ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯ ದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ನವೋದಯ ಸಾಹಿತ್ಯವೆಂದು ಹೊಸ ಸಾಹಿತ್ಯ ಪ್ರಕಾರ ದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ ಛಂದಸ್ಸಿನ ಸಾನೆಟ್ ಮಾದರಿಯ ಪದ್ಯಗಳು ಮುಖ್ಯವಾದವು.

ನವೋದಯ[ಬದಲಾಯಿಸಿ]

 • ನವೋದಯ ಕಾವ್ಯವು ಮುಖ್ಯವಾಗಿ ಭಾವಗಳ ತೀವ್ರತೆಯ ಅಭಿವ್ಯಕಿಗೆ ಪ್ರಾಮುಖ್ಯತೆ ಕೊಟ್ಟಿತು. ಭಾವುಕತೆ, ಉತ್ಸಾಹ, ಸಮೃದ್ಧಿ ಆ ಕಾವ್ಯಗಳ ಪ್ರಮುಖ ಲಕ್ಷಣ. ಹಿಂದಿನ ಕಾವ್ಯ ಪರಂಪರೆಗೆ ಬೇರೆಯಾದ ಲಕ್ಷಣ, ಛಂದಸ್ಸು ಮತ್ತು ಶೈಲಿಯಿಂದ ಹೊಸಬಗೆಯ ಕಾವ್ಯದ ಪ್ರಕಾರ ವಾದ ಭಾವಗೀತೆ, ಕವನಗಳು ೨೦ನೇ ಶತಮಾನದ ಆದಿಯಿಂದ ಇಲ್ಲಿಯವರೆಗೂ ಕಾಲಕ್ಕೆ ತಕ್ಕಂತೆ ಶೈಲಿ, ಭಾವನೆ, ಚಿಂತನೆ, ಅಭಿವ್ಯಕ್ತಿಗಳಲ್ಲಿ ಬದಲಾವಣೆ ಹೊಂದುತ್ತಾ ಸಮೃದ್ಧವಾಗಿ ಬೆಳೆಯಿತು.
 • ಆಧುನಿಕ ಕನ್ನಡದ ರೂವಾರಿಗಳು ಮತ್ತು ಜನಕರೆನಿಸಿದ ಶ್ರೀ ಬಿ.ಎಂ.ಶ್ರೀಕಂಠಯ್ಯ / ಬಿ.ಎಂ.ಶ್ರೀ ಅವರು ತಮ್ಮ ಇಂಗ್ಲಿಷ್ ಗೀತೆಗಳು ಎಂಬ ಹೊಸಕನ್ನಡದ ಇಂಗ್ಲಿಷ್ ಕವನಗಳ ಅನುವಾದಿತ ಕವನ ಸಂಕಲವನ್ನು ಹೊರತಂದರು. ಅಲ್ಲದೆ ಕನ್ನಡ ಭಾಷೆ ಸಾಹಿತ್ಯವನ್ನು ಬೆಳೆಸುವ ಬಗೆಗೆ ಅನೇಕ ಲೇಖನಗಳನ್ನೂ, ಉಪನ್ಯಾಸಗಳನ್ನೂ ನೀಡಿದರು. ನವೋದಯ ಕಾವ್ಯ
 • ಅದು ಉಳಿದ ನವೋದಯ ಕವಿಗಳಿಗೆ ಪ್ರೇರಣೆಯಾಗಿ ಕನ್ನಡದಲ್ಲಿ ಹೊಸ ಬಗೆಯ ಸಾಹಿತ್ಯ ಹುಲುಸಾಗಿ ಬೆಳೆಯಲು ಕಾರಣವಾಯಿತು. ಶ್ರೀ ಕುವೆಂಪು, ಶ್ರೀ ದ.ರಾ.ಬೇಂದ್ರೆ ಅವರು ನಂತರದ ದಿನಗಳಲ್ಲಿ ತಾತ್ವಿಕ ಕಾವ್ಯ ಗಳ ರಚನೆಗಳನ್ನು ಮಾಡಿದರು. ಅವರ 'ನಾಕುತಂತಿ']., ಕೆ.ಎಸ್.ನ, ಪು.ತಿ.ನ ರವರು ಈ ನವೋದಯ ಕಾವ್ಯಕ್ಕೆ ಹೆಚ್ಚಿನ ಮೆರುಗು ಕೊಟ್ಟರು.
 • ಇಂಗ್ಲಿಷ್ ಗೀತೆಗಳು ಕವನ ಸಂಕಲದಿಂದ ಉದಾಹರಣೆ:
 • (ನ್ಯೂಮನ್` ಬರೆದ Lead kindly Light - ಪದ್ಯದ ಅನುವಾದ)
ಕರುಣಾಳು, ಬಾ, ಬೆಳಕೆ,-
ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ;
ಕನಿಕರಿಸಿ; ಕೈ ಹಿಡಿದು ನಡೆಸೆನ್ನನು - ಇತ್ಯಾದಿ [೧]

[೨]

ಮಕ್ಕಳ ಸಾಹಿತ್ಯ[ಬದಲಾಯಿಸಿ]

ಜಾನಪದ ಸಾಹಿತ್ಯ[ಬದಲಾಯಿಸಿ]

 • ಜಾನಪದ ಹಾಡು, ಗಾದೆ, ಒಗಟು,ಒಡಪು, ಗೀಗೀ ಪದ ಮತ್ತು ಲಾವಣಿಗಳ ಸಂಗ್ರಹವನ್ನು ಕೆಲವರು ಶ್ರದ್ಧೆಯಿಂದ ಮಾಡಿದರು. ಇದು ಕನ್ನಡ ಜಾನಪದ ಸಾಹಿತ್ಯದ ಬೆಳವಣಿಗೆಗೆ ಕಾರಣವಾಯಿತು.
 • ಕನ್ನಡದ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನ ಕಲೆಯೂ ಈ ಸಮಯದಲ್ಲಿ ಅಭಿವೃದ್ಧಿ ಹೊಂದಿತು. ಶ್ರೀ ಶಿವರಾಮ ಕಾರಂತರು ಯಕ್ಷಗಾನ ಕಲೆಯಲ್ಲಿ ಸಂಶೋಧನೆ ಸುಧಾರಣೆಗಳನ್ನು ಮಾಡಿ ಆ ಕಲೆಗೆ ಹೊಸರೂಪ, ಜಾಗತಿಕ ಪ್ರಾಮುಖ್ಯತೆ ತಂದುಕೊಟ್ಟರು.
 • ಕನ್ನಡ ಜಾನಪದ ವಿಭಾಗ ಬಹು ದೊಡ್ಡದು. ಹಳ್ಳಿಗರು ಅವಿದ್ಯಾವಂತರಾದರೂ ನೂರಾರು ವರ್ಷಗಳಿಂದ ತಮ್ಮ ಕಾವ್ಯ ಪ್ರತಿಭೆಯಿಂದ ಲಾವಣಿ, ಕೋಲಾಟದ ಪದ, ಪದ, ರಾಗೀ ಬೀಸುವ ಪದ; ಜೀವನದ ಸುಖ ದುಃಖದ ಪದಗಳನ್ನು ರಚನೆ ಮಾಡಿ ಹಾಡಿದರು. ಅವನ್ನು ಬಾಯಿಂದ ಬಾಯಿಗೆ ಕಲಿತು (ಮೌಖಿಕವಾಗಿ), ನೆನಪಿನಲ್ಲಿ ಇಟ್ಟುಕೊಂಡು -ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುತ್ತಿದ್ದರು.
 • ಅದರ ಮೌಲ್ಯವನ್ನು ಕೆಲವರು ಅರಿತು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಅದರ ಧಾಖಲಾತಿ ಪ್ರಾರಂಭವಾಯಿತು ; ಅದರಲ್ಲಿರುವ ಸಹಜವಾದ ನೋವು -ನಲಿವುಗಳ ಅಭಿವ್ಯಕ್ತಿ ಕೆಲವೊಮ್ಮೆ ಆಧುನಿಕ ಕಾವ್ಯ- ಕವನಗಳ ರೂಪಕ-ಉಪಮೆಗಳನ್ನು ಮೀರಿಸುತ್ತದೆ.
 • ಉದಾಹರಣೆಗೆ :
ಜವರಾಯ ಬಂದಾರೆ ಬರಿಕೈಲಿ ಬರಲಿಲ್ಲ |
ಕುಡಗೋಲು ಕೊಡಲೀಯ ಹಿಡಿತಂದ | (ಕೊಡಲ್ಯೊಂದ ಹಿಡಿತಂದ )
ಕುಡಗೋಲು ಕೊಡಲೀಯ ಹಿಡಿತಂದ ಜವರಾಯ |
ಒಳ್ಳೊಳ್ಳೆ ಮರನಾ ಕಡಿಬಂದ ||

ಯಮನ ಲೆಕ್ಕಾಚಾರ ತಿಳಿಯುವುದಿಲ್ಲ. ಪಾಪಿಷ್ಟರನ್ನೂ, ಮುದುಕರನ್ನೂ, ವಾಸಿಯಾಗದ ರೋಗಿಗಳನ್ನು ಬಿಟ್ಟು ಆರೋಗ್ಯವಾಗಿರುವ ಯುವಕರನ್ನೂ, ಯುವತಿಯರನ್ನು, ಬಾಲಕ/ಬಾಲಕಿಯರನ್ನೂ ತನ್ನ ಲೋಕಕ್ಕೆ ಎಳೆದೊಯ್ಯತ್ತಾನೆ. ಈ ನೋವು ಹಾಡಾಗಿ ಹೊರಹೊಮ್ಮಿದೆ. ಇಲ್ಲಿ ಬಂದಿರುವ ರೂಪಕ ಯಾವ ಕಾವ್ಯಕ್ಕೂ ಕಡಿಮೆ ಇಲ್ಲ.

ಕನ್ನಡ ಭಾಷೆಯ ಅಭಿವೃದ್ಧಿ[ಬದಲಾಯಿಸಿ]

 • ಇದೇ ಸಮಯದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ಕನ್ನಡ ಶಬ್ದಕೋಶ ಕನ್ನಡ ವ್ಯಾಕರಣ, ಛಂದಸ್ಸು, ಅಲಂಕಾರ ಈ ಬಗೆಯ ಕನ್ನಡ ಭಾಷಾಶಾಸ್ತ್ರದ ಬೆಳವಣಿಗೆಯೂ ಆಯಿತು. ಮಕ್ಕಳಿಗಾಗಿ ಮೈಸೂರು ವಿದ್ಯಾ ಇಲಾಖೆ ಪ್ರಕಟಿಸಿದ ಶ್ರೀ ತೀ.ನಂ. ಶ್ರೀಕಂಠಯ್ಯ ನವರ 'ಕನ್ನಡ ಮಧ್ಯಮ ವ್ಯಾಕರಣ' ಮತ್ತು ಪ್ರೌಢರಿಗಾಗಿ ಬರೆದ 'ಕನ್ನಡ ಕೈಪಿಡಿ' ಪ್ರಸಿದ್ಧವಾದವು.
 • ಹೆಚ್ಚು ಮಾಹಿತಿಯುಳ್ಳ ಕನ್ನಡ -ಇಂಗ್ಲಿಷ್ ಕನ್ನಡ ಶಬ್ದಕೋಶವನ್ನು ಮೊದಲು ರೆ.ಜೆ.ಎಫ್. ಕಿಟ್ಟೆಲ್ ರಚಿಸಿದರು. ಅದಕ್ಕೂ ಮೊದಲೇ ಆ ಬಗೆಯ ಶಬ್ದಕೋಶವನ್ನು ಕ್ರಿಶ್ಚಿಯನ್ ಮತದ ಪಾದರಿಯವರು ರಚಿಸಿದ್ದರು(ಪುಸ್ತಕದ ಮನೆ). ರೆ.ಜೆ.ಎಫ್. ಕಿಟ್ಟಲ್ ರವರ ಶಬ್ದ ಕೋಶವು ಸಮಗ್ರವಾಗಿದೆ.
 • ನಂತರ ಶ್ರೀ ಶಿವರಾಮ ಕಾರಂತರು ೧೯೫೨ ರಲ್ಲಿ ಕನ್ನಡ-ಕನ್ನಡ ನಿಘಂಟು- ಸಿರಿಗನ್ನಡ ಅರ್ಥಕೋಶವನ್ನು ರಚಿಸಿದರು.
 • ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೭೫ ರಲ್ಲಿ ಕನ್ನಡ -ಕನ್ನಡ ಅರ್ಥಕೊಶ, ಸಂಕ್ಷಿಪ್ತ ಕನ್ನಡ ನಿಘಂಟು ಹೊರಬಂದಿತು.
 • ಮೈಸೂರು ವಿಶ್ವವಿದ್ಯಾಲಯದಿಂದ ಸಮಗ್ರವಾದ ಕನ್ನಡ-ಇಂಗ್ಲಿಷ್-ಕನ್ನಡ ನಿಘಂಟು ರಚಿಸಲ್ಪಟ್ಟಿತು.

ನವ್ಯ ಕಾವ್ಯದ ಕಾಲ[ಬದಲಾಯಿಸಿ]

 • ಈ ಸಾಹಿತ್ಯ ಸಮೃದ್ಧಿಯಲ್ಲಿ ಅನೇಕ ಜಾಳು, ಸತ್ವಹೀನ ಸಾಹಿತ್ಯಗಳು ಬಂದರೂ ಕನ್ನಡದಲ್ಲಿ ಅದು ಹೊಸ ಜಾಗೃತಿಯನ್ನು ಉಂಟು ಮಾಡಿತು.
 • ಹಲವಾರು ಕವಿಗಳು ತಮ್ಮ ಜೀವನದ ಅಥವಾ ಸಮಾಜದ ನೋವು, ಹತಾಶೆಗಳನ್ನು ತೀವ್ರವಾಗಿ ಅನುಭವಿಸಿ, ನವೋದಯ ಕಾವ್ಯದಿಂದ ಭಿನ್ನವಾದ ಹೊಸಬಗೆಯ ಕಾವ್ಯ, ಗೀತೆ, ಕವನಗಳನ್ನು ರಚಿಸಿದರು.
 • ಕಾವ್ಯವು ಮಾನವನ ಅನುಭವದ ಎಲ್ಲಾ ಮಗ್ಗಲುಗಳನ್ನು, ಮಜಲುಗಳನ್ನು ಒಳಗೊಂಡು ಅಭಿವ್ಯಕ್ತವಾಗಬೇಕು. ಅದು ಜೀವನಕ್ಕೆ ಹತ್ತಿರವಾಗಿರಬೇಕು, ನೋವು ನಲಿವು ಎರಡೂ ಅಭಿವ್ಯಕ್ತವಾಗಬೇಕು ಮತ್ತು ಜೀವನಾಭಿಮುಖವಾಗಿರಬೇಕು ಎಂಬ ಧೋರಣೆಯಿಂದ ಹೊರಟ ಕಾವ್ಯ ನವ್ಯ ಕಾವ್ಯದ್ದಾಯಿತು.
 • ಶ್ರೀ ಗೋಪಾಲಕೃಷ್ಣ ಅಡಿಗರು ಭೂಮಿಗೀತ ; ಚಂಡೆ ಮದ್ದಳೆ ಇವುಗಳನ್ನು ಬರೆಯುವುದರ ಮೂಲಕ ನವ್ಯಕ್ಕೆ ನಾಂದಿ ಹಾಡಿದರು. ಭಾವುಕತೆಯಿಂದ ವಾಸ್ತವತೆಗೆ ಇಳಿದ ಪ್ರಯೋಗ ಕಾವ್ಯದಲ್ಲಿ "ಮಣ್ಣಿನ ವಾಸನೆ" ಎಂಬ ಹೊಸ ಪದ ಪ್ರಯೋಗಕ್ಕೂ, ಕಾಮಕ್ಕೆ ಹಾವಿನ ರೂಪಕ ಉಪಯೋಗ ಮಾಡುವುದೂ ಸಾಮಾನ್ಯವಾಯಿತು. (ವಾಸ್ತವವಾಗಿ ಹಾವಿನ ರೂಪಕ ಭಾರತೀಯ ಸಂಸ್ಕೃತಿಯಲ್ಲಿ ಕುಂಡಲಿನಿಗೂ -ಯೋಗಕ್ಕೂ ಸಂಬಂಧ ಪಟ್ಟಿದೆ ; ಅದು ಪಶ್ಚಿಮದ "ಈವ"ಳ ಕಾಮದ ಸಂಕೇತ ಸಾಮಾನ್ಯರಿಗೆ ಗೋಚರಿಸುವುದು ಕಷ್ಟವಾಯಿತು.) ಇದು ನವೋದಯದ ಕೊರತೆಯನ್ನು ತುಂಬಿತು. ಪಿ.ಲಂಕೇಶ್ ರು ನವ್ಯಕಾವ್ಯಗಳ ಸಂಗ್ರಹ 'ಅಕ್ಷರ ಹೊಸ ಕಾವ್ಯ' ಎಂಬ ಗ್ರಂಥವನ್ನು ಹೊರತಂದಿದ್ದಾರೆ.
ಗೋಪಾಲಕೃಷ್ಣ ಅಡಿಗ

[೩]

 • ಅಡಿಗರ ಕಾವ್ಯ ಭಾಷೆಯ ಉದಾಹರಣೆ
ಭೂಮಿಗೀತ
ಹುಟ್ಟು - ಎಳೆಹರಯ
ಮಲೆಘಟ್ಟ, ಸೋಪಾನ ಕೆಳಪಟ್ಟಿಯಲಿ:
ಉರುಳು-ಮೂರೇ ಉರುಳು -ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ.

(ಮಗು ಹುಟ್ಟಿದ್ದು ಬೆಳೆಯುವ ಹಂತ ದಾಟಿ ಕೊನೆಗೆ ಜೀವನದ ಕಠಿಣತೆಗೆ ಬೀಳುವ ಚಿತ್ರ -ಶೈಶವ, ಬಾಲ್ಯ, ಯೌವನ?)

 • (ಭೂಮಿತಾಯಿ (ಪ್ರಕೃತಿ) ಮಗುವಿನ ಪೋಷಣೆ ಮಾಡಿದ ಬಗೆ ?)
ಭತ್ತ ಗೋಧುವೆ ರಾಗಿಜೋಳ ಮೊರ ಮೊರ ಮೌರಿಯಲ್ಲಿ
ಮಾಂಸದ ಹಾಡನೂಡಿಸಿದಳು ;
ಗಂಟೆ ಗೊರಟೆ ಜಾಜಿ ಮಂದಾರ ಮಲ್ಲಿಗೆಯ ಗಂಧಗಿರಿ ಶಿಖರದಲಿ
ಮಲಗಿಸಿದಳು ;
ಹಕ್ಕಿಗೊರಳಿಂದುಗುವ ತುಂಬಿ ಮರ್ಮರ ಮರೆವ ಜಾಮೂನು
ನಾದದಲಿ ಜಾಳಿಸಿದಳು ;
ಆಕಾಶದಲಿ ಮೋಡದ ವಿಶ್ವರೂಪಕ್ಕೆ ಕೆಳಗೆ ಜೀವಜ್ಯೋತಿ
ಕೂಡಿಸಿದಳು.
 • ಆದರೆ ಅದು ಕ್ರಮೇಣ ಹೊಸ ಹೊಸ ಪ್ರತಿಮೆ , ಅರ್ಥವಾಗದ ನುಡಿಗಟ್ಟು, ಸಂದಿಗ್ಧತೆ, ಪಾಂಡಿತ್ಯ ಇವುಗಳಿಂದ ಜನಮನ ತಲುಪುವುದು ಕಷ್ಟವಾಯಿತು. ಹೀಗೆ ಅದು ನವ್ಯದಲ್ಲಿ ದೀಕ್ಷೆಗೊಂಡವರಿಗೆ ಮಾತ್ರ ಎನ್ನುವಂತಾಗಿ ಮೂಲ ಉದ್ದೇಶದಿಂದ ದೂರವಾಯಿತು. ಓದುಗರ ವಲಯ ಸೀಮಿತಗೊಂಡಿತು. ಆದರೆ ಇದು (ನವ್ಯ) ಕನ್ನಡ ಭಾಷೆಯ ಸಾಮರ್ಥ್ಯವನ್ನೂ ಅಭಿವ್ಯಕ್ತಿಯ ಮಟ್ಟವನ್ನೂ ಹೆಚ್ಚಿಸಿತು. ಅತಿ ಸೂಕ್ಷ್ಮವಾದ, ಅಂತರಂಗ ವೇದ್ಯವಾದ ಅಥವಾ ಗುಹ್ಯವಾದ ಅನುಭವಗಳನ್ನು ಹೊರಹಾಕಲು ಮಾಧ್ಯಮವಾಯಿತು.[೪]

ದಲಿತ ಮತ್ತು ಬಂಡಾಯ ಸಾಹಿತ್ಯ[ಬದಲಾಯಿಸಿ]

 • ಕಾವ್ಯವನ್ಮ್ನ ಪುನಃ ಸಾಮಾನ್ಯ ಜೀವನದ ಹತ್ತಿರ ತರಲು ದಲಿತ ಕಾವ್ಯ-ಬಂಡಾಯ ಕಾವ್ಯ ಪ್ರಕಾರ ಹುಟ್ಟಿ ಕೊಂಡಿತು. ದಲಿತ ಸಾಹಿತ್ಯದಲ್ಲಿ ಸಹಜವಾಗಿ ಬಂಡಾಯ ಸಾಹಿತ್ಯವಿರುತ್ತದೆ. ಆದರೆ ಬಂಡಾಯ ಕಾವ್ಯದಲ್ಲಿ ದಲಿತ ಭಾವನೆ ಇದ್ದೇ ಇರುವುದೆಂದು ಹೇಳುವಂತಿಲ್ಲ. ಇದು ನವ್ಯದ ಲಕ್ಷಣಕ್ಕೆ ವಿರುದ್ಧವಾಗಿ ಗೇಯತೆ ಅಥವಾ ಏರಿದ ದನಿಯಲ್ಲಿ ಹಾಡುವ ಪದ್ಯಗಳಾಗಿರುತ್ತವೆ. ಸಾಮಾನ್ಯವಾಗಿ ಇವು ಸಾಮಾಜಿಕ ಅಸಮಾನತೆ, ಶೋಷಣೆಯ ಪ್ರತಿಭಟನೆ ವಿಷಯಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ: ಜನಪದರು ಹೇಳುವ ಹಾಗೆ :
ಬಡವರು ಸತ್ತಾರೆ ಸುಡಲೀಕೆ ಸೌದಿಲ್ಲೋ
ಒಡಲ ಬೆಂಕೀಲೆ ಹೆಣ ಬೆಂದೋ
ಒಡಲ ಬೆಂಕೀಲೆ ಹೆಣ ಬೆಂದೋ
ದೇವಾರೆ ಬಡವರಿಗೆ ಸಾವಾ ಕೊಡಬ್ಯಾಡ - ಇದು ಅನೇಕ ಲೇಖಕ/ಲೇಖಕಿಯರನ್ನು ಪ್ರಭಾವಿಸಿದೆ.

ಆಧುನಿಕ ಸಾಹಿತ್ಯ ಮತ್ತು ಪ್ರತಿಭಟನೆ[ಬದಲಾಯಿಸಿ]

 • ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಸಾಹಿತ್ಯ ಸಾಮಾನ್ಯವಾಗಿ ಪ್ರತಿಭನೆಯ ಸಾಹಿತ್ಯವೇ ಆಗಿದೆ. ಈ ನವೋದಯ, ನವ್ಯ , ದಲಿತ, ಬಂಡಾಯ ಕಾವ್ಯಗಳು ಒಂದು ಆದ ನಂತರ ಮತ್ತೊಂದು ಕ್ರಮವಾಗಿ ಆಯಿತೆಂದು ಹೇಳಲು ಬರುವುದಿಲ್ಲ. ಒಂದರ ಕೊರತೆಯನ್ನು ಇನ್ನೊಂದು ತುಂಬುತ್ತಾ ಕೆಲವೊಮ್ಮೆ ಜೊತೆ ಜೊತೆಯಾಗಿ ಹೊರಹೊಮ್ಮಿವೆ. ಇವು ಒಂದಕ್ಕೊಂದು ಪೂರಕವಾಗಿ ಆಧುನಿಕ ಕನ್ನಡ ಕಾವ್ಯ ಪರಂಪರೆಯನ್ನು ರೂಪಿಸಿದವು ಎನ್ನಬಹುದು.
 • ಈಗಲೂ ನವೋದಯ, ನವ್ಯ, ದಲಿತ ಕಾವ್ಯ, ಬಂಡಾಯ ಇವು ಒಟ್ಟಿಗೆ ಇವೆ. ಈ ಪರಂಪರೆಗೆ ಹಿಂದಿನ ಹಳೆಗನ್ನಡ, ನಡುಕನ್ನಡ ದ ಒಂದು ಸಾವಿರ ವರ್ಷದ ಕನ್ನಡ ಇತಿಹಾಸದ ಪರಂಪರೆ ಸೇರಿದೆ ಮತ್ತು ಜೊತೆ ಜೊತೆ ಇವೆ. ಪಂಪನ ಚಂಪೂ, ಬಸವಣ್ಣವಚನ, ಕುಮಾರವ್ಯಾಸಷಟ್ಪದಿ, ಸರ್ವಜ್ಞತ್ರಿಪದಿ ಇವೆಲ್ಲವೂ ಇದರೊಡನೆ ಸಂಬಂಧಿಸಿದೆ. ಹೊಸ ಚಿಗುರು, ಹಳೆ ಬೇರು ಎಂಬಂತೆ ಹಳತು ಹೊಸತಕ್ಕೆ ಪೂರಕವಾಗಿದೆ. ಕಾವ್ಯದಲ್ಲಿ ಈ ಪ್ರತಿಭಟನೆಯ ದನಿ ಮೊದಲಿಂದಲೂ ಇದ್ದೇ ಇದೆ. ವಚನಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು.

ಕನ್ನಡ ಸಾಹಿತ್ಯ ಮತ್ತು ಸ್ಥೂಲ ವಿಂಗಡಣೆ

 • ಈ ಆಧುನಿಕ ಕನ್ನಡವನ್ನು ಮೂರು ವಿಧವಾಗಿ ವಿಂಗಡಿಸಬಹುದು.
 • ವಸಾಹತು ಪೂರ್ವಕಾಲ ;
 • ವಸಾಹತು ಇದ್ದಕಾಲ ;
 • ನಂತರದ ಸ್ವತಂತ್ರ ಉಪಭೋಗದ ಸಂಸ್ಕೃತಿಯ ಕಾಲ.
 • ಆಯಾ ಕಾಲಕ್ಕೆ ತಕ್ಕಂತೆ ಕಾವ್ಯವು ಪ್ರತಿಸ್ಪಂದಿಸಿದೆ. ಆಧುನಿಕ ಸಾಹಿತ್ಯಕ್ಕೆ ಪಶ್ಚಿಮದ ಅದರಲ್ಲೂ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಹೆಚ್ಚಿನದು. ಪಾಶ್ಚಾತ್ಯದ ರೊಮ್ಯಾಂಟಿಕ್ ; ಮಾಡರ್ನಿಸ್ಟ್ ; ಮಾರ್ಕಿಸ್ಟ್ ; ಫೆಮಿನಿಸ್ಟ್ ; ಮೊದಲಾದ ಪ್ರಕಾರಗಳೊಂದಿಗೆ ಸಂವಾದ ನಡೆಸುತ್ತಾ ಆಧುನಿಕ ಕನ್ನಡ ಕಾವ್ಯ ರೂಪುಗೊಂಡಿದೆ.

ಕನ್ನಡ ಕಾವ್ಯದ ಸುವರ್ಣಯುಗ

 • ಇಪ್ಪತ್ತನೆಯ ಶತಮಾನ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯದ ಸುವರ್ಣಯುಗ. ಏಕೆಂದರೆ ಈ ಕಾಲದಲ್ಲಿ ಕಂಡಷ್ಟು ವೈವಿಧ್ಯತೆಯನ್ನೂ, ಬೆಳವಣಿಗೆಗಳನ್ನೂ ಕನ್ನಡಕಾವ್ಯ ಯಾವ ಕಾಲದಲ್ಲೂ ಕಂಡಿರಲಿಲ್ಲ. ಈ ಕಾಲದಲ್ಲೂ, ಮಹಾಕಾವ್ಯಗಳು, ಶೃಂಗಾರ ಕಾವ್ಯಗಳು, ದೀರ್ಘ ಕಥಾ ಕವನಗಳು, ಭಾವಗೀತೆಗಳು, ಹೊಸ ಛಂದಸ್ಸಿನ (ಸಾನೆಟ್) ಕವನ-ಗದ್ಯ-ಕಾವ್ಯಗಳು, ಗೀತೆಗಳು (ಕೆಲವು ಸಿನೇಮಾದ ಗೀತೆಗಳೂ ಉತ್ತಮ ಸಾಹಿತ್ಯ ಹೊಂದಿವೆ), ಹನಿಗವನಗಳು, ಕಗ್ಗಗಳು, ಚುಟುಕಗಳು, ಗೀತ ನಾಟಕಗಳು ರಚನೆಯಾಗಿವೆ.[೫][೬]

ನೋಡಿ[ಬದಲಾಯಿಸಿ]

ಆಧಾರ ಮತ್ತು ಉಲ್ಲೇಖ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. [http://www.ijcrt.org/papers/IJCRT1704274.pdf MODERN KANNADA NAVODAYA LITERATURE;Dr. Y. A. DEVARUSHI;Assistant professor;Kannada Dept,C.B.College BHALKI,Dist: BIDAR, Karnatak]
 2. [[೧]] Modernism in Kannada LiteratureBy Tharakeshwar, V. B. Article
 3. `ನವ್ಯ ಸಾಹಿತ್ಯ': ಭೂತದಿಂದ ವರ್ತಮಾನದವರೆಗೂ...;ಶೂದ್ರ ಶ್ರೀನಿವಾಸ್;d: 05 ಮೇ 2013,[ಶಾಶ್ವತವಾಗಿ ಮಡಿದ ಕೊಂಡಿ]
 4. https://kn.wikisource.org/s/ryc ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲಕೃಷ್ಣ ಅಡಿಗ, ಎಂ
 5. ಉಪನ್ಯಾಸಕರು, ಶ್ರೀ ಬಿ.ಎನ್.ನಾಗರಾಜ ಭಟ್ಟರ ಕಾವ್ಯಗರ್ಭ-ವಿಮರ್ಶಾಗ್ರಂಥ
 6. https://kn.wikisource.org/s/92v ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ನವ್ಯಕಾವ್ಯ