ವಿಷಯಕ್ಕೆ ಹೋಗು

ಪುಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಣೆ

ಪುಣೆ
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - ಪುಣೆ
ನಿರ್ದೇಶಾಂಕಗಳು 18.53° N 73.85° E
ವಿಸ್ತಾರ
 - ಎತ್ತರ
೭೦೦ km²
 - ೫೬೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೫)
 - ಸಾಂದ್ರತೆ
೪,೪೮೫,೦೦೦ (೭ನೇ)
 - ೬,೪೦೭/ಚದರ ಕಿ.ಮಿ.
ಮಹಾಪೌರ ರಾಜಲಕ್ಷ್ಮಿ ಭೊಸಲೆ
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೪೧೧ ೦xx
 - +೯೧ (೦)೨೦
 - MH-12 ಮತ್ತು MH-14

ಪುಣೆ ಭಾರತಮಹಾರಾಷ್ಟ್ರ ರಾಜ್ಯದ ಒಂದು ಪ್ರಮುಖ ನಗರ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ, ಮುಳಾ ಮತ್ತು ಮುಠಾ ಎಂಬ ನದಿಗಳ ದಂಡೆಯಲ್ಲಿರುವ ಈ ನಗರವು ಪುಣೆ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಪುಣೆ ಮಹಾರಾಷ್ಟ್ರದ ಎರಡನೆಯ ಹಾಗೂ ಭಾರತದ ಏಳನೆಯ ಅತಿದೊಡ್ಡ ನಗರ. ಅನೇಕ ಪ್ರಸಿದ್ಧ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಇಲ್ಲಿರುವ ಕಾರಣ ಇದನ್ನು " ಪೂರ್ವದ ಆಕ್ಸ್‍ಫರ್ಡ್" ಎಂದೂ ಕರೆಯಲಾಗುತ್ತದೆ. ಅನೇಕ ವಾಹನ ಹಾಗೂ ಇಂಜಿನಿಯರಿಂಗ್ ಸಂಬಂಧಪಟ್ಟ ದೊಡ್ಡ ಕೈಗಾರಿಕೆಗಳಿಗೆ ನೆಲೆಯಾಗಿರುವ ಪುಣೆ ದೊಡ್ಡ ಔದ್ಯಮಿಕ ಕೇಂದ್ರವೂ ಹೌದು. ಕಳೆದ ಒಂದೆರಡು ದಶಕಗಳಲ್ಲಿ ಪುಣೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯಮಕ್ಕಾಗಿಯೂ ಹೆಸರಾಗಿದೆ. ೨೦೦೧ರ ಜನಗಣತಿಯ ಪ್ರಕಾರ ಪುಣೆಯ ಜನಸಂಖ್ಯೆ ೪೫ ಲಕ್ಷ. ಬಹಳ ಹಳೆಯ ಇತಿಹಾಸವಿರುವ ಪುಣೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೂ ಹೆಸರಾಗಿದೆ. ಇಲ್ಲಿಯ ಮುಖ್ಯ ಭಾಷೆ ಮರಾಠಿ.

ಹೆಸರಿನ ಮೂಲ

[ಬದಲಾಯಿಸಿ]

ಪುಣೆ ನಗರದ ಹೆಸರು ಪುಣ್ಯನಗರಿ ಎಂಬ ಶಬ್ದದಿಂದ ಬಂದಿರಬೇಕು ಎಂದು ನಂಬಲಾಗಿದೆ. ಕ್ರಿ.ಶ. ೮ನೆಯ ಶತಮಾನದಲ್ಲಿ ಈ ಊರನ್ನು ಪುನ್ನಕ (ಅಥವಾ ಪುಣ್ಯಕ) ಎಂಬ ಹೆಸರಿನಿಂದ ಉಲ್ಲೇಖಿಸಿರುವುದು ದಾಖಲೆಗಳಲ್ಲಿ ಕಾಣಬರುತ್ತದೆ. ಕ್ರಿ.ಶ.೧೧ನೆಯ ಶತಮಾನದಲ್ಲಿ ಕಸಬೇ ಪುಣೆ ಮತ್ತು ಪುನವಾಡಿ ಎಂಬ ಉಲ್ಲೇಖವೂ ಕಾಣಬರುತ್ತದೆ. ಮರಾಠಾ ಸಾಮ್ರಾಜ್ಯದ ಕಾಲದಲ್ಲಿ ಇದನ್ನು ಪುಣೆ ಎಂದು ಸಂಭೋದಿಸಲಾಗುತ್ತಿತ್ತು. ಮುಂದೆ ಬ್ರಿಟಿಷರ ಬಾಯಲ್ಲಿ ಇದು ಪೂನಾ ಎಂದಾಯಿತು. ಪುಣೆ ಈಗಿನ ಅಧಿಕೃತ ಹೆಸರು .

ಇತಿಹಾಸ

[ಬದಲಾಯಿಸಿ]
ಪಾತಾಳೇಶ್ವರ ಗುಹಾ ದೇವಾಲಯ
ಪಾತಾಳೇಶ್ವರ ಗುಹಾ ದೇವಾಲಯದ ನಂದಿ

ಈ ನಗರದ ಬಗ್ಯೆ ಮೊಟ್ಟಮೊದಲ ಉಲ್ಲೇಖ ಕ್ರಿ.ಶ. ೭೫೮ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಕಾಣಬರುತ್ತದೆ. ಇಂದಿಗೂ ಪುಣೆಯ ಜಂಗಲೀ ಮಹಾರಾಜ ರಸ್ತೆಯಲ್ಲಿರುವ ಪಾತಾಳೇಶ್ವರ ಗುಹಾ ದೇವಾಲಯ ೭ನೆಯ ಶತಮಾನದಷ್ಟು ಹಳೆಯದು.

೧೭ನೆಯ ಶತಮಾನದವರೆಗೆ ಈ ಪಟ್ಟಣವು ನಿಜಾಮ ಶಾಹಿ, ಆದಿಲ ಶಾಹಿ, ಮುಘಲರು ಇತ್ಯಾದಿ ರಾಜ್ಯಗಳ ಅಧೀನದಲ್ಲಿತ್ತು. ೧೭ನೆಯ ಶತಮಾನದಲ್ಲಿ ಸತಾರಾಶಹಾಜಿರಾಜೆ ಭೋಸ್ಲೇಗೆ ಪುಣೆ ನಗರವನ್ನು ನಿಜಾಮ ಶಹಾನು ಜಹಗೀರು ಕೊಟ್ಟನು. ಈ ಜಹಗೀರಿನಲ್ಲಿ ಶಹಾಜಿಯ ಹೆಂಡತಿ ಜೀಜಾಬಾಯಿಯು ನೆಲೆಸಿದ್ದಾಗ, ೧೬೨೭ರಲ್ಲಿ ಶಿವನೇರಿ ಕೋಟೆಯಲ್ಲಿ ಶಿವಾಜಿರಾಜೆ ಭೋಸ್ಲೆಯ ಜನನವಾಯಿತು. ತನ್ನ ಸಂಗಡಿಗರೊಂದಿಗೆ ಪುಣೆ ನಗರದ ಆಸುಪಾಸಿನಲ್ಲಿ ಪ್ರವರ್ಧಮಾನಕ್ಕೆ ಬಂದ ಶಿವಾಜಿಯು ಮುಂದೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ. ಮುಂದೆ ಪೇಶವಾಗಳ ಕಾಲದಲ್ಲಿ ಛತ್ರಪತಿಯ ರಾಜಧಾನಿ ಸತಾರಾಕ್ಕೆ ಬದಲಾದರೂ, ಪುಣೆಯು ಆಡಳಿತಾತ್ಮಕ ರಾಜಧಾನಿಯಾಗಿ ಮುಂದುವರೆಯಿತು. ಪೇಶವಾಯಿಯ ಕಾಲದಲ್ಲಿ ಪುಣೆ ನಗರ ಭರದಿಂದ ಬೆಳೆಯಿತು.

ಮರಾಠಾ ಸಾಮ್ರಾಜ್ಯ

[ಬದಲಾಯಿಸಿ]
ಶನಿವಾರ ವಾಡೆಯ ದಿಲ್ಲಿ ಗೇಟ್

ಶಿವಾಜಿ ಮಹಾರಾಜನ ಜೀವನದಲ್ಲಿ ಹಾಗೂ ಮರಾಠಾ ಇತಿಹಾಸದಲ್ಲಿ ಪುಣೆ ನಗರಕ್ಕೆ ಮಹತ್ವದ ಸ್ಥಾನವಿದೆ. ಕ್ರಿ.ಶ. ೧೬೩೫-೩೬ರ ಸುಮಾರಿನಲ್ಲಿ ಜೀಜಾಬಾಯಿಯು ಪುಣೆಯಲ್ಲಿ ನೆಲೆಸಲು ಬಂದಾಗಿನಿಂದ ಪುಣೆಯ ಇತಿಹಾಸದಲ್ಲಿ ಹೊಸ ಪರ್ವವೇ ಪ್ರಾರಂಭವಾಯಿತು. ಪುಣೆಯ ಲಾಲ್ ಮಹಲ್ ಎಂಬ ಅರಮನೆಯಲ್ಲಿ ಶಿವಾಜಿ ಮತ್ತು ಜೀಜಾಬಾಯಿಯ ವಾಸ್ತವ್ಯವಿತ್ತು. ಪುಣೆಯ ಊರದೇವರು - ಕಸಬಾ ಗಣಪತಿಯನ್ನು ಸ್ಥಾಪಿಸಿದವಳು ಜೀಜಾಬಾಯಿ. ೧೭ನೆಯ ಶತಮಾನದಲ್ಲಿ ಛತ್ರಪತಿ ಶಾಹು ಮಹಾರಾಜನ ಪ್ರಧಾನಮಂತ್ರಿ, ಪೇಶವೇ ಬಾಜೀರಾಯನು, ಮುಠಾ ನದಿಯ ದಂಡೆಯಲ್ಲಿ ಶನಿವಾರವಾಡೆಯನ್ನು ಕಟ್ಟಿ ಅಲ್ಲಿಯೇ ನೆಲೆಸಿದ.

ಖರಡಾದ ಐತಿಹಾಸಿಕ ಕೋಟೆಯಲ್ಲಿ ೧೭೯೫ರಲ್ಲಿ ನಿಜಾಮನಿಗೂ ಮರಾಠರಿಗೂ ಯುದ್ಧವಾಯಿತು. ೧೮೯೭ರ ಖಡಕಿ ಯುದ್ಧದಲ್ಲಿ ಮರಾಠರು ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಪರಾಜಿತರಾದ ಮೇಲೆ ಪುಣೆ ನಗರವು ಬ್ರಿಟಿಷರ ಕೈ ಸೇರಿತು. ಪುಣೆಯ ಮಹತ್ವವನ್ನು ಮನಗಂಡ ಬ್ರಿಟಿಷರು ಖಡಕಿಯಲ್ಲಿ ಸೇನಾ ಕಂಟೋನ್ಮೆಂಟ್ ಅನ್ನು ಸ್ಥಾಪಿಸಿದರು.

೧೮೫೮ರಲ್ಲಿ ಪುಣೆ ನಗರಪಾಲಿಕೆ ಸ್ಥಾಪನೆಯಾಯಿತು. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಪುಣೆಯಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಿ ಪುಣೆ ಶಿಕ್ಷಣ ಕೇಂದ್ರವಾಗಿ ಹೆಸರಾಗಲು ಅಡಿಪಾಯ ಹಾಕಿದವು.

ಸ್ವಾತಂತ್ರ ಹೋರಾಟದಲ್ಲಿ

[ಬದಲಾಯಿಸಿ]

ಭಾರತದ ಸ್ವಾತಂತ್ರ ಹೋರಾಟ ಮತ್ತು ಸಮಾಜಸುಧಾರಣೆಗಳಲ್ಲಿ ಪುಣೆಯ ಸ್ಥಾನ ವಿಶಿಷ್ಟವಾದದ್ದು. ಲೋಕಮಾನ್ಯ ತಿಲಕ್ ಮತ್ತು ಸಾವರಕರರು ಸುಮಾರು ಏಳು ದಶಕಗಳ ಕಾಲ ತಮ್ಮ ರಾಜಕೀಯ ಚಟುವಟಿಕೆಗಳಿಂದ ಪುಣೆಯ ಮಹತ್ವವನ್ನು ಉಳಿಸಿ, ಬೆಳೆಸಿದರು. ಮಹಾದೇವ ಗೋವಿಂದ ರಾನಡೆ, ರಾ.ಗ.ಭಂಡಾರ್ಕರ್, ವಿಠ್ಠಲ ರಾಮಜೀ ಶಿಂದೆ, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮಾ ಫುಲೆ ಇತ್ಯಾದಿ ಸಮಾಜ ಸುಧಾರಕರ ಮತ್ತು ರಾಷ್ಟ್ರ ಮಟ್ಟದ ನಾಯಕರ ಕಾರ್ಯಕೇಂದ್ರವೂ ಪುಣೆಯಾಗಿತ್ತು.

ಭೂಗೋಳ

[ಬದಲಾಯಿಸಿ]

ಪುಣೆ ನಗರದ ಮಧ್ಯಬಿಂದು (Zero milestone) ನಗರದ ಜಿ.ಪಿ.ಓ ಹೊರಗಿದೆ. ಸಹ್ಯಾದ್ರಿ ಪರ್ವತಶ್ರೇಣಿಯ ಪೂರ್ವದಲ್ಲಿ , ಸಮುದ್ರಮಟ್ಟದಿಂದ ೫೬೦ ಮೀಟರ್ (೧೮೩೭ ಅಡಿ) ಎತ್ತರದಲ್ಲಿರುವ ಪುಣೆ, ಭೀಮಾ ನದಿಯ ಉಪನದಿಗಳಾದ ಮುಳಾ ಮತ್ತು ಮುಠಾ ನದಿಗಳ ದಂಡೆಯಮೇಲಿದೆ. ಪವನಾ ಮತ್ತು ಇಂದ್ರಾಯಣಿ ನದಿಗಳು ಈ ನಗರದ ಉತ್ತರ - ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತವೆ. ಸಮುದ್ರಮಟ್ಟದಿಂದ ೮೦೦ ಮೀಟರ್ ಎತ್ತರದಲ್ಲಿರುವ ವೇತಾಳ ಟೇಕಡಿ ನಗರದ ಅತಿ ಎತ್ತರದ ತಾಣ. ಶಿವಾಜಿಯ ಇತಿಹಾಸದ ಅವಿಭಾಜ್ಯ ಅಂಗ , ೧೩೦೦ ಮೀಟರ್ ಎತ್ತರದಲ್ಲಿರುವ , ಸಿಂಹಗಡ ಕೋಟೆಯು ಪುಣೆಯ ಸಮೀಪದಲ್ಲಿದೆ. ಕೊಯ್ನಾ ಭೂಕಂಪವಲಯದ ವ್ಯಾಪ್ತಿಯಲ್ಲಿ ಬರುವ ಪುಣೆಯಲ್ಲಿ ಮಧ್ಯಮ ಸ್ತರದ ಹಾಗೂ ಲಘು ಭೂಕಂಪಗಳು ಆದದ್ದುಂಟು. ಕಾತ್ರಜದಲ್ಲಿ ೨೦೦೪ರ ಮೇ ೧೭ರಂದು ರಿಚ್ಟರ್ ಮಾಪನದಲ್ಲಿ ೩.೨ರಷ್ಟಿದ್ದ ಭೂಕಂಪವಾಗಿತ್ತು.

ಶನಿವಾರ ವಾಡೆಯಲ್ಲಿ ಒಂದು ನೋಟ

ಪುಣೆ "ಪೇಟೆ"ಗಳ ನಗರ. ನದಿಯ ದಡದಲ್ಲಿ ಹರಡಿಕೊಂಡಿದ್ದ ನಗರವು , ಹೊಸಹೊಸ ಪೇಟೆಗಳ ಹೆಸರು ಹೊತ್ತು ಬೆಳೆಯತೊಡಗಿತು. ಈ ಪೇಟೆಗಳ ಹೆಸರು ವಾರದ ದಿನಗಳಿಂದ, ಐತಿಹಾಸಿಕ ಕಾರಣಗಳಿಂದ ಹೆಸರು ಪಡೆದುಕೊಂಡಿವೆ. ಪುಣೆಯ ಪೇಟೆಗಳ ಪಟ್ಟಿ ಇಂತಿದೆ.

ಉಪನಗರಗಳು

[ಬದಲಾಯಿಸಿ]

ಪುಣೆಯ ಉಪನಗರಗಳು

ಹವಾಮಾನ

[ಬದಲಾಯಿಸಿ]
ಪುಣೆಯಲ್ಲಿ ಪ್ರತಿ ತಿಂಗಳ ಸರಾಸರಿ ಮಳೆ ಮತ್ತು ತಾಪಮಾನವನ್ನು ತೋರಿಸುವ ಒಂದು ಚಿತ್ರ

ನಗರದಲ್ಲಿ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲ ಪ್ರಧಾನವಾಗಿ ಅನುಭವಕ್ಕೆ ಬರುತ್ತವೆ. ಬೇಸಿಗೆಕಾಲ ಮಾರ್ಚಿನಿಂದ ಮೇವರೆಗೆ ಇದ್ದು ಉಷ್ಣಾಂಶ ಸುಮಾರು ೨೫ ರಿಂದ ೨೯ ಡಿಗ್ರಿ ಸೆಂಟಿಗ್ರೇಡು ಇರುತ್ತದೆ. ಏಪ್ರಿಲ್ಲಿನಲ್ಲಿ ಬಿಸಿಲಿನ ಧಗೆ ಅತಿಹೆಚ್ಚಿರುತ್ತದೆ.ಪುಣೆಯಲ್ಲಿ ರಾತ್ರಿಯ ಉಷ್ಣಾಂಶ ಸಾಕಷ್ಟು ಕಡಿಮೆಯಿರುತ್ತದೆ. ಜೂನಿನಲ್ಲಿ ಅರಬೀ ಸಮುದ್ರದ ಕಡೆಯಿಂದ ಬರುವ ಮುಂಗಾರಿನಿಂದ ಮಳೆಗಾಲ ಆರಂಭವಾಗುತ್ತದೆ. ವರ್ಷಕ್ಕೆ ಸರಾಸರಿ ೭೨೨ ಮಿಲಿಮೀಟರ್ ಮಳೆ ಸುರಿಯುತ್ತದೆ. ಮಳೆಯ ಪ್ರಮಾಣ ಅತಿ ಹೆಚ್ಚಿಲ್ಲದಿದ್ದರೂ ಕೆಲವೊಮ್ಮೆ ಪುಣೆ ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡುವುದು ಅಪರೂಪವಲ್ಲ.ಮಳೆಗಾಲದ ಉಷ್ಣಾಂಶ ೨೦ ರಿಂದ ೨೮ ಡಿಗ್ರಿ ಸೆಂಟಿಗ್ರೇಡು ಇರುತ್ತದೆ.

ಅಕ್ಟೋಬರ್ ಸುಮಾರಿಗೆ ಹಗಲಿನ ಉಷ್ಣಾಂಶ ಹೆಚ್ಚಿದ್ದು ರಾತ್ರಿ ತಂಪಾಗುತ್ತದೆ. ನವೆಂಬರಿನಿಂದ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿಯವರೆಗೂ ಇರುತ್ತದೆ. ಪುಣೆ ಪ್ರವಾಸಕ್ಕೆ ಇದು ಪ್ರಶಸ್ತ ಕಾಲ. ಹಗಲು ೨೯ ಡಿಗ್ರಿ ಸೆಂಟಿಗ್ರೇಡಿನಷ್ಟು ಬಿಸಿಯಿದ್ದು, ರಾತ್ರಿ ಇದು ೧೦ ಡಿಗ್ರಿ ಸೆಂಟಿಗ್ರೇಡಿಗಿಂತಲೂ ಕಡಿಮೆಯಾಗುತ್ತದೆ. ಡಿಸೆಂಬರ್, ಜನವರಿಯಲ್ಲಂತೂ ಉಷ್ಣಾಂಶ ೫-೬ ಡಿಗ್ರಿ ಸೆಂಟಿಗ್ರೇಡಿಗೆ ಇಳಿಯುತ್ತದೆ.

ಪುಣೆಯಲ್ಲಿ ಅತಿ ಹೆಚ್ಚು ತಾಪಮಾನ ೪೩.೩ ಡಿಗ್ರಿ ಸೆಂಟಿಗ್ರೇಡು ಏಪ್ರಿಲ್ ೨೦, ೧೯೮೭-೮೮ರಂದು ದಾಖಲಾಗಿತ್ತು. ಅಂತೆಯೇ ಅತಿ ಕಡಿಮೆ ತಾಪಮಾನ ೧.೭ ಡಿಗ್ರಿ ಸೆಂಟಿಗ್ರೇಡು ಜನವರಿ ೧೭ ೧೯೩೫ರಲ್ಲಿ ದಾಖಲಾಗಿತ್ತು. ಈಚೆಗೆ ಅಂದರೆ ೧೯೯೧ರ ಜನವರಿಯಲ್ಲಿ ಉಷ್ಣಾಂಶ ೨.೮ ಡಿಗ್ರಿ ಸೆಂಟಿಗ್ರೇಡಿಗೆ ಕುಸಿದಿತ್ತು.

ಜೀವವೈವಿಧ್ಯ

[ಬದಲಾಯಿಸಿ]

ಪುಣೆ ನಗರದ ೨೫ ಕಿ.ಮೀ. ಆಸುಪಾಸಿನಲ್ಲಿ ಸುಮಾರು ೧,೦೦೦ ಹೂಬಿಡುವ ಸಸ್ಯವರ್ಗವೂ, ೨೦೪ ಚಿಟ್ಟೆಯಂಥಾ ಪ್ರಾಣಿಗಳೂ, ೩೫೦ ಪಕ್ಷಿಗಳೂ, ಮತ್ತು ೬೪ ಸಸ್ತನಿಗಳ ಪ್ರಬೇಧಗಳು ಕಾಣಸಿಗುತ್ತವೆ.

ಉದ್ಯಮ

[ಬದಲಾಯಿಸಿ]

ಮಹಾರಾಷ್ಟ್ರದಲ್ಲಿ ಮುಂಬೈಯನ್ನು ಬಿಟ್ಟರೆ , ಪುಣೆ ಅತಿ ದೊಡ್ಡ ಔದ್ಯಮಿಕ ಕೇಂದ್ರ. ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ತಯಾರಿಸುವ ಬಜಾಜ್ ಆಟೋ, ಭಾರತದಲ್ಲಿಯೇ ಅತಿ ಹೆಚ್ಚು ಪ್ರವಾಸೀ ಮತ್ತು ಔದ್ಯೋಗಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಇವುಗಳ ಕಾರ್ಖಾನೆಗಳಿರುವುದು ಪುಣೆಯಲ್ಲಿ. ಇದಲ್ಲದೆ ಕೈನೆಟಿಕ್, ಡೈಮ್ಲರ್- ಕೈಸ್ಲರ್ , ಫೋರ್ಸ್ ಮೋಟರ್ಸ್ ಇತ್ಯಾದಿ ದೊಡ್ಡ ವಾಹನ ಉದ್ಯಮಗಳಿಗೂ ಪುಣೆ ನೆಲೆಯಾಗಿದೆ.

ಪುಣೆ ಇಂಜಿನಿಯರಿಂಗ್ ಉದ್ಯಮಕ್ಕೂ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಫೋರ್ಜಿಂಗ್ ಕಂಪನಿ - ಭಾರತ್ ಫೋರ್ಜ್, ಕಮಿನ್ಸ್ ಎಂಜಿನ್ಸ್, ಅಲ್ಫಾ ಲಾವಲ್, ಥರ್ಮ್ಯಾಕ್ಸ್, ಸ್ಯಾಂಡ್ವಿಕ್ ಏಶಿಯಾ, ಥೈಸನ್ ಕ್ರುಪ್ (ಮೊದಲಿನ ಬಖಾವ್ ವೂಲ್ಫ್) , ಕೆಎಸ್‍ಬಿ ಪಂಪ್ಸ್, ಫೋರ್ಬ್ಸ್ ಮಾರ್ಶಲ್ ಇವೇ ಮೊದಲಾದ ನಾಮಾಂಕಿತ ಉದ್ಯಮಗಳೂ ಪುಣೆಯಲ್ಲಿವೆ.

ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ನಿರ್ಮಿಸುವ ವರ್ಲ್‍ಪೂಲ್ ಮತ್ತು ಎಲ್.ಜಿ., ಖಾದ್ಯ ಪದಾರ್ಥಗಳನ್ನು ತಯಾರಿಸುವ ಫ್ರಿಟೋ ಲೇಸ್ (ಕೋಕಾ ಕೋಲಾ ಕಂಪನಿ) ಇತ್ಯಾದಿ ಇತರ ಉದ್ಯೋಗಗಳು ಪುಣೆಯಲ್ಲಿವೆ. ಇವಲ್ಲದೆ ಮಧ್ಮ ಮತ್ತು ಲಘು ಉದ್ಯಮಗಳೂ ವಿಪುಲವಾಗಿವೆ.

೧೯೯೦ ದಶಕದಲ್ಲಿ ಪ್ರಾಂಭವಾದ ಹಿಂಜವಾಡಿಯ ರಾಜೀವ ಗಾಂಧಿ ಐ.ಟಿ. ಪಾರ್ಕ್ , ಮಗರಪಟ್ಟಾದ ಸೈಬರ್ ಸಿಟಿ, ತಳವಡೆಯ ಎಮ್.ಐ.ಡಿ.ಸಿ ಸಾಫ್ಟ್‍ವೇರ್ ಪಾರ್ಕ್, ಕಲ್ಯಾಣಿ ನಗರದ ಮೆರಿಸಾಫ್ಟ್ ಐ.ಟಿ. ಪಾರ್ಕ್ ಇವೇ ಮೊದಲಾದವುಗಳಿಂದ ಸಾಫ್ಟ್‍ವೇರ್ ರಂಗದಲ್ಲಿಯೂ ಪುಣೆ ಭರದಿಂದ ಬೆಳೆಯತೊಡಗಿದೆ. ಭಾರತದ ಪ್ರಸಿದ್ಧ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟೀ.ಸಿ.ಎಸ್, ಟೆಕ್ ಮಹೀಂದ್ರ, ಸತ್ಯಮ್, ಐಫ್ಲೆಕ್ಸ್ , ಇವಲ್ಲದೆ ಬಹುರಾಷ್ಟ್ರೀಯ ಕಂಪನಿಗಳಾದ ಐ.ಬಿ.ಎಮ್, ಸೀಮನ್ಸ್, ರೆಡ್ ಹ್ಯಾಟ್, ಏ.ಡಿ.ಎಸ್, ಮೊದಲಾದವುಗಳು ತಮ್ಮ ಕಾರ್ಯಶಾಖೆಗಳನ್ನು ಪುಣೆಯಲ್ಲಿ ತೆರೆದಿವೆ.

ಇಂಗ್ಲೀಷ್ ಮಾತನಾಡಬಲ್ಲ ವಿದ್ಯಾವಂತರ ಸಂಖ್ಯೆ ವಿಪುಲವಾಗಿರುವ ಕಾರಣ ಬಿ.ಪಿ.ಓ. ಉದ್ಯೋಗದಲ್ಲಿಯೂ ಪುಣೆ ಮುಂದಿದೆ. ಕನ್ವರ್ಜಿಸ್, ಡಬ್ಲ್ಯು.ಎನ್.ಎಸ್, ಇನ್ಫೋಸಿಸ್, ವಿಪ್ರೋ ಇತ್ಯಾದಿಗಳು ಪುಣೆಯಲ್ಲಿರು ಈ ಉದ್ಮದ ಕೆಲ ನಾಮವಂತ ಕಂಪನಿಗಳು.

ವಾಣಿಜ್ಯ

[ಬದಲಾಯಿಸಿ]
ಪುಣೆಯ ಖಡ್ಡಾ ಮಾರುಕಟ್ಟೆ

ಮಾರ್ಕೆಟ್ ಯಾರ್ಡ್ ಮತ್ತು ಮಹಾತ್ಮಾ ಫುಲೆ ತರಕಾರಿ ಮಂಡಿ ಕೃಷಿಕರಿಗೆ ಮುಖ್ಯವಾದ ಪೇಟೆಗಳು. ಅಂತೆಯೇ ರವಿವಾರ ಪೇಟೆ ಗ್ರಾಹಕೋಪಯೋಗಿ ವಸ್ತುಗಳ ಸಗಟು ವ್ಯಾಪಾರಕ್ಕೆ. ಬುಧವಾರ ಪೇಟೆ ವಿದ್ಯುತ್ ಹಾಗೂ ಕಂಪ್ಯೂಟರ್ ಉಪಕರಣಗಳು, ಚಳಿಗಾಲದ ದಿರುಸುಗಳು, ಪುಸ್ತಕಗಳು, ಇತ್ಯಾದಿಗಳ ಚಿಲ್ಲರೆ ಹಾಗೂ ಸಗಟು ವ್ಯವಹಾರಕ್ಕೆ ಪ್ರಸಿದ್ಧಿಯಾಗಿವೆ. ಬುಧವಾರ ಪೇಟೆಯ ಅಂಗವಾದ ತುಳಶೀಬಾಗ್ ಮತ್ತು ಡೆಕ್ಕನ್ನಿನ ಹಾಂಗ್ ಕಾಂಗ್ ಲೇನ್ ಮಹಿಳೆಯರಿಗೆ ಪ್ರಿಯವಾದ ದೈನಂದಿನ ವಸ್ತುಗಳ ಚಿಲ್ಲರೆ ವ್ಯಾಪಾರಕೇಂದ್ರಗಳು. ಇದೇ ಭಾಗದ ಅಪ್ಪಾ ಬಳವಂತ ಚೌಕದಲ್ಲಿ ಮಕ್ಕಳ ಶಾಲಾ ಪುಸ್ತಕಗಳ ಮಾರುಕಟ್ಟೆಯಿದೆ. ಲಕ್ಷ್ಮೀ ರೋಡು ಬಟ್ಟೆ ಮತ್ತು ಬಂಗಾರದ ಆಭರಣಗಳಿಗೆ ಪ್ರಸಿದ್ಧವಾಗಿದೆ. ಕ್ಯಾಂಪಿನ ಮಹಾತ್ಮಾ ಗಾಂಧಿ ಮತ್ತು ಈಸ್ಟ್ ರಸ್ತೆಗಳು ಪಾಶ್ಚಿಮಾತ್ಯ ಜೀವನಶಯಲಿಯ ಉಪಕರಣಗಳ ವ್ಯಾಪಾರಕೆಂದ್ರ. ಅಂತೆಯೇ ಜಂಗಲೀ ಮಹಾರಾಜ ರಸ್ತೆ, ಫರ್ಗ್ಯುಸನ್ ರಸ್ತೆ, ಕರ್ವೆ ರಸ್ತೆ ಇವುಗಳಲ್ಲಿ ವಿವಿಧ ವಸ್ತುಗಳ ಚಿಲ್ಲರೆ ವ್ಯಾಪಾರದ ಮಾರುಕಟ್ಟೆಗಳು ಬೆಳೆಯುತ್ತಿವೆ.

ನಗರಾಡಳಿತ

[ಬದಲಾಯಿಸಿ]

ಪುಣೆ ನಗರದ ಆಡಳಿತ ವ್ಯವಸ್ಥೆ ಪುಣೆ ನಗರಪಾಲಿಕೆಯ ಕೈಯಲ್ಲಿದೆ. ಮೂಲಭೂತ ಸೌಕರ್ಯಗಳು ಮತ್ತು ನಗರದ ಆಡಳಿತದ ಮೇಲುಸ್ತುವಾರಿಯನ್ನು ನಗರಪಾಲಿಕೆ ನೋಡಿಕೊಳ್ಳುತ್ತದೆ. ಆಡಳಿತಾತ್ಮಕ ಮುಖ್ಯಸ್ಥರಾದ ಮಹಾರಾಷ್ಟ್ರ ಸರಕಾರದಿಂದ ನೇಮಿತರಾದ ಐ.ಎ.ಎಸ್. ಅಧಿಕಾರಿ, ಪುಣೆಯ ಕಮೀಷನರ್ (ಆಯುಕ್ತ) ಕೈಯಲ್ಲಿ ಬಹುತೇಕ ಅಧಿಕಾರ ಕೇಂದ್ರೀಕೃತವಾಗಿದೆ. ನಗರಪಾಲಿಕೆ ಚುನಾವಣೆಯಲ್ಲಿ ಜನರಿಂದ ಆಯ್ದುಬಂದ ನಗರಸೇವಕರು ( ಕಾರ್ಪೋರೇಟರುಗಳು) ನಗರಪಾಲಿಕೆಯ ಅಂಗವಾಗಿದ್ದು ಇವರ ನೇತೃತ್ವ ಮಹಾಪೌರ (ಮೇಯರ್) ವಹಿಸುತ್ತಾರೆ. ಮೇಯರ್ ಪದವಿಯು ಕೇವಲ ನಾಮಮಾತ್ರದ್ದಾಗಿದ್ದು ಆಡಳಿತಾತ್ಮಕ ಅಧಿಕಾರ ಬಹಳ ಸೀಮಿತವಾಗಿದೆ. ಪುಣೆ ನಗರಪಾಲಿಕೆಯಲ್ಲಿ ೪೮ ಉಪವಿಭಾಗಗಳಿದ್ದು, ಪ್ರತಿಯೊಂದು ಉಪವಿಭಾಗವನ್ನೂ ಸಹಾಯಕ ಆಯುಕ್ತರು ನೋಡಿಕೊಳ್ಳುತ್ತಾರೆ.

ಪೋಲೀಸ್ ವ್ಯವಸ್ಥೆ

[ಬದಲಾಯಿಸಿ]

ಪುಣೆ ನಗರದ ಪೋಲೀಸ್ ಮುಖ್ಯಾಧಿಕಾರಿ (ಉಪಾಯುಕ್ತ) ರಾಜ್ಯದ ಗೃಹ ಮಂತ್ರಿಗಳಿಂದ ನಿಯಮಿಸಲ್ಪಟ್ಟ ಐ.ಪಿ.ಎಸ್. ಅಧಿಕಾರಿಯಾಗಿರುತ್ತಾರೆ. ಇಲ್ಲಯ ಪೋಲೀಸ್ ವ್ಯವಸ್ಥೆಯ ನಿರ್ವಹಣೆ ಮತ್ತು ಜವಾಬುದಾರಿ ರಾಜ್ಯದ ಗೃಹಖಾತೆಯ ಮೇಲಿದೆ.

ಸಂಚಾರ ವ್ಯವಸ್ಥೆ

[ಬದಲಾಯಿಸಿ]
ಪುಣೆಯ ಲಕ್ಷ್ಮಿ ರಸ್ತೆಯಲ್ಲಿ ವಾಹನ ಸಂಚಾರ

ಭಾರತದ ಇತರ ನಗರಗಳೊಂದಿಗೆ ಪುಣೆ ನಗರ ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಚೆನ್ನಾಗಿ ಸಂಪರ್ಕ ಹೊಂದಿದೆ. ಇಲ್ಲಿಯ ವಿಮಾನ ನಿಲ್ದಾಣ ಮೊದಲು ಬರಿಯ ದೇಶೀ ಸ್ಥಾನಗಳ ವಿಮಾನಗಳಿಗಾಗಿ ಇದ್ದದ್ದು, ಈಚೆಗೆ ದುಬೈ ಹಾಗೂ ಸಿಂಗಪುರದಂತಹ ವಿದೇಶೀ ನಗರಗಳಿಗೂ ನೇರ ಸಂಪರ್ಕ ಕಲ್ಪಿಸುತ್ತಿದೆ.

ಹೊಚ್ಚ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಪುಣೆಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಚಾಕಣ ಮತ್ತು ರಾಜಗುರುನಗರ ಗ್ರಾಮಗಳ ನಡುವೆ ಸ್ಥಾಪಿಸುವ ಮಹಾರಾಷ್ಟ್ರ ಸರಕಾರದ ಯೋಜನೆಯಿದೆ. ಇದರ ನಿರ್ವಹಣೆಯ ಜವಾಬ್ದಾರಿ ಮಹಾರಾಷ್ಟ್ರ ರಾಜ್ಯ ಔದ್ಯೋಗಿಕ ಮಹಾಮಂಡಲಕ್ಕೆ ವಹಿಸಲಾಗಿದೆ.

ಪುಣೆ ಮತ್ತು ಶಿವಾಜಿನಗರ ರೈಲ್ವೆ ಸ್ಟೇಷನ್ನುಗಳಲ್ಲಿ ಪ್ರಮುಖವಾದವುಗಳು. ಪುಣೆ ಸ್ಟೇಷನ್ನಿನಲ್ಲಿ ಎಲ್ಲಾ ರೈಲುಗಳೂ ನಿಲ್ಲುತ್ತವೆ. ಪುಣೆ ಸ್ಟೇಷನ್ ಮತ್ತು ಲೋನಾವಳಾ ಮಧ್ಯೆ ಲೋಕಲ್ ರೈಲುಗಳು ಸಂಚರಿಸುತ್ತವೆ. ಇದರ ಮೂಲಕ ಪಿಂಪ್ರಿ, ಖಡಕೀ ಮತ್ತು ಚಿಂಚವಡದಂಥಹಾ ಉಪನಗರಗಳನ್ನು ಪುಣೆ ನಗರದೊಂದಿಗೆ ಬೆಸೆಯಲು ಸಾಧ್ಯವಾಗಿದೆ. ಪುಣೆಯಿಂದ ಲೋನಾವಳಾದವರೆಗೆ ಲೋಕಲ್ ಸಂಚರಿಸಿದರೆ, ಅತ್ತ ಮುಂಬಯಿ ಲೋಕಲುಗಳು ಕರ್ಜತ್ ಸ್ಟೇಷನ್ ವರೆಗೂ ಬರುತ್ತವೆ. ರೈಲ್ವೆ ಆಡಳಿತವು ಲೋನಾವಳಾದ ರೈಲನ್ನು ಕರ್ಜತ್ / ಖೋಪೋಲಿಯವರೆಗೆ ವಿಸ್ತರಿಸುವ ಯೋಜನೆಯನ್ನು ಪರಿಶೀಲಿಸುತ್ತಿದೆ (೨೦೦೭). ಈ ಯೋಜನೆ ಕೈಗೂಡಿದಲ್ಲಿ ಪುಣೆ ಮುಂಬಯಿ ಮಧ್ಯೆ ಎಲ್ಲಾ ನಿಲ್ದಾಣಗಳಿಗೂ ಲೋಕಲಿನ ಸಂಪರ್ಕ ಬಂದಂತಾಗುತ್ತದೆ. ಕರ್ಜತ್ ಪನವೇಲ್ ನಡುವಿನ ರೈಲು ಮಾರ್ಗ ಪೂರ್ತಿಗೊಂಡಿದ್ದು, ಇದರಿಂದಾಗಿ ಮುಂಬಯಿ ಪುಣೆ ನಡುವಿನ ಅಂತರ ೨೯ಕಿ.ಮೀ.ನಷ್ಟು ಕಡಿಮೆಯಾಗಲಿದೆ.

೧೯೯೦ರ ದಶಕದಲ್ಲಿ ಪೂರ್ತಿಗೊಳಿಸಲಾದ ಮುಂಬಯಿ ಪುಣೆ ದ್ರುತಗತಿ ಹೆದ್ದಾರಿ (Express way) ಯಿಂದಾಗಿ ಇವೆರಡು ನಗರಗಳ ನಡುವಿನ ಸಂಚಾರ ಹೆಚ್ಚು ಆರಾಮದಾಯಕವೂ, ಶೀಘ್ರಗತಿಯದೂ ಆಗಿದೆ. ಮುಂಬಯಿ ಪುಣೆ ನಡುವಿನ ಸುಮಾರು ೧೯೨ ಕಿ.ಮೀ. ಅಂತರವನ್ನು ಈಗ ಕೇವಲ ಎರಡೂವರೆಯಿಂದ ಮೂರು ತಾಸಿನಲ್ಲಿ ಕ್ರಮಿಸಬಹುದು. ಮುಂಬಯಿ ಪುಣೆ ನಡುವೆ ಸುಮಾರು ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಬಸ್ಸು ಹೊರಡುತ್ತದೆ. ಸರಕಾರೀ ಮತ್ತು ಖಾಸಗೀ ಬಸ್ಸುಗಳು ಪುಣೆಯಿಂದ ದೂರದ ಬೆಂಗಳೂರು, ಹೈದರಾಬಾದುಗಳಿಗೂ ನೇರ ಸಂಪರ್ಕ ಕಲ್ಪಿಸುತ್ತವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮಹಾರಾಷ್ಟ್ರದ ಮೂಲೆಮೂಲೆಗಳಿಗೂ ಇಲ್ಲಿಂದ ಸಂಚರಿಸುತ್ತವೆ.

೨೦೧೦ರ ಸುಮಾರಿಗೆ ಪುಣೆ ಐ.ಟಿ. ಉದ್ಯೋಗದ ದೊಡ್ಡ ಕೇಂದ್ರವಾಗಿ ಬೆಳೆಯುವ ಲಕ್ಷಣಗಳಿವೆ. ಪುಣೆಯ ನೌಕರಿ ಮಾಡುವವರ ಸಂಖ್ಯೆ ಭರದಿಂದ ಬೆಳೆಯುತ್ತಿದೆ. ಅದರೊಂದಿಗೇ ಕಾರುಗಳು ಮತ್ತು ದ್ವಿಚಕ್ರವಾಹನಗಳ ಸಂಖ್ಯೆಯೂ ಏರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ೨೦೦೫ರಲ್ಲಿ ಇಲ್ಲಿ ೨ ಲಕ್ಷ ಕಾರುಗಳೂ, ೧೦ ಲಕ್ಷ ದ್ವಿಚಕ್ರವಾಹನಗಳೂ ಇದ್ದವೆಂದು ಅಂದಾಜಿದೆ. ಈ ವಾಹನಗಳ ಹೆಚ್ಚಳದಿಂದ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚುಹೆಚ್ಚಾಗುತ್ತಿದೆ. ರಸ್ತೆಗಳ ಅಗಲೀಕರಣ, ಫ್ಲೈ ಓವರುಗಳ ನಿರ್ಮಾಣ ಇವುಗಳು ಯೋಜನೆಯಲ್ಲಿದ್ದರೂ, ಕಾರ್ಯಗತವಾಗಲೂ ವಿಳಂಬವಾಗುತ್ತಿದೆ. ಪಾರ್ಕಿಂಗಿಗೆ ಜಾಗ ಸಿಗುವುದು ದುಸ್ತರವಾಗುತ್ತಿದೆ.

ಪುಣೆಯ ಉಪನಗರಗಳಾದ ಕಲ್ಯಾಣಿನಗರ, ವಿಮಾನನಗರ, ಮಗರಪಟ್ಟಾ, ಪಿಂಪ್ರಿ, ಚಿಂಚವಾಡ, ಬಾಣೇರ್, ವಾಕಡ್, ಔಂಧ್, ಹಿಂಜೆವಾಡಿ, ಬಿಬ್ವೇವಾಡಿ, ವಾನವಡಿ, ನಿಗಡಿ ಇವೆಲ್ಲಾ ಬಿರುಸಿನಿಂದ ಬೆಳೆಯುತ್ತಿವೆ.

ಪಿ.ಎಮ್.ಟಿ ಮತ್ತು ಪಿ.ಸಿ.ಎಮ್.ಟಿ ಇವು ಕ್ರಮವಾಗಿ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ನಗರಪಾಲಿಕೆಗಳು ನಡೆಸುವ ಸಾರಿಗೆ ಸಂಸ್ಥೆಗಳು. ಸಾರ್ವಜನಿಕ ಸಾರಿಕೆ ವ್ಯವಸ್ಥೆಯಿದ್ದರೂ, ಅದು ಏರುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಅಸಮರ್ಥವಾಗಿದೆ.ಇದಲ್ಲದೆ ಆಟೋರಿಕ್ಷಾಗಳೂ ಲಭ್ಯವಿವೆ.

ಜನಜೀವನ

[ಬದಲಾಯಿಸಿ]

೨೦೦೧ರ ಜನಗಣತಿಯ ಪ್ರಕಾರ ಪುಣೆ ನಗರ ಪ್ರದೇಶದ ಜನಸಂಖ್ಯೆ ೪೪,೮೫,೦೦೦. ಇದರಲ್ಲಿ ಪಿಂಪ್ರಿ ಚಿಂಚವಾಡ ಅವಳಿ ನಗರಗಳೂ ಸೇರಿವೆ. ಭರದಿಂದ ಬೆಳೆಯುತ್ತಿರುವ ವಾಹನಗಳು ಮತ್ತು ಸಾಫ್ಟ್‍ವೇರ್ ಉದ್ಯಮಗಳಿಂದಾಗಿ ಪರಪ್ರಾಂತೀಯರ ವಲಸೆಯಾಗುತ್ತಿದ್ದು , ಜನಸಂಖ್ಯೆ ಏರುತ್ತಿದೆ. ೨೦೦೩ರಿಂದ ಕಟ್ಟಡ ಉದ್ಯಮದಲ್ಲಿಯೂ ಪ್ರಗತಿ ಕಾಣುತ್ತಿದೆ. ಜನಸಂಖ್ಯೆಯಲ್ಲಿ ಪುಣೆ ಭಾರತದಲ್ಲಿ ಏಳನೆಯ ಸ್ಥಾನದಲ್ಲಿದೆ. ಪುಣೆಯ ತಲಾ ಉತ್ಪನ್ನ (per capita income) ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಬಡವ-ಶ್ರೀಮಂತರ ನಡುವಿನ ಅಂತರವೂ ಬಹಳ ಕಡಿಮೆಯಿದೆ. ಪುಣೆ ವಾಸಿಗಳಿಗೆ ಪುಣೇಕರ್ ಎಂದು ಸಂಬೋಧಿಸುವುದುಂಟು. ನಗರ ಮುಖ್ಯ ಭಾಷೆ ಮರಾಠಿಯಾಗಿದ್ದು , ಇಂಗ್ಲೀಷ್ , ಕನ್ನಡ, ಹಿಂದಿಗಳೂ ಕೇಳಿಬರುತ್ತವೆ.

ತಿಂಡಿ ತಿನಿಸು

[ಬದಲಾಯಿಸಿ]

ಕಾಕಾ ಹಲವಾಯಿಯವರ ಸಿಹಿ ತಿಂಡಿಗಳು, ಚಿತಳೆ ಬಂಧುರವರ ಬಾಕರವಡಿ, ಅಂಬಾ ಬರ್ಫಿ , ಸುಜಾತಾ ಮತ್ತು ಕಾವರೆ ಇಲ್ಲಿಯ ಮಸ್ತಾನಿ, ಬುಧಾಣಿಯವರ ಆಲೂ ವೇಫರ್ಸ್, ಲಷ್ಮೀನಾರಾಯಣ ಚಿವಡಾ ಇವು ಪುಣೆಯ ವೈಶಿಷ್ಟ್ಯಗಳಲ್ಲಿ ಕೆಲವು. ಜಂಗಲೀ ಮಹಾರಾಜ ರಸ್ತೆ, ಕ್ಯಾಂಪಿನಲ್ಲಿಯ ಮಹಾತ್ಮಾ ಗಾಂಧೀ ಮತ್ತು ಈಸ್ಟ್ ರಸ್ತೆಗಳು, ಫರ್ಗ್ಯುಸನ್ ರಸ್ತೆ, ಇವು ಖಾದ್ಯ ಪ್ರಿಯರ ವಿಶೇಷ ತಾಣಗಳು. ಫರ್ಗ್ಯುಸನ್ ರಸ್ತೆಯ ವೈಶಾಲಿ ಹೋಟೆಲು ಸಾಕಷ್ಟು ಪ್ರಸಿಧ್ದವಾಗಿದೆ. ಅಮೃತತುಲ್ಯ ಎಂಬ ಚಹಾದ ಅಂಗಡಿ ಪುಣೆಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇನ್ನು ಬಾಕೀ ಮಹಾರಾಷ್ಟ್ರೀಯ ನಗರಗಳಂತೆ ಇಲ್ಲಿಯೂ ಮಿಸಳ್, ವಡಾ ಪಾವ್ ಇತ್ಯಾದಿ ಗಲ್ಲಿ ಗಲ್ಲಿಗಳಲ್ಲಿಯೂ ದೊರೆಯುತ್ತದೆ.

ಪುಣೆಯ ಮತ್ತೊಂದು ವೈಶಿಷ್ಟ್ಯವೆಂದರೆ ಡೈನಿಂಗ್ ಹಾಲುಗಳು. ಅಗ್ಗವಾದರೂ "ಅನ್ ಲಿಮಿಟೆದ್" ಊಟ ಇವುಗಳ ಹೆಗ್ಗಳಿಕೆ. ರಸ್ತೆಯ ಕೈಗಾಡಿಗಳಲ್ಲಿ ಸಿಗುವ , ಕಛ್ಛೀ ದಾಬೇಲಿ, ಭೇಳ್ ( ಮಂಡಕ್ಕಿಯ ಪ್ರಕಾರಗಳು), ಪಾಣಿಪುರೀ ಇತ್ಯಾದಿಗಳು ಇಲ್ಲಿ ಪ್ರಸಿದ್ಧವಾಗಿವೆ. ನಗರ ಹಳೆಯ ಪ್ರದೇಶಗಳಲ್ಲಿ ಕೊಲ್ಹಾಪುರೀ ಪದ್ಧತಿಯ ಊಟ ಜನಪ್ರಿಯವಾಗಿದೆ.

ಪ್ರಸಾರಮಾಧ್ಯಮಗಳು

[ಬದಲಾಯಿಸಿ]

ಸಕಾಳ, ಲೋಕಸತ್ತಾ, ಫುಢಾರಿ ಮತ್ತು ಕೇಸರೀ ಮೊದಲಾದ ಮರಾಠೀ ಪತ್ರಿಕೆಗಳೂ, ಇಂಡಿಯನ್ ಎಕ್ಸ್ ಪ್ರೆಸ್ , ಟೈಮ್ಸ್ ಆಫ್ ಇಂಡಿಯಾ ಮತ್ತು ಮಹಾರಾಷ್ಟ್ರ ಹೆರಾಲ್ಡ್ ಮೊದಲಾದ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಜನಪ್ರಿಯ. ಆಕಾಶವಾಣಿ, ರೇಡಿಯೋ ಮಿರ್ಚಿ ಮತ್ತು ಪುಣೆ ವಿದ್ಯಾಪೀಠದವರ ವಿದ್ಯಾವಾಣಿ ಇವುಗಳ ಬಾನುಲಿ ಕೇಂದ್ರಗಳು ಪುಣೆಯಲ್ಲಿ ಕೇಳಲು ಸಿಗುತ್ತವೆ. ಝೀ ಮರಾಠಿ, ಈ ಟಿವಿ ಮರಾಠಿ ಮತ್ತು ಸಹ್ಯಾದ್ರಿ ಇವು ಮರಾಠಿ ವೀಕ್ಷಕರ ಮೆಚ್ಚಿನ ಟಿವಿ ವಾಹಿನಿಗಳು. ಇವಲ್ಲದೆ ಬಾಕೀ ನಗರಗಳಲ್ಲಿಯಂತೆ ಅನೇಕ ಇಂಗ್ಲೀಷ್ , ಹಿಂದಿ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳ ಕೇಬಲ್ ವಾಹಿನಿಗಳೂ ಇಲ್ಲಿ ಲಭ್ಯವಿವೆ.

ಸಂಸ್ಕೃತಿ

[ಬದಲಾಯಿಸಿ]

ಪುಣೆಯನ್ನು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೇ ಪರಿಗಣಿಸಲಾಗಿದೆ. ಪುಣೆಯಲ್ಲಿ ಆಡುವ ಮರಾಠಿ ಭಾಷೆ ಮಾದರಿ ಮರಾಠಿ ಎಂದು ಮನ್ನಿಸಲಾಗುತ್ತದೆ. ರಸಿಕರಾದ ಪುಣೆ ವಾಸಿಗಳಿಗಾಗಿ ವರ್ಷಪೂರ್ತಿ ಸಂಗೀತ, ಸಾಹಿತ್ಯ , ನಾಟಕ ಇತ್ಯಾದಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ.

ಗಣೇಶೋತ್ಸವ

[ಬದಲಾಯಿಸಿ]

೧೮೯೪ರಲ್ಲಿ ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಮಹಾರಾಷ್ಟ್ರದ ಎಲ್ಲೆಡೆಯಲ್ಲಿಯೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರೂ, ಪುಣೆಯಲ್ಲಿ ಈ ಹಬ್ಬದ ಸೊಗಸೇ ವಿಶಿಷ್ಟವಾದದ್ದು. ಭಾದ್ರಪದ ಶುಕ್ಲ ಚತುರ್ಥಿಯಿಂದ (ಸಾಧಾರಣ ಆಗಸ್ಟ್ ಇಲ್ಲ ಸೆಪ್ಟೆಂಬರಿನಲ್ಲಿ ಬರುತ್ತದೆ) ಹಿಡಿದು ಮುಂದಿನ ಹತ್ತು ದಿನಗಳ ತನಕ , ಅಂದರೆ, ಅನಂತ ಚತುರ್ದಶಿಯವರೆಗೆ ಸಂಪೂರ್ಣ ಪುಣೆ ನಗರದಲ್ಲಿ ಹಬ್ಬದ ವಾತಾವರಣವಿರುತ್ತದೆ. ಈ ಉತ್ಸವವನ್ನು ನೋಡಿ ಆನಂದಿಸಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ. ಓಣಿಓಣಿಗಳ್ಲಿಯೂ ಗಣೇಶ ಮಂಡಳಗಳ ಅಬ್ಬರ ಕೇಳಿಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರ ಪ್ರವಾಸೀ ಮಹಾಮಂಡಳವು ಇದೇ ಸಂಧರ್ಭದಲ್ಲಿ ಪುಣೆ ಫೆಸ್ಟಿವಲ್ ಎಂಬ ಹೆಸರಿನಲ್ಲಿ ದೊಡ್ಡ ಮೇಳವನ್ನು ಏರ್ಪಡಿಸುತ್ತದೆ. ಇದರಲ್ಲಿ ಸಂಗೀತ, ನೃತ್ಯ, ನಾಟಕ ಮತ್ತು ಕ್ರೀಡಾ ಪ್ರಕಾರಗಳ ಖ್ಯಾತನಾಮರಿಂದ ಕಾರ್ಯಕ್ರಮಗಳಾಗುತ್ತವೆ. ಅನಂತ ಚತುರ್ದಶಿಯಂದು ವಿಸರ್ಜನೆಯೊಂದಿಗೆ ಈ ಹಬ್ಬ ಮುಕ್ತಾಯಗೊಳ್ಳುತ್ತದೆ. ಅಂದಿನ ಮುಂಜಾನೆಯಿಂದ ಪ್ರಾರಂಭವಾಗುವ ವಿಸರ್ಜನೆಯು ಮಾರನೆ ದಿನ ಮುಂಜಾನೆಯವೆರಗೂ ನಡೆದಿರುತ್ತದೆ.

ಈ ಮೆರವಣಿಗೆಯಲ್ಲಿ ಈ ಐದು ನಿರ್ದಿಷ್ಡ ಗಣಪತಿ ಮಂಡಳಿಗಳಿಗೆ ಮೊದಲ ಪಟ್ಟ ಕೊಡಲಾಗಿದೆ.

  • ಕಸಬಾ ಗಣಪತಿ - ಪುಣೆಯ ಊರದೇವರು
  • ತಾಂದಡೀ ಜೋಗೇಶ್ವರಿ
  • ಗುರುಜಿ ತಾಲೀಮು
  • ತುಳಸೀಬಾಗ್
  • ಕೇಸರೀ ವಾಡಾ

ಪ್ರಾಣ ಪ್ರತಿಷ್ಟಾಪನೆ ಮಾಡಿದ ಮೂರ್ತಿಯನ್ನು ವಿಸರ್ಜಿಸಿ ಉತ್ಸವಮೂರ್ತಿಯನ್ನು ಮರಳಿ ತರುತ್ತಾರೆ. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಪ್ರಾತಿನಿಧಿಕ ಕಲೆಗಳಾದ ಡೋಲು, ಲೇಝಿಮ್ ಇತ್ಯಾದಿಗಳ ಪ್ರದರ್ಶನವನ್ನೂ ನೋಡಬಹುದು. ಅನೇಕ ಶಾಲೆಗಳೂ ತಮ್ಮ ವಿದ್ಯಾರ್ಥಿಗಳಿಂದ ಉತ್ಸಾಹದಿಂದ ಇಂಥಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಸವಾಯಿ ಗಂಧರ್ವ ಸಂಗೀತ ಮಹೋತ್ಸವ

[ಬದಲಾಯಿಸಿ]

ಡಿಸೆಂಬರಿನಲ್ಲಿ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಎಂಬ ದೊಡ್ಡ ಸಮಾರಂಭ ನಡೆಯುತ್ತದೆ. ಮೂರು ರಾತ್ರಿ ನಡೆಯುವ ಈ ಸಮಾರಂಭದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದಿಗ್ಗಜಗಳು ಪಾಲ್ಗೊಳ್ಲುತ್ತಾರೆ. ಸಂಗೀತ ಪ್ರೇಮಿಗಳಿಗೆ ಇದೊಂದು ವಾರ್ಷಿಕ ಹಬ್ಬ.

ರಂಗಭೂಮಿ

[ಬದಲಾಯಿಸಿ]

ಪುಣೆ ಮರಾಠಿ ಬುದ್ಧಿಜೀವಿಗಳ ನಗರವಾಗಿದೆ. ರಂಗಭೂಮಿ ಮರಾಠಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಂಪ್ರದಾಯಿಕ, ಪ್ರಾಯೋಗಿಕ ಅಥವಾ ವ್ಯಾವಸಾಯಿಕ ಯಾವುದೇ ಪೈಕಿಯದಾದರೂ ಪುಣೆಯ ಜನ ಅವನ್ನು ನೋಡಿ ಪ್ರೋತ್ಸಾಹಿಸುತ್ತಾರೆ. ಟಿಳಕ ಸ್ಮಾರಕ ಮಂದಿರ, ಬಾಲಗಂಧರ್ವ ರಂಗಮಂದಿರ, ಭರತ ನಾಟ್ಯ ಮಂದಿರ, ಯಶವಂತರಾವ್ ಚವಾಣ್ ನಾಟ್ಯಗೃಹ, ಸುದರ್ಶನ ರಂಗಮಂಚ ಮತ್ತು ಪಿಂಪ್ರಿ ಚಿಂಚವಡ ನಾಟ್ಯಗೃಹ ಇವು ಮಹತ್ವದ ನಾಟಕಮಂದಿರಗಳು.

ಚಲನಚಿತ್ರರಂಗ

[ಬದಲಾಯಿಸಿ]

ಪುಣೆಯಲ್ಲಿರು ಅನೇಕ ಮಲ್ಟಿಪ್ಲೆಕ್ಸುಗಳು ಹಿಂದಿ, ಮರಾಠಿ ಹಾಗೂ ಹಾಲಿವುಡ್ಡಿನ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಪುಣೆ ನಿಲ್ದಾಣದ ಸಮೀಪದಲ್ಲಿರು ಐನಾಕ್ಸ್, ವಿದ್ಯಾಪೀಠ ರಸ್ತೆಯಲ್ಲಿರುವ ಈ-ಸ್ಕ್ವೆಯರ್ , ಸತಾರಾ ರಸ್ತೆ ಮತ್ತು ಕೋಥರೂಡಿನಲ್ಲುರವ ಸಿಟಿಪ್ರೈಡ್ , ಕಲ್ಯಾಣಿನಗರದ ಗೋಲ್ಡ್ ಅಡ್ಲ್ಯಾಬ್ಸ್ ಮತ್ತು ಆಕುರ್ಡಿಯ ಫೇಮ್ ಗಣೇಶ್ ವಿಷನ್ ಇವು ಕೆಲವು ಖ್ಯಾತ ಚಿತ್ರಮಂದಿರಗಳು.

ಧರ್ಮ ಆಧ್ಯಾತ್ಮ

[ಬದಲಾಯಿಸಿ]

ಚತುಃಶೃಂಗಿ ಮಂದಿರ ನಗರದ ಉತ್ತರ-ಪಶ್ಚಿಮದ ಗುಡ್ಡದ ಇಳಿಜಾರಿನಲ್ಲಿದೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಜನದಡ್ಡಣೆಯಿರುತ್ತದೆ. ನಗರದ ಪರ್ವತಿ ದೇವಸ್ಥಾನವೂ ಪ್ರಸಿದ್ಧವಾಗಿದೆ.

ಪುಣೆಯ ಸಮೀಪದಲ್ಲಿರು ಆಳಂದಿ ಮತ್ತು ದೇಹೂ ಇಲ್ಲಿಯೂ ಪ್ರಸಿದ್ಧ ದೇವಾಲಯಗಳಿವೆ. ಆಳಂದಿಯಲ್ಲಿ ಸಂತ ಜ್ಞಾನೇಶ್ವರನ ಮತ್ತು ದೇಹೂ ಇಲ್ಲಿ ಸಂತ ತುಕಾರಾಮನ ಸಮಾಧಿಗಳಿವೆ. ಪ್ರತಿವರ್ಷ ವಾರಕರಿ ಸಂಪ್ರದಾಯದ ಭಕ್ತರುಗಳು ಇಲ್ಲಿಂದ ಈ ಸಂತರುಗಳ ಪಲ್ಲಕ್ಕಿಗಳನ್ನು ಹೊತ್ತು ಪಂಢರಪುರದವರೆಗೆ ಕಾಲುನಡಿಗೆಯಲ್ಲಿ ಪ್ರವಾಸ ಮಾಡುತ್ತಾರೆ. ಆಷಾಢದ ಏಕಾದಶಿಯಂದು ಈ ಭಕ್ತರುಗಳು ಪಂಢರಪುರದಲ್ಲಿ ಸೇರುತ್ತಾರೆ.

ಪುಣೆಯಲ್ಲಿ ಯಹೂದಿಗಳ (ಬೆನೆ ಇಸ್ರೇಲ್) ದೊಡ್ಡ ಜನವಸತಿಯಿದೆ. ಇಲ್ಲಿರುವ ಓಹೇಲ್ ಡೇವಿಡ್ ಎಂಬ ಇವರ ಸಿನೆಗಾಗ್ (ಯಹೂದಿಗಳ ಪ್ರಾರ್ಥನಾ ಸ್ಥಳ) ಏಶಿಯಾದಲ್ಲಿಯೇ ಅತಿ ದೊಡ್ಡದು. ಪುಣೆ ಮೆಹೆರಬಾಬಾ ಎಂಬ ಸಂತರ ಜನ್ಮಸ್ಥಾನ. ಆಚಾರ್ಯ ರಜನೀಶರ ಆಶ್ರಮ ಪುಣೆಯ ಕೋರೆಗಾಂವ್ ಪಾರ್ಕಿನಲ್ಲಿದೆ. ದೇಶ ವಿದೇಶಗಳ ಪ್ರವಾಸಿಗಳು ಭೇಡಿ ನೀಡುವ ಈ ಆಶ್ರಮದಲ್ಲಿ ಭಕ್ತರಿಗೆ ಬೇಕಾದ ಎಲ್ಲ ಸೌಕರ್ಯಗಳೂ, ಬೃಹತ್ ಧ್ಯಾನಗೃಹವೂ ಸೇರಿದಂತೆ, ಇವೆ.

ಶಿಕ್ಷಣ

[ಬದಲಾಯಿಸಿ]
ಪುಣೆ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡ
ಫೆರ್ಗುಸನ್ ಕಾಲೇಜಿನ ಮುಖ್ಯ ಕಟ್ಟಡ

ಭಾರತದ ಸ್ವಾತಂತ್ರದ ನಂತರ ಪುಣೆ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾಯಿತು. ಪುಣೆ ವಿದ್ಯಾಪೀಠ, ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ (National Chemical Laboratory), ರಾಷ್ಟ್ರೀಯ ಸಂರಕ್ಷಣ ಪ್ರಬೋಧಿನಿ (National Defence Academy) ಈ ಸಂಸ್ಥೆಗಳ ಸ್ಥಾಪನೆಯೂ ಈ ಹೆಸರು ಬರಲಿಕ್ಕೆ ಕಾರಣವಾಯಿತು. ಫರ್ಗ್ಯುಸನ್ ಕಾಲೇಜು, ಸ.ಪ. ಮಹಾವಿದ್ಯಾಲಯ, ಸರಕಾರೀ ಇಂಜಿನಿಯರಿಂಗ್ ಕಾಲೇಜು ಈ ಹಳೆಯ ಸಂಸ್ಥೆಗಳಂತೂ ೧೯೦೦ರಿಂದಲೇ ಪ್ರಸಿದ್ಧವಾಗಿದ್ದವು. ಇವಲ್ಲದೇ ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳೂ ಇಲ್ಲಿದ್ದು ವಿದ್ಯಾಭ್ಯಾಸಕ್ಕೆಂದು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಪುಣೆ ವಾಸಿಗಳೂ ಸಹ ಉಚ್ಚ ಶಿಕ್ಷಣ - ಸಂಶೋಧನೆಯಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದೆಲ್ಲದರಿಂದ, ಹಿಂದೆ ಜವಹರಲಾಲ್ ನೆಹರೂ "ಪೂರ್ವದ ಆಕ್ಸ್‍ಫರ್ಡ್" ಎಂದು ಹೆಸರು ಕೊಟ್ಟದ್ದು ಈಗಲೂ ಅನ್ವರ್ಥವಾಗಿದೆ.

ಪ್ರಾಥಮಿಕ ಮತ್ತು ವಿಶೇಷ ಶಿಕ್ಷಣ

[ಬದಲಾಯಿಸಿ]

ಪುಣೆ ನಗರಪಾಲಿಕೆಯು ಅನೇಕ ಶಾಲೆಗಳನ್ನು ನಡೆಸುತ್ತದೆ. ಆದರೆ ಖಾಸಗೀ ಆಡಳಿತದಲ್ಲಿ ನಡೆಸಲ್ಪಡುವ ಶಾಲೆಗಳು ಜನಪ್ರಿಯವಾಗಿವೆ. ಪುಣೆಯ ಶಾಲೆಗಳಲ್ಲಿಯ ಬಹುತೇಕ ಮಹಾರಾಷ್ಟ್ರ ರಾಜ್ಯ ಸರಕಾರದ ಪಠ್ಯಕ್ರಮವನ್ನು ಅನುಸರಿಸಿದರೂ ಕೇಂದ್ರೀಯ ಪಠ್ಯಕ್ರಮಗಳಾದ ಐ ಸಿ ಎಸ್ ಇ ಮತ್ತು ಸಿ ಬಿ ಎಸ್ ಇ ಯನ್ನು ಅನುಸರಿಸುವ ಶಾಲೆಗಳೂ ಬೇಕಾದಷ್ಟಿವೆ. ಜಪಾನಿ ಭಾಷಾ ಶಿಕ್ಷಣದಲ್ಲಿ ಪುಣೆ ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಪುಣೆ ವಿದ್ಯಾಪೀಠವಷ್ಟೇ ಅಲ್ಲದೆ ಅನೇಕ ಸಂಸ್ಥೆಗಳೂ ಜಪಾನಿ ಭಾಷೆಯ ಶಿಕ್ಷಣವನ್ನು ನೀಡುತ್ತಿವೆ. ಇದಲ್ಲದೆ ಜರ್ಮನ್ (ಮ್ಯಾಕ್ಸ್ ಮ್ಯುಲ್ಲರ್ ಭವನ), ಫ್ರೆಂಚ್ ( ಆಲಿಯಾಂಸ್ ಫ್ರಾಂಸೆ ದ ಪೂನಾ) ಈ ಭಾಷೆಗಳಲ್ಲು ಕಲಿಯುವ ಅವಕಾಶವಿದೆ. ಕೆಲವು ಶಾಲೆಗಳಲ್ಲಿ ಎಂಟನೆಯ ತರಗತಿಯೀಮದಲೇ ರಶಿಯನ್, ಜರ್ಮನ್ ಭಾಷೆಗಳನ್ನು ಕಲಿಯುವ ಸೌಲಭ್ಯವಿದೆ.

ಉಚ್ಚ ಶಿಕ್ಷಣ

[ಬದಲಾಯಿಸಿ]

ಪುಣೆಯ ಬಹುತೇಕ ಕಾಲೇಜುಗಳು ಪುಣೆ ವಿದ್ಯಾಪೀಠದ ಅಧೀನದಲ್ಲಿವೆ. ವಿದ್ಯಾರ್ಥಿಗಳ ಸಂಖ್ಯೆಯ ಪ್ರಕಾರ ಪುಣೆ ವಿದ್ಯಾಪೀಠವು ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಇದಲ್ಲದೇ ಕೆಲವು ಸ್ವಾಯತ್ತ ಮಹಾವಿದ್ಯಾಲಯಗಳೂ ಇಲ್ಲಿವೆ.

ಪುಣೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು

  • ಫರ್ಗ್ಯುಸನ್ ಕಾಲೇಜು
  • ಸರಕಾರೀ ಇಂಜಿನಿಯರಿಂಗ್ ಕಾಲೇಜು
  • ಬಿ.ಜೆ. ಮೆಡಿಕಲ್ ಕಾಲೇಜು
  • ಸಿಂಬಯೋಸಿಸ್
  • ರಾಷ್ಟ್ರೀಯ ವಿಮಾ ಅಕಾಡಮಿ (National Insurance Academy)
  • ನೂತನ ಮಹಾ ವಿದ್ಯಾಲಯ
  • ಬೃಹನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್
  • ಇಂದಿರಾ ಇನ್ಸ್ಟಿಟ್ಯೂಟ್, ವಾಕಡ್
  • ಐ ಎಲ್ ಎಸ್ ವಿಧೀ ಮಹಾವಿದ್ಯಾಲಯ
  • ಸಾಧನಾ ವಿದ್ಯಾಲಯ, ಹಡಪ್ಸರ್
  • ಆಬಾಸಾಹೇಬ್ ಗರವಾರೇ ಮಹಾವಿದ್ಯಾಲಯ
  • ಭಾರತೀ ವಿದ್ಯಾಪೀಠ ನಡೆಸುವ ಇಂಜಿನಿಯರಂಗ್, ಮೆಡಿಕಲ್ ಕಾಲೇಜುಗಳು
  • ಪುಣೆ ವಿದ್ಯಾಪೀಠ ನಡೆಸುವ ಪುಂಬಾ ಕಾಲೇಜು (ಪುರಾತತ್ವ ಮತ್ತು ಭಾಷಾಶಾಸ್ತ್ರ)
  • ನೌರೋಜ್ಜೀ ವಾಡಿಯಾ ಕಾಲೇಜು
  • ಟಿಳಕ ಮಹಾರಾಷ್ಟ್ರ ಮಹಾವಿದ್ಯಾಲಯ ( ಸಂಸ್ಕೃತ)
  • ಸ.ಪ. ಮಹಾವಿದ್ಯಾಲಯ
  • ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಮತ್ತು ಸೋಶಿಯಲ್ ಸೈನ್ಸಸ್

ಪುಣೆಯೊಂದರಲ್ಲಿಯೇ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆದುಕೊಳ್ಳುತ್ತಾರೆ ಎಂದು ಒಂದು ಅಂದಾಜಿದೆ.

ಸಂಶೋಧನಾ ಸಂಸ್ಥೆಗಳು

[ಬದಲಾಯಿಸಿ]

ಪುಣೆ ವಿದ್ಯಾಪೀಠವಲ್ಲದೆ ಅನೇಕ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳೂ ಪುಣೆಯಲ್ಲಿವೆ. ಅವುಗಳಲ್ಲಿ ಕೆಲವೆಂದರೆ

  • ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ
  • ರಾಷ್ಟ್ರೀಯ ರೆಡಿಯೋ ಖಗೋಳಭೌತಶಾಸ್ತ್ರ ಕೇಂದ್ರ (National Centre for Radio Astrophysics)
  • ರಾಷ್ಟ್ರೀಯ ಜೀವಕೋಶ ವಿಜ್ಞಾನ ಕೇಂದ್ರ (National Center for Cell Science)
  • ರಾಷ್ಟ್ರೀಯ ಜಲ ಶಕ್ತಿ ಸಂಶೋಧನಾ ಕೇಂದ್ರ (Central Water and Power Research Station)
  • ಭಾರತೀಯ ಹವಾಮಾನ ಸಂಸ್ಥೆ
  • ಆಟೋಮೋಟಿವ್ ಸಂಶೋಧನಾ ಸಂಸ್ಥೆ
  • ಆರ್.ಜಿ.ಭಂಡಾರ್ಕರ್ ಸಂಶೋಧನಾ ಸಂಸ್ಥೆ

ಮಿಲಿಟರಿ ಶಿಕ್ಷಣ

[ಬದಲಾಯಿಸಿ]

ಮಿಲಿಟರಿ ನಡೆಸುವ ಅನೇಕ ಶಿಕ್ಷಣ / ಸಂಶೋಧನಾ ಸಂಸ್ಥೆಗಳೂ ಇಲ್ಲಿವೆ. ಅವುಗಳೆಂದರೆ

  • ರಾಷ್ಟ್ರೀಯ ಸಂರಕ್ಷಣ ಪ್ರಬೋಧಿನಿ ( NDA – National Defence Academy)
  • ಕಾಲೇಜ್ ಆಫ್ ಮಿಲಿಟರಿ ಎಂಜಿನಿಯರಿಂಗ್
  • ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಟ್ರೈನಿಂಗ್
  • ಸೇನಾ ಮೆಡಿಕಲ್ ಕಾಲೇಜು ( AFMC – Armed Forces Medical College)
  • ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಆರ್ಮಮೆಂಟ್ ಟೆಕ್ನಾಲಜಿ
  • ಆರ್ಮಮೆಂಟ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಎಸ್ತಾಬ್ಲಿಷ್ಮೆಂಟ್
  • ಎಕ್ಸ್‍ಪ್ಲೋಸಿವ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಲ್ಯಾಬೋರೇಟರಿ
  • ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗನೈಸೇಷನ್ (DRDO)
  • ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಕ್ರೀಡೆ

[ಬದಲಾಯಿಸಿ]

ಪುಣೆಯ ಅತಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಇದಲ್ಲದೆ ಹಾಕಿ, ಫುಟ್ಬಾಲ್, ಟೆನಿಸ್ ಮತ್ತು ಕಬಡ್ಡಿ ಸಹಾ ಸಾಕಷ್ಟು ಲೋಕಪ್ರಿಯವಾಗಿವೆ. ಪ್ರತಿವರ್ಷ ಪುಣೆಯಲ್ಲಿ ಅಂತರರಾಷ್ಟ್ರೀಯ ಮೆರಥಾನ್ ಓಟದ ಸ್ಪರ್ಧೆ ಏರ್ಪಡಿಸುತ್ತಾರೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನಿನ ಕೇಂದ್ರ ಕಛೇರಿ ಇಲ್ಲಿಯ ನೆಹರೂ ಸ್ಟೇಡಿಯಮ್ಮಿನಲ್ಲಿದೆ. ಡೆಕ್ಕನ್ ಜಮಖಾನಾದಲ್ಲಿ ಅನೇಕ ಕ್ರೀಡೆಗಳ ಸೌಲಭ್ಯವಿದೆ. ೧೯೯೪ರ ರಾಷ್ಟ್ರೀಯ ಕ್ರೀಡೆಗಳು ನಡೆದದ್ದು ಬಾಲೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕುಲದಲ್ಲಿ. ಇದೇ ಸಂಕುಲದಲ್ಲಿ ೨೦೦೮ರ ಕಾಮನ್ವೆಲ್ತ್ ಕ್ರೀಡೆಗಳು ಜರುಗಲಿವೆ.

ಪುಣೆಯ ಕೆಲವು ಖ್ಯಾತನಾಮ ಕ್ರೀಡಾ ಪಟುಗಳೆಂದರೆ ಹೇಮಂತ ಮತ್ತು ಹೃಷೀಕೇಷ ಕಾನೇಟಕರ್, ರಾಧಿಕಾ ತುಳಪುಳೆ ಮತ್ತು ನಿತಿನ್ ಕೀರ್ತನೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನಿನ ಅಧ್ಯಕ್ಷ ಸುರೇಶ್ ಕಲ್ಮಾಡಿ ಪುಣೆಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯ.

ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]
ಆಗಾಖಾನ್ ಅರಮನೆ

ಪುಣೆಯ ಮುಖ್ಯ ಪ್ರವಾಸಿ ತಾಣಗಳೆಂದರೆ ಪರ್ವತೀ, ಸಿಂಹಗಡ ಕೋಟೆ, ಶನಿವಾರ ವಾಡೆ, ಖಡಕವಾಸಲಾ ಆಣೆಕಟ್ಟು, ರಾಜಾ ದಿನಕರ್ ಕೇಳ್ಕರ್ ಸಂಗ್ರಹಾಲಯ, ಪಾನಶೇಟ್ ಆಣೆಕಟ್ಟು, ಬಾಲಗಂಧರ್ವ ರಂಗಮಂದಿರ, ಲಾಲ್ ಮಹಲ್, ಆಗಾಖಾನ್ ಅರಮನೆ,

ಪುಣೆಯ ಅವಳಿ ನಗರಗಳು

[ಬದಲಾಯಿಸಿ]

ಈ ಕೆಳಕಂಡ ನಗರಗಳನ್ನು ಪುಣೆಯ ಅವಳಿ ನಗರಗಳೆಂದು ಪರಿಗಣಿಸಲಾಗುತ್ತದೆ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಪುಣೆ&oldid=1183918" ಇಂದ ಪಡೆಯಲ್ಪಟ್ಟಿದೆ