ಸೋಲಿಗ
ಒಟ್ಟು ಜನಸಂಖ್ಯೆ | |
---|---|
20,000 | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
ಭಾರತ | |
ಭಾಷೆಗಳು | |
ಶೋಲಗ ಭಾಷೆ | |
ಸಂಬಂಧಿತ ಜನಾಂಗೀಯ ಗುಂಪುಗಳು | |
ಇರುಳ, ತಮಿಳ್, ಯೆರುಕಾಲ |
ಸೋಲಿಗ ಜನಾಂಗವು ಭಾರತದ ಪ್ರಾಚೀನ ಜನಾಂಗಗಳಲ್ಲಿ ಒಂದು. ಇವರು ಕರ್ನಾಟಕದ ಬಿಳಿಗಿರಿರಂಗನ ಬೆಟ್ಟ ಪ್ರದೇಶದ ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿ ಮುಖ್ಯವಾಗಿ ವಾಸಿಸುತ್ತಾರೆ. ಸೋಲಿಗರು ಕರ್ನಾಟಕದ ಅತಿ ಪುರಾತನವಾದ ಸಮುದಾಯಗಳಲ್ಲಿ ಒಂದು. ಇವರು ಮೈಸೂರು ಹಾಗು ಚಾಮರಾಜನಗರ ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುತ್ತಾರೆ. ಇವರು, ಕಾಡು ಕುರುಬರು ಹಾಗೂ ಜೇನು ಕುರುಬರಂತೆ ಕರ್ನಾಟಕದಲ್ಲಿ ನೆಲಸಿದವರಲ್ಲಿ ಮೊದಲಿಗರು. ಇವರಿಗೆ ಮಲೈ ಮಾದೇಶ್ವರನೆ ಮನೆ ದೇವರಾಗಿರುತ್ತಾನೆ. ಕಾಡನ್ನೇ ನಂಬಿಕೊಂಡು, ಅದನ್ನೇ ಪೂಜಿಸಿಕೊಂಡು ಬಾಳುತ್ತಾರೆ. ಇವರ ಭಾಷೆ ದ್ರಾವಿಡ ಭಾಷೆಯಾದ ಶೋಲಗ. ವ್ಯವಹಾರದಲ್ಲಿ ಕನ್ನಡ ಹಾಗೂ ತಮಿಳು ಭಾಷೆಯನ್ನು ಮಾತನಾಡುತ್ತಾರೆ. ಇವರ ಸಂಖ್ಯೆ ಸುಮಾರು ೨೦,೦೦೦.
ಬುಡಕಟ್ಟು ಸಂಸ್ಕೃತಿ
[ಬದಲಾಯಿಸಿ]ಗ್ರಾಮ ಮತ್ತು ನಗರಕ್ಕಿಂತ ಭಿನ್ನವಾದ ಸಂಸ್ಕೃತಿಯನ್ನು ಬುಡಕಟ್ಟು ಸಂಸ್ಕೃತಿ ಎನ್ನಲಾಗಿದೆ. ಈ ಸಮುದಾಯಗಳಲ್ಲಿ ರಕ್ತಸಂಬಂಧ ಬಹಳ ಮುಖ್ಯವಾದ ಅಂಶ. ಈ ಜನಾಂಗ ಬಿಗಿಯಾದ ಕಡ್ಡುನಿಟ್ಟಿನ ಕ್ರಮಗಳನ್ನು ಹೊಂದಿದೆ. ಇವರು ತಮ್ಮದೇ ಆದಂತಹ ಆಚಾರ-ವಿಚಾರ, ಭಾಷೆ, ವ್ಯವಹಾರಗಳನ್ನು ಹೊಂದಿರುತ್ತಾರೆ. ಇಂಥಹ ಸಾಮಾಜಿಕ ವರ್ಗಗಳನ್ನು ಅಥವಾ ಸಮುದಾಯಗಳನ್ನು, ಸಾಂಸ್ಕೃತಿಕ ಮಾನವ ವಿಜ್ಞಾನದಲ್ಲಿ ಬುಡಕಟ್ಟುಗಳು ಎನ್ನುತ್ತೇವೆ. ಈ ಬುಡಕಟ್ಟು ವರ್ಗದಲ್ಲಿ ಸೋಲಿಗರು ಪ್ರಮುಖವಾದವರು. ಸೋಲಿಗರ ಆರಾಧ್ಯ ದೇವ ಜಡೇಸ್ವಾಮಿ, ಬಿಳಿಗಿರಿ ರಂಗಸ್ವಾಮಿ, ಮಾದೇಶ್ವರ ಮತ್ತು ಕ್ಯಾತೇದೇವರು ಅಥವಾ ಕೇತಪ್ಪ. [೧]
ಬಾಹ್ಯ ಸೌಂದರ್ಯ
[ಬದಲಾಯಿಸಿ]ಸೋಲಿಗರು ಗುಂಗುರು ಕೂದಲು, ಕುರುಚಲು ಗಡ್ಡ, ಕುಳ್ಳನೆಯ ದೇಹ, ದಪ್ಪತುಟಿ, ಅಗಲಮೂಗು ಹೊಂದಿರುತ್ತಾರೆ.
ಪುರಾಣದ ಪ್ರಕಾರ
[ಬದಲಾಯಿಸಿ]- ಸೋಲಿಗರ ಮೂಲದ ಬಗ್ಗೆ ಸ್ಪಷ್ಟ ನಿಲುವುಗಳಿಲ್ಲವಾದರೂ, ಪುರಾಣದ ಪ್ರಕಾರ- ಪಾರ್ವತಿ ಪರಮೇಶ್ವರರು ತಮ್ಮ ಬೆವರಿನಿಂದ ಎರಡು ಗೊಂಬೆಗಳನ್ನು ಮಾಡಿ, ಅದಕ್ಕೆ ಜೀವತುಂಬಿದಾಗ, ಅವುಗಳಲ್ಲಿ ಒಂದು ನೀಲಯ್ಯನಾಯಿತು. ಮತ್ತೊಂದು ಸಂಕಮ್ಮನಾಯಿತು. ಈ ಇಬ್ಬರನ್ನು ಸೋಲಿಗರ ಮೂಲ ಪುರುಷರೆಂದು ಹೇಳುತ್ತಾರೆ.
- ಸೋಲಿಗರ ದೇವರಾದ ಜಡೆಯಪ್ಪ ಚೋಳರಾಜರ ಕಾಲದಲ್ಲಿ, ತೆಂಕಣ ರಾಜ್ಯಕ್ಕೆ ಬಂದು ನೆಲೆಸಿದನು. ಇವರು ಭೂಮಿ ಸೃಷ್ಟಿಯಾದಾಗ ಹುಟ್ಟಿದರಂತೆ. ಸೋರೆಬುರುಡೆಯಲ್ಲಿ ಕುಲಕ್ಕೊಬ್ಬ ಬೇಡರ ಮೂಲಪುರುಷನನ್ನು ಸೃಷ್ಟಿಸಿದರು. ಆತನೇ ಕೊಂಬಿನ ಬಸಪ್ಪ. ಈತ ಜಾಂಬವಂತನನ್ನು ಸಮುದ್ರ ದಡದಲ್ಲಿ ಕಂಡಾಗ, ಅವನಿಗೆ ಜಾಂಬವಂತ ನಾನಿಲ್ಲಿರುವ ಸಂಗತಿಯನ್ನು ದೇವತೆಗಳಿಗೆ ಹೇಳಬೇಡ ಎನ್ನುತ್ತಾನೆ. ಆಗ ಕೊಂಬಿನ ಬಸಪ್ಪ 'ನೀನಿರುವ ಸಂಗತಿಯನ್ನು ದೇವತೆಗಳಿಗೆ ಹೇಳಿದರೆ ನನ್ನ ನಾಲಿಗೆಯನ್ನು ಕೊಯ್ದಿಡುತ್ತೇನೆ' ಎಂದು ವಾಗ್ದಾನ ಕೊಟ್ಟವನು, ಮುಂದೊಂದು ದಿನ ದೇವತೆಗಳ ಬಳಿಗೋಗಿ ಜಾಂಬವಂತನಿರುವ ಜಾಗವನ್ನು ತೋರಿಸುವನು. ಒಡನೆಯೇ ದೇವತೆಗಳು ಜಾಂಬವಂತನನ್ನು ಕೊಂದರು. ಅವನ ರಕ್ತ ಹರಿದ ಕಡೆಯೆಲ್ಲಾ ಮಣ್ಣಾಯಿತು. ಅವನ ಮೂಳೆಗಳೆಲ್ಲಾ ಕಲ್ಲಾಗಿ, ಭೂಮಿಯ ಸೃಷ್ಟಿಯಾಯಿತು.
ಚರಿತ್ರೆಯ ಪ್ರಕಾರ
[ಬದಲಾಯಿಸಿ]ಕಾಲಾನಂತರದಲ್ಲಿ ಇವರಿಗೊಬ್ಬ ರಾಜನಿದ್ದ. ಅವನೊಮ್ಮೆ ಶತೃರಾಜರ ವಿರುದ್ಧ ಯುದ್ಧ ಮಾಡುವಾಗ, ಸೋತು, ಜೀವರಕ್ಷಣೆಗಾಗಿ ತನ್ನ ಸೈನ್ಯದೊಂದಿಗೆ ಕಾಡಿಗೆ ಓಡಿಹೋದ. ಅಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ 'ಸೋಲನ ಹಂಬಿನ ಗಡ್ಡೆ'ಯನ್ನು ತಿಂದು ಜೀವಿಸುತ್ತಿದ್ದರು. ಸೋಲನ ಹಂಬಿನ ಗಡ್ಡೆ ಎಷ್ಟೇಲ್ಲಾ ತಿಂದರೂ, ಮತ್ತೆ ಮತ್ತೆ ಚಿಗುರಿ ಇಡೀ ಸೈನ್ಯಕ್ಕೆ ಆಹಾರವನ್ನು ಒದಗಿಸುತ್ತಿತ್ತು. ಇವರು ಜೀವನೋಪಾಯಕ್ಕಾಗಿ ಸೋಲನ ಹಂಬನ್ನು ಆಶ್ರಯಿಸಿದುದರಿಂದ ಇವರನ್ನು ಸೋಲಿಗರೆಂದು ಕರೆಯಲಾಯಿತು.
ಸೋಲಿಗರ ಪ್ರಭೇಧಗಳು
[ಬದಲಾಯಿಸಿ]ಸೋಲಿಗರಲ್ಲಿ ಪ್ರಮುಖವಾಗಿ ಐದು ಪ್ರಭೇಧಗಳಿವೆ.
- ಉರುಳಿ ಸೋಲಿಗರು - ಚಾಮರಾಜನಗರ ಜಿಲ್ಲೆಯಲ್ಲಿ ವಾಸಿಸುತ್ತಾರೆ.
- ಮಲೆ ಸೋಲಿಗರು - ಬೆಟ್ಟ-ಗುಡ್ಡಗಳಲ್ಲಿ ವಾಸಿಸುತ್ತಾರೆ.
- ಕಾಡು ಸೋಲಿಗರು - ಕಾಡು-ಮೇಡುಗಳಲ್ಲಿ ವಾಸಿಸುತ್ತಾರೆ.
- ಉರುಬತ್ತಿ ಸೋಲಿಗರು - ಕಾಕನಕೋಟೆಯ ಕಾಡಿನ ಪ್ರದೇಶದಲ್ಲಿ ವಾಸಿಸುತ್ತಾರೆ.
- ಬುರುಡೆ ಸೋಲಿಗರು - ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಲ್ಲಿ ವಾಸಿಸುತ್ತಾರೆ.
ಪೋಡು
[ಬದಲಾಯಿಸಿ]ಇವರು ವಾಸಿಸುವ ಪ್ರಾಂತ್ಯಗಳನ್ನು 'ಪೋಡು' ಎಂದು ಕರೆಯುತ್ತಾರೆ. ಇವರು ಪೋಡನ್ನು ಎಲ್ಲೆಂದರಲ್ಲಿ ಸುಮ್ಮ ಸುಮ್ಮನೆ ಕಟ್ಟುವುದಿಲ್ಲ. ಪೋಡು ಕಟ್ಟುವ ಸಂದರ್ಭದಲ್ಲಿ ಒಳ್ಳೆ ಶಕುನ ಅಥವಾ ಕನಸು ಬೀಳಬೇಕು. ಬಿಳಿಗಿರಿ ರಂಗ ಒಪ್ಪಿಗೆ ಕೊಡಬೇಕು. ಏಕೆಂದರೆ ಪೋಡು ಕಟ್ಟುವ ಸೋಲಿಗರಿಗೆ ಆತ ಕೊಟ್ಟಿರುವ ಶಾಪ ಈ ರೀತಿಯಾಗಿದೆ.
ಈ ವೊತ್ತು ನಿನ್ಗೆ
ತಿನ್ನ ಅನ್ನ ಚಿನ್ನ ಆಗ್ಲಿ
ಕುಡಿಯೋ ನೀರು ಪಾಯಸ ಆಗ್ಲಿ
ತುಂಡು ಬಟ್ಟೆ ನಿನ್ಗೆ ಎದ್ದು ಕಾಣೋ|ತಂದಾನ|
ಅವ್ನು ಸಾಪವ ಕೊಟ್ಟು ಬುಟ್ಟು
ನಾರಾಯ್ಣಮೂರ್ತಿಯವ್ರು
ಮೂರು ವರ್ಷಕೊಂದು ಪೋಡಾಗಲಿ
ಮೂರು ವರ್ಷ ತುಂಬಿದ ಮೇಲೆ
ದಬ್ಬೆ ಹುಲ್ಲು ಬರ್ಲೀಂತ ಸಾಪ ಇಟ್ಬುಟ್ಟಿದ್ದಾರೆ||
ಕುಲಗಳು
[ಬದಲಾಯಿಸಿ]- ಏಳುಕುಲದ ಸೋಲಿಗರಲ್ಲಿ - ಬೆಳ್ಳಿಕುಲ, ಹಾಲ್ಗುಲಗಳು ಪ್ರಮುಖವಾಗಿವೆ.
- ಐದುಕುಲದ ಸೋಲಿಗರಲ್ಲಿ - ಆಲುರ ಕುಲ, ತೆನೆಯರ ಕುಲ, ಸೂರ್ಯನಕುಲ, ಬೆಳ್ಳರಕುಲ, ಸಕಲರ ಕುಲ, ಜೇನುಕುಲ ಮತ್ತು ಕುಂಬಳ ಕುಲಗಳು ಪ್ರಮುಖವಾಗಿವೆ.
ಬೇಸಾಯ ಪದ್ಧತಿ
[ಬದಲಾಯಿಸಿ]ಇವರು ವ್ಯವಸಾಯ ಪದ್ಧತಿಯನ್ನು 'ಪೋಡು ಬೇಸಾಯ' ಎಂದು ಕರೆಯುತ್ತಾರೆ. ವ್ಯವಸಾಯಕ್ಕೆ ಇವರು ಎತ್ತುಗಳನ್ನು ಬಳಸುವುದಿಲ್ಲ. ಕುಲಕೋಟು ಎಂಬ ಆಯುಧವೇ ಇವರ ನೇಗಿಲು. ಗೊಬ್ಬರ ಉತ್ಪತ್ತಿಯ ಸಂಕೇತ.
ವೃತ್ತಿ
[ಬದಲಾಯಿಸಿ]ಕಾಡುಪ್ರಾಣಿಗಳನ್ನು ಬೇಟೆಯಾಡಿ ಆಹಾರ ಉತ್ಪಾದಿಸಿಕೊಳ್ಳುತ್ತಾರೆ. ಜೇನುಹಳಿದು ತಂದು ಕಾಡಂಚಿನ ಗ್ರಾಮಗಳಿಗೆ ಮಾರಾಟ ಮಾಡುತ್ತಾ, ನಾಡಿನ ಜನರ ಸಂಪರ್ಕವನ್ನು ಗಳಿಸಿಕೊಂಡಿದ್ದಾರೆ.
ಪಿನಾಸಿ ನೃತ್ಯ
[ಬದಲಾಯಿಸಿ]ತಲೆತಲಾಂತರಗಳಿಂದಲೂ ಕಾಡಿನ ಒಳಗಿದ್ದು ನಾಡಿನ ಸಂಪರ್ಕವನ್ನೇ ಕಾಣದ ನಿಸರ್ಗದೊಂದಿಗೆ ಅವಿನಾಭಾವ ಹೊಂದಿದ ಜನವರ್ಗ ಸೋಲಿಗರದು. ಇವರು ಸಂಸ್ಕೃತಿ ಕಲೆಯ ರಾಯಭಾರಿಗಳು. ಜಾತ್ರೆಗಳಲ್ಲಿ 'ಕೊಟ್ಟಹಬ್ಬ' ಸಂದರ್ಭದಲ್ಲಿ ಗಂಡಸರು-ಹೆಂಗರೆನ್ನದೆ ದೊಡ್ಡ ಸಂಪಿಗೆಯ ದಟ್ಟ ಅರಣ್ಯದಲ್ಲಿ ರಾತ್ರೋರಾತ್ರಿ ಪಿನಾಸಿನಾದಕ್ಕೆ, ಡೋಲಾಡಿನ ತನನಕ್ಕೆ ಕುಣಿದು ಕುಪ್ಪಳಿಸುತ್ತಾರೆ. ಇದೊಂದು ಅಪ್ಪಟ ಜನಪದ ನೃತ್ಯ. ಕುಣಿತದ ನಡು ನಡುವೆ ಜಡೇಸ್ವಾಮಿ, ಬಿಳಿಗಿರಿ ರಂಗಸ್ವಾಮಿ, ಮಾದೇಶ್ವರ ಎಂಬ ಉದ್ಗಾರಗಳನ್ನು ಕೂಗುತ್ತಾರೆ. ವಾದ್ಯ ನುಡಿಸುವವರಿಗೆ ವಿರಾಮ ಕೊಟ್ಟು "ಗೊರು ಗೊರುಕ ಗೊರುಕನ....ಗೊರು ಗೊರುಕ ಗೊರುಕನ..." ಎಂದು ಹಾಡಿಕೊಳ್ಳುತ್ತಾ, ವೃತ್ತಾಕಾರದಲ್ಲಿ ನಿಂತು ಚಲಿಸುತ್ತಾ ಕುಣಿಯುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Indian tribe secures unprecedented rights to tiger reserve Survival International
- The Soligas of Karnataka and their intimate relationship with nature Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. on Biodiversity of India wiki