ಗೋವಿನ ಹಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋವಿನಹಾಡು

ಗೋವಿನ ಹಾಡು ಕನ್ನಡ ನಾಡಿನ ಆಬಾಲವೃದ್ಧರಿಗೆಲ್ಲ ಪರಿಚಿತವೂ ಪ್ರಿಯವೂ ಆಗಿರುವ ಕಥನಕವನ. ಇದರಲ್ಲಿ ಒಟ್ಟು ೧೩೭ ಪದ್ಯಗಳಿದ್ದು, ಅವುಗಳಲ್ಲಿ ೧೧೪ ಮಾತ್ರ ಮೂಲವೆಂದೂ ಉಳಿದವು ಪ್ರಕ್ಷಿಪ್ತವೆಂದೂ ವಿದ್ವಾಂಸರ ಮತ. ಈ ಹಾಡನ್ನು ರಚಿಸಿದ ಕವಿಯಾಗಲಿ ಅವನ ಕಾಲವಾಗಲಿ ತಿಳಿದಿಲ್ಲ.[೧]

ಇತಿವೃತ್ತ[ಬದಲಾಯಿಸಿ]

  • ಹಾಡಿನ ಅಂತ್ಯದಲ್ಲಿ ಮದ್ದೂರಿನ ನರಸಿಂಹ ದೇವರ ಹೆಸರಿರುವುದರಿಂದ, ಇದನ್ನು ಕಟ್ಟಿದ ಕವಿ ಆ ಊರಿನವನೋ ಅಥವಾ ಆ ದೇವರ ಒಕ್ಕಲಿನವನೋ ಆಗಿರಬೇಕೆಂದೂ ಸು. ೧೮೦೦ಕ್ಕಿಂತ ಹಿಂದೆ ಇದು ಹುಟ್ಟಿರಲಾರದೆಂದೂ ಊಹಿಸಲಾಗಿದೆ. ಈ ಹಾಡಿನ ಛಂದಸ್ಸು ಗೋವಿನ ಹಾಡಿನ ಮಟ್ಟು ಎಂದೇ ಪ್ರಚುರವಾಗಿದೆ. ಇದು ನಾಲ್ಕು ಸಾಲಿನ ಪದ್ಯಗಳಿಂದ ಕೂಡಿದ್ದು ಪ್ರತಿ ಪದ್ಯವನ್ನೂ ಹಾಡಿನ ಲಯಕ್ಕೆ ಹೊಂದಿದಂತೆ ಬ್ರಹ್ಮ.
  • ವಿಷ್ಣು ಮೊದಲಾಗಿ ಅಂಶಗಣಗಳಾಗಿ ವಿಭಾಗಿಸಬಹುದು. ಗೋವಿನ ಹಾಡಿನ ಭಾಷೆ ಒಟ್ಟಿನಲ್ಲಿ ಸರಳವಾಗಿದ್ದರೂ ಅದನ್ನು ಜಾನಪದವೆಂದು ಕರೆಯಲಾಗುವುದಿಲ್ಲ; ಇಡೀ ಗೀತೆ ಏಕ ಕವಿಕೃತವೇ ಹೊರತು ಶುದ್ಧ ಜನಪದ ರಚನೆಯಲ್ಲ. ಆದರೂ ಜನಪದ ಅದನ್ನು ಎತ್ತಿಕೊಂಡಿದೆ, ಎದೆಗೊತ್ತಿಕೊಂಡಿದೆ. ಇದಕ್ಕೆ ಕಾರಣ ಹಾಡಿನ ಸ್ವಾರಸ್ಯ.

