ಅಲಾಯಿ ಹೆಜ್ಜೆ
ಅಲಾಯಿ ಹೆಜ್ಜೆ
[ಬದಲಾಯಿಸಿ]ಮುನ್ನುಡಿ
[ಬದಲಾಯಿಸಿ]ಜಾನಪದ ಕುಣಿತ ಪ್ರಕಾರಗಳಲ್ಲಿ ಅಲಾಯಿ ಹೆಜ್ಜೆ ಕೂಡ ಒಂದು. ಇದು ಉತ್ತರ ಕರ್ನಾಟಕದಂತೆ ಬಳ್ಳಾರಿ, ಚಿತ್ರದುರ್ಗ, ಕೋಲಾರ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಕಲಾ ಪ್ರಕಾರ. ಅಲಾಯಿ ಹೆಜ್ಜೆ ಹಾಕುತ್ತಾ ಮೊಹರಂ ಹಾಡುಗಳನ್ನು ಹಾಡುವುದು ರೂಢಿಯಲ್ಲಿರುವುದರಿಂದ ಕುಣಿತಕ್ಕೆ ಹೆಚ್ಚು ಒತ್ತು ಮೂಡಿ ಆವೇಶ ಭರಿತದ್ದಾಗಿರುತ್ತದೆ.
ಕಲಾ ಪ್ರಕಾರ
[ಬದಲಾಯಿಸಿ]ಅಲಾಯಿ ಕುಣಿತ ಯುದ್ಧದ ಅಭಿನಯವಾಗಿದುದ್ದರಿಂದ ಕೈಯಲ್ಲಿ ದೊಣ್ಣೆ, ಕೊಡಲಿ ಮುಂತಾದ ಆಯುಧಗಳನ್ನು ಹಿಡಿದು ಕುಣಿಯುತ್ತಿರುತ್ತಾರೆ. ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ಕತ್ತಿವರಸೆಯೊಂದಿಗೆ ರೋಮಾಂಚನಕಾರಿಯಾಗಿ ಯುದ್ದವನ್ನೇ ಅಭಿನಯಿಸುತ್ತಾರೆ. ಮೆರವಣಿಗೆಯ ಸಂದರ್ಭದಲ್ಲಿ ಪಾಜಿಯಾದ ಮುಂಭಾಗದಲ್ಲಿ ಅಲಾಯಿ ಕುಣಿಯಲು ಸ್ಪರ್ಧೆಯುಂಟಾಗಿ ಊರಲ್ಲಿಯೆ ಎರಡು ಗುಂಪುಗಳ (ಹಿಂದೂಗಳಲ್ಲಿಯೇ) ನಡುವೆ ಘರ್ಷಣೆ ಆಗ ಮೆರವಣಿಗೆ ನಿಂತು ಹೋದ ಸಂದರ್ಭಗಳೇರ್ಪಟ್ಟಿವೆ. ಪಾಜಿಯಾದ ಮುಂದೆ ಕುಣಿಯುವುದು ಪ್ರತಿಷ್ಥೆಯ ವಿಷಯವಾಗಿರುತ್ತದೆ. ಹಬ್ಬ ಮುಗಿಯುತ್ತಾ ಬಂದಂತೆ ಆಲಾಯಿ ಕುಣಿತ ತಾರಕಕ್ಕೇರುತ್ತದೆ. ಸಾಹುಸೇನ್, ನ್ಯಾಯಿಭೋಮ್ ಧುಲ್ಲೇವ್ ಹೋಲಿ, ಅಲಿಹೇ, ಸಾಹುಸೇನ್, ಕೊಗ್ರಸೇನ್, ಪತ್ತಿಸೇನ್, ಜೊನ್ನ ಸೇನ್, ದನಿಯಾಲಸೇನ್, ಥೂಲ್ಲೇವ್ ಅಯ್ಪೋಯಾ ಪೀರ್ಗು ಪಂಡುಗ ಮಾತಂಡ್ರಿಪೋಯ ಇಂಕೇಯ ಪೀರ್ಲುಪುಡುಗ ಮುಗುಸ್ಕಾ' ಎನ್ನುವ ಘೋಷಣೆ ಅಲಾಯಿ ಕುಣಿಯುವವರಿಂದ ಮುಗಿಲು ಮುಟ್ಟುತ್ತದೆ.
ಐತಿಹ್ಯ
[ಬದಲಾಯಿಸಿ]ಮೊಹರನ ಬಗೆಗೆ ದೊರಕುವ ಐತಿಹ್ಯಗಳು, ಸ್ಥಳ ಪುರಾಣಗಳು ಮತ್ತು ನಂಬಿಕೆಗಳನ್ನು ಪರಿಶೀಲಿಸಿದಾಗ ಈ ಹಬ್ಬದ ದೀರ್ಘಕಾಲೀಕತೆ ಅರಿವಾಗುತ್ತದೆ. ಮೊಹರಂ ಯಾಕೆ ಇವರನ್ನು ಆತ್ಮೀಯವಾಗಿ ಮನಸ್ಸಿನಾಳಕ್ಕೆ ಇಳಿಯುವಂತೆ ಮಾಡಿತು ಎನ್ನುವುದುರ ಬಗೆಗೆ ಹೊಳಹುಗಳು ಗೋಚರಿಸುತ್ತದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ಕುಣಿತದಲ್ಲಿ ಸುಮಾರು ೨೦ ರಿಂದ ೩೦ ಜನ ಕಲಾವಿದರಿರುತ್ತಾರೆ. ಇದರಲ್ಲಿ ಹಿಂದುಗಳೂ ಸರಿಸಮಾನವಾಗಿ ಭಾಗವಹಿಸುವುದೊಂದು ವಿಶೇಷ. ಮುಸ್ಲಿಂಮರು ಹಾಡುಗಾರಿಕೆಯಲ್ಲಿ ತೊಡಗಿದರೆ ಹಿಂದುಗಳು ಕುಣಿತದಲ್ಲಿ ತೊಡಗುತ್ತಾರೆ. ಅಲಾಯಿ ಹೆಜ್ಜೆ, ಜಡೆ ಕೋಲಾಟ ಮತ್ತು ಗೋಪು ಹೆಣೆಯುವ ಕಲೆಯನ್ನು ನೆನಪಿಸುವ ಕಲೆ. ೧೫ ರಿಂದ ೨೦ ಅಡಿ ಉದ್ದವಿರುವ ಎರಡು ಬಿದಿರು ಕಂಬಗಳನ್ನು ೧೦ ಅಡಿ ಅಂತರದಲ್ಲಿ ನಿಲ್ಲಿಸಲಾಗುತ್ತದೆ. ಅವುಗಳಿಗೆ ಅಡ್ಡಲಾಗಿ ಅಲಂಕೃತವಾದ ಒಂದು ಬಿದಿರು ಕಂಬವಿರುತ್ತದೆ. ಇದರ ಮಧ್ಯ ಭಾಗದಲ್ಲಿರುವ ಹಲಗೆಯ ಕೊಂಡಿಗಳಿಗೆ ಹಗ್ಗಗಳನ್ನು ಕಟ್ಟಿ ಇಳಿಸುತ್ತಾರೆ. ಹೀಗೆ ಇಳಿಬಿಟ್ಟ ಹಗ್ಗಗಳನ್ನು ಒಬೊಬ್ಬರು ಹಿಡಿದುಕೊಂಡು ನಿಲ್ಲುತ್ತಾರೆ. ಮುಖ್ಯ ಹಾಡುಗಾರನು ಅವರ ಮಧ್ಯದಲ್ಲಿರುತ್ತಾನೆ. ಹಾರ್ಮೋನಿಯಂ, ಮುಖವೀಣೆ, ತಬಲ ಮತ್ತು ಹಿಮ್ಮೇಳದ ವಾದ್ಯಗಳಿರುತ್ತದೆ. ಹಾಡು ಮುಂದುವರಿದಂತೆ ಹಗ್ಗಗಳನ್ನು ಹಿಡಿದುಕೊಂಡು ಕಲಾವಿದರು ಹಾಡುತ್ತಾ ಒಂದನೆಯ ಹೆಜ್ಜೆ, ಎರಡನೆಯ ಹೆಜ್ಜೆಯಂತೆ ಲಯಬದ್ದವಾಗಿ ಸುತ್ತುತ್ತಾರೆ. ಆಗ ಹಗ್ಗ ಜಡೆಯಂತೆ ಸುತ್ತಿಕೊಳ್ಳುತ್ತದೆ. ಹಾಗೆಯೇ ಸುತ್ತಿದ ಹಗ್ಗವನ್ನು ಅದೇ ಲಯಗಾರಿಕೆಯಲ್ಲಿ ಬಿಚ್ಚಿಕೊಳ್ಳುತ್ತಾರೆ. ಭಾರತದ ಮೊಹರಂ ಹಬ್ಬದ ಸಂದರ್ಭದಲ್ಲಿ ಹಾಡಲಾಗುವ ಮೊಹರಂ ಗೀತೆಗಳಿಗೆ ಪ್ರೇರಣೆಯನ್ನು ಮೊಗಲರ ಕಾಲದಲ್ಲಿ ಹುಟ್ಟಿಕೊಂಡ ಉತ್ತರ ಭಾರತದ ಮರ್ಸಿಯಾ ಗೀತೆಗಳ ಅನಂತರ ದಕ್ಷಿಣ ಭಾರತದಲ್ಲಿ ಈ ಮೊಹರಂ ಪದಗಳು ಹುಟ್ಟಿಕೊಂಡವು.
ಬೀದರ್ ಜಿಲ್ಲೆಯಲ್ಲಿ ದೊರೆತ ಮೊಹರಂ ಹಾಡೊಂದು ಹೀಗಿದೆ
[ಬದಲಾಯಿಸಿ]ಸುತ್ತಲುಕ ಕಮಲಾಪುರ ಸಮೀ ದೊಜಕರ ವಬ್ಬ ಕಟ್ಟೀಸಿದಾಮನಿ ತೀನ್ನೆ ತಿರು ಪಾಂಚೆಗು ಸ್ಮಾರೆಕ ಮನಿ ಅವರ ಒಳಾಗ ಕೊಂತೀದ್ದ ವಬ್ಬ ದೊಡ್ಡಾಮನಿ ಏನು ಯೀಳಲಿ ಆಮನೀಮನಿ. ಇದ್ರಜಿತ್ತ ರಾಜಿದ್ದ ದೊಡ್ಡಾಮನಿ ಮನಿಕಟ್ಟ ಉಪ್ಪಅರಿಗೆ ಕರಿತೀನಿ ವಾರಾನಿಲ್ಲದೆ ಜವುತಿ ಮಾಡಸ್ತೀಮತೀನಿ ಜೋತು ಕಂಬದ ಮ್ಯಾಲೆ ಬೋನು ಎಳಸ್ತೀನಿ ಸಂಸಾನಿಲ್ಲದ ಮನಸೀಗೆ ನಾನು ಹರುಷ ಬಿಡತೀನಿ
ತಾತ್ಪರ್ಯ
[ಬದಲಾಯಿಸಿ]ಮನಿ ಕಟ್ಟಿಸಲು ಇಷ್ಣೆಲ್ಲಾ ಮಾಡಬಯಸುವ ಈ ಮನುಷ್ಯ ಮಾತ್ರ ತನ್ನ ಅತಿಯಾದ ಉತ್ಸಾಹದಲ್ಲು ಎದರಿನವರ ನಿರುತ್ಸಾಹ, ಅಸಂತೋಷಗಳನ್ನು ಕಂಡುಕೊಳ್ಳುವ ತಾಳ್ಮೆಯನ್ನುಳಿಸಿಕೊಂಡಿದ್ದಾನೆ. ತನ್ನ ಅತಿಯಾದ ಉತ್ಸಾಹ ಮತ್ತು ಆತ್ಮವಿಶ್ವಾಸ ಕೂಡ ದುರ್ಬಲ, ಸೂಕ್ಷ್ಮ ಮನಸ್ಥಿತಿಯವರಿಗೆ ಕಿರಿಕಿರಿಯುಂಟು ಮಾಡಿ, ಅವರಲ್ಲೆಲ್ಲೋ ಕೀಳರಿಮೆ ಮೂಡಿಸಿಬಿಡುತ್ತೀನಿ ಎಂಬ ಅಂಜಿಕೆ, ಎಚ್ಚರ ವಿಸ್ಮಯಕಾರಿ ರೀತಿಯಲ್ಲಿ ಪ್ರಕಟಗೊಂಡಿದೆ. ಅದಕ್ಕಾಗಿಯೇ 'ಸಂಸಾನಿಲ್ಲದ ಮನಸೀಗೆ ನಾನು ಹರುಷ ಬಿಡತಿನಿ' ಎನ್ನುತ್ತಾರೆ. ಮತ್ತೆ ಮುಂದುವರಿದು; ಒಂಭತ್ತು ಕೂಲ್ಲಿದೊಳಿಗೆ ವಂದು ಕಂಬಕೊಟ್ಟೀನಿ ಆ ಕಂಬಾದ ಸಲುವಾಗಿ ವಂದು ರಂಬೆ ಬಿಟ್ಟೀನಿ ಹತ್ತು ಮಂದಿಗೆ ತೊತ್ತು ಕೈಲಿ ಕೊಡಸ್ತಿನಿ ನನ್ನ ಸರಿಯಾಸರೆ ನಿಂತು ಹಾಡಂತಿನಿ ಶಾಹಿರಬಂದು ನನ್ನ ಮುಂದ ಹಾಡಂತನಿ ಯವಗಿಂದವಗೆ ತೋಡುಮಾಡಿ ಹಾಡಂತೀನಿ ಹಾಡಲೋದರೆ ಬಿಟ್ಟು ಓಡಂತೀನಿ ನಮ್ಮ ಗರೀಬಾ ಗುರುವಿಗೆ ಓಗಿ ಕೇಳಂತೀನಿ ಎಂದು ಕವಿಯನ್ನೇ (ಶಾಹಿರ್-ಕವಿ) ತನ್ನ ಮುಂದೆ ಹಾಡಲು ಆಹ್ವಾನಿಸುತ್ತಾನೆ. ಯವಗಿಂದವಗೆ ತೋಡುಮಾಡಿ ಹಾಡಲು ಹೇಳುತ್ಥಾನೆ. ಹಾಡುವುದಾಗದಿದ್ದಲ್ಲಿ ತಮ್ಮ ಗುರುವಿನ ಬಳಿಗೆ, ಅದೂ ಗರೀಬಾ ಗುರುವಿನ ಬಳಿ ಹೋಗಿ ಕಲಿಯುವಂತೆ ಸೂಚಿಸುತ್ತಾನೆ. ಇಂತಹ ಗರೀಬಾ ಗುರುಗಳು ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಈ ಗರುಗಳು ಅವರನ್ನು ಸುತ್ತುವರೆದ ಶಿಷ್ಯರು ಹುಟ್ಟು ಹಾಕಿದ ಈ ಹಾಡುಗಳಿಗೆ ಮೂಲ ಕರ್ಬಲಾದ ಪ್ರೇರಣೆಯೊಂದಿಗೆ ತಮ್ಮ ಸಮಕಾಲೀನ ಸೂಫಿ ಸಂತರು ಮತ್ತವರ ವಿಚಾರಧಾರೆ ಹೆಚ್ಚಾಗಿ ಪ್ರಭಾವ ಬೀರಿದೆ. ಇದೇ ಹಾಡಲ್ಲಿ ಬರುವ ಈ ಸಾಲು ಕೂಡ ಇದನ್ನೇ ಧೃಡಪಡಿಸುತ್ತದೆ. ಗುರವಿನ್ನಾಮ ನುಡಿದೋನಿಗೆ ಹೌದಂತೀನಿ, ಅಲ್ಲದ ನಾಮ ನುಡಿದೋನಿಗೆ ಬ್ಯಾಡಂತಿನಿ ಎನುತ್ತಾನೆ. ಸೂಫಿಗಳಲ್ಲಿ ಗುರುಭಕ್ತಿ ಅಧಿಕವಾಗಿದ್ದರಿಂದ ಈ ಗೀತೆಯ ಕವಿ ಕೂಡ ಸೂಫಿ ಸಂತನೊಬ್ಬನ ಅನುಯಾಯಿಯಾಗಿರಬಹುದು.
ಉಲ್ಲೇಖ
[ಬದಲಾಯಿಸಿ]- ಸಂಪಾದಕ - ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬, ಪುಟ: ೧೧೭- ೧೧೮