ವಿಷಯಕ್ಕೆ ಹೋಗು

ಐತರೇಯೋಪನಿಷತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐತರೇಯ ಉಪನಿಷತ್ ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಐತರೇಯ ಉಪನಿಷತ್, ಋಗ್ವೇದಕ್ಕೆ ಸೇರಿದ ಐತರೇಯ ಅರಣ್ಯಕದ, ಎರಡನೇ ಅರಣ್ಯಕದ ಭಾಗ. ಎರಡನೇ ಅರಣ್ಯಕದ ನಾಲ್ಕನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. ಶಂಕರಾಚಾರ್ಯರು ಭಾಷ್ಯ ಬರೆದಿರುವ ಪ್ರಮುಖವಾದ ದಶೋಪನಿಷತ್ತುಗಳಲ್ಲಿ ಇದೂ ಒಂದು.ಬಹ್ನೃಚೋಪನಿಷತ್ತೆಂತಲೂ ಮಹಾ ಐತರೇಯ ಉಪನಿಷತ್ತೆಂತಲೂ ಇದಕ್ಕೆ ಹೆಸರುಗಳಿವೆ. ಆರಣ್ಯಕ ಮತ್ತು ಉಪನಿಷತ್ತುಗಳನ್ನು ವಿಂಗಡಿಸಿ ಇದಿಷ್ಟು ಆರಣ್ಯಕ, ಇದು ಉಪನಿಷತ್ತು ಎಂದು ಪರಿಗಣಿಸುವುದರಲ್ಲಿ ಅಭಿಪ್ರಾಯ ಭೇದವಿದೆ. ಮಹೀದಾಸ ಐತರೇಯ ಇದರ ಋಷಿ (ಮಂತ್ರದೃಕ್). ಅದರಿಂದ ಇದಕ್ಕೆ ಈ ಹೆಸರು. ಈತ ವಿಶಾಲಾ ಎಂಬಾಕೆಯ ಪುತ್ರನೆಂದೂ ಶ್ರೀಮನ್ನಾರಾಯಣನ ಅವತಾರವೆಂದೂ ಮಧ್ವಾಚಾರ್ಯರ ಭಾವನೆ. ಇತರಾ ಎಂಬುವಳ ಮಗ ಮಹಿದಾಸ. ಯಜ್ಞಸಭೆಗಳಲ್ಲಿ ತಂದೆ ತನ್ನ ಇತರ ಪತ್ನಿಯರ ಮಕ್ಕಳೊಡನೆ ಈತನನ್ನು ತೊಡೆಯ ಮೇಲೆ ಕೂರಿಸಿಕೊಳ್ಳದೆ ತಾತ್ಸಾರ ತೋರಿಸಲು, ಕರುಳು ನೊಂದ ತಾಯಿ ತನ್ನ ಕುಲದೈವ ಮಹೀ(ಭೂಮಿ) ದೇವಿಯನ್ನು ಪ್ರಾರ್ಥಿಸಲು ಆಕೆಯ ವರಪ್ರಸಾದದಿಂದ ಈತನಿಗೆ ಅಸಮಾನವಾದ ದಿವ್ಯಜ್ಞಾನ ಸಿದ್ಧಿಸಿತು-ಎನ್ನುವ ಈ ಐತಿಹ್ಯವೊಂದನ್ನು ಸಾಯಣರು ಉಲ್ಲೇಖಿಸುತ್ತಾರೆ. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನೆಂಬ ಋಷಿಯಿಂದ ಪ್ರಕಾಶಿಸಲ್ಪಟ್ಟಿದೆ. ಈ ಉಪನಿಷತ್ತಿನಲ್ಲಿ ನಾಲ್ಕು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವೂ ಅಧ್ಯಯನ ಅನುಕೂಲಕ್ಕಾಗಿ ಸಣ್ಣ-ಸಣ್ಣ ಖಂಡಗಳಾಗಿ ವಿಭಜಿಸಲ್ಪಟ್ಟಿದೆ. ಇದು ಅತಿ ಪುರಾತನವಾದ ಗದ್ಯರೂಪದಲ್ಲಿದೆ, ಪುರಾತನವಾದ ಉಪನಿಷತ್ತುಗಳಲ್ಲಿ ಇದೂ ಒಂದು. ಇರುವುದು ಚಿಕ್ಕ ಚಿಕ್ಕ ಮೂರೇ ಅಧ್ಯಾಯಗಳು. ಒಟ್ಟು ಐದು ಖಂಡಗಳೆಂಬ ಉಪವಿಭಾಗಗಳು.

ಮೊದಲನೆಯ ಅಧ್ಯಾಯ

[ಬದಲಾಯಿಸಿ]

ಮೊದಲನೆಯ ಅಧ್ಯಾಯದಲ್ಲಿ ಸೃಷ್ಟಿಗೆ ಸಂಬಂಧಪಟ್ಟ ಅಖ್ಯಾಯಿಕೆಯಿದೆ. ಇದರಲ್ಲಿ ಪರಮಾತ್ಮನು ತನಗಿಂತ ಭಿನ್ನವಾದ ಬೇರೊಂದು ವಸ್ತುವನ್ನು ತೆಗೆದುಕೊಳ್ಳದೆ ಆಕಾಶಾದಿ ಕ್ರಮದಿಂದ ವಿಶ್ವವನ್ನು ಸೃಷ್ಟಿಸಿದನೆಂದೂ ನಂತರ ಅತ್ಮಪ್ರಬೋಧಕ್ಕಾಗಿ ಪ್ರಾಣವೇ ಮೊದಲಾದವುಗಳಿಂದ ಕೂಡಿರುವ ಸರ್ವಶರೀರಗಳನ್ನೂ ತಾನೇ ಪ್ರವೇಶಿಸಿದನೆಂದೂ ಮತ್ತು ಪ್ರವೇಶಿಸಿದ ಮೇಲೆ ಯಥಾರ್ಥವಾದ ತನ್ನ ಆತ್ಮನನ್ನೇ "ನಾನು ಈ ಬ್ರಹ್ಮವೇ ಆಗಿರುತ್ತೇನೆ" ಎಂದು ಸಾಕ್ಷಾತ್ತಾಗಿ ಅರಿತುಕೊಂಡನೆಂದು ಹೇಳಲಾಗಿದೆ. ಆದ್ದರಿಂದ ಸರ್ವಶರೀರಗಳಲ್ಲಿಯೂ ಇರುವವನು ಅವನೊಬ್ಬ ಆತ್ಮನೇ ಹೊರತು ಬೇರೊಬ್ಬನಿಲ್ಲ, ಆದಕಾರಣ ಎಲ್ಲರೂ "ನಾನು ಬ್ರಹ್ಮವೇ ಆಗಿದ್ದೇನೆ" ಅಹಂ ಬ್ರಹ್ಮಾಸ್ಮಿ ಎಂದು ಅರಿಯಬೇಕೆಂದು ತಮ್ಮ ಭಾಷ್ಯದಲ್ಲಿ ಶಂಕರಾಚಾರ್ಯರು ಅಭಿಪ್ರಾಯಪಡುತ್ತಾರೆ.

ಏರಡನೆಯ ಅಧ್ಯಾಯ

[ಬದಲಾಯಿಸಿ]

ಎರಡನೆಯ ಅಧ್ಯಾಯದಲ್ಲಿ ಒಂದೇ ಖಂಡವಿದೆ.ಇದರಲ್ಲಿ ಜೀವನಿಗೆ ಜನ್ಮ-ಮರಣಗಳು ನದಿಯ ಸ್ರೋತದಂತೆ ಪುನಃ ಪುನಃ ಉಂಟಾಗುತ್ತವೆಯೆಂದು ಹೇಳಿದೆ ಅಲ್ಲದೆ, ಜೀವನ ಮೂರು ಅವಸ್ಥೆಗಳನ್ನು ಹೇಳಲಾಗಿದೆ. ಜೀವನು ಪುರುಷನಲ್ಲಿ ರೇತಸ್ಸು ಅಥವಾ ವೀರ್ಯ ರೂಪದಿಂದ ಇರುತ್ತಾನೆ. ಯಾವಾಗ ಪುರುಷನು ವೀರ್ಯವನ್ನು ಸ್ತ್ರೀಗರ್ಭದಲ್ಲಿ ಸೇಚನ ಮಾಡುವನೊ ಆಗ ಉತ್ಪತ್ತಿಯಾಗುವ ಗರ್ಭಸ್ಥ ಶಿಶುರೂಪವು ಮೊದಲನೆ ಅವಸ್ಥೆಯು. ಶಿಶುವು ಮಾತೃಗರ್ಭದಿಂದ ಹೊರಬಂದು ಜೀವಿಸುವುದು ಎರಡನೆಯ ಅವಸ್ಥೆಯು.ಕೊನೆಗೆ ಜೀವನವನ್ನು ಮುಗಿಸಿ ಶರೀರವನ್ನು ಬಿಟ್ಟಮೇಲೆ ಇನ್ನೊಂದು ಶರೀರವನ್ನು ಪಡೆದುಕೊಳ್ಳುವುದು ಮೂರನೆಯ ಅವಸ್ಥೆ. ಯಾವ ಅವಸ್ಥೆಯಲ್ಲಾದರೂ ಇರಲಿ ಜೀವನು ತನ್ನ ಅತ್ಮ ಸ್ವರೂಪವನ್ನು ಅರಿತುಕೊಂಡರೆ,ಬಂಧಮುಕ್ತನಾಗುತ್ತಾನೆಂದೂ, ವಾಮದೇವನು ಮಾತೃಗರ್ಭದಲ್ಲಿರುವಾಗಲೇ ಆತ್ಮಜ್ಞಾನವನ್ನು ಹೊಂದಿ ಅವಿದ್ಯಾಕೃತವಾದ ಶರೀರವನ್ನು ನಾಶಪಡಿಸಿಕೊಂಡು ಅಮೃತನಾದನೆಂದೂ ಹೇಳಲಾಗಿದೆ.

ಮೂರನೆಯ ಅಧ್ಯಾಯ

[ಬದಲಾಯಿಸಿ]

ಮೂರನೆಯ ಅಧ್ಯಾಯದಲ್ಲಿಯೂ ಒಂದೇ ಖಂಡವಿದೆ. ಎರಡನೆಯ ಅಧ್ಯಾಯದಲ್ಲಿ ಹೇಳಿದಂತೆ ವಾಮದೇವನು ಅರಿತುಕೊಂಡ ಆತ್ಮಸ್ವರೂಪದ ಜಿಜ್ಞಾಸೆಯನ್ನು ಮಾಡಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ "ವಾಙ್ಮೇ ಮನಸಿ ಪ್ರತಿಷ್ಟಿತಾ..." ಎಂದು ಪ್ರಾರಂಭವಾಗುವ ಶಾಂತಿಮಂತ್ರವೊಂದೇ ಇದೆ.


೧.ಐತರೇಯೋಪನಿಷತ್:ಸ್ವಾಮೀ ಆದಿದೇವಾನಂದ.

೨.ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್..

೩.ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]