ವಿಷಯಕ್ಕೆ ಹೋಗು

ಬಿ. ಎಂ. ಶ್ರೀಕಂಠಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬಿ.ಎಂ.ಶ್ರೀ ಇಂದ ಪುನರ್ನಿರ್ದೇಶಿತ)
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

ಜನನ: ಜನವರಿ ೩, ೧೮೮೪
ಜನನ ಸ್ಥಳ: ಬೆಳ್ಳೂರು , ನಾಗಮಂಗಲ ತಾಲ್ಲೂಕಿನ , ಮಂಡ್ಯ ಜಿಲ್ಲೆ, ಕರ್ನಾಟಕ.
ನಿಧನ:ಜನವರಿ ೫, ೧೯೪೬
ಬೆಂಗಳೂರು, ಕರ್ನಾಟಕ
ವೃತ್ತಿ: ಕವಿ, ಸಾಹಿತಿ, ನಾಟಕಕಾರ
ರಾಷ್ಟ್ರೀಯತೆ:ಭಾರತೀಯ
ಸಾಹಿತ್ಯದ ವಿಧ(ಗಳು):ಕಾಲ್ಪನಿಕ
ಸಾಹಿತ್ಯ ಶೈಲಿ:ನವೋದಯ ಸಾಹಿತ್ಯ
ಪ್ರಮುಖ ರಚನೆಗಳು:'ಇಂಗ್ಲೀಷ್ ಗೀತಗಳು' ಬಹಳ ಹುಲುಸಾದ 'ಗೀತ ಗುಚ್ಛ'

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ನವೋದಯದ ಪ್ರವರ್ತಕ ಮತ್ತು ಕವಿ ,ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಧಾರವಾಡದಲ್ಲಿ ೧೯೧೧ ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗ ಪ್ರವರ್ತಕ ಕನ್ನಡ ಭಾಷಣವನ್ನು ಮಾಡಿದರು. ಜನವಾಣಿ ಬೇರು ಕವಿವಾಣಿ ಹೂವು ಎಂದು ಗರತಿಯ ಹಾಡುಗಳು ಕೃತಿಯ ಮುನ್ನುಡಿಯಲ್ಲಿ ಪ್ರಸಿದ್ಧಿ ಹೇಳಿಕೆ ಇದೆ.

ಬಾಲ್ಯ ಜೀವನ

[ಬದಲಾಯಿಸಿ]

ಬಿ.ಎಂ.ಶ್ರೀಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪಟ್ಟಣದಲ್ಲಿ ೧೮೮೪ರ ಜನವರಿ ೩ ರಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ೧೯೦೬ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ೧೯೦೭ರಲ್ಲಿ ಮದರಾಸು ವಿವಿಯಲ್ಲಿ ಬಿ.ಎಲ್. ಪದವಿ, ೧೯೦೯ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ೧೯೩೦ರಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ೧೯೨೬-೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು. ೧೯೩೮-೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]
ಮಹಾರಾಜ ಕಾಲೇಜು, ಮೈಸೂರು
ಸೆಂಟ್ರಲ್ ಕಾಲೇಜು, ಬೆಂಗಳೂರು

ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾದರು.ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್‌'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೇಜ್' ಗೆ 'ಪ್ರಾಂಶುಪಾಲಕ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು. 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್.ವಿ.ರಂಗಣ್ಣ', 'ತೀ.ನಂ. ಶ್ರೀಕಂಠಯ್ಯ', 'ಜಿ.ಪಿ.ರಾಜರತ್ನಂ', 'ಡಿ.ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದರು.

ಅಶ್ವತ್ಥಾಮನ್ ನಾಟಕ

[ಬದಲಾಯಿಸಿ]

ಅಶ್ವತ್ಥಾಮನ್:- ಕನ್ನಡ ಸಾಹಿತ್ಯದ ಮೊಟ್ಟಮೊದಲ ರುದ್ರ ನಾಟಕ. [] ಗ್ರೀಸ್ ದೇಶದ ಅನೇಕ ನಾಟಕಗಳ ಕಥೆ ಪುರಾಣ ಪುರುಷರನ್ನು ಕುರಿತದ್ದು. ಅಂಥ ನಾಟಕಗಳಲ್ಲಿ ಏಜಾಕ್ಸ್ ಎಂಬುದು ಒಂದು ಪ್ರಸಿದ್ಧ ನಾಟಕ. ಆ ನಾಟಕವನ್ನು ಬರೆದವನು ಸಾಫೋಕ್ಲೀಸ್; ಗ್ರೀಸ್ ದೇಶದ ಮಹಾ ನಾಟಕಕಾರರಲ್ಲಿ ಒಬ್ಬ. ಸುಮಾರು ೨,೪೦೦ ವರ್ಷಗಳ ಹಿಂದೆ ಇದ್ದ. ನಮ್ಮ ಮಹಾಭಾರತದಲ್ಲಿ ಬರುವ ಅನೇಕ ಸಂದರ್ಭಗಳು, ಘಟನೆಗಳು ಆ ನಾಟಕದಲ್ಲೂ ಬರುತ್ತವೆ. ಆ ನಾಟಕವನ್ನು ಓದಿ ಮೆಚ್ಚಿಕೊಂಡಿದ್ದ ’ಶ್ರೀ’ ಅವರು, ಅದನ್ನು ಆಧರಿಸಿಕೊಂಡು ’ಅಶ್ವತ್ಥಾಮನ್’ ನಾಟಕವನ್ನು ರಚಿಸಿದರು. ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ. ಈತನನ್ನು ಕುರಿತದ್ದು ಈ ನಾಟಕದ ಕಥೆ. ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ. ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ. ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ. ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ. ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ’ಅಶ್ವತ್ಥಾಮನ್’ ನಾಟಕವೂ ಒಂದು ರುದ್ರನಾಟಕವೇ.

ಕನ್ನಡದ ಕಣ್ವ
  • ಅವರನ್ನು ಕನ್ನಡ ಜನ ಅಭಿಮಾನದಿಂದ ’ಕನ್ನಡದ ಕಣ್ವ’ ಎಂದು ಕರೆದರು. ಪುರಾಣದ ಕಥೆಯಲ್ಲಿ ಶಕುಂತಳೆ, ವಿಶ್ವಾಮಿತ್ರ-ಮೇನಕೆಯರ ಮಗಳು. ತಂದೆ-ತಾಯಿ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದರು. ಆ ಅನಾಥ ಮಗುವನ್ನು ಪ್ರೀತಿಯಿಂದ ಬೆಳೆಸಿದವರು ಮಹರ್ಷಿ ಕಣ್ವರು. ಮಗು ಶಕುಂತಳೆಯಂತೆ ನೋಡಿಕೊಳ್ಳುವವರು ಇಲ್ಲದಿದ್ದಾಗ ಕನ್ನಡವನ್ನು ಬೆಳೆಸಿದವರು ’ಶ್ರೀ’ ಅವರು ಎಂದು ಜನ ಅವರಿಗೆ ಹೀಗೆ ಗೌರವ ತೋರಿಸಿದರು.
  • ಅವರ ಕಾಲದಲ್ಲಿ ಹಿಂದೆ ಕನ್ನಡನಾಡಿನಲ್ಲೂ ಕನ್ನಡವನ್ನು ಕೇಳುವವರಿರಲಿಲ್ಲ. ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ.
  • ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತನಾಡುವುದು ಹಾಸ್ಯಕ್ಕೆ ವಸ್ತುವಾಗಿತ್ತು.
  • ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆ ಮೂಲೆಗಳನ್ನೂ ಸುತ್ತಿದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. ಹೀಗೆ ಕನ್ನಡ ಅನಾಥವಾಗಿದ್ದಾಗ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟು, ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥ ವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ಬಿ.ಎಂ.ಶ್ರೀ, ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಯೆರೆದರು. []

", -(ಕಣಜ)

ಇಂಗ್ಲೀಷ್ ಗೀತಗಳು

[ಬದಲಾಯಿಸಿ]

ಬಿ.ಎಂ.ಶ್ರೀ.ರವರು ಇಂಗ್ಲಿಷ್ ಗೀತಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇದು ಹಲವು ಇಂಗ್ಲೀಷ್ ಕವಿತೆಗಳ ಸೊಗಸಾದ ಕನ್ನಡ ಅನುವಾದ. ಸಂಗ್ರಹದ ೬೩ ಕವಿತೆಗಳಲ್ಲಿ ೦೩ ಮಾತ್ರ ಶ್ರೀಯವರ ಸ್ವಂತಕವಿತೆಗಳು. ಕಾಣಿಕೆ ಸ್ವಂತ ಕವಿತೆ. ಅವರು ನ್ಯೂಮನ್ ಕವಿ ಬರೆದ 'Lead Kindly Light' ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.

ಕರುಣಾಳು, ಬಾ, ಬೆಳಕೆ,-
ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ;
ಕನಿಕರಿಸಿ;
ಕೈ ಹಿಡಿದು ನಡೆಸೆನ್ನನು.- ಇತ್ಯಾದಿ
  • ಕಾಣಿಕೆ -ಶ್ರೀಯವರ ಸ್ವಂತ ರಚನೆಯಾಗಿದೆ.ಪದ್ಯ
    ಇವಳ ಸೊಬಗನವಳು‌ ತೊಟ್ಟು
    ನೋಡ ಬಯಸಿದೆ
    ಅವಳ ತೊಡಿಗೆ ಇವಳಿಗಿಟ್ಟು
    ಹಾಡು ಬಯಸಿದೆ.

ಕವನ ಸಂಕಲನಗಳು

[ಬದಲಾಯಿಸಿ]
  • ಇಂಗ್ಲೀಷ್ ಗೀತಗಳು (೧೯೨೬)
  • ಹೊಂಗನಸುಗಳು (೧೯೪೩).

ನಾಟಕಗಳು

[ಬದಲಾಯಿಸಿ]
  • ಗದಾಯುದ್ಧ ನಾಟಕಂ(೧೯೨೬).
  • ಅಶ್ವತ್ಥಾಮನ್(೧೯೨೯).
  • ಪಾರಸಿಕರು(೧೯೩೫)

ಸಂಪಾದಿತ ಕೃತಿ

[ಬದಲಾಯಿಸಿ]
  • ಕನ್ನಡದ ಬಾವುಟ(೧೯೩೬)

ಇತರೆ ಕೃತಿಗಳು

[ಬದಲಾಯಿಸಿ]
  • ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ.
  • ಕನ್ನಡ ಛಂದಸ್ಸಿನ ಚರಿತ್ರೆ.
  • ಕನ್ನಡ ಸಾಹಿತ್ಯ ಚರಿತ್ರೆ.
  • ಕನ್ನಡ ಮಾತು ತಲೆ ಎತ್ತುವ ಬಗ್ಗೆ.
  • ಇಸ್ಲಾಂ ಸಂಸ್ಕೃತಿ.
  • A Hand book of Rhetoric.
  • Miscellaneous.

ಅಭಿನಂದನ ಗ್ರಂಥ

[ಬದಲಾಯಿಸಿ]
  • ಸಂಭಾವನೆ.

ಪ್ರಶಸ್ತಿಗಳು

[ಬದಲಾಯಿಸಿ]

ಬಿ.ಎಂ.ಶ್ರೀಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '೧೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.[]

೧೯೪೬ರಲ್ಲಿ 'ಪ್ರೊ.ಬಿ.ಎಂ.ಶ್ರೀ'ರವರು, 'ಧಾರವಾಡ'ದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ನಿಧನರಾದರು.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ಎಷ್ಟು ದೊಡ್ಡದು ಎಂಬ ಬಗ್ಗೆ ತಿಳಿಯಲು 'ಡಾ. ಎ.ಎನ್.ಮೂರ್ತಿರಾಯರ' 'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ'ಬಿ.ಎಂ.ಶ್ರೀ' ಎಂಬ ಶೀರ್ಷಿಕೆಯಲ್ಲಿ ಪುಟ. ೩೩೭ ರಲ್ಲಿ ಅವರು ದಾಖಲಿಸಿದ ಸಮಗ್ರ ಚಿತ್ರಣ ಬಿ.ಎಂ.ಶ್ರೀಕಂಠಯ್ಯನವರ ಸಂಪೂರ್ಣವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಡಾ. ಮೂರ್ತಿರಾಯರು ೧೯೨೬ ರಲ್ಲಿ ಪ್ರಕಟವಾದ ಇಂಗ್ಲೀಷ್ ಗೀತಗಳು, ಎಂದು ಬರೆದಿದ್ದಾರೆ. ಬಿ.ಎಂ.ಶ್ರೀ.ರವರ ಪ್ರಕಟಿತ ಪುಸ್ತಕದ ಮಾರಾಟದ ವೆಬ್ಸೈಟ್ ನಲ್ಲಿಯೂ ಇಂಗ್ಲೀಷ್ ಗೀತಗಳು ಎಂತಲೇ ಇದೆ. ಆದರೆ 'ಕರ್ನಾಟಕ ಸಂಸ್ಕೃತಿ ಇಲಾಖೆಯವರ ಸೈಟ್' ನಲ್ಲಿ ಇಂಗ್ಲೀಷ್ ಗೀತೆಗಳು ಎಂದು ಕೊಟ್ಟಿದ್ದಾರೆ.
  • ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಕಂಠಯ್ಯ, ಬಿ.ಎಂ

ಉಲ್ಲೇಖ

[ಬದಲಾಯಿಸಿ]
  1. rangamahotsava, Ashwatthaman[ಶಾಶ್ವತವಾಗಿ ಮಡಿದ ಕೊಂಡಿ]
  2. kanaja.in/?s=ಬಿ.ಎಂ.ಶ್ರೀಕಂಠಯ್ಯ
  3. http://kannadasahithyaparishattu.in/?p=417

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ‘ಕನ್ನಡದ ಕಣ್ವ’ನ ನೆನೆಯುತ್ತಾ ... ಕಾರಿಹೆಗ್ಗಡೆ ಮಗಳಿಗೊಂದು ಹನಿ.. March 13, 2002 -Rohini Philly
  2. ಶ್ರೀಕಂಠಯ್ಯ ಬಿ.ಎಂ.೧೮೮೪-೧೯೪೬ Archived 2020-09-29 ವೇಬ್ಯಾಕ್ ಮೆಷಿನ್ ನಲ್ಲಿ.