ಆತ್ಮಹತ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಪಾನೀಸ್ ಕಾಮಿಕಝೆ ಪೈಲಟ್‌ಗಳು, ಏಪ್ರಿಲ್ ೧೯೪೫.

ಆತ್ಮಹತ್ಯೆ ಎಂದರೆ ಸ್ವ ಪ್ರೇರಣೆಯಿಂದ ಪ್ರಾಣವನ್ನು ನೀಗುವುದು. [೧] ಹಲವು ಬಗೆಗಳಲ್ಲಿ ಅತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಸಾಯಲು ತವಕಿಸಿ, ಆತ್ಮಹತ್ಯೆಗೆ ಮಾರ್ಗಗಳನ್ನು ಹುಡುಕುತ್ತಾರೆ.[೨]

ಇತಿವೃತ್ತ[ಬದಲಾಯಿಸಿ]

  • ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ಇಂಗ್ಲೆಂಡಿನ ಡಾನ್ ಮತ್ತು ಹ್ಯೂಮ್, ಫ್ರಾನ್ಸ್ ದೇಶದ ಮಾಂಟೇನ್ ಮಾಂಟೇಸ್ಕೂ ವೋಲ್ಟೇರ್ ಮತ್ತು ರೂಸೊ, ಇಟಲಿ ದೇಶದ ಬೆಕ್ಕಾರಿಯ ಮುಂತಾದವರು, ಆತ್ಮಹತ್ಯೆಯನ್ನು ಮತ ಮತ್ತು ರಾಜ್ಯ ಸರ್ಕಾರಗಳು ಪ್ರತಿಷೇಧಿಸಕೂಡದೆಂದು ವಾದ ಮಾಡಿದರು. ಈಗಲೂ ಅನೇಕರು ಇವರ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದಾರೆ.
  • ಕಾಯಿದೆಯ ರೀತ್ಯ ವಿವೇಚನೆಯ ವಯಸ್ಸು, ನ್ಯಾಯ ಮತ್ತು ಬುದ್ಧಿಸ್ವಾಸ್ಥ್ಯ ಉಳ್ಳ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಕ್ರಿಯೆ ಅಥವಾ ನಿಷ್ಕ್ರಿಯೆಯಿಂದ ಅಪಕೃತ್ಯವೆಸಗಿ ಅದರಿಂದ ಸ್ವನಾಶಮಾಡಿಕೊಳ್ಳುವುದೇ ಆತ್ಮಹತ್ಯೆ. ಆತ್ಮಹತ್ಯೆ ನೈತಿಕ ಮತ್ತು ಧಾರ್ಮಿಕ ದೃಷ್ಟಿಗಳಿಂದ ಮಾತ್ರವೇ ಅಪರಾಧವಲ್ಲ. ಸಾಮಾಜಿಕ ಮತ್ತು ಶಾಸನ ದೃಷ್ಟಿಗಳಿಂದಲೂ ದೋಷಾರ್ಹವಾದುದು.
  • ಸಮಾಜದಲ್ಲಿ ವ್ಯಕ್ತಿಯ ಬೌದ್ಧಿಕ ಮತ್ತು ಶಾರೀರಿಕ ಜೀವನದ ಮೌಲ್ಯ ಕೇವಲ ಅವನ ವೃಷ್ಟಿಸಿದ್ಧಿಗೆ ಸೀಮಿತವಾಗದೇ ಸಮಷ್ಟಿಸಿದ್ಧಿಗೂ ಲಭ್ಯವಾಗಬೇಕೆಂಬ ಲೋಕಹಿತ ದೃಷ್ಟಿಯಿಂದ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಹೇಗೆ ಅವನು ಶಿಕ್ಷಾರ್ಹನಾಗುತ್ತಾನೆಯೋ, ಅದೇ ಪ್ರಕಾರವೇ ತನ್ನನ್ನು ತಾನೇ ಕೊಲೆ ಮಾಡಿಕೊಂಡರೂ ಅವನು ದೋಷಿಯಾಗುತ್ತಾನೆ.
  • ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಮಾತ್ಸರ್ಯ, ಸೇಡು, ಹತಾಶೆ, ಬೇರೆಯವರ ಒತ್ತಡ ಇತ್ಯಾದಿ ಯಾವ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಅದು ಶಾಸನೋಲ್ಲಂಘನವಾಗುತ್ತದೆ. ಆತ್ಮಹತ್ಯೆ ಮಹಾಪಾಪವೆಂದು ಹೇಳುತ್ತಾ, 'ಮಾನವ ಜನ್ಮ ಬಲು ದೊಡ್ಡದು ಅದ ಹಾನಿ ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ' ಎಂದು ಪುರಂದರ ದಾಸರು ಹೇಳಿದ್ದಾರೆ[೩].

