ದ್ವಾದಶ ಜ್ಯೋತಿರ್ಲಿಂಗಗಳು
ಈಶ್ವರನ ಜ್ಯೋತಿ ಸ್ವರೂಪಿ ಲಿಂಗಗಳಿಗೆ ಜ್ಯೋತಿರ್ಲಿಂಗಗಳು ಎನ್ನುತ್ತಾರೆ. ಈ ಶಿವಲಿಂಗಗಳು ಮಾನವ ನಿರ್ಮಿತ ಅಲ್ಲ. ಬದಲಾಗಿ ಪ್ರಾಕೃತಿಕವಾಗಿ ಭೂಮಿಯಿಂದ ಉದ್ಭವಿಸಿರುವಂಥ ಲಿಂಗಗಳಾಗಿವೆ.
ಶಿವಪುರಾಣದ ಪ್ರಕಾರ, ಭಾರತ ಮತ್ತು ನೇಪಾಳವೂ ಸೇರಿ ಒಟ್ಟು ೬೪ ಸ್ಥಳಗಳಲ್ಲಿ ಜ್ಯೋತಿರ್ಲಿಂಗಗಳನ್ನು ಕಾಣಬಹುದು. ಅವುಗಳಲ್ಲಿ ೧೨ ಜ್ಯೋತಿರ್ಲಿಂಗಗಳನ್ನು ಅತ್ಯಂತ ಪವಿತ್ರ ಮತ್ತು ಪೂಜನೀಯ ಎಂದು ಪರಿಗಣಿಸಲಾಗಿದೆ. ಈ ೧೨ ಜ್ಯೋತಿರ್ಲಿಂಗಗಳನ್ನು ಮಹಾ ಜ್ಯೋತಿರ್ಲಿಂಗ ಎಂದೂ ಕರೆಯುತ್ತಾರೆ.
ಪುರಾಣ ಕಥೆ[ಬದಲಾಯಿಸಿ]
ಒಮ್ಮೆ ವಿಷ್ಣು ಮತ್ತು ಬ್ರಹ್ಮರ ನಡುವೆ ಶ್ರೇಷ್ಠತೆಯ ವಿಚಾರವಾಗಿ ವೈಮನಸ್ಸು ತಲೆದೋರಿತು. ಬಾಯಿಮಾತು ಕೊನೆಗೆ ಜಗಳವಾಗಿ ಬದಲಾಯಿತು. ಇದನ್ನು ಗಮನಿಸಿದ ಈಶ್ವರ, ಜಗಳ ನಡೆಯುತ್ತಿರುವಲ್ಲಿಗೆ ಬಂದು ಇಬ್ಬರನ್ನೂ ಸಮಾಧಾನಪಡಿಸುತ್ತಾನೆ. ಇಬ್ಬರ ನಡುವಿನ ವೈಮನಸ್ಸನ್ನು ದೂರ ಮಾಡುವ ಸಲುವಾಗಿ ಇಬ್ಬರಿಗೂ ಒಂದು ಸವಾಲನ್ನು ಒಡ್ಡುತ್ತಾನೆ. ನಾನು ಬೆಳಕಿನ ಕಂಭವಾಗಿ ಅವತರಿಸುತ್ತೇನೆ. ನಿಮ್ಮಿಬ್ಬರಲ್ಲಿ ಯಾರು ಮೊದಲು ನನ್ನ ಆದಿ ಮತ್ತು ಅಂತ್ಯವನ್ನು ಗುರುತಿಸುವಿರೋ ಅವರೇ ಶ್ರೇಷ್ಠರು ಎಂದು ಪರಿಗಣಿಸುತ್ತೇನೆ ಎನ್ನುತ್ತಾನೆ. ಇದಕ್ಕೆ ಹರಿ ಹರ ಇಬ್ಬರೂ ಸಮ್ಮತಿಸುತ್ತಾರೆ. ಈಶ್ವರ ಆದಿ ಮತ್ತು ಅಂತ್ಯವೇ ಇಲ್ಲದ ಒಂದು ಬೆಳಕಿನ ಕಂಬವಾಗಿ ಇಬ್ಬರ ನಡುವೆ ನಿಲ್ಲುತ್ತಾನೆ.
ವಿಷ್ಣು ವರಾಹದ ರೂಪ ತಾಳಿ ಶಿವನ ಅಂತ್ಯ ಭಾಗವನ್ನು ಹುಡುಕುತ್ತಾ ಭೂಮಿಯ ಕೆಳಗೆ ತೆರಳಿದರೆ, ಬ್ರಹ್ಮ ಹಂಸದ ರೂಪ ಧರಿಸಿ, ಶಿವನ ಆದಿಯನ್ನು ಹುಡುಕುತ್ತಾ ಮೇಲ್ಭಾಗಕ್ಕೆ ಹಾರುತ್ತಾನೆ.
ಪಾತಾಳಕ್ಕಿಂತ ಆಳಕ್ಕೆ ತೆರಳಿದರೂ ಆಂತ್ಯವನ್ನು ಕಾಣಲಾಗದೆ, ಬಸವಳಿದ ವಿಷ್ಣು ಹಿಮ್ಮೆಟ್ಟಿ ಹಿಂದಕ್ಕೆ ಬರುತ್ತಾನೆ ಮತ್ತು ಶಿವನ ಅಂತ್ಯಭಾಗವನ್ನು ಕಾಣಲಾಗದು ಎಂದು ಸೋಲೊಪ್ಪಿಕೊಳ್ಳುತ್ತಾನೆ.
ಇತ್ತ, ಮೇಲೆ ತೆರಳುತ್ತಿದ್ದ ಬ್ರಹ್ಮನಿಗೆ ಶಿವನ ಶಿರದಿಂದ ಬೀಳುತ್ತಿದ್ದ ಕೇದಗೆ ಹೂವು ಕಾಣಿಸುತ್ತದೆ. ಬ್ರಹ್ಮ ಆ ಹೂವಿನಲ್ಲಿ ಶಿವನ ಆದಿಭಾಗ ಎಲ್ಲಿದೆ ಎಂದು ಕೇಳುತ್ತಾನೆ. ನಾನು ಶಿವನ ಶಿರಸ್ಸಿನಿಂದ ಬೀಳಲು ಆರಂಭಿಸಿ ಸಹಾಸ್ರಾರು ವರ್ಷಗಳೇ ಕಳೆಯಿತು. ಹಾಗಾಗಿ ಅವನ ಆದಿ ಭಾಗ ಎಲ್ಲಿದೆ ಎಂದು ನನಗೂ ತಿಳಿಯದು ಎಂದು ಹೇಳಿತು. ಕೊನೆಗೆ ಬ್ರಹ್ಮ, ತಾನು ಶಿವನ ಆದಿ ಭಾಗವನ್ನು ನೋಡಿದೆ ಎಂದು ವಿಷ್ಣುವಿನಲ್ಲಿ ಸುಳ್ಳು ಹೇಳುವಾಗ ನೀನು ಸಾಕ್ಷಿ ನುಡಿಯಲು ಸಹಾಯ ಮಾಡಬೇಕು ಎಂದು ಕೇದಗೆ ಹೂವಿನ ಹತ್ತಿರ ಕೇಳುತ್ತಾನೆ. ಇದಕ್ಕೆ ಕೇದಗೆ ಹೂವು ಒಪ್ಪಿಕೊಳ್ಳುತ್ತದೆ.
ಹಿಂತಿರುಗಿ ಬಂದ ಬ್ರಹ್ಮ, ತಾನು ಶಿವನ ಆದಿಭಾಗವನ್ನು ಕಂಡುಹಿಡಿದೆ, ಇದಕ್ಕೆ ಶಿವನ ಶಿರದಿಂದ ಬಿದ್ದ ಕೇದಗೆಯೇ ಸಾಕ್ಷಿ ಎಂದು ಈಶ್ವರನಲ್ಲಿ ಸುಳ್ಳು ಹೇಳುತ್ತಾನೆ.
ಬ್ರಹ್ಮನ ಸುಳ್ಳು ನುಡಿಯಿಂದ ಕೆರಳಿದ ಶಿವ, ಬ್ರಹ್ಮನ ಐದನೆಯ ತಲೆಯನ್ನು ಕಡಿಯುತ್ತಾನೆ ಮತ್ತು ಜಗತ್ತಿನಲ್ಲಿ ಎಲ್ಲಿಯೂ ಬ್ರಹ್ಮನಿಗೆ ಪೂಜೆ ಸಲ್ಲದೆ ಹೋಗಲಿ ಎಂದು ಶಪಿಸುತ್ತಾನೆ. ಹಾಗೆಯೇ ಸುಳ್ಳು ಸಾಕ್ಷಿ ನುಡಿದ ಕೇದಗೆಯು ತನ್ನ ಪೂಜೆಗೆ ಅನರ್ಹವಾಗಲಿ ಎಂದೂ ಶಾಪ ಕೊಡುತ್ತಾನೆ.
ದ್ವಾದಶ ಜ್ಯೋತಿರ್ಲಿಂಗಗಳ ಮಹಿಮೆಯನ್ನು ಸಾರುವ ಸ್ತುತಿಯೊಂದಿದೆ.
ಸೌರಾಷ್ಟ್ರೇ ಸೋಮನಾಥಂ ಚ
ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾ ಮಹಾಕಾಲಂ
ಓಂಕಾರಮಮಲೇಶ್ವರಮ್ ||
ಪರಳ್ಯಾಂ ವೈದ್ಯನಾಥಂ ಚ
ಡಾಕಿನ್ಯಾಂ ಭೀಮಶಂಕರಮ್|
ಸೇತುಬಂಧೇತು ರಾಮೇಶಂ
ನಾಗೇಶಂ ದಾರುಕಾವನೇ ||
ವಾರಣಸ್ಯಾಂತು ವಿಶ್ವೇಶಂ
ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇತು ಕೇದಾರಂ
ಗೃಷ್ಣೇಶಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿಂಗಾನಿ
ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||
ದ್ವಾದಶ ಜ್ಯೋತಿರ್ಲಿಂಗಗಳು[ಬದಲಾಯಿಸಿ]
ಭಾರತದಲ್ಲಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು
- ಕೇದಾರೇಶ್ವರ -(ಕೇದಾರನಾಥ, ಉತ್ತರಾಂಚಲಮಂದಿರದ ಹಿನ್ನೆಲೆ;
- ಶ್ರೀ ವಿಶ್ವೇಶ್ವರ ಜ್ಯೋತಿರ್ಲಿಂಗ; (ಕಾಶಿ, ಉತ್ತರಪ್ರದೇಶ);
- ಶ್ರೀ ವೈದ್ಯನಾಥ ಜ್ಯೋತಿರ್ಲಿಂಗ; ಬಿಹಾರ ರಾಜ್ಯ ;
- ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ; ಮಧ್ಯ ಪ್ರದೇಶದ ಉಜ್ಜಯನಿ ;
- ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ಮಧ್ಯ ಪ್ರದೇಶ ನರ್ಮದಾ ತೀರ ;
- ಶ್ರೀ ಸೋಮನಾಥ ಜ್ಯೋತಿರ್ಲಿಂಗ ಪ್ರಭಾಸ ಕ್ಷೇತ್ರ ಜುನಾಗಡ ಜಿಲ್ಲೆ, ಗುಜರಾತ್ , ಸೌರಾಷ್ತ್ರ;
- ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ದ್ವಾರಕಾ ಗುಜರಾತ್;
- ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ನಾಸಿಕ ಜಿಲ್ಲೆ ಮಹಾರಾಷ್ತ್ರ ರಾಜ್ಯ ;
- ಶ್ರೀ ಗೃಷ್ಣೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಔರಂಗಾಬಾದ್ ಕ್ಶೇತ್ರ;
- ಶ್ರೀ ಭೀಮಾಶಂಕರ ಜ್ಯೋತಿರ್ಲಿಂಗ -ಪುಣೆಯ ಬಳಿ;
- ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಶ್ರೀ ಶೈಲ ಆಂಧ್ರ ಪ್ರದೇಶ;
- ಶ್ರೀರಾಮನಾಥೇಶ್ವರ ಜ್ಯೋತಿರ್ಲಿಂಗ ತಮಿಳುನಾಡು;
ಇನ್ನೊಂದು ಪಂಥದ ಪ್ರಕಾರ:[ಬದಲಾಯಿಸಿ]
- ಬಿಹಾರದ ದೇವಘರ್ ನಲ್ಲಿರುವ ಬೈದ್ಯನಾಥೇಶ್ವರ ಹಾಗೂ
- ಔರಂಗಾಬಾದ್ ಕ್ಶೇತ್ರದಲ್ಲಿರುವ (ಗೃಷ್ಣೇಶ್ವರ ಮಹಾರಾಷ್ಟ್ರದಲ್ಲಿದೆ):-ಇವು ನಿಜವಾದ ಜ್ಯೋತಿರ್ಲಿಂಗಗಳೆಂದು ಪರಿಗಣಿಸಲ್ಪಡುತ್ತವೆ.
- ಘುಶ್ಮೇಶ್ವರ - ರಾಜಾಸ್ಥಾನದಲ್ಲಿದೆ -ಘುಷ್ಮೇಶ್ವರ ಜ್ಯೋತಿರ್ಲಿಂಗವು ಶಿವಾರ್ ಜಿಲ್ಲೆ, ರಾಜಸ್ಥಾನದ ಸವಾಯಿ ಮಾಧೋಪುರ.)