ವಿಷಯಕ್ಕೆ ಹೋಗು

ಎಸ್.ಕೆ.ಕರೀಂಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್.ಕೆ.ಕರೀಂಖಾನ್
240 × 360
ಜನನ1912
ಮರಣಜುಲೈ 29, 2006
ವೃತ್ತಿ(ಗಳು)ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ಪತ್ರಕರ್ತ, ಜಾನಪದ ತಜ್ಞ, ಗೀತರಚನಕಾರ, ಇತ್ಯಾದಿ
ಸಕ್ರಿಯ ವರ್ಷಗಳು1912–2006
Titleಜಾನಪದ ಜಂಗಮ, ಜಾನಪದ ಗಾರುಡಿಗ, ಜಾನಪದ ಭೀಷ್ಮ, ಮಲೆನಾಡ ಗಾಂಧಿ, ಕನ್ನಡ ಸಂತ

ಎಸ್.ಕೆ.ಕರೀಂಖಾನ್ ಕರ್ನಾಟಕದ ಖ್ಯಾತ ಜಾನಪದ ತಜ್ಞ ಹಾಗು ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಹಿರಿಯ ತಲೆಮಾರಿನ ಜಾನಪದ ವಿದ್ವಾಂಸ, ಗೀತರಚನಕಾರ. []

ಎಸ್.ಕೆ.ಕರೀಂಖಾನ್ ಅವರ ಜನ್ಮಸ್ಥಳ ಹಾಸನ ಜಿಲ್ಲೆಯ ಸಕಲೇಶಪುರ.

ತಂದೆ ಆಫ್ಘಾನಿಸ್ಥಾನದ ಕಾಬೂಲ್‌ನ ವೀರಯೋಧ ರೆಹಮಾನ್‌ ಖಾನ್‌ ಹಾಗೂ ತಾಯಿ ಸೌದಿ ಅರೇಬಿಯಾ ಮೂಲದ ಜೈನಬಿ. ಈ ದಂಪತಿಯ ಪುತ್ರರಾದ ಕರೀಂಖಾನ್‌ ಅವರು ಓದಿದ್ದು ಮಾತ್ರ ಕೇವಲ ೮ನೇ ತರಗತಿವರೆಗೆ. ಆಚಂಗಿ ನಾರಾಯಣಶಾಸ್ತ್ರಿಯ ಶಿಷ್ಯರಾಗಿ ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಬಗ್ಗೆ ಪಾಂಡಿತ್ಯ ಸಿದ್ದಿಸಿಕೊಂಡರು. ಇಲ್ಲಿಂದ ಆರಂಭವಾದ ಅವರ ಜಾನಪದ ಸಾಹಿತ್ಯ ಕೃಷಿ ಅವರ ಹೆಸರನ್ನು ಮೇರು ಎತ್ತರಕ್ಕೆ ಕೊಂಡೊಯ್ದಿತು.ಉರ್ದು ಮನೆಮಾತಾಗಿದ್ದರೂ ಕರೀಂಖಾನರು ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದರು. ಇವರು ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದವರಾಗಿದ್ದಾರೆ. ಚಾರಿತ್ರಿಕ ಸಂಗತಿಗಳನ್ನು ಕುರಿತಂತೆ ನಿಂತಲ್ಲಿಯೇ ಮಾಹಿತಿ ನೀಡುವ ಪ್ರತಿಭಾವಂತರು. ಮೂಲತಃ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣು ಪುರಾಣಗಳನ್ನು ಬಲ್ಲವರಾಗಿದ್ದಾರೆ.

ಸಾಹಿತ್ಯ ಸೇವೆ

[ಬದಲಾಯಿಸಿ]

ತೆಲುಗಿನ ಪೋತನನ ಭಾಗವತವನ್ನು ನಾಟಕರೂಪಕ್ಕೆ ತರುವ ಪ್ರಯತ್ನದಲ್ಲೂ ಇವರು ತೊಡಗಿದ್ದರು. ಉರ್ದು ಸಾಹಿತ್ಯದ ಘಾಲಿಬ್, ಇಕ್ಬಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಇವರು ಹಿಂದು ಮುಸ್ಲಿಂ ಏಕತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ನಿವಾರ (ಉರ್ದುವಿನಿಂದ ಅನುವಾದಿತ ಕಥೆಗಳು), ನೀಹಾರ (ಚಾರಿತ್ರಿಕ ಕಥಾಸಂಕಲನ) ಬಲಿದಾನಿ ಹುಸೇನ್ ಎಂಬುದು ಚಾರಿತ್ರಿಕ ಕಾದಂಬರಿ, ಮಾತೃಶಾಪ ಪೌರಾಣಿಕ ಕಾದಂಬರಿ. ಇವಲ್ಲದೆ ಇವರು ನಿರ್ದೋಷಿ, ಶ್ರೀ ಕೃಷ್ಣಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭು ಮಾಗಡಿ ಕೆಂಪೇಗೌಡ ಮೊದಲಾದ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ.

ಚಿತ್ರಗೀತೆಗಳಲ್ಲಿ ಆಧ್ಯಾತ್ಮಿಕತೆ ಬಿಂಬಿಸುವ ತಮ್ಮ ಗೀತೆಗಳ ಮೂಲಕ ಕಪ್ಪು-ಬಿಳುಪಿನ ಕನ್ನಡ ಚಿತ್ರರಂಗದ ಕಾಲದಲ್ಲಿ ತಮ್ಮ ಕೊಡುಗೆಯನ್ನು ದಾಖಲಿಸಿದ್ದರು. ಕರೀಂಖಾನ್‌ ಅವರಿಗೆ ಯಾವತ್ತೂ ಕ್ಷೇತ್ರಗಳ ಗಡಿ ಅಡ್ಡಿಯಾಗಲಿಲ್ಲ. ಪತ್ರಿಕೋದ್ಯಮದಲ್ಲೂ ತಮ್ಮ ಹೆಜ್ಜೆ ಗುರುತು ದಾಖಲಿಸಿದರು. ಧಾರವಾಡದ ಲೋಕಮಿತ್ರ, ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರಾಗಿ ದುಡಿದರು. ಇದಕ್ಕೆ ಮುನ್ನ ರಾಯಲ್‌ ಇಂಡಿಯನ್‌ ನೇವಿಯಲ್ಲಿ ನೌಕರಿ ಮಾಡಿದ್ದರು. ಅಜ್ಞಾತ ಕವಿಗಳ ನೂರಾರು ಹಾಡುಗಳು ಕಳೆದು ಹೋಗಬಾರದೆಂದು ಅವುಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅದಕ್ಕಾಗಿ ಅವರು ಸಾಕಷ್ಟು ಕಷ್ಟಪಟ್ಟರು. ಅದಾಗ್ಯೂ, ಸ್ವತಃ ಕರೀಂಖಾನ್‌ ಅವರ ನೂರಾರು ಹಸ್ತಪ್ರತಿಗಳು ಪ್ರಕಟವಾಗಲಿಲ್ಲ. ಅವರ ಅಲೆಮಾರಿ ಬದುಕಿನಲ್ಲಿ ಅವು ಕಳೆದುಹೋದವು ಎಂದು ತಿಳಿದುಬಂದಿದೆ.

ಜಾನಪದ ತಜ್ಞ

[ಬದಲಾಯಿಸಿ]

ಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿ ತಿರುಗಿ ನೂರಾರು ಜಾನಪದ ಗೀತೆಗಳನ್ನು ಸಂಗ್ರಹಿಸಿದ ಕರೀಂಖಾನ್ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು ೮ ಸಾವಿರ ಕಿ.ಮೀ. ದೂರವನ್ನು ಸುತ್ತಿ ಜಾನಪದ ಪ್ರದರ್ಶನ ಕಲೆಗಳ ಕುರಿತು ೨೪೦ ಗಂಟೆಗಳ ಅವಧಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಇವರ ಸೇವೆಯನ್ನು ಗುರುತಿಸಿ ಇವರನ್ನು ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆಗ ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದಾಗ ಮನನೊಂದ ಕರೀಂಖಾನ್ ನೇಮಕಾದೇಶ ಕೈ ಸೇರುವ ಮೊದಲೇ ರಾಜೀನಾಮೆ ಪ್ರಕಟಿಸಿಬಿಟ್ಟರು (1990). ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರದು ಅಪರೂಪದ ವ್ಯಕ್ತಿತ್ವ. ಅನಂತರ ಸರ್ಕಾರ ಇವರ ಮನ ಒಲಿಸಿ ಅದಿsಕಾರ ಸ್ವೀಕರಿಸುವಂತೆ ಮಾಡಿತು. ಜಾನಪದ ಕ್ಷೇತ್ರದ ಬೆಳೆವಣಿಗೆಗೆ ಇವರು ಅಪಾರವಾಗಿ ದುಡಿದರು. ಗಿರಿಜನ ಮತ್ತು ಬುಡಕಟ್ಟು ಜನಾಂಗದ ಸಮಗ್ರ ವೀಡಿಯೋ ಚಿತ್ರೀಕರಣ ಕಾರ್ಯವನ್ನು ಕೈಗೆತ್ತಿಕೊಂಡರು. ಇದರಿಂದ ಕಣ್ಮರೆಯಾಗುವಂತಿದ್ದ ಸಂಸ್ಕೃತಿಯೊಂದು ಉಳಿಯುವಂತಾಯಿತು. ಚಲನಚಿತ್ರರಂಗದ ನಿಕಟ ಪರಿಚಯವಿದ್ದುದರಿಂದ ಮತ್ತು ಸ್ವತಃ ಜನಪದ ಗಾಯಕರಾಗಿದ್ದುದರಿಂದ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಪ್ರದರ್ಶನ ಕಲೆಗಳ ವಿಷಯದಲ್ಲಿ ವಿಶೇಷ ಗಮನ ಹರಿಸಿದರು. ನಾಡಿನಾದ್ಯಂತ ಜನಪದ ಕಲಾ ಪ್ರದರ್ಶನಗಳನ್ನೇರ್ಪಡಿಸಿ ಕಲಾವಿದರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಶಿವಮೊಗ್ಗ ಜಿಲ್ಲೆಯ ಮೇಘಾನೆ ಎಂಬ ಬೆಟ್ಟದ ತುದಿಯಲ್ಲಿ ವಾಸಿಸುತ್ತಿರುವ ಕುಣುಬಿಗೊಂಡ ಎಂಬ ಬುಡಕಟ್ಟು ಜನಾಂಗದ ಅಧ್ಯಯನ ಮಾಡಲು ಕಾಲ್ನಡಿಗೆಯ ಕಾರ್ಯಕ್ರಮ ಹಮ್ಮಿಕೊಂಡರು. ಹಸಲರು, ಹಾಲಕ್ಕಿಗಳು, ಸಿದ್ಧಿಗಳು, ಎರವರು, ಕಾಡುಕುರುಬರು, ಸೋಲಿಗರು ಮುಂತಾದ ಬುಡಕಟ್ಟು ಜನಾಂಗಗಳ ಸಮಗ್ರ ಜೀವನ ಕಲೆಯ ವೈವಿಧ್ಯಗಳನ್ನು ಇವರ ಕಾಲದಲ್ಲಿ ವೀಡಿಯೋ ಟೇಪ್ಗಳಲ್ಲಿ ಸೆರೆ ಹಿಡಿಯಲಾಯಿತು. ಸಾಂಸ್ಕೃತಿಕವಾಗಿ ಮಹತ್ತ್ವ ಹೊಂದಿದ ಹಿರಿಯಡ್ಕದ ಸಿರಿ ಜಾತ್ರೆ, ಮಾಸ್ಯಾಳದ ಚೌಡೇಶ್ವರಿ ಜಾತ್ರೆ, ಮೈಲಾರಲಿಂಗದ ಜಾತ್ರೆಗಳನ್ನು ಚಿತ್ರೀಕರಣ ಗೊಳಿಸಲಾಯಿತು. ಕಲಾವಿದರನ್ನು ಪೋಷಿಸುವ ಸಲುವಾಗಿ ಕರೀಂಖಾನರು ವಿಶೇಷ ಗಿರಿಜನರ ಪ್ರಶಸ್ತಿಯನ್ನು ರೂಪಿಸಿದರು.