ಗೋವಿನ ಹಾಡಿನ ಪ್ರಾಚೀನತೆ[ಬದಲಾಯಿಸಿ]

  • ಗೋವಿನ ಹಾಡು ಪ್ರಾಚೀನವಾದುದೆಂದೂ ಸಂಸ್ಕೃತದ ಇತಿಹಾಸ ಸಮುಚ್ಚಯವೆಂಬ ಪುರಾಣಕಥಾ ಕೋಶದಲ್ಲಿ ಇದು ಬಹುಲೋಪಾಖ್ಯಾನವೆಂಬುದಾಗಿ ಕಂಡು ಬರುತ್ತದೆಂದೂ ಹೇಳಲಾಗಿದೆ. ಅಲ್ಲಿ ಹಸುವಿನ ಹೆಸರು ಬಹುಲಾ; ಹುಲಿಯ ಹೆಸರು ಕಾಮರೂಪಿ (ಅಸತ್ ಶಕ್ತೀಗೆ ಉಚಿತವಾದ ಹೆಸರು). ಈ ಕಥೆಯನ್ನು ಮೊದಲು ಭೀಷ್ಮ ಯುಧಿಷ್ಟಿರನಿಗೆ ಹೇಳಿದನಂತೆ.
  • ಕಥೆ ಹಳೆಯದಾದರೂ ಕನ್ನಡದಲ್ಲಿ ಅದರ ಕಲೆ ಹೊಸತಾಗಿದೆ. ಈ ಕಥೆಯ ರೂಪಾಂತರಗಳು ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಲಿತವಾಗಿರುವಂತೆ ತೋರುತ್ತದೆ. ಉತ್ತರ ಕರ್ನಾಟಕದಲ್ಲಿ ಆಕಳ ಹಾಡು ಎಂಬ ಶುದ್ಧ ಜನಪದ ಕಥನಗೀತೆಯೊಂದು ಸಿಕ್ಕಿದೆ. ಅಲ್ಲಿ ಹಸುವಿನ ಹೆಸರು ಬವಲಿ (ಬಹುಲಾ ಎಂಬುದರ ಅಪಭ್ರಂಶ).
  • ಆದರೆ ಆಕಳ ಹಾಡಸು ಸತ್ಯನಿಷ್ಠೆಗಿಂತ ಹೆಚ್ಚಾಗಿ ಮಾತೃವಾತ್ಸಲ್ಯವನ್ನು ಎತ್ತಿ ತೋರುವಂತೆ ಇದೆ. ಅದರ ಮುಕ್ತಾಯವೂ ಗೋವಿನ ಹಾಡಿನಲ್ಲಿರುವಷ್ಟು ಪರಿಣಾಮಕಾರಿಯಾಗಿಲ್ಲ. ಭಾರತೀಯ ಸಂಸ್ಕೃತಿಯ ಒಂದು ಉಜ್ವಲವಾದ ಮುಖ ಕನ್ನಡ ಕವಿಯೊಬ್ಬನ ಕೈಯಲ್ಲಿ ರಸಸ್ಯಂದಿ ಕವಿತೆಯಾಗಿರುವುದಕ್ಕೆ ನಿದರ್ಶನ ಈ ಗೋವಿನ ಹಾಡು.

ಗೋವಿನ ಹಾಡಿನ ಕಥಾ ಸಾರಾಂಶ[ಬದಲಾಯಿಸಿ]

  • ಅರುಣಾದ್ರಿಯನ್ನು ಬಳಸಿದ ಏಳು ಗರಿಗಳ ನಡುವೆ ಒಂದು ಮಹಾರಣ್ಯ. ಅದರ ಮಧ್ಯೆ ಕಾಳಿಂಗನೆಂಬ ಗೊಲ್ಲನ ದೊಡ್ಡಿ. ಅಲ್ಲಿ ಪುಣ್ಯಕೋಟಿಯೆಂಬ ಒಂದು ಹಸು. ಒಮ್ಮೆ ಹಸುಗಳೆಲ್ಲ ಬೆಟ್ಟದ ಕಿಬ್ಬಿಯಲ್ಲಿ ಮೇದು ದೊಡ್ಡಿಗೆ ಮರಳುವಾಗ ಏಳು ದಿವಸ ಆಹಾರವಿಲ್ಲದೆ ಬಳಲಿದ್ದ ಅರ್ಬುತನೆಂಬ ಹುಲಿ ಗವಿಯಿಂದ ಹೊರಬಿದ್ದು ಗೋವುಗಳ ಮಂದೆಯ ಮೇಲೆರಗುತ್ತದೆ. ಹಸುಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತದೆ.
  • ನಿರಾಶೆಗೊಂಡ ಹುಲಿಗೆ, ತನ್ನ ಕಂದನನ್ನು ನೆನೆಯುತ್ತ ಬರುತ್ತಿದ್ದ ಪುಣ್ಯಕೋಟಿ ಕಾಣಿಸುತ್ತದೆ. ಅದನ್ನು ಹುಲಿ ಅಡ್ಡಗಟ್ಟಿ ತಿನ್ನಬಯಸುತ್ತದೆ. ಪುಣ್ಯಕೋಟಿ ತನ್ನ ಕಂದನಿಗೆ ಹಾಲು ಕುಡಿಸಿ ಮತ್ತೆ ಹುಲಿಯ ಬಳಿಗೆ ಬಂದು, ತನ್ನನ್ನು ತಿಂದು ಹಸಿವನ್ನು ತೀರಿಸಿಕೊಳ್ಳುವಂತೆ ಹೇಳುತ್ತದೆ. ಹುಲಿ ಪುಣ್ಯಕೋಟಿಯ ಪ್ರಾಮಾಣಿಕತೆಗೆ ಮೆಚ್ಚಿ. ತನ್ನನ್ನು ಹಳಿದುಕೊಳ್ಳುತ್ತ ಆಕಾಶಕ್ಕೆ ನೆಗೆದು ಪ್ರಾಣ ಬಿಡುತ್ತದೆ.
  • ಶಿವ ಅದಕ್ಕೆ ಮೋಕ್ಷ ಕರುಣಿಸುತ್ತಾನೆ. ಪುಣ್ಯಕೋಟಿ ಹರ್ಷದಿಂದ ದೊಡ್ಡಿಗೆ ಮರಳುತ್ತದೆ; ಅದರ ಕೋರಿಕೆಯಂತೆ ಗೊಲ್ಲಗೌಡ ಹಬ್ಬವನ್ನಾಚರಿಸಿ, ಪ್ರತಿವರ್ಷವೂ ಸಂಕ್ರಾಂತಿಯಂದು ಹಬ್ಬ ಮಾಡುವುದಾಗಿ ಮಾತು ಕೊಡುತ್ತಾನೆ. ಹಾಡಿನಲ್ಲಿ ಬರುವ ಅರಣ್ಯದ ವರ್ಣನೆ, ಗೊಲ್ಲನ ವರ್ಣನೆ, ಅವನು ಹಸುಗಳನ್ನು ಹೆಸರಿಸಿ ಕರೆಯುವ ರೀತಿ, ಹುಲಿಯ ಆರ್ಭಟದ ಚಿತ್ರ, ಹಸುವಿಗೂ ಅದಕ್ಕೂ ನಡೆದ ಸಂಭಾಷಣೆ-ಇವೆಲ್ಲ ಚೆನ್ನಾಗಿವೆ.
  • ಪುಣ್ಯಕೋಟಿಗೂ ಅದರ ಕರುವಿಗೂ ನಡೆಯುವ ಮಾತುಕಥೆಗಳಲ್ಲಿ ಕರುಣ ಮಡುಗಟ್ಟಿದೆ. ಪುಣ್ಯಕೋಟಿಯ ಸತ್ಯಸಂಧತೆಯ ಚಿತ್ರಣದಷ್ಟೇ ಹುಲಿಯ ಪರಿವರ್ತನೆಯ ಚಿತ್ರಣವೂ ಹೃದಯಸ್ಪರ್ಶಿಯಾಗಿದೆ. ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಸರ್ವ ಬಳಗವು, ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತಾ ಹರಿ ಮೆಚ್ಚನು-ಎಂಬುದೇ ಈ ಗೋವಿನ ಹಾಡಿನ ಸಂದೇಶ.
  • ಇಲ್ಲಿ ಹಸು ಸತ್ಯ ಅಹಿಂಸೆಗಳಿಗೂ ಹುಲಿ ಹಿಂಸೆ ಕ್ರೌರ್ಯಗಳಲಿಗೂ ಸಂಕೇತವಾಗಿದೆ: ಹುಲಿಯ ಸಾವು ಹಿಂಸೆಯ ಸಾವು. ಸತ್ಯ ಅಹಿಂಸೆಗಳ ಪ್ರಚಂಡ ಶಕ್ತಿ ಹೇಗೆ ಹೃದಯ ಪರಿವರ್ತನೆಯನ್ನೆಸಗಬಲ್ಲುದೆಂಬುದನ್ನು ಈ ಗೀತೆ ತೋರಿಸುತ್ತದೆ. ಆದ್ದರಿಂದ, ಕಥೆಯ ಸವಿ ಮಾತ್ರವಲ್ಲ. ದರ್ಶನದ ಆಳವೂ ಇದರಲ್ಲಿದೆ.

ಮೂಲ ಗೀತೆ[ಬದಲಾಯಿಸಿ]

ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು
ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ಪ್ರೇಮದಿಂ ಗೊಲ್ಲ ಕರೆದನು
ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ

ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ
ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು

ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು
ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು

ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು
ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆಂದದಿ ತಾ ಬರುತಿದೆ

ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು
ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯ ಒಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ
ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತಿಗೆಂದಿತು

ಮೂರು ಮೂರ್ತಿಗಳಾಣೆ ಬರುವೆನು ಸೂರ್ಯ-ಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು
ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹಿಸಿಕೊಂಡು ನಿಲ್ಲದೆ ದೊಡ್ಡಿಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು
ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆನೆಂದು ಬಂದೆನು ದೊಡ್ಡಿಗೆ
ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ
ಸತ್ಯವೇ ನಮ್ಮ ತಾಯಿ-ತಂದೆ ಸತ್ಯವೇ ನಮ್ಮ ಸಕಲ ಬಳಗ
ಸತ್ಯವಾಕ್ಯಕೆ ತಪ್ಪಿದರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು
ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದಿರಿ ಹಿಂದೆ ಬಂದರೆ ಒದೆಯದಿರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ
ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನಿಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು
ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ
ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು
ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನು ಎನುತಲಿ ತನ್ನ ಮನದೊಳು ಧ್ಯಾನಿಸಿ
ಮೂರು ಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.

’ತಬ್ಬಲಿಯು ನೀನಾದೆ ಮಗನೆ’ ಚಲನಚಿತ್ರದಲ್ಲಿ[ಬದಲಾಯಿಸಿ]

ಈ ಗೀತೆಯನ್ನು ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿ ಆಧಾರಿತ, ಬಿ. ಬಿ. ಕಾರಂತ್ ಮತ್ತು ಗಿರೀಶ್ ಕಾರ್ನಾಡರು ಜಂಟಿಯಾಗಿ ನಿರ್ದೇಶಿಸಿದ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ಭಾಸ್ಕರ ಚಂದಾವರ್ಕರ ಅವರ ಸಂಗೀತ ನಿರ್ದೇಶನದಲ್ಲಿ ಈ ರೀತಿಯಾಗಿ ಅಳವಡಿಸಲಾಗಿದೆ

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಶದಿ
 
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು...

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ಗುಡುಗಲೆರಗಿದ ರಭಸಕಂಜಿ
ಚೆದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ, ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು....

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ
ಎನ್ನ ತಾಯೊಡ ಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು....

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೊ ಮಾಂಸವಿದೆಕೊ
ಗುಂಡಿಗೆಯ ಬಿಸಿರಕ್ತವಿದೆಕೊ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು.....

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸೀತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ

ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಕಥಾ ಹಿನ್ನೆಲೆ ಮಾಹಿತಿ ಕೃಪೆ[ಬದಲಾಯಿಸಿ]

ಕಣಜ Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ.