ವಿಷಯಕ್ಕೆ ಹೋಗು

ಮೈನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈನಾ
ಸಾಮಾನ್ಯ ಮೈನಾ (ಅಕ್ರಿಡೊತೀರೀಸ್ ಟ್ರಿಸ್ಟಿಸ್)
ಸಾಮಾನ್ಯ ಮೈನಾ (ಅಕ್ರಿಡೊತೀರೀಸ್ ಟ್ರಿಸ್ಟಿಸ್)
Scientific classification

ಮೈನಾ ಏವೀಸ್ ವರ್ಗ, ನಿಯೊನ್ಯಾತೀ ಉಪವರ್ಗ, ಪ್ಯಾಸೆರಿಫಾರ್ಮೀಸ್ ಗಣದ, ಸ್ಟಾರ್ಲಿಂಗ್ ಕುಟುಂಬಕ್ಕೆ ಸೇರಿದ (ಸ್ಟರ್ನಿಡೀ) ಪಕ್ಷಿಯಾಗಿದೆ. ಇದರಲ್ಲಿ ಹಲವಾರು ಬಗೆಯ ಹಕ್ಕಿಗಳಿವೆ. ಇದರಲ್ಲಿ ಆಕ್ರಿಡೊತೀರಸ್, ಸ್ಟರ್ನಸ್, ಗ್ರ್ಯಾಕುಲ, ಸಾರೊಗ್ಲಾಸ್, ಮಿನೊ ಮತ್ತು ಏಪ್ಲಾನಿಸ್ ಎಂಬ ಆರು ಜಾತಿಗಳೂ ಇವುಗಳಿಗೆ ಸೇರಿದ ಒಟ್ಟು ಸುಮಾರು 18 ಪ್ರಭೇದಗಳೂ ಉಂಟು. ಇವುಗಳ ಪೈಕಿ ಪ್ರಧಾನ ಬಗೆಯೆನಿಸಿಕೊಂಡಂಥವು ಆಕ್ರಿಡೊತೀರಸ್ ಟ್ರಿಸ್ಟಿಸ್ (ಸಾಮಾನ್ಯ ಮೈನ), ಆಕ್ರಿಡೊತೀರಸ್ ಬೆಂಜಿಯಾನಸ್ (ಬ್ಯಾಂಕ್ ಮೈನ), ಆ. ಫಸ್ಕಸ್ (ಕಾಡುಮೈನ), ಸ್ಟರ್ನಸ್ ಪಗೋಡಾರಮ್ (ಕಪ್ಪು ತಲೆಯ ಮೈನ), ಸ್ಟ.ರೋಸಿಯಸ್ (ಸ್ಟಾರ್ಲಿಂಗ್ ಅಥವಾ ರೋಸಿ ಪ್ಯಾಸ್ಟರ್) ಮತ್ತು ಗ್ರ್ಯಾಕುಲ ರಿಲಿಜಿಯೋಸ (ಬೆಟ್ಟದ ಮೈನ).

ಮೈನಾ ದಕ್ಷಿಣ ಏಷ್ಯಾಕ್ಕೆ, ವಿಶೇಷವಾಗಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸ್ಥಳೀಯವಾಗಿರುವ ಪ್ಯಾಸರೀನ್ ಪಕ್ಷಿಗಳ ಗುಂಪಾಗಿದೆ. ಉತ್ತರ ಅಮೇರಿಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫಿಜಿ ಮತ್ತು ನ್ಯೂಜಿಲೆಂಡ್‌ನಂತಹ ಪ್ರದೇಶಗಳಿಗೆ ಹಲವಾರು ಜಾತಿಗಳನ್ನು ಪರಿಚಯಿಸಲಾಗಿದೆ, ವಿಶೇಷವಾಗಿ ಸಾಮಾನ್ಯ ಮೈನಾ. ಇದನ್ನು ಆಕ್ರಮಣಕಾರಿ ಪ್ರಭೇದವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಿಂಗಾಪುರದಲ್ಲಿ ಮತ್ತು ಚೈನೀಸ್‌ನಲ್ಲಿ ಕ್ರಮವಾಗಿ "ಸೆಲರಾಂಗ್" ಮತ್ತು "ಟೆಕ್ ಮೆಂಗ್" ಎಂದು ಕರೆಯಲಾಗುತ್ತದೆ.

ಮೈನಾಗಳು ಸ್ವಾಭಾವಿಕ ಗುಂಪಲ್ಲ.[] ಬದಲಿಗೆ, ಮೈನಾ ಎಂಬ ಪದವನ್ನು ಭಾರತೀಯ ಉಪಖಂಡದ ಯಾವುದೇ ಸ್ಟಾರ್ಲಿಂಗ್‌ಗೆ, ಅದರ ಸಂಬಂಧಗಳನ್ನು ಲೆಕ್ಕಿಸದೆ ಬಳಸಲಾಗುತ್ತದೆ. ಸ್ಟಾರ್ಲಿಂಗ್‌ಗಳ ವಿಕಸನದ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿ ಈ ಹಕ್ಕಿಗಳು ಎರಡು ಬಾರಿ ವಲಸೆ ಹೂಡಿದವು, ಮೊದಲು ಕೋಲೆಟೊ ಮತ್ತು ಅಪ್ಲೋನಿಸ್ ವಂಶಾವಳಿಗಳಿಗೆ ಸಂಬಂಧಿಸಿದ ಪೂರ್ವಜ ಸ್ಟಾರ್ಲಿಂಗ್‌ಗಳು ಮತ್ತು ಲಕ್ಷಾಂತರ ವರ್ಷಗಳ ನಂತರ ಸಾಮಾನ್ಯ ಸ್ಟಾರ್ಲಿಂಗ್ ಮತ್ತು ವಾಟಲ್ ಸ್ಟಾರ್ಲಿಂಗ್‌ನ ಪೂರ್ವಜರಿಗೆ ಸಂಬಂಧಿಸಿದ ಪಕ್ಷಿಗಳು. ಮೈನಾಗಳ ಈ ಎರಡು ಗುಂಪುಗಳನ್ನು ಎರಡನೆಯದರ ಹೆಚ್ಚು ಭೂಮಿಯ ರೂಪಾಂತರಗಳಲ್ಲಿ ಪ್ರತ್ಯೇಕಿಸಬಹುದು. ಎರಡನೆಯದು ಸಾಮಾನ್ಯವಾಗಿ ತಲೆ ಮತ್ತು ಉದ್ದವಾದ ಬಾಲಗಳನ್ನು ಹೊರತುಪಡಿಸಿ ಕಡಿಮೆ ಹೊಳಪುಳ್ಳ ಪುಕ್ಕಗಳನ್ನು ಹೊಂದಿರುತ್ತದೆ. ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ಮತ್ತು ಕಾಡಿನಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಬಾಲಿ ಮೈನಾ ಹೆಚ್ಚು ವಿಶಿಷ್ಟವಾಗಿದೆ.

ಅಕ್ರಿಡೊತೀರೀಸ್ ಟ್ರಿಸ್ಟಿಸ್

ಕೆಲವು ಮೈನಾಗಳನ್ನು ಮಾತನಾಡುವ ಪಕ್ಷಿಗಳೆಂದು ಪರಿಗಣಿಸಲಾಗುತ್ತದೆ. ಮೈನಾ ಪದವು ಹಿಂದಿ ಭಾಷೆಯಿಂದ ಬಂದಿದೆ, ಅದು ಸ್ವತಃ ಸಂಸ್ಕೃತದ ಮದನಾ ಪದದಿಂದ ಬಂದಿದೆ.[][]

ಗುಣಲಕ್ಷಣಗಳು

[ಬದಲಾಯಿಸಿ]

ಸಾಮಾನ್ಯವಾಗಿ ಮೈನಾ ಗಾತ್ರದಲ್ಲಿ ಬುಲ್‍ಬುಲ್ ಮತ್ತು ಪಾರಿವಾಳಗಳ ಮಧ್ಯೆ ಅಂದರೆ ಸುಮಾರು 20 ಸೆಂ.ಮೀ. ಉದ್ದವಿರುವುದು. ಇದಕ್ಕೆ ಗೊರವಂಕ ಎಂಬ ಹೆಸರೂ ಉಂಟು. ದೇಹದ ಬಣ್ಣ ಕಪ್ಪು ಮಿಶ್ರಿತ ಕಂದು. ತಲೆ ಕಪ್ಪು ಬಣ್ಣದ್ದು. ಕೊಕ್ಕು ಮತ್ತು ಕಾಲುಗಳು ಹಳದಿ ಬಣ್ಣದವು. ಕಣ್ಣುಗಳ ಸುತ್ತ ಗರಿಗಳಿಲ್ಲ. ಹಾರುವಾಗ ರೆಕ್ಕೆಗಳಲ್ಲಿ ಬಿಳಿ ಬಣ್ಣದ ಗುರುತು ಕಾಣುತ್ತದೆ. ಸಾಮಾನ್ಯ ಮೈನ ಹಾರುವಾಗ ರೆಕ್ಕೆಗಳಲ್ಲಿ ಬಿಳಿ ಬಣ್ಣದ ಗುರುತು ಕಾಣುತ್ತದೆ. ಸಾಮಾನ್ಯ ಮೈನಾ ಭಾರತಾದ್ಯಂತ ಕಾಣಸಿಗುವ ಹಕ್ಕಿ. ರೆಕ್ಕೆಯ ಮೇಲೆ ಬಿಳಿ ಪಟ್ಟಿ ಹೊಂದಿರುವುದನ್ನು ಮೈನಾ ಎಂದೂ ಹಾಗೆ ಇಲ್ಲದವನ್ನು ಸ್ಟಾರ್ಲಿಂಗ್ ಎಂದೂ ಕರೆಯುತ್ತಾರೆ.

ಮೈನಾಗಳು ಬಲವಾದ ಪಾದಗಳನ್ನು ಹೊಂದಿರುವ ಮಧ್ಯಮ ಗಾತ್ರದ ಪ್ಯಾಸರೈನ್‍ಗಳಾಗಿವೆ. ಇವುಗಳ ಹಾರಾಟವು ಪ್ರಬಲವಾಗಿದೆ ಮತ್ತು ನೇರವಾಗಿರುತ್ತದೆ, ಮತ್ತು ಇವು ಗುಂಪುಗೂಡಿಕೊಂಡಿರುತ್ತವೆ. ಇವು ಕೀಟಗಳು, ಕಾಳು ಮತ್ತು ಹಣ್ಣುಗಳನ್ನು ಅಹಾರವಾಗಿ ತಿನ್ನುತ್ತವೆ. ಹುಲ್ಲುಗಾವಲು ಇಲ್ಲವೇ ಹೊಲಗಳಲ್ಲಿ ಮಿಡತೆಗಳನ್ನು ಹಿಡಿದು ತಿನ್ನುವುದಲ್ಲದೆ ಹೊಲ ತೋಟ ಇತ್ಯಾದಿಗಳನ್ನು ಉಳುವಾಗ ಹಾರುವ ಕೀಟಗಳನ್ನು ಆರಿಸಿ ತಿನ್ನುತ್ತದೆ.

ಪುಕ್ಕಗಳು ಸಾಮಾನ್ಯವಾಗಿ ಗಾಢವಾಗಿದ್ದು, ಸಾಮಾನ್ಯವಾಗಿ ಕಂದು ಬಣ್ಣದಲ್ಲಿರುತ್ತವೆ. ಆದಾಗ್ಯೂ ಕೆಲವು ಪ್ರಭೇದಗಳು ಹಳದಿ ತಲೆಯ ಅಲಂಕಾರಗಳನ್ನು ಹೊಂದಿರುತ್ತವೆ.

ಹೆಚ್ಚಿನ ಜಾತಿಗಳು ರಂಧ್ರಗಳಲ್ಲಿ ಗೂಡುಕಟ್ಟುತ್ತವೆ. ಕೆಲವು ಜಾತಿಗಳು ತಮ್ಮ ಅನುಕರಣೆಯ ಕೌಶಲ್ಯಗಳಿಗೆ ಹೆಸರುವಾಸಿಯಾಗಿವೆ. ಸಾಮಾನ್ಯ ಬೆಟ್ಟದ ಮೈನಾ ಇವುಗಳಲ್ಲಿ ಒಂದಾಗಿದೆ.

ಕಾಗೆ, ಗುಬ್ಬಚ್ಚಿ, ಹದ್ದುಗಳಂತೆಯೇ ಮೈನಾ ಜನನಿಬಿಡ ಪ್ರದೇಶಗಳಲ್ಲಿಯೂ ಯಾವ ಭಯವೂ ಇಲ್ಲದೆ ವಾಸಿಸುವುದನ್ನು ಕಾಣಬಹುದು. ಪ್ರತಿ ದಿನ ಸಂಜೆ ಸೂರ್ಯಾಸ್ತದ ವೇಳೆ ಬಳಗದ ಎಲ್ಲ ಹಕ್ಕಿಗಳೂ ಯಾವುದಾದರೂ ಆಯ್ದ ದೊಡ್ಡ ಮರದಲ್ಲೊ ತೆಂಗಿನ ತೋಪುಗಳಲ್ಲೊ ಕಬ್ಬಿನ ಗದ್ದೆಗಳಲ್ಲೊ ಕಲೆತು ರಾತ್ರಿ ವಿಶ್ರಮಿಸುವುವು.

ಜಾತಿಗಳು

[ಬದಲಾಯಿಸಿ]

ಕೆಳಗಿನವುಗಳು ಮೈನಾಗಳ ಜಾತಿಗಳಾಗಿವೆ.

ಕಾಡು ಮತ್ತು ಬೆಟ್ಟದ ಮೈನಾಗಳು

[ಬದಲಾಯಿಸಿ]
  • ಹಳದಿ ಮುಖದ ಮೈನಾ, ಮಿನೋ ಡುಮೊಂಟಿ
  • ಗೋಲ್ಡನ್ ಮೈನಾ, ಮಿನೋ ಅನೈಸ್
  • ಉದ್ದ ಬಾಲದ ಮೈನಾ, ಮಿನೋ ಕ್ರೆಫ್ಟಿ
  • ಸುಲವೆಸಿ ಮೈನಾ, ಬೆಸಿಲೋರ್ನಿಸ್ ಸೆಲೆಬೆನ್ಸಿಸ್
  • ಹೆಲ್ಮೆಟ್ ಮೈನಾ, ಬೆಸಿಲೋರ್ನಿಸ್ ಗಲೇಟಸ್
  • ಲಾಂಗ್-ಕ್ರೆಸ್ಟೆಡ್ ಮೈನಾ, ಬೆಸಿಲೋರ್ನಿಸ್ ಕೊರಿಥೈಕ್ಸ್

ನಿಜ ಮೈನಾ

[ಬದಲಾಯಿಸಿ]
  • ಗ್ರೇಟ್ ಮೈನಾ, ಅಕ್ರಿಡೋಥೆರೆಸ್ ಗ್ರಾಂಡಿಸ್
  • ಕ್ರೆಸ್ಟೆಡ್ ಮೈನಾ, ಅಕ್ರಿಡೋಥೆರೆಸ್ ಕ್ರಿಸ್ಟಾಟೆಲಸ್
  • ಜಾವಾದ ಮೈನಾ, ಅಕ್ರಿಡೋಥೆರೆಸ್ ಜಾವಾನಿಕಸ್

ಕೆಲವು ಪ್ರಭೇದಗಳು

[ಬದಲಾಯಿಸಿ]
  • ಆಕ್ರಿಡತೀರಸ್ ಜಿಂಜಿಯಾನಸ್ ಅಥವಾ ಬ್ಯಾಂಕ್ ಮೈನ ಎಂಬುದು ಟ್ರಿಸ್ಟಿಸ್ ಪ್ರಭೇದಕ್ಕಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಸಾಮಾನ್ಯ ಮೈನ ಹಕ್ಕಿಯಂತಿರದೆ ತಿಳಿನೀಲಿ ಮಿಶ್ರಿತ ಬೂದಿ ಬಣ್ಣದ ಗರಿಗಳನ್ನು ಪಡೆದಿದೆ. ಕಣ್ಣಿನ ಸುತ್ತಲಿನ ಚರ್ಮ ತಿಳಿಕೆಂಪು ಬಣ್ಣದಿಂದ ಕೂಡಿದೆ. ಉತ್ತರ ಭಾರತದಲ್ಲಿ ಸಿಂಧ್‌ನಿಂದ ಪೂರ್ವ ಬಂಗಾಲದವರೆಗೂ ದಕ್ಷಿಣದಲ್ಲಿ ಮುಂಬೈವರೆಗೂ ಕಾಣಬರುವುವು. ಇದು ಅಷ್ಟಾಗಿ ವಲಸೆ ಹೋಗುವುದಿಲ್ಲ.
  • ಸ್ಟರ್ನಸ್ ಪಗೋಡಾರಮ್ ಅಥವಾ ಕಪ್ಪು ತಲೆಯ ಮೈನ ಮತ್ತೊಂದು ಜಾತಿ. ಇದು ಸಾಮಾನ್ಯ ಮೈನಕ್ಕಿಂತ ಸಣ್ಣದು. ಮೈಬಣ್ಣ ಬೂದಿ, ಉದರ ಭಾಗ ಮಾತ್ರ ತಿಳಿಗೆಂಪು. ತಲೆಯ ಮೇಲೆ ಕಪ್ಪು ಬಣ್ಣದ ಶಿಖೆಯುಂಟು. ಭಾರತಾದ್ಯಂತ ಕಾಣದೊರೆಯುತ್ತದೆ. ಕುರುಚಲು ಕಾಡುಗಳ ಬಳಿ ಹೆಚ್ಚು ಸಾಮಾನ್ಯ. ಸಾದರಣವಾಗಿ 6-12 ಹಕ್ಕಿಗಳು ಒಟ್ಟಿಗೆ ತೋಪುಗಳಲ್ಲಿ ಇಲ್ಲವೇ ತೋಟಗಳಲ್ಲಿ ವಾಸಿಸುತ್ತವೆ. ಹಣ್ಣುಗಳು, ಕೀಟ, ಮಿಡತೆಗಳು, ಕಂಬಳಿಹುಳುಗಳನ್ನು ತಿನ್ನುತ್ತದೆ. ಇದನ್ನು ಕನ್ನಡದಲ್ಲಿ ಬೈತಲೆ ಬಸವಿ ಎಂದು ಕರೆಯುತ್ತಾರೆ.
  • ಗ್ರ್ಯಾಕುಲ ರಿಲಿಜಿಯೋಸ ಅಥವಾ ಬೆಟ್ಟದ ಮೈನ ಸಾಮಾನ್ಯ ಮೈನಾ ಹಕ್ಕಿಗಿಂತ ದೊಡ್ಡದು.[] ಪೂರ್ತಿ ಕಪ್ಪು ಬಣ್ಣದ ಹಕ್ಕಿಯಿದು. ಕೊಕ್ಕು ಮತ್ತು ಕಾಲುಗಳು ಕಿತ್ತಳೆ ಹಳದಿ ಬಣ್ಣದವು. ಕತ್ತಿನ ಹಿಂಭಾಗ ಮತ್ತು ತಲೆಯ ಪಕ್ಕಗಳಲ್ಲಿ ಕಿತ್ತಳೆ ಬಣ್ಣದ ಗರಿಸಹಿತ ಚರ್ಮ ಉಂಟು. ಘಟ್ಟಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸ. ತುಂಬ ಸದ್ದುಗೈಯುತ್ತ ಕಾಡು ಅತ್ತಿ ಮುಂತಾದ ಹಣ್ಣುಗಳನ್ನು ತಿನ್ನುತ್ತ ಕಾಲ ಕಳೆಯುತ್ತದೆ. ಬಲು ಮಾತುಗಾರ ಹಕ್ಕಿ ಎನಿಸಿದ ಇದು ಬೇರೆ ಹಕ್ಕಿಗಳ ಧ್ವನಿಯನ್ನೂ ಮನುಷ್ಯರ ಮಾತುಗಳನ್ನೂ ಅನುಕರಿಸುತ್ತದೆ.[] ಹೀಗಾಗಿ ಮೆಚ್ಚಿನ ಪಂಜರ ಹಕ್ಕಿಯಾಗಿ ಇದನ್ನು ಸಾಕುವುದುಂಟು.
  • ರೋಸಿ ಪ್ಯಾಸ್ಟರ್ ಹಕ್ಕಿ (ಸ್ಟರ್ನಸ್ ರೋಸಿಯಸ್) ಸಾಮಾನ್ಯ ಮೈನ ಹಕ್ಕಿಯ ಗಾತ್ರದ್ದು. ಇದರ ಮೈಬಣ್ಣ ಗುಲಾಬಿಕೆಂಪು. ತಲೆ, ಕತ್ತು, ಎದೆಯ ಮೇಲ್ಭಾಗ, ರೆಕ್ಕೆಗಳು ಮತ್ತು ಬಾಲ ಕಪ್ಪು ಬಣ್ಣದವು. ಉತ್ತರ ಭಾರತ ಮತ್ತು ದಖನ್ ಪ್ರದೇಶದಲ್ಲಿ ಬಲು ಸಾಮಾನ್ಯ. ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತದೆ. ಇದು ಕೂಡ ಪ್ರಧಾನವಾಗಿ ಫಲಭಕ್ಷಕ ಪಕ್ಷಿ. ಅಲ್ಲದೆ ಕೀಟ, ಮಿಡತೆಗಳನ್ನೂ ತಿಂದು ಕೃಷಿಕರಿಗೆ ಉಪಕಾರಿ ಎನಿಸಿದೆ. ಜೊತೆಗೆ ಹಲವಾರು ಜಾತಿ ಆಲ, ಅತ್ತಿ ಮರಗಳ ಪರಾಗಸ್ಪರ್ಷ ಕ್ರಿಯೆಗೆ ಸಹಕಾರಿ ಎನಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Zuccon et al. 2006.
  2. "myna". Collins English Dictionary - Complete & Unabridged (11th ed.). Retrieved November 22, 2012 – via CollinsDictionary.com.
  3. "myna". New Oxford American Dictionary.
  4. Ali & Ripley (1983), Grimmett et al. (1998)
  5. Klatt & Stefanski (1974), Klingholz (1979)


ಮೂಲಗಳು

[ಬದಲಾಯಿಸಿ]
  • Zuccon, Dario; Cibois, Alice; Pasquet, Eric; Ericson, Per G. P. (2006). "Nuclear and mitochondrial sequence data reveal the major lineages of starlings, mynas and related taxa". Molecular Phylogenetics and Evolution. 41 (2): 333–344. doi:10.1016/j.ympev.2006.05.007. PMID 16806992.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೈನಾ&oldid=1200904" ಇಂದ ಪಡೆಯಲ್ಪಟ್ಟಿದೆ