದಲ್ಲಿ ಒಂದು ತರದ ಸಮತೋಲನದಲ್ಲಿ ಇರುತ್ತವೆ. ಈ ಸಮತೋಲನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಾಕೃತಿಕ ಅನಾಹುತಗಳು ಅಥವಾ ದೇಹದಲ್ಲಿ ರೋಗಗಳಾಗಿ ಕಾಣಿಸಿಕೊಳ್ಳುತ್ತವೆ.
ಪ್ರಪಂಚದ ಎಲ್ಲ ವಸ್ತುಗಳೂ ಈ ಐದು ಮೂಲವಸ್ತುಗಳಿಂದ ಮಾಡಲ್ಪಟ್ಟಿವೆ ಎಂದು ನಂಬಿಕೆ. ಇದೇ ಕಾರಣಕ್ಕೆ ಈ ಐದು ವಸ್ತುಗಳನ್ನು ದೇವರೆಂದೂ ಪೂಜಿಸುತ್ತಾರೆ.
- ಭೂಮಿ --> ಭೂದೇವಿ ಎಂದೂ
- ಜಲ --> ಗಂಗಾದೇವಿ ಎಂದೂ
- ವಾಯು --> ವಾಯುದೇವ ಎಂದೂ
- ಅಗ್ನಿ --> ಅಗ್ನಿದೇವ ಎಂದೂ
- ಆಕಾಶ --> ಶಬ್ದ ಬ್ರಹ್ಮ ಎಂದೂ ಪೂಜಿಸುತ್ತಾರೆ.
ಭೂಮಿ
[ಬದಲಾಯಿಸಿ]ಭೂಮಿಯು ಈ ಪಂಚಭೂತಗಳಲ್ಲಿ ಮೊದಲನೆಯ ಮತ್ತು ಅತ್ಯಂತ ಕನಿಷ್ಠ (ಕೆಳಗಿನ) ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಚೌಕ, ಬಣ್ಣ ಹಳದಿ, ಇಂದ್ರಿಯ ಅಥವಾ ಗ್ರಹಿಕೆ ವಾಸನೆ, ಕಾರ್ಯ ವರ್ಜಿಸುವಿಕೆ (ಗುದ), ಚಕ್ರ ಮೂಲಾಧಾರ, ದೇವರು ಗಣೇಶ, ಬೀಜ "ಲಾಂ"
ಜಲ
[ಬದಲಾಯಿಸಿ]ಜಲ ಅಥವಾ ನೀರು ಪಂಚಭೂತಗಳಲ್ಲಿ ಎರಡನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಅರ್ಧ ಚಂದ್ರಾಕೃತಿ, ಬಣ್ಣ ಬೆಳ್ಳಿ, ಇಂದ್ರಿಯ ಅಥವಾ ಗ್ರಹಿಕೆ ರುಚಿ, ಕಾರ್ಯ ಸಂತಾನೋತ್ಪತ್ತಿ (ಲೈಂಗಿಕ ಅಂಗ), ಚಕ್ರ ಸ್ವದಿಷ್ಠಾನ, ದೇವರು ವಿಷ್ಣು, ಬೀಜ "ವಾಂ"
ಅಗ್ನಿ
[ಬದಲಾಯಿಸಿ]ಅಗ್ನಿ ಅಥವಾ ತೇಜಸ್ಸು ಅಥವಾ ಬೆಂಕಿ ಪಂಚಭೂತಗಳಲ್ಲಿ ಮೂರನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ತ್ರಿಕೋನ, ಬಣ್ಣ ಕೆಂಪು, ಇಂದ್ರಿಯ ಅಥವಾ ಗ್ರಹಿಕೆ ದೃಷ್ಟಿ, ಕಾರ್ಯ ಚಲನೆ (ಪಾದಗಳು), ಚಕ್ರ ಮಣಿಪುರ, ದೇವರು ಸೂರ್ಯ, ಬೀಜ "ರಾಂ"
ವಾಯು
[ಬದಲಾಯಿಸಿ]ವಾಯು ಅಥವಾ ಗಾಳಿ ಪಂಚಭೂತಗಳಲ್ಲಿ ನಾಲ್ಕನೆಯ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ವರ್ತುಳ, ಬಣ್ಣ ನೀಲಿ ಅಥವಾ ಕಪ್ಪು, ಇಂದ್ರಿಯ ಅಥವಾ ಗ್ರಹಿಕೆ ಸ್ಪರ್ಶ, ಕಾರ್ಯ ನಿರ್ವಹಣೆ (ಕೈಗಳು), ಚಕ್ರ ಅನಹಿತ, ದೇವರು ಶಿವ, ಬೀಜ "ಯಾಂ"
ಆಕಾಶ
[ಬದಲಾಯಿಸಿ]ಆಕಾಶ ಅಥವಾ ಅಂತರಿಕ್ಷ ಪಂಚಭೂತಗಳಲ್ಲಿ ಐದನೆಯ ಅಥವಾ ಉನ್ನತ ಮೂಲವಸ್ತು. ಇದು ಪ್ರತಿನಿಧಿಸುವ ಆಕಾರ ಜ್ವಾಲೆ, ಬಣ್ಣ ನೇರಳೆ, ಇಂದ್ರಿಯ ಅಥವಾ ಗ್ರಹಿಕೆ ಶ್ರವಣ (ಕೇಳಿಸಿಕೊಳ್ಳುವದು), ಕಾರ್ಯ ಸಂಪರ್ಕ (ಗಂಟಲು), ಚಕ್ರ ವಿಶುದ್ಧ, ದೇವರು ದೇವಿ, ಬೀಜ "ಹಾಂ"
ಪಂಚಭೂತ ಕ್ಷೇತ್ರಗಳು
[ಬದಲಾಯಿಸಿ]ಭಾರತದಲ್ಲಿ, ಪಂಚಭೂತಗಳಿಗೆ ಮೀಸಲಾದ ಐದು ದೇವಸ್ಥಾನಗಳಿವೆ. ಇವಕ್ಕೆ ಪಂಚಭೂತ ಕ್ಷೇತ್ರಗಳೆಂದು ಕರೆಯುತ್ತಾರೆ. ಪ್ರತಿಯೊಂದು ದೇವಸ್ಥಾನವೂ ಒಂದೊಂದು ಪಂಚಭೂತಕ್ಕೆ ಮೀಸಲಾಗಿದ್ದು ಶಿವನನ್ನು ಭಿನ್ನ ರೂಪಗಳಲ್ಲಿ ಪ್ರತಿನಿಧಿಸುತ್ತವೆ.
ದೇವಸ್ಥಾನ | ಕ್ಷೇತ್ರ | ಪಂಚಭೂತ |
---|---|---|
ಏಕಾಂಬರೇಶ್ವರ ದೇವಸ್ಥಾನ | ಕಂಚೀಪುರ, ತಮಿಳುನಾಡು | ಪೃಥ್ವಿ |
ತಿರುವನೈಕ್ಕ ದೇವಸ್ಥಾನ | ತಿರುಚಿರಾಪಳ್ಳಿ, ತಮಿಳುನಾಡು | ಜಲ |
ಅರುಣಾಚಲೇಶ್ವರ ತಿರುಕೊಯ್ಲ ದೇವಸ್ಥಾನ | ತಿರುವಣ್ಣಾಮಲೈ, ತಮಿಳುನಾಡು | ತೇಜಸ್ಸು (ಅಗ್ನಿ) |
ನಟರಾಜ ದೇವಸ್ಥಾನ | ಚಿದಂಬರಂ, ತಮಿಳುನಾಡು | ಆಕಾಶ |
ಕಾಳಹಸ್ತೀಶ್ವರ ದೇವಸ್ಥಾನ | ಕಾಳಹಸ್ತಿ (ತಿರುಪತಿ ಹತ್ತಿರ), ಆಂಧ್ರ ಪ್ರದೇಶ | ವಾಯು |