ವಿಷಯಕ್ಕೆ ಹೋಗು

ತಂಬುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ಬೇಸಿಗೆಯಲ್ಲಿ ಅನ್ನದ ಜತೆಗೆ ಸೇವಿಸಲು ಹವ್ಯಕರ ಮನೆಗಳಲ್ಲಿ ಮಾಡುವ ವಿಶಿಷ್ಟ ಬಗೆಯ ಅಡುಗೆ. ಇದು ಸಾಮಾನ್ಯವಾಗಿ ದ್ರವ ರೂಪದಲ್ಲಿ ಇರುತ್ತದೆ. ಮಜ್ಜಿಗೆಯನ್ನು ಇದರಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮೂಲ ವಸ್ತುವನ್ನು ಉಪಯೋಗಿಸುತ್ತೇವೆಯೊ, ಅದರ ತಂಬುಳಿಯಾಗುತ್ತದೆ. ಆ ಪದಾರ್ಥದ ಜತೆಗೆ, ತೆಂಗಿನತುರಿಯನ್ನು ಸೇರಿಸಿ, ರುಬ್ಬಿ, ಮಜ್ಜಿಗೆಯನ್ನು ಮತ್ತ ಉಪ್ಪನ್ನು ಸೇರಿಸಿ ಒಗ್ಗರಣೆ ಕೊಡುವುದು. ಉದಾಹರಣೆಗೆ, ಮಾವಿನಕಾಯಿಯನ್ನು ಉಪಯೋಗಿಸಿದರೆ, ಅದನ್ನು ಮಾವಿನಕಾಯಿ ತಂಬುಳಿಯೆಂದು ಕರೆಯುತ್ತಾರೆ. [೧] ನಿಸರ್ಗದತ್ತವಾಗಿ ಸಿಗುವ ಸೊಪ್ಪು, ಚಿಗುರು, ಗಿಡಮೂಲಿಕೆಗಳು, ಬೇರುನಾರುಗಳು ಅಥವಾ ಸಾಂಬಾರುದ್ರವ್ಯಗಳಿಂದ ತಯಾರಾಗುವ ಪದಾರ್ಥವೇ ತಂಬುಳಿ. ಈ ಪದಾರ್ಥವು ಬೇಸಿಗೆ, ಮಳೆ, ಚಳಿ ಈ ಮೂರೂ ಕಾಲಕ್ಕೂ ಸಲ್ಲುತ್ತದೆ. ಮನೆಯ ಸುತ್ತಮುತ್ತಲಿನ ಔಷಧೀಯ ಗುಣಗಳುಳ್ಳ ಸಸ್ಯಗಳ ಪರಿಚಯವಿದ್ದರೆ ಸಾಕು ವಿವಿಧ ಬಗೆಯ ತಂಬುಳಿ ಮಾಡಬಹುದು.[೨] ಉದರ ಸಂಬಂಧಿ ಖಾಯಿಲೆಗಳಿಗೆ, ಬಾಯಿಹುಣ್ಣು, ಶೀತ, ಕೆಮ್ಮು ಇತ್ಯಾದಿ ಖಾಯಿಲೆಗಳಿಗೂ ಕೂಡಾ ದಿವ್ಯೌಷಧ ಆಗಬಲ್ಲಂತಹ ಅದೆಷ್ಟೊ ಗಿಡಮೂಲಿಕೆಗಳು, ಚಿಗುರುಗಳು ನಮ್ಮ ಮನೆಯಂಗಳದಲ್ಲೆ ಕಾಣಸಿಗುತ್ತವೆ.

ಬಳಸುವ ಮೂಲವಸ್ತುಗಳು[ಬದಲಾಯಿಸಿ]

ತಂಬುಳಿ ಮಾಡಲು ಎಲೆಗಳಾದ ಒಂದೆಲಗ, ಎಲೆಮುರಿ, ಬಿಲ್ವಪತ್ರೆ ಹಾಗೂ ವೀಳ್ಯದೆಲೆ, ಚಿಗುರುಗಳಾದ ಮಾದಿರ, ನೆಲನೆಲ್ಲಿ, ಅತ್ತಿ ಮತ್ತು ನೆಕ್ಕರೆ, ಗೆಡ್ಡೆಗಳಾದ ಶುಂಠಿ, ನೀರುಳ್ಳಿ, ಬೆಳ್ಳುಳ್ಳಿ, ನೆಲ್ಲಿಕಾಯಿ, ಸಮೂಲವಾಗಿ ಗರ್ಗ, ಸಾಂಬಾರ ಬಳ್ಳಿ ಮತ್ತು ಇಲಿಕಿವಿ, ಕಾಳುಗಳಾದ ಮೆಂತೆ, ಜೀರಿಗೆ ಹಾಗೂ ಓಮ, ಹೂವುಗಳಾದ ತುಂಬೆ, ಬಿಸಿ ದಾಸವಾಳ ಮತ್ತು ಅಶೋಕ, ದಾಳಿಂಬೆ ಹಾಗೂ ಕಿತ್ತಳೆ ಸಿಪ್ಪೆಗಳನ್ನು ಬಳಸುತ್ತಾರೆ.

ತಯಾರಿಸುವ ವಿಧಾನ[ಬದಲಾಯಿಸಿ]

ಹೆಚ್ಚಿನೆಲ್ಲಾ ತಂಬುಳಿಗಳನ್ನು ತಯಾರಿಸುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಅವುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮ ಹಾಗೂ ಔಷಧೀಯ ಗುಣಗಳಲ್ಲಿ ವ್ಯತ್ಯಾಸವಿದೆ. ಮೂಲ ವಸ್ತುಗಳ ಆಧಾರದ ಮೇಲೆ ತಂಬುಳಿ ಮಾಡುವ ವಿಧಾನವನ್ನು ಎರಡು ರೀತಿಯಾಗಿ ವಿಂಗಡಿಸಬಹುದು.[೩] ಒಂದೆಲಗ ಹಾಗೂ ಮಾದಿರವನ್ನು ಹೊರತುಪಡಿಸಿ ಎಲ್ಲಾ ಎಲೆಗಳು, ಚಿಗುರುಗಳು, ಸಮೂಲ, ಕಾಳುಗಳು, ಹೂವುಗಳುಗಳು ಹಾಗೂ ಸಿಪ್ಪೆ ಇವುಗಳ ತಂಬುಳಿ ತಯಾರಿಸುವ ವಿಧಾನ ಒಂದೇ ರೀತಿ. ಮೂಲವಸ್ತುವಿನೊಂದಿಗೆ ಒಂದು ಚಿಟಿಕೆ ಜೀರಿಗೆ ಹಾಗೂ ಒಣಮೆಣಸನ್ನು ಹಾಕಿ ತುಪ್ಪದಲ್ಲಿ ಹದವಾಗಿ ಹುರಿಯಬೇಕು. ಬಳಿಕ ಇವೆಲ್ಲವನ್ನೂ ಒಂದು ಮುಷ್ಟಿ ತೆಂಗಿನಕಾಯಿ ತುರಿಯೊಂದಿಗೆ ರುಬ್ಬಬೇಕು. ಈ ಮಿಶ್ರಣದೊಂದಿಗೆ ಒಂದು ಲೋಟ ಮಜ್ಜಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಕೊನೆಯದಾಗಿ ಒಗ್ಗರಣೆ ಕೊಟ್ಟರೆ ರುಚಿಕರವಾದ ತಂಬುಳಿ ಸಿದ್ಧ.[೪] ಉಳಿದಂತೆ ಎಲ್ಲಾ ಗೆಡ್ಡೆಗಳು, ಕಾಯಿಗಳು ಹಾಗೂ ಒಂದೆಲಗ ಮತ್ತು ಮಾದಿರದ ತಂಬುಳಿ ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೂಲವಸ್ತುವಿನೊಂದಿಗೆ ಹಸಿಮೆಣಸು ಹಾಗೂ ಒಂದು ಮುಷ್ಟಿ ತೆಂಗಿನಕಾಯಿ ತುರಿ ಹಾಕಿ ರುಬ್ಬಬೇಕು. ಈ ಮಿಶ್ರಣಕ್ಕೆ ಒಂದು ಲೋಟ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಕೊನೆಗೆ ಒಗ್ಗರಣೆ ಹಾಕಿದರೆ ತಂಬುಳಿ ತಯಾರಾದಂತೆಯೇ.[೫]

ಆರೋಗ್ಯವರ್ಧಕ ತಂಬುಳಿ[ಬದಲಾಯಿಸಿ]

ಅಜೀರ್ಣವಾಗಿದ್ದರೆ ಅಥವಾ ನಾಲಗೆಯಲ್ಲಿ ಅಗ್ರವಿದ್ದರೆ ಒಂದೆಲಗ, ಮಾದಿರ, ನೆಕ್ಕರೆ, ನೀರುಳ್ಳಿ, ನೆಲ್ಲಿ, ಸಾಂಬಾರ ಬಳ್ಳಿ, ಇಲಿಕಿವಿ, ಜೀರಿಗೆ, ದಾಳಿಂಬೆ ಸಿಪ್ಪೆ, ಕಿತ್ತಳೆ ಸಿಪ್ಪೆ ಇವುಗಳಲ್ಲಿ ಯಾವುದಾದರೊಂದು ಬಗೆಯ ತಂಬುಳಿ ಮಾಡಿ ಸೇವಿಸಿದರೆ ಅಗ್ರ ನಿವಾರಣೆಯಾತ್ತದೆ. ಜೊತೆಗೆ ಉತ್ತಮ ಜೀರ್ಣಕಾರಿ.ಹೊಟ್ಟೆ ಹುಳದ ಬಾಧೆಯಿದ್ದರೆ ಅತ್ತಿ, ಬೆಳ್ಳುಳ್ಳಿ, ಗರ್ಗ, ಇಲಿಕಿವಿ, ಬಿಳಿ ದಾಸವಾಳದ ತಂಬುಳಿಯಿಂದ ಹುಳದ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಈ ಸಮಸ್ಯೆ ಬಾಧಿಸದಂತೆ ತಡೆಯುತ್ತದೆ.ಶೀತ, ಜ್ವರ, ಕೆಮ್ಮಿದ್ದರೆ ವೀಳ್ಯದೆಲೆ, ಮಾದಿರ, ಶುಂಠಿ, ಬೆಳ್ಳುಳ್ಳಿ, ಸಾಂಬಾರ ಬಳ್ಳಿ, ತುಂಬೆ ಹೂವಿನ ತಂಬುಳಿ ಸೇವನೆ ಉತ್ತಮ. ಎಲೆಮುರಿ ಅಥವಾ ಜೀರಿಗೆಯ ತಂಬುಳಿ ಬಾಯಿಯಲ್ಲಾಗುವ ಹುಣ್ಣನ್ನು ನಿವಾರಿಸುತ್ತದೆ. ಸಿಹಿಮೂತ್ರದ ಸಮಸ್ಯೆ ಇರುವವರು ಬಿಲ್ವಪತ್ರೆ, ನೀರುಳ್ಳಿ, ಗರ್ಗ, ಮೆಂತೆ ತಂಬುಳಿ ಸೇವಿಸಿದರೆ ಈ ರೋಗ ನಿಯತ್ರಣದಲ್ಲಿರುತ್ತದೆ. ಅಜೀರ್ಣದಿಂದ ಅಥವಾ ವಾಯುವಿನಿಂದಾಗುವ ಹೊಟ್ಟನೋವಿನ ಶಮನಕ್ಕೆ ನೆಕ್ಕರೆ, ನೆಲ್ಲಿ, ಇಲಿಕಿವಿ, ಜೀರಿಗೆ ತಂಬುಳಿ ಉಪಕಾರಿ. ಮಾದಿರ, ಸಾಂಬಾರ ಬಳ್ಳಿ, ಜೀರಿಗೆ ತಂಬುಳಿ ಮಲಬದ್ಧತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಾಯುವಿನ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆಯಿರುವವರು ಜೀರಿಗೆ, ಓಮ ತಂಬುಳಿ ಸೇವಿಸಿದರೆ ಉತ್ತಮ. ಇದರಿಂದ ಗ್ಯಾಸ್ಟ್ರಿಕ್ ನಿಯಂತ್ರಣದಲ್ಲಿರುತ್ತದೆ. ಮೆಂತೆ, ಬಿಳಿ ದಾಸವಾಳ, ಅಶೋಕ ಹೂವಿನ ತಂಬುಳಿ ಸೇವನೆಯಿಂದ ದೇಹ ತಂಪಾಗಿರುತ್ತದೆ. ಎಲೆಮುರಿ, ನೆಲ್ಲಿ ತಂಬುಳಿ ಸೇವನೆಯಿಂದ ದೇಹದಲ್ಲಿ ಕಬ್ಬಿಣ ಸತ್ವ ವೃದ್ಧಿಯಾಗುತ್ತದೆ. ನೆಲನೆಲ್ಲಿ ತಂಬುಳಿ ಹಳದಿ ರೋಗ ನಿವಾರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಗರ್ಗದ ತಂಬುಳಿ ದೇಹರಕ್ತವನ್ನು ಶುದ್ಧೀಕರಿಸುತ್ತದೆ.[೬] ಮನೆಯಂಗಳದಲ್ಲಿಯೇ ಸುಲಭವಾಗಿ ದೊರಕುವ ಗಿಡಮೂಲಿಕೆಗಳ ತಂಬುಳಿ ಮಾಡಿ ಸೇವಿಸುವುದರ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಗಗಳು ಬಾಧಿಸದಂತೆ ತಡೆಗಟ್ಟಬಹುದು. ತಂಬುಳಿಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದ ಕಾರಣ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ತಂಪು ತಂಬುಳಿ,www.prajavani.net[ಶಾಶ್ವತವಾಗಿ ಮಡಿದ ಕೊಂಡಿ]
  2. https://www.vijayavani.net/%E0%B2%86%E0%B2%B0%E0%B3%8A%E0%B3%95%E0%B2%97%E0%B3%8D%E0%B2%AF-%E0%B2%AC%E0%B3%87%E0%B2%95%E0%B3%87-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF-%E0%B2%AE%E0%B2%BE%E0%B2%A1%E0%B2%BF/[ಶಾಶ್ವತವಾಗಿ ಮಡಿದ ಕೊಂಡಿ]
  3. http://archana-hebbar.blogspot.com/2009/10/blog-post.html
  4. "ಆರ್ಕೈವ್ ನಕಲು". Archived from the original on 2021-01-18. Retrieved 2019-03-01.
  5. "ಆರ್ಕೈವ್ ನಕಲು". Archived from the original on 2021-01-18. Retrieved 2019-03-01.
  6. http://kannada.webdunia.com/article/recipe-in-kannada/tambuli-is-good-for-health-117122100026_1.html
"https://kn.wikipedia.org/w/index.php?title=ತಂಬುಳಿ&oldid=1168994" ಇಂದ ಪಡೆಯಲ್ಪಟ್ಟಿದೆ