ರಾಣಿ ಕರ್ಣಾ
ರಾಣಿ ಕರ್ಣಾ | |
---|---|
ಜನನ | 1939 ಹೈದರಾಬಾದ್, ಸಿಂಧ್, ಬ್ರಿಟಿಷ್ ಭಾರತ |
ಮರಣ | 7 May 2018 |
ವೃತ್ತಿ | ಕಥಕ್ ನೃತ್ಯಗಾರ್ತಿ |
ಸಂಗಾತಿ | ನಾಯಕ್ |
ಪೋಷಕ | ಅಸ್ಸಂದಾಸ್ ಕರ್ಣಾ |
ಪ್ರಶಸ್ತಿಗಳು | ಪದ್ಮಶ್ರೀ ಉಪಾಧ್ಯಕ್ಷರ ಚಿನ್ನದ ಪದಕ ಆರ್ಡರ್ ಆಫ್ ದಿ ಕ್ವೀನ್ ಆಫ್ ಲಾಓಸ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂಗೀತ ವಾರಿಧಿ ವಿಜಯ್ ರತ್ನ ಸೀನಿಯರ್ ಫೆಲೋಶಿಪ್ - ಭಾರತ ಸರ್ಕಾರ |
ರಾಣಿ ಕರ್ಣಾ ರವರು ಕಥಕ್ ನೃತ್ಯಗಾರ್ತಿ.[೧]ಅವರು ಅನೇಕರಿಂದ, ಕಲಾ ಪ್ರಕಾರದ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ.ನೃತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆಗಳಿಗಾಗಿ, ಭಾರತ ಸರ್ಕಾರವು ೨೦೧೪ ರಲ್ಲಿ ಅವರಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಯನ್ನು ನೀಡಿ ಗೌರವಿಸಿದೆ.
ಜೀವನಚರಿತ್ರೆ
[ಬದಲಾಯಿಸಿ]ರಾಣಿ ಕರ್ಣಾರವರು ೧೯೩೯ ರಲ್ಲಿ ಹೈದರಾಬಾದ್ ನ ಅಮೀರ್ ಗಳ ಸಿಂಧಿ ಕುಟುಂಬದಲ್ಲಿ ಜನಿಸಿದವರು.ಅವರ ತಂದೆ ಅಸ್ಸಂದಾಸ್ ಕರ್ಣಾರವರು ಮೂಲತಃ ಲಾರ್ಕಾನಾ ಪ್ರದೇಶದ ಕರ್ಣಮಲಾನಿ ಎಂಬ ಕುಟುಂಬಕ್ಕೆ ಸೇರಿದವರು.ಕರ್ಣಮಲಾನಿ ಎಂಬ ಹೆಸರು, ಕಾಲಾಂತರದಲ್ಲಿ ಕರಣಾಣಿ ಹಾಗೂ ಅಂತಿಮವಾಗಿ ಕರ್ಣಾ ಎಂದು ಸಂಕ್ಷೇಪಿಸಲ್ಪಟ್ಟಿತು.೧೯೪೨ ರಲ್ಲಿ ರಾಣಿ ಮೂರು ವರ್ಷದ ಮಗುವಾಗಿದ್ದಾಗ, ಅವರ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು.ದೆಹಲಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಅವರು ದೆಹಲಿಯ ಹಿಂದೂ ಕಾಲೇಜಿನಿಂದ ಸಸ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡರು.ರಾಣಿ ಕರ್ಣಾರವರು ನಾಲ್ಕನೇ ವಯಸ್ಸಿನಿಂದಲೇ ನೃತ್ಯ ಕಲಿಯಲು ಪ್ರಾರಂಭ ಮಾಡಿದ್ದರು.ಕಥಕ್ ಮಾತ್ರವಲ್ಲದೇ ಒಡಿಸ್ಸಿ, ಮಣಿಪುರಿ, ಭರತನಾಟ್ಯ ನೃತ್ಯ ಪ್ರಕಾರಗಳನ್ನೂ ಕಲಿತಿದ್ದಾರೆ.[೨]ನೃತ್ಯಾಚಾರ್ಯ ನಾರಾಯಣ್ ಪ್ರಸಾದ್ ಮತ್ತು ಸುಂದರ್ ಪ್ರಸಾದ್ ರಾಣಿಯವರ ಶಿಕ್ಷಕರಾಗಿದ್ದರು.ಗುರು ಹಿರಾಲಾಲ್ ಅವರ ನೇತೃತ್ವದಲ್ಲಿ ಜೈಪುರ ಘರಾನಾ ಶೈಲಿಯನ್ನು ಮತ್ತು ಪಂಡಿತ್ ಬಿರ್ಜು ಮಹಾರಾಜ್ ಅವರ ಲಕ್ನೋ ಘರಾನಾ ನೀತಿಯನ್ನು ಕರಗತ ಮಾಡಿಕೊಳ್ಳಲು ಅವರು ತಮ್ಮ ಅಧ್ಯಯನವನ್ನು ಮುಂದುವರಿಸಿದರು.ರಾಣಿ ಕರ್ಣಾರವರು ೧೯೬೩ ರಲ್ಲಿ ಓಡಿಯಾ ಕುಟುಂಬಕ್ಕೆ ಮದುವೆಯಾಗಿ ಹೋಗಬೇಕಾದ ಕಾರಣದಿಂದಾಗಿ ತಮ್ಮ ನಿವಾಸವನ್ನು ಭುವನೇಶ್ವರಕ್ಕೆ ಸ್ಥಳಾಂತರಿಸಬೇಕಾಯಿತು. ಇದರಿಂದ ಅವರಿಗೆ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿ ಕುಮ್ಕುಮ್ ಮೊಹಂತಿಯವರನ್ನು ಭೇಟಿಯಾಗುವ ಅವಕಾಶ ದೊರೆಯಿತು.ಅವರ ಮೂಲಕ ರಾಣಿ ಕರ್ಣಾರವರು ಹೆಸರಾಂತ ಗುರು ಕೇಲುಚರಣ್ ಮೋಹಪತ್ರಾ ರವರೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಾಯಿತು ಹಾಗೂ ೧೯೬೬ ರಿಂದ ೧೯೮೫ ರವರೆಗೆ ಅವರಿಂದ ಒಡಿಸ್ಸಿ ನೃತ್ಯವನ್ನೂ ಕಲಿತರು.ಅಲ್ಲದೇ ಅವರು ಪ್ರಸಿದ್ಧ ಗುರುಗಳಾದಂತಹ ಅಮುಬಿ ಸಿಂಗ್, ನರೇಂದ್ರ ಕುಮಾರ್ ಮತ್ತು ಲಲಿತಾ ಶಾಸ್ತ್ರೀಯವರಿಂದಲೂ ತರಬೇತಿ ಪಡೆದುಕೊಂಡಿದ್ದಾರೆ.ಅವರು ಭಾರತದ ಹಲವಾರು ಪ್ರಮುಖ ಶಾಸ್ತ್ರೀಯ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಅವರ ಪ್ರದರ್ಶನಗಳು ಯುಕೆ, ರಷ್ಯಾ ಮತ್ತು ಇತರ ಅನೇಕ ಯುರೋಪಿಯನ್ ದೇಶಗಳಲ್ಲಿ ಮೆಚ್ಚುಗೆ ಗಳಿಸಿವೆ.[೩]೧೯೭೮ ರಲ್ಲಿ ಪತಿ ನಾಯಕ್ ಅವರನ್ನು ಕಲ್ಕತ್ತಾಗೆ ವರ್ಗಾಯಿಸಿದ ಕಾರಣ, ಭುವನೇಶ‍್ವರದಿಂದ ಸ್ಥಳಾಂತರಗೊಂಡಾಗಿನಿಂದ ರಾಣಿ ಕರ್ಣಾರವರು ಕಲ್ಕತ್ತಾದಲ್ಲೇ ವಾಸಿಸುತ್ತಿದ್ದರು.'ಸಂಸ್ಕೃತಿಕಿ ಶ್ರೇಯಸ್ಕರ್' ಎಂಬ ನೃತ್ಯ ಅಕಾಡೆಮಿಯ ನಿರ್ದೇಶಕರಾಗಿ ಕರ್ತವ್ಯ ಪಾಲನೆ ಮಾಡುತ್ತಾ ಸಕ್ರಿಯರಾಗಿದ್ದರು.೭೪ ನೇ ವಯಸ್ಸಿನಲ್ಲಿ ಅವರು ತಮ್ಮ ಕೊನೆಯ ಸಾರ್ವಜನಿಕ ಪ್ರದರ್ಶನವನ್ನು ನೀಡಿದ್ದರು.
ಪರಂಪರೆ
[ಬದಲಾಯಿಸಿ]ನೃತ್ಯ ಪ್ರದರ್ಶನ ಮಾತ್ರವಲ್ಲದೇ, ಜೈಪುರ ಮತ್ತು ಲಕ್ನೋ ಘರಾನಾ ಸಂಪ್ರದಾಯಗಳನ್ನು ಸಂಯೋಜಿಸಿದ ಕೀರ್ತಿಯೂ ರಾಣಿ ಕರ್ಣಾರವರಿಗೆ ಸಲ್ಲುತ್ತದೆ.ಅವರು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎಸ್.ಕೆ.ಸಕ್ಸೇನಾ ಅವರೊಂದಿಗೆ ಕಥಕ್ ನ ಸೌಂದರ್ಯಶಾಸ್ತ್ರದ ಕುರಿತು ಸಂಶೋಧನೆ ನಡೆಸಿದ್ದಾರೆ.[೪]೧೯೯೫ ರಲ್ಲಿ ಅವರು 'ಸಂಸ್ಕೃತಿಕಿ ಶ್ರೇಯಸ್ಕರ್' ಎಂಬ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ ಮತ್ತು ಕಲ್ಕತ್ತಾ ಭಾರತೀಯ ವಿದ್ಯಾಭವನದ ವಿಭಾಗವಾದ 'ಸಂಗೀತ ಮತ್ತು ನೃತ್ಯ ಶಿಕ್ಷಣ ಭಾರತಿ'ಯ ಮಾರ್ಗದರ್ಶಿಯಾಗಿ ಕೆಲಸ ಮಾಡಿದ್ದಾರೆ.ಅವರು ಕಲ್ಕತ್ತಾ ಸ್ಕೂಲ್ ಆಫ್ ಮ್ಯೂಸಿಕ್ ನ ಸ್ಥಾಪಕರು ಮತ್ತು ನಿರ್ದೇಶಕರು.೧೯೭೮ ರಿಂದ ೧೯೯೩ ರವರೆಗೆ ಅಲ್ಲಿ ಕೆಲಸ ಮಾಡಿದ್ದಾರೆ. ಮಾತ್ರವಲ್ಲದೇ ಅವರು ಕಲ್ಕತ್ತಾದ ಅರಬಿಂದೋ ಭವನ ನೃತ್ಯ ವಿಭಾಗವನ್ನು 'ಅಹನಾ' ಎಂಬ ಹೆಸರಿನಿಂದ ಸ್ಥಾಪಿಸಿದ್ದಾರೆ[೫] ಮತ್ತು ೧೯೮೦ ರಿಂದ ೧೯೮೭ ರವರೆಗೆ ಆ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಂಸ್ಕೃತಿಕಿ ಶ್ರೇಯಸ್ಕರ್
[ಬದಲಾಯಿಸಿ]೧೯೯೫ ರಲ್ಲಿ ರಾಣಿ ಕರ್ಣಾರವರು,ಕಥಕಿನ ನೃತ್ಯ ಪ್ರಕಾರವನ್ನು ಪ್ರಚಾರ ಮಾಡುವ ಮತ್ತು ಸಾಮಾನ್ಯವಾಗಿ ಪ್ರದರ್ಶನ ಕಲೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 'ಸಂಸ್ಕೃತಿಕಿ ಶ್ರೇಯಸ್ಕರ್' ಎಂಬ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿದರು.[೬]ಈ ನೃತ್ಯ ಅಕಾಡೆಮಿ ಕಲ್ಕತ್ತಾದ ಜೋದ್ಪುರ್ ಪಾರ್ಕ್ ಬಳಿ ಇದ್ದು, ಅಕಾಡೆಮಿಯ ವಿದ್ಯಾರ್ಥಿಗಳು ಭಾರತಾದ್ಯಂತ ವಿವಿಧ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ:
- ಕೊನಾರ್ಕ್ ಉತ್ಸವ-೧೯೯೪
- ಜೈಪುರ ಕಥಕ್ ಉತ್ಸವ, ನವದೆಹಲಿ-೧೯೯೫
- ರವೀಂದ್ರ ಜನ್ಮೋತ್ಸವ, ಕಲ್ಕತ್ತಾ-೧೯೯೬, ೧೯೯೮ ಮತ್ತು ೧೯೯೯
- ವಸಂತೋತ್ಸವ, ನವದೆಹಲಿ-೨೦೦೦
- ನಾಟ್ಯಾಂಜಲಿ ಉತ್ಸವ, ಚಿದಂಬರಂ-೨೦೦೦
- ಪುರಿ ಬೀಚ್ ಉತ್ಸವ-೨೦೦೦
- ಕಥಕ್ ಮಹೋತ್ಸವ, ಕಲ್ಕತ್ತಾ-೨೦೦೦
- ತ್ಯಾಗರಾಜ ಉತ್ಸವ, ತಿರುಪತಿ-೨೦೦೦
- ವಿರಾಸತ್ ಉತ್ಸವ, ಮಂಗಳೂರು-೨೦೦೦[೭]
ಪ್ರಶಸ್ತಿಗಳು ಮತ್ತು ಮಾನ್ಯತೆಗಳು
[ಬದಲಾಯಿಸಿ]೨೦೧೪ ರಲ್ಲಿ ರಾಣಿ ಕರ್ಣಾರವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.[೮]ಅಲ್ಲದೇ ಅವರು ಇತರ ಅನೇಕ ಪ್ರಶಸ್ತಿಗಳು ಹಾಗೂ ಗೌರವಗಳನ್ನೂ ಪಡೆದುಕೊಂಡಿದ್ದಾರೆ:
- ಉಪಾಧ್ಯಕ್ಷರ ಚಿನ್ನದ ಪದಕ-ಶಂಕರ್ ವಾರಪತ್ರಿಕೆ-೧೯೫೪
- ಆರ್ಡರ್ ಆಫ್ ದಿ ಕ್ವೀನ್ ಆಫ್ ಲಾಓಸ್-೧೯೬೪
- ಸಂಗೀತ ವಾರಿಧಿ-ಭಾರತೀಯ ಕಲಾ ಕೇಂದ್ರ, ನವದೆಹಲಿ-೧೯೭೭
- ವಿಜಯ್ ರತ್ನ-ಇಂಡಿಯನ್ ಇಂಟರ್ನ್ಯಾಷನಲ್ ಫ್ರೆಂಡ್ಶಿಪ್ ಸೊಸೈಟಿ, ನವದೆಹಲಿ-೧೯೯೦
- ಸೀನಿಯರ್ ಫೆಲೋಶಿಪ್-ಸಂಸ್ಕೃತಿ ಇಲಾಖೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ-ಭಾರತ ಸರ್ಕಾರ
- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ-೧೯೯೬[೯]
- ಗೌರವ ಪ್ರಶಸ್ತಿ-ಅಖಿಲ ಭಾರತೀಯ ಸಿಂಧಿ ಬೋಲಿ ಮತ್ತು ಸಾಹಿತ್ಯ ಸಭಾ-೧೯೯೮
ಉಲ್ಲೇಖಗಳು
[ಬದಲಾಯಿಸಿ]- ↑ https://www.shethepeople.tv/news/5-world-famous-female-kathak-dancers-in-india
- ↑ "ಆರ್ಕೈವ್ ನಕಲು". Archived from the original on 2023-02-01. Retrieved 2020-03-30.
- ↑ https://www.veethi.com/india-people/rani_karnaa-profile-12238-42.htm
- ↑ https://www.thehindu.com/entertainment/dance/an-erudite-ambassador-of-kathak/article23840121.ece
- ↑ "ಆರ್ಕೈವ್ ನಕಲು". Archived from the original on 2020-05-23. Retrieved 2020-03-30.
- ↑ https://www.iuemag.com/august2014/is/rani-karnaa.php
- ↑ https://goelmg09.blogspot.com/2018/04/rani-karnaa.html
- ↑ https://www.thehindu.com/news/national/list-of-padma-awardees/article5617946.ece
- ↑ https://www.thehindu.com/features/friday-review/dance/in-a-swirl/article5003541.ece