ಜಹಗೀರು
ಜಹಗೀರು ಎಂದರೆ ಪ್ರಭುತ್ವ ವಿಧಿಸುತ್ತಿದ್ದ ಭೂಕಂದಾಯದಿಂದ ಮನ್ನಾ ಮಾಡಲ್ಪಟ್ಟ ಹಿಡುವಳಿ; ಒಬ್ಬ ವ್ಯಕ್ತಿ ರಾಜ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಕೊಡುತ್ತಿದ್ದ ಗ್ರಾಮದ ಅಥವಾ ಜಮೀನಿನ ಬಳುವಳಿ. ಇದನ್ನು ಜಾಗೀರ್ ಎಂದೂ ಕರೆಯುವುದುಂಟು. ಇದರಲ್ಲಿ ಪೈಗಾ, ಮುಕ್ತಾ ಗ್ರಾಮಗಳು, ಅಗ್ರಹಾರ ಗ್ರಾಮಗಳು, ಉಂಬಳಿಗಳು ಎಲ್ಲವೂ ಅಂತರ್ಗತವಾಗಿವೆ. ಜಹಗೀರಿನ ಹಿಡುವಳಿದಾರನೇ ಜಹಗೀರುದಾರ ಅಥವಾ ಜಾಗೀರ್‍ದಾರ್.
ಜಹಗೀರು ಪದ್ಧತಿ ಉಗಮ ಹೊಂದಿದ ಕಾಲದ ಬಗ್ಗೆ ನಿರ್ಣಯ ಕಷ್ಟ. ನಿರಂಕುಶ ಪ್ರಭುತ್ವಗಳು ಆರಂಭವಾದಾಗಿನಿಂದಲೂ ಈ ಪದ್ಧತಿ ಬೆಳೆದುಕೊಂಡು ಬಂದಿದೆಯೆನ್ನಬಹುದು. ಸ್ಯಾಕ್ಸನರು ಇಂಗ್ಲೆಂಡಿನ ಸ್ಥಳೀಯರನ್ನು ಯುದ್ಧದಲ್ಲಿ ಸೋಲಿಸಿ ಅವರ ಭೂಮಿಯನ್ನು ವಶಪಡಿಸಿಕೊಂಡ ಅನಂತರ ತಾವು ಗೆದ್ದ ನೆಲದಲ್ಲಿ ಒಂದು ಪಾಲನ್ನು ತಮ್ಮ ಕಡೆಯ ಯೋಧರಿಗೆ ಕೊಡುತ್ತಿದ್ದರೆಂಬುದಕ್ಕೆ ಉಲ್ಲೇಖವಿದೆ. ತಾವು ಆಕ್ರಮಿಸಿದ ಗ್ರಾಮಗಳ ಹುಟ್ಟುವಳಿಯನ್ನು ಅವರು ರಾಜನ ನಂಬಿಕಸ್ತನಾದ ಮುಖ್ಯ ಯೋಧನಿಗೆ ಕೊಡುತ್ತಿದ್ದರು. ಇದಕ್ಕೆ ಪ್ರತಿಫಲವಾಗಿ ಆತ ತನ್ನ ದೊರೆಗೆ ವಿಧೇಯನಾಗಿದ್ದುಕೊಂಡು, ರಾಜನಿಗೆ ಯುದ್ಧ ಮಾಡಲು ತಕ್ಕ ಸೈನ್ಯ ಸರಂಜಾಮುಗಳನ್ನು ಒದಗಿಸುತ್ತಿದ್ದ. ಈ ರೀತಿ ಇಂಗ್ಲೆಂಡಿನಲ್ಲಿ ಸ್ಯಾಕ್ಸನರ ಕಾಲದಿಂದಲೂ ಭೂಮಿಯನ್ನು ಮಾನ್ಯಮಾಡಿಕೊಡುವ ಪದ್ಧತಿ ರೂಢಿಗೆ ಬಂತು. ಫ್ರಾನ್ಸಿನಲ್ಲೂ ಈ ಪದ್ಧತಿ ಐದನೆಯ ಶತಮಾನದಿಂದಲೂ ಬಳಕೆಯಲ್ಲಿತ್ತೆಂಬುದಕ್ಕೆ ಪುರಾವೆಗಳಿವೆ.
