ರೊನಾಲ್ಡ್ ರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೊನಾಲ್ಡ್ ರಾಸ್

ರೊನಾಲ್ಡ್ ರಾಸ್ (1857-1932) ಒಬ್ಬ ಬ್ರಿಟಿಷ್ ವೈದ್ಯ. ನೊಬೆಲ್ ಪಾರಿತೋಷಿಕ ಪುರಸ್ಕೃತ. ಅನಾಫಿಲೀಸ್ ಎಂಬ ಹೆಣ್ಣುಸೊಳ್ಳೆಗಳು ವಂಶಾಭಿವೃದ್ಧಿಗೊಂಡು ವ್ಯಾಪಕ ಮಲೇರಿಯ ರೋಗಕ್ಕೆ ಹೇಗೆ ಕಾರಣವಾಗುತ್ತವೆಂಬುದರ ಬಗ್ಗೆ ವಿಶೇಷ ಅಧ್ಯಯನ ಸಂಶೋಧನೆಗಳನ್ನು ನಡೆಸಿದಾತ.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ನೇಪಾಲದ ಅಲ್ಮೋರದಲ್ಲಿ 1857 ಮಾರ್ಚ್ 12ರಂದು ಜನಿಸಿದ. ತಂದೆ ಕ್ಯಾಂಪ್‌ಬೆಲ್ ರಾಸ್. ಅಂದಿನ ಬ್ರಿಟಿಷ್ ಭಾರತದ ಸೇನೆಯಲ್ಲಿ ಮೇಜರ್ ಆಗಿದ್ದ. ಮಗನ ಪ್ರಾಥಮಿಕ ವಿದ್ಯಾಭ್ಯಾಸ ಇಂಗ್ಲಿಷ್ ವಸತಿಶಾಲೆಯಲ್ಲೇ ನಡೆಯಿತು. ಎಂಟು ವರ್ಷ ವಯಸ್ಸಾದಾಗ ಇವನನ್ನು ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಕಳುಹಿಸಲಾಯಿತು. ತಂದೆಯ ಇಚ್ಛೆಯಂತೆ ವೈದ್ಯಕೀಯದ ಅಧ್ಯಯನಕ್ಕಾಗಿ ಲಂಡನ್ನಿನ ಸೇಂಟ್ ಬಾರ್ತೊಲೋಮ್ಯ ಆಸ್ಪತ್ರೆ ಸೇರಿದ (1874). ಆ ಅಧ್ಯಯನವನ್ನೇನೋ ಕೈಗೆತ್ತಿಕೊಂಡ. ಆದರೆ ಈತನ ಆಸಕ್ತಿ ಇದ್ದದ್ದು ಸಂಗೀತ ಮತ್ತು ಸಾಹಿತ್ಯ ವಲಯಗಳಲ್ಲಿ. ನಾಟಕಗಳನ್ನೂ ಕವನಗಳನ್ನೂ ಕಥೆಗಳನ್ನೂ ರಚಿಸಿದ. ಕಲೆ ಮತ್ತು ಸಾಹಿತ್ಯಗಳ ಜೊತೆಗೆ ರಾಸನಿಗೆ ಗಣಿತದಲ್ಲೂ ಅಮಿತಾಸಕ್ತಿ ಇತ್ತು. ಸ್ವಂತ ಅಧ್ಯಯನದಿಂದ ಈ ಆಸಕ್ತಿಯನ್ನು ಮೂಡಿಸಿಕೊಂಡಿದ್ದ.

ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಿಂದ ವೈದ್ಯಕೀಯದಲ್ಲಿ ಪದವಿ ಪಡೆಯಲು ಶ್ರಮಿಸಿದ (1879), ಆದರೆ ಯಶಸ್ವಿಯಾಗಲಿಲ್ಲ. ಔಷಧಿ ವಿತರಣಶಾಸ್ತ್ರದಲ್ಲಿಯೂ ಯಶಸ್ಸು ಕಾಣದಾದ. ಹಡಗೊಂದರಲ್ಲಿ ತಾತ್ಕಾಲಿಕ ವೈದ್ಯ ಹುದ್ದೆಗೆ ಸೇರಿಕೊಂಡು ತನ್ನ ವ್ಯಾಸಂಗವನ್ನು ಮುಂದುವರಿಸಿದ.[೧] ಅದೇ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡು ವೈದ್ಯಪದವಿ ಗಳಿಸಿದ (1881).

ವೃತ್ತಿಜೀವನ, ಸಾಧನೆಗಳು[ಬದಲಾಯಿಸಿ]

ಮುಂದೆ ಭಾರತದ ವೈದ್ಯಕೀಯ ಸೇವಾ ವ್ಯವಸ್ಥೆಯಲ್ಲಿ ಸರ್ಜನ್ ಕೆಲಸ ದೊರಕಿ ಅಲ್ಲಿಗೆ ಹಿಂತಿರುಗಿದ.[೨][೩] 1881-88ರ ಅವಧಿಯಲ್ಲಿ ಈತ ಭಾರತದ ಮದರಾಸು, ಬೆಂಗಳೂರು ಮತ್ತು ಅಂಡಮಾನ್ ದ್ವೀಪಗಳಲ್ಲಿ ಸೇವೆ ಸಲ್ಲಿಸಿದ. ತನ್ನ ಇತರ ಸಹೋದ್ಯೋಗಿಗಳಂತೆಯೇ ಇವನು ಸಂಶೋಧನಾ ಪ್ರವೃತ್ತಿಯವನಾಗಿದ್ದ.

ಇವನಿಗೆ ಮಲೇರಿಯ ಬಗ್ಗೆ ಹೆಚ್ಚಿನ ಆಸಕ್ತಿ ಉಂಟಾದದ್ದು ಬೆಂಗಳೂರಿನಲ್ಲಿ. 1894ರಲ್ಲಿ ಈ ಬಗ್ಗೆ ಅಧ್ಯಯನ ಸಂಶೋಧನೆಗಳನ್ನು ಮಾಡಿದ. ಸರ್ಕಾರಿ ಸೇವೆಯಲ್ಲಿ ಇದ್ದುದರಿಂದ ಕ್ವೆಟ್ಟ, ಉದಕಮಂಡಲ, ರಂಗೂನ್, ಸಿಕಂದರಾಬಾದ್, ಕಲ್ಕತ್ತಗಳಿಗೆ ಹೋಗಿಯೂ ಕಾರ್ಯನಿರ್ವಹಿಸಬೇಕಾಯಿತು. ಕೆಲಸ ಮಾಡುವ ಕೈಗಳಿಗೆ ಯುಕ್ತರೀತಿಯ ಪ್ರೋತ್ಸಾಹ ದೊರೆಯುವುದು ಕ್ಷೀಣಿಸತೊಡಗಿತು. ರಾಸ್ ಧೃತಿಗೆಡಲಿಲ್ಲ. ಕೆಲವೊಂದು ಸಹೋದ್ಯೋಗಿಗಳ ಟೀಕೆಗಳನ್ನೂ ಎದುರಿಸಬೇಕಾಯಿತು. 1893ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ. ಜೀವನದಲ್ಲಿ ಉಷ್ಣವಲಯದ ರೋಗಗಳ ಬಗ್ಗೆ ಅಧ್ಯಯನಮಾಡಿ ಖ್ಯಾತನಾಗಿದ್ದ ಪ್ಯಾಟ್ರಿಕ್ ಮ್ಯಾನ್‌ಸನ್ (1844-1922) ಎಂಬವನ ಪ್ರೇರಣೆ ಹಾಗೂ ಉತ್ತೇಜನಗಳಿಂದ ರಾಸನಿಗೆ ಮಲೇರಿಯ ರೋಗ ಹರಡಲು ಕಾರಣವಾಗುವ ಪರಾವಲಂಬಿಯ ಜೀವನಚರಿತ್ರೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು ಸಾಧ್ಯವಾಯಿತು. ಫೈಲೇರಿಯ (ಆನೆಕಾಲು ರೋಗ) ಎಂಬುದು ಸೊಳ್ಳೆಗಳಿಂದ ಹರಡುತ್ತದೆ ಎಂಬುದನ್ನು ಮ್ಯಾನ್‌ಸನ್ ತೋರಿಸಿಕೊಟ್ಟಿದ್ದ. ಸೊಳ್ಳೆ ಮನುಷ್ಯರನ್ನು ಕಚ್ಚಿ ರಕ್ತ ಹೀರಿದಾಗ ಮಲೇರಿಯದ ಪರಾವಲಂಬಿ ಜೀವಿಗಳು ಸೊಳ್ಳೆಯ ದೇಹ ಸೇರಿ ಅವು ಸತ್ತ ಬಳಿಕ ನೀರಿನಲ್ಲಿ ಸೇರುತ್ತವೆ. ಈ ನೀರಿನ ಸೇವನೆಯಿಂದ ವ್ಯಕ್ತಿ ಮಲೇರಿಯ ಕಾಯಿಲೆಗೆ ಈಡಾಗುತ್ತಾನೆ ಎಂದು ಮ್ಯಾನ್‌ಸನ್ ತಿಳಿಸಿದ್ದ. ಈ ವಿಚಾರದಲ್ಲಿ ಈತ ತನ್ನ ಅಧ್ಯಯನ ಸಂಶೋಧನೆಗಳನ್ನು ಮುಂದುವರಿಸುವ ಸಲುವಾಗಿ 1894ರಲ್ಲಿ ಭಾರತಕ್ಕೆ ಹಿಂತಿರುಗಿದ. ಸಿಕಂದರಾಬಾದಿನ ಮಿಲಿಟರಿ ಆಸ್ಪತ್ರೆಗೆ ಈತನನ್ನು ವರ್ಗಾಯಿಸಲಾಯಿತು. ಇವನ ಸಂಶೋಧನೆಗಳಿಗೆ ಸಹೋದ್ಯೋಗಿಗಳಿಂದ ಉತ್ತೇಜನವಾಗಲೀ ಸರ್ಕಾರದಿಂದ ಪ್ರೋತ್ಸಾಹವಾಗಲೀ ದೊರೆಯಲಿಲ್ಲ.

ಜೀವರಾಶಿಯ ಆದಿಮರೂಪ ಎನಿಸಿರುವ ಪ್ರೊಟೊಜ಼ೋವದ ಒಂದು ಪ್ರಭೇದ ಪ್ಲಾಸ್ಮೋಡಿಯಮ್. ಇದು ಮಲೇರಿಯಕಾರಕ ಎಂಬುದನ್ನು ಫ್ರೆಂಚ್ ವೈದ್ಯ ಚಾರ್ಲ್ಸ್ ಲೆವಿರಾನ್ (1845-1922) ಮೊದಲಿಗೆ ಆಲ್ಜೀರಿಯದಲ್ಲಿ ಕಂಡುಕೊಂಡಿದ್ದ (1880). ಮಲೇರಿಯಕ್ಕೆ ಕಾರಣ ಎನಿಸುವ ಈ ಪರಾವಲಂಬಿ ಮನುಷ್ಯನಲ್ಲಿ ಬೆಳೆವಣಿಗೆ ಹೊಂದಿದರೂ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಹೇಗೆಂಬುದು ನಿಗೂಢವಾಗಿಯೇ ಇತ್ತು. ಸೊಳ್ಳೆ ಈ ಪರಾವಲಂಬಿಯನ್ನು ಹರಡುವ ವಾಹಕವೆಂಬುದು ಆಗಿನ ಊಹೆ ಆಗಿದ್ದರೂ ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿರಲಿಲ್ಲ. ಸೊಳ್ಳೆಗಳು ಮಲೇರಿಯ ರೋಗಿಗಳನ್ನು ಕಚ್ಚುವಂತೆ ಮಾಡಿ, ಬಳಿಕ ಅವನ್ನು ಕೊಂದು ಅವುಗಳ ಜಠರವನ್ನು ತನ್ನಲ್ಲಿದ್ದ ಸೂಕ್ಷ್ಮದರ್ಶಕದ ಮೂಲಕ ಈತ ವೀಕ್ಷಿಸಿ ಪರೀಕ್ಷಿಸುವಲ್ಲಿ ನಿರತನಾದ. ಏತನ್ಮಧ್ಯೆ ಬೆಂಗಳೂರಿನಲ್ಲಿ ಕಾಲರ ಉಪದ್ರವ ತಲೆದೋರಿ ಇವನನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಎರಡು ವರ್ಷಗಳ ಬಳಿಕ 1897ರಲ್ಲಿ ಪುನಃ ಸಿಕಂದರಾಬಾದಿನ ಬೇಗಂಪೇಟಿ ಆಸ್ಪತ್ರೆಗೆ ಮರಳಿದ. ಸೊಳ್ಳೆಗಳ ಸೋಂಕು ತಗುಲಿದ ವ್ಯಕ್ತಿಯ ರಕ್ತ ಹೀರುವಾಗ ಮಲೇರಿಯ ಪರಾವಲಂಬಿಗಳನ್ನೂ ಹೀರಬೇಕು. ಆ ವೇಳೆಗೆ ಅವು ಗಂಡು ಮತ್ತು ಹೆಣ್ಣು ಮರಿಬೀಜಗಳಾಗಿ ಪರಿವರ್ತನೆಗೊಂಡು ಮನುಷ್ಯನ ರಕ್ತವನ್ನು ಸೇರುತ್ತವೆ. ಮನುಷ್ಯನಲ್ಲಿ ಇವು ಮುಂದೆ ಅನೇಕ ಅಲೈಂಗಿಕ ಜೀವನ ಚಕ್ರಗಳ ಮೂಲಕ ತಮ್ಮ ಸಂಖ್ಯೆಯನ್ನು ಅಭಿವೃದ್ಧಿಪಡಿಸಿಕೊಳ್ಳತ್ತವೆ. ಹೀಗೆ ಅವು ತಮ್ಮ ಲೈಂಗಿಕ ಚಕ್ರವನ್ನು ಪೂರೈಸಲು ಮನುಷ್ಯ ದೇಹದಿಂದ ಹೊರಬರಲೇಬೇಕು. ಸೊಳ್ಳೆ ಹೀರಿದ ರಕ್ತದಲ್ಲಿಯ ಮಲೇರಿಯ ಪರಾವಲಂಬಿ ಲೈಂಗಿಕಚಕ್ರ ಪೂರೈಸಿ ಮತ್ತೆ ಮನುಷ್ಯನಲ್ಲಿ ಸೇರುವುದು ಹೇಗೆ ಎಂಬುದರ ವಿಚಾರವಾಗಿ ಈತ ತನ್ನ ಅಧ್ಯಯನ ಸಂಶೋಧನೆ ಮುಂದುವರಿಸಿ ಮಲೇರಿಯಪೀಡಿತ ರೋಗಿಯೊಬ್ಬನನ್ನು ಕಂದುಬಣ್ಣದ ಸೊಳ್ಳೆಗಳು ಕಚ್ಚುವಂತೆ ಮಾಡಿ ಅದನ್ನು ಕೊಂದು ಅದರ ಜಠರಕೋಶವನ್ನು ಸೂಕ್ಷ್ಮದರ್ಶಕದ ಮೂಲಕ ಅಭ್ಯಸಿಸಿದ. 1897ರ ಆಗಸ್ಟ್ ತಿಂಗಳ ಮೊದಲೆರಡು ವಾರಗಳ ತನಕವೂ ಅಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಮುಂದೆ ಕೆಲವು ದಿವಸಗಳ ಬಳಿಕ ಮತ್ತೆ ಸೊಳ್ಳೆಗಳ ಜಠರಕೋಶವನ್ನು ಈತ ಪರೀಕ್ಷಿಸಿದಾಗ, ಆ ಕೋಶದಲ್ಲಿ ಕಲ್ಲುಹಾಸಿನಂತಿರುವ ಮೇಲ್ಪೊರೆಯ ಭಿತ್ತಿಯಲ್ಲಿ ಸ್ಫುಟವಾಗಿ ಹೆಚ್ಚಿನ ಸಂಖ್ಯೆಯ ಕಪ್ಪು ಚುಕ್ಕಿಗಳು ಕಾಣಿಸಿಕೊಂಡುವು. ಸೊಳ್ಳೆಯ ದೇಹದಲ್ಲಿ ಬೆಳೆಯುತ್ತಿರುವ ಮಲೇರಿಯ ಪರಾವಲಂಬಿ ಜೀವಿಗಳು ಎಂಬ ನಿರ್ಧಾರಕ್ಕೆ ಈತ ಬಂದ. ಈ ವಿಶೇಷ ಅಧ್ಯಯನ, ಸಂಶೋಧನೆಗಳಿಗಾಗಿ ಇವನನ್ನು ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಮಾಡಲಾಯಿತು (1901).[೪] ಇದಲ್ಲದೆ ರಾಸನಿಗೆ 1902ರ ನೊಬೆಲ್ ಪಾರಿತೋಷಿಕವನ್ನು ನೀಡಲಾಯಿತು.[೫] ಇಷ್ಟಾದರೂ ಇವನ ಪ್ರಯೋಗಕಾರ್ಯ ಈತನ ಮೇಲಧಿಕಾರಿಗಳಿಗೆ ಅಂಥ ಮಹತ್ತ್ವದ್ದು ಎನಿಸಲಿಲ್ಲ. ಬೇರೆ ಬೇರೆ ಎಡೆಗಳಿಗೆ ಈತನನ್ನು ವರ್ಗ ಮಾಡಿದ್ದರು. ಈತ ಕಲ್ಕತ್ತದಲ್ಲಿದ್ದಾಗ ಪಂಜರದೊಳಗಿಟ್ಟಿರುವ ಹಕ್ಕಿಗಳಲ್ಲೂ ಮಲೇರಿಯ ಕಾಣಿಸಿಕೊಳ್ಳುತ್ತಿದ್ದುದನ್ನು ಪತ್ತೆಮಾಡಿದ. ಈ ಎಲ್ಲ ಸಾಧನೆಗಳಿಗಾಗಿ ರಾಸನಿಗೆ 1911ರಲ್ಲಿ ನೈಟ್‌ಹುಡ್ (ಸರ್) ಪದವಿಯನ್ನು ನೀಡಿ ಗೌರವಿಸಲಾಯಿತು.

ಈತ ಇಂಡಿಯನ್ ವೈದ್ಯಕೀಯ ಸೇವಾ ವ್ಯವಸ್ಥೆಯಿಂದ 1899ರಲ್ಲಿ ನಿವೃತ್ತನಾದ. ಇದರೊಂದಿಗೆ ಇವನ ಪ್ರಯೋಗಾತ್ಮಕ ಜೀವನವೂ ಕೊನೆಗೊಂಡಿತು. ಇವನ ಆತ್ಮಚರಿತ್ರೆ ದ ಫೈಟ್ ಫಾರ್ ಲೈಫ್ 1922ರಲ್ಲಿ ಪ್ರಕಟವಾಯಿತು. ತನ್ನ ಜೀವನದ ಉದ್ದಕ್ಕೂ ತಾನು ಯಾವ ರೀತಿ ಅಡ್ಡಿಆತಂಕಗಳನ್ನು ಎದುರಿಸಬೇಕಾಯಿತೆಂಬುದನ್ನೂ ತನ್ನ ಕೆಲಸಕ್ಕೆ ಭಾರತದಲ್ಲಿ ಯಾವ ರೀತಿ ಯುಕ್ತ ಮನ್ನಣೆಯಾಗಲೀ ಸಹಾಯವಾಗಲೀ ದೊರೆಯಲಿಲ್ಲವೆಂಬುದನ್ನೂ ಈ ಆತ್ಮಚರಿತ್ರೆ ತಿಳಿಸುತ್ತದೆ. ಮಲೇರಿಯ ಕುರಿತಂತೆ ಈತನ ಕೆಲಸಗಳು ಬಲು ಫಲಪ್ರದವಾದರೂ ಮೊದಮೊದಲು ಮಲೇರಿಯ ಕಾಯಿಲೆ ಜೌಗುಪ್ರದೇಶಗಳಿಂದ ಹೊರಹೊಮ್ಮುವ, ಫುಪ್ಫುಸಗಳಿಗೂ ಘ್ರಾಣೇಂದ್ರಿಯಕ್ಕೂ ಕೆಡುಕನ್ನು ಉಂಟುಮಾಡುವ ದುರ್ಗಂಧದಿಂದ ಉಂಟಾಗುತ್ತದೆ ಎಂಬ ನಿರಾಧಾರ, ವ್ಯಾಪಕ ನಂಬಿಕೆಯನ್ನು ಈತ ದೂರಮಾಡಬೇಕಾಗಿ ಬಂತು. ಮಲೇರಿಯ ಕುರಿತ ಜನಪ್ರಿಯ ಲೇಖನಗಳನ್ನೂ ಕಿರುಹೊತ್ತಗೆಗಳನ್ನೂ ಪ್ರಕಟಿಸಿದ. ಮಲೇರಿಯ ವಿರುದ್ಧ ಜನಜಾಗೃತಿ ಮೂಡಿಸುವ ಆಂದೋಲನಗಳಲ್ಲೂ ಸ್ವತಃ ಭಾಗವಹಿಸಿದ.

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಈತ ಮಲೇರಿಯ ಕುರಿತಂತೆ ಯುದ್ಧ ಕಛೇರಿಗೆ ಮಾಹಿತಿ ತಿಳಿಸಿಕೊಡುವ ಸಮಾಲೋಚಕನಾಗಿದ್ದ. ರಾಸನ ಹೆಸರನ್ನು ಚಿರಸ್ಮರಣೀಯವಾಗಿಡುವಂಥ ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಹೈಜೀನ್ ಸಂಸ್ಥೆ ಲಂಡನ್ನಿನಲ್ಲಿ ಏರ್ಪಟ್ಟು (1926) ಈತ ಅದರ ಪ್ರಥಮ ನಿರ್ದೇಶಕನೂ ಆಗಿದ್ದ.[೬] ಈತ ಪ್ರಾಯೋಗಿಕ ವಿಜ್ಞಾನಿ ಮಾತ್ರ ಆಗಿರದೆ ಆಗಾಗ್ಗೆ ಕವನಗಳನ್ನೂ ರಚಿಸುತ್ತಿದ್ದ. ಸೊಳ್ಳೆಯ ಜಠರಕೋಶಗಳಲ್ಲಿ ಕಂಡುಬರುವ ಕಂದುಬಣ್ಣದ ಚುಕ್ಕಿಗಳ ಬಗ್ಗೆ ನಡೆಸಿದ ಆವಿಷ್ಕಾರ ಕುರಿತಂತೆ ಎಕ್ಸೈಲ್ ಎಂಬ ನೀಳ್ಗವನ ಬರೆದು ಖ್ಯಾತಿಗಳಿಸಿದ. ಇದಲ್ಲದೆ ಶೀಘ್ರಲಿಪಿಯ ವಿಚಾರದಲ್ಲೂ ಈತ ಬಹಳಷ್ಟು ಕೆಲಸ ಮಾಡಿದ.

ನಿಧನ[ಬದಲಾಯಿಸಿ]

1932ರ ಸೆಪ್ಟೆಂಬರ್ 16ರಂದು ಲಂಡನ್ನಿನಲ್ಲಿ ನಿಧನನಾದ.

ಉಲ್ಲೇಖಗಳು[ಬದಲಾಯಿಸಿ]

 1. "Biography of Sir Ronald Ross". London School of Hygiene & Tropical Medicine. Archived from the original on 2 February 2014. Retrieved 28 January 2014.
 2. You must specify issue=, startpage=, and date= when using {{London Gazette}}. Available parameters:

  {{London Gazette
  |issue= 
  |date=
  |startpage= 
  |endpage=
  |supp=
  |city=
  |accessdate=
  |nolink=
  |separator=
  |ps=
  }}
 3. "Sir Ronald Ross (1857–1932)". Dr. B.S. Kakkilaya's Malaria Web Site. Archived from the original on 19 ಮಾರ್ಚ್ 2013. Retrieved 31 ಜನವರಿ 2014.
 4. N., G. H. F. (1933). "Sir Ronald Ross. 1857–1932". Obituary Notices of Fellows of the Royal Society. 1 (2): 108–115. doi:10.1098/rsbm.1933.0006.
 5. "Ronald Ross – Facts". Nobel Media AB. Retrieved 31 January 2014.
 6. "Ross and the Discovery that Mosquitoes Transmit Malaria Parasites". Centers for Disease Control and Prevention. 8 February 2010. Retrieved 31 January 2014.

ಹೊರಗಿನ ಕೊಂಡಿಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: