ರಂಭಾಪುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ವೀರಶೈವರ ಪೀಠ ಪಂಚಪೀಠಗಳಲ್ಲಿ ಮೊದಲನೆಯದು. ರಂಭಾಪುರಿ ಪೀಠವು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೋನ್ನೂರಿನಲ್ಲಿ ಸ್ಥಾಪಿತಗೊಂಡಿದೆ.

ಶ್ರೀ ರಂಭಾಪುರಿ ಪೀಠದ ಪರಂಪರೆ

ಶ್ರೀ ಜಗದ್ಗುರು ರೇವಣಾರಾಧ್ಯ (ರೇವಣಸಿದ್ಧ)ರು - ಶ್ರೀ ಕೊಲನುಪಾಕದ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇವಣಾರಾಧ್ಯರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾ ಬಂದಿದ್ದಾರೆ. ಕೃತಯುಗದಲ್ಲಿ ಇವರಿಗೆ ಶ್ರೀ ಏಕಾಕ್ಷರ ಶಿವಾಚಾರ್ಯ, ತ್ರೇತಾಯುಗದಲ್ಲಿ ಶ್ರೀ ಏಕವಕ್ತ್ರ ಶಿವಾಚಾರ್ಯ, ದ್ವಾಪರಯುಗದಲ್ಲಿ ಶ್ರೀ ರೇಣುಕ ಶಿವಾಚಾರ್ಯ ಮತ್ತು ಕಲಿಯುಗದಲ್ಲಿ ಶ್ರೀ ರೇವಣಾರಾಧ್ಯ ಅಥವಾ ಶ್ರೀ ರೇವಣಸಿದ್ಧ ಎಂಬ ಹೆಸರುಗಳಿದ್ದವೆಂದು 'ಸುಪ್ರಭೇದಾಗಮಾಂತರ್ಗತ ಪಂಚಾಚಾರ್ಯ ಪಂಚಮೋತ್ಪತ್ತಿ ಪ್ರಕರಣ'ದ ಪುಟ-2ರಲ್ಲಿ ಮತ್ತು 'ವೀರಶೈವ ಸದಾಚಾರ ಸಂಗ್ರಹ'ದ ಪ್ರಥಮ ಪ್ರಕರಣದಲ್ಲಿ ಪ್ರತಿಪಾದಿಸಲ್ಪಟ್ಟಿದೆ.

ಅಥ ತ್ರಿಲಿಂಗವಿಷಯೇ ಕುಲ್ಯಪಾಕಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದುರಾಸೀತ್ ಸ ರೇಣುಕಃ || (ಸಿ.ಶಿ. 4-1)

ಸಿದ್ಧಾಂತ ಶಿಖಾಮಣಿಯ ಈ ಉಕ್ತಿಗನುಸಾರವಾಗಿ ದ್ವಾಪರಯುಗದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಪ್ರಾದುರ್ಭವಿಸಿ, ಮಲಯ ಪರ್ವತದಲ್ಲಿ ವಾಸಿಸುತ್ತಿದ್ದ ಮಹಾಮಹಿಮರಾದ ಶ್ರೀ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಉಪದೇಶಿಸಿದರು. ಆ ಉಪದೇಶವನ್ನೇ ಶ್ರೀಶಿವಯೋಗಿ ಶಿವಾಚಾರ್ಯರು ಸಂಗ್ರಹಿಸಿ ಬರೆದಿಟ್ಟಿದ್ದಾರೆ. ಆ ಸಂಗ್ರಹವೇ ಇಂದು ಸಿದ್ಧಾಂತ ಶಿಖಾಮಣಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಆಚಾರ್ಯರು ಧರ್ಮಪ್ರಚಾರಕ್ಕಾಗಿ ಮಲಯ ಪರ್ವತದಲ್ಲಿಯೇ ಒಂದು ಪೀಠವನ್ನು ಸಂಸ್ಥಾಪಿಸಿದರು. ಅದು ಇಂದು 'ವೀರಸಿಂಹಾಸನ' ಇಲ್ಲವೇ 'ರಂಭಾಪುರೀ ಪೀಠ' ಎಂಬ ಹೆಸರಿನಿಂದ ಕನಾ೯ಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ. ಈ ಪೀಠದ ಆಚಾರ್ಯರು ಶ್ರೀ ರೇಣುಕ ಶಾಖಾ ಮತ್ತು ವೀರಗೋತ್ರದ ಅಧಿಪತಿಗಳಾಗಿದ್ದಾರೆ.

ತಸ್ಯೇತಿ ವಚನಂ ಶ್ರುತ್ವಾ ರಾಕ್ಷಸೇಂದ್ರಸ್ಯ ಧೀಮತಃ | ತಥೇತಿ ಪ್ರತಿಸುಶ್ರಾವ ಸರ್ವಜ್ಞೋ ಗಣನಾಯಕಃ || ತತ್ರ ಸಂತುಷ್ಟಚಿತ್ತಸ್ಯ ಪೌಲಸ್ತ್ಯಸ್ಯೇಷ್ಟ ಸಿದ್ಧಿಯೇ | ಕೋಟಿತ್ರಯಂ ತು ಲಿಂಗಾನಾಂ ಯಥಾಶಾಸ್ತ್ರಂ ಯಥಾವಿಧಿ || ತ್ರಿಕೋಟ್ಯಾಚಾರ್ಯ ರೂಪೇಣ ಸ್ಥಾಪಿತಂ ತೇನ ತತ್ಕ್ಷಣೇ | (ಸಿ.ಶಿ.21/30-31)

ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿಯ ಈ ಶ್ಲೋಕಗಳ ಆಧಾರದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಭೀಷಣನ ಪ್ರಾರ್ಥನಾನುಸಾರವಾಗಿ ಏಕಕಾಲದಲ್ಲಿಯೇ ಮೂರುಕೋಟಿ ಗುರುರೂಪವನ್ನು ಧರಿಸಿ, ಮೂರುಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದರೆಂದು ತಿಳಿದುಬರುತ್ತದೆ.

ಯುದ್ಧಭೂಮಿಯಲ್ಲಿ ಶ್ರೀರಾಮಚಂದ್ರನ ಬಾಣಗಳಿಂದ ಆಹತನಾಗಿ ತನ್ನ ಪ್ರಾಣಬಿಡುವ ಪೂರ್ವದಲ್ಲಿ ರಾವಣನು-

ನವಕಂ ಕೋಟಿಲಿಂಗಾನಾಂ ಪ್ರತಿಷ್ಠಾಪ್ಯಮಿಹ ಸ್ಥಲೇ | ಇತಿ ಸಂಕಲ್ಪಿತಂ ಪೂರ್ವ ಮಯಾತದವಶಿಷ್ಯತೇ || ಕೋಟಿಷಟ್ಕಂ ತು ಲಿಂಗಾನಾಂ ಮಯಾ ಸಾಧು ಪ್ರತಿಷ್ಠಿತಂ | ಕೋಟಿತ್ರಯಂ ತು ಲಿಂಗಾನಾಂ ಸ್ಥಾಪನೀಯಮತಸ್ತ್ವಯಾ || (ಸಿ.ಶಿ. 21/24-25)

ಹೇ ತಮ್ಮನಾದ ಪ್ರಿಯ ವಿಭೀಷಣನೇ! ಒಂಭತ್ತು ಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಬೇಕೆಂದು ನಾನು ಸಂಕಲ್ಪವನ್ನು ಮಾಡಿ ಆರು ಕೋಟಿ ಶಿವಲಿಂಗಗಳನ್ನು ಸಂಸ್ಥಾಪಿಸಿದ್ದೇನೆ. ಆದರೆ ನನ್ನ ಸಂಕಲ್ಪದ ಪ್ರಕಾರ ಇನ್ನೂ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವುದಿದೆ. ಅವುಗಳನ್ನು ನೀನು ಪ್ರತಿಷ್ಠಾಪಿಸು ಎಂಬುದಾಗಿ ಹೇಳಿ ಅಸುನೀಗಿದನು. ಅಣ್ಣನ ಸಂಕಲ್ಪವನ್ನು ಪೂರ್ಣ ಮಾಡುವುದು ಹೇಗೆಂದು ಬಹುದಿನಗಳಿಂದ ವಿಭೀಷಣನು ಚಿಂತಿಸುತ್ತಿರುವಾಗ, ಅವನ ಪುಣ್ಯವೇ ಮೂರ್ತಿರೂಪ ತಾಳಿ ಬಂದಂತೆ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಬರುತ್ತಾರೆ. ಆಕಾಶಮಾರ್ಗವಾಗಿ ಬಂದ ಅವರ ಮಹಿಮೆಯನ್ನರಿತ ವಿಭೀಷಣನು ವಿಧಿವತ್ತಾಗಿ ಅವರ ಪಾದಪೂಜೆಯನ್ನು ಮಾಡಿ, ತನ್ನ ಅಣ್ಣನ ಸಂಕಲ್ಪವನ್ನು ನಿವೇದಿಸಿಕೊಂಡಾಗ, ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಅದೇ ಕ್ಷಣದಲ್ಲಿ ಮೂರುಕೋಟಿ ಆಚಾರ್ಯರ ರೂಪವನ್ನು ಧರಿಸಿ, ಶಿವಲಿಂಗಗಳನ್ನು ಏಕಕಾಲದಲ್ಲಿಯೇ ಸ್ಥಾಪಿಸಿ, ವಿಭೀಷಣನಿಗೆ ಅಭಯ, ಆಶೀರ್ವಾದಗಳನ್ನಿತ್ತು, ಕೆಲವು ದಿವಸ ಗುಪ್ತವಾಗಿಯೂ ಮತ್ತೆ ಕೆಲವು ದಿವಸ ಪ್ರಕಟವಾಗಿಯೂ ಭೂಮಂಡಲದಲ್ಲೆಲ್ಲ ಸಂಚರಿಸಿ ತಾವು ಅವತರಿಸಿದ ಕಾರ್ಯವು ಪೂರ್ಣವಾದೊಡನೆ ಪುನಃ ಕೊಲ್ಲಿಪಾಕಿ ಕ್ಷೇತ್ರಕ್ಕೆ ದಯಮಾಡಿಸಿ ಅದೇ ಸೋಮೇಶ್ವರ ಶಿವಲಿಂಗದಲ್ಲಿಯೇ ಲೀನವಾದರು.

ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಲಂಕೆಗೆ ಹೋಗಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ವಿಷಯ ಕಾಲ್ಪನಿಕ ಪೌರಾಣಿಕ ಕಥೆಯಲ್ಲ. ಸಿಂಹಳದ ಜಾಫ್ನಾದಿಂದ 15 ಕಿ.ಮೀ. ದೂರವಿರುವ ಕಿರುಮಲಾಯ್ ಎಂಬ ಗ್ರಾಮದಲ್ಲಿ ಈಗಲೂ ಇರುವ ರೇಣುಕಾಶ್ರಮ ಮತ್ತು ರೇಣುಕವನ ಮಠಗಳು ಹಾಗೂ ಅಲ್ಲಿರುವ ನೂರಾರು ವೀರಶೈವರ ಮನೆತನಗಳು ಐತಿಹಾಸಿಕ ಘಟನೆಯ ಪ್ರತ್ಯಕ್ಷ ನಿದರ್ಶನಗಳಾಗಿವೆ.

ಬೆಂಗಳೂರಿನ ದಾರುಕಾಚಾರ್ಯ ಆಶ್ರಮದ ಶ್ರೀ ವೇ. ವೀರಯ್ಯ ಸ್ವಾಮಿ ಶಾಸ್ತ್ರಿಮಠ ಇವರು 1969ನೇ ಜೂನ್ ತಿಂಗಳಲ್ಲಿ ಸಿಂಹಳಕ್ಕೆ ಹೋಗಿ, ಅಲ್ಲಿಯ ರೇಣುಕಾಶ್ರಮ, ರೇಣುಕವನ ಹಾಗೂ ತಾನಕೇಸಂತುರೈಯಲ್ಲಿಯ ಶ್ರೀ ಗುರು ವೀರಭದ್ರ ದೇವಾಲಯಗಳ ಸಂದರ್ಶನವನ್ನು ಮಾಡಿ, ಅಲ್ಲಿಯ ಅನೇಕ ವೀರಶೈವರ ಜೊತೆ ಸಂದರ್ಶನ ಮಾಡಿ ಅಲ್ಲಿಂದ ಬರುವಾಗ ತಾಮ್ರಪಟದಲ್ಲಿ ಚಿತ್ರಿತವಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯನ್ನು ತಂದಿರುವ ವಿಷಯಗಳು ನಿಜವಾಗಿಯೂ ಇತಿಹಾಸತಜ್ಞರ ಜಿಜ್ಞಾಸೆಯನ್ನು ಕೆರಳಿಸದೆ ಇರಲಾರವು.

ಶ್ರೀಮದ್ರೇವಣಸಿದ್ಧಸ್ಯ ಕುಲ್ಯಪಾಕಪುರೋತ್ತಮೇ | ಸೋಮೇಶಲಿಂಗಾಜ್ಜನನಮಾವಾಸಃ ಕದಲೀಪುರೇ ||

ಎಂಬ ಸ್ವಾಯಂಭುವ ಆಗಮದ ಪ್ರಮಾಣಾನುಸಾರವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರೇ ಪುನಃ ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರೆಂಬ ಹೆಸರಿನಿಂದ ಅವತರಿಸಿ, 1400 ವರ್ಷಗಳವರೆಗೆ ವೀರಶೈವರ ತತ್ತ್ವೋಪದೇಶವನ್ನು ಮಾಡುತ್ತ ಅನಂತಲೀಲೆಗಳನ್ನು ಮಾಡಿದ್ದಾರೆ. ಇವರೇ ಶ್ರೀ ಜಗದ್ಗುರು ಆದಿಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಹಾಗೂ ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ಅನುಗ್ರಹಿಸಿದ್ದಾರೆ. ಆದಿಶಂಕರರ ಚರಿತ್ರೆಯನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳಲ್ಲಿ ಗುರುವಂಶ ಕಾವ್ಯವೂ ಒಂದಾಗಿದೆ. ಇದು ಶೃಂಗೇರಿ ಪೀಠದ ಆಸ್ಥಾನ ವಿದ್ವಾಂಸರಾದ ಪಂಡಿತ ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ವಿರಚಿತವಾಗಿದೆ. ಇದು ವಾಣೀವಿಲಾಸ ಮುದ್ರಣಾಲಯ ಶ್ರೀರಂಗಂ ದಿಂದ ಮುದ್ರಿತವಾಗಿದೆ. ಈ ಪುಸ್ತಕದಲ್ಲಿ-

ಶ್ರೀಚಂದ್ರಮೌಳೀಶ್ವರಲಿಂಗಮಸ್ಮೈ ಸದ್ರತ್ನಗರ್ಭಂ ಗಣನಾಯಕಂ ಚ| ಸ ವಿಶ್ವರೂಪಾಯ ಸುಸಿದ್ಧದತ್ತಂ ದತ್ವಾನ್ಯಗಾದೀಚ್ಚಿರಮರ್ಚಯೇತಿ || (ಗುರುವಂಶ ಕಾವ್ಯ 3-33)

ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಾಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಶ್ರೀ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ವಿಷಯವು ಪ್ರತಿಪಾದಿಸಲ್ಪಟ್ಟಿದೆ. ಮೇಲೆ ಹೇಳಿದ ಈ ಶ್ಲೋಕದ ವ್ಯಾಖ್ಯಾನವನ್ನು ಬರೆಯುವಾಗ ಗ್ರಂಥಕಾರರೇ ಸುಸಿದ್ಧದತ್ತಂ ಸುಸಿದ್ಧೇನ ರೇವಣಸಿದ್ಧ ಮಹಾಯೋಗಿನಾ ದತ್ತಂ ಶ್ರೀ ಚಂದ್ರಮೌಳೀಶ್ವರಲಿಂಗಮ್ ಎಂದು ಇಲ್ಲಿ 'ಸುಸಿದ್ಧ' ಶಬ್ದದ ಅರ್ಥವನ್ನು ರೇವಣಸಿದ್ಧ ಮಹಾಯೋಗಿ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇಂದಿನವರೆಗೆ ಶ್ರೀ ಶೃಂಗೇರಿ ಪೀಠದಲ್ಲಿ ಪೂಜೆಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರಲಿಂಗವು ವೀರಶೈವ ಶಿವಾಚಾರ್ಯರಾದ ಶ್ರೀ ರೇವಣಸಿದ್ಧರಿಂದ ಕೊಡಲ್ಪಟ್ಟದ್ದೆಂದು ತಿಳಿದುಬರುತ್ತದೆ.

ಕಾಶಿಯ ಸರ್ವಶ್ರೇಷ್ಠ ವಿದ್ವಾಂಸರೂ, ಅನೇಕ ಗ್ರಂಥರಚನಾಕಾರರೂ ಆದ ಪಂ. ಬಲದೇವ ಉಪಾಧ್ಯಾಯರು ಹಿಂದಿ ಭಾಷೆಯಲ್ಲಿ ಶಂಕರ ದಿಗ್ವಿಜಯವನ್ನು ಬರೆದಿದ್ದಾರೆ. ಇವರ ಪುಸ್ತಕದ ಪರಿಶಿಷ್ಟ (ಕ) ಪುಟ-588ರಲ್ಲಿ 'ಗುರುವಂಶ ಕಾವ್ಯ'ದಲ್ಲಿ ಬಂದಿರುವ ಈ ವಿಷಯವನ್ನು ಚರ್ಚಿಸಿ ಸಚ್ಚಿದಾನಂದ ಭಾರತೀಮುನೀಂದ್ರರೆಂಬ ಶ್ರೀ ಶೃಂಗೇರಿ ಪೀಠದ ಆಚಾರ್ಯರು ಕಾಶೀ ಲಕ್ಷ್ಮಣ ಶಾಸ್ತ್ರಗಳಿಂದ ತಮ್ಮ ಪೀಠ ಪರಂಪರೆಯನ್ನು ಬರೆಸಿರುವುದರಿಂದ ಇದರಲ್ಲಿ ಶ್ರೀ ರೇವಣಸಿದ್ಧರಿಂದ ಆದಿಶಂಕರರಿಗೆ ಕೊಡಮಾಡಿದ ಶ್ರೀಚಂದ್ರಮೌಳೀಶ್ವರಲಿಂಗದ ವಿಷಯವು ಸತ್ಯವಾದದ್ದು ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೂ ಅಲ್ಲದೆ ನಿಟ್ಟೂರು ನಂಜನಾಚಾರ್ಯರು, 'ವೇದಾಂತಸಾರ ವೀರಶೈವ ಚಿಂತಾಮಣಿ' ಎಂಬ ಗ್ರಂಥದ ಪ್ರಾರಂಭದಲ್ಲಿ-

ಶಂಕರಾಚಾರ್ಯ ಸನ್ನಾಮ ಯೋಗೀಂದ್ರಾಯ ಮಹೋಜ್ಜ್ವಲಮ್ | ಚಂದ್ರಮೌಳೀಶ್ವರಂ ಲಿಂಗಂ ದತ್ತವಾನಿತಿ ವಿಶೃತಮ್ ||

ಶ್ರೀ ರೇಣುಕ ಗಣೇಶಾಖ್ಯಂ ರೇವಣಾಸಿದ್ಧದೇಶಿಕಮ್ | ವೀರಶೈವ ಮತಾಚಾರ್ಯಂ ವಂದೇಹಂ ತಂ ಜಗದ್ಗುರುಮ್ |

ಎಂಬ ಮಂಗಲಶ್ಲೋಕಗಳಲ್ಲಿ ಶ್ರೀ ರೇಣುಕಾಚಾರ್ಯರ ದ್ವಿತೀಯ ಅವತಾರಿಗಳಾದ ಶ್ರೀರೇವಣಸಿದ್ಧರಿಂದ ಆದಿಶಂಕರರಿಗೆ ಶ್ರೀ ಚಂದ್ರಮೌಳೀಶ್ವರಲಿಂಗವು ಪ್ರಾಪ್ತವಾಗಿತ್ತೆಂಬುದು ಪ್ರತಿಪಾದಿಸಲ್ಪಟ್ಟಿದೆ. ಇದೂ ಅಲ್ಲದೆ ಪುಣೆಯಿಂದ ಮರಾಠಿ ಭಾಷೆಯಲ್ಲಿ ಪ್ರಕಾಶಿತವಾದ ಮಧ್ಯಯುಗೀನ ಚರಿತ್ರ ಕೋಶ ಎಂಬ ಪುಸ್ತಕದ 714ನೇ ಪುಟದಲ್ಲಿ ರೇವಣಸಿದ್ಧ - ಯಾನೇ ಶಂಕರಾಚಾರ್ಯಾನಾ ಚಂದ್ರಮೌಳೀಶ್ವರಲಿಂಗ ದಿಲೇ ಅಸ್ತೀ ಪ್ರಸಿದ್ಧಿ ಆಹೇ. ಹೇ ಶಂಕರಾಚಾರ್ಯ ಮ್ಹಣಜೀ ಆದ್ಯ ಶಂಕರಾಚಾರ್ಯ ಹೋತ. ಹಾ ಜಾತಿನೇ ಜಂಗಮ ಹೋತಾ - ಅಂದರೆ ಆದ್ಯ ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗವನ್ನು ಕೊಟ್ಟ ಶ್ರೀ ರೇವಣಸಿದ್ಧರು ಜಂಗಮರಿದ್ದರು ಎಂದು ಹೇಳಲ್ಪಟ್ಟಿದೆ.

ಶ್ರೀ ವೃಷಭೇಂದ್ರ ಪಂಡಿತರಿಂದ ವಿರಚಿತವಾದ ಮಹಾ ನಾರಾಯಣೋಪನಿಷತ್ತಿನ ಭಾಷ್ಯದಲ್ಲಿ ಕೇಚಿತ್ತು........ರೇವಣಸಿದ್ಧ ಮರುಳಸಿದ್ಧೈಕೋ ರಾಮಸಿದ್ಧ ಪಂಡಿತಾರಾಧ್ಯಾದಯಃ ಸಹಸ್ರಶೀರ್ಷಂ ದೇವಮಿತ್ಯಾದಿ ಪರಶಿವ ಧಮರ್ಾಣಾಂ ನಾರಾಯಣಾತ್ಮಕವಿಷ್ಣೋಃ ಪ್ರತಿಪಾದನೇಪಿ ಏತದನುವಾಕ್ಯಸ್ಯ ಶಿವಪರತ್ವೇನ ಕಿಂಚಿದಪಿ ದೋಷಃ (ಪುಟ-65) ಈ ರೀತಿಯಾಗಿ ಶ್ರೀರೇವಣಸಿದ್ಧಾದಿ ಪಂಚಾಚಾರ್ಯರ ಹೆಸರುಗಳನ್ನು ಉಲ್ಲೇಖಿಸಿರುವುದರಿಂದ ಶ್ರೀ ರೇವಣಸಿದ್ಧರು ವೇದಮಂತ್ರಗಳಿಗೆ ಭಾಷ್ಯವನ್ನು ಬರೆದಿದ್ದಾರೆಂದು ತಿಳಿದುಬರುತ್ತದೆ. ಶ್ರೀ ಜಗದ್ಗುರು ರೇವಣಸಿದ್ಧರು ತಂತ್ರ-ಮಂತ್ರಾದಿ ಸಕಲ ವಿದ್ಯೆಗಳಲ್ಲಿ ಸಿದ್ಧಿಯನ್ನು ಪಡೆದವರಾಗಿದ್ದರಿಂದ ಪ್ರಖ್ಯಾತ ರಸಸಿದ್ಧರಾದ ನವನಾಥರಲ್ಲಿ ಇವರು ಅಗ್ರಗಣ್ಯರಾಗಿದ್ದರು.

ಕ್ರಿ.ಶ. 950ರಿಂದ ಕ್ರಿ.ಶ. 1941ರ ವರೆಗೆ ವಿರಚಿಸಲ್ಪಟ್ಟ 19 ಸಂಸ್ಕೃತ, 32 ಕನ್ನಡ, 8 ತೆಲುಗು, 5 ಮರಾಠಿ, 1 ಹಿಂದಿ ಹಾಗೂ 4 ಇಂಗ್ಲೀಷ್ - ಹೀಗೆ ಒಟ್ಟು 59 ಗ್ರಂಥಗಳಲ್ಲಿ ಶ್ರೀ ರೇವಣಸಿದ್ಧರ ಚರಿತ್ರೆ ಹಾಗೂ ಲೀಲೆಗಳು ವರ್ಣಿಸಲ್ಪಟ್ಟಿವೆ. ಇದರಿಂದ ಇವರ ಮಹಿಮೆಯು ತಿಳಿದುಬರುತ್ತದೆ. ಇವರು ತಮ್ಮ ಲೀಲೆಯನ್ನು ಪೂರ್ಣಗೊಳಿಸುವ ಮುನ್ನ ಶ್ರೀ ಜಗದ್ಗುರು ರುದ್ರಮುನೀಶ್ವರರಿಗೆ ಪಟ್ಟಾಭಿಷೇಕವನ್ನು ಮಾಡಿ ಪುನಃ ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಲ್ಲಿಯೇ ಲೀನರಾದರು. ಹೀಗೆ ಈ ಪೀಠ ಪರಂಪರೆಯಲ್ಲಿ ಶ್ರೀ ರುದ್ರಮುನೀಶ್ವರರ ನಂತರ ಶ್ರೀ ಮುಕ್ತಿಮುನೀಶ್ವರ, ದಿಗಂಬರ ಮುಕ್ತಿಮುನೀಶ್ವರ ಮುಂತಾಗಿ 28 ಪೀಠಾಚಾರ್ಯರ ನಂತರ ಪುನಃ 29ನೇ ಪೀಠಾಚಾರ್ಯರಾಗಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಎಂಬ ಹೆಸರಿನವರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಇವರು ಕ್ರಿ.ಶ. 1000ದಿಂದ 1157ರ ಮಧ್ಯದಲ್ಲಿ ಆಗಿರುವುದಾಗಿ ತಿಳಿದುಬರುತ್ತದೆ. ಇವರು ಮಾಡಿದ ಲೀಲೆಗಳು ಅನಂತವಾಗಿವೆ. ಅವುಗಳಲ್ಲಿ ಮಾಸನೂರಿನ ಯಕ್ಷಮಿಥುನಗಳ ಉದ್ಧಾರ, ವಿಕ್ರಮಾದಿತ್ಯನಿಗೆ ಖಡ್ಗಪ್ರದಾನ, ಬಿಜ್ಜಳನಿಗೆ ಖಡ್ಗಪ್ರದಾನ, 12 ಸಾವಿರ ಕನ್ಯೆಯರ ಬಂಧವಿಮೋಚನೆ, ಕಲ್ಯಾಣದ ಬಳಿ ತ್ರಿಪುರಾಂತಕೇಶ್ವರ ಕೆರೆಯ ನಿಮರ್ಾಣ ಹಾಗೂ ಸೊನ್ನಲಿಗೆಯ ಶ್ರೀ ಸುಗ್ಗಲಾದೇವಿಗೆ ಪುತ್ರಾನುಗ್ರಹ - ಇವೇ ಮೊದಲಾದವುಗಳು ಪ್ರಮುಖವಾಗಿವೆ.

ಇವರು ಸಂಚರಿಸಿದ ಸ್ಥಳಗಳಲ್ಲೆಲ್ಲ ಇವರ ಹೆಸರಿನ ದೇವಾಲಯಗಳು ಇಂದಿಗೂ ಜ್ವಾಜ್ವಲ್ಯಮಾನವಾಗಿ ಉಳಿದಿವೆ. ಇವುಗಳಲ್ಲಿ ಬೆಂಗಳೂರು ಜಿಲ್ಲಾ ರಾಮನಗರ ತಾಲೂಕಿನ ರೇವಣಸಿದ್ಧೇಶ್ವರ ಬೆಟ್ಟ, ಶಿವಾಗಂಗಾ ಕ್ಷೇತ್ರದಲ್ಲಿಯ ರೇವಣಸಿದ್ಧ ದೇವಾಲಯ, ತುಮಕೂರು ಜಿಲ್ಲೆಯ ಸಿದ್ಧರಬೆಟ್ಟ, ಕಲಬುರಗಿ ಜಿಲ್ಲೆಯ ರಟಗಲ್ಲ ರೇವಣಸಿದ್ಧೇಶ್ವರ, ಸೊಲ್ಲಾಪುರದ ರೇವಣಸಿದ್ಧೇಶ್ವರ ದೇವಾಲಯ, ರೇಣಾವಿಯ ರೇವಣಸಿದ್ಧೇಶ್ವರ ಮತ್ತು ಮಾಸನೂರು, ಮಂಗಳವೇಢೆಗಳ ರೇವಣಸಿದ್ಧೇಶ್ವರ ದೇವಸ್ಥಾನಗಳು ಪ್ರಮುಖಗಳಾಗಿವೆ. ಇದೇ ಪ್ರಕಾರ ಪುನಃ ಈ ಪೀಠಕ್ಕೆ ಸುಮಾರು 13ನೇ ಶತಮಾನದಲ್ಲಿ ಮತ್ತೊಬ್ಬ ರೇವಣಸಿದ್ಧರು ಪೀಠಾಚಾರ್ಯರಾಗಿದ್ದಾರೆ. ಇವರಿಗೆ ಕಾಡಸಿದ್ಧೇಶ್ವರ ಎಂಬ ಹೆಸರು ಪರ್ಯಾಯ ನಾಮವಾಗಿತ್ತೆಂದು ತಿಳಿದುಬರುತ್ತದೆ. ರಂಭಾಪುರಿ ಪೀಠಾಚಾರ್ಯರಲ್ಲೊಬ್ಬರಾದ ಶ್ರೀ ರುದ್ರಮುನಿಗಳು ಕಾಲಜ್ಞಾನವನ್ನು ಬರೆದಿದ್ದಾರೆ. ಅದು ಈಗಲೂ 'ರುದ್ರಮುನಿ ಕಾಲಜ್ಞಾನ'ವೆಂದು ಸುಪ್ರಸಿದ್ಧವಾಗಿದೆ.

ಹೀಗೆ ಅನಾದಿ ಪರಂಪರೆಯಿಂದ ಬಂದ ಈ ಪೀಠಕ್ಕೆ ಅನೇಕ ಜನ ಪೀಠಾಚಾರ್ಯರು ಆಗಿಹೋಗಿದ್ದಾರೆ. ಬಹಳ ಜನ ಆಚಾರ್ಯರ ಚರಿತ್ರೆಗಳು ಕಾಲಗರ್ಭದಲ್ಲಿ ಅಡಗಿಹೋಗಿರುವುದರಿಂದ ಎಲ್ಲರ ಜೀವನ ಘಟನೆಗಳನ್ನು ಸಮಯೋಲ್ಲೇಖಪೂರ್ವಕ ಚಿತ್ರಿಸುವುದು ಕಷ್ಟವಾಗಿ ತೋರುತ್ತದೆ. ಈ ಪೀಠದ ಪರಂಪರೆಯಲ್ಲಿ ಇಲ್ಲಿಯವರೆಗೆ 120 ಜಗದ್ಗುರುಗಳು ಆಗಿಹೋಗಿದ್ದಾರೆ.