ವಿಷಯಕ್ಕೆ ಹೋಗು

ಕರಾವಳಿ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರಾವಳಿ ಕನ್ನಡ
ಬಳಕೆಯಲ್ಲಿರುವ 
ಪ್ರದೇಶಗಳು:
ಕರಾವಳಿ.
ಒಟ್ಟು 
ಮಾತನಾಡುವವರು:
೧೦,೦೦,೦೦೦+
ಭಾಷಾ ಕುಟುಂಬ: ದ್ರಾವಿಡ
 ದಕ್ಷಿಣ ದ್ರಾವಿಡ
  ತಮಿಳು-ಕನ್ನಡ
   ಕನ್ನಡ
    ಕರಾವಳಿ ಕನ್ನಡ 
ಬರವಣಿಗೆ: ಕನ್ನಡ ಲಿಪಿ
ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ರೀತಿಯ ಕನ್ನಡ ಬಳಕೆಯಲ್ಲಿದೆ. ತುಳು, ಕೊಂಕಣಿ,ಮೊದಲಾದ ಭಾಷೆಗಳನ್ನು ಮನೆಮಾತಾಗಿ ಬಳಸುವ ಜನರು ಪರಸ್ಪರ ಸಾಧನೆಗಾಗಿ ಬಳಸುವ ಕನ್ನಡ ಒಂದು ರೀತಿಯದಾದರೆ,ನಾಡವ ಕನ್ನಡ, ಹವ್ಯಕ, ಅರೆಭಾಷೆ, ಕೋಟ, ಕುಂಬಾರ, ಬೈರ ಮೊದಲಾದ ಸಮಾಜಗಳಿಗೆ ಸೇರಿದ ಜನ ತಮ್ಮತಮ್ಮೊಳಗೆ ಬಳಸುವ ಕನ್ನಡ ಇನ್ನೊಂದು ರೀತಿಯದು. ಇವುಗಳಲ್ಲಿ ಮೊದಲಿನದನ್ನು ಸಾಂಪರ್ಕಿಕ ಕನ್ನಡವೆಂದು ಎರಡನೆಯದನ್ನು ತಾಯಿನುಡಿ ಕನ್ನಡವೆಂದೂ ಪ್ರತ್ಯೇಕಿಸಿ ಹೇಳಬಹುದು.

ಕರಾವಳಿ ಕನ್ನಡ

ಕರಾವಳಿ ಕನ್ನಡ ಉಪಭಾಷಾವಲಯಕ್ಕೆ ದಕ್ಷಿಣ ಕನ್ನಡ , ಉಡುಪಿ , ಉತ್ತರಕನ್ನಡ ಜಿಲ್ಲೆಗಳು ಬರುತ್ತವೆ . ಈ ಪ್ರದೇಶದಲ್ಲಿ ವಾಸವಾಗಿರುವ ಕನ್ನಡ ಭಾಷೆ ಮಾತನಾಡುವ ಜನರ ಜೊತೆ ಇಂಗ್ಲೀಷ್ , ಮಲೆಯಾಳಿ , ಕೊಂಕಣಿ , ತುಳು ಭಾಷೆಯ ಪ್ರಭಾವ ಇರುವುದು ತಿಳಿದುಬರುತ್ತದೆ . ' ತುಳು ಭಾಷೆಯ ಪ್ರಭಾವ ಹೆಚ್ಚಾಗಿದೆ .

ಕರಾವಳಿ ಕನ್ನಡ ಭಾಷೆ ಉದಾಹರಣೆಗೆ

1 ) ನಾನು ಚೆನ್ನಾಗಿ ಬಯ್ದು ಬಿಟ್ಟೆ ಮಾರಾಯ ,

2 ) ನನಗೆ ಗೊತ್ತುಂಟು ಮಾರಾಯರ ,

ಈ ಮಂಗಳೂರು ಕನ್ನಡ ವಲಯದಲ್ಲಿ ಕನ್ನಡದ ಕೆಲವು ಶಬ್ದಗಳು ಪ್ರಾರಂಭದಲ್ಲಿ ಬರುವ ಇ , ಈ , ಆ , ಆ ಸ್ವರಗಳು ಎ . ಓ ಪಿ ಗಳಾಗಿ ಪರಿವರ್ತನೆಗೊಂಡು ಬಳಕೆಯಲ್ಲಿರುವುದನ್ನು ಗುರುತಿಸಬಹುದಾಗಿದೆ .

ಉದಾಹರಣೆಗೆ : ನಗು > ನಗು . ಬಿಳಿ > ಬೆಳಿ ( ಎ ) ಗಂಟಲು > ಗಂಟಲು ( ಆ + ಎ )

ಕರಾವಳಿ ಕನ್ನಡದ ವೈಶಿಷ್ಯ

[ಬದಲಾಯಿಸಿ]

ಹೊರಗಿನಿಂದ ಬಂದವರಿಗೆ ಈ ಜಿಲ್ಲೆಯಲ್ಲಿ ಮೊದಲಿಗೆ ಕೇಳಿಸುವುದು ಸಾಂಪರ್ಕಿಕ ಕನ್ನಡ. ಇದನ್ನು ಆಡುವವರು ಬೇರೆ ಬೇರೆ ಭಾಷೆಗಳನ್ನು ಮನೆಮಾತಾಗಿ ಬಳಸುವವರಾದ್ದರಿಂದ, ಈ ನುಡಿಯಲ್ಲಿ ತುಳು, ಕೊಂಕಣಿ ಮೊದಲಾದ ಭಾಷೆಗಳ ಪ್ರಭಾವ ಹೆಚ್ಚು ಕಾಣಿಸುತ್ತದೆ. ಅಲ್ಲದೆ, ಈ ಕನ್ನಡವನ್ನು ಬಹುಮಂದಿ ಶಾಲೆ, ಕಾಲೇಜು, ಪುಸ್ತಕ, ಪತ್ರಿಕೆ ಇವುಗಳ ಮೂಲಕ ಮತ್ತು ಸಭೆ, ನಾಟಕಗಳ ಮೂಲಕ ಪಡೆದಿರುವರಾದ್ದರಿಂದ ಇದು ಆಡುನುಡಿಗಿಂತಲೂ ಬರೆಹದ ಕನ್ನಡವನ್ನೇ ಹೆಚ್ಚು ಹೋಲುತ್ತದೆ. ಸಾಂಪರ್ಕಿಕ ಕನ್ನಡ ಯಾವ ರೀತಿಯಲ್ಲಿ ಬೆಳೆದುಬಂದಿದೆ. ಅದರ ಬೆಳವಣಿಗೆಗೂ ಆಡುನುಡಿಯ ಬೆಳವಣಿಗೆಗೂ ಏನು ಭೇದವಿದೆ. ಅದರಲ್ಲಿ ಬೇರೆ ಬೇರೆ ಸಮಾಜಗಳಿಗೆ ಮತ್ತು ಆ ಸಮಾಜದವರ ಮಾತೃಭಾಷೆಗಳಿಗೆ ಅನುಗುಣವಾಗಿ ಹೇಗೆ ಪ್ರಭೇದಗಳು ಮೂಡಿಬಂದಿವೆ. ಅದರ ಮೇಲೆ ವಿದ್ಯಾಭ್ಯಾಸದ ಪ್ರಭಾವ ಎಂಥದ್ದು ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸಲು ಇನ್ನೂ ಬಹಳಷ್ಟು ಸಂಶೋಧನೆಗಳನ್ನು ನಡೆಸುವ ಆವಶ್ಯಕತೆಯಿದೆ.

ಚಾರಿತ್ರಿಕ ಅಂಶ

[ಬದಲಾಯಿಸಿ]

ಕನ್ನಡ ಭಾಷೆಯ ಚರಿತ್ರೆಯ ದೃಷ್ಟಿಯಿಂದ ನೋಡುವುದಾದರೆ, ಈ ಸಾಂಪರ್ಕಿಕ ಪ್ರಭೇದಕ್ಕಿಂತಲೂ ಹವ್ಯಕ, ಕೋಟ, ಗೌಡ, ಕುಂಬಾರ ಮೊದಲಾದ ಸಮಾಜಗಳವರು ಮನೆಮಾತಾಗಿ ಬಳಸುವ ಆಡುನುಡಿ ಕನ್ನಡ ಹೆಚ್ಚು ಪ್ರಮುಖವಾದುದೆಂದು ಹೇಳಬಹುದು. ಪಶ್ಚಿಮ ಘಟ್ಟಗಳ ಪಶ್ಚಿಮಕ್ಕಿರುವ ಕರಾವಳಿ ಪ್ರದೇಶದಲ್ಲೆಲ್ಲಾ ಪ್ರಚಾರದಲ್ಲಿರುವ ಕನ್ನಡ ಇತರ ಒಳನಾಡ ಕನ್ನಡದ ಪ್ರಭೇದಗಳಿಂದ ಬೇರೆಯಾಗಿ ಸುಮಾರು ಒಂದೂವರೆ ಸಾವಿರ ವರ್ಷಗಳಾದರೂ ಕಳೆದಿರಬಹುದು. ಕನ್ನಡದ ಆಧುನಿಕ ಪ್ರಭೇದಗಳನ್ನೆಲ್ಲ ತೌಲನಿಕವಾಗಿ ಅಭ್ಯಾಸಮಾಡಿದಾಗ, ಕರಾವಳಿ ಮತ್ತು ಒಳನಾಡ ಕನ್ನಡಗಳೊಳಗೆ ನಡೆದ ಪುರ್ವ ಪಶ್ಚಿಮ ವಿಭಜನೆ ಕನ್ನಡದ ಮಟ್ಟಿಗೆ ಅತ್ಯಂತ ಪ್ರಾಚಿನವಾದುದೆಂದು ತಿಳಿದುಬಂದಿದೆ. ಈ ವಿಭಜನೆ ಹಳಗನ್ನಡದ ಕಾಲಕ್ಕಿಂತಲೂ ಹಿಂದಿನದೆಂಬುದಕ್ಕೆ ಸ್ಪಷ್ಟವಾದ ಆಧಾರಗಳಿವೆ.

  • ಉದಾಹರಣೆಗಾಗಿ, ಹಳಗನ್ನಡದ ಕಾಲಕ್ಕಿಂತ ಮೊದಲು ಎಂದರೆ, ಆರು ಏಳನೆಯ ಶತಮಾನದಲ್ಲಿ ನಡೆದ ಮಧ್ಯಸ್ವರ ಉಚ್ಚಸ್ವರದೆದುರು ಉಚ್ಚವಾಗಿರುವ ಬದಲಾವಣೇಯನ್ನು ಗಮನಿಸಬಹುದು. ಈ ಬದಲಾವಣೆಯ ಫಲವಾಗಿ ಹಿಂದಿದ್ದ ಬೆಳಿ > ಬಿಳಿ, ಕೆವಿ > ಕಿವಿ, ಬೆಸಿ > ಬಿಸಿ, ಒಳಿ > ಉಳಿ, ತೊದಿ > ತುದಿ, ತೊಳಿ > ತುಳಿ ಇತ್ಯಾದಿಯಾಗಿ ಬದಲಾವಣೆ ಹೊಂದಿತು. ಐದೂ ಆರನೆಯ ಶತಮಾನಗಳ ಶಾಸನಗಳಲ್ಲಿ ಈ ಬದಲಾವಣೆಯಾದಂತೆ ಕಾಣಿಸುವುದಿಲ್ಲ. ಅಲ್ಲದೆ ಇಂದಿನ ಕರಾವಳಿಯ ಆಡುನುಡಿ ಕನ್ನಡದಲ್ಲೂ ಇದು ಕಾಣಿಸುತ್ತಿಲ್ಲ. ಈ ಪರಿಸ್ಥಿತಿಯ ಅರ್ಥವೇನೆಂದರೆ, ಐದು ಆರನೆಯ ಶತಮಾನಗಳು ಈ ಬದಲಾವಣೆ ನಡೆದ ಕಾಲಕ್ಕಿಂತ ಹಿಂದಿನವಾಗಿರಬೇಕು ಮತ್ತು ಕರಾವಳಿಯ ಆಡುನುಡಿ ಕನ್ನಡ ಈ ಬದಲಾವಣೆ ನಡೆದ ಕಾಲಕ್ಕಿಂತ ಹಿಂದೆಯೆ ಒಳನಾಡ ಕನ್ನಡದಿಂದ ಒಡೆದು ಬೇರಾಗಿ ಬಂದಿರಬೇಕು. ಮತ್ತು ಒಳನಾಡಿನಲ್ಲಿ ಮಾತ್ರವೆ ನಡೆದ ಈ ಬದಲಾವಣೆ ಇದಕ್ಕೆ ಒಳಪಡದೆ ಇದ್ದಿರಬೇಕು.
  • ಕರಾವಳಿಯ ಆಡುನುಡಿ ಕನ್ನಡವನ್ನು ಒಳನಾಡಿನ ಆಡುನುಡಿ ಕನ್ನಡದಿಂದ ಬೇರ್ಪಡಿಸುವ ಅಂಶಗಳು ಇನ್ನೂ ಹಲವಾರಿವೆ. ಉದಾಹರಣೆಗೆ ಒಳನಾಡಿನ ಆಡುನುಡಿ ಕನ್ನಡದ ಪ್ರಭೇದಗಳಲ್ಲೆಲ್ಲ ಮೂರಕ್ಷರದ ಪದಗಳಲ್ಲಿ ಬರುವ ಎರಡನೆಯ ಸ್ವರ ಲೋಪಗೊಂಡಿದೆ (ಹಗಲು- ಹಗ್ಲು, ಅಡಕೆ- ಅಡ್ಕೆ, ಅಂಗಡಿ- ಅಂಗ್ಡಿ, ಬಾಗಿಲು- ಬಾಗ್ಲು ಇತ್ಯಾದಿ.) ಆದರೆ ಈ ಬದಲಾವಣೆ ಕರಾವಳಿಯ ಆಡು ನುಡಿಯಲ್ಲಾಗಿಲ್ಲ. ಹಾಗೆಯೆ ದೀರ್ಘ ಸ್ವರದ ಅನಂತರ ಇಲ್ಲವೆ ಮೂರಕ್ಷರದ ಪದಗಳಲ್ಲಿ ಎರಡನೆಯ ಸ್ವರಕ್ಕೆ ಪರವಾಗಿ ಬರುವ ಅನುನಾಸಿಕಗಳು ಸಮಾನಸ್ಥಾನಿಯಾದ ವ್ಯಂಜನ ಪರವಾದಾಗ ಲೋಪಗೊಂಡಿರುವುದನ್ನು ಒಳನಾಡಿನ ಕನ್ನಡದಲ್ಲಿ ಕಾಣಬಹುದು (ನಾಂಟು- ನಾಟು, ನೂಂಕು- ನೂಕು, ಮುರುಂಟು- ಮುರುಟು, ಕಲಂಕು- ಕಲಕು ಇತ್ಯಾದಿ). ಕರಾವಳಿಯ ದಕ್ಷಿಣ ಭಾಗದಲ್ಲಿ ಈ ಲೋಪ ಸಂಭವಿಸಿಲ್ಲ.
  • ಈ ಪ್ರಭೇದಗಳ ವ್ಯಾಕರಣವನ್ನು ಗಮನಿಸಿದರೆ, ಕರಾವಳಿಯ ಪ್ರಭೇದಗಳು ಹಳಗನ್ನಡದಲ್ಲಿ ತೋರಿಬರುವ ನಿಷೇಧ ಕ್ರಿಯಾರೂಪ (ಕೇಳೆಂ, ಪೇಳೆಂ ಇತ್ಯಾದಿ) ಮತ್ತು ಭವಿಷ್ಯದ್ರೂಪ (ಕೇಳ್ವೆಂ, ಪೇಳ್ವೆಂ ಇತ್ಯಾದಿ) ಇವುಗಳನ್ನು ಉಳಿಸಿಕೊಂಡು ಬಂದಿರುವುದೂ ಒಳನಾಡಿನ ಪ್ರಭೇದಗಳು ಇವೆರಡನ್ನೂ ಕಳೆದುಕೊಂಡಿರುವುದ ಸ್ಪಷ್ಟವಾಗುತ್ತದೆ. ಅಲ್ಲದೆ ಹಳಗನ್ನಡದಲ್ಲಿ ಕಾಣಿಸದೆ ಇರುವ ಪುರ್ಣ ವರ್ತಮಾನ ರೂಪಮೊಂದು (ಕುಡ್ದೀನಿ, ಮಾಡ್ದೀನಿ, ಇತ್ಯಾದಿ) ಹೊಸತಾಗಿ ಈ ಒಳನಾಡಿನ ಪ್ರಭೇಧಗಳಲ್ಲಿ ಮೂಡಿಬಂದಿದೆಯೆಂಬ ವಿಷಯವÆ ತಿಳಿಯುತ್ತದೆ.

ಕರಾವಳಿಯ ಪ್ರಭೇದಗಳಲ್ಲಿ ಬರುವ ಪುರುಷವಾಚಕ ಪ್ರತ್ಯಯಗಳಿಗೆ ಎಲ್ಲಾ ಕಾಲವಾಚಕ ಕ್ರಿಯಾರೂಪಗಳಲ್ಲೂ ಒಂದೇ ರೂಪವಿದೆಯಾದರೆ, ಒಳನಾಡಿನ ಪ್ರಭೇದಗಳಲ್ಲೆಲ್ಲ ಇವಕ್ಕೆ ಭೂತ ಪ್ರತ್ಯಯದೆದುರು ಹ್ರಸ್ವರೂಪವಿದೆ ಮತ್ತು ಇತರೆಡೆಗಳಲ್ಲಿ ದೀರ್ಘರೂಪವಿದೆ (ಕುಡ್ದೆ- ಕುಡಿತೀನಿ. ಮಾಡ್ದೆ- ಮಾಡ್ತೀನಿ ಇತ್ಯಾದಿ).

ಕರಾವಳಿಯ ಭಾಷಾ ವೈವಿಧ್ಯ

[ಬದಲಾಯಿಸಿ]

ಕರಾವಳಿಯಲ್ಲೂ ಕೂಡ ದಕ್ಷಿಣ ಕನ್ನಡ ಉಡುಪಿಜಿಲ್ಲೆಗಳಲ್ಲಿ ಕಾಣಿಸುವ ಆಡುನುಡಿ ಕನ್ನಡ ಒಂದು ತೆರನಾದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸುವ ಆಡುನುಡಿ ಕನ್ನಡ ಇನ್ನೊಂದು ತೆರ. ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಭೇದಗಳ ಮೇಲೆ ಕನ್ನಡದ ಉಪಭಾಷೆಯಾದ ಕರಾವಳಿ ಕನ್ನಡದ ಪ್ರಭಾವ ಸ್ಪಷ್ಟವಾಗಿಯೆ ಕಾಣಿಸುತ್ತಿದೆಯೆನ್ನಬಹುದು. ತುಳು- ಮಲೆಯಾಳಂಗಳ ಸಂಪರ್ಕವಿದ್ದುದರಿಂದಾಗಿ ಮತ್ತು ಕಳೆದ ನೂರು- ನೂರೈವತ್ತು ವರ್ಷಗಳಲ್ಲಿ ಕೇರಳ ಮತ್ತು ತಮಿಳುನಾಡುಗಳೊಡನೆ ಆಡಳಿತದ ಮಟ್ಟಿಗೂ ಹತ್ತಿರದ ಸಂಪರ್ಕವಿದ್ದುದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಡುನುಡಿ ಕನ್ನಡ ತನ್ನದೇ ಆದ ವಿಶಿಷ್ಟ ರೂಪವನ್ನು ಪಡೆದಿದೆ.

ಕನ್ನಡ ಭಾಷೆಯ ಸ್ಪರೂಪವನ್ನು ಮತ್ತು ಅದು ಬೆಳೆದು ಬಂದ ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಎಂತೆಂತಹ ಪ್ರಭೇದಗಳು ಪ್ರಚಾರದಲ್ಲಿವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು ಆವಶ್ಯ. ಮುದ್ದಣನ ಊರಾದ ದಕ್ಷಿಣ ಕನ್ನಡ ಜಿಲ್ಲೆ ಈ ಮಟ್ಟಿಗೆ ಹಲವಾರು ವಿಶಿಷ್ಟವಾದ ಪ್ರಭೇದಗಳನ್ನು ಪಂಡಿತರ ಕೈಗೆ ಕೊಡಬಲ್ಲುದು. ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಈ ಭಾಗ ಕರ್ನಾಟಕದ ಇತರ ಭಾಗಗಳಿಂದ 1956ರವರೆಗೂ ಬೇರಾಗಿಯೆ ಉಳಿದಿತ್ತು. ಇದರಿಂದಾಗಿ ಇಲ್ಲಿನ ಆಡುನುಡಿಗಳು ಕನ್ನಡದ ಇತರ ಆಡುನುಡಿಗಳಿಂದ ಬೇರೆಯಾಗಿದ್ದು, ತಮ್ಮವೇ ಆದ ದಿಕ್ಕಿನಲ್ಲಿ ಬೆಳೆದು ಬಂದಿವೆ. ಕೆಲವು ವಿಷಯಗಳಲ್ಲಿ ಇವು ಹೊಸ ಹಾದಿ ಹಿಡಿದಿವೆಯಾದರೆ ಇನ್ನು ಕೆಲವು ವಿಷಯಗಳಲ್ಲಿ ಇವು ಹಳೆಯ ಪ್ರಕಾರಗಳನ್ನು ಹಾಗೆಯೆ ಉಳಿಸಿಕೊಂಡು ಬಂದಿವೆ.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: