ರಾಗಿ ಮುದ್ದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಗಿ
ರಾಗಿ
ರಾಗಿ ಮುದ್ದೆ
ರಾಗಿ ಮುದ್ದೆ,ಬಜ್ಜಿ

ರಾಗಿ ಮುದ್ದೆ [೧]ಕರ್ನಾಟಕದಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು" ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ. ಕರ್ನಾಟಕ ಸ್ಕೌಟ್ ಅಂಡ್ ಗೈಡ್ಸ್ ಪಡೆಯವರಲ್ಲಿ "ರಾಗಿ ಮುದ್ದೆ ತಿಂದು ತಿಂದು ಗಟ್ಟಿಯಾಗಿ ಎದ್ದೆವು" ಎಂಬ ಹಾಡು ಜನಪ್ರಿಯವಾಗಿದೆ.

ರಾಗಿಮುದ್ದೆ ಪ್ರಿಯರು[ಬದಲಾಯಿಸಿ]

  • ಮಾಜಿ ಪ್ರಧಾನಿ ಶ್ರೀ ದೇವೇಗೌಡರಿಂದಾಗಿ ರಾಗಿಮುದ್ದೆ ರಾಷ್ಟ್ರವ್ಯಾಪಿ ಹೆಸರು ಮಾಡಿದೆ. ಅವರು ರಾಗಿ-ಮುದ್ದೆ ಊಟವನ್ನು ಪ್ರತಿದಿನ ಮಾಡುತ್ತಾರೆ. ಅವರು ಪರದೇಶಕ್ಕೆ ಹೋದಾಗಲೂ ತಮ್ಮ ಅಡುಗೆಯವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು ಮತ್ತು ಅಲ್ಲಿಯೂ ತಪ್ಪದೆ ರಾಗಿ-ಮುದ್ದೆ ಊಟವನ್ನು ಮಾಡಿದ್ದರು. ಚಿತ್ರನಟ, ಡಾ.ರಾಜ್ ಕುಮಾರ್ ಅವರಿಗೆ ರಾಗಿ-ಮುದ್ದೆ ನಾಟಿಕೋಳಿ ಸಾರು ಬಹುಪ್ರಿಯವಾದ ಆಹಾರವಾಗಿತ್ತು. ಅದರೊಂದಿಗೆ ರಾಗಿಮುದ್ದೆ ಜೊತೆ ಹಿದಕ್ಬೇಳೆ ಹುಳಿ, ಮೆಂತ್ಯ ಸೊಪ್ಪಿನ್ಹುಳಿ, ಮೆಂತ್ಯ ಹಿಟ್ಟು , ಮಸ್ಸೊಪ್ಪಿನ ಸಾರು, ಉಪ್ಪುಸಾರು, ಮೊಳಕೆಕಾಳಿನ ಸಾರು ಇಲ್ಲವೆ ಹಾಗಲಕಾಯಿ ಗೊಜ್ಜು- ಒಳ್ಳೆ ನಂಟು.
  • ಹಳ್ಳಿಯ ರೈತಾಪಿಜನ, ಕಷ್ಟಪಟ್ಟು ಹೊಲಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರ ಹೊಟ್ಟೆಗೆ ದಿಪ್ಪಾದ/ದಿಂಡಾದ ರೀತಿಯ ಊಟವನ್ನು ರಾಗಿಮುದ್ದೆ ಒದಗಿಸುತ್ತದೆ.

ಮಾಡುವ ವಿಧಾನ[ಬದಲಾಯಿಸಿ]

  • ೧.ಬೇಕಾದ ಪದಾರ್ಥಗಳು ಹಾಗೂ ಪರಿಕರಗಳು :

ಒಂದು ದಪ್ಪತಳದ ಹಿತ್ತಾಳೆ ಪಾತ್ರೆ ಅಥವಾ ಅಲ್ಯೂಮಿನಿಯಮ್ ಪಾತ್ರೆಯೂ ಈ ಕೆಲಸಕ್ಕೆ ಬರುತ್ತದೆ.[೨] ಒಂದು ಮುದ್ದೆ ಗೊಟಾಯಿಸುವ ಮರದ ಕೋಲು, ಒಂದು ಪಾತ್ರೆಯಲ್ಲಿ ನೀರು, ಒಂದು ಚಿಕ್ಕ ಪಾತ್ರೆ, ಚಮಚ, ಗ್ಯಾಸ್ ಒಲೆ, ಸಣ್ಣಗೆ ಉರಿ ಮಾಡಿರಬೇಕು. ರಾಗಿಹಿಟ್ಟು ಹೆಚ್ಚು ತರಿಯೂ ಇರಬಾರದು ಅಥವಾ ತೀರ ನುಣ್ಣಗೂ ಇರಬಾರದು. ಮುದ್ದೆಗೆ ಹದವಾಗಿರಬೇಕು. ಹಳೆ ರಾಗಿಯನ್ನು "ಹಗೇವು"ನಿಂದ ತಂದು, ಮಿಶಿನ್ ನಲ್ಲೋ, ಬೀಸೋ ಕಲ್ಲಿನಲ್ಲೋ ಅಥವಾ ಮಿಕ್ಸಿಯಲ್ಲೋ ಬೀಸಿ, ಅದನ್ನು ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಉದಾಹರಣೆಗೆ ನಿಮಗೆ ಒಂದು ಕಪ್ ಹಿಟ್ಟಿನ ರಾಗಿಮುದ್ದೆ ಮಾಡಬೇಕೆಂದರೆ, ಒಂದೂವರೆ ಕಪ್/ಎರಡು ಕಪ್ ನೀರಿನ ಅಗತ್ಯವಿದೆ.

  • ೨.ಮಾಡುವ ವಿಧಾನ:

ಮೊದಲು ಒಂದು ಚಮಚ ರಾಗಿ ಹಿಟ್ಟನ್ನು, ಸ್ವಲ್ಪ ನೀರಿಗೆ ಹಾಕಿ, ಚೆನ್ನಾಗಿ ಪೇಸ್ಟ್ ತರಹ ಮಾಡಿಕೊಳ್ಳಿ. ಒಲೆಯ ಮೇಲೆ ಹಿತ್ತಾಳೆ ಪಾತ್ರೆ ಇಟ್ಟು ಅದಕ್ಕೆ, ಎರಡು ಕಪ್ ನೀರು ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ಈ ನೀರಿಗೆ ಚಿಕ್ಕಪಾತ್ರೆಯಲ್ಲಿ ಮಾಡಿಟ್ಟುಕೊಂಡ ರಾಗಿಹಿಟ್ಟಿನ-ಪೇಸ್ಟನ್ನು ಹಾಕಿ, ಕೈಯಾಡಿಸಿ. ಉಳಿದ ರಾಗಿ ಹಿಟ್ಟನ್ನು ನೀರಿನ ಮೇಲೆ ನಿಧಾನವಾಗಿ ಉದುರಿಸುತ್ತಾ ಹೋಗಿ. ರಾಗಿ-ಹಿಟ್ಟು ಮಿಶ್ರಿತ ನೀರನ್ನು, ಮರದ ಕೋಲಿನಿಂದ ಗೊಟಾಯಿಸಿ, ಪಾತ್ರೆಯಲ್ಲಿ ನೀರು, ಹಿಟ್ಟು ನಿಧಾನವಾಗಿ ಬೆರೆತುಕೊಳ್ಳುತ್ತಾ ಹೋಗುವುದು ನಮಗೆ ಕಾಣಿಸುತ್ತದೆ. ಅದಲ್ಲದೆ, ಚಿಕ್ಕ-ಚಿಕ್ಕ ಗುಳ್ಳೆಗಳು ಬರುತ್ತವೆ. ಸಣ್ಣ ಉರಿ ಮಾಡಿಕೊಂಡು, ಹಿಟ್ಟು ಗಂಟು ಬರದಂತೆ ಗೊಟಾಯಿಸಿದಾಗ ಹಿಟ್ಟು ಹದ ಬರುವುದು ತಿಳಿಯುತ್ತದೆ. ಬೆಂದ ಹಿಟ್ಟಿನಿಂದ ಸುವಾಸನೆಯನ್ನು ನಾವು ಮನಗಾಣಬಹುದು. ಆಗ ಪಾತ್ರೆಯನ್ನು ಕೆಳಗಿಳಿಸಿ, ನಿಧಾನವಾಗಿ ಮರದ ಬೋಗುಣಿಗೋ, ಇಲ್ಲದಿದ್ದರೆ, ಒಂದು ದೊಡ್ಡ ತಟ್ಟೆಯ ಮೇಲೋ, ಬೇಸಿದ ಹಿಟ್ಟನ್ನು ಸುರಿಯಿರಿ. ಇಲ್ಲಿಗೆ ರಾಗಿ ಮುದ್ದೆ ತಯಾರಿ ಮುಗಿಯುತ್ತದೆ.

ಮುದ್ದೆ-ತೊಳೆಸುವ/ಕಟ್ಟುವ ಪ್ರಕ್ರಿಯೆ[ಬದಲಾಯಿಸಿ]

ಒಂದು ಪಾತ್ರೆಯಲ್ಲಿ ಸ್ವಲ್ಪ ತಣ್ಣನೆಯ ನೀರು ಇರಲಿ. ನಿಮ್ಮ ಕೈಯನ್ನು ತಣ್ಣನೆಯ ನೀರಿನಲ್ಲಿ ಅದ್ದಿ-ಅದ್ದಿ, ಅದೇ ಸಮಯದಲ್ಲಿ ಬೇಸಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಕರಂಡಿಯ ನೆರವಿನಿಂದ ತೆಗೆದುಕೊಂಡು, ಮುದ್ದೆಯ ಆಕಾರದಲ್ಲಿ ತಯಾರಿಸಿ. ಇದನ್ನು "ಮುದ್ದೆ ತೊಳೆಸುವ/ಕಟ್ಟುವ ಪ್ರಕ್ರಿಯೆ" ಎನ್ನುತ್ತಾರೆ. ಹೊಸಬರಿಗೆ ಸ್ವಲ್ಪ ಅನುಭವಸ್ಥರ ಸಹಾಯದ ಅಗತ್ಯವಿದೆ. ಒಮ್ಮೊಮ್ಮೆ ಕೈ ಬೊಬ್ಬೆ ಬರುವ ಸಂಭವವೂ ಉಂಟು. ಬಿಸಿ ಇದ್ದಾಗಲೇ ರಾಗಿಮುದ್ದೆ ಕಟ್ಟಿದರೆ ಆ ಮುದ್ದೆ ನುಣ್ಣಗೆ ಚೆಂಡಿನ ಆಕೃತಿಯಲ್ಲಿರುತ್ತದೆ. ಕೊಂಚ ಆರಿದ ಮೇಲೆ ಕಟ್ಟಿದರೆ ಬೇರೆ ಆಕಾರವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಅನುಭವಸ್ಥ ಹೆಣ್ಣುಮಕ್ಕಳು/ಹಿರಿಯ ಹೆಂಗಸರು ಪಕ್ಕದಲ್ಲೇ ಇದ್ದರೆ ಒಳ್ಳೆಯದು. ಈಗ ತಾಜಾ ರಾಗಿಮುದ್ದೆ ಸಿದ್ಧ. ಜೋಳದ ಮುದ್ದೆಯನ್ನು ಇದೇ ತರಹ ಮಾಡಿ ಕೊಳ್ಳಬೇಕು. ಅಂದರೆ ಮೇಲೆ ತಿಳಿಸಿದ ವಿಧಿ-ಕ್ರಮ ಸರ್ವೇ ಸಾಮಾನ್ಯವಾದದ್ದು.