ಭಾರತದಲ್ಲಿ ಇನಾಂ ಹಾಗೂ ದತ್ತಿ ಕೊಡುವ ಪದ್ಧತಿ ಅತ್ಯಂತ ಪ್ರಾಚೀನವಾದ್ದು. ದಿಲ್ಲಿಯಲ್ಲಿ ಮುಸ್ಲಿಂ ದೊರೆಗಳು ಆಳಲು ಪ್ರಾರಂಭಿಸಿದ ಮೇಲೆ, ಮೊದಲೇ ರೂಢಿಯಲ್ಲಿದ್ದ ಇನಾಂ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದರು. ಅವರು ಕೊಟ್ಟ ಇನಾಂಗಳನ್ನು ಜಹಗೀರುಗಳೆಂದು ಕರೆಯುತ್ತಿದ್ದರು. ಅನಂತರ ಬಂದ ಬ್ರಿಟಿಷರೂ ಇದನ್ನು ಅನುಸರಿಸಿದರು. ಈಸ್ಟ್ ಇಂಡಿಯ ಕಂಪನಿಯ ಆಡಳಿತದಲ್ಲಿ ಅನೇಕ ಜಹಗೀರುಗಳನ್ನು ಕೊಡಲಾಯಿತು. ಅನಂತರ ಕಂಪನಿಯ ನಿರ್ದೇಶಕರ ಆದೇಶದ ಮೇರೆಗೆ ಈ ಪದ್ಧತಿಯನ್ನು ನಿಲ್ಲಿಸಲಾಯಿತು.
ವ್ಯಕ್ತಿಗಳಿಗೆ ಅಲ್ಲದೆ, ಧರ್ಮಕಾರ್ಯಗಳು ನಿರಂತರವಾಗಿ ನಡೆಯಲೆಂಬ ಉದ್ದೇಶದಿಂದ ದೇವಸ್ಥಾನಗಳಿಗೆ, ಮಸೀದಿಗಳಿಗೆ ಜಹಗೀರುಗಳನ್ನು ಹಾಕಿ ಕೊಡುತ್ತಿದ್ದದ್ದುಂಟು. ಸನ್ನದು, ನಿರೂಪ, ಮುಂತಕಾಬ್ ಅಥವಾ ಅಂಥ ಇತರ ಹಕ್ಕುಪತ್ರಗಳ ಮೂಲಕ ಜಹಗೀರು ಜಾರಿಗೆ ಬರುತ್ತಿತ್ತು. ಜಾಗೀರ್‍ದಾರರು ದೊರೆಯ ರಾಜಕೀಯ ಪ್ರತಿನಿಧಿಗಳಂತೆ ಇದ್ದು ಜಹಗೀರು ಸುವ್ಯವಸ್ಥಿತವಾಗಿರುವಂತೆ ಶ್ರಮಿಸುತ್ತಿದ್ದರು.
ಜಹಗೀರದಾರರ ಹಕ್ಕುಬಾಧ್ಯತೆಗಳು
[ಬದಲಾಯಿಸಿ]ಸನ್ನದು ಹಾಗೂ ನಿರೂಪಗಳಲ್ಲಿ ಇದರ ಹಕ್ಕುಬಾಧ್ಯತೆಗಳನ್ನು ನಿರ್ದಿಷ್ಟವಾಗಿ ಸೂಚಿಸಲಾಗುತ್ತಿತ್ತು. ತಮ್ಮ ಅಧೀನದ ಗ್ರಾಮಗಳಲ್ಲಿ ಗೇಣಿದಾರರಿಂದ ಭೂಕಂದಾಯವನ್ನು ವಸೂಲಿ ಮಾಡುವ ಹಕ್ಕು ಜಾಗೀರ್ ದಾರರಿಗೆ ಇತ್ತು. ಅಲ್ಲದೆ ಅಬ್ಕಾರಿ, ಅರಣ್ಯ ಮುಂತಾದ ಬಾಬ್ತುಗಳಿಂದ ಬರುತ್ತಿದ್ದ ಉತ್ಪನ್ನವನ್ನು, ಹಕ್ಕುಪತ್ರಗಳ ಒಕ್ಕಣೆಗೆ ಒಳಪಟ್ಟು, ಪಡೆದುಕೊಳ್ಳುವ ಅಧಿಕಾರವೂ ಇತ್ತು. ಭೂಕಂದಾಯದಲ್ಲಿ ಒಂದು ಕನಿಷ್ಠಾಂಶವನ್ನು ರಾಜ್ಯಕ್ಕೆ ಕೊಡಬೇಕೆಂಬ ವಿಧಿ ಕೆಲವು ಜಹಗೀರುಗಳಲ್ಲಿ ಇರುತ್ತಿದ್ದುದುಂಟು. ಜಹಗೀರನ್ನು ಯಾವುದೇ ರೀತಿಯಲ್ಲಿ ಪರಭಾರೆ ಮಾಡುವ ಅಧಿಕಾರವೂ ಜಾಗೀರ್‍ದಾರನಿಗೆ ಇರುತ್ತಿತ್ತು. ಕೆಲವು ಜಾಗೀರ್‍ದಾರರು ಧಾರ್ಮಿಕ ಕಾರ್ಯಗಳಿಗೆ ದತ್ತಿಗಳನ್ನು ಬಿಟ್ಟಿರುವುದು ಅವರು ತಮ್ಮ ಜಹಗೀರಿಯಲ್ಲಿ ಸರ್ವಸ್ವತಂತ್ರರಾಗಿದ್ದರೆಂಬ ಅಂಶವನ್ನು ಪುಷ್ಟೀಕರಿಸುತ್ತದೆ.
ಜಹಗೀರಿಗೆ ಒಳಪಟ್ಟ ಗ್ರಾಮಗಳಲ್ಲಿ ಶಿಸ್ತು ಹಾಗೂ ಶಾಂತಿಪಾಲನೆ ಇವರ ಕರ್ತವ್ಯವಾಗಿತ್ತು. ಜಹಗೀರಿನ ಗೇಣಿದಾರಿಕೆಯಲ್ಲಿ ವ್ಯಾಜ್ಯವುಂಟಾದರೆ ಇವರದೇ ಅಂತಿಮ ತೀರ್ಮಾನ. ಜಹಗೀರಿಗೆ ಸಂಬಂಧಪಟ್ಟ ಗೇಣಿದಾರರು ತಾವು ರೂಢಿಸುತ್ತಿದ್ದ ಭೂಮಿಯ ವಿವರ, ಅವರು ಕೊಡಬೇಕಾಗಿದ್ದ ಭೂಗಂದಾಯದ ಮೊತ್ತ ಇವೆಲ್ಲವನ್ನೂ ಖಾತೆಯ ರೂಪದಲ್ಲಿ ವ್ಯವಸ್ಥಿತ ರೀತಿಯಲ್ಲಿ ಇಡಬೇಕಾಗಿತ್ತು. ರಾಜ್ಯಕ್ಕೆ ಯುದ್ಧವೇ ಮುಂತಾದ ವಿಪತ್ತು ಬಂದಾಗ ಸೈನ್ಯಬಲವನ್ನು ಕೂಡಿಸುವುದು, ಯುದ್ಧದಲ್ಲಿ ರಾಜನಿಗೆ ಎಲ್ಲ ರೀತಿಯ ಸಹಕಾರ ನೀಡುವುದು ಜಹಗೀರಿನ ಕರ್ತವ್ಯವಾಗಿತ್ತು.
ಜಹಗೀರುಗಳು ವಂಶಪಾರಂಪರ್ಯವಾಗಿ ನಡೆದು ಬರುತ್ತಿದ್ದವು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ, ಜಾಗೀರ್‍ದಾರ ನಿಸ್ಸಂತಾನನಾಗಿ ನಿಧನ ಹೊಂದಿದಾಗ ಅಥವಾ ಜಾಗೀರಿನಿಂದ ದೊರೆಗೆ ಸಲ್ಲಬೇಕಾದ ಆದಾಯ ಬಾರದೆ ಇದ್ದ ಪಕ್ಷದಲ್ಲಿ ದೊರೆ ಅದನ್ನು ವಾಪಸು ಪಡೆಯುತ್ತಿದ್ದ. ದೊರೆಗೆ ಕೊಡಬೇಕಾದ ಆದಾಯ ಸಲ್ಲಿಸಿ ಅದನ್ನು ಮರಳಿ ಪಡೆಯಬಹುದಿತ್ತು. ಜಹಗೀರ್‍ದಾರ ನಿಸ್ಸಂತಾನನಾಗಿ ಮರಣ ಹೊಂದಿದಾಗ, ಮೂಲ ಜಹಗೀರ್‍ದಾರರ ವಂಶಸ್ಥರಿಗೆ ಹೊಸ ಸನ್ನದು ಕೊಟ್ಟರೆ ಮಾತ್ರ ಜಹಗೀರು ಮುಂದುವರೆಯುತ್ತಿತ್ತು.
ಕಾಲಕ್ರಮದಲ್ಲಿ ಈ ಏರ್ಪಾಡಿನಲ್ಲಿ ಶಿಥಿಲತೆ ಉಂಟಾಗಿ ಕೆಲವು ಅಕ್ರಮ ವ್ಯವಹಾರಗಳು ನಡೆಯಲಾರಂಭಿಸಿದುವು. ಪರಿಸ್ಥಿತಿ ತೀರ ಹದಗೆಟ್ಟಾಗ ಬ್ರಿಟಿಷ್ ಸರ್ಕಾರ 1852ರಲ್ಲಿ ಇನಾಂ ಆಯೋಗವನ್ನು ರಚಿಸಿತು. ಆ ಆಯೋಗ ಕೂಲಂಕಷವಾಗಿ ವಿಚಾರಣೆ ನಡೆಸಿ ಈ ಅಕ್ರಮಗಳನ್ನು ಸರಿಪಡಿಸಿ ಕೆಲವು ನಿಬಂಧನೆಗಳನ್ನು ಸೂಚಿಸಿತು.
ಜಹಗೀರಿನ ರದ್ದು
[ಬದಲಾಯಿಸಿ]ಭಾರತ ಸ್ವತಂತ್ರವಾದ ಮೇಲೆ, ಸರ್ಕಾರ ಮತ್ತು ಉಳುವವರ ಮಧ್ಯವರ್ತಿಗಳನ್ನು ಕೊನೆಗಾಣಿಸಲು ಸರ್ಕಾರ ನಿರ್ಧರಿಸಿತು. ಉಳುವವನಿಗೇ ಭೂಮಿ ಎಂಬ ಘೋಷಣೆಯನ್ನು ತತ್ತ್ವಶಃ ಅಂಗೀಕರಿಸಿ ಕೆಲವು ರಾಜ್ಯ ಸರ್ಕಾರಗಳು ಶಾಸನಗಳನ್ನು ರಚಿಸಿದುವು. ಜಹಗೀರುಗಳನ್ನು ರದ್ದುಗೊಳಿಸಿ ಅವುಗಳ ಒಡೆಯರಿಗೆ ಪರಿಹಾರ ಧನ ಕೊಡಲಾಯಿತು. ಜಾಗೀರಿನಲ್ಲಿದ್ದ ಜಾಗೀರ್‍ದಾರರ ಸ್ವಂತ ಆಸ್ತಿಗಳನ್ನು ಬಿಟ್ಟು ಉಳಿದವೆಲ್ಲವೂ ಸರ್ಕಾರದ ಅಧೀನಕ್ಕೆ ಬಂತು. ಗೇಣಿದಾರರಿಗೂ ಸರ್ಕಾರಕ್ಕೂ ನೇರ ಸಂಪರ್ಕ ಏರ್ಪಟ್ಟಿತು. ಜಾಗೀರ್‍ದಾರರಲ್ಲಿದ್ದ ನೌಕರರಿಗೆ ವಿಶೇಷ ರಿಯಾಯಿತಿಗಳನ್ನು ತೋರಿಸಿ, ಸಂದರ್ಭಾನುಸಾರವಾಗಿ ಕೆಲವರಿಗೆ ನೌಕರಿ, ಪೆನ್‍ಷನ್, ಗ್ರಾಚುಯಿಟಿ ಇತ್ಯಾದಿಗಳನ್ನು ಸರ್ಕಾರ ಕೊಟ್ಟಿತು.