ವಿಷಯಕ್ಕೆ ಹೋಗು

ಕುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಕು ಕುರಿ
A flock of sheep.
Conservation status
Domesticated
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
O. aries
Binomial name
Ovis aries
ಪ್ಯಾಟಗೋನಿಯಾಗೆ, ಅರ್ಜೆಂಟೀನಾ ಕುರಿ ಹಿಂಡು

ಕುರಿಗಳು (Ovis aries) ಸಾಮಾನ್ಯವಾಗಿ ಜಾನುವಾರಾಗಿ ಇಟ್ಟುಕೊಳ್ಳಲಾದ ಒಂದು ಚತುಷ್ಪಾದಿ, ರೋಮಂಥಕ ಸಸ್ತನಿ. ಎಲ್ಲ ರೋಮಂಥಕಗಳಂತೆ, ಕುರಿಯು ಆರ್ಟಿಯೊಡ್ಯಾಕ್ಟಿಲಾ (ಸಮ ಕಾಲ್ಬೆರಳುಗಳಿರುವ ಗೊರಸುಳ್ಳ ಪ್ರಾಣಿ) ಗಣದ ಸದಸ್ಯ. "ಕುರಿ" ಎಂಬ ಹೆಸರು ಓವೀಸ್ ಜಾತಿಯಲ್ಲಿನ ಅನೇಕ ಪ್ರಜಾತಿಗಳಿಗೆ ಅನ್ವಯಿಸುತ್ತದಾದರೂ, ದೈನಂದಿನ ಬಳಕೆಯಲ್ಲಿ ಅದು ಬಹುತೇಕ ಯಾವಾಗಲೂ ಓವೀಸ್ ಆರಿಯೆಸ್ ಅನ್ನು ನಿರ್ದೇಶಿಸುತ್ತದೆ. ಟೊಳ್ಳು ಕೊಂಬಿನ ಮೆಲುಕು ಹಾಕುವ ಸಸ್ಯಾಹಾರಿ ಸ್ತನಿಗಳನ್ನೊಳಗೊಂಡ ಬೋವಿಡೀ ಕುಟುಂಬದ ಕ್ಯಾಪ್ರಿನೀ ಎಂಬ ಉಪಕುಟುಂಬಕ್ಕೆ ಸೇರಿದ ಸ್ತನಿ.

ಲಕ್ಷಣಗಳು

[ಬದಲಾಯಿಸಿ]

ಕುರಿಗಳು ಆಡುಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಸಾಮಾನ್ಯವಾಗಿ, ಗಂಡುಹೆಣ್ಣುಗಳೆರಡಕ್ಕೂ ಕೊಂಬಿರಬಹುದಾದರೂ ಹೆಣ್ಣಿನ ಕೊಂಬು ಚಿಕ್ಕದು. ಕೆಲವು ಪ್ರಭೇದಗಳಲ್ಲಿ ಹೆಣ್ಣಿಗೆ ಕೊಂಬೇ ಇರುವುದಿಲ್ಲ. ಕೊಂಬು ಹೊರಮುಖವಾಗಿ ಸುರುಳಿ ಸುತ್ತಿಕೊಂಡಿರುತ್ತದೆ. ಗಂಡು ಕುರಿಗಳು ಗಲ್ಲದ ತಳದಲ್ಲಿ ಗಡ್ಡಗಳಿಲ್ಲ; ಆಡುಗಳಲ್ಲಿ ಕಂಡು ಬರುವ ಕಟುವಾಸನೆ ಇವುಗಳ ದೇಹದಲ್ಲಿ ಇರುವುದಿಲ್ಲ. ಬಾಲ ಮೊಟಕು. ಆಡಿನಂತೆ ಕುರಿಗೂ ಮೇಲ್ದವಡೆಯಲ್ಲಿ ಕಿರಿದಾದ ದವಡೆ ಹಲ್ಲುಗಳಿವೆ. ದನ ಅಥವಾ ಎಮ್ಮೆಗಳಲ್ಲಿ ಅವು ಅಗಲವಾಗಿವೆ. ಕಾಲಿನ ಮಧ್ಯದ ಎರಡು ಬೆರಳುಗಳ ನಡುವೆ ಇರುವ ಗ್ರಂಥಿಯೊಂದರಿಂದ ಕಟುವಾಸನೆಯ ದ್ರವ ಒಸರುತ್ತಿರುತ್ತದೆ. ಆ ದ್ರವದ ವಾಸನೆ ಅದು ಹೋದೆಡೆಯಲ್ಲೆಲ್ಲ ಹರಡುವುದರಿಂದ ಕುರಿಗಳು ತಮ್ಮ ಮಂದೆ ಹೋಗಿರುವ ಮಾರ್ಗವನ್ನು ಗುರುತಿಸಬಲ್ಲುವು ಅದಕ್ಕೆ ಅನುಕೂಲಿಸುವಂತೆ ಅವುಗಳ ಘ್ರಾಣೇಂದ್ರಿಯ ತುಂಬ ಪಟುವಾಗಿದೆ.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಆದಿಮಾನವನ ಕಾಲದಿಂದಲೂ ಕುರಿಗಳು ಮಧ್ಯ ಏಷ್ಯದಿಂದ ಐರ್ಲೆಂಡಿನವರೆಗೂ ಹರಡಿಕೊಂಡು ಜೀವಿಸುತ್ತಿದ್ದುವೆಂಬ ಅಂಶ ಅವುಗಳ ಪಳೆಯುಳಿಕೆಗಳಿಂದ ಸ್ಪಷ್ಟಪಟ್ಟಿದೆ. ನಿಯೋಲಿತಿಕ್ ಯುಗದ ವೇಳೆಗೆ ಮಾನವ ಕುರಿಗಳನ್ನು ಪಳಗಿಸಿ ಸಾಕಲಾರಂಭಿಸಿದ್ದ. ಪ್ರಾಚೀನ ಕಾಲದಿಂದಲೂ ದೇವತೆಗಳಿಗೆ ಈ ಪ್ರಾಣಿಯನ್ನು ಬಲಿಕೊಡುವುದು ಆಚರಣೆಯಲ್ಲಿದೆ.

ಪ್ರಾಚೀನತೆ

[ಬದಲಾಯಿಸಿ]

ಕುರಿಗಳನ್ನು ಮೊದಲು ಏಷ್ಯ ಖಂಡದಲ್ಲಿ ಪಳಗಿಸಲಾಯಿತೆಂದು ಹೇಳುವರು. ಆದಿಕಾಲದ ಕುರಿಗಳು ಆಘ್ಘಾನಿಸ್ತಾದ ಬಲೂಚಿಸ್ತಾನಗಳಲ್ಲಿ ಈ ದಿನ ಕಂಡುಬರುವ ಓವಿಸ್ ವಿಗ್ನೇ ಎಂಬ ಪ್ರಭೇದಕ್ಕೆ ಅತ್ಯಂತ ಹೆಚ್ಚಿನ ಹೋಲಿಕೆಯನ್ನು ವ್ಯಕ್ತಪಡಿಸುವಂತಿದ್ದುವು. ತಾಮ್ರಯುಗದ ಹೊತ್ತಿಗೆ ಯೂರೋಪಿನಲ್ಲಿ ಕುರಿಗಳ ನೂತನ ಪೀಳಿಗೆಯೊಂದು ಅಸ್ತಿತ್ವಕ್ಕೆ ಬಂದಿತು. ಈ ದಿನ ಮಾನವ ಪಳಗಿಸಿರುವ ವಿವಿಧ ಪೀಳಿಗೆಯ ಕುರಿಗಳೆಲ್ಲ ತಾಮ್ರಯುಗದಲ್ಲಿ ಕಾರ್ಸಿಕ, ಸಾರ್ಡೀನಿಯ ಮುಂತಾದೆಡೆ ಜೀವಿಸಿದ್ದ ಮೌಪ್ಲಾನ್ ಎಂಬ ಕಾಡುಕುರಿಯ (ಓವಿಸ್ ಮ್ಯೂಸಿಮನ್) ಪ್ರಭೇದದಿಂದ ವಿಕಾಸವಾದವೆಂದು ಊಹಿಸಿಲಾಗಿದೆ.

ಕಾಡುಕುರಿ

[ಬದಲಾಯಿಸಿ]

