ವಿಷಯಕ್ಕೆ ಹೋಗು

ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲ್ಲಿಗೆ
ಮಲ್ಲಿಗೆ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
Lamiales
ಕುಟುಂಬ:
ಪಂಗಡ:
Jasmineae
ಕುಲ:
ಜಾಸ್ಮಿನಮ್

Type species
ಜಾಸ್ಮಿನಮ್ ಒಫಿಷಿನಾಲ್ L.
ಪ್ರಜಾತಿ

೨೦೦ರಕ್ಕೂ ಹೆಚ್ಚು ಮೂಲ: ING,[೧] CPN,[೨] UniProt[೩]

ಮಲ್ಲಿಗೆ ಹೂ

ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ.[೪][೫][೬]: 193  ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ.

ಇವುಗಳ ಪೈಕಿ ಹೆಚ್ಚಿನವು ಸುಗಂಧಪೂರಿತ ಹೂಗಳ ಸಲುವಾಗಿ ಆಯ್ದು ಬೆಳೆಸಿದಂಥವು. ಇವುಗಳ ಗುಣ ಲಕ್ಷಣಗಳಲ್ಲಿ ಹಲವು ವೇಳೆ ಪ್ರಮುಖ ವ್ಯತ್ಯಾಸಗಳೇನೂ ಕಂಡುಬರದಿರುವುದರಿಂದ ಪ್ರಭೇದಗಳ ಸಂಖ್ಯೆ ಇಷ್ಟೇ ಎಂದು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಅನೇಕವು ಪ್ರತ್ಯೇಕ ಪ್ರಭೇದಗಳಾಗಿರದೆ ಹೂವಿನ ಗಾತ್ರ, ಸುವಾಸನೆ ಇತ್ಯಾದಿ ಗುಣಗಳಲ್ಲಿ ಕಂಡುಬರುವ ಸೂಕ್ಷ್ಮ ವ್ಯತ್ಯಾಸಗಳ ಆಧಾರದ ಮೇಲೆ ಹೆಸರಿಸಲಾಗಿರುವ ಸುಪರಿಚಿತ ಪ್ರಭೇದಗಳ ವಿಭಿನ್ನ ರೂಪಗಳಾಗಿರುವುದುಂಟು.

ಮಲ್ಲಿಗೆಯಲ್ಲಿ ಹಲವು ವಿಧಗಳಿವೆ. ಕಾಡುಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಮೈಸೂರು ಮಲ್ಲಿಗೆ, ಮಂಗಳೂರು ಮಲ್ಲಿಗೆ, ಮುತ್ತುಮಲ್ಲಿಗೆ, ಸಾವಿರ ಮಲ್ಲಿಗೆ , ಏಳು ಪದರಿನ ಮಲ್ಲಿಗೆ

ವ್ಯಾಪ್ತಿ[ಬದಲಾಯಿಸಿ]

ಬಹುಪಾಲು ಪ್ರಭೇದಗಳು ಕಾಣದೊರೆಯುವುದು ಪ್ರಮುಖವಾಗಿ ಹಿಮಾಲಯ, ಚೀನ ಮತ್ತು ಮಲೇಷ್ಯಗಳನ್ನು ಒಳಗೊಂಡಿರುವ ಮಧ್ಯ ಏಷ್ಯ ಪ್ರದೇಶ. ಹೀಗಾಗಿ ಈ ಪ್ರದೇಶವೇ ಮಲ್ಲಿಗೆಯ ಉಗಮಸ್ಥಾನವಾಗಿರಬೇಕೆಂದು ನಂಬಲಾಗಿದೆ. ಪ್ರಪಂಚಾದ್ಯಂತ ಮಲ್ಲಿಗೆಯ ಸುಮಾರು 200 ಪ್ರಭೇದಗಳಿವೆ. ಭಾರತದಲ್ಲಿ ಸುಮಾರು 40 ಪ್ರಭೇದಗಳಿವೆ ಎನ್ನಲಾಗಿದೆ.

ಭಾರತದಲ್ಲಿ ಇದು ಬಲು ಪ್ರಾಚೀನ ಕಾಲದಿಂದ ಕೃಷಿಯಲ್ಲಿರುವ ಸಸ್ಯ. ಇದರ ವಿವಿಧ ಬಗೆಗಳನ್ನು ನಿರ್ದೇಶಿಸುವ ಸುಮಾರು 140 ಸಂಸ್ಕೃತ ಹೆಸರುಗಳಿರುವುದೂ ಅಮರಕೋಶದಲ್ಲಿ 6 ಬಗೆಯ ಮಲ್ಲಿಗೆಗಳ 16 ಹೆಸರುಗಳ ಉಲ್ಲೇಖವಿರುವುದೂ ಈ ಅಭಿಪ್ರಾಯಕ್ಕೆ ಪುಷ್ಟಿ ಕೊಡುತ್ತವೆ.

ಗುಣಲಕ್ಷಣಗಳು[ಬದಲಾಯಿಸಿ]

ಎಲೆಗಳು ನಿತ್ಯಹರಿದ್ವರ್ಣ ಅಥವಾ ಪರ್ಣಪಾತಿಯಾಗಿರಬಹುದು. ಎಲೆಗಳು ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿರುವುವು; ಇವು ಸರಳ ಇಲ್ಲವೆ ಏಕಪಿಚ್ಛಕ ರೀತಿಯ ಸಂಯುಕ್ತ ಬಗೆಯವಾಗಿರಬಹುದು. ಹೂಗಳು ಮೂರರ ಅಥವಾ ಹೆಚ್ಚು ಸಂಖ್ಯೆಯ ಮಂಜರಿಗಳಲ್ಲಿ ಅರಳುವುವು. ಹೂಗಳ ಬಣ್ಣ ಸಾಮಾನ್ಯವಾಗಿ ಬಿಳಿ. ಕೆಲವು ಪ್ರಭೇದಗಳಲ್ಲಿ ಹಳದಿ ಬಣ್ಣದ ಹೂಗಳಿರುವುದುಂಟು (ಉದಾ: ಜಾಸ್ಮಿನಮ್ ಹ್ಯೂಮೈಲ್-ಹಸುರುಮಲ್ಲಿಗೆ, ಅಥವಾ ಹಳದಿ ಜಾಜಿ). ಪ್ರತಿ ಹೂವಿನಲ್ಲಿ 4-9 ನಿದಳಗಳೂ 5-15 ದಳಗಳೂ ಇವೆ. ದಳಗಳ ಬುಡಭಾಗ ಕೊಳವೆಯಂತಿದೆ. ಇದರ ಕಂಠಭಾಗದಲ್ಲಿ ಎರಡು ಪುಂಕೇಸರಗಳಿರುವುವು. ಜಾಯಾಂಗ ಒಂದು ಇಲ್ಲವೆ ಎರಡು ಸ್ತ್ರೀಕೇಸರಗಳಿಂದ ರಚಿತವಾಗಿದೆ.

ಬೇಸಾಯ[ಬದಲಾಯಿಸಿ]

ಮಲ್ಲಿಗೆಯ ವಿವಿಧ ಬಗೆಗಳು ಶುಷ್ಕತಾನಿರೋಧಿ ಗುಣವುಳ್ಳ ಗಟ್ಟಿಮುಟ್ಟಾದ ಗಿಡಗಳು. ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳೆರಡರ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಬೆಳೆಯಬಲ್ಲವು. ಕೆಲವು ಬಗೆಗಳನ್ನು ಯೂರೋಪಿನ ಕೆಲವು ಪ್ರದೇಶಗಳಲ್ಲಿ ಬೆಳೆಸಲಾಗಿದ್ದು ಇಂಥವು 100 ಸೆ. ನಷ್ಟು ಕಡಿಮೆ ಉಷ್ಣತೆಯನ್ನು ಕೂಡ ಸಹಿಸಬಲ್ಲವೆನ್ನಲಾಗಿದೆ. ಭಾರತದಲ್ಲಿ ಎಲ್ಲ ಕಡೆಯೂ ಮಲ್ಲಿಗೆಗಳ ಕೃಷಿಯಿದೆ. ಮೈದಾನ ಸೀಮೆ ಮಾತ್ರವಲ್ಲದೆ 3000 ಮೀ ವರೆಗಿನ ಬೆಟ್ಟ ಪ್ರದೇಶಗಳಲ್ಲೂ ಇವನ್ನು ಬೆಳೆಸಲಾಗುತ್ತಿದೆ. ಸಾಧಾರಣವಾಗಿ ಯಾವುದೇ ತೆರನ ಮಣ್ಣಿನಲ್ಲಿ ಬೆಳೆಸಬಹುದಾದರೂ ಗೋಡುಭೂಮಿ ಇಲ್ಲವೆ ನೀರಾವರಿ ಸೌಲಭ್ಯವಿರುವ ಒಣಮರಳು ಭೂಮಿಯಲ್ಲಿ ಇವುಗಳ ಬೆಳೆವಣಿಗೆ ಹೆಚ್ಚು ಸಮೃದ್ಧ. ಜೇಡಿಮಣ್ಣಿನ ಭೂಮಿಯಲ್ಲಿ ಕಾಂಡ ಎಲೆಗಳ ಬೆಳವಣಿಗೆ ಹುಲುಸಾಗಿರುವುದಾದರೂ ಹೂಗಳ ಇಳುವರಿ ಕಡಿಮೆ ಇರುತ್ತದೆ. ಅಂತೆಯೇ ಭೂಮಿ ಕಂಕರುಮಣ್ಣಿನಿಂದ ಕೂಡಿದ್ದರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಮಲ್ಲಿಗೆಯ ತಾಜಾಹೂವಿಗೆ ಅಧಿಕ ಬೇಡಿಕೆ ಇರುವುದರಿಂದ ಇದನ್ನು ಸಾಮಾನ್ಯವಾಗಿ ಊರು, ನಗರಗಳ ಹೊರವಲಯಗಳಲ್ಲಿ ಸಣ್ಣ ಹಿಡುವಳಿ ಜಮೀನುಗಳಲ್ಲಿ ಬೆಳೆಯುವುದು ರೂಢಿ. ಮನೆಗಳ ಕೈತೋಟಗಳಲ್ಲೂ ಉದ್ಯಾನಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುವುದಿದೆ.

ಮಲ್ಲಿಗೆ ಒಂದು ದೀರ್ಘಕಾಲಿಕ ಪುಷ್ಪ ಬೆಳೆ. ಮಲ್ಲಿಗೆಯನ್ನು ಲಿಂಗರೀತಿ (ಬೀಜಗಳಿಂದ) ಮತ್ತು ನಿರ್ಲಿಂಗರೀತಿಗಳೆಡರಿಂದ ಅಭಿವೃದ್ಧಿ ಮಾಡಬಹುದಾದರೂ ಎರಡನೆಯ ಮಾರ್ಗವೇ ಹೆಚ್ಚು ಪ್ರಚಲಿತವಿದೆ. ಹದವಾಗಿ ಬಲಿತ ಕಾಂಡ ಕಡ್ಡಿಗಳು (ಕಟಿಂಗ್ಸ್), ಕಂದು ಸಸಿಗಳು (ಸಕರ್ಸ್), ಕಸಿ ಕಡ್ಡಿಗಳು (ಲೇಯರ್ಸ್) ಮುಂತಾದವುಗಳ ಮೂಲಕ ವೃದ್ಧಿಸುವುದೇ ಈ ಮಾರ್ಗ. ಜನವರಿ - ಫೆಬ್ರುವರಿ ತಿಂಗಳುಗಳಲ್ಲಿ ತಾಯಿಗಿಡಗಳಿಂದ ಆಯ್ದ ತುಂಡುಗಳನ್ನು ಸು. 0.3 ಮೀ ಉದ್ದಕ್ಕೆ ಕತ್ತರಿಸಿ ತೆಗೆದು ನೆರಳಿರುವ ಕಡೆಗಳಲ್ಲಿ ಮರಳು ಪಾತಿ ಮಾಡಿ, ಸ್ವಲ್ಪ ಓರೆಯಾಗಿ ನೆಡಲಾಗುತ್ತದೆ. ತಪ್ಪದೆ ದಿನನಿತ್ಯ ನೀರು ಹಾಯಿಸಿ, ಗೆದ್ದಲು ಇರುವೆ ಬಾರದಂತೆ ಕೀಟನಾಶಕಗಳನ್ನು ಸಿಂಪಡಿಸುತ್ತ ಕಾಪಾಡಲಾಗುತ್ತದೆ. ಕಡ್ಡಿಗಳು ನೆಟ್ಟ 40-45 ದಿನಗಳ ತರುವಾಯ ಬೇರೊಡೆಯುವುವು. ಅನಂತರ ಕಿತ್ತು ಬೇಕೆನಿಸಿದ ಕಡೆ ಇವನ್ನು ಬೆಳೆಸುವುದುಂಟು. ತಾಯಿ ಗಿಡದ ಬುಡದಲ್ಲಿ ಹುಟ್ಟುವ ಕಂದುಸಸಿಗಳನ್ನು ಬೇರು ಹರಿಯದಂತೆ ಎಚ್ಚರಿಕೆಯಿಂದ ಕಿತ್ತು ನೆಡುವ ಕ್ರಮ ಸುಲಭವಾದುದು ಹಾಗೂ ರೂಢಿಯಲ್ಲಿರುವಂಥದು. ಕಸಿತುಂಡುಗಳನ್ನು ಪಡೆಯಲು ಹೆಚ್ಚುವೇಳೆ ಹಿಡಿಯುವುದರಿಂದ ಮತ್ತು ಇಂಥ ತುಂಡುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪಡೆಯಲಾಗುವುದಿಲ್ಲವಾದ್ದರಿಂದ ಈ ವಿಧಾನ ಹೆಚ್ಚು ಬಳಕೆಯಲ್ಲಿಲ್ಲ.

ದೊಡ್ಡ ಪ್ರಮಾಣದಲ್ಲಿ ಬೇಸಾಯ ಮಾಡಬೇಕೆಂದರೆ ಮಲ್ಲಿಗೆ ಪೊದೆಜಾತಿಯದಾದರೆ ಎಕರೆಗೆ 722 ಸಸಿಗಳೂ, ಹಂಬಿನ ಬಗೆಯದಾದರೆ 302 ಸಸಿಗಳೂ ಬೇಕಾಗುವುವು. ಚಳಿಗಾಲದಲ್ಲಿ (ಅಂದರೆ ಜನವರಿ-ಫೆಬ್ರುವರಿ ವೇಳೆಯಲ್ಲಿ) ಗಿಡದ ಪಾತಿಯನ್ನು ಅಗೆದು ಬೇರುಗಳನ್ನು ಕೆಲವು ದಿನ ಬಿಸಿಲಿಗೆ ಒಡ್ಡುವಂತೆ ಮಾಡಿದರೆ ಹೂ ಕಚ್ಚುವುದಕ್ಕೆ ಅನುಕೂಲವಾಗುತ್ತದೆ. ಅನಂತರ ಗಿಡ ಒಂದಕ್ಕೆ 8-10 ಕೆಜಿ ಕಾಂಪೋಸ್ಟ್ ಇಲ್ಲವೆ ಕೊಳೆತ ಎಲೆ ಗೊಬ್ಬರ ಸಗಣಿಗೊಬ್ಬರ ಹಾಕಿ ಹದವರಿತು ನೀರು ಹಾಯಿಸಲಾಗುತ್ತದೆ. ಮುಂಗಾರಿಗೆ ಮೊದಲು ಗಿಡಗಳಿಗೆ ನೀರು ನಿಲ್ಲಿಸಿ, ಎಲೆಗಳನ್ನೆಲ್ಲ ಕೈಯಿಂದ ಕಿತ್ತು ಹಾಕುವುದುಂಟು. ಹೆಚ್ಚಿನ ಸಂಖ್ಯೆಯಲ್ಲಿ ಮೊಗ್ಗು ಕಚ್ಚಲು ಇದು ಸಹಾಯಕ. ಮಲ್ಲಿಗೆಗೆ ಭಾರತದಲ್ಲಿ ರಸಗೊಬ್ಬರ ಊಡುವ ಪದ್ಧತಿ ಹೆಚ್ಚಾಗಿಲ್ಲ. ಆದರೆ ಫ್ರಾನ್ಸ್ ಮುಂತಾದ ಅನ್ಯದೇಶಗಳಲ್ಲಿ ಅಮೋನಿಯಮ್ ಸಲ್ಫೇಟನ್ನು ಲಘುಮೊತ್ತದಲ್ಲಿ ಹಾಕುವುದಿದೆ.

ಒಮ್ಮೆ ನಾಟಿ ಮಾಡಿದರೆ, ಕನಿಷ್ಠ 20 ವರ್ಷದವರೆಗೆ ಹೂವನ್ನು ಪಡೆಯಬಹುದು. ಮೊದಲು ಜಮೀನನ್ನು ಹದಗೊಳಿಸಿದ ಬಳಿಕ 8‌ X 8 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ನಂತರ 3-4 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಇದು ಗಿಡ ನೆಟ್ಟ 2 ವರ್ಷದ ನಂತರ ಚೆನ್ನಾಗಿ ಹೂವು ಬಿಡಲು ಪ್ರಾರಂಭಿಸುತ್ತದೆ. ಇದಕ್ಕಿಂತ ಮೊದಲೇ ಹೂ ಬಿಡುತ್ತದೆ. ಆದರೆ, ಇಳುವರಿ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಹೂವು ಬಿಡಿಸಲು ಆಳುಗಳು ಹೆಚ್ಚು ಬೇಕಾಗುತ್ತವೆ. ನಿತ್ಯವೂ ಹೂ ಬಿಡಿಸಬೇಕು. ಒಂದು ದಿನ ಹೂ ಬಿಡಿಸದಿದ್ದರೆ ಅವು ಹಾನಿಯಾದಂತೆ ಸರಿ. ಮಲ್ಲಿಗೆ ಕೃಷಿ ಕೈಗೊಳ್ಳಲು ಮಳೆಗಾಲದ ಆರಂಭ ಅಂದರೆ ಜೂನ್ ಪ್ರಶಸ್ತ. ಮಳೆಗಾಲದಲ್ಲಿ ಇದರ ಇಳುವರಿ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹೂವು ಬಿಡುವುದಿಲ್ಲ. ಆ ಸಮಯದಲ್ಲಿ ಗಿಡವನ್ನು 2 ಅಡಿ ಬಿಟ್ಟು ಉಳಿದದ್ದನ್ನು ಕಟಾವು ಮಾಡಬೇಕು. ಚಳಿಗಾಲದ ನಂತರ ಚಿಗುರೊಡೆಯುತ್ತದೆ. ಬಳಿಕ ಹೂವು ಬಿಡಲು ಪ್ರಾರಂಭಿಸುತ್ತದೆ. ಈ ರೀತಿ ಪ್ರತಿ ಚಳಿಗಾಲದಲ್ಲೂ ಕಟಾವು ಮಾಡಬೇಕು.

ಬೀಜಗಳ ಮೂಲಕ ವೃದ್ಧಿಸುವುದು ಇನ್ನೂ ಶ್ರಮದಾಯಕವಾದ್ದರಿಂದ ಈ ವಿಧಾನ ಇನ್ನೂ ವಿರಳ.

ಜನವರಿ-ಫೆಬ್ರುವರಿಯಲ್ಲೊಮ್ಮೆ ಜುಲೈಯಲ್ಲೊಮ್ಮೆ ಹೀಗೆ ವರ್ಷದಲ್ಲಿ ಎರಡು ಬಾರಿ ಗಿಡಗಳನ್ನು ಕತ್ತರಿಯಿಂದ ಸವರಲಾಗುತ್ತದೆ (ಪ್ರೂನಿಂಗ್). ಹೀಗೆ ಮಾಡುವುದು ಗಿಡವನ್ನು ಅಪೇಕ್ಷಿತ ಎತ್ತರಕ್ಕೆ ಇರಿಸುವುದಕ್ಕೂ ಯಥೇಚ್ಛವಾಗಿ ಮೊಗ್ಗು ಕಚ್ಚುವಂತೆ ಮಾಡುವುದಕ್ಕೂ ಅನುಕೂಲವಾಗುತ್ತದೆ.

ಪೊದೆ ಜಾತಿಯ ಮಲ್ಲಿಗೆಗಳು (ಉದಾ, ಏಳುಸುತ್ತಿನ ಮಲ್ಲಿಗೆ, ಕೋಲು ಮಲ್ಲಿಗೆ, ದುಂಡು ಮಲ್ಲಿಗೆ) ವರ್ಷಕ್ಕೆ ಒಂದು ಸಲ ಬೇಸಗೆಯ ಆರಂಭದಿಂದ ಮೊದಲುಗೊಂಡು ಮಳೆಗಾಲ ಮುಗಿಯುವತನಕ ಚೆನ್ನಾಗಿ ಹೂಕೊಡುವುವು. ಸಾಮಾನ್ಯವಾಗಿ ಒಂದು ಗಿಡ ಸುಮಾರು 15-20 ದಿನಗಳ ಕಾಲ ಹೂ ಕೊಡುತ್ತದೆ. ಇಳುವರಿ ಹೆಕ್ಟೇರಿಗೆ ಸು. 2000-2500 ಕೆಜಿ. ಕಡ್ಡಿ ನೆಟ್ಟ ಆರಂಭದ ವರ್ಷಗಳಲ್ಲಿ ಇಳುವರಿ ಕಡಿಮೆಯಿದ್ದು ವರ್ಷ ಕಳೆದಂತೆ ಹೆಚ್ಚುತ್ತ ಹೋಗಿ 4-5 ವರ್ಷಗಳ ತರುವಾಯ ಗರಿಷ್ಟ ಮೊತ್ತದಲ್ಲಿ ಹೂಬಿಡುವುವು. ಬಳ್ಳಿ ಜಾತಿಯ ಮಲ್ಲಿಗೆಗಳು ವರ್ಷವಿಡೀ ಇಲ್ಲವೆ ವರ್ಷದ ಹೆಚ್ಚು ಅವಧಿ ಹೂ ಬಿಡುವುವು. ಒಳ್ಳೆಯ ಭೂಮಿ, ಉತ್ತಮ ಆರೈಕೆ ಇದ್ದಲ್ಲಿ 8-10 ವರ್ಷಕಾಲ ಒಳ್ಳೆಯ ಫಸಲು ಪಡೆಯಬಹುದು. ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯ ಇಳುವರಿಯ ಮೊತ್ತ ಅಧಿಕ.

ಭಾರತದಲ್ಲಿ ಮಲ್ಲಿಗೆಯನ್ನು ಗಿಡದಿಂದ ಬಿಡಿಸುವುದು ಸಾಮಾನ್ಯವಾಗಿ ಅಪರಾಹ್ನ. ಚೆನ್ನಾಗಿ ಬಲಿತ ಮೊಗ್ಗುಗಳು ಹೂವಾಗಿ ಅರಳುವ ಮುಂಚೆಯೇ ಕೈಯಿಂದ ಬಿಡಿಸಿ ತಂಪು ಸ್ಥಳಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಲ್ಲವೆ ಮೊಗ್ಗಾಗಿರುವಾಗಲೇ ಮಾರುಕಟ್ಟೆಗೆ ತರುವುದುಂಟು. ಮಾರನೆಯ ಬೆಳಗಿನ ವೇಳೆಗೆ ಹೂಗಳು ಅರಳಿ ಸುವಾಸನೆ ಬೀರಲಾರಂಭಿಸುವುವು. ಮಲ್ಲಿಗೆ ತೈಲವನ್ನು ಪಡೆಯುವ ಉದ್ದೇಶವಿದ್ದರೆ ಹೂಗಳನ್ನು ಬೆಳಗಿನ ಜಾವ ಸೂರ್ಯೋದಯಕ್ಕೆ ಮುನ್ನ ಬಿಡಿಸುವುದು ವಾಡಿಕೆ. ಪಾಶ್ಚಿಮಾತ್ಯ ದೇಶದಲ್ಲಿ ಹೂ ಮೊಗ್ಗುಗಳನ್ನು ಯಂತ್ರಗಳ ಸಹಾಯದಿಂದ ಬಿಡಿಸುವರು.

ಉಪಯೋಗಗಳು[ಬದಲಾಯಿಸಿ]

ಭಾರತದಿಂದ ಮಲ್ಲಿಗೆ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಅರಬ್ ದೇಶಗಳಿಗೆ ರಫ್ತಾಗುತ್ತದೆ. ಮಲ್ಲಿಗೆಯನ್ನು ಸುಗಂಧಿತ ತೈಲ ತಯಾರಿಸಲು ಮತ್ತು ಅತ್ತರ್ ತಯಾರಿಸಲು ಬಳಸಲಾಗುತ್ತದೆ. ಮಲ್ಲಿಗೆಯ ತೈಲವನ್ನು ಸಾಬೂನು ಮತ್ತು ಇತರ ಸೌಂದರ್ಯವರ್ಧಕ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಲ್ಲ ಸುಗಂಧದ್ರವ್ಯಗಳಲ್ಲಿಯೂ ಮಲ್ಲಿಗೆ ತೈಲವಿದ್ದೇ ಇರುತ್ತದೆ. ಮಲ್ಲಿಗೆಯ ಸುಗಂಧಕ್ಕೆ ಬದಲಿಯಾಗಿ ಯಾವುದೇ ರಾಸಾಯನಿಕಗಳನ್ನು ಬಳಸಲು ಬರುವುದಿಲ್ಲ. ಜಾಜಿಮಲ್ಲಿಗೆಯಲ್ಲಿ ಔಷಧೀಯ ಗುಣ ಅಧಿಕ. ಜಾಜಿಮಲ್ಲಿಗೆಯ ತವರೂರು ಭಾರತ .Archived 2018-04-14 ವೇಬ್ಯಾಕ್ ಮೆಷಿನ್ ನಲ್ಲಿ. ಜಾಜಿಯ ಸುಗಂಧದೆಣ್ಣೆಗೆ ವಿಶ್ವದ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯಿದೆ. ಎಣ್ಣೆಯಲ್ಲಿ ಔಷಧೀಯ ಗುಣವಿರುತ್ತದೆ. ಮಲ್ಲಿಗೆ ಮೊಗ್ಗುಗಳಲ್ಲಿ ಸುಗಂಧ ನೀಡುವ ಇಂಡೋಲ್ ಎಂಬ ರಾಸಾಯನಿಕ ಪದಾರ್ಥ ಇದೆ. ಪೂರ್ತಿ ಅರಳಿದ ಮತ್ತು ಆಗ ತಾನೆ ಬಿಡಿಸಿದ ಹೂಗಳನ್ನು ಎಣ್ಣೆ ತೆಗೆಯಲು ಬಳಸುತ್ತಾರೆ. ಜಾಜಿಯಿಂದ ತಯಾರಾಗುವುದು ಜಾಸ್ಮಿನ್ ತೈಲ. ಈ ಹೂಗಳನ್ನು ಗಿಡದಿಂದ ಬೇರ್ಪಡಿಸಿದ ಕೆಲ ಸಮಯದವರೆಗೂ ಅದರ ಸುವಾಸನೆ ವೃದ್ಧಿಯಾಗುತ್ತಿರುತ್ತದೆ. ಸುಗಂಧ ಸಂಚಿಗಳು, ಬಾಯದುರ್ಗಂಧ ನಾಶಕಗಳು, ಊದುಬತ್ತಿ ಇತ್ಯಾದಿ ಹತ್ತಾರು ತೆರನ ಸಾಮಗ್ರಿಗಳ ತಯಾರಿಕೆಯಲ್ಲೂ ಮಲ್ಲಿಗೆ ಎಣ್ಣೆಯ ಉಪಯೋಗ ಉಂಟು.

ಹೂಗಳನ್ನು ಮಾಲೆಗಳಲ್ಲಿ, ಹಾರಗಳಲ್ಲೂ, ಹೂಗುಚ್ಛ, ದಂಡೆ ಮುಂತಾಗಿ ಅಲಂಕಾರ ವಸ್ತುಗಳ ತಯಾರಿಕೆಗೂ ದೇವರ ಪೂಜೆಗೂ ಬಳಸುತ್ತಾರೆ.

ಮಲ್ಲಿಗೆ ಎಣ್ಣೆ ತಯಾರಿಕೆ[ಬದಲಾಯಿಸಿ]

ಮಲ್ಲಿಗೆ ಎಣ್ಣೆ ಸುಗಂಧಪೂರಿತ ಚಂಚಲ ತೈಲ: ದಳ ಹಾಗೂ ನಿದಳಗಳೆರಡರ ಹೊರ ಮತ್ತು ಒಳ ಮೇಲ್ಮೈಗಳ ಎಪಿಡರ್ಮಿಸಿನ ಕೋಶಗಳಲ್ಲಿ ಇರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಇದು ತಯಾರಾಗತೊಡಗಿ ಸೂರ್ಯೋದಯವಾದ ಕೆಲವು ಗಂಟೆಗಳ ತರುವಾಯ ಇದರ ಸಂಶ್ಲೇಷಣೆ ನಿಲ್ಲುತ್ತದೆ. ಸುವಾಸನೆ ಮಾತ್ರ ಅನೇಕ ಗಂಟೆಗಳ ಕಾಲ ಉಳಿದಿರುತ್ತದೆ. ತೈಲವನ್ನು ಹೊರತೆಗೆಯಲು ಎರಡು ವಿಧಾನಗಳುಂಟು; ಒಂದನೆಯದು ಅವಶೋಷಕಗಳನ್ನು ಬಳಸುವ ಎನ್‌ಫ್ಲೂರೆಜ್ ವಿಧಾನ, ಎರಡನೆಯದು ಪೆಟ್ರೊಲಿಯಮ್, ಈಥರ್ ಅಥವಾ ಬೆಂಜೀನ್ ಲೀನಕಾರಿಗಳ ಬಳಕೆಯ ಸಾಲ್ವೆಂಟ್ ಎಕ್ಸ್ಟ್ರಾಕ್ಷನ್ ವಿಧಾನ. ಮೊದಲನೆಯ ವಿಧಾನದಿಂದ ಹೆಚ್ಚು ಮೊತ್ತದ ತೈಲವನ್ನು ಪಡೆಯಬಹುದು. ಆದರೆ ಎರಡನೆಯದು ಕಡಿಮೆ ವೆಚ್ಚದ್ದು. ಭಾರತದಲ್ಲೂ ಇತ್ತೀಚಿನ ತನಕ ಫ್ರಾನ್ಸಿನಲ್ಲೂ ಮೊದಲಿನ ವಿಧಾನವೇ ಹೆಚ್ಚು ಬಳಕೆಯಲ್ಲಿದ್ದ ವಿಧಾನ. ಇದರಲ್ಲಿ ಅವಶೋಷಣೆಗೆ ವಿವಿಧ ತೆರನ ಕೊಬ್ಬನ್ನು (ಫ್ರಾನ್ಸಿನಲ್ಲಿ ದನದ ಅಥವಾ ಹಂದಿಯ ಕೊಬ್ಬು) ಗಾಜಿನ ತಟ್ಟೆಗಳಿಗೆ ಸವರಿ ಅದರ ಮೇಲೆ ಹೂಗಳನ್ನು ಪೇರಿಸಿ ಉನಿಸಲಾಗುತ್ತದೆ. ಹೂ ದಳಗಳಿಂದ ಕೊಬ್ಬಿಗೆ ಸುಗಂಧ ವರ್ಗಾವಣೆಯಾಗುತ್ತದೆ. ಪ್ರತಿದಿನ ಹೊಸ ಹೂಗಳನ್ನು ಸೇರಿಸುತ್ತಿದ್ದು ಕೆಲವು ದಿನಗಳ ತರುವಾಯ ಕೊಬ್ಬು ಸುಗಂಧದಿಂದ ಪೂರಣಗೊಂಡಮೇಲೆ ಅದನ್ನು ತೆಗೆದು ಆಲ್ಕೊಹಾಲ್ ಅಥವಾ ಅಸಿಟೋನಿನಲ್ಲಿ ವಿಲೀನಗೊಳಿಸಿ, ಬಟ್ಟಿ ಇಳಿಸಿ ತೈಲವನ್ನು ಪ್ರತ್ಯೇಕಿಸಲಾಗುತ್ತದೆ. ಭಾರತದಲ್ಲಿ ಕೊಬ್ಬಿಗೆ ಬದಲಾಗಿ ಶುದ್ಧೀಕರಿಸಿದ ಬಿಳಿ ಎಳ್ಳನ್ನು ಬಳಸುವುದಿದೆ ; ತಾಜಾ ಹೂಗಳನ್ನು ಬಿಳಿ ಎಳ್ಳನ್ನೂ ಏಕಾಂತರ ಪದರಗಳಾಗಿ ಸಿಮೆಂಟ್ ಗುಣಿಗಳಲ್ಲಿ ಹರಡಲಾಗುತ್ತದೆ. ಪ್ರತಿ 10-12 ಗಂಟೆಗಳಿಗೊಮ್ಮೆ ಹಳೆ ಹೂಗಳನ್ನು ತೆಗೆದು ಹೊಸ ಹೂ ಸೇರಿಸುತ್ತಿದ್ದು ಎಳ್ಳಿನ ಕಾಳುಗಳನ್ನೆಲ್ಲ ಸಂಪೂರ್ಣವಾಗಿ ಊರಿಸಲಾಗುತ್ತದೆ. ಅನಂತರ ಎಳ್ಳನ್ನು ಗಾಣಕ್ಕೆ ಒಡ್ಡಿ ಮಲ್ಲಿಗೆ ಸುಗಂಧಪೂರಿತ ಎಣ್ಣೆಯನ್ನು ಪಡೆಯುವುದಿದೆ. ಹೀಗೆ ತಾಜಾ ಹೂಗಳಿಂದ ಪಡೆಯುವ ಎಣ್ಣೆ ಮೊದಲ ದರ್ಜೆಯದು. ಇದಕ್ಕೆ ಸಿರಾ ಎಂದು ಹೆಸರು. ಆಗಿಂದಾಗ್ಗೆ ತೆಗೆದು ಹಾಕುವ ಹಳೆಯ ಹೂಗಳಲ್ಲೂ ಕೊಂಚ ಮೊತ್ತದ ಸುಗಂಧ ಉಳಿದಿರುತ್ತದೆ. ಇದರಿಂದ ಪಡೆಯುವ ಎಣ್ಣೆ ಕೆಳದರ್ಜೆಯದಾಗಿದ್ದು ಬಾಜು ಮತ್ತು ರದ್ದಿ ಎಂಬ ಹೆಸರಿನಿಂದ ನಿರ್ದೇಶಿತವಾಗುತ್ತದೆ.

ಮಲ್ಲಿಗೆ ತೈಲದ ಮೊತ್ತ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸಗಳುಂಟು. ಇದಕ್ಕೆ ಅನೇಕ ಕಾರಣಗಳಿವೆ. ಸಾಮಾನ್ಯವಾಗಿ ಉನ್ನತ ಪ್ರದೇಶಗಳಲ್ಲಿ ಬೆಳೆಯುವ ಮಲ್ಲಿಗೆ ಉಚ್ಚದರ್ಜೆಯ ಎಣ್ಣೆಯನ್ನು ಕೊಡುತ್ತದೆ. ಅಂತೆಯೇ ಮುಂಜಾನೆಯ ನಸುಕಿನಲ್ಲಿ ಸಂಗ್ರಹಿಸಲಾಗುವ ಮಲ್ಲಿಗೆ ಮಧ್ಯಾಹ್ನ ಸಂಗ್ರಹಿಸಲಾಗುವುದಕ್ಕಿಂತಲೂ ಬಿಸಿಲಿರುವ ವೇಳೆ ಸಂಗ್ರಹ ಮಾಡಿದುದು ಮೋಡ ಮುಸುಕಿದಾಗ ಮಾಡಿದ್ದಕ್ಕಿಂತಲೂ ಉತ್ತಮವೆನ್ನಲಾಗಿದೆ.

ಲೀನಕಾರಿಗಳ ಸಹಾಯದಿಂದ ಪಡೆಯಲಾಗುವ ಮಲ್ಲಿಗೆ ಸಾರ ಮೇಣದಂಥ ವಸ್ತುವಾಗಿದ್ದು ಇದಕ್ಕೆ ಕಾಂಕ್ರೀಟ್ ಎಂಬ ಹೆಸರಿದೆ. ಇದು ಕೆಂಗಂದು ಬಣ್ಣದ ವಸ್ತು. ಇದನ್ನು ಸಂಸ್ಕರಿಸಿ ಪಡೆಯುವ ದ್ರವವಸ್ತುವೇ ಆಬ್ಸೊಲ್ಯೂರ್ಟ. ಇದು ಸ್ವಚ್ಛ ಹಾಗೂ ಹಳದಿ-ಕಂದು ಬಣ್ಣದ ಸ್ನಿಗ್ಧದ್ರವ. ದಿನಕಳೆದಂತೆ ಗಾಢಕೆಂಪು ಬಣ್ಣಕ್ಕೆ ತಿರುಗುತ್ತದೆ. ಅವಶೋಷಕಗಳ ಬಳಕೆಯಿಂದ ಪಡೆಯಲಾಗುವ ಅಬ್ಸೊಲ್ಯೂರ್ಟ ಕೆಂಪು-ಕಂದು ಬಣ್ಣಗಳ ಸ್ನಿಗ್ಧ ತೈಲ. ಮಲ್ಲಿಗೆ ತೈಲದ ಪ್ರಧಾನ ಘಟಕ ಬೆಂಜೈಲ್ ಅಸಿಟೇಟ್ ಜೊತೆಗೆ ಲಿನಲೇಟ್ ಅಸಿಟೇಟ್, ಬೆಂಜೈಲ್ ಬೆಂಜೊಯೇಟ್, ಬೆಂಜೈಲ್ ಆಲ್ಕೊಹಾಲ್, ಜಿರಾನಿಯಾಲ್, ಯೂಜಿನಾಲ್, ಕ್ರಿಯೊಸೋಲ್, ಜಾಸ್ಮೋನ್ ಮುಂತಾದ ಅನೇಕ ರಾಸಾಯನಿಕಗಳಿವೆ.

ಅತ್ತರು ತಯಾರಿಕೆ[ಬದಲಾಯಿಸಿ]

ಅತ್ತರುಗಳ ತಯಾರಿಕೆ ಕೊಂಚ ಭಿನ್ನ ರೀತಿಯದು. ಮಲ್ಲಿಗೆ ಹೂಗಳನ್ನು ಮಣ್ಣಿನ ಪಾತ್ರೆಗಳಲ್ಲಿರಿಸಿ ಕಾಯಿಸಿ ಬಟ್ಟಿಯಿಳಿಸಲಾಗುತ್ತದೆ. ಆಗ ಹೊರಸೂಸುವ ಸುಗಂಧಪೂರಿತ ಹಬೆಯನ್ನು ಗಂಧದ ಎಣ್ಣೆಯಲ್ಲಿ ಅವಶೋಷಿಸಿ ತೆಗೆದು 3-4 ವರ್ಷಕಾಲ ಸಂಗ್ರಹಿಸಿಡಲಾಗುತ್ತದೆ. ಸಂಗ್ರಹಣ ಕಾಲದಲ್ಲಿ ವರ್ಷಂಪ್ರತಿ ಇದಕ್ಕೆ ತಾಜಾ ಮಲ್ಲಿಗೆ ಸಾರವನ್ನು ಸೇರಿಸಲಾಗುತ್ತದೆ. ಇದರಿಂದ ಲಭಿಸುವ ಸುಗಂಧವೇ ಶ್ರೇಷ್ಠ ದರ್ಜೆಯ ಅತ್ತರು.

ಇತರ ಭಾ‍‍‌ಷೆಗಳಲ್ಲಿ[ಬದಲಾಯಿಸಿ]

ಸಂಸ್ಕೃತ: ವಾರ್ಷಿಕಿ, ಮಲ್ಲಿಕಾ

ಹಿಂದಿ: ಮೊಗ್ರಾ, ಮಲ್ಲಿಕಾ

ತಮಿಳು: ಮಲ್ಲಿಗೈ

ಇಂಗ್ಲಿಷ್: ಅರೇಬಿಯನ್ ಜಾಸ್ಮಿನ್

ತೆಲುಗು: ಮಲ್ಲೆಪುಷ್ಪಲು

ಮಲಯಾಳಂ: ಚಿರು ಪಿಚ್ಚಕಂ, ನಲ್ಲ ಮುಲ್ಲೈ

ಔಷಧೀಯ ಗುಣಗಳು[ಬದಲಾಯಿಸಿ]

ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸಸಲಾಗುತ್ತದೆ. ಮಲ್ಲಿಗೆಯ ಬೇರು, ಹೂ ಮತ್ತು ಎಲೆಗಳು ಎದೆ ಹಾಲಿನ ಉತ್ಪತ್ತಿಯನ್ನು ತಗ್ಗಿಸುತ್ತವೆ. ಚೀನಾ ದೇಶದಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂಗಳನ್ನು ಹಾಕಿ ಟೀ ತಯಾರಿಸುತ್ತಾರೆ. ದೃಷ್ಟಿದೋಷದ ತೊಂದರೆಯಿರುವವರಿಗೆ ಮತ್ತು ಉನ್ಮಾದದಿಂದ ಬಳಲುವವರಿಗೆ ಮಲ್ಲಿಗೆಯ ಎಲೆಯ ರಸದಿಂದ ತಯಾರಿಸಿದ ತೈಲವನ್ನು ತಲೆಗೆ ಉಪಯೋಗಿಸುತ್ತಾರೆ. ಗಾಯ ಹಾಗೂ ಹುಣ್ಣುಗಳಿಗೆ ಒಣಗಿದ ಮಲ್ಲಿಗೆ ಎಲೆಗಳನ್ನು ನೀರಿನಲ್ಲಿ ನೆನೆಯಿಟ್ಟು ನಂತರ ಅರೆದು ಪೊಲ್ಟೀಸ್ ಮಾಡಿ ಕಟ್ಟಬೇಕು. ಮಲ್ಲಿಗೆಯು ವಿಷಹರವಾಗಿಯೂ ಕೆಲಸ ಮಾಡುತ್ತದೆ. ಅರುಚಿಯನ್ನು ಹೋಗಲಾಡಿಸಿ ರುಚಿ ಹೆಚ್ಚಿಸುತ್ತದೆ. ಇದು ರಕ್ತವಿಕಾರ, ದಂತರೋಗ, ನೇತ್ರರೋಗ, ಶಿರೋರೋಗಗಳಲ್ಲಿ ಉಪಯುಕ್ತವಿದೆ. ಅಡವಿಮಲ್ಲಿಗೆಯ ಬೇರು ಹುಳಕಡ್ಡಿ ತೊಂದರೆಯಿರುವವರಿಗೆ ತೊಗಟೆಯನ್ನು ಕತ್ತರಿಸಿದಾಗ ಬರುವ ಹಾಲಿನಂತಹ ರಸವನ್ನು ಲೇಪಿಸಲು ಉಪಯೋಗಿಸಬೇಕು.[೭]

ಮಲ್ಲಿಗೆಯ ಭಾವಚಿತ್ರಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Jasminum" (HTML). Index Nominum Genericorum. International Association for Plant Taxonomy. Retrieved 2008-06-03.
  2. "10. Jasminum Linnaeus" (HTML). Chinese Plant Names. 15: 307. Retrieved 2008-06-03.
  3. UniProt. "Jasminum" (HTML). Retrieved 2008-06-03.
  4. ಉಲ್ಲೇಖ ದೋಷ: Invalid <ref> tag; no text was provided for refs named POWO
  5. "Jasminum L." World Flora Online. World Flora Consortium. 2023. Retrieved 25 March 2023.
  6. A.K. Singh (2006). Flower Crops: Cultivation and Management. New India Publishing. pp. 193–205. ISBN 978-81-89422-35-6.
  7. ಪುಷ್ಪೌಷಧಿ

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಲ್ಲಿಗೆ&oldid=1186573" ಇಂದ ಪಡೆಯಲ್ಪಟ್ಟಿದೆ