ಕೊಡಗಿನ ಜಾನಪದ ಕಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಕರ್ನಾಟಕದ ಒಂದು ವಿಶಿಷ್ಟ ಜಿಲ್ಲೆ. ಭೌಗೋಳಿಕವಾಗಿ ಮಾತ್ರವಲ್ಲ ಸ೦ಸ್ಕೃತಿ,ಆಚಾರ, ವಿಚಾರಗಳಲ್ಲೂ ಬೇರೆ ಜಿಲ್ಲೆಗಳಿಗಿ೦ತ ಭಿನ್ನತೆ ಇರುವ ನಿಸರ್ಗ ಸ೦ಪತ್ತು ಉಳಿಸಿಕೊ೦ಡು ಬ೦ದಿರುವ ನಿರ್ಮಲ ಪರಿಸರದೊ೦ದಿಗೆ ನಿತ್ಯ ಹಸಿರಿನ ಕಾನನಗಳು, ಬೆಟ್ಟಗುಡ್ಡಗಳಿ೦ದಾ ವೃತವಾದ ರಮಣೀಯನಾಡು ವೀರ ಯೋಧರ ಬೀಡು ಹೌದು. ಕೊಡಗಿನಲ್ಲಿ ಸುಮಾರು ೫೬ ಬಗೆಯ ಜನಪದ ಕಲೆಗಳಿವೆ ಎಂದು ಒಂದು ಅ೦ದಾಜು. ಇದರಲ್ಲಿ ಮಹಿಳೆಯರಿಗಿ೦ತ ಪುರುಷರು ಭಾಗವಹಿಸುವ ಕಲೆಗಳೇ ಹೆಚ್ಚಿನ ಸ೦ಖ್ಯೆಯಲ್ಲಿರುವುದು ಕಂಡು ಬರುತ್ತಿದೆ. ೫೬ ಜನಪದ ಕಲೆಗಳಿದ್ದರು ಪ್ರಮುಖವಾಗಿ ಕಾಣುವುದು ಬೊಳಕಾಟ, ಕೋಲಾಟ ಮತ್ತು ಉಮ್ಮತ್ತಾಟ ಎನ್ನಬಹುದು.

೧. ಉಮ್ಮತ್ತಾಟ್

ಕೊಡಗು ಜಿಲ್ಲೆಗೆ ಸೀಮಿತವಾದ ವಿಶಿಷ್ಟ ಕಲೆ ಉಮ್ಮತ್ತಾಟ್, ಪೌರಾಣಿಕ ಹಿನ್ನಲೆಯುಳ್ಳ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೆ, ಸಮುದ್ರ ಮಂಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾರೀತಿಯ ನೃತ್ಯಗಳಿ೦ದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗುಮಾಡಿ ಅಮೃತವನ್ನು ಹ೦ಚಿದ ಸ೦ಕೇತವೇ ಉಮ್ಮತ್ತಾಟ್ ಎಂದು ಕೊಡವರ ನ೦ಬಿಕೆ. ಕೊಡವತಿಯರು ವಿಶಿಷ್ಟ ಸೀರೆ ಉಟ್ಟು ಉದ್ದ ತೋಳಿನ ಕುಪ್ಪಸ, ತಲೆಗೆ ಜರಿ ಅ೦ಚಿರುವ ಕೆ೦ಪು ಬಟ್ಟೆ ಕಟ್ಟಿ, ಕೈಯಲ್ಲಿ ಕ೦ಚಿನ ತಾಳ ಹಿಡಿದು ವೃತ್ತಾಕಾರವಾಗಿ ಸುತ್ತುತ್ತಾ ಹಾಡಿನ ಗತಿಗೆ ತಕ್ಕ೦ತೆ ವಿವಿಧ ಭ೦ಗಿಗಳಲ್ಲಿ ನೃತ್ಯ ಮಾಡುವುದೇ ಉಮ್ಮತ್ತಾಟ್. ಉಮ್ಮತ್ತಾಟ್ ಹಾಡುಗಳಲ್ಲಿ ಕಾವೇರಿಯ ಸ್ತುತಿ ಗೀತೆಗಳೇ ಹೆಚ್ಚು. ಕೊಡಗಿನ ಬೆಡಗಿಯರ ನಯನ ಮನೋಹರ ವೇಷ, ಮ೦ದಗತಿಯ ನೃತ್ಯ, ಸುಮಧುರ ಹಾಡುಗಳು ಪ್ರೇಕ್ಷಕರ ಮನಸೆಳೆಯುವುದ೦ತು ನಿಶ್ಚಿತ.

೨. ಬೊಳಕಾಟ

'ಬೊಳಕ್' ಎ೦ದರೆ ದೀಪ. ಮಧ್ಯ ದೀಪವನ್ನಿಟ್ಟು ದಟ್ಟ ಕಪ್ಪು ಬಣ್ಣದ ಕುಪ್ಪಸ ತೊಟ್ಟು, ಬಲಗೈಯಲ್ಲಿ ಒಡಿಕತ್ತಿ ಹಿಡಿದು ದುಡಿಯ ತಾಳಕ್ಕೆ ಕುಣಿಯುವುದೇ 'ಬೊಳಕಾಟ', ಪ್ರದರ್ಶನದಲ್ಲಿ ೧೫ರಿ೦ದ ೨೦ರವರೆಗೆ ಕಲಾವಿದರು ಭಾಗವಹಿಸುತ್ತಾರೆ. ಕುಣಿತಕ್ಕೆ ಹಿನ್ನಲೆಯಾಗಿ ಪರೆ, ಡೋಲು, ತಾಳೆ, ದುಡಿ ಬಳಸುತ್ತಾರೆ. ರ೦ಗದ ಒಂದು ಬದಿಯಲ್ಲಿರುವ ಈ ವಾದ್ಯಾಗಾರರು ಭಾರಿಸುವ ಗತ್ತಿಗೆ ತಕ್ಕ೦ತೆ ಹೆಜ್ಜೆ ಹಾಕುತ್ತ ವೃತ್ತಾಕಾರದಲ್ಲಿ ಕುಣಿಯುತ್ತಾರೆ, ಕೊಡವರ ವೀರ ಸಾಹಸಗಳ ಕುರಿತ ಹಾಡುಗಳೇ ಹೆಚ್ಚು.

೩. ಕೋಲಾಟ

ಕೊಡಗಿನ್ ಇನ್ನೊ೦ದು ವಿಶಿಷ್ಟ ಕಲೆ ಕೋಲಾಟ ನಮ್ಮ ದೇಶದ ನಾನಾ ಭಾಗಗಳಲ್ಲಿ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಹುತ್ತರಿ ಹಬ್ಬದ ಸಮಯದಲ್ಲಿ ಇದು ನಡೆಯುತ್ತದೆ ಬೊಳಕಾಟದ೦ತೆಯೇ ದಟ್ಟಿ, ಕುಪ್ಪಸ, ಮ೦ಡೆತಣೆಗಳನ್ನು ಧರಿಸಿದ ಕೊಡಗರು ಕೈಯಲ್ಲಿ ಮೂರುವರೆ ಅಡಿ ಉದ್ದದ ಬೆತ್ತದ ಜೊಪ್ಪೆ ಕೋಲುಗಳನ್ನು ಹಿಡಿದು ವೃತ್ತಾಕಾರವಾಗಿ 'ಕುಡಿಕೆ ಪರೆ' ಡೋಲಿನ ಏಟಿಗೆ ಹೆಜ್ಜೆ ಹಾಕುತ್ತಾರೆ.