ಆತ್ಮಹತ್ಯೆಯ ವಿಧಗಳು[ಬದಲಾಯಿಸಿ]

ಮನಸ್ಸು ತುಂಬಾ ಸೂಕ್ಷ್ಮವಾದುದು.[೪] ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ಸಹಿಸಿ ಕೊಳ್ಳುವುದಿಲ್ಲ. ದುರ್ಬಲಗೊಂಡ ಮನಸ್ಸು ಸದಾ ಸಾವಿನ ಕಡೆಯೇ ಆಲೋಚಿಸುತ್ತಿರುತ್ತದೆ. ಸಾಯಲು ಇಂತಹದೇ ಕಾರಣಗಳು ಬೇಕಿಲ್ಲ. ಎಷ್ಟೋ ಸಲ ಕ್ಷುಲ್ಲಕವೆನಿಸಬಹುದಾದ ಘಟನೆಗಳು ಸಾವಿಗೆ ಕಾರಣವಾಗಿರುವುದನ್ನು ಗಮನಿಸಬಹುದಾಗಿದೆ. ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.

  1. ನೇಣು ಬಿಗಿದುಕೊಂಡು ಸಾಯುವುದು.
  2. ಬೆಂಕಿಯಲ್ಲಿ ಸುಟ್ಟುಕೊಂಡು ಸಾಯುವುದು.
  3. ನೀರಿನಲ್ಲಿ ಬಿದ್ದು ಸಾಯುವುದು.
  4. ವಿಷ ಕುಡಿದು ಸಾಯುವುದು.
  5. ಬಸ್ಸಿಗೆ ಸಿಕ್ಕಿಕೊಂಡು ಸಾಯುವುದು
  6. ರೈಲಿಗೆ ಸಿಕ್ಕಿಕೊಂಡು ಸಾಯುವುದು ಮುಂತಾದುವು.

ಆತ್ಮಹತ್ಯೆಯ ಬಗ್ಗೆ ಖಂಡನೆ[ಬದಲಾಯಿಸಿ]

  • ಅನೇಕ ಪ್ರಮುಖ ಮತಗಳು ಆತ್ಮಹತ್ಯೆಯನ್ನು ದುಷ್ಕರ್ಮ, ಪಾಪ ಎಂದು ಖಂಡಿಸಿವೆ. ಇಸ್ಲಾಂ ಮತದಲ್ಲಿ ಇದನ್ನು ನಿಷೇಧಿಸಿದ್ದಾರೆ. ಬೈಬಲ್ಲಿನ ಹಳೆಯ, ಹೊಸ ಒಡಂಬಡಿಕೆಗಳಲ್ಲಿ ಸ್ಪಷ್ಟವಾಗಿ ಟೀಕಿಸಿ ಪ್ರತಿಷೇಧಿಸಿಲ್ಲದಿದ್ದರೂ ಸಂತ ಅಗಸ್ಟೀನ್ ಕಾಲದಿಂದೀಚೆಗೆ ಕ್ರೈಸ್ತಮತದವರು ಆತ್ಮಹತ್ಯೆಯನ್ನು ನಿಷೇಧಿಸಿದ್ದಾರೆ. ಅದು ಖೂನಿ, ಕೊಲೆಗಳನ್ನು ಮಾಡಿದಷ್ಟೇ ಪಾಪಕರವೆಂದು ಸಾರಿದ್ದಾರೆ.
  • ಯೆಹೂದ್ಯರ ತಾಲ್ಮೂಡ್ ಎಂಬ ಧರ್ಮಶಾಸ್ತ್ರದಲ್ಲಿ ಆತ್ಮಹತ್ಯೆ ಘೋರ ಪಾಪವೆಂದು ಸಾರಿ, ಆತ್ಮಹತ್ಯೆ ಮಾಡಿಕೊಂಡವನಿಗೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರವನ್ನು ನಿಷೇಧಿಸಿದೆ. ಬುದ್ಧ ಮಧ್ಯಮಾರ್ಗಾವಲಂಬಿಯಾಗಿ ದೇಹವನ್ನು ದಂಡಿಸುವುದನ್ನು ಖಂಡಿಸುವುದರಿಂದ ಆತ್ಮಹತ್ಯೆಯನ್ನು ನಿಷೇಧಿಸಿದ್ದಾನೆಂದು ತೀರ್ಮಾನಿಸಬಹುದು.
  • ಆದರೆ ಬೌದ್ಧಮತದಲ್ಲಿ ಬೌದ್ಧ ಸಂಘಕ್ಕೋಸ್ಕರ ಪುನರ್ಜನ್ಮತಾಳುವ ಅತಿಶ್ರೇಷ್ಠ ಉದ್ದೇಶಕ್ಕೋಸ್ಕರ ಅತಿ ಮೇಲ್ಮಟ್ಟದ ಬೋಧಿಸತ್ವರು ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶವಿದೆ. ಅದು ಜನಸಾಮಾನ್ಯರಿಗೆ ಖಂಡಿತ ಅನ್ವಯಿಸುವುದಿಲ್ಲ. ಇದೇ ರೀತಿಯಲ್ಲಿ ಜೈನಧರ್ಮದಲ್ಲೂ ಅತಿಶ್ರೇಷ್ಠ ಯತಿಗಳು ಅವಸಾನ ಕಾಲದಲ್ಲಿ ಭಿಕ್ಷೆಯನ್ನು ತಿರಸ್ಕರಿಸಿ ಹಸಿವು ಬಾಯಾರಿಕೆಗಳಿಂದ ಬಳಲಿ ದೇಹವನ್ನು ದಂಡಿಸಿ (ಪ್ರಾಯೋಪವಾಸ) ಅಸುವನ್ನು ನೀಗಲು ಅವಕಾಶವಿದೆ. ಇದಕ್ಕೆ ಸಲ್ಲೇಖನಪದ್ಧತಿ ಎಂದು ಹೇಳುತ್ತಾರೆ. ಪಾಶ್ರ್ವ ಮತ್ತು ಅರಿಷ್ಟನೇಮಿ ತೀರ್ಥಂಕರರು ಈ ರೀತಿಯಲ್ಲಿ ಕಾಯೋತ್ಸರ್ಗ ಮಾಡಿದರು. ಈಗಲೂ ಕೆಲವು ಶ್ರೇಷ್ಠ ಜೈನ ಯತಿಗಳು ಸಲ್ಲೇಖನ ಮಾಡುತ್ತಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳು[ಬದಲಾಯಿಸಿ]

  • ರಿಕ್ತತೆಯಿಂದ ಜಿಗುಪ್ಸೆ ಹೊಂದಿದಾಗ ಬ್ರಾಹ್ಮಣನಾದವನು ನೀರು ಗಾಳಿಯನ್ನು ಮಾತ್ರ ಸೇವಿಸಿಕೊಂಡು (ಅನ್ನಾಹಾರವಿಲ್ಲದೆ) ನಿರ್ಜನ ಪ್ರದೇಶದಲ್ಲಿ ಈಶಾನ್ಯ ದಿಕ್ಕಿನ ಕಡೆ ನಡೆದುಕೊಂಡು ಹೋಗುತ್ತ ಕುಸಿದು ಬಿದ್ದು ಅಸುನೀಗಿದರೆ, ಬ್ರಹ್ಮ ನಿರ್ವಾಣ ಪಡೆಯಬಹುದೆಂದು ಮನುಧರ್ಮಶಾಸ್ತ್ರದಲ್ಲಿ ಹೇಳಿದೆ.
  • ಅನೇಕ ಮಹಾಯೋಗಿಗಳು ಜೀವಸಮಾಧಿಯನ್ನು ಮಾಡಿಕೊಳ್ಳುತ್ತಾರೆ. ನದೀ ಅಥವಾ ಜಲಪ್ರವೇಶ, ಗುಹಾಪ್ರವೇಶ, ಅಗ್ನಿಪ್ರವೇಶ ಇತ್ಯಾದಿ ಪ್ರಸಂಗಗಳನ್ನು ಮಹಾ ಯೋಗಿಗಳು, ಮಹಿಮಾವಂತರು ದೇಹವಿಸರ್ಜನೆಗೋಸ್ಕರ ಮಾಡಿದ್ದಾರೆ. ಮಾಡುವುದೂ ಉಂಟು. ನಮ್ಮ ಸಂಸ್ಕ್ರತಿಯಲ್ಲಿ ಸತೀಪದ್ಧತಿ, (ಸಹಗಮನ, ಜೋಹರ್) ರೂಢಿಯಲ್ಲಿತ್ತು.
  • ರಾಜನ ಜೀವಕ್ಕೆ ಪ್ರತಿಯಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧರಿದ್ದ ಆಪ್ತ ಸೈನಿಕರನ್ನು ಗರುಡರೆಂದು ಕರೆಯುತ್ತಿದ್ದರು. ರಾಜನ ನಿಧನದ ವಾರ್ತೆಯನ್ನು ಕೇಳುತ್ತಿದ್ದಂತೆ ಗರುಡರು ಬೆಂಕಿಗೆ ಹಾರಿ ಸಾಯುತ್ತಿದ್ದ ಕಥೆಗಳು ಭಾರತ ಇತಿಹಾಸದಲ್ಲಿವೆ.

ಅಂತೂ ಯಾವ ಧರ್ಮವೇ ಆಗಲಿ, ಮತವೇ ಆಗಲಿ ಸಾಮಾನ್ಯ ವ್ಯಾವಹಾರಿಕ ಉದ್ದೇಶಗಳಿಗೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸದೇ ಇಲ್ಲ.

  • ಹಾಗೆ ಆತ್ಮಹತ್ಯೆ ಮಾಡಿಕೊಂಡವರು ಅಪಮೃತ್ಯುವನ್ನಪ್ಪಿ ಪ್ರೇತರಾಗಿ ಇನ್ನೂ ಕಷ್ಟತರದ ಸ್ಥಿತಿಯಲ್ಲಿ ಬಳಲುತ್ತಾರೆಂದು ಪ್ರತಿಯೊಂದು ಮತವೂ ಸಾರುತ್ತದೆ. ಸಮಾಜಶಾಸ್ತ್ರಜ್ಞರು ಪ್ರತಿಯೊಂದು ಜನಾಂಗದಲ್ಲಿಯೂ ಇರುವ ಈ ಆತ್ಮಹತ್ಯೆಯ ಸಮಸ್ಯೆಯನ್ನು ಪರಿಶೀಲಿಸಿ ಕೆಲವು ಅನುಮಿತಿಗಳನ್ನು ಕೊಟ್ಟಿದ್ದಾರೆ. ಜಪಾನ್ ದೇಶದಲ್ಲಿ ಮಿಕಾಡೋನಲ್ಲಿ ರಾಜರು ತಮ್ಮ ಭಕ್ತಿಯನ್ನು ತೋರಿಸಲು ಹೊಟ್ಟೆ ಕುಯಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹ್ಯಾರಾಕಿರಿ ಪ್ರಸಂಗಗಳೂ ಉಂಟು.
  • ಇದು ಹಿಂದೆ ಬಹು ವಿಶೇಷವಾಗಿತ್ತು. ಈಗ ಕಮ್ಮಿಯಾಗಿದೆ. ಈಗ ಆತ್ಮಹತ್ಯೆಯಲ್ಲಿ ಮೊದಲನೆಯ ದೇಶವೆಂದರೆ ಅಮೆರಿಕ. ಪ್ರತಿವರ್ಷವೂ ಆ ದೇಶದಲ್ಲಿ 22,000ಕ್ಕಿಂತಲೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈಗ ಆತ್ಮಹತ್ಯೆಯನ್ನೂ ಆತ್ಮಹತ್ಯೆಯ ಪ್ರಯತ್ನವನ್ನೂ ನಿಷೇಧಿಸಲಾಗಿದೆ. ಅದಕ್ಕೆ ಸಹಾಯ ಮಾಡಿದವರನ್ನು ಸರ್ಕಾರ ಶಿಕ್ಷಿಸುತ್ತದೆ.

ಆತ್ಮಹತ್ಯಾ ಶಾಸನ[ಬದಲಾಯಿಸಿ]

  • ಇಂಗ್ಲೆಂಡಿನಲ್ಲಿ ಆತ್ಮಹತ್ಯಾಶಾಸನ 1961 (ಸೂಯಿಸೈಡ್ ಆಕ್ಟ್)[೫] ಜಾರಿಗೆ ಬರುವವರೆಗೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತ ಶರೀರಕ್ಕೆ ಮತ್ತು ಅವನ ಆಸ್ತಿಪಾಸ್ತಿಗಳಿಗೆ ಶಿಕ್ಷಾರ್ಹವಾದ ಕೆಲವು ನಿರ್ಬಂಧ ಕ್ರಮಗಳು ಜಾರಿಯಲ್ಲಿದ್ದುವು. ಆದರೆ ಈಗ ಮೇಲಿನ ಶಾಸನದ ಪ್ರಕಾರ ಆತ್ಮಹತ್ಯೆ ಅಥವಾ ಅದರ ಪ್ರಯತ್ನ ಅಪರಾಧವಲ್ಲ.
  • ಆದರೆ ಆತ್ಮಹತ್ಯೆಗೆ ನೆರವಾಗುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿ ಕಠಿಣಶಿಕ್ಷೆಗೆ ಗುರಿಯಾಗುತ್ತಾನೆ. ಇಂಡಿಯನ್ ಪೀನಲ್‍ಕೋಡ್ ಪ್ರಕಾರ ಸಹ ಆತ್ಮಹತ್ಯೆಗೆ ನೆರವಾಗುವ ಮತ್ತು ದುಷ್ಟಾನುಕೂಲನಾಗುವ ವ್ಯಕ್ತಿ ಶಿಕ್ಷಾರ್ಹ (ಸೆಕ್ಷನ್ 305, 306). ಮೃತಪತಿಯೊಡನೆ ಸಹಗಮನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧಳಾಗಿರುವ ಸ್ತ್ರೀಗೆ ಪ್ರೋತ್ಸಾಹ ಕೊಟ್ಟು ಅವಳ ಕಾರ್ಯಕ್ಕೆ ಅನುವಾಗುವವರೆಲ್ಲರೂ ಶಿಕ್ಷಾರ್ಹರು.
  • ಆತ್ಮಹತ್ಯೆ ಎಸಗಿಕೊಂಡ ಅಪರಾಧಿ ಮಾನವಶಾಸನದ ವ್ಯಾಪ್ತಿಗೆ ಅತೀತನಾಗಿ ಶಿಕ್ಷೆ ವಿಧಿಸಲು ಅಸಾಧ್ಯವಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸಿದ್ಧತೆಗಳನ್ನು ಮಾಡಿಕೊಂಡು ಅನಂತರ ಪ್ರಯತ್ನ ಮಾಡಿದರೆ ಅದು ಇಂಡಿಯನ್ ಪೀನಲ್ ಕೋಡ್ ಪ್ರಕಾರ (ಸೆಕ್ಷನ್ 309) ಶಿಕ್ಷಾರ್ಹವಾದುದು.
  • ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪರಾಧಿ ನೀರಿಗೆ ಧುಮುಕಿದರೆ, ವಿಷದ ಸೀಸೆ ಹತ್ತಿರ ಇಟ್ಟುಕೊಂಡ ಮಾತ್ರಕ್ಕೆ, ಗಂಡನ ಹಿಂಸೆಯನ್ನು ಸಹಿಸಲಾರದೇ ವಯಸ್ಕಳಾದ ಹೆಂಡತಿ ಅವನಿಂದ ಪಾರಾಗಲು ಬಾವಿಗೆ ಬಿದ್ದರೆ ಇವು ಯಾವುವೂ ಶಿಕ್ಷಾರ್ಹವಾದ ಆತ್ಮಹತ್ಯಾ ಪ್ರಯತ್ನಗಳೆನಿಸುವುದಿಲ್ಲ.
  • ಆಮರಣಾಂತ ಉಪವಾಸದ ಘೋಷಣೆ ಮಾಡಿ ಅನ್ನಾಹಾರಾದಿಗಳನ್ನು ಸಂಪೂರ್ಣ ವಜ್ರ್ಯಮಾಡಿ ಮೃತ್ಯು ಸನ್ನಿಹಿತವಾದಾಗ, ಆತ್ಮಹತ್ಯೆಯ ಉದ್ದೇಶದಿಂದ ನೀರಿಗೆ ಬೀಳುವುದು ಅಥವಾ ನೇಣುಹಾಕಿಕೊಳ್ಳುವುದು ಇತ್ಯಾದಿ ಸಕ್ರಿಯಾಚಟುವಟಿಕೆಯ ಪ್ರಯತ್ನ ವಿಫಲವಾಗಿ ಉಳಿಯುವ ವ್ಯಕ್ತಿ ಅಪರಾಧಿ ಎನಿಸಿಕೊಂಡು ಶಿಕ್ಷಾರ್ಹನಾಗುತ್ತಾನೆ. (ಎ.ಎ.)

ಉಲ್ಲೇಖಗಳು[ಬದಲಾಯಿಸಿ]

  1. http://www.heretohelp.bc.ca/factsheet/what-is-suicide
  2. https://www.psychologytoday.com/us/basics/suicide
  3. "ಆರ್ಕೈವ್ ನಕಲು". Archived from the original on 2019-01-23. Retrieved 2018-08-31.
  4. http://www.who.int/mental_health/prevention/suicide/suicideprevent/en/
  5. http://www.legislation.gov.uk/ukpga/Eliz2/9-10/60