ಗಜಪತಿ ಸಾಮ್ರಾಜ್ಯ
ಗಜಪತಿ ಸಾಮ್ರಾಜ್ಯವು[೧][೨] ಸೂರ್ಯವಂಶ ರಾಜವಂಶದಿಂದ[೩][೪][೫] ಸ್ಥಾಪಿಸಲ್ಪಟ್ಟ ಒಂದು ಸಾಮ್ರಾಜ್ಯ. ಈ ರಾಜವಂಶ 15-16ನೆಯ ಶತಮಾನಗಳಲ್ಲಿ ಒರಿಸ್ಸದಲ್ಲಿ ಸ್ವತಂತ್ರವಾಗಿ ಆಳಿದ ರಾಜಮನೆತನಗಳಲ್ಲಿ ಒಂದು.
ಉಗಮ
[ಬದಲಾಯಿಸಿ]ಈ ರಾಜಮನೆತನ ಅಸ್ತಿತ್ವಕ್ಕೆ ಬರುವ ಮೊದಲು ಪೂರ್ವದ ಗಂಗರು ಒರಿಸ್ಸದಲ್ಲಿ ಅಧಿಪತಿಗಳಾಗಿದ್ದರು. ಆ ವಂಶದ ಕೊನೆಯ ಅರಸನಾದ ನಾಲ್ಕನೆಯ ಭಾನುದೇವ, ರಾಜಮಹೇಂದ್ರದ ರೆಡ್ಡಿ ಮನೆತನಕ್ಕೆ ಸೇರಿದ ವೇಮಾರೆಡ್ಡಿ ಮತ್ತು ವೀರಭದ್ರಾರೆಡ್ಡಿಯವರ ವಿರುದ್ಧ ದಂಡೆತ್ತಿಹೋಗಿ ಅವರಿಂದ ಸೋಲಿಸಲ್ಪಟ್ಟ (ಸು.1430).ಆದರೆ ಆತನಿಗೆ ಸ್ವರಾಜ್ಯಕ್ಕೆ ಹಿಂದಿರುಗಿ ಬರಲು ಆಸ್ಪದವಿರಲಿಲ್ಲ. ಇದಕ್ಕೆ ಗಜಪತಿ ವಂಶದ ಕಪಿಲೇಶ್ವರನೇ ಕಾರಣ. ಈತ ಭಾನುದೇವನ ಮಂತ್ರಿಗಳಲೊಬ್ಬನಾಗಿದ್ದ. ಅರಸನು ರಾಜ್ಯದ ಹೊರಗಡೆ ಕದನ ನಿರತನಾಗಿದ್ದಾಗ, ಈತ ಕಳಿಂಗದಲ್ಲಿ ತನ್ನ ಅನುಯಾಯಿಗಳ ಸಹಾಯದಿಂದ ದಂಗೆಯನ್ನೆಬ್ಬಿಸಿ, ಗಂಗರ ರಾಜ್ಯಕ್ಕೆ ತಾನೇ ಅಧಿಪತಿಯೆಂದು ಸಾರಿಕೊಂಡ. ಭಾನುದೇವನ ಗತಿ ಏನಾಯಿತು ಎಂಬುದು ತಿಳಿಯದು. ಮಾದಲಾಪಾಂಜಿ ಎಂಬ ಪ್ರಾಚೀನ ಕವಿತೆಯಲ್ಲಿ ಕಪಿಲೇಶ್ವರನನ್ನು ಕುರಿತು ಕೆಲವು ವಿವರಗಳಿವೆ. ಈತ ಅನಾಥ ಬಾಲಕನಾಗಿದ್ದನೆಂದೂ ಮಕ್ಕಳಿಲ್ಲದ ಭಾನುದೇವನಿಗೆ ವಿಮಲಾಲಯದ ಸಮೀಪದಲ್ಲಿ ದೊರೆತನೆಂದೂ ಈತನನ್ನು ಭಾನುದೇವ ಪೋಷಿಸಿದನೆಂದು, ಭಾನುದೇವನ ಅನಂತರ ಸಹಜವಾಗಿಯೇ ಇವನು ರಾಜನಾದನೆಂದೂ ಹೇಳಿದೆ. ಆದರೆ ಇದನ್ನು ನಂಬಲು ಆಧಾರಗಳಿಲ್ಲ. ಕಪಿಲೇಶ್ವರನ ಮೊಮ್ಮಗನಾದ ಪ್ರತಾಪರುದ್ರ ಬರೆದನೆನ್ನಲಾದ ಸರಸ್ವತೀ ವಿಲಾಸದಲ್ಲೂ, ಈ ವಂಶದ ಅರಸರ ಶಾಸನಗಳಲ್ಲೂ ಹೇಳಿರುವ ವಿವರಗಳು ಇದಕ್ಕಿಂತ ಭಿನ್ನವಾದಂಥವು. ಅವುಗಳ ಪ್ರಕಾರ ಈ ಮನೆತನದ ಅರಸರು ಸೂರ್ಯವಂಶಕ್ಕೆ ಸೇರಿದವರು. ಕಪಿಲೇಶ್ವರನ ತಂದೆ ಜಾಗೇಶ್ವರ. ತಾತ ಕಪಿಲೇಶ್ವರ. ಕಪಿಲೇಶ್ವರನಿಗೆ ಬಲರಾಮನೆಂಬ ಹಿರಿಯ ಮತ್ತು ಪರಶುರಾಮನೆಂಬ ಕಿರಿಯ ಸೋದರರಿದ್ದರು. ಪರಶುರಾಮನ ಮಗ ರಘುದೇವ ನರೇಂದ್ರಕುಮಾರ ಈತನ 1456ರ ತಾಮ್ರ ಶಾಸನವೊಂದು ಇತ್ತೀಚೆಗೆ ದೊರಕಿದೆ.[೬][೭] ಇವುಗಳ ಆಧಾರದಿಂದ ಈ ವಂಶಾವಳಿಯನ್ನು ಹೀಗೆ ರಚಿಸಲಾಗಿದೆ:
ಕಪಿಲೇಶ್ವರ ಜಾಗೇಶ್ವರ ಬಲರಾಮ ಕಪಿಲೇಶ್ವರ ಪರುಶುರಾಮ ಪುರುಷೋತ್ತಮ ಹಂಮಿರ ರಘುದೇವನರೇಂದ್ರ ಪ್ರತಾಪರುದ್ರ ರಾಮಚಂದ್ರ ವೀರಭದ್ರ ಭದ್ರದೇವಿ (ಗಂಡ : ಕೃಷ್ಣದೇವರಾಯ)
ಕಪಿಲೇಶ್ವರ
[ಬದಲಾಯಿಸಿ]ಈ ಮನೆತನದ ಮೂಲಪುರುಷನಾದ ಕಪಿಲೇಶ್ವರ ಉತ್ಕಲದೇಶದ ಒಬ್ಬ ನಾಯಕನಾಗಿದ್ದ. ಅಂತೆಯೇ ತಂದೆಯಾದ ಜಾಗೇಶ್ವರ ಸಹ ಮಹಾಪರಾಕ್ರಮಶಾಲಿಯಾಗಿದ್ದ. ಇವರ ಅನುಯಾಯಿಗಳ ಬೆಂಬಲದಿಂದ ಭಾನುದೇವ ರಾಜಧಾನಿಯಲ್ಲಿಲ್ಲದ ಸಮಯವನ್ನು ಸಾಧಿಸಿ ಕಪಿಲೇಶ್ವರನು ರಾಜ್ಯವನ್ನು ಕಸಿದುಕೊಂಡನೆಂದು ತೋರುತ್ತದೆ. ಅಧಿಕಾರಕ್ಕೆ ಬಂದ ಆರಂಭದಲ್ಲಿ ಭಾನುದೇವನ ಸಹಾಯಕ್ಕೆ ಬಂದ ಪೂರ್ವ ಚಾಳುಕ್ಯ ವಂಶದ ವಿಷ್ಣುವರ್ಧನ ಮುಂತಾದವರನ್ನು ಹಿಮ್ಮೆಟ್ಟಿಸಿ, ದಂಡೆತ್ತಿಬಂದ ಬಂಗಾಳದ ಸುಲ್ತಾನನನ್ನು ಹೊಡೆದೋಡಿಸಿ, ತನ್ನ ಅಧಿಕಾರವನ್ನು ಬಲಪಡಿಸಿಕೊಂಡ.
ಆರಂಭದಲ್ಲಿಯ ಈ ತೊಂದರೆಗಳನ್ನು ನೀಗಿಕೊಂಡ ಬಳಿಕ ಕಪಿಲೇಶ್ವರ ದಕ್ಷಿಣದಲ್ಲಿ ವಿಜಯಯಾತ್ರೆಗೆ ಹೊರಟ. 1444ರಲ್ಲಿ ವಿಶಾಖಪಟ್ಟಣದ ಸಮೀಪದ ಕೊರುಕೊಂಡ ದುರ್ಗವನ್ನು ವಶಪಡಿಸಿಕೊಂಡನಾದರೂ ರೆಡ್ಡಿಗಳು ಅವನನ್ನು ಧೈರ್ಯದಿಂದ ಎದುರಿಸಿ ಹಿಮ್ಮಟ್ಟಿಸಿದರು. ವಿಜಯನಗರದ ಇಮ್ಮಡಿ ದೇವರಾಯ ರಾಜಮಹೇಂದ್ರದ ರೆಡ್ಡಿಗಳಿಗೆ ಆಗ ಸಹಾಯ ನೀಡಿದ್ದ. ಇದೇ ಸಮಯದಲ್ಲಿ ಜೌನ್‌ಪುರದ ಷರ್ಕಿ ಸುಲ್ತಾನನಾದ ಮಹಮ್ಮದ್ ಷಹ ಕಳಿಂಗದ ಮೇಲೆ ದಂಡೆತ್ತಿದುದು ಸಹ ಕಪಿಲೇಶ್ವರ ಹಿಮ್ಮೆಟ್ಟಲು ಒಂದು ಕಾರಣವಾಗಿತ್ತು. ದೇವರಾಯನ ಮರಣದಿಂದ (1446) ರೆಡ್ಡಿಗಳ ಶಕ್ತಿ ಕುಗ್ಗಿತು. ಇದರ ಫಲವಾಗಿ ಕಳಿಂಗಾಧಿಪತಿ ಇನ್ನೊಮ್ಮೆ ರೆಡ್ಡಿಗಳ ಮೇಲೇರಿ ಹೋಗಿ ರಾಜಮಹೇಂದ್ರವರವನ್ನು ಆಕ್ರಮಿಸಿದ. ಇದರಲ್ಲಿ ಇವನ ಮಗ ಹಂಮೀರ ಹಾಗೂ ಸೋದರನ ಮಗ ರಘುದೇವಕುಮಾರ ಮಹತ್ವವಾದ ಪಾತ್ರ ವಹಿಸಿದರು. ಹೊಸದಾಗಿ ಆಕ್ರಮಿಸಲಾದ ರಾಜಮಹೇಂದ್ರ ಪ್ರದೇಶದ ಅಧಿಕಾರಿಯಾಗಿ ರಘುದೇವ ನೇಮಕ ಹೊಂದಿದ. ಕಪಿಲೇಶ್ವರ ಅನಂತರ ಸುಮಾರು ಹತ್ತು ವರ್ಷಗಳವರೆಗೂ ಶಾಂತಿಯಿಂದ ರಾಜ್ಯಪಾಲನೆ ಮಾಡಿಕೊಂಡಿದ್ದು 1455ರಲ್ಲಿ ಪುನಃ ದಕ್ಷಿಣದ ಕಡೆ ಹೊರಟು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಕೊಂಡವೀಡು ಕೋಟೆಯನ್ನು ವಶಪಡಿಸಿಕೊಂಡು ಅಲ್ಲಿ ಗಣದೇವನನ್ನು ತನ್ನ ಪ್ರತಿನಿಧಿಯಾಗಿ ನೆಲೆಗೊಳಿಸಿದ. ಈತ ಈ ಸಂದರ್ಭದಲ್ಲಿ ಹಂಪೆಯನ್ನು ಸೂರೆಮಾಡಿದನೆಂದು ಗಂಗಾಧರನ ಗಂಗಾದಾಸಪ್ರತಾಪವಿಲಾಸದಲ್ಲಿ ಹೇಳಿದೆ.
ಬಹಮನಿ ರಾಜ್ಯದಲ್ಲಿ ಇವನ ಸಮಕಾಲೀನ ಹುಮಾಯುನ್ ಷಹ ಆಗಿದ್ದನು. ಆತನ ಕಾಲದಲ್ಲಿ ರಾಜ್ಯದಲ್ಲಿ ತಲೆ ಎತ್ತಿದ ವಿಪ್ಲವದಿಂದಾಗಿ ಹಂಮೀರ ತೆಲಂಗಾಣವನ್ನು ಆಕ್ರಮಿಸಲು ಎಡೆ ದೊರಕಿತು. ಬಹಮನಿಯ ವಶದಲ್ಲಿದ್ದ ಓರುಗಲ್ಲು ಕೋಟೆ 1460ರಲ್ಲಿ ಇವನ ವಶವಾಯಿತು. 1461ರಲ್ಲಿ ಹುಮಾಯೂನ ಮರಣ ಹೊಂದಿದ. ಮರುವರ್ಷ ಹಂಮೀರ ಬಿದರೆಯನ್ನು ಮುತ್ತಿದನಾದರೂ ಮಹಮೂದ್ ಗವಾನ ಇವನನ್ನು ಎದುರಿಸಿ ಓಡಿಸಿದ.[೮][೯] ಅಲ್ಲಿಂದ ಹಿಂದಿರುಗಿದ ಹಂಮೀರ ವಿಜಯನಗರದ ಮೇಲೆ ದಂಡೆತ್ತಿದ. ಇವನನ್ನು ವಿರೋಧಿಸುವ ಸಾಮರ್ಥ್ಯ ಮಲ್ಲಿಕಾರ್ಜುನನಿಗೆ ಇರಲಿಲ್ಲ. ಉದಯಗಿರಿ, ಚಂದ್ರಗಿರಿ ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡು ತಿರುಚಿನಾಪಳ್ಳಿಯ ಶ್ರೀರಂಗದವರೆಗೂ ತಡೆಯಿಲ್ಲದೆ ನಡೆದ ಹಂಮೀರ ರಕ್ತಸಿಕ್ತವಾದ ಖಡ್ಗಗಳನ್ನು ದಕ್ಷಿಣ ಸಮುದ್ರದಲ್ಲಿ ತೊಳೆದನೆಂದು ಶಾಸನಗಳು ಅವನನ್ನು ಹೊಗಳಿವೆ. ಈ ವಿಜಯಗಳ ಫಲವಾಗಿ ಕಪಿಲೇಶ್ವರನು ಗಜಪತಿ ಗೌಡೇಶ್ವರ ನವಕೋಟಿ ಕರ್ಣಾಟಕಲು ಬರಿಗೇಶ್ವರನೆಂಬ ಬಿರುದನ್ನು ಧರಿಸಿದ (1464).
ಇಷ್ಟೆಲ್ಲ ವಿಜಯಗಳಿಂದ ಕಳಿಂಗ ರಾಜ್ಯವನ್ನು ಬಲಪಡಿಸಿ ಅದರ ಕೀರ್ತಿ ಹರಡುವಂತೆ ಮಾಡಿದ ಕಪಿಲೇಶ್ವರ ತನ್ನ ಅಂತಿಮ ಕಾಲದಲ್ಲಿ ಉತ್ತರಾಧಿಕಾರಿಯನ್ನು ಕುರಿತು ಚಿಂತಿಸಬೇಕಾಯಿತು. ಹಿರಿಯನಾದ ಹಂಮಿರನಂತೆಯೇ ಕಿರಿಯನಾದ ಪುರುಷೋತ್ತಮನು ಪರಾಕ್ರಮಶಾಲಿಯಾಗಿದ್ದ. ಬಹುಶಃ ರಾಜನ ಒಲವು ಪುರುಷೋತ್ತಮನ ಮೇಲೆ ಹೆಚ್ಚಾಗಿತ್ತು. ಅವನಿಗೇ ಯುವರಾಜ ಪದವಿ ನೀಡಬೇಕೆಂದು ಜಗನ್ನಾಥದೇವರು ಇವನಿಗೆ ಸ್ವಪ್ನದಲ್ಲಿ ಸೂಚಿಸಿದನೆಂದು ಪ್ರತೀತಿ. ಹಂಮಿರ ದಂಗೆ ಏಳಲು ಇದು ನಿಮಿತ್ತವಾಯಿತು. ಈ ಅಂತಃ ಕಲಹದ ಸುಸಂಧಿಯನ್ನು ಸಾಧಿಸಿ ಚಂದ್ರಗಿರಿ ಮುಂತಾದ ಪ್ರದೇಶಗಳನ್ನು ಹಂಮಿರನಿಂದ ಮುಕ್ತಗೊಳಿಸಿ, ವಿಜಯನಗರಕ್ಕೆ ಸೇರಿದ ಇತರ ಕೋಟೆಗಳನ್ನೂ ಹಿಂದಕ್ಕೆ ಪಡೆಯಲು ಸಾಳುವ ನರಸಿಂಹ ಹವಣಿಸಿದ. ಪುರುಷೋತ್ತಮನಿಗೆ ಬೆಂಬಲವಾಗಿ ಕಪಿಲೇಶ್ವರನು ಸೈನ್ಯವನ್ನು ಒಯ್ದು ಕೃಷ್ಣಾತೀರದಲ್ಲಿ ಬೀಡುಬಿಟ್ಟ. ಅಲ್ಲಿಯೇ ಮಗನಿಗೆ ಅಧಿಕಾರ ವಹಿಸಿದ. ರಣಾಂಗಣದಲ್ಲಿಯೇ ಕಪಿಲೇಶ್ವರ ತೀರಿಕೊಂಡ (1468).
ಪುರುಷೋತ್ತಮ
[ಬದಲಾಯಿಸಿ]ಪುರುಷೋತ್ತಮ ಅಧಿಕಾರಕ್ಕೆ ಬಂದ ಮೇಲೆ 8 ವರ್ಷಗಳ ಕಾಲ ಅಣ್ಣನಾದ ಹಂಮಿರನೊಡನೆ ಹೋರಾಡಬೇಕಾಯಿತು. ಮೊದಲು ಬಹಮನಿ ಸುಲ್ತಾನರ ಸಹಾಯದೊಡನೆ ಹಂಮಿರ ಇವನಿಗೆ ಪ್ರತಿಕೂಲವಾಗಿದ್ದನು. ಬಹಮನಿ ಸುಲ್ತಾನರ ಸಹಾಯದೊಡನೆ ಹಂಮಿರ ಇವನನ್ನು ಸೋಲಿಸಿದ. ಆದರೆ ಅನಂತರ ಪುರುಷೋತ್ತಮನ ಸ್ಥಿತಿ ಸುಧಾರಿಸಿತು. ಪುರುಷೋತ್ತಮ ದೈವಾಂಶಸಂಭೂತನೆಂಬ ಭಾವನೆ ಪ್ರಜೆಗಳಲ್ಲಿ ತಲೆದೋರಿದ್ದು ಸಹ ಇವನಿಗೆ ಅನುಕೂಲವಾಯಿತು. ಬಹಮನಿ ರಾಜ್ಯದಲ್ಲೂ ಕಲಹಗಳುಂಟಾಗಿ ಅದರ ಸಹಾಯ ಹಂಮಿರನಿಗೆ ದೊರಕದೆ ಇದ್ದದೂ ಒಂದು ಕಾರಣ. ಇವುಗಳ ಲಾಭ ಪಡೆದ ಪುರುಷೋತ್ತಮ ಅಣ್ಣನನ್ನು ಸೋಲಿಸಿ ರಾಜ್ಯವನ್ನು ಹಿಂದಕ್ಕೆ ಪಡೆದ.
ವಿಜಯನಗರ ರಾಜ್ಯಕ್ಕೆ ಸೇರಿದ್ದು ಶತ್ರುವಶವಾಗಿದ್ದ ಅನೇಕ ಪ್ರಾಂತ್ಯಗಳನ್ನು ಸಾಳುವ ನರಸಿಂಹ ಈ ಸಮಯದಲ್ಲಿ ಪುನಃ ಪಡೆದುಕೊಂಡು ಮಚಲೀಪಟ್ಟಣದವರೆಗೂ ತನ್ನ ಅಧಿಕಾರವನ್ನು ವಿಸ್ತರಿಸಿದ. ಆದರೆ ಪುರಷೋತ್ತಮ ದೊಡ್ಡ ಸೈನ್ಯದೊಡನೆ ಆಂಧ್ರಪ್ರದೇಶದ ಉತ್ತರ ಭಾಗಗಳನ್ನು ವಶಪಡಿಸಿಕೊಳ್ಳಲು ಬಂದ. ಬಹಮನಿಯ ಮಹಮ್ಮದ್ ಷಹನೂ ರಾಜಮಹೇಂದ್ರವರದ ಕೋಟೆಯನ್ನು ರಕ್ಷಿಸಲು, ನಿಜಾಂ ಉಲ್ ಮುಲ್ಕನ ಸಹಾಯಕ್ಕೆ ಧಾವಿಸಿದ. ಈ ಸೈನ್ಯಗಳು ಮುನ್ನುಗ್ಗಿದರೆ ತನಗೆ ಅನುಕೂಲವಾಗದೆಂಬುದನ್ನು ಅರಿತ ನರಸಿಂಹ ಅಲ್ಲಿಂದ ಹಿಂದಿರುಗಿದ. ಪುರುಷೋತ್ತಮನನ್ನು ಮಹಮ್ಮದ್ ಷಹ ಸೋಲಿಸಿದನೆಂದು ಫಿರಿಷ್ತ ಬರೆದಿದ್ದಾನೆ. ಆದರೆ ಮಹಮ್ಮದ್ ಷಹನ ಬಳಿಕ ಬಹಮನಿ ರಾಜ್ಯದಲ್ಲಿ ಅರಾಜಕತೆ ತಲೆದೋರಿ ಅದಿಲ್ ಷಹ, ನಿಜಾಂ ಷಹ ಮುಂತಾದ ಪ್ರಾಂತ್ಯಾಧಿಕಾರಿಗಳು ಸ್ವತಂತ್ರರಾದರು. ಇದರಿಂದಾಗಿ ವಿಜಯನಗರದ ವಿರುದ್ಧ ದಂಡೆತ್ತಿ ಹೋಗಲು ಪುರುಷೋತ್ತಮನಿಗೆ ಅವಕಾಶ ಒದಗಿತು. ಸಾಳುವ ನರಸಿಂಹ ಉದಯಗಿರಿ ಕೋಟೆಯನ್ನು ಕಳೆದುಕೊಂಡ.
ಪುರುಷೋತ್ತಮ 1497ರ ವರೆಗೆ ರಾಜ್ಯವಾಳಿದ. ಈತ ಸ್ವತಃ ಪಂಡಿತನೂ ಕವಿಯೂ ಆಗಿದ್ದ. ಇವನು ಅಭಿನವ ಗೀತಗೋವಿಂದ, ಆಗಮ ಕಲ್ಪತರು, ನಾಮ ಮಾಲಿಕಾ, ಗೋಪಾಲಾರ್ಚನಾವಿಧಿ ಮುಂತಾದ ಗ್ರಂಥಗಳ ಕರ್ತೃವೆಂದು ಹೇಳಲಾಗಿದೆ.[೧೦] ಇವನ ಕಾಲದಲ್ಲಿ ಸಂಸ್ಕೃತ ಹಾಗೂ ಒರಿಯ ಭಾಷೆಗಳಿಗೆ ಅಮಿತವಾದ ಪ್ರೋತ್ಸಾಹ ದೊರಕಿತು.
ಪ್ರತಾಪರುದ್ರ
[ಬದಲಾಯಿಸಿ]ಪುರಷೋತ್ತಮನ ಅನಂತರ ಪ್ರತಾಪರುದ್ರ ಆಳಿದ (1497-1538). ಸರಸ್ವತೀ ವಿಲಾಸದಲ್ಲಿ ಇವನಿಗೆ 'ಗೌಡೇಂದ್ರ ಮಾನಮರ್ದನ', 'ಯಮುನಾಪುರಾಧೀಶ್ವರ' 'ಹಸೇನುಷಾಹಿ ಸುರತ್ರಾಣ ಶರಣರಕ್ಷಣ' ಎಂಬ ಬಿರುದುಗಳನ್ನು ಕೊಡಲಾಗಿದೆ. ವಿಜಯನಗರದ ಸಾಳುವ ನರಸಿಂಹನಾಗಲಿ, ತುಳುವ ನರಸ ನಾಯಕನಾಗಲಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಂದಕ್ಕೆ ಪಡೆಯಲಾರದೆ ಹೋದರು. ಪ್ರತಾಪರುದ್ರ ಅವುಗಳನ್ನು ರಕ್ಷಿಸಿದನಲ್ಲದೆ ಬಹಮನಿ ಸುಲ್ತಾನರ ವಿರುದ್ಧ ಹೋರಾಡಿ ಓರುಗಲ್ಲು, ಖಂಬಂಮೆಟ್ಟು ಮುಂತಾದ ದುರ್ಗಗಳನ್ನು ಅವರಿಂದ ಕಸಿದುಕೊಂಡ. ಜೌನ್‌ಪುರದ ಷಾರ್ಕಿ ಸುಲ್ತಾನನಾದ ಹುಸೇನ್‌ಷಾಹ ಉತ್ಕಲದ ಮೇಲೆ ದಾಳಿ ನಡೆಸಿದಾಗ ಪ್ರತಾಪರುದ್ರ ಅವನನ್ನು ಸೋಲಿಸಿ ಓಡಿಸಿದ.
ಆದರೆ ಪ್ರತಾಪರುದ್ರ ಮೇಲಿಂದ ಮೇಲೆ ವಿಜಯನಗರದ ವಿರುದ್ಧ ನಡೆಸಿದ ದಾಳಿಗಳಿಂದಾಗಿ ಅದರ ಅರಸರು ಇವನ ಪ್ರಬಲ ವೈರಿಗಳಾದರು. 1509ರಲ್ಲಿ ಕೃಷ್ಣದೇವರಾಯ ಪಟ್ಟಕ್ಕೆ ಬಂದಾಗ ಉದಯಗಿರಿ ಮುಂತಾದ ಕೋಟೆಗಳನ್ನು ಹಿಂದಕ್ಕೆ ಪಡೆಯುವುದೇ ಅಲ್ಲದೆ ಗಜಪತಿಗಳನ್ನು ಸಂಪೂರ್ಣವಾಗಿ ನಾಶಗೊಳಿಸಿಬೇಕೆಂಬ ಆಶಯದಿಂದ ಅವರ ವಿರುದ್ಧ ಸುವ್ಯವಸ್ಥಿತವಾದ ರೀತಿಯಲ್ಲಿ ವಿಜಯಯಾತ್ರೆ ಕೈಗೊಂಡ. 1512 ರಲ್ಲಿ ಉದಯಗಿರಿ ಅವನ ವಶವಾಯಿತು.[೧೧][೧೨] ಪ್ರತಾಪರುದ್ರನ ಚಿಕ್ಕಪ್ಪನಾದ ರಾಘದೇವರಾಯ ಸೆರೆಸಿಕ್ಕ. ಅನಂತರ ಕೃಷ್ಣದೇವರಾಯ ಕೊಂಡವೀಡನ್ನೂ ಆಕ್ರಮಿಸಿಕೊಂಡ.[೧೩] ಇಲ್ಲಿ ಪ್ರತಾಪರುದ್ರ ಸೋತು ಕೊಂಡಪಲ್ಲಿಗೆ ಓಡಿದ. ಅವನ ಮಗನಾದ ವೀರಭದ್ರನೂ, ಇತರ ನಾಯಕರೂ ಬಂಧಿತರಾದರು. ಕೊಂಡಪಲ್ಲಿ, ರಾಜಮಹೇಂದ್ರವರ, ಸಿಂಹಾಚಲ, ಪೋಟ್ನೂರುಗಳು ಒಂದೊಂದಾಗಿ ಕೃಷ್ಣದೇವರಾಯನ ವಶವಾದವು. ಈ ಮಧ್ಯೆ ವೀರಭದ್ರ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ಇದು ಪ್ರತಾಪರುದ್ರನ ಧೈರ್ಯವನ್ನು ಉಡುಗಿಸಿತ್ತು. ಕಳಿಂಗ ಯಾತ್ರೆಯ ಕೊನೆಯ ಘಟ್ಟದಲ್ಲಿ ಕೃಷ್ಣದೇವರಾಯನ ಸೈನ್ಯ ಕಳಿಂಗ ರಾಜಧಾನಿಯನ್ನಾಕ್ರಮಿಸಿತು. ಪ್ರತಾಪರುದ್ರ ಇದನ್ನೆದುರಿಸಲಾರದೆ ಸೋಲೊಪ್ಪಿ ಕೃಷ್ಣದೇವರಾಯನಿಗೆ ಕಪ್ಪಕಾಣಿಕೆ ಸಲ್ಲಿಸಿದನಲ್ಲದೆ ತನ್ನ ಮಗಳಾದ ಭದ್ರಾದೇವಿಯನ್ನು ಅವನಿಗೆ ವಿವಾಹ ಮಾಡಿಕೊಟ್ಟ.[೧೪] ಕೃಷ್ಣಾನದಿ ಈ ಎರಡು ರಾಜ್ಯಗಳ ನಡುವಣ ಮೇರೆಯಾಗಿರತಕ್ಕದೆಂದು ಕೃಷ್ಣದೇವರಾಯ ಗೊತ್ತುಮಾಡಿ, ಗಜಪತಿಗೆ ಅವನ ರಾಜ್ಯವನ್ನು ಹಿಂದಕ್ಕೆ ಕೊಟ್ಟು ತಾನು ರಾಜಧಾನಿಗೆ ಹಿಂದಿರುಗಿದ.[೧೫]
ಆಗ ಈ ರಾಜ್ಯಕ್ಕೆ ಕೊಂಡಪಲ್ಲಿ ರಾಜಧಾನಿಯಾಗಿತ್ತು. ಕೃಷ್ಣದೇವರಾಯನ ಮರಣಾನಂತರ ಗಜಪತಿ ಪುನಃ ಪ್ರಬಲಿಸಲು ಯತ್ನಿಸಿದನಾದರೂ ಅಚ್ಯುತದೇವರಾಯ ಇವನನ್ನು ಎದುರಿಸಿ ಹಿಮ್ಮೆಟ್ಟಿಸಿದರಿಂದಲೂ, ಕುತುಬ್ ಷಹ ಇವನ ವಿರುದ್ಧ ದಂಡೆತ್ತಿ ಇವನನ್ನು ಸೋಲಿಸಿದ್ದರಿಂದಲೂ ಇವನ ಆಕಾಂಕ್ಷೆಗಳಿಗೆ ತಡೆ ಬಿತ್ತು. ಅಷ್ಟೇ ಅಲ್ಲ, ಇದು ಗಜಪತಿ ರಾಜ್ಯದ ಅವನತಿಗೆ ಕಾರಣವಾಯಿತು. ಅಧಿಕಾರದಲ್ಲಿಷ್ಟು ವರ್ಷಗಳೂ ಸೋಲನ್ನನುಭವಿಸಿ ನಿರಾಶೆ ಹೊಂದಿದ ಅರಸ ಆ ವೇಳೆಗೆ ಪುರಿಗೆ ಬಂದಿದ್ದ ಸ್ವಾಮಿ ಚೈತನ್ಯರ ಶಿಷ್ಯನಾಗಿ ತನ್ನ ಕೊನೆಯ ವರ್ಷಗಳನ್ನು ಕಳೆದ.
ಇವನಿಗೆ ಉತ್ತರಾಧಿಕಾರಿಗಳಿರಲಿಲ್ಲ. ಮಕ್ಕಳಾದ ವೀರಭದ್ರ ಮತ್ತು ರಾಮಚಂದ್ರರು ಇವನ ಕಾಲದಲ್ಲೇ ಮರಣ ಹೊಂದಿದರು. ಈ ಪರಿಸ್ಥಿತಿಯಲ್ಲಿ ಇವನ ಮಂತ್ರಿಯಾದ ಗೋವಿಂದ ವಿದ್ಯಾಧರ ಕುಟಿಲೋಪಾಯಗಳಿಂದ ರಾಜ್ಯವನ್ನು ವಶಪಡಿಸಿಕೊಂಡ. ಇದರೊಂದಿಗೆ ಗಜಪತಿ ವಂಶ ಮರೆಯಾಯಿತು.[೧೬]
ವಿದ್ವಾಂಸನಾಗಿ
[ಬದಲಾಯಿಸಿ]ಪ್ರತಾಪರುದ್ರನೂ ತನ್ನ ತಂದೆಯಂತೆ ಹಿರಿಯ ವಿದ್ವಾಂಸನಾಗಿದ್ದ. ಕೌತುಕ ಚಿಂತಾಮಣಿ, ನಿರ್ಣಯ ಸಂಗ್ರಹ, ಸರಸ್ವತೀವಿಲಾಸ ಇತ್ಯಾದಿ ಗ್ರಂಥಗಳನ್ನು ರಚಿಸಿದ. ತತ್ತ್ವ ಚಿಂತಾಮಣಿ, ಅದ್ವೈತ ಮಕರಂದ ಮುಂತಾದ ಗ್ರಂಥಗಳಿಗೆ ವ್ಯಾಖ್ಯಾನವನ್ನು ಬರೆದ. ನವ್ಯನ್ಯಾಯವಿಶಾರದೆನಿಸಿದ ವಾಸುದೇವ ಸಾರ್ವಭೌಮ ಭಟ್ಟಚಾರ್ಯ, ಲೋಲ್ಲಲಕ್ಷೀಧರ , ಭಕ್ತಿಭಾಗವತ ಮಹಾಕಾವ್ಯದ ಕರ್ತೃವಾದ ಜೀವದೇವಾಚಾರ್ಯ, ಜಗನ್ನಾಥ ವಲ್ಲಭ ನಾಟಕವನ್ನು ಬರೆದ ರಾಮಾನಂದರಾಯ ಮುಂತಾದವರು ಇವನ ಆಸ್ಥಾನದಲ್ಲಿದ್ದರು.
ಗಜಪತಿ ಅರಸರ ಕೊಡುಗೆ
[ಬದಲಾಯಿಸಿ]ಗಜಪತಿಗಳು ಅಧಿಕಾರಕ್ಕೆ ಬರುವ ಮೊದಲು ಕಳಿಂಗದಲ್ಲಿ ಒರಿಯ ಭಾಷೆಗೆ ಹೆಚ್ಚಿನ ಪ್ರೋತ್ಸಾಹವಿರಲಿಲ್ಲ. ಸಂಸ್ಕೃತ ಅವರ ರಾಜಭಾಷೆಯಾಗಿತ್ತು. ಆದರೆ ಗಜಪತಿಗಳ ಕಾಲದಲ್ಲಿ ಒರಿಯ ಭಾಷೆಗೆ ವಿಪುಲವಾದ ಪ್ರೋತ್ಸಾಹ ದೊರಕಿತು. ರಾಮಾಯಣ ಮಹಾಭಾರತಗಳೂ, ಪುರಾಣಗಳೂ ಒರಿಯ ಭಾಷೆಗೆ ಅನುವಾದವಾದುವು. ಸ್ವಾಮಿ ಚೈತನ್ಯರು ಗಜಪತಿಗಳ ರಾಜ್ಯಕ್ಕೆ ಬಂದಾಗ ಜನಸಾಮಾನ್ಯರಿಗೆ ಅರ್ಥವಾಗುವಂತೆ ತಮ್ಮ ತತ್ತ್ವಗಳನ್ನು ದೇಶಭಾಷೆಯಲ್ಲಿ ತಿಳಿಸಿಹೇಳಿದ್ದು ಸಹ ಇದಕ್ಕೊಂದು ಕಾರಣ. ತೆಲುಗು ಭಾಷೆಗೂ ಇವರು ಅಷ್ಟೇ ಪ್ರೋತ್ಸಾಹ ಕೊಟ್ಟರೆಂದು ಹೇಳಲಾಗದು. ಆದರೂ ರೆಡ್ಡಿಗಳ ರಾಜ್ಯದಲ್ಲಿ ಸಾಮಂತರು ಆ ಭಾಷೆಯನ್ನು ಪೋಷಿಸಿದರು. ಪೂಸಪಾಟಿ ಬಸವ ಭೂಪಾಲ, ತೆಲುಗು ಪಂಚತಂತ್ರವನ್ನು ರಚಿಸಿದ ದೂಬಗುಂಟ ನಾರಾಯಣ ಕವಿ, ನಂದಿ ಮಲ್ಲಯ್ಯ, ಘಂಟ ಸಿಗ್ಗಯ್ಯ ಮುಂತಾದವರು ಈ ಕಾಲದ ತೆಲಗು ಸಾಹಿತಿಗಳು.
ಚೈತನ್ಯನಿಗೆ ಆಶ್ರಯವಿತ್ತ ಗಜಪತಿಗಳು ವೈದಿಕ ಮತ ಸಂಪ್ರದಾಯಗಳನ್ನು ಪೋಷಿಸಿದರು. ಭಕ್ತಿ ಸಂಕೀರ್ತನೆಗಳು ನಾಡಿನಲ್ಲೆಲ್ಲ ಹರಡಿದುವು. ಜನರಲ್ಲಿ ಇದು ಹೊಸ ಚೈತನ್ಯವನ್ನು ಮೂಡಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ Mishra, Patit Paban (11 January 2016). "Eastern Ganga and Gajapati empires". The Encyclopedia of Empire. The Encyclopedia of Empire. pp. 1–4. doi:10.1002/9781118455074.wbeoe402. ISBN 9781118455074.
- ↑ Panda, Shishir Kumar (2008), "Gajapati Kingship and the Cult of Jagannatha: A Study on the Chhamu Chitaus (Royal Letters)", Proceedings of the Indian History Congress, Indian History Congress, 69: 225–229, JSTOR 44147183,
empire...Suryavamsi Gajapatis
- ↑ Majumdar, Ramesh Chandra; Pusalker, A. D.; Majumdar, A. K., eds. (1960). The History and Culture of the Indian People Volume=VI: The Delhi Sultanate. Bombay: Bharatiya Vidya Bhavan. p. 365. Retrieved 11 March 2021.
- ↑ Hermann Kulke (1976), Kshatriyaization and social change: A Study in Orissa setting (PDF), Popular Prakashan, p. 402, archived from the original (PDF) on 24 June 2021, retrieved 2 July 2021,
Suryavamsa...kings of the Suryavamsa(1435-1540)
- ↑ Sen, Sailendra Nath (2013-03-15). A Textbook of Medieval Indian History (in ಇಂಗ್ಲಿಷ್). Midpoint Trade Books Incorporated. pp. 121–122. ISBN 978-93-80607-34-4.
- ↑ Subrahmanyam 1957, pp. 30–31.
- ↑ Bhuyan, Annapurna (1999). "Kapilendra Deva and his times" (PDF). www.shodhganga.inflibnet.ac.in. Utkal University. p. 31. Retrieved 30 June 2021.
- ↑ A Comprehensive History of India: The Delhi Sultanat (A.D. 1206-1526), ed. by Mohammad Habib and Khaliq Ahmad Nizami (in ಇಂಗ್ಲಿಷ್). People's Publishing House. 1970. pp. 950–951.
- ↑ Mukherjee, Prabhat (1981). The History of the Gajapati Kings of Orissa and Their Successors (in ಇಂಗ್ಲಿಷ್). Kitab Mahal. p. 135.
- ↑ Glimpses of Kalinga History. Sri Gouranga Press, 5, Chintamoni Das Lane, Calcutta: Century Publishers, Calcutta. 1949. p. 224.
{{cite book}}
: CS1 maint: location (link) - ↑ N. K. Sahu, P. K. Mishra, Jagna Kumar Sahu (1981). History of Orissa. Nalanola. p. 234.
Krishnadevaraya started his expedition against Udayagiri early in A.D. 1512.
{{cite book}}
: CS1 maint: multiple names: authors list (link) - ↑ Life and Achievements of Sri Krishnadevaraya. Directorate of Archaeology and Museums, Government of Karnataka. 2011. p. 48.
Starving the defenders into surrender seemed to be the only way open to the Raya.
- ↑ Achintya Kumar Deb (1984). The Bhakti Movement in Orissa: A Comprehensive History. Kalyani Devi. p. 27.
Pratapurdradeva could not protect it [Kondaveedu Fort] and he surrendered several military and civil officers, including Virabhadra, son of Prataparudredeva were taken captives by the king of Vijayanagar.
- ↑ N. Saraswathi Nanaiah (1992). The Position of Women During Vijayanagara Period, 1336–1646. Southern Printers. p. 135.
When Krishnadeva Raya won against Gajapathi, he gave a lot of dowry to Krishnadeva Raya and gave his
- ↑ K. Jayasree (1991). Agrarian Economy in Andhra under Vijayanagar. Navrang. p. 21. ISBN 978-8170130840.
Krishnadevaraya returned all the territory north of the river Krishna to Prataparudra Gajapati.
- ↑ Nandapur A Forsaken Kingdom Part-I. Cuttack: The Utkal Sahitya Press. 1939. pp. 20, 21, 22.
ಗ್ರಂಥಸೂಚಿ
[ಬದಲಾಯಿಸಿ]- Subrahmanyam, R, ed. (1957). The Sūryavaṁśi Gajapatis of Orissa. Waltair: Andhra University. OCLC 613268261.