ಸ್ವಾತಂತ್ರ್ಯ ಹೋರಾಟ

[ಬದಲಾಯಿಸಿ]

ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರೀಂಖಾನರಂಥ ಕಂಚಿನ ಕಂಠದ ಗಾಯಕರೊಬ್ಬರು ಹೋರಾಟಗಾರರಿಗೆ ಬೇಕಾಗಿದ್ದರು. ತಮ್ಮ ಅದ್ಭುತ ಕಂಠದಿಂದ ಹಾಡುತ್ತಾ ನಿರರ್ಗಳವಾಗಿ ಹರಿಯುವ ತಮ್ಮ ವಾಗ್ಝರಿಯಿಂದ ಜನರನ್ನು ಹುರಿದುಂಬಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದ್ದರಿಂದಾಗಿ ಸತತ ಏಳು ಸಲ ಜೈಲುವಾಸ ಅನುಭವಿಸಿದರು. ಸ್ವಾತಂತ್ರ್ಯಾನಂತರ ಇವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆಗಲೂ ಸೆರೆವಾಸ ಅನುಭವಿಸಿದರು. ಗಾಂಧೀಜಿಯವರು ವಿಶ್ರಾಂತಿಗೆಂದು ನಂದಿಬೆಟ್ಟಕ್ಕೆ ಬಂದಾಗ ಅವರನ್ನು ಭೇಟಿಯಾಗಿದ್ದರು.


ಚಿತ್ರರಂಗ

[ಬದಲಾಯಿಸಿ]

ಕನ್ನಡ ಚಿತ್ರರಂಗ ಖ್ಯಾತ ಚಿತ್ರಸಾಹಿತಿಯಾಗಿ ಕರೀಂಖಾನ್ ಹೆಸರು ಗಳಿಸಿದ್ದರು. ಚಿತ್ರಗೀತೆ ರಚನೆಯಷ್ಟೇ ಅಲ್ಲದೆ, ಚಲನಚಿತ್ರ ಕಥೆ, ಸಂಭಾಷಣೆಗಳನ್ನೂ ಬರೆದು ಪೂರ್ಣಪ್ರಮಾಣದ ಚಿತ್ರಸಾಹಿತಿಯೆನಿಸಿದ್ದರು.ಏಕಾಂಗಿಯಾಗಿಯೂ ಸ್ವಾಭಿಮಾನಿಯಾಗಿದ್ದ ಕರೀಂಖಾನ್ ಮದರಾಸಿನ ಸಿನಿಮಾ ಜಗತ್ತಿನಲ್ಲಿ ಅದೃಷ್ಟವನ್ನು ಅರಸಿ ತೆರಳಿದರು. ಪ್ರಸಾದ್ ಮೂವೀಸ್‍ನ ಆರ್. ನಾಯ್ಡು ಅವರು ಕರೀಂಖಾನರನ್ನು ಮದರಾಸಿಗೆ ಬರಮಾಡಿಕೊಂಡರು. ಅಲ್ಲಿ ಸು. 10 ವರ್ಷಗಳ ಕಾಲ ಇದ್ದು ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದರು. 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು.ಸ್ವರ್ಣಗೌರಿ, ಜೀವನ ತರಂಗ, ಬೇವು ಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರಕೃಷ್ಣ, ರಾಜೇಶ್ವರಿ, ಪತಿತಪಾವನಿ, ಸೂಪರ್ ನೋವ 445 ಮುಂತಾದ ಹದಿನೈದು ಚಿತ್ರಗಳಿಗೆ ಇವರು ಸಾಹಿತ್ಯ ನೀಡಿದ್ದಾರೆ. ಸ್ವರ್ಣಗೌರಿ ಚಿತ್ರಕ್ಕೆ ಬರೆದ ಹಾಡುಗಳಿಂದಾಗಿ ಇವರ ಜನಪ್ರಿಯತೆ ಹೆಚ್ಚಿತು. ರಂಭಾಪುರಿ, ಕೂಡ್ಲಿ, ಶೃಂಗೇರಿ, ಉಡುಪಿ, ಧರ್ಮಸ್ಥಳ, ಆದಮಾರು ಸ್ವಾಮಿಗಳನ್ನು ಕುರಿತಂತೆ ಸ್ವಾಗತ ಗೀತೆಗಳನ್ನು ಇವರು ರಚಿಸಿದ್ದಾರೆ. ಮಂದಾರ ಧರ್ಮಸ್ಥಳ (ಧರ್ಮಸ್ಥಳ ಮಂಜುನಾಥನ ಬಗ್ಗೆ) ಎಂಬ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದ್ದಾರೆ. ನಾಡುನುಡಿಗಳ ಬಗ್ಗೆಯೂ ಹಾಡು ರಚಿಸಿದ್ದಾರೆ. ನಟವರ ಗಾಂಗಾಧರ ಉಮಾಶಂಕರದಂಥ ಭಕ್ತಿಪ್ರಧಾನ ಗೀತೆಗಳಿಂದ ಹಿಡಿದು ಬಾರೇ ನೀ ಚೆಲುವೆಯಂಥ ಶೃಂಗಾರ ರಸದ ಹಾಡುಗಳವರೆಗೆ ಮಧುರ ಮತ್ತು ಜನಪ್ರಿಯ ಗೀತೆಗಳನ್ನು ರಚಿಸಿದರು.

೧೯೬೨ರಲ್ಲಿನ ಸ್ವರ್ಣಗೌರಿ ಚಲನಚಿತ್ರದ ಕಥೆ ಮತ್ತು ಸಂಭಾಷಣೆ ಬರೆದು, ಗೀತೆರಚನೆಯನ್ನು ಮಾಡಿದ್ದರು. ಇದಲ್ಲದೆ, ಜೀವನ ತರಂಗ, ಗಂಗೆ ಗೌರಿ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದಾರೆ.


ಎಸ್.ಕೆ.ಕರೀಂಖಾನ್ ರಚಿತ ಕೆಲವು ಗೀತೆಗಳು

[ಬದಲಾಯಿಸಿ]

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
Dr SK Karim Khan commemorative block Indiranagara 100 Feet road Sony Signal

ಕರೀಂಖಾನ್‌ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ೧೯೮೯ ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತು. ೨೦೦೪ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಅಲ್ಲದೆ, ೧೯೯೭ರಲ್ಲಿ ನಾಡೋಜ, ೧೯೯೫ರಲ್ಲಿ ಜಾನಪದಶ್ರೀ, ಜೀಶಂಪ ಪ್ರಶಸ್ತಿ, ೨೦೦೦ರಲ್ಲಿ ಚಿ.ಉದಯಶಂಕರ್ ಚಿತ್ರ ಸಾಹಿತ್ಯ ಪ್ರಶಸ್ತಿ, ೧೯೮೯ರಲ್ಲಿ ಜಾನಪದ ಅಕಾಡೆಮಿ ಗೌರವ, ಹಂಸರತ್ನ, ಜಾನಪದ ಜಂಗಮ ಹಾಗೂ ಚಲನಚಿತ್ರ ರಂಗದ ಜೀವಮಾನದ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

ಡಾ. ಕರೀಂ ಖಾನರ ಗೌರವಾರ್ಥವಾಗಿ ಇಂದಿರಾನಗರ ೧೦೦ ರಸ್ತೆಯ ೧೨ ಮುಖ್ಯರಸ್ತೆಯಲ್ಲಿ ಖಾನ್ ಸಾಹೇಬರ ಸ್ಮಾರಕ ಕಲ್ಲನ್ನು ಅಲ್ಲಿನ ವರ್ತಕರು ಸ್ಥಾಪಿಸಿದ್ದಾರೆ.

೨೦೧೪ರಲ್ಲಿ ೧೦೦ ರಸ್ತೆಗೆ ಡಾ. ಕರೀಂ ಖಾನರ ಹೆಸರನ್ನು ಇಟ್ಟು, ಅವರ ಕೊಡೂಗೆಯನ್ನು ಸ್ಮರಿಸಲಾಯಿತು.

Dr sk karimkhan road indira nagara bengaluru

"ಬೇರೆಯವರಿಗೆ ಕೆಡುಕು ಬಯಸದಿರುವುದು", "ಕೆಟ್ಟ ಯೋಚನೆ ಮಾಡದಿರುವುದು" ತಮ್ಮ ಆರೋಗ್ಯದ ಗುಟ್ಟೆಂದು ನಂಬಿಕೊಂಡು, ಪ್ರತಿಪಾದಿಸುತ್ತಿದ್ದ ಕರೀಂಖಾನ್‌ ಅವರಿಗೆ ಬದುಕಿನ ಕೊನೆಯ ದಿನಗಳಲ್ಲಿ ದೀರ್ಘಕಾಲೀನ ಅನಾರೋಗ್ಯ ಕಾಡಿತು. ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನೂ ತಿರಸ್ಕರಿಸಿದ್ದ ಕರೀಂಖಾನ್‌ ಅವರು ತಮ್ಮ ಬದುಕಿನುದ್ದಕ್ಕೂ ಎಷ್ಟೇ ಕಷ್ಟ ಎದುರಾದರೂ ಯಾರೊಬ್ಬರ ಮುಂದೆಯೂ ಕೈಚಾಚದೆ ಆತ್ಮಗೌರವ ಕಾಯ್ದುಕೊಂಡರು. ತಮ್ಮ ಇಳಿವಯಸ್ಸಿನಲ್ಲಿ ಕರೀಮಜ್ಜ ಎಂದೇ ಮಾಧ್ಯಮಗಳಲ್ಲಿ, ಸಾಮಾನ್ಯ ಜನರಲ್ಲಿ, ಪ್ರೀತಿಗೆ ಪಾತ್ರರಾಗಿದ್ದರು. ಎಸ್.ಕೆ.ಕರೀಂಖಾನ್ ಅವರು ಜುಲೈ ೨೯, ೨೦೦೬ರಂದು ಬೆಂಗಳೂರಿನ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಕರೀಂಖಾನ, ಎಸ್.ಕೆ. : 1908-2006. ಹುಟ್ಟಿದ್ದು ಬೆಳೆದದ್ದು ಹಾಸನಜಿಲ್ಲೆಯ ಸಕಲೇಶಪುರದಲ್ಲಿ. ತಾಯಿ ಜೈನಬ್ಬಿ ಅರಬ್ ಮೂಲದವರು. ತಂದೆ ಅಬ್ದುಲ್ ರಹಮಾನ್ ಖಾನ್, ಆಫ್ಘ್‌ನ್ ಯೋಧ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಅಣ್ಣನ ಆಶ್ರಯದಲ್ಲಿ ಬೆಳೆದರು. ಹಾಸನದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದರು. ಆಚಂಗಿ ನಾರಾಯಣಶಾಸ್ತ್ರಿ ಇವರ ಗುರುಗಳು.

ಉಲ್ಲೇಖಗಳು

[ಬದಲಾಯಿಸಿ]
  1. "S K Karim Khan : Kannada Writer Age, Movies, Biography". chiloka.com. Retrieved 11 January 2020.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: