ವಿಷಯಕ್ಕೆ ಹೋಗು

ಪರಿಧಮನಿಯ ಸ್ಟೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೃದಯ ಮತ್ತು ಅದರ ಮಾಂಸಖಂಡಗಳಿಗೆ ರಕ್ತಪೂರೈಕೆ ಮಾಡುವ ರಕ್ತನಾಳಗಳನ್ನು ತೋರಿಸುವ ಚಿತ್ರ. * (1-LCA) ಎಡ ಪರಿಧಮನಿಯ ಒಂದು ಶಾಖೆ (ಎಲ್‍ಸಿಎ); * (2-RCA) ಬಲ ಪರಿಧಮನಿ (ಆರ್.ಸಿ.ಎ); * ಮುಂಭಾಗದ ಹೊರಪದರದ ತುದಿ (ಒಂದು ತುತ್ತತುದಿಯ ಸತ್ತ ರಕ್ತನಾಳ )

ವೈದ್ಯವಿಜ್ಞಾನದಲ್ಲಿ, ಸ್ಟೆಂಟ್ ಎಂದರೆ ಸಾಮಾನ್ಯವಾಗಿ ಮಿಶ್ರ ಲೋಹ ಅಥವಾ ಪಾಲಿಮರ್‌ನಿಂದ ನಿರ್ಮಿಸಲಾದ ನಳಿಕೆ.

ಹೃದಯ ಸಂಬಂಧಿ ರೋಗ, ಎದೆನೋವಿನಿಂದ ಬಳಲುವವರಿಗೆ ಎಂಜಿಯೊಪ್ಲಾಸ್ಟಿ (ಬೈಪಾಸ್ ಶಸ್ತ್ರಚಿಕಿತ್ಸೆ) ಮೂಲಕ ಸ್ಟೆಂಟ್ ಅಳವಡಿಸಿ ಕೃತಕವಾಗಿ ರಕ್ತ ಪರಿಚಲನೆಗೆ ಅನುವು ಮಾಡಿಕೊಡುವ ವಿಧಾನವೇ ಸ್ಟೆಂಟ್ ಅಳವಡಿಸುವುದು.[]

  • ಪರಿಧಮನಿಗೆ ಅಳವಡಿಸುವ ಸ್ಟೆಂಟ್ ಚಿತ್ರ:[೧]

ಕಿರೀಟಕ ಧಮನಿ ಸುರೂಪಿಕ ಚಿಕಿತ್ಸೆಯು ಅನೇಕ ಕಿರೀಟಕ ಧಮನಿ ರೋಗಿಗಳಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿದೆ. ಆದರೂ ಕೆಲವೊಮ್ಮೆ ಈ ಚಿಕಿತ್ಸೆಯನ್ನು ಕೈಗೊಂಡ ನಂತರ ಕೂಡಲೇ ಧಮನಿಯಲ್ಲಿ ತಡೆಯುಂಟಾಗಬಹುದು ಇಲ್ಲವೆ ಕಾಲಾಂತರದಲ್ಲಿ ಮತ್ತೆ ರಕ್ತಪ್ರವಾಹಕ್ಕೆ ಅಡ್ಡಿಯಾಗುವಂತೆ ಧಮನಿಯ ಒಳವ್ಯಾಸ ಕಿರಿದಾಗಬಹುದು. ಇಂತಹ ಸನ್ನಿವೇಶದಲ್ಲಿ ಪಕಳೆಯನ್ನು ತೆಗೆದು ಹಾಕುವ ಇಲ್ಲವೆ ಬೆಸೆಯುವ ವಿಧಾನಗಳಿಗಿಂತ ಧಮನಿಗೆ ಒಳಗಿನಿಂದ ಆಧಾರನೀಡಿ ಅದರ ಮಾರ್ಗ ತೆರೆದಿರುವಂತೆ ಮಾಡುವ ವಿಧಾನ (ಸ್ಟೆಂಟ್ ಅಳವಡಿಕೆ) ಕ್ಕೆ ಹೆಚ್ಚು ಪ್ರಾಶಸ್ತ್ಯ ದೊರಕಿದೆ.

ಧಮನಿಗೆ ಆಧಾರವೆಂದರೆ ಧಮನಿಯಲ್ಲಿ ರಕ್ತವನ್ನು ಕೇಂಕೇಯ್ಯುವ ತನ್ನ ಕಾರ್ಯವನ್ನು ಸರಾಗವಾಗಿ ಜರುಗುವಂತೆ ಅದರ ಒಳಭಾಗದಲ್ಲಿ ಆಧಾರದ ಬೆಂಬಳಿಕ (ಸ್ಟೆಂಟ್)ಯನ್ನು ನೀಡುವುದಾಗಿದೆ.

ಸ್ಟೆಂಟ್‌

[ಬದಲಾಯಿಸಿ]
ಒಂದು ಪರಿಧಮನಿಯ ಸ್ಟೆಂಟ್ ಮಾದರಿ. ಈ ಟಾಕ್ಸಸ್ ಸ್ಟೆಂಟ್ ಔಷಧಯುಕ್ತ ಸ್ಟೆಂಟ್ ಎಂದು ಕರೆಯಲಾಗುತ್ತದೆ. Taxus stent FDA

ಸ್ಟೆಂಟ್‌ ಅಂದರೆ ಅತ್ಯಂತ ಸಣ್ಣದಾದ, ಹಿಗ್ಗುವ ಪುಟಾಣಿ ನಳಿಕೆ. ಇದು ಜಾಲರಿಯಂತೆ ಇರುತ್ತದೆ. ಹೃದಯ ರಕ್ತನಾಳದಲ್ಲಿ ತಡೆ ಉಂಟಾದರೆ ಅವುಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಪ್ಲಾಕ್‌ ಎಂಬ ಜಿಡ್ಡಿನ ರೀತಿಯ ಸಂರಚನೆ ಹೃದಯ ರಕ್ತನಾಳದ ಒಳಗೆ ಬೆಳೆದಿದ್ದರೆ ಆಗ ಪ್ರಮುಖ ರಕ್ತನಾಳದಲ್ಲಿ ಸರಾಗ ರಕ್ತ ಸಂಚಾರಕ್ಕೆ ತಡೆಯಾಗುತ್ತದೆ. ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದಲೂ ಪ್ರಮುಖ ರಕ್ತನಾಳದಲ್ಲಿ ತಡೆಯಾಗಬಹುದು. ಈ ಸಂದರ್ಭದಲ್ಲಿ ವ್ಯಕ್ತಿಗೆ ಎದೆನೋವು, ಹೃದಯಸ್ತಂಭನ, ಹೃದಯದ ಕಾಯಿಲೆ ಉಂಟಾಗುತ್ತದೆ. ಈ ಸಂದರ್ಭ ಪ್ರಮುಖ ರಕ್ತನಾಳವನ್ನು ಸರಾಗವಾಗಿಸಲು ಈ ಸ್ಟೆಂಟ್‌ಗಳ ಬಳಕೆಯಾಗುತ್ತದೆ. ಇಂತಹ ಸ್ಟೆಂಟ್‌‌ಗಳಿಗೆ ಪರಿಧಮನಿಯ ಸ್ಟೆಂಟ್ ಎಂದು ಕರೆಯುತ್ತಾರೆ. ಇದು ಲೋಹದಿಂದ ಮಾಡಿದ್ದು. ಒಂದು ಸಾಮಾನ್ಯ (ಬಿಎಮ್‌ಎಸ್‌) ಸ್ಟೆಂಟ್‌ ಆದರೆ ಇನ್ನೊಂದು ಔಷಧ ಹೊರಸೂಸುವ (ಡ್ರಗ್‌ ಇಲ್ಯೂಟಿಂಗ್‌) ಸ್ಟೆಂಟ್‌. ಈ ಸ್ಟೆಂಟ್‌ ನಿಧಾನವಾಗಿ ರಕ್ತನಾಳದಲ್ಲಿ ಔಷಧವನ್ನು ಹೊರಸೂಸಿ ತಡೆಯನ್ನು ತೆರವುಗೊಳಿಸುತ್ತದೆ. ಇಂತಹ ಪರಿಧಮನಿಯ ಸ್ಟೆಂಟ್‌ಗಳನ್ನು ಹೃದಯ ರಕ್ತನಾಳದಲ್ಲಿ ಕೂರಿಸುವ ಪ್ರಕ್ರಿಯೆಗೆ ಆ್ಯಂಜಿಯೋಪ್ಲಾಸ್ಟಿ ಎಂದು ಹೆಸರು.[]

ಕಿರೀಟದ ಧಮನಿಗೆ ಆಧಾರ ನೀಡುವ ಸ್ಟೆಂಟನ್ನು ಕೂಡಲೇ ಅದರೊಳಗಿನ ಅಡ್ಡಿಯ ಪ್ರದೇಶದೊಳಕ್ಕೆ ಸರಿಯಾಗಿ ಸೇರಿಕೊಳ್ಳುವ ರೀತಿಯಲ್ಲಿ ರೂಪಿಸಲಾಗಿದೆ. ಅದಕ್ಕೆ ಬಳಸುವ ವಸ್ತು ಮತ್ತು ಆಕೃತಿ ಮಣಿಯುವಂತಿದ್ದು ಅದನ್ನು ಬಲೂನಿನ ಸಹಾಯದಿಂದ ಹಿಗ್ಗಿಸಬಹುದಾಗಿದೆ. ಹಾಗೆ ಮಾಡಿದಾಗ ಆ ಸಾಧನ ಕಿರೀಟಕ ಧಮನಿಯ ಆಕೃತಿ ಮತ್ತು ವಕ್ರತೆಗೆ ಹೊಂದಿಕೊಳ್ಳುತ್ತದೆ. ಸೀಳಿಕೊಂಡ ಕಿರೀಟಕ ಧಮನಿಗೆ ಆಧಾರ ನೀಡುವ ವಸ್ತು ರಕ್ತಕರಣೆಗೆ ಹೆಚ್ಚಾಗಿ ಆಪ್ಸರವೀಯದ ತುಕ್ಕು ಹಿಡಿಯದ ಉಕ್ಕಿನ ಕೊಳವೆ ತಂತಿಯ ಅಥವ ಟಾಂಟಲಮ್ ಎಳೆಗಳ ಬಲೆಯಾಗಿದೆ. ಉಕ್ಕಿನ ತಂತಿ 1. ಮಿ. ಮೀ ಉದ್ದ 1.6 ಮಿ.ಮೀ. ಸುತ್ತಳತೆ ಮತ್ತು 0.4 ಮಿ.ಮೀ.ದಪ್ಪವಾಗಿರುತ್ತದೆ. ಈ ವಿಜಾತಿಯ ವಸ್ತುಗಳು ದೇಹದ ಊತಕಕ್ಕೆ ಒಗ್ಗಬೇಕು. ಅದರಲ್ಲಿ ಬಳಸುವ ಲೋಹ ತುಂಬ ಪರಿಶುದ್ಧವಾಗಿ, ನಯವಾಗಿ ತಿಕ್ಕಲ್ಪಟ್ಟ ಮೇಲ್ಮೈ ಹೊಂದಿರಬೇಕು. ಅದು ಮಣಿಯುವಂತಿರಬೇಕು. ಭದ್ರವಾಗಿ ನೆಲೆಯೂರುವಂತಿರಬೇಕು, ಮತ್ತು ಎಕ್ಸ್-ಕಿರಣಗಳಿಗೆ ಕಾಣಿಸುವಂತಿರಬೇಕು.

ಹೃದಯದಲ್ಲಿ ಸ್ಟೆಂಟ್‌ ಕೂರಿಸುವುದು

[ಬದಲಾಯಿಸಿ]
ಸ್ಟೆಂಟ್ ನಿಯೋಜನೆ ಚಿತ್ರ. 'ಎ' ರಲ್ಲಿ ಕ್ಯಾತಿಟರ್ ಅನ್ನು ಲೀಜ಼ನ್ ಅಡ್ಡಲಾಗಿ ಸೇರಿಸಲಾಗುತ್ತದೆ. 'ಬಿ', ಬಲೂನನ್ನು ಉಬ್ಬಿಸಿದಾಗ ಸ್ಟೆಂಟ್ ವಿಸ್ತರಿಸಿ ಪ್ಲಾಕ್ ಕುಗ್ಗುತ್ತದೆ. 'ಸಿ' ರಲ್ಲಿ ಕ್ಯಾತಿಟರ್ ಮತ್ತು ಗಾಳಿ ತೆಗೆದ ಬಲೂನನ್ನು ತೆಗೆದುಹಾಕಲಾಗಿದೆ. ಮೊದಲು ಮತ್ತು ನಂತರ ಅಪಧಮನಿಯ ಅಡ್ಡ ವಿಭಾಗಗಳು ಸ್ಟೆಂಟ್ ಇರಿಸಿದ್ದರ ಫಲಿತಾಂಶಗಳನ್ನು ತೋರಿಸುವುದು.

ಹೃದಯದ ಪ್ರಮುಖ ರಕ್ತನಾಳಗಳಲ್ಲಿನ ತಡೆಗಳನ್ನು ಕಂಡುಹಿಡಿದ ಬಳಿಕ ವೈದ್ಯರು ಹೃದಯಕ್ಕೆ ಸಾಗುವ ಪ್ರಮುಖ ರಕ್ತನಾಳ (ಕುತ್ತಿಗೆ, ಭುಜ ಇತ್ಯಾದಿ) ಮೂಲಕವಾಗಿ ಪುಟ್ಟ ನಳಿಕೆಯನ್ನು ಹಾಯಿಸುತ್ತಾರೆ. ಇದಕ್ಕೆ ಕ್ಯಾಥಿಟರ್‌ ಎಂದು ಹೆಸರು. ಹೊರಭಾಗದಲ್ಲಿ ಹಿಗ್ಗುವ ಸ್ಟೆಂಟ್‌ ಮತ್ತು ಸ್ಟೆಂಟ್‌ ಹಿಗ್ಗಿಸಲು ಅನುಕೂಲವಾದ ಪುಟ್ಟ ಬಲೂನ್‌ ಇರುತ್ತದೆ. ರಕ್ತನಾಳಕ್ಕೆ ತಡೆಯಾದ ಜಾಗವನ್ನು ಎಕ್ಸ್‌ರೇಯಿಂದ ಗುರುತಿಸಿ ನಿರ್ದಿಷ್ಟ ಜಾಗದಲ್ಲಿ ಅದನ್ನು ಹಿಗ್ಗಿಸಲಾಗುತ್ತದೆ. ಈ ಮೂಲಕ ರಕ್ತನಾಳದಲ್ಲಿನ ತಡೆಯನ್ನು ಬದಿಗೆ ಸರಿಸಿ, ಸರಾಗ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೊಂದು ಅತ್ಯಾಧುನಿಕ ವಿಧಾನದಲ್ಲಿ ಸ್ಟೆಂಟ್‌ಗಳನ್ನು ಬಳಸಿ ರಕ್ತನಾಳದೊಳಗಿನ ಜಿಡ್ಡನ್ನು ತೆಗೆಯಲಾಗುತ್ತದೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ರಕ್ತನಾಳ ಬಂದ್‌ ಆಗಿದ್ದಲ್ಲಿ ಸ್ಟೆಂಟ್‌ ಅಳವಡಿಕೆ ಬಳಿಕ ರಕ್ತ ಹೆಪ್ಪುಗಟ್ಟದಂತೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆ.[]

ಕಿರೀಟಕ ಧಮನಿಯ ಆಧಾರ ಸಾಧನವಾದ ಸ್ಟೆಂಟನ್ನು ಬಲೂನು ತುದಿ ಹೊಂದಿದ ತೂರ್ನಳಿಗೆಯಲ್ಲಿ ಇರಿಸಿ ಅದನ್ನು ಚರ್ಮದ ಮೂಲಕ ಕಿರೀಟಕ ಧಮನಿಯೊಳಕ್ಕೆ ಸಾಗಿಸಿ ಅಡ್ಡಿಯಿರುವ ನಿರ್ದಿಷ್ಟ ತಾಣವನ್ನು ತಲುಪಿಸಬೇಕು. ಆಗ ಬಲೂನನ್ನು ನಿಧಾನವಾಗಿ ಉಬ್ಬುವಂತೆ ಮಾಡಿದರೆ ಮಣಿದ ತಂತಿಯ ಬಲೆಯು ಹಿಗ್ಗುವುದು. ನಂತರ ಬಲೂನನ್ನು ಕುಗ್ಗಿಸಿ ತೂರ್ನಳಿಗೆಯನ್ನು ಹೊರ ತೆಗೆಯಬೇಕು.[][][][] ಅಗಲಗೊಂಡ ಬಲೆಯ ಆಧಾರ ಕಿರೀಟಕಧಮನಿಯೊಳಗೆ ಉಳಿಯುವುದು. ಅದು ಸೇರಿಸಲ್ಪಟ್ಟ ಕೆಲವು ಗಂಟೆಗಳಲ್ಲಿ ಕಿರುಫಲಕಗಳು ಮತ್ತು ಕರಣೆ ವಸ್ತುವಿನ ತೆಳು ಪದರು ಅದರ ಮೇಲೆ ಹರಡುವುದು. ಒಂದೆರಡು ವಾರಗಳಲ್ಲಿ ಅಲ್ಲಿ ಧಮನಿಯ ಒಳಪದರು ಬೆಳೆಯುವುದು.

ಸ್ಟೆಂಟ್ ಯಾವಾಗ ಬಳಸಬಹುದು

[ಬದಲಾಯಿಸಿ]

ಈ ವಿಧಾನವನ್ನು ಚರ್ಮದ ಮೂಲದ ಧಮನಿಯೊಳಗಿನಿಂದ ಕಿರೀಟಕ ಧಮನಿಯ ಸುರೂಪಿಕ ಚಿಕಿತ್ಸೆಯ (ಆಂಜಿಯೋಪ್ಲಾಸ್ಟಿ) ಯನ್ನು ಮಾಡಿಸಿಕೊಂಡ ವ್ಯಕ್ತಿಯಲ್ಲಿ ಕೂಡಲೇ ರಕ್ತನಾಳ ಕುಗ್ಗಿ ಹೋಗಿ ರಕ್ತಪರಿಚಲನೆಗೆ ಭಂಗವನ್ನುಂಟು ಮಾಡಿದ ಸನ್ನಿವೇಶದಲ್ಲಿ ಬಳಸಲು ಪುರಸ್ಕಾರವಿದೆ. ಅಲ್ಲಿ ಕಿರೀಟಕ ಧಮನಿಯ ಗಾತ್ರ ಕನಿಷ್ಠ 3 ಮಿಲಿಮೀಟರ್‌ನಷ್ಟಾದರೂ ಇರಬೇಕು. ಶಿರೆಯನಾಟ ಮಾಡಿದ ನಂತರ ಕಿರೀಟಕ ಧಮನಿಯ ರಕ್ತಪೂರೈಕೆ ಅಸಮರ್ಪಕವಾದ ಕೆಲವು ಸನ್ನಿವೇಶಗಳಲ್ಲೂ ಈ ವಿಧಾನವನ್ನು ಅನುಸರಿಸಲಾಗುವುದು. ಈ ವಿಧಾನದಿಂದ ಆಂಜಿಯೋಪ್ಲಾಸ್ಟಿ ನಂತರ ಉಂಟಾಗಬಹುದಾದ ಮರು ಅಡ್ಡಿಯ ಸಂಭಾವ್ಯವನ್ನು ಕಡಿಮೆ ಮಾಡಿಲ್ಲವಾದರೂ ತುರ್ತಾಗಿ ಕಿರೀಟಕ ಧಮನಿಯ ಬದಲಿ ಹಾದಿಯ ನಾಡಿ ಶಸ್ತ್ರಚಿಕಿತ್ಸೆಯ ಸಂಭಾವ್ಯವನ್ನು ಕಡಿಮೆಮಾಡಿದೆ. ಸ್ಟೆಂಟ್ ವಿಧಾನವನ್ನು ಬೈಪಾಸ್ ನಾಡಿಯಲ್ಲಿನ ಧಮನಿ ಪೆಡಸಣೆಯ ಚಿಕಿತ್ಸೆಯಲ್ಲಿ ಬಳಸಬಹುದು.

ಸ್ಟೆಂಟ್ ಇರಿಸಿದ ಮೇಲೂ ಪುನಃ ಧಮನಿ ಕಿರಿದುಗೊಂಡಲ್ಲಿ ಕಿರೀಟಕ ಧಮನಿಯೊಳಕ್ಕೆ ಬೀಟಾ-ವಿಕಿರಣತೆ (ಬ್ರಾಕಿಥೆರಪಿ)ಯನ್ನು ನೀಡಿ ಚಿಕಿತ್ಸೆಗೊಳಪಡಿಸಬಹುದು. ಸ್ಧಳಿಕವಾಗಿ ಔಷಧಿಗಳನ್ನು ಹೊರಸೂಸುವ (ಎಕ್ಸ್‌ಟ್ರೂಡ್) ಸ್ಟೆಂಟ್‌ಗಳು ಈಚೆಗೆ ಬಳಕೆಗೆ ಬಂದಿವೆ. ಅವುಗಳ ಜೊತೆ ಸೇರಿಸಿದ ಔಷಧಗಳು (ಟಾಕ್ರೋಲಿಮಸ್, ಸಿರೋಲಿಮಸ್, ಪಾಕ್ಲಿಬಾಕ್ಸೆಲ್) ಸ್ಟೆಂಟಿನಿಂದ ಹೊರಸೂಸಿ ಪ್ರತಿರೋಧವನ್ನು ದಮನ ಮಾಡುತ್ತವೆ ಮತ್ತು ಕೋಶವೃದ್ಧಿಯಾಗಿ ಬೆಳೆಯುವುದನ್ನು ತಪ್ಪಿಸುತ್ತದೆ. ಅದರ ಫಲವಾಗಿ ಕಿರೀಟಕ ಧಮನಿ ಪುನಃ ಕಿರಿದುಗೊಳ್ಳವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.

ತೊಂದರೆಗಳು

[ಬದಲಾಯಿಸಿ]

ಕಿರೀಟಕ ಧಮನಿಗೆ ಆಧಾರ ಒದಗಿಸುವ ಸ್ಟೆಂಟನ್ನು ಸರಿಯಾಗಿ ಆಯ್ದ ವ್ಯಕ್ತಿಗಳಲ್ಲಿ ಸಮರ್ಪಕವಾಗಿ ಕೈಗೊಂಡರೆ ಅದು ಮತ್ತೆ ಮುಚ್ಚಿಕೊಳ್ಳುವ ಪ್ರಮೇಯವನ್ನು ತಪ್ಪಿಸಿಲ್ಲ. ಕೆಲವೊಮ್ಮೆ ರಕ್ತಕರಣೆಯಿಂದ ಅಡ್ಡಿ, ಕಿರೀಟಕ ಧಮನಿಯ ಸಂಕೋಚನ, ಕಿರೀಟಕ ಧಮನಿಯ ರಂಧ್ರಗೊಳಿಕೆ ಮತ್ತು ರಕ್ತೋದ್ರೇಕದಂತಹ ಅಡ್ಡ ಪರಿಣಾಮಗಳು ಗೋಚರಿಸಬಹುದು.

ಭಾರತದಲ್ಲಿ ಸ್ಟೆಂಟ್‍ಗೆ ಸಂಬಂಧಿಸಿದ ಅಂಕಿ ಅಂಶಗಳು

[ಬದಲಾಯಿಸಿ]
ಪರಿಧಮನಿಯೊಳಗೆ ಕೊಬ್ಬು ಶೇಖರಿಸಿರುವ ಚಿತ್ರ.
ಹೃದಯದ ಅಪಧಮನಿಯಲ್ಲಿ ಕೊಬ್ಬು ಸೇರಿ ದ ಹೃದಯ ರೋಗದ ಲಕ್ಷಣ.
  • ಭಾರತದಲ್ಲಿ 2016ರಲ್ಲಿ 4 ಲಕ್ಷ ಸ್ಟಂಟ್ ಗಳನ್ನು ಅಳವಡಿಸಲಾಗಿದೆ.
  • 2017 ರಲ್ಲಿ 5 ಲಕ್ಷ ಸ್ಟೆಂಟ್‍ಗಳನ್ನು ಅಳವಡಿಸುವ ನಿರೀಕ್ಷೆ ಇದೆ.
  • ಭಾರತ 3 ಲಕ್ಷ ಸ್ಟೆಂಟ್‍ಗಳನ್ನು ಅಮದು ಮಾಡಿಕೊಳ್ಳುತ್ತದೆ.
  • ಸ್ಟೆಂಟ್ ವಹಿವಾಟು ಭಾರತದಲ್ಲಿ ಸುಮಾರು 2500 ಕೋಟಿ ರೂಪಾಯಿಗಳದ್ದು.
  • ದೊಡ್ಡ ಮಾರುಕಟ್ಟೆಯಲ್ಲ
  • ಸ್ಟೆಂಟ್‌ಗಳಿಗೆ ಭಾರತ ಜಗತ್ತಿನ ದೊಡ್ಡ ಮಾರುಕಟ್ಟೆ ಅಲ್ಲ ಎಂಬುದು ಹೃದ್ರೋಗ ತಜ್ಞರ ಅಭಿಮತ. ಇಲ್ಲಿ ವರ್ಷಕ್ಕೆ ಆಂಜಿಯೊಪ್ಲಾಸ್ಟಿ ಮಾಡಿಸಿಕೊಳ್ಳುವವರ ಸಂಖ್ಯೆ ಸುಮಾರು 5 ಲಕ್ಷ ಇದ್ದರೆ, ಜಪಾನ್‌ನಲ್ಲಿ ದುಪ್ಪಟ್ಟು ಇದೆ. ಅಮೆರಿಕದಲ್ಲಿ 20 ಲಕ್ಷ ಇದೆ.[]

ಭಾರತದಲ್ಲಿ ಸ್ಟೆಂಟ್ ಬೆಲೆಯ ನಿಯಂತ್ರಣ

[ಬದಲಾಯಿಸಿ]

ಕೇಂದ್ರ ಸರ್ಕಾರ 2018ರಲ್ಲಿ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿ ಹೇರಿತು. ಅಂದರೆ ಯಾವುದೇ ರೀತಿಯ ಸ್ಟೆಂಟ್‌ಗಳನ್ನು (ವಿದೇಶದಿಂದ ಆಮದು ಮಾಡಿದ ಸ್ಟೆಂಟ್‌ ಆಗಿದ್ದರೂ ಕೂಡ) 29,600 ಸಾವಿರ ರೂ. ಮೇಲ್ಪಟ್ಟು (ಡ್ರಗ್‌ ಇಲ್ಯೂಟಿಂಗ್‌ ಸ್ಟೆಂಟ್‌) ಮಾರಾಟ ಮಾಡುವಂತಿಲ್ಲ. ಬಿಎಂಎಸ್‌ ಸ್ಟೆಂಟ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಗರಿಷ್ಠ 7,260 ರೂ. ಎಂದು ನಿಗದಿ ಮಾಡಿತು. ಅಂದರೆ ಬೆಲೆಯಲ್ಲಿ ಶೇ.40ರಷ್ಟು ಕಡಿತವಾಯಿತು.

ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಗೆ ಕಾರಣ

[ಬದಲಾಯಿಸಿ]

ಭಾರತದಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ವೃದ್ಧಿಸುತ್ತಿದ್ದುದರಿಂದ ಹೃದಯದ ಪರಿಧಮನಿಯ ಕಾಯಿಲೆ (ಸಿಎಡಿ) ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದ ಸ್ಟೆಂಟ್‌ಗಳ ಬೇಡಿಕೆ ಹಿಂದೆಂದಿಗಿಂತ ಹೆಚ್ಚಾಯಿತು. ದೇಶದಲ್ಲಿ ಮುಖ್ಯ ಆರೋಗ್ಯ ಸಮಸ್ಯೆಯೂ ಆಯಿತು. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ಗಳ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು ಎಂಬುದು ತಜ್ಞರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಾಯಿತು. ಅಲ್ಲದೇ ಸ್ಟೆಂಟ್‌ಗಳ ಅಗತ್ಯ ಹೆಚ್ಚಿದ್ದರಿಂದ ಅವುಗಳನ್ನು ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಬಡ ರೋಗಿಗಿಳಿಗೆ ಆ್ಯಂಜಿಯೋಪ್ಲಾಸ್ಟಿ ಕೈಗೆಟುಕದ ಸಂಗತಿಯಾಗಿತ್ತು.

ಸ್ಟೆಂಟ್‌ ಬೆಲೆ ಇಳಿಕೆ

[ಬದಲಾಯಿಸಿ]

2016 ಜುಲೈಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸ್ಟೆಂಟ್‌ಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‌ಎಲ್‌ಇಎಮ್‌ 2015)ಗೆ ಸೇರಿಸಿತ್ತು. ಇದರಿಂದ ಔಷಧ ಬೆಲೆ ನಿಯಂತ್ರಣ ಆದೇಶ ಅನ್ವಯ ಕೇಂದ್ರ ಸರ್ಕಾರ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಯನ್ನು ಹೇರಬಹುದಾಗಿತ್ತು. ಅಗತ್ಯವಸ್ತುಗಳ ಕಾಯ್ದೆ ಅಡಿ ಇವುಗಳೂ ಬರುವುದರಿಂದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸ್ಟೆಂಟ್‌ಗಳನ್ನು ಒದಗಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿತ್ತು. ರಾಷ್ಟ್ರೀಯ ಫಾರ್ಮಸ್ಯೂಟಿಕಲ್‌ ಬೆಲೆ ನೀತಿ 2012ರ ಅನ್ವಯ ಶೇ.40ರಷ್ಟು ಬೆಲೆ ಇಳಿಕೆಗೆ ನಿರ್ಧರಿಸಲಾಯಿತು.[]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಹೃದ್ರೋಗಿಗಳಿಗೆ ಸಿಹಿಸುದ್ದಿ, ಪರಿಧಮನಿಗೆ ಅಳವಡಿಸುವ ಸ್ಟೆಂಟ್ ಅಗ್ಗ
  2. "ಸ್ಟೆಂಟ್‌ ಹೇಗೆ ಕೆಲಸ ಮಾಡುತ್ತೆ ಗೊತ್ತಾ..?;Feb 24, 2017, 3:37 PM IST". Archived from the original on ಮಾರ್ಚ್ 7, 2017. Retrieved ಮಾರ್ಚ್ 18, 2017.
  3. "ಸ್ಟೆಂಟ್‌ಗಳನ್ನು ಕೂರಿಸೋದು ಹೇಗೆ?". Archived from the original on 2017-03-07. Retrieved 2017-03-18.
  4. Chhabra, Lovely; Zain, Muhammad A.; Siddiqui, Waqas J. (2019), "Angioplasty", StatPearls, StatPearls Publishing, PMID 29763069, archived from the original on October 24, 2022, retrieved 2020-01-20
  5. K, Marmagkiolis; C, Iliescu; Mmr, Edupuganti; M, Saad; Kd, Boudoulas; A, Gupta; N, Lontos; M, Cilingiroglu (December 2019). "Primary Patency With Stenting Versus Balloon Angioplasty for Arteriovenous Graft Failure: A Systematic Review and Meta-Analysis". The Journal of Invasive Cardiology (in ಇಂಗ್ಲಿಷ್). 31 (12): E356–E361. PMID 31786526.
  6. "Percutaneous Coronary Intervention (PCI)". Yale Medicine (in ಇಂಗ್ಲಿಷ್). Retrieved 2023-10-21.
  7. Medtronic. "Onyx Frontier DES - Coronary Stents". www.medtronic.com (in ಇಂಗ್ಲಿಷ್). Retrieved 2023-11-19.
  8. "ಅಂತರಾಳ;ಸ್ಟೆಂಟ್ ಬೆಲೆ ಇಳಿಕೆ ಸುತ್ತ...;'ಹೃದಯ'ಸ್ಪರ್ಶಿ ನಿರ್ಧಾರ;ರಾಜೇಶ್ ರೈ ಚಟ್ಲ;18 Mar, 2017". Archived from the original on 2016-11-23. Retrieved 2017-03-18.
  9. "ಕೇಂದ್ರ ಸರ್ಕಾರ ಮಾಡಿದ್ದೇನು?". Archived from the original on 2017-03-07. Retrieved 2017-03-18.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: