ಟೆನ್ರೆಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆನ್‍ರೆಕ್ -ಮಡಗಾಸ್ಕರ್ ದ್ವೀಪದಲ್ಲಿ ಕಂಡುಬರುವ ಒಂದು ಸಸ್ತನಿ. ಇನ್ಸೆಕ್ಟಿವೊರ ಗಣದ ಟೆನ್ರೆಸಿಡೀ ಕುಟುಂಬಕ್ಕೆ ಸೇರಿದೆ. ಇದು ಹೆಜ್‍ಹಾಗ್ ಮತ್ತು ಮೂಗಿಲಿಗಳ (ಷ್ರೂ) ಸಂಬಂಧಿ. ಟೆನ್‍ರೆಕ್ ಈಕಾಡೇಟಸ್ (ಸಾಮಾನ್ಯ ಟೆನ್‍ರೆಕ್) ಇದರ ವೈಜ್ಞಾನಿಕ ಹೆಸರು. ಸೆಂಟೀಟಸ್ ಪರ್ಯಾಯ ನಾಮ.

ಇದರ ದೇಹದ ಉದ್ದ 30-40 mm. ಬಣ್ಣ ಕಂದು. ಇದರ ದೇಹದ ಮೇಲೆ ಬಿರುಗೂದಲುಗಳು ಮತ್ತು ಚೂಪಾದ ಮುಳ್ಳುಗಳು ಇವೆ. ಬಾಲ ಮೋಟಾಗಿದೆ. ಇದರ ಉದ್ದ 10-15 mm. ಬೆನ್ನಿನ ಮೇಲೆ ಉದ್ದವಾದ ಹಾಗೂ ದೃಢವಾದ ಕೂದಲುಗಳ ಸಾಲು ಉಂಟು. ಕೋಪಗೊಂಡಾಗ, ಚಕಿತಗೊಂಡಾಗ ಇಲ್ಲವೆ ಉದ್ರಿಕ್ತವಾದಾಗ ಈ ಸಾಲನ್ನು ನೆಟ್ಟಗೆ ನಿಮಿರಿಸುತ್ತದೆ. ಜೊತೆಗೆ ಬುಸುಗುಟ್ಟುವಂತೆ ಸದ್ದು ಮಾಡುತ್ತದೆ. ಕೆಲವು ಸಲ ಇಲಿಗಳಂತೆ ಕೀಚಲುಧ್ವನಿಗೈಯುವುದೂ ಉಂಟು. ಇದು ನಿಶಾಚರಿ. ಹಗಲಲ್ಲಿ ನೆಲದಲ್ಲಿ ಕೊರೆದು ರಚಿಸಿದ ಬಿಲಗಳಲ್ಲಿ ನಿದ್ರಿಸುತ್ತದೆ. ತನ್ನ ಚೂಪುಮೂತಿ ಮತ್ತು ನಖಗಳಿಂದ ನೆಲವನ್ನು ಅಗೆಯುತ್ತಿದ್ದು ಹೊರಬರುವ ಕೀಟ, ಎರೆಹುಳು, ಬೇರುಗಳನ್ನು ಭಕ್ಷಿಸುತ್ತದೆ. ಹೆಚ್ಚು ಉಷ್ಣತೆಯಿರುವಾಗ ಸುಪ್ತಾವಸ್ಥೆಯಲ್ಲಿದ್ದು ಬಿಡುತ್ತದೆ. ಸಾಮನ್ಯವಾಗಿ ಮೇ-ಅಕ್ಟೋಬರ್ ತಿಂಗಳುಗಳ ಅವಧಿಯಲ್ಲಿ ಹೀಗೆ ಕಾಲಕಳೆಯುವುದುಂಟು. ಈ ಕಾಲ ಮುಗಿದ ಅನಂತರ ಸಂತಾನೋತ್ಪತ್ತಿಯಲ್ಲಿ ತೊಡಗುವುದು. ಸರಾಸರಿ 21 ಮರಿಗಳು ಹುಟ್ಟುತ್ತವೆ. ಮಡಗಾಸ್ಕರಿನಲ್ಲಿ ಟೆನ್‍ರೆಕ್ಕನ್ನು ಮಾಂಸಕ್ಕೋಸ್ಕರ ಬೇಟೆಯಾಡುತ್ತಾರೆ. ಮಾರಿಷಸ್ ಮತ್ತು ರಿಯೂನಿಯನ್ ಗಳಲ್ಲಿ ಇವು ಅರೆಸಾಕುಪ್ರಾಣಿಗಳಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: