ವಿಷಯಕ್ಕೆ ಹೋಗು

ಮರಮೂಗಿಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರಮೂಗಿಲಿಗಳು[]
Temporal range: Middle Eocene – Recent
ಟುಪಯಾ ಪ್ರಭೇದ
CITES Appendix II (CITES)[]
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: Mammalia
ದೊಡ್ಡಗಣ: ಯುವಾರ್‌ಕೊಂಟಾ
ಗಣ: ಸ್ಕ್ಯಾಂಡೆಂಟಿಯಾ
Wagner, 1855
ಕುಟುಂಬಗಳು
  • ಟುಪಾಯಿಡೀ
  • ಟಿಲೊಸರ್ಸಿಡೀ

ಮರಮೂಗಿಲಿ ಎಂದರೆ ಸ್ತನಿವರ್ಗ, ಪ್ರೈಮೇಟ್ ಗಣ ಮತ್ತು ಟುಪಾಯಿಡೀ ಕುಟುಂಬಗಳಿಗೆ ಸೇರಿದ ಕೆಲವು ವಿಚಿತ್ರ ಪ್ರಾಣಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಟ್ರೀ ಶ್ರೂ).[][][] ಪ್ರಾಣಿವರ್ಗೀಕರಣದಲ್ಲಿ ಇವುಗಳ ಸ್ಥಾನ ಇಂದಿಗೂ ಚರ್ಚಾಸ್ಪದ. ಏಕೆಂದರೆ ಒಂದು ಕಡೆ ಗಾತ್ರ ಆಕಾರಗಳಲ್ಲಿ ಆಹಾರ ಸೇವನೆಯ ಕ್ರಮದಲ್ಲಿ ದೇಹದ ಕೆಲವು ಲಕ್ಷಣಗಳಲ್ಲಿ (ಉದಾಹರಣೆಗೆ ಬೆರಳುಗಳಲ್ಲಿ ಉಗುರುಗಳ ಬದಲು ನಖಗಳಿರುವುದು) ಇವು ಇನ್ಸೆಕ್ಟಿವೊರ ಗಣದ ಕೀಟಭಕ್ಷಕ ಪ್ರಾಣಿಗಳನ್ನು (ಉದಾಹರಣೆಗೆ ಹೆಜ್ ಹಾಗ್, ಮೋಲ್, ಟೆನ್ರೆಕ್, ಮೂಗಿಲಿ ಮುಂತಾದವು) ಹೋಲುತ್ತವೆ; ಇನ್ನೊಂದು ಕಡೆ ದೇಹದ ಮತ್ತೆ ಕೆಲವು ಲಕ್ಷಣಗಳಲ್ಲಿ (ಮುಖ್ಯವಾಗಿ ಕಪಾಲ, ಸ್ನಾಯು, ನಾಲಗೆ, ಸಂತಾನಾಂಗಗಳಿಗೆ ಸಂಬಂಧಿಸಿದ ಲಕ್ಷಣಗಳಲ್ಲಿ) ಇವು ಪ್ರೈಮೇಟ್ ಗಣದ ಲೀಮರ್, ಟಾರ್ಸಿಯರ್ ಮುಂತಾದವನ್ನು ಹೋಲುತ್ತವೆ. ಕೊನೆಯಲ್ಲಿ ಹೇಳಿದ ಲಕ್ಷಣಸಾಮ್ಯಗಳೇ ಪ್ರಧಾನವೆಂದು ಗಣಿಸಿ ಮರಮೂಗಿಲಿಗಳನ್ನು ಪ್ರೈಮೇಟ್ ಗಣಕ್ಕೆ ಸೇರಿಸಿ ಈ ಗಣದ ಆದಿಯ, ಇನ್ಸೆಕ್ಟಿವೂರ ಗಣಕ್ಕೆ ಹತ್ತಿರದ ಸ್ಥಾನದಲ್ಲಿರಿಸಲಾಗಿದೆ. ಮರಮೂಗಿಲಿಗಳೂ ಈಗ ಇನ್ಸೆಕ್ಟಿವೊರ ಗಣದಲ್ಲಿ ಸೇರಿಸಿರುವ ಆನೆಮೂಗಿಲಿಗಳೂ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ತೋರುವುದರಿಂದ, ಇವೆರೆಡು ಬಗೆಯ ಪ್ರಾಣಿಗಳನ್ನು ಕೀಟಭಕ್ಷಕ ಮತ್ತು ಪ್ರೈಮೇಟುಗಳ ನಡುವಣ ಸ್ಥಾನದಲ್ಲಿ ಮೆನೊಟಿಫ್ಲ ಎಂಬ ಪ್ರತ್ಯೇಕ ಗಣದಲ್ಲಿ ಇರಿಸಬೇಕೆಂದು ಮತ್ತೆ ಕೆಲವರು ಅಭಿಪ್ರಾಯ ಪಡುತ್ತಾರೆ.

ಮರಮೂಗಿಲಿಗಳಲ್ಲಿ 5 ಜಾತಿಗಳೂ 15 ಪ್ರಭೇದಗಳೂ ಉಂಟು. ಟುಪಾಯಿಯ, ಅನತಾನ, ಡೆಂಡ್ರೋಗೇಲ್, ಯೂರೋಗೇಲ್ ಮತ್ತು ಟೈಲೊಸರ್ಕಸ್-ಇವೇ ಈ ಐದು ಜಾತಿಗಳು ಭಾರತ, ಮಲೇಷ್ಯ, ಬೋರ್ನಿಯೊ, ಫಿಲಿಪೀನ್ಸ್ ಮತ್ತು ಚೀನದ ನೈರುತ್ಯ ಭಾಗಗಳಲ್ಲಿ ಹರಡಿವೆ.

ಮುಖ್ಯ ಲಕ್ಷಣಗಳು

[ಬದಲಾಯಿಸಿ]

ಎಲ್ಲ ಮರಮೂಗಿಲಿಗಳೂ ನೋಡಲು ಉದ್ದಮೂತಿಯ ಅಳಿಲುಗಳಂತಿವೆ. ದೇಹ ಸಪೂರ; ಇದರ ಸರಾಸರಿ ಉದ್ದ 160 ಮಿಮೀ; ತೂಕ 400 ಗ್ರಾಮ್. ಜೊತೆಗೆ 90-200 ಮಿಮೀ ಉದ್ದದ ಬಾಲವುಂಟು. ಮೈ ಮೇಲೆ ಉದ್ದವಾದ ನೀಳವಾದ ಕಾಪುರೋಮಗಳೂ ಮೃದುವಾದ ಉಣ್ಣೆಯಂಥ ತುಪ್ಪಳ ಇವೆ. ಟೈಲೊಸರ್ಕಸ್ ಜಾತಿಯನ್ನುಳಿದು ಇತರ ಮರಮೂಗಿಲಿಗಳ ಕಿವಿಗಳು ಅಳಿಲಿನವುಗಳಂತೆ ಚಿಕ್ಕಗಾತ್ರದವೂ ಮೆಲ್ಲೆಲುಬಿನಿಂದ ರಚಿತವಾದವೂ ಆಗಿವೆ. ಅಂಗಾಲುಗಳ ಮೇಲೆ ಗಂಟುಗಳಂಥ ಮೆತ್ತೆಗಳುಂಟು. ಬೆರಳುಗಳಲ್ಲಿ ನಸುಬಾಗಿದ ನಖಗಳಿವೆ. ಅಳಿಲುಗಳಂತೆಯೇ ಮರಮೂಗಿಲಿಗಳ ಚಟುವಟಿಕೆ ಹಗಲುವೇಳೆಗೆ ಸೀಮಿತವಾಗಿದೆ. ಇವುಗಳ ಚಲನೆ, ಆಹಾರವನ್ನು ತಿನ್ನುವ ಭಂಗಿ ಕೂಡ ಅಳಿಲುಗಳಂತೆಯೇ. ಆದರೆ ಅಳಿಲುಗಳಲ್ಲಿ ಮೀಸೆಗಳಿವೆ. ಮರಮೂಗಿಲಿಗಳಲ್ಲಿ ಇಲ್ಲ.

ಇವುಗಳಲ್ಲಿ ಘ್ರಾಣ ಮತ್ತು ಶ್ರವಣ ಸಾಮರ್ಥ್ಯ ಚರುಕು. ಓಡುವುದರಲ್ಲೂ ಮರ ಹತ್ತುವುದರಲ್ಲೂ ಇವು ಬಲು ನಿಷ್ಣಾತವೆನಿಸಿವೆ.

ಕೀಟ ಮತ್ತು ಫಲಗಳು ಇವುಗಳ ಪ್ರಧಾನ ಆಹಾರ. ರಾತ್ರಿ ವೇಳೆ ಮರಗಳ ಪೊಟರೆಗಳಲ್ಲಿ ಅಡಗಿದ್ದು ಹಗಲಿನ ವೇಳೆ ಆಹಾರಾನ್ವೇಷಣೆಯಲ್ಲಿ ತೊಡಗುವುವು. ಕುಡಿಯುವುದಕ್ಕೆ ಮಾತ್ರವಲ್ಲದೆ ಈಜಲೆಂದು ಸಹ ನೀರಿಗಿಳಿಯುವುದು ಇವುಗಳ ಸ್ವಭಾವ.

ಸಂತಾನವೃದ್ಧಿ

[ಬದಲಾಯಿಸಿ]

ಸಂತಾನವೃದ್ಧಿಗೆ ನಿರ್ದಿಷ್ಟ ಶ್ರಾಯವಿಲ್ಲ. ಒಂದು ಸಲಕ್ಕೆ 1-4 ಮರಿಗಳನ್ನು ಈಯುತ್ತವೆ.

ಪ್ರೈಮೇಟ್‍ಗಳೊಂದಿಗೆ ಹೋಲಿಕೆ

[ಬದಲಾಯಿಸಿ]

ದೊಡ್ಡಗಾತ್ರದ ಕಪಾಲ, ಮನಷ್ಯನಲ್ಲಿರುವಂಥ ಕೆರೋಟಿಡ್ ಮತ್ತು ಸಬ್ ಕ್ಲೇವಿಯನ್ ಅಪಧಮನಿಗಳು, ಮೂಳೆಗಳಿಂದ ಸಂಪೂರ್ಣ ಆವೃತವಾದ ಕಪಾಲ ಕುಳಿಗಳು, ಶಾಶ್ವತ ತೆರನ ವೃಷಣಕೋಶಗಳು ಮುಂತಾದ ಲಕ್ಷಣಗಳಲ್ಲಿ ಇವು ಪ್ರೈಮೇಟ್ ಗಣದ ಪ್ರಾಣಿಗಳನ್ನು ಹೋಲುತ್ತವೆ.

ಮರಮೂಗಿಲಿಗಳನ್ನು ಸಾಕಬಹುದೆನ್ನಲಾಗಿದೆ. ಭಾರತದ ಮರಮೂಗಿಲಿ ಅನತಾನ ಎಲಿಯೋಟಿಯೈ.

ಉಲ್ಲೇಖಗಳು

[ಬದಲಾಯಿಸಿ]
  1. Helgen, K. M. (2005). "Order Scandentia". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. pp. 104–109. ISBN 978-0-8018-8221-0. OCLC 62265494. {{cite book}}: Invalid |ref=harv (help)
  2. "Appendices | CITES". cites.org. Retrieved 2022-01-14.
  3. Britannica, The Editors of Encyclopaedia. "tree shrew". Encyclopedia Britannica, 28 May. 2020, https://www.britannica.com/animal/tree-shrew. Accessed 30 October 2023.
  4. "Treeshrew." New World Encyclopedia, . 29 Dec 2014, 17:28 UTC. 30 Oct 2023, 05:54 <https://www.newworldencyclopedia.org/p/index.php?title=Treeshrew&oldid=986094>.
  5. "Tree Shrews: Scandentia ." Grzimek's Student Animal Life Resource. . Encyclopedia.com. 18 Oct. 2023 <https://www.encyclopedia.com>.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: