ವಿಷಯಕ್ಕೆ ಹೋಗು

ಈಶಾವಾಸ್ಯೋಪನಿಷತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಈಶಾವಾಸ್ಯೋಪನಿಷತ್ ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಿಸಿ ಇದಕ್ಕೆ ಈ ಹೆಸರು ಬಂದಿದೆ. ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ್ದು ಗಾತ್ರದಲ್ಲಿ ಚಿಕ್ಕದು. ಇದು ಶುಕ್ಲ ಯಜುರ್ವೇದವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರಲ್ಲಿ ಜೀವನಕ್ಕೆ ಬೇಕಾದ ನಿಜವಾದ ಬೆಳಕು ಅಡಗಿದೆ ಎಂದು ಗಾಂಧೀಜಿ ಅಭಿಪ್ರಾಯ ಪಟ್ಟಿದ್ದಾರೆ. ಈ ಉಪನಿಷತ್ತು ಜ್ಞಾನ-ಅಜ್ಞಾನ,ವಿದ್ಯೆ-ಅವಿದ್ಯೆ,ಕರ್ಮ-ಆತ್ಮಗಳ ಕುರಿತಾಗಿ ಬೆಳಕನ್ನು ಬೀರುತ್ತದೆ.ಭಗವಂತನನ್ನು ಈಶ ಎಂದು ಕರೆದಿರುವ ಈ ಉಪನಿಷತ್ತು,ಜಗತ್ತೆಲ್ಲಾ ಈಶನಿಂದ ಆವೃತವಾಗಿದೆ ಎಂದು ನಂಬುತ್ತದೆ.ಪರದ್ರವ್ಯವನ್ನು ಮುಟ್ಟದೆ,ಜಗತ್ತಿನಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಬೋಧಿಸುತ್ತದೆ. ಇದರ ಪ್ರಥಮ ಶ್ಲೋಕ ಹೀಗಿದೆ: ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಇದೆಲ್ಲವೂ ಈಶನಿಂದ ಮುಚ್ಚಲ್ಪಡತಕ್ಕದ್ದು. ಅದರ ತ್ಯಾಗದಿಂದ (ನಿನ್ನನ್ನು)ಕಾಪಾಡಿಕೊ.ಯಾರ ಧನವನ್ನೂ ಬಯಸಬೇಡ.,[]

ಮೂಲ ಪಾಠ

[ಬದಲಾಯಿಸಿ]
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ||||ಓಂ ಶಾಂತಿಃ ಶಾಂತಿಃ ಶಾಂತಿಃ ||
ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್||೧||
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತ ಸಮಾಃ| ಏವಂ ತ್ವಯಿ ನಾನ್ಯಥೇತೋsಸ್ತಿ ನ ಕರ್ಮ ಲಿಪ್ಯತೇ ನರೇ||೨||
ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ| ತಾ ಸ್ತೇ ಪ್ರೇತ್ಯಾಭಿಗಚ್ಛನ್ತಿ ಯೇ ಕೇ ಚಾತ್ಮಹನೋ ಜನಾಃ|| ೩ ||
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋsನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||
ತದೇಜತಿ ತನ್ನೈಜತಿ ತದ್ದೂರೇ ತದ್ವನ್ತಿಕೇ| ತದನ್ತರಸ್ಯ ಸರ್ವಸ್ಯ ತದು ಸರ್ವಸ್ಯ ಬಾಹ್ಯತಃ||೫||
ಯಸ್ತು ಸರ್ವಾಣಿ ಭೂತಾನ್ಯಾತ್ಮನೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ||೬||
ಯಸ್ಮಿನ್ಸರ್ವಾಣಿ ಭೂತಾನಿ ಆತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||೭||
ಸ ಪರ್ಯಗಾಚ್ಛುಕ್ರಮಕಾಯವ್ರಣಮಸ್ನಾವಿರ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತತ್ಥ್ಯತೋsರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||
ಅನ್ಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||೯||
ಅನ್ಯದೇವಾಹುರ್ವಿದ್ಯಯಾsನ್ಯದೇವಾಹುರವಿದ್ಯಯಾ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ||೧೦||
ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ | ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ||೧೧||
ಅನ್ಧಂ ತಮಃ ಪ್ರವಿಶನ್ತಿ ಯೇsಸಮ್ಭೂತಿಮುಪಾಸತೇ | ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ ||೧೨||
ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ ವಿಚಚಿಕ್ಷಿರೇ ||೧೩||
ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ | ವಿನಾಶೇನ ಮೃತ್ಯುಮ ತೀರ್ತ್ವಾ ಸಮ್ಭುತ್ಯಾ sಮೃತಮಶ್ನುತೇ||೧೪||
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದ್ರೃಷ್ಟಯೇ||೧೫||
ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ| ತೇಜೋಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋsಸೌ ಪುರುಷಃ ಸೋsಹಮಸ್ಮಿ||೧೬||
ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಮ್ | ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ ||೧೭||
ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮ ಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ||೧೮||
ಓಂ ಪೂರ್ಣಮದಃ ಪೂರ್ಣಮಿದಮ್ ಪೂರ್ಣಾತ್ಪೂರ್ಣಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ|| ||ಓಂ ಶಾಂತಿಃ ಶಾಂತಿಃ ಶಾಂತಿಃ ||

ಈಶಾವಾಸ್ಯೋಪನಿಶತ್

[ಬದಲಾಯಿಸಿ]

ವ್ಯಾಖ್ಯಾನ

[ಬದಲಾಯಿಸಿ]

ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು ಉಪನಿಷತ್ತುಗಳು ವೇದದ ಅಂಗಗಳಾದ ಬ್ರಾಹ್ಮಣ, ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ ಈಶಾವಾಸ್ಯೋಪನಿಷತ್ತು ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಅದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. ಭಗವದ್ಗೀತೆ ಇದರ ವಿಸ್ತಾರವೆಂಬ ಅಭಿಪ್ರಾಯವಿದೆ. ವೇದಾಂತ, ಉಪನಿಷತ್ತುಗಳು ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ. ಸಂನ್ಯಾಸಿಗಳಾದವರು , ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ ಹೌದು. ಆದರೆ ಉಪನಿಷತ್ತಿನ ಸಾಮಾನ್ಯ -ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ. ಇಲ್ಲಿ ಉಪನಿಷತ್ ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ ಪರಿಗಣಿಸಲಾಗಿದೆ. ಅದು ಗೃಹಸ್ಥರಾದಿಯಾಗಿ ಎಲ್ಲರಿಗೂ ಇಹ ಪರ ಸಾಧಕವಾಗಿರುವುದೆಂದು ನಂಬಲಾಗಿದೆ. ಕಾಯಕ, ಸೇವೆ,ಮೋಕ್ಷ ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಿದ್ಧಾಂತಗಳಿಗೂ ಹೊಂದಾಣಿಕೆ ಯಾಗುವುದು. ಮುಂದಿನ ಭಾಗಗಳಲ್ಲಿ ಮಂತ್ರಗಳ ಕನ್ನಡ ಅನುವಾದದೊಂದಿಗೆ ಟಿಪ್ಪಣಿಯನ್ನು ಕೊಡಲಾಗಿದೆ

ಶಾಂತಿ ಮಂತ್ರ

[ಬದಲಾಯಿಸಿ]

 
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ||
ಓಂ ಶಾಂತಿಃ ಶಾಂತಿಃ ಶಾಂತಿಃ
  ಕನ್ನಡ
ಓಂ, ಅದುಪೂರ್ಣ-ವಿದು ಪೂರ್ಣ
ಪೂರ್ಣದಿಂ ಪೂರ್ಣ ಹುಟ್ಟಿಹುದು |
ಕಳೆ ಪೂರ್ಣದಿಂ ಪೂರ್ಣವನು
ಪೂರ್ಣವೇ ತಾನುಳಿಯುವುದು ||
ಓಂ ಶಾಂತಿಃ ಶಾಂತಿಃ ಶಾಂತಿಃ

(ಅದು ಪೂರ್ಣವು + ಇದು ಪೂರ್ಣ, ಪೂರ್ಣದಿಂದ ಪೂರ್ಣ ಹುಟ್ಟಿದೆ. ಪೂರ್ಣದಿಂದ ಪೂರ್ಣವನ್ನು ಕಳೆ, ಪೂರ್ಣವೇ ಉಳಿಯುವುದು:
ಸೂತ್ರ : ಪೂರ್ಣ + ಪೂರ್ಣ =ಪೂರ್ಣ; ಪೂರ್ಣ- ಪೂರ್ಣ = ಪೂರ್ಣ)
ಇದು ಆಧುನಿಕ ಗಣಿತ ಸೂತ್ರದಂತೆ ತೋರುವುದು.ಪೂರ್ಣ ಎಂದರೆ ಸೊನ್ನೆ: (೦+೦=೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.ಆದರೆ ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ ಅರ್ಥವೇ ಸರಿ. ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ. ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ ತತ್ವದಲ್ಲಿ ಕಡಿಮೆಯಾಗದು.
ಇದು ತತ್ವ ಸಾರ. ಈ ತತ್ವ ದಾರ್ಶನಿಕ ಋಷಿಯ ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು. ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ. (ಉದಾ - ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.: ಗೌಡಪಾದ ಕಾರಿಕೆ) ಈ ಶಾಂತಿ ಮಂತ್ರದಲ್ಲಿ ಈ ಉಪನಿಷತ್ತಿನ ಸಾರವನ್ನೇ ಹೇಳಿದಂತಿದೆ.

ಮಂತ್ರ ೧ : ಈಶನ ವ್ಯಾಖ್ಯೆ

[ಬದಲಾಯಿಸಿ]
ಹರಿಃ ಓಂ |
ಈಶಾವಾಸ್ಯಮಿದಂ(ಗ್ಂ) ಸರ್ವಂ
ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾಃ
ಮಾ ಗೃಧಃ ಕಸ್ಯಸ್ವಿದ್ಧನಂ ||
ಪದ ವಿಭಾಗ- ಈಶಾವಾಸ್ಯಂ, ಇದಂ, ಸರ್ವಂ,ಯತ್,ಕಿಂ, ಚ, ಜಗತ್ಯಾಂ ಜಗತ್, ತೇನ (ಆದ್ದರಿಂದ), ತ್ಯಕ್ತೇನ, ಭುಂಜೀತಾಃ, ಮಾ (ಬೇಡ), ಗೃಧಃ. ಕಸ್ಯ, ಸ್ವಿತ್ (ಇದು- ಪ್ರಾಸಕ್ಕಾಗಿ ಬಂದ ಪದ), ಧನಂ.
ಅರ್ಥ = ಹರಿಃ ಓಂ, ಜಗತ್ತಿನಲ್ಲಿ ಯಾವ ಯಾವುದೆಲ್ಲಾ ಇದೆಯೋ ಅದೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ತ್ಯಾಗ ಮಾಡಿ ಉಣ್ಣಬೇಕು-ಬದುಕಬೇಕು. ಅತಿಯಾಸೆ ಬೇಡ. ಧನವು ಯಾರದ್ದು? ಯಾರದ್ದೂ ಅಲ್ಲ!)
ಪದ್ಯ ೧ : ಓಂ ಹರಿಗೆ ನಮವು |
ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು
ಕಣವಿರಲಿ, ಜಗವಿರಲಿ ; ಅದರಿಂದೆ - |
ಕೊಟ್ಟು ತಾನುಣಬೇಕು, ಅತಿಯಾಸೆ ಒಳಿತಲ್ಲ,
ಬಿಟ್ಟು ಹೋಗುವ ಸಂಪದವು ನಮದಲ್ಲ ||
(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲ; ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.)
ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. ( ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ: ಈಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ ( ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು. ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು. ಜಗತ್ತನ್ನು ಮೀರಿ ಅವನಿದ್ದಾನೆ.)
ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು. ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ. ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. . ಅತಿಯಾಸೆ ಬೇಡ ಇದು ಜೀವನದ ಸೂತ್ರ..
(ಮಾ ಗೃಧಃ ಹದ್ದಿನಂತೆ ದುರಾಸೆಯುಳ್ಳವನಾಗಬೇಡ. ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ. ಕಾರಣ ಬಿಟ್ಟು ಹೋಗುವಂಥಾದ್ದು )
(ಮಾಧ್ವ ಸಂಪ್ರದಾಯದ ಪ್ರಕಾರ ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತವಾದ - ಕೊಡಲ್ಪಟ್ಟದ್ದನ್ನು, ಭುಂಜೀಥಾಃ - ಅನುಭವಿಸಿರಿ ಎಂದು ಅರ್ಥ. ನಿನ್ನ ಯೋಗ್ಯವಾದ ಕರ್ಮಕ್ಕೆ ಫಲವನ್ನು ನೀಡುವವನು ಭಗವಂತನೇ ಆಗಿರುವುದರಿಂದ ಬೇರೆ ಯಾರ ಸಂಪತ್ತಿಗೂ ಆಸೆ ಪಡಬೇಡ ಎಂದು ಇದರ ತಾತ್ಪರ್ಯ. ತಮ್ಮ ದ್ವಾದಶಸ್ತೋತ್ರ ಕೃತಿಯಲ್ಲೂ ಸಹ ‘ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಮ್" (ಶ್ರೀಹರಿಯ ಪಾದದಲ್ಲಿ ವಿನಮ್ರಬುದ್ಧಿಯಿಂದ ನಿನ್ನ ಪಾಲಿನ ಕರ್ಮವನ್ನು ಮಾಡು, ಅದಕ್ಕೆ ಭಗವಂತನು ನೀಡಿದ ಫಲವನ್ನು ಉಣ್ಣು) ಎಂದು ತಿಳಿಸಿದ್ದಾರೆ. ಆದರೆ, ಶ್ರೀಮಧ್ವಾಚಾರ್ಯರ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳದ ಕೆಲವರು ಕೇವಲ ದ್ವೇಷದಿಂದ ಅವರನ್ನು ಆಕ್ಷೇಪಿಸುವುದುಂಟು. "ಎಲ್ಲವೂ ಪರಮಾತ್ಮನ ಅಧೀನ; ಭಗವಂತ ನೀಡಿದ್ದನ್ನು ಮಾತ್ರ ಭಕ್ತ ಉಣ್ಣಬೇಕು ಎಂದು ಹೇಳುವ ಮೂಲಕ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮವನ್ನು ಮಧ್ವಾಚಾರ್ಯರು ಪ್ರತಿಪಾದಿಸಿರುವರು" ಎಂದು ಕೆಲವರ ಆಕ್ಷೇಪ. ವಾಸ್ತವವಾಗಿ ಕರ್ತವ್ಯಪ್ರಜ್ಞೆಯ ಬಗ್ಗೆ ಮಧ್ವಾಚಾರ್ಯರ ನಿಷ್ಠುರ ನಿಲುವು ಇಂತಹವರಿಗೆ ಅರ್ಥವಾಗಿರಲಿಕ್ಕಿಲ್ಲ. ಪ್ರಮಾಣಪುರಃಸರವಾಗಿ ಪ್ರತಿಪಾದನೆ ಮಾಡಿದ ಅವರ ಗ್ರಂಥಗಳನ್ನು ನಿರ್ಮತ್ಸರರಾಗಿ ನೋಡಿದ್ದರೆ ಈ ಆಕ್ಷೇಪಕ್ಕೂ ಅವಕಾಶವಿರುತ್ತಿರಲಿಲ್ಲ.)

ಮಂತ್ರ ೨; ಕರ್ಮಜ್ಞಾನಿ

[ಬದಲಾಯಿಸಿ]

 
ಕುರ್ವನ್ನೇವೇಹ ಕರ್ಮಾಣಿ
ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯಿ ನಾನ್ಯಥೇತೋ Sಸ್ತಿ
ನ ಕರ್ಮ ಲಿಪ್ಯತೇ ನರೇ ||

ಪದವಿಭಾಗ- ಕುರ್ವನ್, ಏವ, ಇಹ, ಕರ್ಮಾಣಿ, ಜಿಜೀವಿಷೇತ್ (ಈ ಲೊಕದ ಕರ್ಮಗಳನ್ನು ಮಾಡುತ್ತಲೇ -ಜೀವಿಸಲು ಇಷ್ಟಪಡಬೇಕು), ಶತಂ, ಸಮಾಃ, | ಏವಂ ತ್ವಯಿ ನಾ, ಅನ್ಯಥಾ, ಇತಃ, ಅಸ್ತಿ. ನ, ಕರ್ಮ, ಲಿಪ್ಯತೇ, ನರೇ ||
ಅರ್ಥ = ಈ ಲೋಕದಲ್ಲಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಬದುಕಲು ಆಶಿಸಬೇಕು. ನಿನಗೆ ಇದೇ (ಮಾರ್ಗ). ಇದಲ್ಲದೆ ಬೇರೆ ಯಾವ ಮಾರ್ಗವೂ ಇಲ್ಲ. ಮನುಷ್ಯನಿಗೆ (ಕರ್ತವ್ಯವೆಂದು ಮಾಡುವ ಜ್ಞಾನಿಗೆ) ಕರ್ಮಫಲ ಅಂಟುವುದಿಲ್ಲ.

 
ಪದ್ಯ ೨ : ಕಾಯಕವು ಈ ಲೋಕದಲಿ ನಿಯಮ ;
ಜಯಿಸು ನೀ ಬಾಳಿ ನೂರು ವರುಷ |
ಆಯುವಿಕೆಗನ್ಯ ಮಾರ್ಗವೆ ಇಲ್ಲ ;
ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||

(ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ= ಆರಿಸಿಕೊಳ್ಳಲು; ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು ಈ ಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ; ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ) ಭಗವದ್ಗೀತೆಯ ಕರ್ಮಯೋಗದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಗೀತೆ.) ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ) ನೂರು ವರುಷ ಆರೋಗ್ಯವಂತನಾಗಿ ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದು ನಿರಾಶೆ ಸಲ್ಲದು. ಸಂಪ್ರದಾಯಿಕರ್ಥ: ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ. ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು ಕರ್ಮ ಪದಕ್ಕೆ ಅರ್ಥ ಮಾಡುವುದೇ ಸರಿ.
(ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು )

ಮಂತ್ರ ೩ : ಕರ್ಮಯೋಗಿಯಲ್ಲದವನಿಗೆ ಪುನರ್‍ ಜನ್ಮ

[ಬದಲಾಯಿಸಿ]

 
ಅಸುರ್ಯಾ ನಾಮ ತೇ ಲೋಕಾ
ಅಂಧೇನ ತಮಸಾSSವೃತಾಃ |
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ
ಯೇ ಕೇ ಆತ್ಮ ಹನೋ ಜನಾಃ ||೩ ||

ಪದ ವಿಭಾಗ - ಅಸರ್ಯಾಃ, ನಾಮ, ತೇ, ಲೋಕಾಃ, ಅಂಧೇನ, ತಮಸಾಃ, ಆವೃತಾಃ,| ತಾನ್, ತೇ, ಪ್ರೇತ್ಯ, ಅಭಿಗಚ್ಛಂತಿ, ಯೇ, ಕೇ, ಚ, ಆತ್ಮಹನಃ, ಜನಾಃ.
ಅರ್ಥ = ಆತ್ಮಜ್ಞಾನದ ಶತ್ರುಗಳಾದ ಆತ್ಮಘ್ನ ಮನುಷ್ಯರು (ಅತ್ಮ ಹನರು) ದೇಹ ನಾಶವಾದಮೇಲೆ ಗಾಢ ಅಂದಕಾರದಿಂದ ಆವರಿಸಿದ ಅಸುರೀ ಎಂಬ ಹೆಸರುಳ್ಳ ಲೋಕವನ್ನು ಹೊಂದುತ್ತಾರೆ (ಲೋಕಕ್ಕೆ ಹೋಗುತ್ತಾರೆ).

 
ಪದ್ಯ ೩:
ಅಜ್ಞಾನ ತುಂಬಿರುವ
ಕತ್ತಲೆಯ ಲೋಕಕ್ಕೆ |
ತಿರುತಿರುಗಿ ಬರುತಿಹರು
ಅರಿವಿರದ ಆತ್ಮ ಹನರು || ೩||

(ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು, ಅರಿವು+ಇರದ ಆತ್ಮ ಹನರು - ಕೊಂದವರು)

ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪುನಃ ಪುನಃ ಜನ್ಮವೆತ್ತಿ ಈ ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು, ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಈ ಮೇಲಿನ ಮೂರು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ. ನಂತರ ಆತ್ಮ ತತ್ವದ ವಿಚಾರ ಹೇಳಿದೆ.

ಮಂತ್ರ ೪ & ೫ : ಆತ್ಮದ ಲಕ್ಷಣ

[ಬದಲಾಯಿಸಿ]
ಅನೇಜದೇಕಂ ಮನಸೋಜವೀಯೋ |
ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |
ತತದ್ದಾವತೋS ನ್ಯಾನ್ ಅತ್ಯೇತಿ ತಿಷ್ಠತ್
ತಸ್ಮಿನ್ನಪೋ ಮಾತರಿಷ್ವಾ ದಧಾತಿ ||೪||
ಪದ ವಿಭಾಗ - ಅನೇಜತ್ (ಚಲಿಸದು), ಏಕಂ (ಒಂದು), ಮನಸಃ (ಮನಸ್ಸಿಗಿಂತ), ಜವೀಯಃ (ವೇಗವುಳ್ಲದ್ದು), ನ (ಇಲ್ಲ), ಏನತ್ (ಇದನ್ನು), ದೇವಾಃ (ದೇವತೆಗಳು), ಆಪ್ನುವನ್(ಹೋಗಿ ಮುಟ್ಟಲು), ಪೂರ್ವಂ (ಮೊದಲೇ), ಅರ್ಷತ್ (ಮುಟ್ಟರುವನು)| ತತ್ (ಅದು), ಧಾವತಃ (ಓಡುವಲ್ಲಿ), ಅನ್ಯಾನ್ (ಬೇರೆಯವರನ್ನು), ಅತ್ಯೇತಿ (ದಾಟಿ), ತಿಷ್ಠತ್(ಇರುತ್ತದೆ), ತಸ್ಮಿನ್ (ಅದರಲ್ಲಿ), ಅಪಃ ( ಜಲಪ್ರವಾಹ - ಕರ್ಮ ಪ್ರವಾಹ), ಮಾತರಿಷ್ವಾ (ಪ್ರಕೃತಿ ಮಾತೆಗಾಳಿ, ಪ್ರಾಣತತ್ವ), ದಧಾತಿ (ಕೊಡುವನು, ಹಂಚುವನು ಎಲ್ಲದರಲ್ಲೂ ಹಂಚಿದೆ, ಇದೆ, ಇರುವಿಕೆ).
ಅರ್ಥ = ಈ ಆತ್ಮ ತತ್ವ ಒಂದೇ ಒಂದು. ಚಲನವಿಲ್ಲದುದು, ಮನಸ್ಸಿಗಿಮತ ವೇಗವುಳ್ಲದ್ದು. ದೇವತೆಗಳೂ ಸಹ ಅದನ್ನು ಹೊಂದಲಾರರು. ಓಡುತ್ತಿರುವ ಇತರರನ್ನು ನಿಂತಲ್ಲಿ ನಿಂತೇ ಹಿಂದೆಹಾಕುತ್ತದೆ. ಪ್ರಕೃತಿಮಾತೆಯ (ಪ್ರಾಣತತ್ವ) ತೊಡೆಯಮೇಲೆ ಆಡುವ ಪ್ರಾಣ, ಅದರ ಇರುವಿಕೆಯ ಆಧಾರದಿಂದಲೇ ಚಲನವಲನ ನೆಡೆಯುವುದು.
ತದೇಜತಿ, ತನ್ನೈಜತಿ,
ಫತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ,
ತದು ಸರ್ವಸ್ಯಾಸ್ಯ ಬಾಹ್ಯತಃ || ೫||
ಪದವಿಭಾಗ - ತತ್ = ಅದು, ಏಜತಿ = ಚಲಿಸುತ್ತದೆ; ತತ್ ಅದು, ನ = ಇಲ್ಲ, ಏಜತಿ = ಚಲಿಸುವುದು; ತತ್ =ಅದು, ದೂರೇ = ಬಹಳ ದೂರ; ತತ್ = ಅದು, ತತ್ = ಅದು, ಉ = ನಿಜವಾಗಿಯೂ, ಅಂತಿಕೇ = ಹತ್ತಿರ; ತತ್ = ಅದು, ಅಂತರ = ಒಳಗೆ, ಅಸ್ಯ = ಇದರ, ಸರ್ವಸ್ಯ = ಎಲ್ಲದರ; ತತ್ ಅದು, ಉ = ನಿಜವಾಗಿಯೂ, ಸರ್ವಸ್ಯ = ಎಲ್ಲದರ; ಅಸ್ಯ = ಇದರ, ಬಾಹ್ಯತಃ = ಹೊರಗೂ ಕೂಡಾ.
ಪದ್ಯ ೪
ಅಚಲ ತತ್ವವದು, ವೇಗದಲಿ ಮನವ ಮೀರಿಹುದು,
ಕಣ್ಣುಕಿವಿಯಾದಿಗಳು ಮುಟ್ಟಲಾರವದನು |
ಇದ್ದೆಡೆಯಲೇ ಇದ್ದಂತೆ ಧಾವಿಪರ ಮುಂದಿಹುದು
ಜೀವಿಗಳಿಗದುವೆ ಆತ್ಮ , ತಾ ಪ್ರಾಣದಾತ ||
(ಅಚಲ = ಚಲಿಸದ ತತ್ವವು ಅದು, ವೇಗದಲ್ಲಿ ಮನವನ್ನು ಮೀರಿದೆ : ಕಣ್ಣು ಕಿವಿ ಆದಿಗಳು, ಕಣ್ಣುಕಿವಿ ಮೊದಲಾದವುಗಳು, ಮುಟ್ಟಲಾರವು -ತಲುಪಲಾರವು- ಅರ್ಥಮಾಡಿಕೊಳ್ಳಲಾರವು, ಅದನು - ಅದನ್ನು; ಇದ್ದ ಎಡೆಯಲೇ ಇದ್ದಂತೆ- ಇದ್ದುಕೊಂಡು ಧಾವಿಪರ-ಓಡುವವರ ಮುಂದೆ ಇಹುದು-ಇರುವುದು. ಜೀವಿಗಳಿಗೆ ಅದುವೆ -ಅದೇ ಆತ್ಮ ; ತಾ ತಾನು - ಆತ್ಮವು, ಪ್ರಾಣದಾತ.- ಎಲ್ಲಾ ಜೀವಿಗಳಿಗೆ ಪ್ರಾಣವನ್ನು ಕೊಡುವಂತಾದ್ದು. )
ಪದ್ಯ ೫ :
ಚಲಿಸುವುದದು ಅತಿ ವೇಗದಲಿ; ಚಲಿಸದಿಹುದು.
ಭವಿಗತಿ ದೂರ ; ಜ್ಞಾನಿಗತಿ ಹತ್ತಿರವು, |
ಎಲ್ಲರೊಳಗಡಗಿಹುದು,
ಹೊರಗಿಹುದು ದೃಶ್ಯ ಜಗದಿ ||
(ಚಲಿಸುವುದು+ ಅದು, ಅತಿ ವೇಗದಲ್ಲಿ, ಚಲಿಸದೆ + ಇಹುದು, ಭವಿಗೆ +ಅತಿ ದೂರ, ಜ್ಞಾನಿಗೆ +ಅತಿ ಹತ್ತಿರವು, ಎಲ್ಲರ +ಒಳಗೆ + ಅಡಗಿಹುದು, ದೃಶ್ಯ ಜಗದ ಹೊರಗೆ + ಇಹುದು )
ಪರಸ್ಪರ ವಿರುದ್ಧ ಗುಣಗಳನ್ನು ಹೇಳಿ , ಶಬ್ದಗಳಿಂದ ವಿವರಿಸಲು ಆಗದ್ದನ್ನು ಕಾವ್ಯ ಭಾಷೆಯಲ್ಲಿ ಆತ್ಮ ತತ್ವದ ಲಕ್ಷಣಗಳನ್ನು ಹೇಳಿದೆ. ಚಲನೆ ಇಲ್ಲದ ದೃಢವಾದ ಒಂದೇ ತತ್ವ ಅದು; ಅದು ಇಂದ್ರಿಯಗಳಿಗೆ ಸಿಕ್ಕದು, ಮನಸ್ಸಿಗಿಂತ ವೇಗವುಳ್ಳದ್ದು. ಇದ್ದಲ್ಲಿಯೇ ಇದ್ದು ಓಡುತ್ತಿರುವ ಇತರರನ್ನು ಹಿಂದೆ ಹಾಕುತ್ತದೆ. ಅದೇ ಎಲ್ಲದರ ಪ್ರಾಣದಾತ-ಮಾತರಿಶ್ವ ; ಸಕಲ ಚರಾಚರ ವಸ್ತುಗಳ ಕರ್ಮ ಪ್ರವಾಹವನ್ನು (ಆ ಪ) ನಿಯಂತ್ರಿಸುತ್ತದೆ. ಅದು ಚಲಿಸುತ್ತೆ, ಚಲಿಸುವುದಿಲ್ಲ. ಪ್ರಾಪಂಚಿಕರಿಗೆ ದೂರ, ಜ್ಞಾನಿಗೆ ಹತ್ತಿರ. ಅದು ಎಲ್ಲದರ ಒಳಗಿದೆ, ಆದರೆ ಅದೇ ಎಲ್ಲದರ ಹೊರಗಿದೆ - ದೃಶ್ಯ ಜಗದ ಹೊರಗಿದೆ. ಭಗವದ್ಗೀತೆಯ ೧೩ನೇ ಅಧ್ಯಾಯದ ೧೫ನೇ ಶ್ಲೋಕ ಇದೇ ಮಾತನ್ನು ಹೇಳುವುದು. ಮುಂದೆ ಆತ್ಮ ಜ್ಞಾನಿಯ ಲಕ್ಷಣಗಳನ್ನು ಹೇಳಿದೆ.

ಮಂತ್ರ ೬, ೭ : ಜ್ಞಾನಿಯ ಲಕ್ಷಣ

[ಬದಲಾಯಿಸಿ]
ಯಸ್ತು ಸರ್ವಾಣಿ ಭೂತಾನಿ
ಆತ್ಮನ್ಯೇವಾನು ಪಶ್ಯತಿ |
ಸರ್ವಭೂತೇಷು ಚಾತ್ಮಾನಂ
ತತೋ ನ ವಿಜುಗುಪ್ಸತೇ || ೬||
ಪದವಿಭಾಗ - ಅರ್ಥ = ಯಃ = ಯಾರು, ತು = ಹೀಗಿರುವುದರಿಂದ, ಸರ್ವಾಣಿ = ಎಲ್ಲಾ, ಭೂತಾನಿ = ಜೀವರಾಶಿಗಳನ್ನು, ಆತ್ಮನಿ = ಆತ್ಮನಲ್ಲಿ, ಏವ = ಮಾತ್ರಾ, ಅನುಪಶ್ಯತಿ = ನೋಡುತ್ತಿರುತ್ತಾನೋ; ಸರ್ವ ಭೂತೇಷು = ಎಲ್ಲಾ ಜೀವಿಗಳಲ್ಲಿ, ಚ = ಮತ್ತು, ಆತ್ಮಾನಂ = ಆತ್ಮನನ್ನು, ತತಃ = ಆ ನಂತರ, ನ = ಇಲ್ಲ, ವಿಜುಗುಪ್ಞತೇ = ಮೋಹಗೊಳ್ಳುವುದು, ದುಃಖಿಸುವುದು.
ತಾತ್ಪರ್ಯ= ಯಾವನು ಆತ್ಮನಲ್ಲಿ ಎಲ್ಲವನ್ನೂ, ಎಲ್ಲಾ ಜೀವಿಗಳಲ್ಲಿ ಆತ್ಮನನ್ನೂ ಕಾಣುತ್ತಾನೋ, ಅಂಥವನು ಆ ನಂತರ ದುಃಖಿಸುವುದಿಲ್ಲ. ಅಂಥವನು ಪುನಃ (ಯಾರನ್ನೇ ಆಗಲಿ, ಯಾವುದಕ್ಕೇ ಆಗಲಿ) ಜುಗುಪ್ಸೆ ಪಡುವುದಿಲ್ಲ.
ಪದ್ಯ ೬ :
ತನ್ನಾತ್ಮ ಭಾವದಲಿ ಜೀವ ಕೋಟಿಗಳ,
ಸರ್ವ ಜೀವಿಗಳೊಳಗೆ ತನ್ನಾತ್ಮವನು|
ಸ್ವಾನು ಭಾವದಿ ಕಾಣುವವ, ಸರ್ವಾತ್ಮನವ,
ಅವ ನಿಂದಿಸನು ತಾ ಪ್ರೇಮ ಸಾಗರನು || ೬||
(ತನ್ನ ಆತ್ಮ ಭಾವದಲಿ ಜೀವ ಕೋಟಿಗಳ, ಸರ್ವ ಜೀವಿಗಳ ಒಳಗೆ ತನ್ನ ಆತ್ಮವನು, ಸ್ವ+ಅನುಭಾವದಿ ಕಾಣುವವ, ಸರ್ವ ಆತ್ಮನು ಅವ - ಅವನು ; ಅವನು ಯಾರನ್ನೂ ನಿಂದಿಸನು, ಪ್ರೇಮಸಾಗರನು)
ಮಂತ್ರ : ೭
ಯಸ್ಮಿನ್ ಸರ್ವಾಣಿ ಭೂತಾನಿ,
ಆತ್ಮೈ ವಾ ಭೂದ್ವಿಜಾನತಃ |
ತತ್ರ ಕೋ ಮೋಹ ಕಃ ಶೋಕ
ಏಕತ್ವಮನುಪಶ್ಯತಃ ||೭||
ಪದವಿಭಾಗ - ಅರ್ಥ = ಯಸ್ಮಿನ್ = ಯಾವಾಗ, ಸರ್ವಾಣಿ = ಎಲ್ಲಾ, ಭೂತಾನಿ = ಜೀವ ರಾಶಿಗಳು, ಆತ್ಮಾ = ಆತ್ಮವು, ಏವ = ಮಾತ್ರವೇ, ಅಭೂತ್ = ಆಗಿರುತ್ತದೆಯೋ, ವಿಜಾನತಃ = ತಿಳಿದವನಿಗೆ,| ತತ್ರ = ಆಧಾಗ, ಕಃ = ಯಾವುದು, ಮೋಹ = ಮೋಹವು, ಕಃ = ಎಲ್ಲಿ, ಶೋಕಃ = ಶೋಕವು, ಏಕತ್ವಂ = ಸಮತ್ವವನ್ನು, ಅಪಶ್ಯತಃ = ಸದಾಕಾಣುವವನಿಗೆ.
ತಾತ್ಪರ್ಯ = ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ (ಜೀವಿಗಳಲ್ಲಿಯೂ) ಆತ್ಮನೇ (ಆದನೋ) ಕಂಡುಬರುತ್ತಾನೋ, ಅಂತಹ ಏಕತ್ವವನ್ನು ನಿರಂತರವೂ ಕಾಣುವ ವಿಜ್ಞಾನಿಯಾದ ಮನುಷ್ಯನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? (ಅವನಿಗೆ ಮೋಹ ಶೋಕಗಳು ಇಲ್ಲ.)
ಪದ್ಯ ೭ :
ಸರ್ವಜೀವಿಗಳೊಳಗೆ ತನ್ನಾತ್ಮ ಭಾವವಿರೆ,
ಹುಟ್ಟಲಾರದು ಬಯಕೆ ಮೋಹವಿರದು |
ಸ್ವಾನು ಭಾವದಿ ಕಾಣುತ್ತಲಿಹನವನು,
ಜಗದಲೆಲ್ಲೆಡೆ ಒಂದೇ ಆತ್ಮ ತತ್ವವನು. ||
( ಸರ್ವ ಜೀವಿಗಳ ಒಳಗೆ ತನ್ನ ಆತ್ಮ ಭಾವವು ಇರೆ-ಇರಲು, ಹುಟ್ಟ ಲಾರದು ಬಯಕೆ, ಮೋಹವು ಇರದು, ಸ್ವ -ಸ್ವಂತ ಅನುಭಾವದಿ- ಅನಭವದಿಂದ , ಕಾಣುತ್ತಲಿ ಇಹನು ಅವನು, ಜಗದ ಎಲ್ಲೆಡೆ ಒಂದೇ ಆತ್ಮ ತತ್ವವನು) ಎಲ್ಲಾ ಕಡೆಗಳಲ್ಲಿ, ಎಲಾ ಜೀವಿಗಳಲ್ಲಿ ತನ್ನ ಆತ್ಮವನ್ನೇ ಕಾಣುವವನಿಗೆ, ಬಯಕಯೇ ಉಂಟಾಗುವುದಿಲ್ಲ, ಯಾವುದರ ಬಗ್ಗೆಯೂ ಮೋಹವಿರುವುದಿಲ್ಲ, ತನ್ನ ಆತ್ಮದಲ್ಲಿ ಸರ್ವ ಜೀವಿಗಳನ್ನೂ ಕಾಣುವವನು ಕೋಪ, ನಿಂದೆಗಳನ್ನು ಮಾಡನು. ಯಾರ ಬಗ್ಗೆಯೂ ಬೇಸರವಿಲ್ಲದವನು ಎಲ್ಲರ ಬಗ್ಗೆಯೂ ಪ್ರೇಮ ಭಾವವನ್ನು ಹೋದಿರುತ್ತಾನೆ. ಇದು ಜ್ಞಾನಿಗೆ ಸಹಜ. ಅದೇ ಭಾವ ಗೀತೆಯಲ್ಲಿಯೂ ಇದೆ ಭಗವದ್ಗೀತೆಯ ಅಧ್ಯಾಯ ೬, ಶ್ಲೋಕ ೨೯ರಲ್ಲಿ ಯಾರು ಸರ್ವ ಭೂತಗಳನ್ನೂ (ಜೀವಿಗಳನ್ನೂ) ತನ್ನಲ್ಲಿಯೂ, ಸರ್ವ ಭೂತಗಳಲ್ಲಿ ತನ್ನನ್ನೂ ಕಾಣುವನೋ ಅವನು ಸಮದರ್ಶಿ, ಯೋಗಿ ಎಂದಿದೆ.(೬)
ಆತ್ಮ ತತ್ವವನ್ನು ಅನುಭವದ ಮೂಲಕ ತಿಳಿದವನಾಗಿದ್ದು, ಎಲ್ಲಾ ಜೀವಿಗಳಲ್ಲಿ ತನ್ನ ಆತ್ಮ ವನ್ನೇ ನೋಡುವವನಲ್ಲಿ ಬಯಕೆ, ಮೋಹ, ಶೋಕಗಳು ಹುಟ್ಟುವುದೇ ಇಲ್ಲ.(೭)
ಈಗ ಬ್ರಹ್ಮ ಜ್ಞಾನಿ, ಪರಬ್ರಹ್ಮ ತತ್ವ ಅಥವಾ ಆತ್ಮ, ಇವಕ್ಕೆ ಅನ್ವಯವಾಗುವ ಗುಣಗಳನ್ನು ಹೇಳಲಾಗುತ್ತದೆ.

ಮಂತ್ರ ೮ ಆತ್ಮಸ್ವರೂಪನ/ದ ಲಕ್ಷಣ

[ಬದಲಾಯಿಸಿ]
ಸ ಪರ್ಯಗಾತ್ ಶುಕ್ರಮಕಾಯಮವ್ರಣಮ್
ಅಸ್ನಾವಿರಂ ಶುದ್ಧಮಪಾಪವಿದ್ಧಮ್ |
ಕವಿರ್ಮನೀಷೀ ಪರಿಭೂಃ ಸ್ವಯಂಭೂರ್
ಯಾಥಾತಥ್ಯ ತೋsರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||೮||
ಪದವಿಭಾಗ - ಅರ್ಥ =ಸಃ = ಅವನು, ಪರ್ಯಗಾತ್ = ಎಲ್ಲೆಲ್ಲೂ ಹೋಗಿರುವ - ಹರಡಿರುವ, ಶುಕ್ರಂ = ಶುಭ್ರವಾಗಿರುವ, ಅಕಾಯಂ = ಸ್ಥೂಲ ಶರೀರವಿಲ್ಲದ, ಅವ್ರಣಮ್ = ಗಾಯಗಳಿಲ್ಲದ, ಅಸ್ನಾವಿರಂ = ಸ್ನಾಯುಗಳಿಲ್ಲದ, ನರಗಳಿಲ್ಲದ - ಸೂಕ್ಷ್ಮ ಶರೀರ ಇಲ್ಲದ, ಶುದ್ಧಂ = ಶುದ್ಧವಾದ, ಅಪಾಪವಿದ್ಧಮ್ = ಪಾಪಗಳಿಲ್ಲದ, ಎಂದರೆ ಕಾರಣ ಶರಿರವಿಲ್ಲದ,| ಕವಿಃ = ಕ್ರಾಂತದರ್ಶಿ, ಮನೀಷೀ = ಸರ್ವಜ್ನನು, ಪರಿಭೂಃ = ಎಲ್ಲಕ್ಕಿಂತ ಮೊದಲಿದ್ದ, ಸ್ವಯಂಭೂಃ = ಸ್ವಯಂಭು,, ಕಾರಣವಿಲ್ಲದವ, ಯಥಾ ತಥ್ಯತಃ = ಸರಿ ಸಮಾನವಾಗಿ, ಅರ್ಥಾನ್ = ಕೆಲಸಗಳನ್ನು, ವ್ಯದಧಾತ್ = ಹಂಚಿದ್ದಾನೆ, ಶಾಶ್ವತೀಭ್ಯಃ = ಶಾಸ್ವತವಾಗಿರುವ, ಸಮಾಭ್ಯಃ= ದೇವತೆಗಳಿಗೆ.
ತಾತ್ಪರ್ಯ =ಇದು ಆತ್ಮದ ವರ್ಣನೆ- ಹಾಗೂ ಆತ್ಮಜ್ಞನ ವರ್ಣನೆ; ಆ ತೇಜಸ್ವಿಯಾದ ದೇಹ ರಹಿತನಾದ ಆತ್ಮನು, ಸರ್ವವ್ಯಾಪಿ, ಜ್ಯೋತಿಸ್ವರೂಪನು, ಸ್ಥೂಲ ಸೂಕ್ಷ್ಮ ಮತ್ತು ಕಾರಣ ಶರೀರಗಳಿಲ್ಲದವನು. ಸರ್ವಜ್ಞನು, ಕ್ರಾಂತದರ್ಶಿ, ಆದಿ ಪುರುಷನು,ಮತ್ತು ಸ್ವಯಂಭೂ; ಇವನೇ ಜಗತ್ತಿನಲ್ಲಿ ಶಾಶ್ವತವಾಗಿರುವ ದೇವತೆಗಳಿಗೆ ಒಬ್ಬೊಬ್ಬರಿಗೆ ಒಂದೊಂದುಕೆಲಸವನ್ನು ಹಂಚಿದನು.
ಆತ್ಮಜ್ಞ - ಆ ತೇಜಸ್ವಿಯಾದ, ಆತ್ಮಜ್ಞನು, ದೇಹ ಬಾವವಿಲ್ಲದವನು, ಆದುದರಿಂದಲೇ ಅವನಿಗೆ ಹುಣ್ಣು ಮುಂತಾದ ದೇಹ ಬಾಧೆ, ದೋಷವಿಲ್ಲದವನು. ಶುದ್ಧನಾಗಿರುವವನು, ಕಾರಣ ಶರೀರವಿಲ್ಲದೆ ಇರುವುದರಿಂದ ಪಾಪ ರಹಿತನು. ಆತ್ಮ ತತ್ವವನ್ನು ಎಲ್ಲಾ ಕಡೆಯಿಂದ (ಪರಿಭೂ)ವ್ಯಾಪಸಿದವನು, ಕವಿ ಎಂದರೆ ಕ್ರಾಂತದರ್ಶಿ (ಸರ್ವಜ್ಞ), ಸ್ವಯಂಭೂ- ಸ್ವತಂತ್ರನು (ಹುಟ್ಟಿಗೆ ಕಾರಣವಿಲ್ಲದವನು), ಅವನು ಶಾಶ್ವತ ಕಾಲವಿರುವ ಸಕಲ ಅರ್ಥವನ್ನು ಸಾಧಿಸಿದವನು.
  • ಪದ್ಯ ೮ ;
ಕಾಯವಿಲ್ಲವು, ಪರಿಶುದ್ಧ, ರೋಗ ರಹಿತನು,
ಸ್ನಾಯುಗಳಿಲ್ಲ, ನರತಂತು ಬೇಕಿಲ್ಲ |
ತಾನೆ ತನ್ನೊಡೆಯ, ಬೆಳಕಿವನು, ಸರ್ವಜ್ಞ
ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು || ೮||
(ಕಾಯವು-ದೇಹವು ಇಲ್ಲವು, ಪರಿಶುದ್ಧ, ರೋಗ ರಹಿತನು, ಅರಿವಿಂಗೆ - ಅರಿಯಲು-ತಿಳಿಯಲು, ಅವಗೆ- ಅವನಿಗೆ, ನರತಂತು ಬೇಕಿಲ್ಲ, ತಾನೆ ತನ್ನ ಒಡೆಯ- ಯಜಮಾನ, ಬೆಳಕು ಇವನು, ಸರ್ವಜ್ಞ, ಸರ್ವವ್ಯಾಪಿಯು, ಶಾಶ್ವತನು, ಕರ್ತನಾದರೂ ಮುಕ್ತನು ) ದೇಹವೇ ಇಲ್ಲದ, ಪರಿಶುದ್ಧವಾದ, ರೋಗಗಳು ಅಂಟದ, ಈ ಆತ್ಮ ತತ್ವವು ಸರ್ವಜ್ಞ ವಾಗಿದೆ, ಸ್ನಾಯಗಳಿಲ್ಲ, ನರಗಳಿಲ್ಲ, ಅದಕ್ಕೆ ತಿಳಿಯಲು ಮೆದುಳು ಬೇಕಾಗಿಲ್ಲ,(ನರಗಳಿಲ್ಲ- ಶಂಕರ ಭಾಷ್ಯ) ಮನುಷ್ಯನಿಗೆ ಅರಿಯಲು ಮೆದುಳು ಬೇಕು, ಮದುಳಿನಿಂದ ಹೊರಟ ನಾನಾ ನರನಾಡಿಗಳು ಬೇಕು, ಆದರೆ ಆತ್ಮ ತತ್ವಕ್ಕೆ ಈ ವ್ಯವಸ್ಥೆ ಬೇಕಾಗಿಲ್ಲ. ಇದು ವಿಚಿತ್ರವದರೂ ಸತ್ಯ. ಅದು ನಮ್ಮ ಕಣ್ಣಿಗೆ ಕಾಣುವ ಬೆಳಕಿಗಿಂತ ಬೇರೆಯಾದ ವಿಶಿಷ್ಟವಾದ ಆನಂದಮಯ ಬೆಳಕು. ಅದು ಆಥವಾ ಆತ್ಮನು, ಎಲ್ಲಾ ಕಾರ್ಯಗಳಿಗೆ ಕಾರಣನಾಗಿ ಕರ್ತನಾದರೂ ಆತ್ಮಕ್ಕೆ ಕರ್ಮದ ಆಂಟಿಲ್ಲ.ಇದರ ನಂತರ ಸಾಧನೆಯ ಮಾರ್ಗ ಹೇಳಿದೆ,

ಮಂತ್ರ ೯, ೧೦, ೧೧ ಅಮೃತತ್ವನ್ನು ಅಥವಾ ಜ್ನಾನವನ್ನು ಪಡೆಯುವ ಬಗೆ

[ಬದಲಾಯಿಸಿ]
ಮಂತ್ರ ೯,
ಅಂಧಂತಮಃ ಪ್ರವಿಶಂತಿ
ಯೇ Sವಿದ್ಯಾಮುಪಾಸತೇ |
ತತೋ ಭೂಯ ಇವ ತೇ ತಮೋ
ಯ ಉ ವಿದ್ಯಾಯಾ ಗುಂ ರತಾಃ ||೯||
ಪದವಿಭಾಗ ಅರ್ಥ - ಅಂಧಂತಮಃ = ಗಾಢವಾದ ಅಂಧಕಾರ ಪ್ರವಿಶಂತಿ= ಹೋಗುತ್ತಾರೆ, ಯೇ = ಯಾರು, ಅವಿದ್ಯಾಂ = ಉಪಾಸತೇ - ಉಪಾಸನೆಮಾಡುತ್ತರೋ, ತತಃ = ಅದಕ್ಕಿಂತಲೂ, ಯೇ = ಭೂಯಃ = ಹೆಚ್ಚಿನ, ಇವ =ಇರುವ, ತೇ ತೇ =ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ವಿದ್ಯಾಯಾ = ವಿದ್ಯೆಯಲ್ಲಿ, ಉಪಾಸನೆಯಲ್ಲಿ, ರತಾಃ = ಅನುರಕ್ತರಾಗಿರುವರೋ.
ತಾತ್ಪರ್ಯ - ಅವಿದ್ಯೆಯನ್ನು ಉಪಾಸನೆ ಮಾಡುವವರು ಗಾಡವಾದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ. ಯಾರು ವಿದ್ಯೆಯನ್ನು ಉಪಾಸನೆ ಮಾಡುವರೋ ಅವರು ಇನ್ನೂ ಹೆಚ್ಚಿನ ಕತ್ತಲೆಯ ಲೋಕವನ್ನು ಪ್ರವೇಶಿಸುವರು.
ಪದ್ಯ ೯ :
ಕತ್ತಲೆಯ ಸೇರುವನು
ಅವಿದ್ಯೆಯುಪಾಸಕನು |
ಕಗ್ಗತ್ತಲೆಯ ಹೊಗುವನವ
ವಿದ್ಯೆಯಲಿ ನಿರತನಾದವ ||೯||

( ಕತ್ತಲೆಯ ಸೇರುವನು ಅವಿದ್ಯೆಯ ಉಪಾಸಕನು, ಕಗ್ಗತ್ತಲೆಯ ಹೊಗುವನು ಅವ-ಅವನು ವಿದ್ಯೆಯಲಿ ನಿರತನಾದವ)

ಮಂತ್ರ ೧೦:
ಅನ್ಯದೇವಾಹುರ್ವಿದ್ಯಯಾ
ಅನ್ಯದಾಹುರವಿದ್ಯಯಾ |
ಇತಿ ಶುಶ್ರಮ ಧೀರಾಣಾಂ
ಯೇನಸ್ತದ್ವಿಚಚಕ್ಷಿರೇ ||೧೦||
ಅನ್ಯತ್ = ಬೇರೆ, ಏವ = ಖಂಡಿತವಾಗಿಯೂ, ಆಹುಃ = ಹೇಳುತ್ತಾರೆ, ವಿದ್ಯೆತಾ = ವಿದ್ಯೆಗಿಂತ, ಅನ್ಯತ್ = ಬೇರೆ. ಆಹುಃ = ಹೇಳುತ್ತಾರೆ; ಅವಿದ್ಯೆಯಾ = ಅವಿದ್ಯೆಗಿಂತ, ಇತಿ = ಹೀಗೆ, ಶುಶ್ರಮಾ = ಕೇಳಿದ್ದೇವೆ. ಧೀರಾಣಾಂ = ತಿಳಿದ ಧೀರರಿಂದ, ಯೇ ಯಾರು, ನಃ = ನಮಗೆ, ತತ್ =ಅದನ್ನು, ವಿಚಚಕ್ಷಿರೇ =ವಿವರಿಸಿದರೋ.
ತಾತ್ಪರ್ಯ - ಅದು (ಆತ್ಮತತ್ವ) ವಿದ್ಯೆಗಂತ ಬೇರೆ ಇರುವುದು; ಅವಿದ್ಯೆಗಿಂತಲೂ ಬೇರೆ ಇರುವುದು. ಹಿಗೆ ನಮಗೆ ಕಲಿಸಿದ ಧೀಮಂತರಿಮದ ಕೇಳಿದ್ದೇವೆ.
ಪದ್ಯ ೧೦ :
ವಿದ್ಯೆಯೇ ಹಿರಿದೆಂಬರು
ಕೆಲವರರಿತವರು |
ಅವಿದ್ಯೆ ಗರಿಮೆಯದು
ಎಂಬುದಿತರರ ನಿಲುವು ||೧೦||
( ವಿದ್ಯಯೇ ಹಿರಿದು ಎಂಬರು ಕೆಲವರು ಅರಿತವರು; ಅವಿದ್ಯೆ ಗರಿಮೆಯದು-ಹೆಚ್ಚಿನದು ಎಂಬುದು, ಇತರರ ನಿಲುವು)
ಮಂತ್ರ ೧೧ :
ವಿದ್ಯಾಂಚಾವಿದ್ಯಾಂಚ
ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ
ವಿದ್ಯಾಯಾಮೃತಮಶ್ನುತೇ ||೧೧||
ವಿದ್ಯಾಂ = ವಿದ್ಯೆಯನ್ನು, ಚ = ಮತ್ತು, ಅವಿದ್ಯೆಯನ್ನು, ಚ = ಯಾರು, ತತ್ = ಅದನ್ನು. ವೇದ = ತಿಳಿಯುತ್ತಾನೋ; ಉಭಯ = ಇವೆರಡನ್ನೂ, ಸಹ = ಜೊತೆಗೆ, ಅವಿದ್ಯಯಾ = ಅವಿದ್ಯೆಯ ಮೂಲಕ, ಮೃತ್ಯುಂ = ಮೃತ್ಯವನ್ನು, ತೀರ್ತ್ವಾ = ದಾಟಿ, ವಿದ್ಯಯಾ = ವಿದ್ಯೆಯಿಂದ, ಅಮೃತಂ = ಅಮೃತತ್ತ್ವವನ್ನು, ಅಶ್ನುತೇ = ಪ್ರಾಪ್ತಿ ಮಾಡಿಕೊಳ್ಲುತ್ತಾನೆ.
ತಾತ್ಪರ್ಯ - ಯಾರು ವಿದ್ಯೆ ಅವಿದ್ಯೆ ಇವೆರಡನ್ನೂ ತಿಳಿದುಕೊಳ್ಳತ್ತಾನೋ, ಅವನು ಅವಿದ್ಯೆಯ ಮೂಲಕ ಮೃತ್ಯುವನ್ನು ದಾಟಿ, ವಿದ್ಯೆಯ ಮೂಲಕ ಅಮೃತ್ತ್ವವನ್ನು ಪಡೆಯುತ್ತಾನೆ.
ಪದ್ಯ ೧೧ :
ವಿದ್ಯೆ ಅವಿದ್ಯೆಗಳ
ಅಂತರಂಗವನರಿತು |
ಅವಿದ್ಯೆಯಿಂ ಮೃತ್ಯು ವನು ದಾಟಿ|
ವಿದ್ಯೆಯಿಂದಮೃತವ ಪಡೆಯುವುದು || ೧೧||
(ವಿದ್ಯೆ ಅವಿದ್ಯೆಗಳ ಅಂತರಂಗವನು ಅರಿತು ಅವಿದ್ಯಯಿಂ - ಅವಿದ್ಯೆಯಿಂದ, ಮೃತ್ಯುವನು ದಾಟಿ, ವಿದ್ಯೆಯಿಂದ ಅಮೃತವ ಪಡೆಯುವುದು)

ವಿದ್ಯೆ ಮತ್ತು ಅವಿದ್ಯೆಯ ಸಾಧನೆ, ಪ್ರಯೋಜನಗಳನ್ನು ಹೇಳಿದೆ. ಅವಿದ್ಯೆಯ ಉಪಾಸಕನು ಕತ್ತಲೆಯನ್ನು ಸೇರುವನು ಎಂದರೆ, ಅಜ್ಞಾನಿಯಾಗಿಯೇ ಉಳಿಯುತ್ತಾನೆ ಎಂದು ಅರ್ಥ. ಅವಿದ್ಯೆ ಎಂದರೆ ಯಜ್ಞ - ಯಾಗಾದಿ ವೈದಿಕ ಕರ್ಮಗಳು, ಉಪಾಸನೆ ಇತ್ಯಾದಿ. ಅವುಗಳಿಂದ ಉತ್ತಮ ಲೋಕ ಪ್ರಾಪ್ತಿ ಯಾದರೂ ಆತ್ಮ ಜ್ಞಾನವನ್ನು ಕೊಡಲಾರವು. ಆದ್ದರಿಂದ ಅವನು ಕತ್ತಲೆಯನ್ನು ಸೇರುತ್ತಾನೆ, ಎನ್ನುವುದು ಸಾಂಪ್ರದಾಯಿಕ ಅರ್ಥ. ಅವಿದ್ಯೆ ಎಂದರೆ ಲೌಕಿಕ ವಿದ್ಯೆ ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಎಂಬ ಅರ್ಥವೂ ಇದೆ. ಮುಂದೆ ಅವಿದ್ಯೆಯಿಂದ ಮೃತ್ಯು ವನ್ನು ದಾಟಿ ಎಂದಿದೆ; ಮೃತ್ಯು ಎಂದರೆ ಹಸಿವು ಎಂಬ ಅರ್ಥವೂ ಇದೆ. ಆದ್ದರಿಂದ ಕೇವಲ ಅವಿದ್ಯೆಯನ್ನು ಉಪಾಸನೆ ಮಾಡುವವನು ಅಜ್ಞಾನಿಯಾಗಿಯೇ ಉಳಿಯುವನು. ಜೀವನದ ಅವಶ್ಯಕತೆಗೆ ಮತ್ತು ಕೇವಲ ಹಣ ಗಳಿಕೆಗೆ ಲೌಕಿಕ ವಿದ್ಯೆ ಯೊಂದನ್ನೇ ಅವಲಂಬಿಸಿದರೆ ಆದು ಕತ್ತಲೆ ಎಂದರೆ ಅದು ಅಜ್ಞಾನ.

ವಿದ್ಯೆ ಎಂದರೆ ಉಪಾಸನೆ , ಆತ್ಮ ಜ್ಞಾನದ ಮಾರ್ಗ ಎಂಬ ಅರ್ಥಗಳಿವೆ. ಲೌಕಿಕ ಧರ್ಮವನ್ನು ಬಿಟ್ಟು ಕೇವಲ ಆತ್ಮ ಜ್ಞಾನದ ಮಾರ್ಗ ಒಂದನ್ನೇ ಅನುಸರಿಸುವವನು ಇನ್ನೂ ಹೆಚ್ಚಿನ ಕತ್ತಲೆಯನ್ನು ಸೇರುತ್ತಾನೆ ಎಂದಿದೆ. ಕೇವಲ ವಿದ್ಯೆಯೊಂದನ್ನೇ ನಂಬಿ ಜಗತ್ತನ್ನು ತಿರಸ್ಕರಿಸಿದರೆ ಅದೂ ಕತ್ತಲೆ. ಉಪವಾಸವಿರಬೇಕು ಇಲ್ಲವೇ ಪರಾವಲಂಬಿಯಾಗಿ ಬಾಳಬೇಕು, ಇದು ಹೆಚ್ಚಿನ ತಪ್ಪು ಮತ್ತು ಅಜ್ಞಾನ ಎನ್ನುವುದು ಉಪನಿಷತ್ಕಾರನ ಭಾವವಿರಬೇಕು ( ೯)

ಆದರೆ ಕೆಲವರು ವಿದ್ಯೆಯೇ ಎಂದರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡುವುದೇ ಶ್ರೇಷ್ಠ ಎನ್ನುತ್ತಾರೆ. ಮತ್ತೆ ಕೆಲವರು ಲೌಕಿಕ ಧರ್ಮವನ್ನು ಬಿಡದೆ ಪಾಲಿಸುವುದೇ ಉತ್ತಮ ಎನ್ನತ್ತಾರೆ. ( ಸಂನ್ಯಾಸವೋ, ಸಂಸಾರವೋ, ಯಾವುದು ಉತ್ತಮ ಇದರ ನಿರ್ಣಯಕ್ಕಾಗಿಯೇ ಧರ್ಮವ್ಯಾಧನ ಕಥೆ ಇದೆ) (೧೦) ಆದ್ದರಿಂದ ಸಮನ್ವಯವೇ ಜೀವನದ ಸೂತ್ರ. ಕಾಯಕದಿಂದ ಹೊಟ್ಟೆ ತುಂಬಿಸಿಕೊಳ್ಳಬೇಕು, ಜ್ಞಾನ ಸಾಧನೆಯಿಂದ ಅಮೃತತ್ವ ವನ್ನು ಪಡೆಯಬೇಕು. ಜ್ಞಾನಿಯಾದರೂ ಕಾಯಕವನ್ನು ತಿರಸ್ಕರಿಸಬಾರದು. ಎಂಬುದು ಸರಳ ಅರ್ಥ. ಸಂಸಾರಿಕರೂ ಸಾಧನೆಯಿಂದ ಜ್ಞಾನಿಗಳಾಗಿ ಬಾಳಿರುವ ಉದಾಹರಣೆ ಉಪನಿಷತ್ತುಗಳಲ್ಲಿಯೂ ಪುರಾಣಗಳಲ್ಲಿಯೂ ಇದೆ.

ಸಾಂಪ್ರದಾಯಕ ಅರ್ಥ:- ಶುದ್ಧ ಜ್ಞಾನ ಮಾರ್ಗವನ್ನು ಅನುಸರಿಸದೆ, ಆತ್ಮ ವಿಚಾರ ಮಾಡದೆ, ಕೇವಲ ಉಪಾಸನೆ ಮಾಡುವವನು ಹೆಚ್ಚಿನ, ಕತ್ತಲೆ ಅಥವಾ ಅಜ್ಞಾನವನ್ನು ಹೊಂದುತ್ತಾನೆ. ವಿದ್ಯೆ ಎಂದರೆ ಉಪಾಸನೆ ಎಂದೂ ಅರ್ಥವಿದೆ ಶ್ರೀಶಂಕರರು ಈ ಅರ್ಥವನ್ನೇ ಹಿಡಿದಿದ್ದಾರೆ: ಅವಿದ್ಯೆಯಾದ ಯಜ್ಞ ಯಾಗಗಳಿಂದ ಅಥವಾ ವಿದ್ಯೆ ಯಾದ ಉಪಾಸನಾ ಅಥವಾ ಯೋಗಸಾದನೆ ಯಿಂದ ಪೂರ್ಣ ಜ್ಞಾನ ದೊರಕಲಾರದು; ಕರ್ಮಫಲದಿಂದ ಜ್ಞಾನವುಂಟಾದರೆ ಕರ್ಮಫಲವಾದ್ದರಿಮದ ಜ್ಞಾನವು ನಶ್ವರವೆಂದು ಹೇಳಿದಂತಾಗುತ್ತದೆ, ಜ್ಞಾನವು ನಶ್ವರವಲ್ಲ; ಆದ್ದರಿಂದ ವಿಚಾರದಿಂದಲೇ ಜ್ಞಾನವುಂಟಾಗುವುದು. ಕರ್ಮವೆಲ್ಲಾ ಚಿತ್ತ ಶುದ್ಧಿಗಾಗಿ ಇರುವುದು. (ಕರ್ಮ) ಸಂನ್ಯಾಸ ಮತ್ತು ವಿಚಾರದಿಂದ ಮೋಕ್ಷ ಅಥವಾ ಜ್ಞಾನ ಎಂಬುದು ಶ್ರೀ ಶಂಕರರ ಅರ್ಥ. ಮುಂದಿನ ಶ್ಲೋಕಗಳಿಗೂ ಅವರು ಇದೇ ಬಗೆಯ ಅರ್ಥ ಮಾಡಿದ್ದಾರೆ. (೧೧) ಆದರೆ ಕರ್ಮಯೋಗ ನಿರತರಾಗಿದ್ದು ಸಂಸಾರಿಗಳೂ ಆಗಿದ್ದು, ಜ್ಞಾನಿಗಳಾಗಿರುವವರ ಉದಾಹರಣೆಗಳು ಬಹಳ ಇರುವುದನ್ನು ನಾವು ಕಾಣುತ್ತೇವೆ.

ಮಂತ್ರ ೧೨, ೧೩, ೧೪

[ಬದಲಾಯಿಸಿ]
ಮಂತ್ರ ೧೨,
  • ಅಂಧಂತಮಃ ಪ್ರವಿಶಂತಿ
  • ಯೇS ಸಂಭೂತಿಮುಪಾಸತೇ, |
  • ತತೋ ಭೂಯ ಇವ ತೇ ತಮೋ
  • ಯ ಉ ಸಂಭೂತ್ಯಾಂ (ಗ್ಂ) ರತಾಃ ||೧೨||
ಅಂಧಂತಮಃ = ಕತ್ತಲೆಯನ್ನು, ಪ್ರವಿಶಂತಿ = ಪ್ರವೇಸಿಸುತ್ತಾರೆ; ಯೇ = ಯಾರು, ಅಸಂಭೂತಿಂ = ವ್ಯಕ್ತವನ್ನು (ಜಗತ್ತು - ಅಸಂಭವ, ಮಾಯೆ), ಉಪಾಸತೇ = ಉಪಾಸಿಸುತ್ತಾರೋ; ತತಃ = ಅಲ್ಲಿಂದ, ಅದಕ್ಕಿಂತ, ಭೂಯಃ = ಹೆಚ್ಚಿನ, ಇವ = ಆಗಿರುವ, ತೇ = ಅವರು, ತಮಃ = ಕತ್ತಲೆಯನ್ನು, ಯೇ = ಯಾರು, ಉ = ನಿಜವಾಗಿಯೂ, ಸಂಭೂತ್ಯಾಂ = ಅವ್ಯಕ್ತವಾಗಿರುವ (ಸಂಭವ, ಅವ್ಯಕ್ತ, ಸಗುಣ ಬ್ರಹ್ಮ), ರತಾಃ = ಆಸಕ್ತರಾಗಿರುವವರು.(ವಿನೋಬಾ)
ಅವ್ಯಕ್ತವನ್ನು ಉಪಾಶಿಸುವವರು ಕತ್ತಲೆಯ ಪ್ರಪಂಚವನ್ನು ಪ್ರವೇಶಿಸುತ್ತಾರೆ. ವ್ಯಕ್ತವನ್ನು ಉಪಾಶಿಸುವವರು ಇನ್ನೂ ಹೆಚ್ಚಿನ ಕತ್ತಲೆಯ ಪ್ರಮಂಚವನ್ನು ಪ್ವೇಶಿಸುತ್ತಾರೆ.
  • * ಪದ್ಯ ೧೨:
  • ಕತ್ತಲೆಯ ಸೇರುವನು,
  • ಸಂಭೂತಿಯುಪಾಸಕನು |
  • ಕಗ್ಗತ್ತಲೆಯ ಹೊಗುವನವ,
  • ಅಸಂಭೂತಿ ರತನು ||
  • (ಕತ್ತಲೆಯ ಸೇರುವನು ಅಸಂಭೂತಿಯ ಉಪಾಸಕನು; ಕಗ್ಗತ್ತಲೆಯ ಹೊಗುವನು ಅವ-ಅವನು ,-ಸಂಭೂತಿ ರತನು)
ಮಂತ್ರ ೧೩
  • ಅನ್ಯದೇವಾಹುಃ ಸಂಭವಾತ್,
  • ಅನ್ಯದಾಹುರಸಂಭವಾತ್ |
  • ಇತಿ ಶುಶ್ರುಮ ಧೀರಾಣಾಂ,
  • ಯೇನಸ್ತದ್ವಿಚಚಕ್ಷಿರೇ ||೧೩||
ಪದವಿಭಾಗ - ಅರ್ಥ ≈ ಅನ್ಯತ್ = ಬೇರೆಯ, ಏವ = ನಿಜವಾಗಿಯೂ, ಆಹುಃ = ಹೇಳುತ್ತಾರೆ; ಸಂಭವಾತ್ = ಅವ್ಯಕ್ತಕ್ಕಿಂತ (ಸಂಭವ), ಅನ್ಯತ್ = ಬೇರೆಯ, ಆಹುಃ = ಹೇಳುತ್ತಾರೆ; ಅಸಂಭವಾತ್ = ವ್ಯಕ್ತಕ್ಕಿಂತ (ಅಸಂಭವ - ಅವಿದ್ಯೆಯ ತೋರಿಕೆಯದು ಜಗತ್ತು), ಇತಿ = ಹೀಗೆ, ಶುಶ್ರುಮ = ಕೇಳಿದ್ದೇವೆ, ಧೀರಾಣಾಂ = ತ್ತತ್ವ ವೇತ್ತರಿಂದ, ಯಃ = ಯಾರು, ನಃ = ನಮಗೆ, ತತ್ = ಅದನ್ನು, ವಿಚಚಕ್ಷಿರೇ = ತಿಳಿಹೇಳಿದ್ದಾರೋ.
ತಾತ್ಪರ್ಯ ≈ ಅದು (ಆತ್ಮ ತತ್ವವು) ವ್ಯಕ್ತಕ್ಕಿಂತಲೂ ಬೇರೆಯಾದುದು;ಅವ್ಯಕ್ತಕ್ಕಿಂತಲೂ ಬೇರೆಯಾದುದು. ಈ ರೀತಿ ನಮಗೆ ತಿಳಿಸಿ ಹೇಳಿದ ಗುರುಗಳಿಂದ ನಾವು ಕೇಳಿದ್ದೇವೆ.
  • ಪದ್ಯ ೧೩ :
  • ಸಂಭೂತಿಯೇ ಹಿರಿದೆಂಬರು ,
  • ಕೆಲವರರಿತವರು
  • ಅಸಂಭೂತಿ ಗರಿಮೆಯದೆಂದು
  • ಮತ್ತೆ ಕೆಲಬರ ಮತವು ||೧೩||
  • (ಸಂಭೂತಿಯೇ ಹಿರಿದು ಎಂಬರು ಕೆಲವರು ಅರಿತವರು : ಅಸಂಭೂತಿ ಗರಿಮೆಯದು- ಹೆಚ್ಚಿನದು ಎಂದು ಮತ್ತೆ ಕೆಲಬರ-ಕೆಲವರ ಮತವು-ಅಭಿಪ್ರಾಯವು)
ಮಂತ್ರ ೧೪
  • ಸಂಭೂತಿಂ ಚ ವಿನಾಶಂ ಚ,
  • ಯಸ್ತದ್ವೇದೋಭಯಂ ಸಹ |
  • ವಿನಾಶೇನ ಮೃತ್ಯುಂ ತೀರ್ತ್ವಾ
  • ಸಂಭೂತ್ಯಾಮೃತಮಶ್ನುತೇ ||೧೪||
ಪದವಿಭಾಗ ಮತ್ತು ಅರ್ಥ - ಸಂಭೂತಿಂ = ಅವ್ಯಕ್ತ, ಚ = ಮತ್ತು, ವಿನಾಶಂ = ಜಗತ್ತ್ತು (ವ್ಯಕ್ತ ವಿದ್ಯೆ, ಕರ್ಮ), ಚ = ಮತ್ತು, ಯಃ = ಯಾರು, ತತ್ = ಅದನ್ನು ವೇದ = ತಿಳಿಯುತ್ತಾನೋ, ಉಭಯಂ = ಎರಡನ್ನೂ, ಸಹ = ಜೊತೆಗೆ, ವಿನಾಶೇನ = ಸಗುಣಾರಾಧನೆ, ಜಗತ್ತಿನ, (ಕರ್ಮದ ಮೂಲಕ), ಮೃತ್ಯುಂ = ಮೃತ್ಯುವನ್ನು, ತೀರ್ತ್ವಾ = ದಾಟಿ, ಸಂಭೂತ್ಯಾ = ನಿರ್ಗುಣಾರಾಧನೆಯ ಮೂಲಕ (ಸಗುಣ ಬ್ರಹ್ಮದ ಸತ್ಯತೆಯನ್ನು ಅರಿಯುವುದರ ಮೂಲಕ, ಈ ಎರಡರ ಅಸತ್ಯತೆಯನ್ನು ಅರಿಯುವುದರ ಮೂಲಕ), ಅಮೃತಂ = ಅಮೃತತ್ವವನ್ನು ಅಶ್ನುತೇ = ಪಡೆಯುತ್ತಾರೆ.
  • ಪದ್ಯ ೧೪ :
  • ಸಂಭೂತಿಯ ಮತ್ತೆ ವಿನಾಶದ,
  • ಆಂತರ್ಯವನರಿತು |
  • ವಿನಾಶದಿಂ ಮೃತ್ಯುವನು ದಾಟಿ,
  • ಸಂಭೂತಿಯಿಂ ಅಮೃತತ್ವವನು ಪಡೆಯುವುದು ||
  • (ಸಂಭೂತಿಯ ಮತ್ತೆ -ಆನಂತರ ವಿನಾಶದ ಆಂತರ್ಯವನು ಅರಿತು, ವಿನಾಶದಿಂ-ವಿನಾಶದಿಂದ ಮೃತ್ಯುವನು ದಾಟಿ ಸಂಭೂತಿಯಿಂ-ಸಂಭೂತಿಯಿಂದ

ಅಮೃತತ್ವವನು ಪಟೆಯುವುದು)

  • ಸಂಭೂತಿ, ಅಸಂಭೂತಿ ಪದಗಳಿಗೆ ಅನೇಕ ಬಗೆಯ ಅರ್ಥ ಮಾಡಿದ್ದಾರೆ. ಅಸಂಭೂತಿ ಎಂದರೆ ಜಗತ್ತು ಅಥವಾ ಜಗದ್ರೂಪದಲ್ಲಿರುವ ಹಿರಣ್ಯ ಗರ್ಭ. ಬ್ರಹ್ಮ . ಸಂಭೂತಿ ಎಂದರೆ ಪ್ರಕೃತಿ, ಮಾಯಾಶಕ್ತಿ, ಅಥವಾ ಪ್ರಾಪಂಚಿಕ ಜಗತ್ತು . ಸಗುಣ ಬ್ರಹ್ಮನನ್ನು ಉಪಾಸಿಸುವವರೂ, ಮಾಯಾಶಕ್ತಿಯನ್ನು ಉಪಾಸಿಸಿ ಸುವವರೂ ಉತ್ತಮ ಲೋಕಗಳನ್ನೂ, ಅಣಿಮಾದಿ ಅಷ್ಟ ಸಿದ್ಧಿಗಳನ್ನೂ ಪಡೆಯಬಹುದು, ಆದರೆ ಆತ್ಮ ಜ್ಞಾನವನ್ನು ಪಡೆಯಲಾರರು; ಇದು ಪಾರಂಪರಿಕ ಅರ್ಥ.

ಸರಳವಾದ ಅರ್ಥ : ಅಸಂಭೂತಿಯನ್ನು ಎಂದರೆ, ಬದಲಾವಣೆ ಹೊಂದುವ ಈ ಜಗತ್ತನ್ನು ಅಥವಾ ಲೌಕಿಕ ಸುಖ ಭೋಗಗಳು. ಅದರಲ್ಲಿ ಮಳುಗಿರುವರೋ, ಯಾರು ಪರಮಾತ್ಮನನ್ನು ಮರೆತು ನಶ್ವರವಾದ ಲೌಕಿಕ ಸುಖ ಭೋಗಗಳಲ್ಲಿ ಮುಳಗಿರುವರೋ ಅವರು ಕತ್ತಲೆಯನ್ನು ಸೇರುವರು ಎಂದರೆ ಅಜ್ಞಾನದಲ್ಲಿ ಇರುವರು. ಯಾರು ಜಗತ್ತನ್ನು ತಿರಸ್ಕರಿಸಿ ಪ್ರಾಪಂಚಿಕ ಕರ್ತವ್ಯಗಳನ್ನು ಮರೆತು ದೇಹ ದಂಡನೆ ಮಾಡುತ್ತಾ ಅವ್ಯಕ್ತವಾದ ಬ್ರಹ್ಮವೊಂದನ್ನೇ ಉಪಾಸನೆ ಮಾಡುವರೋ ಅವರು ಹೆಚ್ಚಿನ ಕತ್ತಲೆಯನ್ನು ಸೇರುತ್ತಾರೆ, (೧೨)

  • ಕೆಲವು ಪ್ರಾಜ್ಞರು ಪ್ರಾಪಂಚಿಕ ಸುಖವೂ, ಕಾಯಕವೂ, ಇಹ ಲೋಕದ ಧರ್ಮವೂ ಹೆಚ್ಚಿನದೆಂದು ಹೇಳುತ್ತಾರೆ. ವಿದ್ಯೆಯನ್ನು ಪಡೆದು ಧರ್ಮದಿಂದ ಹಣಗಳಿಸಿ ಪ್ರಾಪಂಚಿಕ ಸುಖವನ್ನು ಅನುಭವಿಸತ್ತಾ ಪರೋಪಕಾರಿಯಗಿ ಬಾಳುವುದು ಒಂದು ಬಗೆಯ ಆದರ್ಶ ಜೀವನ ( ಮೂರು ಪರುಷಾರ್ಥಗಳು-ಧರ್ಮ, ಅರ್ಥ, ಕಾಮ.). ಮತ್ತೆ ಕೆಲವರು ಜಗತ್ತು ನಶ್ವರವೆಂದೂ, ಬ್ರಹ್ಮ ಜ್ಞಾನವೇ ಶ್ರೇಷ್ಠವೆಂದು ಹೇಳುತ್ತಾರೆ. (ನಾಲ್ಕನಯ ಪುರುಷಾರ್ಥ -ಮೋಕ್ಷವೊಂದೇ ಶ್ರೇಷ್ಠ) (೧೩)
  • (ಸರಳ ಅರ್ಥ) ಜಗತ್ತು (ಮಾಯೆ) ಮತ್ತು ಬ್ರಹ್ಮ (ಅವ್ಯಕ್ತ) (ಸಂಭೂತಿ ಮತ್ತು ಅಸಂಭೂತಿ) ಈ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಯಾರು ಜಗತ್ತಿನಲ್ಲಿ ಇತರರ ಹಿತವನ್ನೂ , ಪ್ರಾಣ ಧಾರಣೆಗೆ ಬೇಕಾದ ಕಾಯಕವನ್ನೂ, ಮಾಡುತ್ತಾ (ಮೃತ್ಯುವನ್ನು ದಾಟಿ- ಮೃತ್ಯುವನ್ನು ಎಂದರೆ ಹಸಿವೆಯನ್ನು ತಣಿಸುವ ಮತ್ತು ಇತರೆ ಅಗತ್ಯಗಳನ್ನು ದುಡಿಮೆಯಿಂದ ಪೂರೈಸಿಕೊಡು,) ಸರ್ವಾಂತರ್ಯಾಮಿಯಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳವನೋ ಅವನು ಹಸಿವು, ರೋಗ, ಮೊದಲಾದ ದುಃಖರೂಪವಾದ ಮೃತ್ಯು ವನ್ನು ದಾಟಿ ಅಮೃತತ್ವವನ್ನು ಪಡೆಯುತ್ತಾನೆ. (೧೪). ಈ ಮೇಲಿನ ಆರು ಪದ್ಯಗಳು ಹುಟ್ಟಿನಿಂದಲೇ ಜ್ಞಾನಿಗಳಾದವರಿಗೂ, ಜನ್ಮಾಂತರದಲ್ಲಿ ಸಾಧನೆ ಮಾಡಿ ಕೇವಲ ಮೋಕ್ಷ ಸಾಧನೆಗಾಗಿಯೇ ಜನಿಸಿದವರಿಗೂ ಅನ್ವಯಿಸದು.
  • ಈ ಆರು ಮಂತ್ರದ ಸರಳಾರ್ಥವು ಮೊದಲನೆಯ ಮೂರು ಮಂತ್ರದ ಜೀವನ ಸೂತ್ರದ ನಿಯಮಕ್ಕೆ ಅನುಗುಣವಾಗಿದೆ. ಪ್ರಾಚೀನ ಋಷಿಗಳು ಗೃಹಸ್ಥರಾಗಿದ್ದು ಪಶುಪಾಲನೆ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಾ ಬ್ರಹ್ಮ ಜ್ಞಾನಿಗಳಾಗಿ ಲೋಕ ಕಲ್ಯಾಣ ಕೆಲಸದಲ್ಲಿಯೂ ತೊಡಗಿರುತ್ತಿದ್ದರು. ಅದು ಅವರ ಜೀವನ ಮತ್ತು ಜೀವನ ಸೂತ್ರವೂ ಆಗಿತ್ತು. ಪ್ರಾಚೀನ ಋಷಿಗಳ ಜೀವನ ಈ ಮಂತ್ರಗಳ ಸಂಪ್ರದಾಯಿಕ ಅರ್ಥಕ್ಕಿಂತ ಸರಳ ಅರ್ಥಕ್ಕೇ ಹೊಂದಿಕೊಳ್ಳತ್ತದೆ.
  • ಮಂದಿನದು ಸಾಧಕನ ಕೊನೆಯ ಹಂತದ ಪ್ರಾರ್ಥನೆ ;

ಮಂತ್ರ ೧೫

[ಬದಲಾಯಿಸಿ]
  • ಹಿರಣ್ಮಯೇನ ಪಾತ್ರೇಣ
  • ಸತ್ಯಸ್ಯಾಪಿ ಹಿತಂ ಮುಖಂ |
  • ತತ್ವಂ ಪೂಷನ್ನಪಾವೃಣು
  • ಸತ್ಯ ಧರ್ಮಾಯ ದೃಷ್ಟಯೇ ||೧೫|
ಪದವಿಭಾಗ ಮತ್ತು ಅರ್ಥ;- ಹಿರಣ್ಮಯೇನ = ಸುವರ್ಣಮಯ, ಪಾತ್ರೇಣ = ಪಾತ್ರೆಯಿಂದ, ಸತ್ಯಸ್ಯ = ಸತ್ಯದ, ಅಪಿಹಿತಂ =ಮುಚ್ಚಲ್ಪಟ್ಟಿದೆ, ಮುಖಂ = ಮುಖವು, | ತತ್ =ಅದನ್ನು, ತ್ವಂ = ನೀನು, ಪೂಷನ್ = ಹೇ ಸೂರ್ಯನೇ ಅಪಾವೃಣು = ಸರಿಸು,(ತೆರೆದು ತೋರಿಸು) ಸತ್ಯ ಧರ್ಮಾಯ = ಸತ್ಯಧರ್ಮದ ಉಪಾಸಕನಾದ ನನಗೆ, ದೃಷ್ಟಯೇ =ದರ್ಶನಕ್ಕಾಗಿ.
ತಾತ್ಪರ್ಯ = ಸತ್ಯದ (ಪರಮಾತ್ಮನ) ಮುಖವು ಚಿನ್ನ ಮಯ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಹೇ ವಿಶ್ವ ಪೋಷಕನಾದ ಪ್ರಭುವೇ ಸತ್ಯ ಧರ್ಮದ ಉಪಾಸಕನಾದ ನನಗೆ ಸತ್ಯ ದರ್ಶನಕ್ಕಾಗಿ ಅದನ್ನು ತೆಗಿ, ಸರಿಸು.
  • ಪದ್ಯ ೧೫ :
  • ಸತ್ಯವನು ಮುಚ್ಚಿಹುದು
  • ಮೆರುಗು ಚಿನ್ನದ ಪಾತ್ರೆ |
  • ಅದ ಸರಿಸಿ ದರುಶನವ ಕೊಡು ವಿಶ್ವ ಪೋಷಕನೆ,
  • ಸತ್ಯ ಧರ್ಮದ ದಾರಿಗನು ನಾನು ||
  • ಮಾಯೆ ಮತ್ತು ಮೋಹದ (ಬಂಗಾರದ) ಪರದೆಯು ಸತ್ಯವನ್ನು ಮುಚ್ಚಿದೆ. ನಾನು ಸತ್ಯ ಧರ್ಮದ ದಾರಿಯಲ್ಲಿ ನಡೆಯುವವನು, ಹೇ, ವಿಶ್ವ ಪೋಷಕನಾದ ಪ್ರಭೋ, ಆ ಚಿನ್ನದ ಮುಸುಕನ್ನು ಸರಿಸಿ ನನಗೆ ನಿನ್ನ (ಸತ್ಯದ) ದರ್ಶನವನ್ನು ಕೊಡು. ಇದು ಸಾಧಕನ ಪ್ರಾರ್ಥನೆ. ಏಕೆಂದರೆ ಎಷ್ಟೇ ಸಾಧನೆ ಮಾಡಿದರೂ, ದೇವನ ಕರುಣೆ ಇಲ್ಲದೆ ಸತ್ಯ ದರ್ಶನವಿಲ್ಲ.

ಮಂತ್ರ ೧೬

[ಬದಲಾಯಿಸಿ]
  • ಪೂಷನ್ ಏಕ-ಋಷೇ ಯಮ ಸೂರ್ಯ
  • (ಪೂಷನ್ನೇಕರ್ಷೇ ಯಮಸೂರ್ಯ)
  • ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ |
  • ತೇಜೋ ಯತ್ತೇ ರೂಪಂ ಕಲ್ಯಾಣತಮಂ,
  • ತತ್ತೇ ಪಶ್ಯಾಮಿ,
  • ಯೋSಸಾವಾಸೌ ಪುರುಷಃ ಸೋSಹಮಸ್ಮಿ ||
ಪದವಿಭಾಗ ಅರ್ಥ;- ಪೂಷನ್ =ಹೇ ಪೋಷಕನೇ, ಏಕ-ಋಷೇ = ಒಬ್ಬನಾಗಿ ಚಲಿಸುವವನೇ, ನೋಡುವವನೇ (ನಿರೀಕ್ಷಣೆ ಮಾಡುವವನೇ), ಯಮ = ನಿಯಾಮಕನೇ, ಸೂರ್ಯ =ಸೂರ್ಯನೇ, ಪ್ರಾಜಾಪತ್ಯ = ಪ್ರಜೆಗಳನ್ನು ಪಾಲಿಸುವವನೇ, ವ್ಯೂಹ = ತೆರೆದು ಸರಿಸು, ರಶ್ಮೀನ್ ಸಮೂಹ = ರಶ್ಮಿಗಳ ಸಮೂಹವನ್ನು,| ತೇಜಃ = ತೇಜೋಮಯವಾದ, ಯತ್ = ಯಾವ, ರೂಪಂ ಕಲ್ಯಾಣತಮಂ = ಕಲ್ಯಾಣ ತಮವಾದ ರೂಪವನ್ನು, ತತ್ =ಅದು, ತೇ = ನಿನ್ನ, ; ಪಶ್ಯಾಮಿ = ನೋಡುತ್ತಿದ್ದೇನೆ, ಯಃ ಯಾರು, ಅಸೌ = ಈ, ಅಸೌ = ಅದೇ, ಪುರುಷಃ = ಪುರುಷನು, ಸಃ = ಅವನು, ಅಹಂ = ನಾನು, ಅಸ್ಮಿ = ಆಗಿದ್ದೇನೆ.
ತಾತ್ಪರ್ಯ =ಹೇ ಪೋಷಕನೇ, ನೀನೇ ವಿಶ್ವದ ಪೋಷಣ ಕರ್ತ, ನೀನೊಬ್ಬನೇ ನೋಡುತ್ತಿರುವವನು,ಉತ್ತಮ ಪ್ರವರ್ತಕನೂ ನೀನೆ. ನೀನೇ ಸರ್ವರನ್ನೂ ಪ್ರಜೆಗಳಂತೆ ಪಾಲನೆ ಮಾಡತಕ್ಕವನು. ನಿನ್ನ ಈ ಪೂಷಣಾದಿ ರಶ್ಮಿಯನ್ನು ತೆರೆದು, ಒಟ್ಟುಗೂಡಿಸಿ, ತೋರಿಸು. ಓ ನಿನ್ನ ತೇಜಸ್ವಿಯಾದ ಪರಮ ಕಲ್ಯಾಣಮಯ ರೂಪವನ್ನು ನಾನು ಈಗ ನೋಡುತ್ತಿದ್ದೇನೆ. ಆ ಪರಾತ್ಪರನಾದ ಪುರುಷ ಯಾವನಿರುವನೋ ಅವನು ನಾನೇ.
  • ಪದ್ಯ ೧೬ :
  • ಪೋಷಕನೆ, ನಿರೀಕ್ಷಕನೆ, ಸೂರಿಯನೆ, ನಿಯಾಮಕನೆ,
  • ಪ್ರಜಾಪಾಲಕನೆ, ನಿನ್ನ ಸುಡು ಬೆಳಕನೋಸರಿಸೋ,|
  • ನಿನ್ನ ಆನಂದಮಯ ತೇಜವನು ನೋಡುವೆನು,
  • ಓ ಕಂಡೆ ನಾ ನಿನ್ನ! ನೀನೆ ನಾನೆಂದರಿತೆನೆಲಾ ! ||
  • (ಬೆಳಕನು ಓಸರಿಸೋ: ನೀನೆ ನಾನೆಂದು ಅರಿತೆನೆಲಾ! )
  • ಇದು ಸೂರ್ಯನ, ಹಿರಣ್ಯಗರ್ಭನ ಪ್ರಾರ್ಥನೆ, ಅಥವಾ ಸಗುಣ ಬ್ರಹ್ಮನ ಪ್ರಾರ್ಥನೆ. 'ದರ್ಶನ' ಒಂದು ವಿಶಿಷ್ಠ ಆನಂದಮಯ ಬೆಳಕಿನ ರೂಪ. ಆದರೆ ಸಾಧಕನಿಗೆ ಕೊನೆಯಲ್ಲಿ, 'ಸೋSಹಮಸ್ಮಿ ' 'ಅವನೇ ನಾನು' ಎಂಬ ಪರಬ್ರಹ್ಮದ ಅನುಭೂತಿ (ವಿಶೇಷ ಅನುಭವ)-ಯಾಗಿದೆ ಎಂದು ತಿಳಿಯಬಹುದು. ಪರಬ್ರಹ್ಮದಲ್ಲಿ ಮನಸ್ಸು ಚಿತ್ತಗಳು ಲೀನ ವಾದಮೇಲೆ ನಾನು ನೀನು ಎಂಬ ಭಾವನೆಯೇ ಉಳಿಯುವುದಿಲ್ಲ. ಕೇವಲ ಔಪಚಾರಿಕವಾಗಿ ಕಂಡೆ, ನಾನು-ನೀನು ಎಂಬ ಪದಗಳನ್ನು ಉಪಯೋಗಿಸಿದೆ. ಒಂದೇ ಆದ ಮೇಲೆ ಕಾಣುವುದು ಇಲ್ಲ- ಅನುಭವ ಅಷ್ಟೇ. (೧೬)

ಮಂತ್ರ ೧೭

[ಬದಲಾಯಿಸಿ]
  • ವಾಯುರನಿಲಮಮೃತಂ,
  • ಅಥೇದಂ ಭಸ್ಮಾಂತಂ ಶರೀರಂ |
  • ಓಂ ಕ್ರತೋ ಸ್ಮರ ಕೃತಂ ಸ್ಮರ
  • ಕ್ರತೋ ಸ್ಮರ ಕೃತಂ ಸ್ಮರ ||೧೭||
ಪದವಿಭಾಗ ಮತ್ತು ಅರ್ಥ;-ವಾಯುಃ ಅನಿಲಂ = -ಗಾಳಿ, ಪ್ರಾಣ ತತ್ವವು, ಅಮೃತಂ = ಸಾವಿಲ್ಲದ, ಅಥ‍ಃ = ಅನಂತರ, ಇದಂ = ಈ, ಭಸ್ಮಾಮತಂ = ಭಸ್ಮವಾಗಲಿ, ಶರೀರಂ = ಈ ಶರೀರವು, ಓಂ = ಓಂ, ಕ್ರತೋ = (ಮನಸ್ಸೇ) ಸ್ಮರ = ಸ್ಮರಿಸು, ಕೃತಂ = ಮಾಡಿರುವುದನ್ನು, ಇದರ ಸೃಷ್ಠಿಯನ್ನು, ಸ್ಮರ = ಸ್ಮರಿಸು, ಕ್ರತೋ = ಹೇ ಜೀವವೇ ಸ್ಮರ = ಸ್ಮರಿಸು, ಮನಸ್ಸಿನಲ್ಲಿ ನೆನೆ,
ತಾತ್ಪರ್ಯ = ಈ ಪ್ರಾಣವು ಚೈತನ್ಯಮಯ ಅಮೃತ ತತ್ವದಲ್ಲಿ ಲೀನವಾಗಲಿ, ಎಲೈ ಜೀವನೇ ಆತನ ಕೃತಿಯನ್ನು ತಿಳಿ, ಶರೀರ ಬೂದಿಯಾಗಲಿ, ಈಶ್ವರನು ಮಾಡಿರುವುದನ್ನು ನೆನೆ; ಆತನ ಕೃತಿಯನ್ನು ತಿಳಿ. (ಹೀಗೆ ನಾನೆಂಬ ಭಾವವು ಅಳಿಯಲಿ, ಎಲ್ಲವೂ ಅವನ ಕೃತಿಯೆಂದು ತಿಳಿದು ಮನಸ್ಸು ಅದರಲ್ಲಿ ಲೀನವಾಗಲಿ.)
  • ಪದ್ಯ ೧೭ :
  • ಪ್ರಾಣ ಸೇರಲಿ ಅಮೃತಾತ್ಮನನು,
  • ಭಸ್ಮವಾಗಲಿ ದೇಹವದು |
  • ಸ್ಮರಿಸು ಕರ್ತನನು, ಮತ್ತವನ ಕಾರ್ಯವನು
  • ಓಂಕಾರನನು ನೆನೆ - ಕರ್ತನನು- ಕಾರ್ಯವನು ||
  • (ಅಮೃತ ಆತ್ಮನನು ; ಮತ್ತೆ ಅವನ ಕಾರ್ಯವನು )
  • ಇದು ಸಾಧಕನ ಅಂತ್ಯಕಾಲದ, ದೇಹಬಿಡುವಾಗಿನ ಪ್ರಾರ್ಥನೆಯೆಂದು ಹೇಳಲ್ಪಡುತ್ತದೆ. ದೇಹವನ್ನು ಬಿಡುವಾಗ ಮೂಲ ಚೈತನ್ಯ ಸ್ವರೂಪವಾದ ಓಂ ಕಾರವನ್ನೂ ಆ ಮೂಲಕ ಕರ್ತನನ್ನೂ ನೆನೆಯಬೇಕೆಂಬುದು ತಾತ್ಪರ್ಯ. ಸಾಧಕನ ಪ್ರಾರ್ಥನೆ ಪ್ರಾಣವು ಮೂಲ ಚೈತನ್ಯ ವಾದ ಪರಮಾತ್ಮನನ್ನು ಸೇರಲಿ, ದೇಹವು ಭಸ್ಮವಾಗಲಿ, ಓ ಪರಮಾತ್ಮನೇ, ನಿನ್ನ ಮಹಿಮೆಯನ್ನು ಸ್ಮರಿಸುತ್ತೇನೆ ಪ್ರಾಣವೇ ಮುಂತಾದ ಎಲ್ಲಾ ತತ್ವಗಳೂ ಮೂಲ ತತ್ವಗಳಲ್ಲಿ ಸೇರಲಿ, - ಸೂಕ್ಷ್ಮ , ಕಾರಣ, ಸ್ಥೂಲ ಶರೀರಗಳು ಆಯಾ ತತ್ವಗಳಿಲ್ಲಿ ಸೇರಿ ಹೋಗಲಿ, ಆತ್ಮವು ಪರಮಾತ್ಮನಲ್ಲಿ ಸೇರಲಿ, ಪುನರ್ಜನ್ಮ ವಿಲ್ಲದ ಮೋಕ್ಷ ಪ್ರಾಪ್ತಿ ಯಾಗಲಿ ಎಂಬುದು ಸಾಧಕನ ಆಶಯ. ಇದು ಸಾಂಪ್ರದಾಯಿಕ ಅರ್ಥ.
  • ಆದರೆ ಇದಕ್ಕೆ ಬೇರೆ ರೀತಿಯಾದ ಅರ್ಥವನ್ನೇ ಮಾಡುವುದು ಸೂಕ್ತ. ಸಾಧಕನಿಗೆ 'ಸೋಹಮಸ್ಮಿ' 'ಅವನೇ ನಾನು' ಎಂಬ ಅಪರೋಕ್ಷಾನುಭೂತಿ ಯಾದಾಗಲೇ , ಪರಮಾತ್ನನಲ್ಲಿ ಚಿತ್ತ ಲೀನವಾದಾಗಲೇ, ದೇಹಭಾವ ನಶಿಸಿ ಹೋಗಿದೆ. ಸಾಧಕನು ಸಿದ್ಧನಾಗಿ ಜ್ಞಾನಾಗ್ನಿಯಿಂದ ಕರ್ಮ, ದೇಹ, ದೃಶ್ಯ ಜಗತ್ತು, ದಗ್ಧವಾಗಿ ಜೀವಿಸಿರುವಾಗಲೇ ಮೋಕ್ಷ ಪ್ರಾಪ್ತಿ ಯಾಗಿದೆ. ಅವನು ಸಮಾಧಿ ಸ್ಥಿತಿಯಿಂದ ಎಚ್ಚರಾಗಿ ಈ ಜಗತ್ತಿನಲ್ಲಿದ್ದರೂ ಅದಕ್ಕೆ ಅಂಟಿಯೂ ಅಂಟದಂತಿರುವನು. ಅಪರೋಕ್ಷಾನುಭೂತಿಯ ಸ್ಥಿತಿಯನ್ನು ತಲುಪುವ ಸಾಧಕನ ಚಿತ್ತವ್ಯಾಪರವನ್ನು ತಿಳಿಸಲು ಈ ಪ್ರಾರ್ಥನೆ ಔಪಚಾರಿಕವಾಗಿ ಬಂದಿದೆ ಎಂಬುದು ನನ್ನ ಅಭಿಪ್ರಾಯ.
  • ಕಾರಣ, ಸಾಧಕನು ಪೂರ್ಣ ಜ್ಞಾನ ಸ್ತಿತಿಗೆ ಹೋದಾಗ ಹಿಂದಿನ ನಾನು ಎಂಬ ಸಾಧಕ ಒಳಗೇ ಸತ್ತು, ಅವನಿಗೆ ಹೊಸ ಹುಟ್ಟು ಆಗಿರುತ್ತದೆ. ಈ ಪ್ರಾರ್ಥನೆ ಅಚಾನಕವಾಗಿ ತನ್ನೊಳಗೆ ತಾನಾಗಿ ಘಟಿಸಿ ಹೋಗಿರುತ್ತದೆ. ಆದ್ದರಿಂದಲೇ ಮುಂದಿನ ಮಂತ್ರ ಬಂದಿದೆ; ಸಾಧಕನು ಸಾಂಪ್ರದಾಯಿಕ ಅರ್ಥದಂತೆ ದೇಹ ತ್ಯಾಗ ಮಾಡಿದ್ದರೆ ಮುಂದಿನ ಮಂತ್ರದ ಅಗತ್ಯ ಇರುತ್ತಿರಲಿಲ್ಲ. ಹೀಗೆ ಮಾಯೆಯಿಂದ ಕಳಚಿಕೊಂಡ ಜ್ಞಾನಿಯಾದ ಸಾಧಕ ಉಳಿದವರಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದಲೂ, ಲೋಕಸಂಗ್ರಹಕ್ಕಾಗಿಯೂ, ಪುನಃ ಮಾಯೆಯೊಳಗೆ ಸಿಗದಂತೆ ಎಚ್ಚರ ವಹಿಸಲೂ, ಗುರು ಶಿಷ್ಯರೊಡಗೂಡಿ ಹೇಳುವ ಈ ಕೆಳಗಿನ ಮಂತ್ರದಿಂದ ಉಪನಿಷತ್ತು ಕೊನೆಗೊಳ್ಳುತ್ತದೆ.

ಮಂತ್ರ ೧೮

[ಬದಲಾಯಿಸಿ]
  • ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ |
  • ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
  • ಯುಯೋದ್ಧ್ಯಸ್ಮಜ್ಜುಹುರಾಣುಮೇನೋ |
  • ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
  • ಭೂಯಿಷ್ಠಾಂತೇ ನಮಃ ಉಕ್ತಿಂ ವಿಧೇಮ ||
ಅಗ್ನೇ = ಹೇ ಅಗ್ನಿಯೇ, ನಯ ನೆಡೆಸು, ಸುಪಥಾ = ಸನ್ಮಾರ್ಗದಲ್ಲಿ, ರಾಯೇ = ಆನಂದಮಾರ್ಗದಲ್ಲಿ ಹೋಗಲು, (ಕರ್ಮಫಲ ಅನುಭವಿಸುವುದಕ್ಕಾಗಿ), ಅಸ್ಮಾನ್ = ನಮ್ಮನ್ನು; ವಿಶ್ವಾನಿ = ಎಲ್ಲಾ, ದೇವ = ಹೇ ದೇವ ತತ್ವವೇ, ವಯುನಾನಿ = ಮಾರ್ಗಗಳನ್ನು (ತತ್ವಗಳನ್ನೂ), ವಿದ್ವಾನ್ = ತಿಳಿದುಕೊಂಡಿರವೆ, ಯುಯೋಧಿ = ನಾಶಗೊಳಿಸು, ಅಸ್ಮತ್ = ನಮ್ಮ, ಜುಹುರಾಣಾಂ = ಕುಟಿರೀತಿಯ, ಏನಃ = ಪಾಪಗಳನ್ನು, ಭೂಯೀಷ್ಟಾಂ = ನೆಲಕ್ಕೆ ಬಗ್ಗಿ, ಅನೇಕ , ತೇ = ನಿನಗೆ, ನಮ ಉಕ್ತಿಂ = ನಮಸ್ಕಾರ ವಚನಗಳನ್ನು, ವಿಧೇಮ= ಅರ್ಪಿಸುತ್ತೇವೆ.
ತಾತ್ಪರ್ಯ = ಹೇ, ದೇದೀಪ್ಯಮಾನ ಪ್ರಭೋ! ವಿಶ್ವದಲ್ಲಿ ಅಡಗಿರುವ ಸಕಲ ತತ್ವಗಳೂ ನಿನಗೆ ತಿಳಿದಿವೆ. ನಮ್ಮನ್ನು ಸರಳ ಮಾರ್ಗದಲ್ಲಿ ಆ ಪರಮ ಆನಂದದ ಕಡೆಗೆ ಒಯ್ಯಿ.ವಕ್ರಗತಿಯ ಪಾಪದಿಂದ ನಮ್ಮನ್ನು ದೂರವಿಡು. ನಿನಗೆ ನಾವು ಪುನಃ ಪುನಃ ನಮ್ರವಾಣಿಯಿಂದ ಬಿನ್ನವಿಸುತ್ತೇವೆ. (ವಿನೋಬಾ)
  • ಪದ್ಯ ೧೮;
  • ಓ ಬೆಳಕೆ, ನಡೆಸೆಮ್ಮ ಸನ್ಮಾರ್ಗದಲಿ |
  • ಜಗದ ಜೀವನವು ಒಳಿತು ಕೆಡುಕುಗಳಾಗರವು ||
  • ವಿಶ್ವ ತತ್ವಜ್ಞನು ನೀನು, ದುರಿತವನು ದೂರವಿಡು |
  • ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
  • ನಾವೆರಗುವೆವು ನೆಲಬಗ್ಗಿ ವಿನಯದಲಿ ನಿನಗೆ ||
  • (ಓ ಬೆಳಕೆ ನಡೆಸು ಎಮ್ಮ-ಎಮ್ಮನು-ನಮ್ಮನ್ನು, ಸನ್ಮಾರ್ಗದಲಿ , ಜಗದ ಜೀವನವು ಒಳಿತು ಕೆಡಕುಗಳ ಆಗರವು,ವಿಶ್ವ ತತ್ವಜ್ಞನು ನೀನು, ದುರಿತವನು-ಕೆಟ್ಟದ್ದನ್ನು ದೂರವಿಡು, ನಾವು ಎರಗುವೆವು ನೆಲಬಗ್ಗಿ-ಸಾಷ್ಟಾಂಗ, ವಿನಯದಲಿ ನಿನಗೆ)
  • ಅಗ್ನೇ ಎಂಬುದನ್ನು ಓ ಬೆಳಕೇ ಎಂದು ಅನುವಾದಿಸಿದೆ. ಸಾಧಕನು ಅಮೃತದೆಡೆಗೆ ದೇಹಾತೀತನಾಗಿ ಹೋಗುವಾಗ ಮಾಡುವ ಪ್ರಾರ್ಥನೆ ಎಂದು ಅರ್ಥ ಮಾಡುತ್ತಾರೆ. ಆದರೆ ಸಾಧಕ 'ಅದೇ - ನಾನು' (ಆ ಪರ ತತ್ವವೇ ನಾನು))ಎಂಬ ಜ್ಞಾನ ವಾದಮೇಲೆ ಮಾಡುವ ಸಾಮೂಹಿಕ ಪ್ರಾರ್ಥನೆ ಎನ್ನಬಹುದು.
  • ಜಗದ ಹಿತ ಸಾಧನೆಗ ಜ್ಞಾನಿಯಾದವನು ನೂರುಕಾಲ ಬಾಳಲು ತನ್ನನ್ನೂ ತನ್ನ ಜೊತೆಯಲ್ಲಿರುವವರನ್ನೂ ಇನ್ನು ಮುಂದೆಯೂ ಸನ್ಮಾರ್ಗದಲ್ಲಿ, ಸತ್ಯ ಧರ್ಮದ ಮಾರ್ಗದಲ್ಲಿ ನಡೆಸ ಬೇಕೆಂದು ಅಗ್ನಿಯನ್ನೇ ಶರೀರವಾಗಿ ಹೊಂದಿರುವ ಅಥವಾ ಬೆಳಕಿನ ರೂಪವಾಗಿರುವ ಭಗವಂತನಿಗೆ, ಮಾಡಿದ ಸಾಮೂಹಿಕವಾದ ಪ್ರಾರ್ಥನೆ ಇದು. ವಿಶ್ವದ ಸಕಲ ತತ್ವಗಳನ್ನೂ ತಿಳಿದಿರುವ ಭಗವಂತನಿಗೆ ಶರಣಾಗತಿಯ ಸಾಷ್ಟಾಂಗ ನಮಸ್ಕಾರ. ಭಕ್ತನು ಜ್ಞಾನಿಯಾದರೂ, ಪರಮಾತ್ಮನಲ್ಲಿ ಏಕೀಭಾವ ಹೊಂದಿದರೂ ಆತನು ಜಗದೀಶ್ವರನಾಗಲು ಸಾಧ್ಯವಿಲ್ಲ.
  • ಯಜ್ಞದ ಕೊನೆಯಲ್ಲಿ ಸಾಮೂಹಿಕವಾಗಿ ಈ (೧೮ ನೇ ಮಂತ್ರವನ್ನು) ಪ್ರಾರ್ಥನೆ ಮಾಡುವುದು ಸಾಮಾನ್ಯವಾಗಿದೆ. ಕೊನೆಯ ಸಾಲನ್ನು ಎರಡು ಬಾರಿ ಹೇಳವುದು ವಾಡಿಕೆ. ಕೊನಯಲ್ಲಿ ಪುನಃ ಮೊದಲಿನ ಶಾಂತಿ ಮಂತ್ರವನ್ನು ಹೇಳಿ ಮಕ್ತಾಯ ಮಾಡುವುದು ಪದ್ಧತಿ.
  • ಈ ಮಂತ್ರಗಳ ಮೊದಲ ದೃಷ್ಟಾರ ಶತರೂಪಾದೇವಿಯ ಪತಿಯಾದ ಋಷಿ ಸ್ವಾಯಂಭೂ ಮನುವೆಂದೂ, ನಂತರ ಅಥರ್ವಣ,

ಯಾಜ್ಞವಲ್ಕ್ಯ, ಕಣ್ವ, ಮಾಧ್ಯಂದಿನ ಮುನಿಗಳು ಈ ಮಂತ್ರಗಳ ಉಪದೇಶ, ದರ್ಶನ ಪಡೆದರೆಂದು ಹೇಳುತ್ತಾರೆ. (- ಬನ್ನಂಜೆ ಗೋವಿಂದಚಾರ್ಯರು)

  • ಓಂ ಪೂರ್ಣಮದಃ ಪೂರ್ಣಮಿದಂ
  • ಪೂರ್ಣಾತ್ಪೂರ್ಣಮುದಚ್ಯತೇ |
  • ಪೂರ್ಣಸ್ಯ ಪೂರ್ಣಮಾದಾಯ
  • ಪೂರ್ಣಮೇವಾವಶಿಷ್ಯತೇ ||
  • ಓಂ ಶಾಂತಿಃ ಶಾಂತಿಃ ಶಾಂತಿಃ

[][][][]

  • (ಕನ್ನಡ ಭಾವಾನುವಾದ ಮತ್ತು ವಿವರಣೆ : ಬಿ ಎಸ್. ಚಂದ್ರಶೇಖರ ಸಾಗರ; 2-1-2012)
  1. . ಶ್ರೀ ಆದಿ ಶಂಕರ ರ ಈಶಾವಾಸ್ಯ ಉಪನಿಷತ್ ಭಾಷ್ಯ.
  2. . ಶ್ರೀ ವಿನೋಬಾ ಭಾವೆಯವರ ಈಶಾವಾಸ್ಯ ಭಾಷ್ಯ
  3. . ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ :
  4. .ಈಶಾವಾಸ್ಯೋಪನಿಷತ್: ಸ್ವಾಮೀ ಆದಿದೇವಾನಂದ
  5. .ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
  6. . ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.

ಬಾಹ್ಯಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ
  2. ಶ್ರೀ ಆದಿ ಶಂಕರರ ಈಶಾವಾಸ್ಯ ಉಪನಿಷತ್ ಭಾಷ್ಯ.
  3. ಶ್ರೀ ವಿನೋಬಾ ಭಾವೆಯವರ ಈಶಾವಾಸ್ಯ ಭಾಷ್ಯ-ಕನ್ನಡದಲ್ಲಿ ಅನುವಾದ ಮತ್ತು ವ್ಯಾಖ್ಯಾನ
  4. ಈಶಾವಾಸ್ಯೋಪನಿಷತ್: ಸ್ವಾಮೀ ಆದಿದೇವಾನಂದ
  5. ಈಶಾವಾಸ್ಯ ಉಪನಿಷತ್ - ಸ್ವಾಮಿ ಚಿನ್ಮಯಾನಂದ.