ಬಡಿಸುವುದು[ಬದಲಾಯಿಸಿ]

ಇದನ್ನು ಬಡಿಸುವುದು ಹಾಗೂ ಅದರ ಸೇವನೆ ಅತಿಮುಖ್ಯವಾದ ಹಂತಗಳು. ಬಡಿಸಲು ಇನ್ನೊಬ್ಬರ ಸಹಾಯ ಪಡೆಯುವುದು ಒಳ್ಳೆಯದು. ಹೊಸಬರಿಗೆ, ಎರಡನ್ನೂ ಒಟ್ಟಿಗೆ ಮಾಡುವಾಗ ಕಷ್ಟವಾಗಬಹುದು. ರಾಗಿಮುದ್ದೆಯ ಮೇಲೆ ಒಳ್ಳೆಯ ಬೆಣ್ಣೆಕಾಸಿದ ಹಸುವಿನ ತುಪ್ಪ, ಬಹಳ ರುಚಿ ಕೊಡುತ್ತದೆ. ಮೇಲೆ ಹೇಳಿದಂತೆ ಬಿಸಿ-ಬಿಸಿ ಮುದ್ದೆಯ ಜೊತೆಗೆ, ಹಾಗಲಕಾಯಿ ಗೊಜ್ಜು, ಮೆಂತ್ಯದ ಹಿಟ್ಟು, ಮಸ್ಸೊಪ್ಪಿನ ಸಾರು, ಮೊಳಕೆಕಾಳಿನ ಸಾರು, ಉಪ್ಪುಸಾರು, ಹಿದುಕು-ಬೇಳೆ ಹುಳಿ ಮತ್ತು ಬೇಳೆ ಸಾರು ಇವೆಲ್ಲವೂ ಅತ್ಯಂತ ರುಚಿ ಕೊಡುವ ಸಾಧನಗಳು. ನಿಮಗೆ ಬೇಕಾದ ಹಾಗೆ ರುಚಿಯನ್ನು ನೀವೇ ಬದಲಿಸಿಕೊಳ್ಳಬಹುದು. ಉದಾಹರಣೆಗೆ:ಕುರೆಶ್ಯಾಣಿಪುಡಿ ಮತ್ತು ಮೊಸರನ್ನು ಸೇರಿಸಿ,ರಾಗಿಮುದ್ದೆ-ಊಟಮಾಡಿ. ಬೆಂಡೆಕಾಯಿ ಗೊಜ್ಜು, ಈರುಳ್ಳಿ ಗೊಜ್ಜು, ದೊಡ್ಡಪತ್ರೆ ತಂಬೂಳಿ, ಮಜ್ಗೆ ಪಳದ್ಯ, ಸೌತೆಕಾಯಿ-ಮೊಸರು ಸಾಸಿವೆ, ಚಟ್ಣೀ-ಪುಡಿ, ಮತ್ತು ಮೊಸರು ಇತ್ಯಾದಿಗಳನ್ನು ಧಾರಾಳವಾಗಿ ಬಳಸಬಹುದು. ಎಲ್ಲಾ ತರಕಾರಿಗಳಿಂದ ಮಾಡಿದ ಹುಳಿ, ಮುದ್ದೆ-ಊಟಕ್ಕೆ ಹೇಳಿ ಮಾಡಿಸಿದಂತೆ ಕೆಲಸ ಮಾಡುತ್ತವೆ. ಉದಾಹರಣೆಗಾಗಿ: ಆಲೂಗೆಡ್ಡೆ, ಎಲೆಕೋಸು, ಹೂಕೋಸು, ಸೀಮೆ ಬದ್ನೇಕಾಯಿ, ಸೀ-ಅಥವಾ-ಬಿಳಿ-ಕುಂಬಳ್ಕಾಯಿ, ಕಡ್ಳೆಕಾಳ್ಹುಳಿ, ಬದ್ನೆಕಾಯಿ, ಚಿಕ್ಕೀರುಳ್ಳಿ, ನುಗ್ಗೆಕಾಯಿ, ಇತ್ಯಾದಿ. ಸಬ್ಬಸ್ಗೆ ಸೊಪ್ಪಿನ ಸಾರು, ಚೆನ್ನಾಗಿರುತ್ತದೆ. ಕಾಳುಮೆಣಸಿನ ಸಾರಿನಲ್ಲೂ ಒಮ್ಮೆ ರುಚಿ ನೋಡಬಹುದು. ರಾಗಿಮುದ್ದೆಯನ್ನು ಆದಷ್ಟು ಮಾಡಿದ ಕೂಡಲೆ ಸೇವಿಸಿದರೆ ಚೆನ್ನಾಗಿರುತ್ತದೆ. ಒಂದು ವೇಳೆ ಸ್ವಲ್ಪ ಸಮಯದ ನಂತರ ತಿನ್ನಬೇಕಾದ ಅಗತ್ಯವಿದ್ದಾಗ ಮುದ್ದೆಯ ಮೇಲೆ ಚಿಕ್ಕ ಬಿಳಿ/ ಒದ್ದೆ ಮಾಡಿದ ಅರಿವೆಯನ್ನು ಮುಚ್ಚಿ ನಂತರ ತಿನ್ನಬಹುದು.

ಎಲ್ಲರಿಗೂ ತಿಳಿದ ಸಂಗತಿ :[ಬದಲಾಯಿಸಿ]

  • ರಾಗಿ-ಮುದ್ದೆಯನ್ನು ನುಂಗಬೇಕು, ಅಗಿಯಬಾರದು ಈ ವಿಷಯವನ್ನು ಗಮನದಲ್ಲಿಡಿ. ರಾಗಿಮುದ್ದೆ ಒಳ್ಳೆಯ ಪೌಷ್ಟಿಕ ಆಹಾರ. ಸುಲಭವಾಗಿ ಜೀರ್ಣವಾಗುವುದು. ಅಬಾಲ ವೃದ್ಧರಾದಿಯಾಗಿ ಸರ್ವರೂ ಸೇವಿಸಬಹುದಾದ, ಅತ್ಯುತ್ತಮ ಆಹಾರ. ರಾಗಿ ಮುದ್ದೆಯು ಮೂಲತಃ ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಉಪಯೋಗಿಸುವರಾದರೂ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರು ರಾಗಿಮುದ್ದೆಯನ್ನು ಬಳಸುತ್ತಿದ್ದಾರೆ.
  • ಅಲ್ಲದೆ ಈ ರಾಗಿಮುದ್ದೆಯು ವಿಜಯನಗರ ರಾಜರ ಕಾಲದಲ್ಲಿ ದಕ್ಷಿಣ ಆಂಧ್ರ ಪ್ರದೇಶ, ಉತ್ತರ ತಮಿಳುನಾಡುಗಳನ್ನು ಪ್ರವೇಶಿಸಿ ಅಲ್ಲಿಯ ಜನರ ಆಹಾರ ಪದ್ದತಿಯಾಗಿದೆ. ವಿಜಯನಗರ ಅರಸರಾದ 'ಪ್ರೌಢದೇವರಾಯ' ಹಾಗೂ 'ಕೃಷ್ಣದೇವರಾಯರು' ಇವರ ಮುಖ್ಯ ಆಹಾರ ರಾಗಿ'ಮುದ್ದೆ'ಯಾಗಿದ್ದಿತು.

ಉಲ್ಲೇಖಗಳು[ಬದಲಾಯಿಸಿ]