ಇಂದಿಗೂ ಅನೇಕ ಪ್ರದೇಶಗಳಲ್ಲಿ ಕುರಿಗಳು ಕಾಡಿನಲ್ಲಿ ಕಾಡುಪ್ರಾಣಿಗಳಾಗಿ ಜೀವಿಸುತ್ತಿವೆ. ಮಧ್ಯ ಏಷ್ಯದಲ್ಲಿ ಅವು ಹೆಚ್ಚಾಗಿವೆ. ಅವು ಕಾಡಿನಲ್ಲಿ ದೊಡ್ಡ ಮಂದೆಗಳಲ್ಲಿ ಜೀವಿಸುತ್ತವೆ. ಕಾಡುಕುರಿಗಳು ಆಗಾಗ ಆಹಾರಕ್ಕಾಗಿ ಬಯಲು ಪ್ರದೇಶಗಳಿಗೆ ಬಂದು ಹೋಗುವುದೂ ಉಂಟು. ತುರ್ಕಿಸ್ತಾನದ ಪಾಮಿರ್ ಪ್ರಸ್ಥಭೂಮಿಯ ಕಾಡುಗಳಲ್ಲಿ ವಾಸಿಸುವ ಓವಿಸ್ ಪೋಲೈ ಎಂಬ ಪ್ರಭೇದದ ಕಾಡು ಕುರಿಗಳು ಪ್ರಸಿದ್ಧವಾಗಿವೆ. ಅವಕ್ಕೆ ಅಗಲವಾಗಿ ಬಾಗಿರುವ ದೊಡ್ಡ ಕೊಂಬುಗಳಿವೆ. ಇವು ಈ ಪ್ರಭೇದದ ವಿಶಿಷ್ಟ ಲಕ್ಷಣ. ಓವಿಸ್ ಕರೇಲಿನಿ ಎಂಬ ಮತ್ತೊಂದು ಪ್ರಭೇದ ಟಿಯೆನ್‍ಷಾನ್ ಪರ್ವತಶ್ರೇಣಿಗಳಲ್ಲಿ ವಾಸಿಸುತ್ತದೆ. ಮಧ್ಯ ಏಷ್ಯದಲ್ಲೂ ತುರ್ಕಿಸ್ತಾನದ ಬೆಟ್ಟಗುಡ್ಡಗಳಲ್ಲೂ ಇತರ ಪ್ರಭೇದಗಳು ಇವೆ. ಇವಕ್ಕೂ ದೊಡ್ಡ ಆಕೃತಿಯ ಓವಿಸ್ ಅಮ್ಮಾನ್ ಎಂಬ ಇನ್ನೊಂದು ಪ್ರಭೇದ ಲಡಕ್, ಟಿಬೆಟ್, ಗೋಬಿಮರುಭೂಮಿ, ಮಂಗೋಲಿಯ ಮುಂತಾದೆಡೆಗಳಲ್ಲಿ ವಾಸಿಸುತ್ತದೆ. ಅದರ ಎತ್ತರ 4', ತೂಕ 300 ಪೌಂಡುಗಳು. ಇವುಗಳಲ್ಲಿ ಕೊಂಬು ಓವಿಸ್ ನಿವಿಕೋಲ ಎಂಬುದೂ ವಾಸಿಸುತ್ತವೆ. ರಾಕಿ ಪರ್ವತ ಶ್ರೇಣಿಯಲ್ಲೂ ಬ್ರಿಟಿಷ ಕೊಲಂಬಿಯದ ಭಾಗಗಳಲ್ಲೂ ಕಪ್ಪು ತುಪ್ಪಳದ ಕಾಡುಕುರಿಗಳಿವೆ. ಅಲಾಸ್ಕದಲ್ಲಿ ಈ ಪ್ರಭೇದದ ಬಿಳಿಯ ತುಪ್ಪಳದ ಕುರಿಗಳಿವೆ. ಮೆಕ್ಸಿಕೊ ಮತ್ತು ಕ್ಯಾಲಿಫೋರ್ನಿಯ ದೇಶಗಳಲ್ಲೂ ಅವುಗಳ ಬಳಗಗಳು ವಾಸಿಸುತ್ತವೆ. ಲಡಕ್, ಆಪ್ಘಾನಿಸ್ತಾನ, ಪಂಜಾಬ್ ಮುಂತಾದ ದೇಶಗಳಲ್ಲಿ ಇರುವ ಕಾಡುಕುರಿಗಳು ತೀರ ಚಿಕ್ಕವು. ಪಂಜಾಬಿನ ಕುರಿಗೆ ಊರಿಯಲ್ ಎಂಬ ಹೆಸರುಂಟು. ಇವು ಪರ್ಷಿಯ, ಆರ್ಮೀನಿಯ, ಸಾರ್ಡೀನಿಯ ಮತ್ತು ಕಾರ್ಸಿಕದ ಕಾಡುಕುರಿಗಳಷ್ಟು ಎತ್ತರವಾಗಿರುತ್ತವೆ. ಹಿಮಾಲಯದ ನೀಲ ತುಪ್ಪಳದ ಕಾಡುಕುರಿಗಳು (ಸೂಡೂನಾಹುರ) 10,000'ಗಳಿಗಿಂತ ಎತ್ತರದ ಪರ್ವತ ಪ್ರದೇಶಗಳಲ್ಲಿ 10-50 ಸಂಖ್ಯೆಯ ಗುಂಪುಗಳಲ್ಲಿ ವಾಸಿಸುತ್ತವೆ. ಈ ಪ್ರಭೇದದ ಟಗರಿನ ಉದರದ ಭಾಗದ ಬಣ್ಣ ಬಿಳಿ, ಬೆನ್ನಿನಬಣ್ಣ ನೀಲಿನರೆ. ಅವೆರಡಕ್ಕೂ ಮಧ್ಯ ಒಂದು ಕಪ್ಪು ಪಟ್ಟಿಯಿದೆ; ಕೊಂಬು ಹಿಂದಕ್ಕೆ ಅರ್ಧ ಚಂದ್ರಾಕೃತಿಯಲ್ಲಿ ಬಾಗಿ ನುಲಿದುಕೊಂಡಿದೆ. ಆಫ್ರಿಕದಲ್ಲಿ ಒಂದೇ ಪ್ರಭೇದದ ಕಾಡುಕುರಿ ಜೀವಿಸುತ್ತದೆ. ಅದು ಉತ್ತರದಲ್ಲಿ ಸೂಡಾನಿನವರೆಗೂ ಹರಡಿಕೊಂಡು ಜೀವಿಸುತ್ತದೆ. ಅದರ ಗಂಟಲ ಮೇಲೂ ಮುಂಗಾಲುಗಳ ತುದಿಯಲ್ಲೂ ದಟ್ಟವಾದ ಉದ್ದನೆಯ ತುಪ್ಪಳ ಉಂಟು. ಕೊಂಬು ನಯವಾಗಿ ನೆಟ್ಟಗಿದೆ. ಇವೆರಡು ಲಕ್ಷಣಗಳೂ ಆಡಿನ ಲಕ್ಷಣಗಳನ್ನು ಹೋಲುತ್ತವೆ.

ಸಾಕು ತಳಿಗಳು

[ಬದಲಾಯಿಸಿ]

ಅತಿ ಸಭ್ಯ ಸಾಕುಪ್ರಾಣಿ ಎನಿಸಿದ ಕುರಿ ಸಾವಿರಾರು ವರ್ಷಗಳಿಂದ ಮಾನವನೊಂದಿಗೆ ಬೆಳೆದು ಬಂದಿದೆ. ಆದಿಮಾನವ ಕುರಿಯ ಚರ್ಮದಿಂದ ಹೊದಿಕೆಗಳನ್ನು ತಯಾರಿಸುತ್ತಿದ್ದ. ಅದರ ಮಾಂಸ ಮತ್ತು ಹಾಲು ಅವನ ಆಹಾರದ ಮುಖ್ಯ ಭಾಗಗಳಾಗಿದ್ದುವು. ಭೂಮಂಡಲದ ಮೇಲೆ ಮಾನವ ವಸತಿಗೆ ಯೋಗ್ಯವಾದ ಎಲ್ಲ ಪ್ರದೇಶಗಳಲ್ಲೂ ಕುರಿಸಾಕುವರು. ಅದರಲ್ಲಿಯೂ ಆರ್ಥಿಕ ದೃಷ್ಟಿಯಿಂದ ಮುಂದುವರಿದ ರಾಷ್ಟ್ರಗಳಲ್ಲಿ ಕುರಿಸಂಗೋಪನೆಗೆ ವಿಶೇಷ ಗಮನವನ್ನೀಯಲಾಗುತ್ತಿದೆ. ಕುರಿಯಿಂದ ನಮಗೆ ಉಣ್ಣೆ ದೊರಕುತ್ತದೆ. ಪ್ರಾಣಿಜನ್ಯನಾರುದಾರಗಳಲ್ಲಿ ಕುರಿಯ ಉಣ್ಣೆಗೆ ವಿಶಿಷ್ಟ ಸ್ಥಾನವಿದೆ. ಅದರಿಂದ ತಯಾರಿಸಿದ ಹೊದಿಕೆಗಳು ಬಾಳಿಕೆ ಬರತಕ್ಕ ಬೆಚ್ಚನೆಯ ಆರೋಗ್ಯಕರವಾದ ಉಡುಪೆನಿಸಿವೆ. ಈ ಕಾರಣದಿಂದ ಬೇರೆ ಯಾವುದೇ ನಾರುದಾರಗಳಿಂದ ತಯಾರಿಸಿದ ಹೊದಿಕೆಗಳಿಗಿಂತ ಇವು ಶ್ರೇಷ್ಠವಾಗಿವೆ.ಕುರಿಗಳು ಬೆಳಸನ್ನು ತಿಂದು ಹಾಳುಮಾಡುವುದಿಲ್ಲ. ಹೊಲಗಳಲ್ಲಿ ಬೆಳೆಯುವ ನಿರುಪಯುಕ್ತ ಕಸಕಡ್ಡಿಗಳನ್ನೂ ಸಾಗುವಳಿಗೆ ಬಾರದ ಬರಡು ಭೂಮಿಯಲ್ಲಿ ಬೆಳೆಯುವ ಕಿರಿದಾದ ಹುಲ್ಲನ್ನು ತಿಂದು ಕುರಿ ಜೀವಿಸಬಲ್ಲುದು. ಹೀಗಾಗಿ ನಾಯಿಯನ್ನು ಬಿಟ್ಟರೆ ಆಯಾ ಪ್ರದೇಶದ ಮಳೆ, ಹವೆ ಮೊದಲಾದ ವೈವಿಧ್ಯಕ್ಕೆ ಹೊಂದಿಕೊಂಡು, ಭೂಮಂಡಲದ ಎಲ್ಲ ವಲಯಗಳಲ್ಲೂ ವೃದ್ಧಿಯಾಗಿರುವ ಸಾಕುಪ್ರಾಣಿ ಕುರಿ.

ಪ್ರಭೇದಗಳು

[ಬದಲಾಯಿಸಿ]

ಜಗತ್ತಿನಲ್ಲಿ ಕುರಿಯ ಸುಮಾರು 200 ಬೇರೆ ಬೇರೆ ತಳಿಗಳಿವೆಯೆಂದು ಕಂಡುಬಂದಿದೆ. ಆಯಾ ವಿಭಾಗಗಳ ಭೂಗುಣ, ಹವೆ ಮೊದಲಾದ ಲಕ್ಷಣಗಳಿಗೆ ಒಗ್ಗುವ ಮತ್ತು ಹಾಲು, ಮಾಂಸ ಮತ್ತು ಉಣ್ಣೆ ಕೊಡುವಂಥ ವೈವಿಧ್ಯಪೂರ್ಣ ತಳಿಗಳನ್ನು ಉತ್ಪಾದಿಸಲಾಗಿದೆ. ಪ್ರಾಚೀನ ಕಾಲವನ್ನು ಕುರಿತ ವೈಜ್ಞಾನಿಕ ದಾಖಲೆಗಳ ಅಭಾವವಿದ್ದರೂ ಇತಿಹಾಸದ ಸಹಾಯದಿಂದ ಜಗತ್ತಿನ ಕುರಿಯ ತಳಿಗಳನ್ನು ನಾಲ್ಕು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು: 1 ಉತ್ತಮ ಉಣ್ಣೆಯನ್ನು ಕೊಡುವ ಮೆರಿನೋ ಜಾತಿಯ ಕುರಿಗಳು ಹಾಗೂ ಮೆರಿನೋ ಮೂಲದಿಂದ ಹುಟ್ಟಿದ ಮಿಶ್ರತಳಿಗಳು: 2 ಮಧ್ಯಮ ತರಗತಿಯ ಉಣ್ಣೆಯನ್ನು ಕೊಡುವ ಯೂರೋಪ್ ಮತ್ತು ಬ್ರಿಟನಿನ ಕುರಿಗಳು: 3 ಉದ್ದ ಹಾಗೂ ಹೊಳಪುಳ್ಳ ಉಣ್ಣೆಯನ್ನು ಕೊಡುವ ಬ್ರಿಟನಿನ ಕುರಿಗಳು: 4 ಕಂಬಳಿ ಮತ್ತು ಕಾರ್ಪೆಟ್ ಮಾಡಬಹುದಾದ ಕೆಳದರ್ಜೆಯ ಉಣ್ಣೆ ಕೊಡುವ ಏಷ್ಯ ಖಂಡದ ಕುರಿಗಳು.

ಭಾರತದ ವಿವಿಧ ತಳಿಗಳು

[ಬದಲಾಯಿಸಿ]

ಭಾರತದಲ್ಲಿ ಸುಮಾರು ನಾಲ್ಕು ಕೋಟಿ ಕುರಿಗಳಿದ್ದು ಸಂಖ್ಯಾ ದೃಷ್ಟಿಯಿಂದ ಜಗತ್ತಿನಲ್ಲಿ ಇವಕ್ಕೆ 5ನೆಯ ಸ್ಥಾನವಿದೆ. ಶುಷ್ಕ ಹವೆಯ ಉತ್ತರ ಭಾರತದ ಬಯಲು ಪ್ರದೇಶ ಮತ್ತು ಹಿಮಾಲಯದ ಪಕ್ಕದ ಪ್ರದೇಶಗಳಲ್ಲಿಯ ಕುರಿಗಳು ಉತ್ತಮ ಉಣ್ಣೆಯ ತಳಿಗಳೆಂದು ಪ್ರಸಿದ್ಧವಾಗಿವೆ. ರಾಜಸ್ಥಾನ, ಕಚ್, ಸೌರಾಷ್ಟ್ರ ಮತ್ತು ಉತ್ತರ ಗುಜರಾತಿನ ಕುರಿಗಳು ಉತ್ತಮ ಉಣ್ಣೆಯನ್ನು ಕೊಡುತ್ತವೆ. ಈ ಕುರಿಗಳಿರುವ ಪ್ರದೇಶ ಟೋರಿಯೂ ವಲಯದಿಂದ ಹೆಸರು ಪಡೆದಿದೆ. ವಿಂಧ್ಯ ಪರ್ವತದಿಂದ ನೀಲಗಿರಿಯವರೆಗೆ ಹಬ್ಬಿದ, ಡೆಕ್ಕನದ ತಪ್ಪಲು ಪ್ರದೇಶದಲ್ಲಿ ಅದರಲ್ಲೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕುರಿಗಳ ಸಂಖ್ಯೆ ಹೆಚ್ಚಾಗಿದೆ. ಈ ತಳಿಗಳು ಕೆಳ ವರ್ಗದ ಉಣ್ಣೆಯನ್ನು ಕೊಡುವುವಲ್ಲದೆ ಅವುಗಳಲ್ಲಿ ಉಣ್ಣೆಯ ಉತ್ಪಾದನೆಯ ಪ್ರಮಾಣವೂ ಬಹಳ ಕಡಿಮೆ. ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಗರ್‍ವಾಲ ಪರ್ವತ ಶ್ರೇಣಿಯ ಪಕ್ಕದ ಪ್ರದೇಶಗಳಲ್ಲಿ, ಉತ್ತಮ ತರಗತಿಯ ಉಣ್ಣೆಯನ್ನು ಕೊಡುವ ಕುರಿಗಳನ್ನು ಸಾಕಲು ಹೆಚ್ಚು ಅವಕಾಶವಿದೆ. ಭಾರತದ ಕುರಿ ಸಂಗೋಪನೆಯ ಪ್ರದೇಶಗಳನ್ನು ಭೌಗೋಲಿಕ ದೃಷ್ಟಿಯಿಂದ 3 ವಲಯಗಳಾಗಿ ವಿಂಗಡಿಸಬಹುದು. 1 ಸಮಶೀತೋಷ್ಣ ಹವೆಯ ಹಿಮಾಲಯ ವಲಯ: ಇದರಲ್ಲಿ ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರ ಪ್ರದೇಶದ ಗುಡ್ಡಗಾಡು ವಿಭಾಗಗಳು ಸಮಾವೇಶವಾಗುತ್ತವೆ. 2 ರಾಜಸ್ತಾನ, ಆಗ್ನೇಯ ಪಂಜಾಬ್, ಸೌರಾಷ್ಟ್ರ, ಕಚ್, ಉತ್ತರ ಗುಜರಾತ್ ಮತ್ತು ಉತ್ತರಪ್ರದೇಶದ ಕೆಲಭಾಗಗಳನ್ನೊಳಗೊಂಡ, ಶುಷ್ಕ ಹವೆಯ ಪಶ್ವಿಮ ವಲಯ. 3 ಮಹಾರಾಷ್ಟ್ರ ರಾಜ್ಯದ ತಪ್ಪಲು ಪ್ರದೇಶ, ಮೈಸೂರು, ಆಂಧ್ರ, ತಮಿಳುನಾಡು, ಮಧ್ಯಪ್ರದೇಶದ ಕೆಲಭಾಗಗಳಿಂದ ಕೂಡಿದ ದಕ್ಷಿಣ ವಲಯ.

ಸಮಶೀತೋಷ್ಣ ಹವೆಯ ಹಿಮಾಲಯ ಪರ್ವತ ವಲಯ

[ಬದಲಾಯಿಸಿ]

ಇದು ಕಾಶ್ಮೀರದಿಂದ ಉತ್ತರಪ್ರದೇಶದ ಗರ್‍ವಾಲ ಜಿಲ್ಲೆಯವರೆಗೆ ಹರಡಿದೆ. ವರ್ಷದ ಎಲ್ಲ ಋತುಗಳಲ್ಲೂ ಮೇಯಲು ಕುರಿಗಳಿಗೆ ಹಸಿರುಹುಲ್ಲು ಈ ಭಾಗದಲ್ಲಿ ದೊರಕುತ್ತದೆ. ಚಳಿಗಾಲದಲ್ಲಿ ಕುರಿಗಳು ಬಯಲು ನಾಡಿನಲ್ಲಿ ಮೇಯುತ್ತವೆ. ಬೇಸಗೆ ಪ್ರಾರಂಭವಾದೊಡನೆ ಎತ್ತರ ಪ್ರದೇಶಗಳಿಗೆ ಹೋಗುತ್ತವೆ. ಈ ಪ್ರದೇಶ ಸಮುದ್ರ ಮಟ್ಟದಿಂದ 8000'-12,000' ಎತ್ತರವಾಗಿದ್ದು ಇಲ್ಲಿ ಕುರಿಗಳನ್ನು ಮೇಯಿಸಲು ಸಾಕಷ್ಟು ಹುಲ್ಲುಗಾವಲುಗಳಿವೆ. ಕಾಂಗ್ರಾ, ಚೌಬಾ, ಕುಲು ಮತ್ತು ಕಾಶ್ಮೀರ ಕಣಿವೆಗಳ ಕುರಿಗಳು ಮೇಲ್ತರಗತಿಯ ಉಣ್ಣಿಯನ್ನು ಕೊಡುತ್ತವೆ. ಇಲ್ಲಿ ಬಡವರು ಮಾತ್ರ ಕುರಿಸಾಕುವ ಉದ್ಯೋಗದಲ್ಲಿ ತೊಡಗಿರುವುದರಿಂದ ಉಣ್ಣೆ ಹಾಗೂ ಮಾಂಸದ ದೃಷ್ಟಿಯಿಂದ ತಳಿಗಳ ಅಭಿವೃದ್ಧಿ ಅಷ್ಟಾಗಿ ಆಗಿಲ್ಲ. ಅಲ್ಲದೆ ಈಚೆಗೆ ಹೆಚ್ಚು ನೆಲವನ್ನು ಸಾಗುವಳಿಗೆ ತಂದದ್ದರಿಂದ ಕುರಿಗಳಿಗೆ ಮೇಯಲು ಹುಲ್ಲು ಗಾವಲು ಪ್ರದೇಶ ಕಡಿಮೆಯಾಗಿದೆ. ಈ ವಲಯದ ಕುರಿಗಳು ಶುದ್ಧ ತಳಿಗಳವಲ್ಲ. ಹಿಮಾಲಯ ಪರ್ವತ ಪ್ರದೇಶದ ಮತ್ತು ಉಸುಕಿನ ಬಯಲಿನ ಕುರಿಗಳಿಂದ ಹುಟ್ಟಿದ ಮಿಶ್ರತಳಿ. ಅಲ್ಲದೆ ಕೆಲ ಪ್ರದೇಶದ ಕುರಿಗಳಲ್ಲಿ ವಿಶಿಷ್ಟ ಆನುವಂಶೀಯ ಲಕ್ಷಣಗಳು ಕಂಡು ಬರುತ್ತವೆ. ಹೀಗಾಗಿ ಈ ತಳಿಗಳಲ್ಲಿ ಏಕರೂಪತೆಯನ್ನು ಕಾಣುವುದು ಸಾಧ್ಯವಾಗಿಲ್ಲ. ಕಾಶ್ಮೀರದಲ್ಲಿ ಮುಖ್ಯವಾಗಿ ಮೂರು ಜಾತಿಯ ಕುರಿಗಳಿವೆ: ಪೂಂಚ್, ಕಾರ್ನಾ, ಕಾಶ್ಮೀರ ಕೊಳ್ಳದ ಕುರಿಗಳು. ಪೂಂಚ್ ಮತ್ತು ಕಾರ್ನಾ ಜಾತಿಯ ಕುರಿಗಳು ಮೃದುವಾದ ಉಣ್ಣೆಯನ್ನು ಹೆಚ್ಚು ಪ್ರಮಾಣದಲ್ಲಿ ಕೊಡುತ್ತವೆ. ಇವಲ್ಲದೆ ಗದ್ದಿ ಮತ್ತು ಭಾಕರವಾಲ್ ಜಾತಿಯ ಕುರಿಗಳು ಕೂಡ ಸಾಕಷ್ಟು ಹೆಸರುವಾಸಿಯಾಗಿವೆ. ಇವುಗಳ ಮೂಲಸ್ಥಾನ ಹಿಮಾಲಯದ ಅಡಿಪ್ರದೇಶ. ಆದರೂ ಋತುಮಾನಕ್ಕೆ ಅನುಸಾರವಾಗಿ ಕಾಶ್ಮೀರ, ಕುಲು ಮತ್ತು ಕಾಂಗ್ರಾ ಕಣಿವೆಗಳ ಕಡೆಗೆ ಸ್ಥಾನಾಂತರವಾಗುತ್ತಿರುತ್ತವೆ. ಹಿಮಾಚಲ ಪ್ರದೇಶದ ರಾಮ್‍ಪುರ್‍ಭುಶಾಯರ್ ತಳಿ ಉತ್ತಮ ತರಗತಿಯದಾಗಿದೆ. ಇವು ಹಿಮಾಲಯದ ಅಡಿ ಪ್ರದೇಶದಲ್ಲಿ ಇದ್ದರೂ ಟಿಬೆಟ್ಟಿನ ಸರ ಹದ್ದಿನವರೆಗೂ ಮೇಯಲು ಹೋಗುತ್ತವೆ. ಈ ಕುರಿಗಳಲ್ಲೂ ತಳಿಯ ಪರಿಶುದ್ಧತೆಯನ್ನು ಕಾಯ್ದುಕೊಳ್ಳಲಾಗಿಲ್ಲ. ಇವು ಮುಖ್ಯವಾಗಿ ಕಂದುಬಣ್ಣದ ಉಣ್ಣೆಯನ್ನು ಕೊಡುತ್ತವೆ.

ಕಾರ್ನಾ ಜಾತಿಯ ಕುರಿ

[ಬದಲಾಯಿಸಿ]

ಉತ್ತರ ಕಾಶ್ಮೀರದ ಕಾರ್ನಾ ತಾಲ್ಲೂಕಿನಿಂದ ಈ ತಳಿಗೆ ಕಾರ್ನಾ ಎಂಬ ಹೆಸರು ಬಂದಿದೆ. ಈ ಪ್ರದೇಶ ಸಮುದ್ರ ಪಾತಳಿಯಿಂದ 4,000'-15,000' ಎತ್ತರದಲ್ಲಿದೆ. ಇಲ್ಲಿ ಕುರಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಾಕುತ್ತಾರೆ. ಬೇಸಗೆಯಲ್ಲಿ ಅಂದರೆ ಮೇ ನಿಂದ ಸೆಪ್ಟೆಂಬರ್‍ವರೆಗೆ ಎತ್ತರ ಹಾಗೂ ಇಳಿಜಾರಾದ ಪರ್ವತ ಪ್ರದೇಶಗಳಲ್ಲಿ ಚೆನ್ನಾಗಿ ಹುಲ್ಲು ಬೆಳೆಯುತ್ತಿದ್ದು ಕುರಿಗಳನ್ನು ಮೇಯಿಸಲು ಅನುಕೂಲವಾಗಿರುತ್ತದೆ. ಚಳಿಗಾಲದಲ್ಲಿ ಮಾತ್ರ ಕುರಿಗಳನ್ನು ಅಡವಿಗೆ ಒಯ್ಯದೆ ಕೊಳ್ಳಪ್ರದೇಶದಲ್ಲಿ ಬೆಳೆಯುವ ಗಿಡಗಳ ಎಲೆಗಳನ್ನು ತಂದು ದೊಡ್ಡಿಗಳಲ್ಲಿಯೇ ಮೇಯಿಸುತ್ತಾರೆ. ಈ ಕುರಿಗಳ ದೇಹದಾಢ್ರ್ಯ ಉತ್ತಮವಾಗಿರುತ್ತದೆ. ಟಗರುಗಳ ಕೋಡುಗಳು ಕೆಳಕ್ಕೆ ಬಾಗಿರುತ್ತವೆ. ಮೂಗು ನೀಳ. ಮೈಬಣ್ಣ ಬಿಳಿ. ಈ ತಳಿಯಿಂದ ದೊರಕುವ ಉಣ್ಣೆ ಮಧ್ಯಮ ತರಗತಿಯದು. ತುಪ್ಪಟ ಮೃದು. ತಂತುಗಳ ಉದ್ದ ಸಾಮಾನ್ಯವಾಗಿ 4"-5". ತುಪ್ಪಳವನ್ನು ವರ್ಷದಲ್ಲಿ ಎರಡು ಸಲ ಕತ್ತರಿಸುತ್ತಾರೆ. ಇಲ್ಲಿ ಉತ್ಪಾದಿಸಿದ ಉಣ್ಣೆಯ ಬಹುಭಾಗ ಸ್ಥಳೀಯವಾಗಿಯೇ ಉಪಯೋಗವಾಗುತ್ತದೆ.

ಗುರೇಜ ಜಾತಿಯ ಕುರಿ

[ಬದಲಾಯಿಸಿ]

ಉತ್ತರ ಕಾಶ್ಮೀರದ ಗುಡ್ಡಗಾಡು ಪ್ರದೇಶದಲ್ಲಿ. ಅಂದರೆ ಕಾರ್ನಾ ತಹಶೀಲಿನ ಪಕ್ಕದಲ್ಲಿರುವ ಗುರೇಜ ತಹಶೀಲಿನಿಂದ ಈ ಜಾತಿಗೆ ಈ ಹೆಸರು ಬಂದಿದೆ. ಇಲ್ಲಿಯ ಜಮೀನುದಾರರು ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಈ ಕುರಿಗಳನ್ನು ಸಾಕುತ್ತಾರೆ. ಈ ಪ್ರದೇಶ ಹುಲ್ಲು ಹಾಗೂ ಗಿಡಗಂಟಿಗಳಿಂದ ಸಮೃದ್ಧವಾಗಿರುವುದರಿಂದ ಕುರಿಗಳಿಗೆ ಸಾಕಷ್ಟು ಆಹಾರ ದೊರಕುತ್ತದೆ. ಆದರೆ ಚಳಿಗಾಲದಲ್ಲಿ ಕುರಿಗಳನ್ನು ಮನೆಯಲ್ಲಿಯೇ ಮೇಯಿಸಬೇಕಾಗುತ್ತದೆ. ಈ ಜಾತಿಯ ಕುರಿಗಳು ಗುಡ್ಡಗಾಡು ಪ್ರದೇಶದಲ್ಲೇ ಅತ್ಯುತ್ತಮ ದೇಹದಾಢ್ರ್ಯವುಳ್ಳವುಗಳೆಂದು ಹೆಸರಾಗಿವೆ. ಬಹು ಸಂಖ್ಯಾತ ಕುರಿಗಳಿಗೆ ಕೋಡುಗಳಿರುವುದಿಲ್ಲ. ಇವುಗಳ ಬಣ್ಣ ಬಿಳುಪು. ಬೇರೆ ಬಣ್ಣದ ಕುರಿಗಳು ಕೂಡ ಅಲ್ಪ ಪ್ರಮಾಣದಲ್ಲಿ ಕಾಣಸಿಗುತ್ತವೆ.

ಹಿಸ್ಸಾರ ಡೇಲ್ ಜಾತಿಯ ಕುರಿ

[ಬದಲಾಯಿಸಿ]

ಇದು ಬಿಕನೀರ್ ಕುರಿ ಹಾಗೂ ಮೆರಿನೋ ಟಗರುಗಳಿಂದಾದ ಮಿಶ್ರ ತಳಿ, ಪಂಜಾಬದ ಹಿಸ್ಸಾರದ ಪಶು ಅಭಿವೃದ್ಧಿ ಕೇಂದ್ರದಲ್ಲಿ ಇದನ್ನು ಬೆಳೆಸಿ ಕುಲುಕಣಿವೆಯಲ್ಲಿ ಸಾಕುತ್ತಾರೆ. ಈ ಕುರಿಗಳು ಮೃದುವಾದ ಉಣ್ಣೆಯನ್ನು ಹೆಚ್ಚು ಪ್ರಮಾಣದಲ್ಲಿ ಕೊಡುತ್ತವೆ. ತೊಡೆಯ ಭಾಗದ ಉಣ್ಣೆ ಕೊಂಚ ಉರುಟಾಗಿರುತ್ತದೆ. ಸಾಮಾನ್ಯವಾಗಿ ಇವು ಬಿಳಿ ಉಣ್ಣೆಯನ್ನು ಕೊಡುತ್ತದೆ. ಕೆಲವು ಕುರಿಗಳು ಹಳದಿಮಿಶ್ರಿತ ಉಣ್ಣೆಯನ್ನೂ ಕೊಡುವುದುಂಟು. ಉಣ್ಣೆ ಮತ್ತು ಮಾಂಸಗಳ ಉತ್ಪಾದನೆಯ ದೃಷ್ಟಿಯಿಂದ ಇದು ಉತ್ತಮವಾದ ತಳಿ. ಪ್ರತಿಕೂಲ ಹವೆ ಹಾಗೂ ರೋಗರುಜಿನಗಳನ್ನು ತಾಳಿಕೊಳ್ಳುವ ಶಕ್ತಿ ಈ ಜಾತಿಯಲ್ಲಿ ಕಂಡು ಬರುತ್ತದೆ. ಸ್ಥಳೀಯ ಕುರಿಗಳ ಮಾಂಸಕ್ಕಿಂತ ಈ ತಳಿಯ ರಾಸುಗಳ ಮಾಂಸ ಉತ್ತಮ. ವರ್ಷದಲ್ಲಿ 23 ಸಾರಿ ಉಣ್ಣೆಯನ್ನು ಕತ್ತರಿಸಲಾಗುವುದು. ಉಣ್ಣೆ ಹೊಳಪಾಗಿದ್ದು ಉದ್ದವಾದ-ಎಳೆಗಳಿಂದ ಕೂಡಿರುತ್ತದೆ. ಇದರ ಉಣ್ಣೆಯನ್ನು ಸ್ಥಳೀಯವಾಗಿ ಉಪಯೋಗಿಸಲಾಗುತ್ತದೆ.

ಭಾಕರ್‍ವಾಲ್ ಜಾತಿಯ ಕುರಿ

[ಬದಲಾಯಿಸಿ]

ಭಾಕರ್‍ವಾಲ್ ಎಂಬ ಸಂಚಾರಿ ಜನಾಂಗಗಳು ಸಾಕುವ ಕುರಿಗಳಿವು. ಬೇಸಗೆಯಲ್ಲಿ ಈ ಕುರಿಗಳನ್ನು ಕಾಶ್ಮೀರ ಕಣಿವೆಯಲ್ಲಿ ಮೇಯಿಸುತ್ತಾರೆ. ಚಳಿಗಾಲದಲ್ಲಿ ಬೆಚ್ಚಗಿನ ಹವೆಯು ದಕ್ಷಿಣದ ಪ್ರದೇಶಗಳಿಗೆ ಒಯ್ಯುತ್ತಾರೆ. ಈ ಕುರಿಗಳು ಗಟ್ಟಿಮುಟ್ಟಾಗಿದ್ದು ಎತ್ತರ ಪರ್ವತಗಳನ್ನು ಏರಿ ಮೇಯಬಲ್ಲವು. ಟಗರುಗಳಿಗೆ ಕೋಡುಗಳುಂಟು, ಹೆಣ್ಣಿಗೆ ಇಲ್ಲ. ಕಿವಿಗಳು ದೊಡ್ಡವಿದ್ದು ನೇತಾಡುತ್ತಿರುತ್ತದೆ. ಉಣ್ಣೆ ಸಾಮಾನ್ಯವಾಗಿ ಬಿಳುಪಾಗಿದ್ದರೂ ಕೆಲವು ಪ್ರದೇಶಗಳ ಕುರಿಗಳು ಬೇರೆ ಬೇರೆ ವರ್ಣದ ಉಣ್ಣೆ ಕೊಡುವುದುಂಟು. ಉಣ್ಣೆ ಉರುಟಾಗಿದ್ದು, ತಂತುಗಳು ಸುಮಾರು 6" ಉದ್ದವಿರುತ್ತವೆ. ಮಾರ್ಚ್, ಜೂನ್ ಹಾಗು ಸೆಪ್ಟೆಂಬರ್ ತಿಂಗಳುಗಳಲ್ಲಿ ಉಣ್ಣೆಯನ್ನು ಕತ್ತರಿಸುವರು. ಒಂದು ಕುರಿ ವರ್ಷಕ್ಕೆ ಸುಮಾರು 3ರಿಂದ 4ಪೌಂಡ್ ಉಣ್ಣೆ ಕೊಡುತ್ತದೆ. ಅಲ್ಲಿ ಉತ್ಪಾದಿಸಿದ ಎಲ್ಲ ಉಣ್ಣೆಯನ್ನು ಸ್ಥಳೀಯ ನೇಕಾರರು ಕಂಬಳಿ ನೇಯಲು ಉಪಯೋಗಿಸುತ್ತಾರೆ.

ಜಲೌನಿ ಜಾತಿಯ ಕುರಿ

[ಬದಲಾಯಿಸಿ]

ಉತ್ತರ ಪ್ರದೇಶದ ಜಲೌನಾ ಜಿಲ್ಲೆಯಲ್ಲಿ ಕಂಡು ಬರುತ್ತದೆ. ದಷ್ಟಪುಷ್ಟವಾದ ಈ ಕುರಿಗಳು ಗಾತ್ರದಲ್ಲಿ ಮಧ್ಯಮ ತರಗತಿಯವು. ಇದರ ಲಕ್ಷಣಗಳು ಹೀಗಿವೆ. ಕೋಡುಗಳಿಲ್ಲ, ಮೂಗು ಚಪ್ಪಟೆ, ಮೂಗಿನ ಹೊರಳೆಗಳು ದೊಡ್ಡವು, ದೇಹದ ಹಿಂಭಾಗ ಅಗಲ ಮತ್ತು ದೊಡ್ಡ ಹಾಗೂ ಅಗಲವಾದ ಕಿವಿಗಳು. ಮೈಮೇಲೆ ಉಣ್ಣೆ ಒಂದೇ ಸಮವಾಗಿ ಬೆಳೆಯುವುದಿಲ್ಲ. ಉಣ್ಣೆ ಬಿಳಿಯಾಗಿದ್ದು ಉರುಟು ಹಾಗು ಸಣ್ಣ ಎಳೆಗಳಿಂದ ಕೂಡಿರುತ್ತದೆ. ಮುಖ ಹಾಗೂ ಕಣ್ಣಿನ ಸುತ್ತಲಿನ ಭಾಗ ಕಪ್ಪಾಗಿರುತ್ತದೆ. ಇದು ಮಾಂಸ ಕೊಡುವ ಅತ್ಯುತ್ತಮ ತಳಿ.

ಶುಷ್ಕ ಹವಾಮಾನದ ಪಶ್ಚಿಮ ವಲಯ

[ಬದಲಾಯಿಸಿ]

ಈ ವಲಯದಲ್ಲಿ ವಿವಿಧ ಜಾತಿಯ ಕುರಿಗಳನ್ನು ಸಾಕಲಾಗುತ್ತಿದೆ. ಭಾರತದಿಂದ ಹೊರದೇಶಗಳಿಗೆ ರಫ್ತುಆಗುವ ಉಣ್ಣೆಯಲ್ಲಿ 1/3 ಭಾಗ ಈ ವಲಯದ್ದೇ. ಇಲ್ಲಿ ಒಂದೊಂದು ಹಿಂಡಿನಲ್ಲಿ 50-1000 ಕುರಿಗಳಿರುತ್ತವೆ. ಇಲ್ಲಿನ ಕುರಿಗಾಹಿಗಳು ಒಂದೇ ಕಡೆಗೆ ನಿಲ್ಲದೆ ಹುಲ್ಲುಗಾವಲುಗಳನ್ನು ಹುಡುಕುತ್ತ ನೆರೆಹೊರೆಯ ಪ್ರದೇಶಗಳಿಗೆ ಹೋಗುತ್ತಾರೆ. ರಾಜಸ್ಥಾನದ ಸರಸ್ವತೀ ನದಿಯ ಪ್ರದೇಶ, ಉತ್ತರ ಗುಜರಾತ್ ಕವ್ವ ಮುಂತಾದವುಗಳನ್ನೊಳಗೊಂಡ ಪ್ರದೇಶ, ಭಾರತದಲ್ಲಿ ಕುರಿ ಸಂಗೋಪನೆಯ ಮುಖ್ಯ ವಲಯ. ಇಲ್ಲಿಯ ಕುರಿಗಳಿಂದ ಉತ್ತಮ ತರಗತಿಯ ಕಾರ್ಪೆಂಟ್ ಉಣ್ಣೆ ದೊರಕುತ್ತದೆ. ಅದು ಜೋರಿಯಾ ಉಣ್ಣೆಯೆಂದು ಪ್ರಸಿದ್ಧಿ ಪಡೆದಿದೆ. ಅದರ ಎಳೆಗಳು ಸಾಮಾನ್ಯವಾಗಿ ಬಿಳುಪು ಮತ್ತು ಉರುಟು. ಈ ವಲಯದಲ್ಲಿ ಸಾಕುವ ಪ್ರಮುಖ ತಳಿಗಳು ಐದು.

ಲೋಹಿ ಜಾತಿಯ ಕುರಿಗಳು

[ಬದಲಾಯಿಸಿ]

ಬಲೂಚಿಸ್ಥಾನದ ತಳಿ. ಆದರೆ ಈ ಜಾತಿಯ ಸಣ್ಣ ಹಿಂಡುಗಳು ಪಂಜಾಬಿನಲ್ಲೂ ಕಂಡುಬರುತ್ತದೆ. ಗಾತ್ರದಲ್ಲಿ ಇವು ದೊಡ್ಡವು. ಮೈ ಬಣ್ಣ ಸಾಮಾನ್ಯವಾಗಿ ಬಿಳಿ. ಮೈಮೇಲೆ ಕಂದು ಅಥವಾ ಕಪ್ಪು ಚುಕ್ಕೆಗಳುಳ್ಳ ಕುರಿಗಳೂ ಉಂಟು. ಮುಖದ ಬಣ್ಣ ಕಪ್ಪು ಅಥವಾ ಕಂದು. ಮುಖದ ಮೇಲೆ ಉಣ್ಣೆ ಇರುವುದಿಲ್ಲ. ಕಿವಿಗಳು ಉದ್ದವಾಗಿದ್ದು, ಮೇಯುವಾಗ ನೆಲಕ್ಕೆ ತಾಗುತ್ತವೆ. ಸಾಮಾನ್ಯವಾಗಿ ಈ ಜಾತಿಯ ಕುರಿಗಳಿಗೆ ಕೋಡುಗಳಿರುವುದಿಲ್ಲ. ಕಾಲುಗಳು ಬಹಳ ಬಲವಾಗಿದ್ದು ಖುರಗಳು ಕಪ್ಪಾಗಿರುತ್ತವೆ. ಕೆಚ್ಚಲು ಹಾಗೂ ಮೊಲೆತೊಟ್ಟುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಈ ಕುರಿಗಳ ಉಣ್ಣೆ ಎಳೆ ಉರುಟು, ಉದ್ದ 3" -4". ಕಂಬಳಿ ಹಾಗೂ ಉಣ್ಣೆಬಟ್ಟೆಗಳನ್ನು ತಯಾರಿಸಲು ಇದರ ಉಪಯೋಗ. ಇದು ಉತ್ತಮ ದರ್ಜೆಯ ಮಾಂಸವನ್ನು ಹೆಚ್ವು ಪ್ರಮಾಣದಲ್ಲಿ ಕೊಡುವ ಜಾತಿಯೆಂದು ಪ್ರಸಿದ್ಧಿ ಪಡೆದಿದೆ. ಇದನ್ನು ದೊಡ್ಡಿಯಲ್ಲಿ ಕಟ್ಟಿ ಮೇಯಿಸಿದರೂ ಚೆನ್ನಾಗಿ ಬೆಳೆದು ಮಾಂಸಖಂಡಗಳಿಂದ ತುಂಬಿಕೊಳ್ಳುತ್ತದೆ. ಹಾಲನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕೊಡುತ್ತದೆ. ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚು ಇರುವುದರಿಂದ, ಎಮ್ಮೆಯ ಹಾಲು ಮತ್ತು ಈ ಕುರಿಗಳ ಹಾಲು ಮಿಶ್ರಮಾಡಿ ತುಪ್ಪ ತಯಾರಿಸಲು ಉಪಯೋಗಿಸುತ್ತಾರೆ. ಒಂದು ಕುರಿ ದಿನಕ್ಕೆ 8 ಪೌಂಡಿನವರೆಗೆ ಹಾಲು ಕೊಡುತ್ತದೆ. ಇವು ನಿಯತಕಾಲಗಳಲ್ಲಿ ಗರ್ಭಧರಿಸಿ ಒಂದು ಸಾರಿಗೆ 2 ಮರಿಗಳನ್ನು ಹಾಕುತ್ತವೆ.

ಬಿಕನೀರ್ ಜಾತಿಯ ಕುರಿಗಳು

[ಬದಲಾಯಿಸಿ]

ಮೂಲತಃ ಬಿಕನೀರಿನ ಮರುಭೂಮಿ ಪ್ರದೇಶದವು. ಅದರೂ ಇವನ್ನು ಪಂಜಾಬಿನ ಹಿಸ್ಸಾರ್, ರೋಹಚಠ್, ಗುರುಗಾಂವ್, ಅಂಬಾಲ, ಫಿರೋಜಪುರ ಮತ್ತು ಲೂಧಿಯಾನ ಜಿಲ್ಲೆಗಳಲ್ಲಿ ಕಾಣಬಹುದು. ತಳಿಸಂಕರಣ ಇಲ್ಲಿ ವಿಶೇಷವಾಗಿಲ್ಲ. ಈ ಕುರಿಗಳ ಮೂಲ ಸ್ಥಾನವಾದ ಬಿಕನೀರ್‍ನಲ್ಲಿ ಇವುಗಳನ್ನು ಕಾಯ್ದಿಟ್ಟ ಹುಲ್ಲುಗಾವಲುಗಳಲ್ಲಿ ಸಾಕಲಾಗುತ್ತದೆ. ದೃಢಕಾಯದ ಈ ಕುರಿಗಳು ಬರಗಾಲದ ಅತ್ಯಂತ ಕಠಿಣ ಪರಿಸ್ಥತಿಯನ್ನು ತಾಳಿಕೊಳ್ಳಬಲ್ಲವು. ಮರುಭೂಮಿಯಂಥ ಬಯಲು ಪ್ರದೇಶಗಳಲ್ಲಿ ಸಹ ಲಾಭದಾಯಕವಾಗುವಂತೆ ಸಾಕಬಹುದು. ಇವು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮದ್ರಾಸಿನ ಕೆಲ ಪ್ರದೇಶಗಳಲ್ಲೂ ಸಿಗುತ್ತವೆ. ಈ ಕುರಿಗಳ ಗಾತ್ರ ಮಧ್ಯಮ ತರಗತಿಯದು; ತಲೆ ಸಣ್ಣ; ಮಖ ಉದ್ದ, ಮೂಗು ನೀಳವಾಗಿ ತುದಿಯಲ್ಲಿ ಬಗ್ಗಿದೆ. ಕೋಡುಗಳಿಲ್ಲ. ಮುಖದ ಬಣ್ಣ ಬಿಳಿ, ಕಂದು ಅಥವಾ ಕಪ್ಪು, ಕೆಲವೊಮ್ಮೆ ಈ ಬಣ್ಣ ಕೇವಲ ಕಣ್ಣುಗಳ ಸುತ್ತ ಇರಬಹುದು. ಮೈ ಚರ್ಮ ಬಿಗಿಯಾಗಿರುತ್ತದೆ. ಉಣ್ಣೆಯ ಬಣ್ಣ ಬಿಳುಪು. ಉಣ್ಣೆ ಕೆಲವು ಕುರಿಗಳಿಗೆ ಚಪ್ಪೆ ಹಾಗೂ ಹೊಟ್ಟೆಯ ಭಾಗಗಳಲ್ಲಿ ಕಪ್ಪು ಚುಕ್ಕೆಗಳಿವೆ. ಕಪ್ಪು ಮುಖದ ಕುರಿಗಳಿಗೆ ಕಪ್ಪಾದ ಖುರಗಳಿದ್ದರೆ ಕಂದು ಮತ್ತು ಬಿಳಿ ಕುರಿಗಳಿಗೆ ಬಿಳಿ ಬಣ್ಣದ ಖುರಗಳಿರುತ್ತವೆ. ಉಣ್ಣೆ ಉರುಟಾಗಿದ್ದು ಎಳೆಗಳು ಉದ್ದವೂ ಸಹಜವಾಗಿ ತುಂಡಾಗುವಂಥವೂ ಆಗಿವೆ. ಈ ಉಣ್ಣೆಯಿಂದ ರತ್ನಗಂಬಳಿ, ಜಮಖಾನಗಳನ್ನು ಮಾಡಬಹುದಾದ್ದರಿಂದ ಇದಕ್ಕೆ ಬಹಳ ಬೇಡಿಕೆ ಇದೆ. ಉತ್ಪಾದಿಸಲಾದ ಉಣ್ಣೆಯ ಬಹುಭಾಗ ಇಂಗ್ಲೆಂಡ್, ಅಮೆರಿಕ ದೇಶಗಳಿಗೆ ರಫ್ತಾಗುತ್ತದೆ. ಈ ಉಣ್ಣೆಯಿಂದ ಟ್ವಿಲ್ ಮಾದರಿ ಬಟ್ಟೆಗಳನ್ನು ಸಹ ಮಾಡಲಾಗುತ್ತದೆ. ಈ ಜಾತಿಯ ಕುರಿ ಸಾಮಾನ್ಯವಾಗಿ ವರ್ಷಕ್ಕೆ ಒಮ್ಮೆ ಒಂದು ಮರಿಯನ್ನು ಈನುತ್ತದೆ. ಕೆಲವು ಕುರಿಗಳು ವರ್ಷದಲ್ಲಿ ಎರಡು ಬಾರಿ ಈನುವುದೂ ಉಂಟು.

ಮಾರವಾಡೀ ಜಾತಿಯ ಕುರಿಗಳು

[ಬದಲಾಯಿಸಿ]

ಈ ಜಾತಿಯ ಕುರಿಗಳನ್ನು ಜೋಧ್‍ಪುರ ಹಾಗೂ ಜೈಪುರ ಜಿಲ್ಲೆಗಳಲ್ಲಿ ಸಾಕಲಾಗುತ್ತಿದೆ. ಇವು ಪ್ರಪುಷ್ಟವಾಗಿವೆ. ಕಾಲುಗಳು ಬಲಿಷ್ಠ ಮತ್ತು ಉದ್ದವಾಗಿವೆ. ಮುಖದ ಬಣ್ಣ ಕಪ್ಪು. ಈ ತಳಿಗಳು ಉರುಟಾದ ಬಿಳಿ ಉಣ್ಣೆಯನ್ನು ಕೊಡುತ್ತವೆ. ವಾರ್ಷಿಕ ತಲಾ ಉತ್ಪಾದನೆ 2 ರಿಂದ 4 ಪೌಂಡು.

ಚೋಕಲಾ ಜಾತಿಯ ಕುರಿಗಳು

[ಬದಲಾಯಿಸಿ]

ಇವು ರಾಜಸ್ತಾನ, ಚೊ ಹಾಗೂ ಪಿಕಾರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ. ಎತ್ತರ ಕಿರಿದು, ಗಾತ್ರ ಸಣ್ಣ. ಮುಖದ ಮೇಲಿನ ಕಪ್ಪು ಅಥವಾ ಕಂದು ಕಲೆಗಳು ಈ ತಳಿಯ ವಿಶಿಷ್ಟ ಲಕ್ಷಣ; ಉಣ್ಣೆ ಮೇಲ್ತರಗತಿಯ ಕಾರ್ಪೆಟ್ ಉಣ್ಣೆಯೆಂದು ಪ್ರಸಿದ್ದಿ ಪಡೆದಿದೆ. ಒಂದು ಕುರಿಯಿಂದ ವರ್ಷಕ್ಕೆ ಸುಮಾರು 2 ರಿಂದ 4 ಪೌಂಡು ಉಣ್ಣೆ ದೊರಕುತ್ತದೆ.

ಕಾಠಿಯಾವಾಡ್ ಜಾತಿಯ ಕುರಿಗಳು

[ಬದಲಾಯಿಸಿ]

ಕಾಠಿಯಾವಾಡ್, ಕಚ್ ಹಾಗೂ ಉತ್ತರ ಗುಜರಾತ್‍ಗಳಲ್ಲಿ ಈ ತಳಿಗಳನ್ನು ಕಾಣಬಹುದು. ಮುಖ ಕಂದು ಅಥವಾ ಕಪ್ಪಾಗಿದ್ದರೂ ದೇಹ ಮಾತ್ರ ಬಿಳಿ ಉಣ್ಣೆಯಿಂದ ಆಚ್ಛಾದಿತವಾಗಿರುವುದು. ಕಂದು ಬಣ್ಣದ ಮುಖ ಕಾಠಿಯಾವಾಡ್ ಕುರಿಗಳ ಪ್ರಧಾನ ಲಕ್ಷಣವಾಗಿದ್ದರೆ ಕಪ್ಪು ಮುಖ ಕಚ್ ವಲಯದ ಕುರಿಗಳ ಮುಖ್ಯ ಲಕ್ಷಣ. ಇವು ಎತ್ತರವಾದ ಕುರಿಗಳು. ಉತ್ತಮ ಜಾತಿಯ ಉಣ್ಣೆಯನ್ನು ಕೊಡುತ್ತವೆ. ಎಳೆಗಳ ಉದ್ದ ಸಾಮಾನ್ಯವಾಗಿ 4"-5".ವಿದೇಶಗಳಲ್ಲಿ ಚೋರಿಯಾ ಉಣ್ಣೆಯೆಂದು ಇದು ಪ್ರಸಿದ್ಧಿ ಹೊಂದಿದೆ. ಉಣ್ಣೆಯನ್ನು ವರ್ಷದಲ್ಲಿ 2 ಸಾರಿ ಜನವರಿ ಹಾಗೂ ನವಂಬರ್ ತಿಂಗಳುಗಳಲ್ಲಿ ಕತ್ತರಿಸುತ್ತಾರೆ. ಇವು ಮೇಲ್ತರಗತಿಯವು. ಹಾಲು ಕೂಡ ಈ ಜಾತಿಗೆ ಅಧಿಕ. ವರ್ಷದಲ್ಲಿ ಸಾಮಾನ್ಯವಾಗಿ ಈ ಕುರಿಗಳು ಎರಡುಸಾರಿ ಈನುತ್ತವಾದರೂ ಒಂದು ಸೂಲಿಗೆ ಒಂದೇಮರಿ ಇರುವುದು ಸಾಮಾನ್ಯ.

ದಕ್ಷಿಣ ವಲಯ

[ಬದಲಾಯಿಸಿ]

ಉತ್ತರದಲ್ಲಿ ಮಧ್ಯ ಪರ್ವತಾವಳಿಗಳಿಂದ ದಕ್ಷಿಣದ ನೀಲಗಿರಿ ಪರ್ವತಗಳವರೆಗೆ ಹಬ್ಬಿದ ಪ್ರದೇಶಕ್ಕೆ ದಕ್ಷಿಣ ವಲಯ ಎಂದು ಹೇಳಬಹುದು. ಉತ್ತರದ ಬಯಲು ನಾಡಿಗಿಂತ ಈ ಪ್ರದೇಶದಲ್ಲಿ ಕುರಿಗಳ ಸಂಖ್ಯೆ ಹೆಚ್ಚಾಗಿದ್ದು ಅವು ಹೆಚ್ಚು ನಿಬಿಡವಾಗಿ ಹರಡಿವೆ. ಇವನ್ನು ಎರಡು ಮುಖ್ಯ ವರ್ಗಗಳನ್ನಾಗಿ ವಿಂಗಡಿಸಬಹುದು. ಮೈಸೂರು, ಆಂಧ್ರದ ಕೆಲವು ಭಾಗ, ಮಹಾರಾಷ್ಟ್ರ ರಾಜ್ಯದ ತಪ್ಪಲು-ಈ ಪ್ರದೇಶಗಳ ಕುರಿಗಳು ಒಂದು ವರ್ಗದವು. ಇವು ರಾಜಾಸ್ಥಾನೀ ಕುರಿ ಹಾಗೂ ಕೂದಲು ವರ್ಗದ ಉಣ್ಣೆಯನ್ನು ಕೊಡುವ ತಮಿಳು ನಾಡಿನ ಕುರಿಗಳ ಮಿಶ್ರಣ ದಿಂದ ಹುಟ್ಟಿದವು. ಇವನ್ನು ದಖನೀ ಜಾತಿಯ ಕುರಿಗಳೆಂದು ನಾಮಕರಣಮಾಡಲಾಗಿದೆ. ಇವುಗಳಿಂದ ಬೇರೆ ಬೇರೆ ವರ್ಗದ ಉಣ್ಣೆ ದೊರಕುತ್ತದೆ. ಅದರಲ್ಲೂ ಕಪ್ಪು ಅಥವಾ ಬೂದು ಬಣ್ಣದ ಉಣ್ಣೆ ಹೆಚ್ಚಾಗಿರುವುದು. ಉಣ್ಣೆ ಕೂದಲು ಮತ್ತು ನಯವಾದ ತಂತುಗಳ ಮಿಶ್ರಣ. ಕುರಿಗಳು ಗಾತ್ರದಲ್ಲಿ ಚಿಕ್ಕವಾಗಿದ್ದರೂ ಬಲಿಷ್ಠವಾಗಿರುತ್ತವೆ. ಮೇಲಿಂದ ಮೇಲೆ ಒದಗುವ ಬರಗಾಲ ಹಾಗೂ ಅಭಾವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಲ್ಲವು. ಉಣ್ಣೆಯ ವಾರ್ಷಿಕ ತಲಾ ಉತ್ಪಾದನೆ 1 ಪೌಂಡು. ದಖನಿನ ತಪ್ಪಲಿನ ಪೂರ್ವ ಭಾಗದಲ್ಲಿ ಕುರಿಗಳ ಸಂಖ್ಯೆ ನಿಬಿಡವಾಗಿದೆ. ಇಲ್ಲಿಯ ಹವೆ ಉಷ್ಣ ಮತ್ತು ಆದ್ರ್ರತೆಯುಳ್ಳದ್ದು. ಕುರಿಗಳು ಕೂದಲು ವರ್ಗದ ಉಣ್ಣೆಯನ್ನು ಕೊಡುತ್ತವೆ. ಉದ್ದ ಕಾಲಿನ, ಬಡಕಲು ದೇಹದ ಈ ಕುರಿಗಳು ಅಲ್ಪ ಪ್ರಮಾಣದಲ್ಲಿ ಉಣ್ಣೆ ಕೊಡುತ್ತವೆ. ಈ ವಲಯದಲ್ಲಿ ಮುಖ್ಯವಾಗಿ ಕೆಳಗೆ ಕಾಣಿಸಿದ ಐದು ತಳಿಗಳನ್ನು ಸಾಕಲಾಗುತ್ತದೆ.

ದಖನಿ ಕುರಿಗಳು

[ಬದಲಾಯಿಸಿ]

ಸುಮಾರು 15"-20" ಮಳೆಯಾಗುವ ದಖನಿನ ಎತ್ತರವಾದ ತಪ್ಪಲು ಪ್ರದೇಶ ಈ ತಳಿಗಳ ಮೂಲಸ್ಥಾನ. ಇಲ್ಲಿನ ಬಹುಸಂಖ್ಯಾತ ಕುರಿ ಸಾಕುವವರು ವರ್ಷದ ಬಹುಭಾಗದಲ್ಲಿ ತಮ್ಮ ಹಿಂಡುಗಳೊಂದಿಗೆ ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾರೆ. ಮಾನ್ಸೂನ್ ಮಳೆಗಳ ಕಾಲದಲ್ಲಿ ಅಂದರೆ ಜೂನ್ ನಿಂದ ನವಂಬರ್ ವರೆಗೆ ಬೀಳು ಭೂಮಿಯಲ್ಲಿ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುತ್ತಾರೆ. ನವಂಬರ್ ಅನಂತರ ಹುಲ್ಲು ನೀರಿನ ಆಸರೆ ಹುಡುಕುತ್ತ ಹೆಚ್ಚು ಮಳೆಯಾಗುವ ಪ್ರದೇಶಗಳಿಗೆ ಹೋಗುತ್ತಾರೆ. ಇದೊಂದು ಪ್ರತ್ಯೇಕ ಜಾತಿಯೆಂದು ಪರಿಗಣಿಸಲ್ಪಟ್ಟಿದ್ದರೂ ಇದರಲ್ಲಿ ತಳಿಯ ಪರಿಶುದ್ಧತೆ ಇಲ್ಲ. ಇದರ ಮೈ ಬಣ್ಣ ಬಿಳಿ ಅಥವಾ ಕಪ್ಪು. ಬಿಳಿಯಾಗಿದ್ದು ಮುಖ ಮಾತ್ರ ಕಪ್ಪಾಗಿರುವುದೂ ಉಂಟು. ಮೈ ಬಣ್ಣ ಬಿಳಿಯಾಗಿದ್ದು ಮೂಗು, ಬಾಯಿ ಗುಲಾಬಿ ವರ್ಣದ್ದಿದ್ದರೆ ಅಂಥ ಕುರಿಗಳು ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ. ಕಪ್ಪು ಮುಖದ ಬಿಳಿ ಕುರಿಯನ್ನು ತಳಿವೃದ್ಧಿಗಾಗಿ ಆಯ್ಕೆ ಮಾಡಲಾಗುತ್ತದೆ. ಕುರಿಗಳು ಗಾತ್ರದಲ್ಲಿ ಚಿಕ್ಕವಾಗಿದ್ದರೂ ದೃಢವಾಗಿರುತ್ತವೆ. ಉಣ್ಣೆ ಕೆಳದರ್ಜೆಯದಾಗಿದ್ದು ಉರುಟಾಗಿರುತ್ತದೆ. ಇದರಲ್ಲಿ ಕೂದಲು ಹಾಗೂ ಉಣ್ಣೆಯ ತಂತುಗಳು ಬೇರೆ ಬೇರೆ ಪ್ರಮಾಣದಲ್ಲಿ ಮಿಶ್ರವಾಗಿರುತ್ತವೆ. ಉಣ್ಣೆ ಸ್ಥಳೀಯವಾಗಿ ವಿನಿಯೋಗವಾಗುತ್ತದೆ.

ನೆಲ್ಲೂರು ಜಾತಿಯ ಕುರಿಗಳು

[ಬದಲಾಯಿಸಿ]

ಮೂಲತಃ ಆಂಧ್ರಪ್ರದೇಶನೆಲ್ಲೂರಿನವಾದರೂ ಈಗ ತೀರ ದಕ್ಷಿಣದ ಎಲ್ಲ ಪ್ರದೇಶಗಳಲ್ಲಿಯೂ ಇವು ಹರಡಿವೆ. ಮಸಾರಿ ಮತ್ತು ಎರೆನಾಡುಗಳೆರಡರಲ್ಲಿಯೂ ಈ ಕುರಿಗಳನ್ನು ಸಾಕುತ್ತಾರೆ. ಮಳೆಗಾಲದಲ್ಲಿ ಗುಡ್ಡದ ಜಾತಿಗಳಲ್ಲಿ ಮತ್ತು ಅಡವಿಗಳಲ್ಲಿ ಹಾಗೂ ನದಿಗಳ ದಂಡೆಗಳಲ್ಲಿ ಮೇಯಿಸಲಾಗುತ್ತದೆ. ಇವು ಗಾತ್ರದಲ್ಲಿ ದೊಡ್ಡವಾದ ಬಲಿಷ್ಠ ಮೈಕಟ್ಟಿನ ಕುರಿಗಳು. ಇವುಗಳಿಂದ ಕೂದಲು ವರ್ಗದ ಉಣ್ಣೆ ದೊರೆಯುತ್ತದೆ. ಈ ಪ್ರದೇಶದ ಉತ್ತರ ಭಾಗದಲ್ಲಿ ಸಂಪೂರ್ಣ ಬಿಳಿಯಾದ ಇಲ್ಲವೆ ಮುಖ, ಹೊಟ್ಟೆ, ಕಾಲುಗಳ ಮೇಲೆ ಕಪ್ಪು ಮತ್ತು ಕಂದು ಕಲೆಗಳಿರುವ ಬಿಳಿಯ ಕುರಿಗಳು ಕಾಣಸಿಗುತ್ತವೆ. ಮೈಮೇಲೆ ದಟ್ಟವಾಗಿ ಬೆಳೆದ ಕಿರಿದಾದ ಕೂದಲುಗಳಿವೆ. ಎಲ್ಲ ಕುರಿಗಳಿಗೆ ಕೊರಳು ಮೊಲೆಗಳುಂಟು. ಟಗರುಗಳಿಗೆ ಮುರಿಗೆಕೋಡುಗಳಿವೆ. ಕುರಿಗಳಿಗೆ ಕೋಡುಗಳಿರುವುದಿಲ್ಲ. ತೀರ ದಕ್ಷಿಣದಲ್ಲಿರುವ ಕುರಿಗಳು ಗಾತ್ರದಲ್ಲಿ ಸಣ್ಣವಿದ್ದು ನಸುಗೆಂಪು ಬಣ್ಣದವಿರುತ್ತವೆ. ಈ ಕುರಿಗಳು ಸುಮಾರು 9 ತಿಂಗಳು ಅಂತರದಲ್ಲಿ ಮರಿಹಾಕುತ್ತವೆ. ಒಂದುವೇಳೆಗೆ ಒಂದೇಮರಿ. ಟಗರುಮರಿಗಳಿಗೆ ಕೊಬ್ಬು ಬೆಳೆಯುವಂತೆ ಪ್ರಯತ್ನಿಸಿ ಒಂದು ವರ್ಷವಾದೊಡನೆ ಮಾಂಸಕ್ಕಾಗಿ ಮಾರುತ್ತಾರೆ. ಕುರಿಗಳನ್ನು ಮಾತ್ರ 5-6ಮರಿಗಳನ್ನು ಹಾಕಿದ ಅನಂತರ ಮಾರಿಬಿಡುತ್ತಾರೆ. ಇದು ಉತ್ತಮವಾದ ಮಾಂಸದ ತಳಿಯೆಂದು ಪ್ರಸಿದ್ಧಿಪಡೆದಿದೆ.

ಮಂಡ್ಯ ಜಾತಿಯ ಕುರಿ

[ಬದಲಾಯಿಸಿ]

ಕರ್ನಾಟಕ ರಾಜ್ಯದಲ್ಲಿ ಇದು ಮಾಂಸದ ಜಾತಿಯ ತಳಿಯೆಂದು ಪ್ರಸಿದ್ಧಿ ಪಡೆದಿದೆ. ಈ ತಳಿಯಿಂದ ಕೂದಲು ವರ್ಗದ ಉಣ್ಣೆ ದೊರಕುತ್ತಿದೆ. ಅದರಲ್ಲಿ ಉಣ್ಣೆಯ ಅಂಶ ಬಹಳ ಕಡಿಮೆ. ಒಳ್ಳೆಯ ಮೇವು ದೊರಕಿದಲ್ಲಿ ಈ ಕುರಿಗಳು ಬಹು ಬೇಗ ಕೊಬ್ಬುತ್ತವೆ. ಇದರಿಂದ ಈ ಕುರಿಗಳಿಗೆ ಪೇಟೆಯಲ್ಲಿ ಬೇಡಿಕೆ ಬಹಳ. ಸಾಮಾನ್ಯವಾಗಿ ಇವುಗಳ ಬಣ್ಣ ಬಿಳುಪು. ಆದರೂ ಕಂದು ತಲೆಯ ಕಪ್ಪು ಕಲೆಗಳಿರುವ ಕುರಿಗಳೂ ಕಂಡು ಬರುತ್ತವೆ.

ಹಾಸನ ಜಾತಿಯ ಕುರಿ

[ಬದಲಾಯಿಸಿ]

ಈ ತಳಿಯನ್ನು ಮಲೆನಾಡನ್ನು ಬಿಟ್ಟು ಕರ್ನಾಟಕ ರಾಜ್ಯದ ಮಿಕ್ಕ ದಕ್ಷಿಣ ಭಾಗದಲ್ಲಿ ಸಾಕಲಾಗುತ್ತದೆ. ಇವು ಸಣ್ಣ ಗಾತ್ರದ ಗಿಡ್ಡಕುರಿಗಳಾಗಿದ್ದು ಚೆನ್ನಾಗಿ ಮೈ ತುಂಬಿಕೊಂಡು ಬೆಳೆಯುತ್ತವೆ. ಬಣ್ಣ ಕಪ್ಪು, ಬಿಳಿ ಅಥವಾ ಕಂದು. ಸಾಮಾನ್ಯವಾಗಿ ದೇಹದ ಬಹು ಭಾಗದಲ್ಲಿ ಉಣ್ಣೆ ಬೆಳೆಯುತ್ತವೆ. ಉಣ್ಣೆ ಉರುಟಾಗಿದ್ದು ಎಳೆಗಳು 2 1/2 - 3 1/2 ಉದ್ದವಾಗಿರುತ್ತವೆ. ಜನವರಿ ಮತ್ತು ಜೂನ್‍ನಲ್ಲಿ ಹೀಗೆ ವರ್ಷದಲ್ಲಿ 2 ಸಾರಿ ಉಣ್ಣೆಯನ್ನು ಕತ್ತರಿಸುತ್ತಾರೆ. ಉತ್ಪಾದಿಸಲಾಗುವ ಈ ಉಣ್ಣೆಯ ಬಹು ಭಾಗವನ್ನು ಗೃಹ ಕೈಗಾರಿಕೆಗಳಿಗೆ ಬಳಸಲಾಗುತ್ತದೆ; ಮಿಲ್ಲುಗಳಿಂದಲೂ ಈ ಉಣ್ಣೆಗೆ ಬೇಡಿಕೆ ಇದೆ.

ಬಳ್ಳಾರಿ ಜಾತಿಯ ಕುರಿ

[ಬದಲಾಯಿಸಿ]

ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿಯೂ ಕರ್ನೂಲ್ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿಯೂ ಈ ಕುರಿಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಸಾಮಾನ್ಯವಾಗಿ ಒಂದು ಹಿಂಡಿನಲ್ಲಿ 100ರ ವರೆಗೆ ಕುರಿಗಳಿರುತ್ತವೆ. ರಾತ್ರಿಯ ವೇಳೆಯಲ್ಲಿ ಕುರಿಗಳನ್ನು ಗ್ರಾಮದ ಸುತ್ತು ಮುತ್ತಲಿನ ಬಯಲು ಪ್ರದೇಶದಲ್ಲಿ ಕೂಡಿ ಹಾಕುತ್ತಾರೆ. ಬೀಳು ಭೂಮಿಯಲ್ಲಿ ಹಾಗೂ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಗಿಡಗಂಟಿಗಳನ್ನೂ ಹುಲ್ಲನ್ನೂ ತಿಂದು ಈ ಕುರಿಗಳು ಜೀವಿಸುತ್ತವೆ. ಇದೊಂದು ಮಿಶ್ರತಳಿ, ಬಣ್ಣ ಸಾಮಾನ್ಯವಾಗಿ ಕಪ್ಪು, ಬೂದು ಇಲ್ಲವೆ ಬಿಳಿ. ಬಿಳಿಯ ಕುರಿಗಳ ಮುಖ ಕಪ್ಪು. ಬೆರಕೆ ಬಣ್ಣಗಳ ಕುರಿಗಳೂ ಇವೆ. ಆದರೆ ಕಪ್ಪು ಕುರಿಗಳೇ ಹೆಚ್ಚು. ಟಗರುಗಳಿಗೆ ಮುರಿಗೆಕೋಡುಗಳಿರುತ್ತವೆ. ಹೆಣ್ಣಿಗೆ ಕೋಡು ಇರುವುದಿಲ್ಲ. ಉಣ್ಣೆ ಉರುಟು. ಉತ್ಪಾದಿಸಲಾಗುವ ಉಣ್ಣೆಯ ಸುಮಾರು ಅರ್ಧ ಭಾಗ ಸ್ಥಳೀಯವಾಗಿ ಕಂಬಳಿ ಮಾಡಲು ಉಪಯೋಗಿಸಲ್ಪಡುತ್ತದೆ. ಈ ಕುರಿಯ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ. ಮಾಂಸಕ್ಕಾಗಿ ಇದನ್ನು ಸಾಕುವುದು ಅಷ್ಟೊಂದು ಲಾಭದಾಯಕವಾಗಿಲ್ಲ.

ವಿದೇಶಿ ತಳಿಗಳು

[ಬದಲಾಯಿಸಿ]

ಉತ್ತಮ ದರ್ಜೆಯ ಉಣ್ಣೆ, ಯಥೇಚ್ಛವಾಗಿ ಮಾಂಸ ಮತ್ತು ಹಾಲನ್ನು ಪಡೆಯುವುದಕ್ಕಾಗಿ, ಸ್ವದೇಶೀ ತಳಿಗಳ ಮೇಷ್ಟಿಗಳೊಡನೆ ಅನ್ಯ ತಳಿಗಳಾದ ಮೆರೀನೋ, ರ್ಯಾಂಬುಲಿ, ಶೆವಿಯೋ, ಸೌತ್‍ಡಾನ್, ಲೀಸೆಸ್ಟರ್ ಮತ್ತು ಲಿಂಕನ್‍ಗಳ ಟಗರುಗಳನ್ನು ಅಡ್ಡಹಾಯಿಸುವ ಪದ್ಧತಿಯನ್ನು ಅನೇಕ ವರ್ಷಗಳಿಂದಲೂ ಭಾರತದಲ್ಲಿ ಅನುಸರಿಸುತ್ತಿದ್ದಾರೆ.

ಮೆರೀನೋ

[ಬದಲಾಯಿಸಿ]

ಇದು ಪ್ರಪಂಚದಲ್ಲೆಲ್ಲ ಅತ್ಯುತ್ತಮ ದರ್ಜೆಯ ಉಣ್ಣೆಯನ್ನು ಕೊಡಬಲ್ಲ ಸ್ಪೇನ್ ದೇಶದ ತಳಿ. ಕುರಿಗಳ ಪಾದ ಮತ್ತು ಮುಖಗಳೆರಡೂ ಸಮೃದ್ಧಿಯಾಗಿ ಬೆಳೆದ ಬಿಳುಪಾದ ಉಣ್ಣೆಯಿಂದ ಆವರಿಸಲ್ಪಟ್ಟಿವೆ. ಇವು ಅತ್ಯಂತ ಗಟ್ಟಿಯಾದ್ದರಿಂದ ಎಂಥ ವಿಷಮ ವಾತಾವರಣ ಅಥವಾ ಬರಗಾಲವನ್ನೂ ಸಹಿಸಬಲ್ಲವು.

ರ್ಯಾಂಬುಲೀ

[ಬದಲಾಯಿಸಿ]

ಇದು ವಾಸ್ತವವಾಗಿ ಫ್ರಾನ್ಸಿನ ತಳಿಯಾದರೂ ಮೆರೀನೋ ತಳಿಯ ವಂಶಜ ಎಂದು ಊಹಿಸಲಾಗಿದೆ. ದಪ್ಪವಾದ ತಲೆಯುಳ್ಳ ಈ ಕುರಿಗಳ ಮೂಗು ಮತ್ತು ಕಿವಿಗಳ ಸುತ್ತ ಬಿಳಿ ಕೂದಲುಗಳಿವೆ. ಭಾರವಾದ ತುಪ್ಪಟ ಶರೀರವನ್ನೆಲ್ಲ ಒತ್ತಾಗಿ ಆವರಿಸಿದೆ. ಆದ್ದರಿಂದ ಉತ್ತಮ ದರ್ಜೆಯ ಮಾಂಸ ದೊರಕದಿದ್ದರೂ ಸುಂದರವಾದ ಮರಿಗಳೂ ನಾಜೂಕಾದ ಉಣ್ಣೆಯೂ ಈ ತಳಿಯಿಂದ ಸಿಗುತ್ತವೆ. ಟಗರುಗಳು 125 ಕೆ.ಜಿ ಮತ್ತು ಮೇಷ್ಟಿಗಳು 90 ಕೆಜಿ ತೂಗುತ್ತವೆ. ಇದು ಅತಿ ಫಲಪ್ರದ ತಳಿ. ಸಾಮಾನ್ಯ ದರ್ಜೆಯ ಸ್ವದೇಶೀ ಕುರಿಗಳೊಡನೆ ಅಡ್ಡಹಾಯಿಸುವುದರಿಂದ ಹುಟ್ಟುವ ಮರಿಗಳು ಹೆಚ್ಚು ಪ್ರಮಾಣದಲ್ಲಿ ಮಾಂಸ ಉತ್ತಮ ಪೀಳಿಗೆಯನ್ನು ಸೃಷ್ಟಿಸುತ್ತವೆ.

ಶೇವಿಯೋ

[ಬದಲಾಯಿಸಿ]

ಇದು ಸ್ಕಾಟ್ಲೆಂಡ್ ತಳಿ. ಸೆಟೆದು ನಿಂತ ಕಿವಿ, ಕಪ್ಪಾದ ಮೂಗು, ತುಟಿ ಮತ್ತು ಪಾದ, ಬಿಳಿಯ ಮುಖ ಮತ್ತು ಕಾಲುಗಳು ಇದರ ಮುಖ್ಯ ಲಕ್ಷಣಗಳು. ಇವು ಮಧ್ಯಮ ದರ್ಜೆಯ ಹಗುರವಾದ ಉಣ್ಣೆಗೆ ಪ್ರಸಿದ್ಧಿಯಾದವು.

ಸೌತ್‍ಡೌನ್

[ಬದಲಾಯಿಸಿ]

ಇದು ಇಂಗ್ಲೆಂಡಿನ ಪ್ರಾಚೀನ ತಳಿಗಳಲ್ಲೊಂದು. ಅಗಲವಾದ ತಲೆ ಮತ್ತು ನಸು ಕಂದುಬಣ್ಣದ ಮುಖವುಳ್ಳ ಈ ಕುರಿಗಳ ಶರೀರ ನೀಳವಾಗಿದ್ದರೂ ಎತ್ತರ ಕಡಿಮೆ. ಕಾಲುಗಳು ಚಿಕ್ಕವು. ಪ್ರೌಢಾವಸ್ಥೆಯಲ್ಲಿ ಟಗರುಗಳು 80 ಕೆಜಿ, ಮೇಷ್ಟಿಗಳು 55 ಕೆಜಿ ತೂಗುತ್ತವೆ. ಪ್ರತಿ ಕುರಿಯೂ 2-3 ಕೆಜಿಗಳಷ್ಟು ತುಪ್ಪಟ ಕೊಡುತ್ತದೆ. ಇತರ ಉಪತಳಿಗಳ ಉಗಮ ಕಾರ್ಯದಲ್ಲಿ ಈ ತಳಿ ಪ್ರಶಂಸನೀಯ ಪಾತ್ರವಹಿಸುತ್ತದೆ.

ಲೀಸೆಸ್ಟರ್

[ಬದಲಾಯಿಸಿ]

ಇದೂ ಸಹ ಇಂಗ್ಲಿಷ್ ತಳಿ. ಸಾಧಾರಣ ಗಾತ್ರದ ಈ ಕುರಿಗಳ ಮುಖ ಮತ್ತು ಕಾಲುಗಳಲ್ಲಿ ಕೂದಲಿರುವುದಿಲ್ಲ. ನೀಳವಾದ ತುಪ್ಪಟಕ್ಕೆ ಈ ತಳಿ ಪ್ರಸಿದ್ಧಿಯಾದುದು. ಲಿಂಕನ್: ಇದು ಇಂಗ್ಲೆಂಡಿನ ನಾಡು ತಳಿ. ದಪ್ಪವಾದ ಕಿವಿಗಳು ಅಗಲವಾದ ತಲೆ ಮತ್ತು ಮಾಂಸಭರಿತ ಸ್ಥೂಲ ಶರೀರ ಈ ತಳಿಯ ವೈಶಿಷ್ಟ್ಯ. ಅತಿ ಫಲವತ್ಕಾರಿಯಾದ ಪ್ರತಿ ಮೇಷ್ಟಿಯಿಂದಲೂ ವರ್ಷಕ್ಕೆ 5-7 ಕೆಜಿಗಳಷ್ಟು ಉತ್ತಮ ದರ್ಜೆಯ ಉಣ್ಣೆ ಪಡೆಯುತ್ತಾರೆ. ಈ ತಳಿಯ ಟಗರುಗಳನ್ನು ವಿಶೇಷವಾಗಿ ತಳೀ ಕರಣಕ್ಕಾಗಿ ಉಪಯೋಗಿಸುತ್ತಾರೆ. ಪ್ರಪಂಚದ ಒಟ್ಟು ಉಣ್ಣೆಯಲ್ಲಿ 1/8 ಭಾಗದಷ್ಟು ತುಪ್ಪಟ ಆಸ್ಟ್ರೇಲಿಯದ ಮೆರೀನೋ ತಳಿಯೊಂದರಿಂದಲೇ ದೊರಕುತ್ತದೆ. ಇವಲ್ಲದೆ ನ್ಯೂಜಿûೀಲೆಂಡಿನ ರೋಮ್ನಿ ಮಾರ್ಷ್ ಮತ್ತು ಕಾರಿಡೇಲ್ಸ್ ತಳಿಗಳು ಉತ್ತಮ ದರ್ಜೆಯ ತುಪ್ಪಟಕ್ಕೂ ಮತ್ತು ತಳೀಕರಣ ಸಾಮಥ್ರ್ಯಕ್ಕೂ ಪ್ರಸಿದ್ದಿಯಾಗಿವೆ.

ಕುರಿ ತಳೀಕರಣ

[ಬದಲಾಯಿಸಿ]

ತಳೀಕರಣಕ್ಕಾಗಿ ಆರಿಸುವ ಟಗರಿಗೆ ಅದರ ಪಿತೃತಳಿಯ ಎಲ್ಲ ಒಳ್ಳೆಯ ಗುಣಗಳೂ ಇರಬೇಕು. ಅದರಲ್ಲಿ ಯಾವ ನ್ಯೂನತೆಗಳೂ ಇರಬಾರದು. ವರ್ಷದ ಎಲ್ಲ ಕಾಲಗಳಲ್ಲೂ ದೃಢಕಾಯವಾಗಿರಬೇಕು. ಅಗಲವಾದ ಕಟಿ, ದಪ್ಪವಾದ ಕತ್ತು ,ಹೊರಹೊಮ್ಮಿದ ಎಲುಬುಳ್ಳ ಅಂದವಾದ ಶರೀರ ವಿಶಾಲವಾದ ಎದೆ, ಮಟ್ಟಸವಾದ ಬೆನ್ನು, ಚಂದದ ಪಾದ ಮತ್ತು ಸುಂದರ ಆಕಾರದ ತಲೆ ಇರುವ ಟಗರನ್ನು ಆರಿಸಿ ಪೋಷಿಸಬೇಕು. ಅಡ್ಡಹಾಯಿಸಲು ಬಿಡುವುದಕ್ಕೆ ಮೊದಲು ಕುರಿ ಮಂದೆಗೆ ಚೆನ್ನಾಗಿ ಒಗ್ಗಿಸಬೇಕು. ಟಗರಿನಷ್ಟೇ ವಯಸ್ಸಾದ ಸಮಕಾಲೀನ ಕುರಿ ಮಂದೆಗೆ ಬಿಡಬಾರದು. ಮೇಷ್ಟಿಗಳ ವಯಸ್ಸು ಟಗರಿನ ವಯಸ್ಸಿಗಿಂತ ಅಧಿಕ ಅಥವಾ ಕಡಿಮೆ ಇದ್ದರೆ ಉತ್ತಮ ಫಲ ದೊರೆಯುವುದೆಂದು ತಿಳಿದು ಬಂದಿದೆ. ಬೆದೆಗಾಲದಲ್ಲಿ ಟಗರುಗಳು ಸಾಮಾನ್ಯವಾಗಿ ಮೇಯುವುದನ್ನು ನಿಲ್ಲಿಸುವುದರಿಂದ ಅವುಗಳಿಗೆ ಪೌಷ್ಟಿಕ ಆಹಾರವನ್ನು ಕೊಟ್ಟು ಕಾಪಾಡಬೇಕು. ಒಳ್ಳೆಯ ಮೈಕಟ್ಟುಳ್ಳ ಒಂದು ಟಗರು ಸುಮಾರು 30-40 ಕುರಿಗಳಿಗೆ ಗರ್ಭಾದಾನ ಮಾಡಬಲ್ಲದು. ಬೆದೆಕಾಲದ ಅನಂತರ ಟಗರನ್ನು ಮಂದೆಯಿಂದ ಬೇರ್ಪಡಿಸಬೇಕು. ಉತ್ತಮ ತಳಿಯ ಪ್ರಾಯದ ಕುರಿಗಳು ಅಗ್ಗವಾಗಿ ದೊರಕುವುದು ಅಸಂಭವವಾದ್ದರಿಂದ, ತಳಿಯ ಹೆಣ್ಣುಮರಿಗಳು ಹಾಲುಣ್ಣುವುದನ್ನು ಬಿಟ್ಟಕೂಡಲೇ ತಂದು ಸಾಕುವುದು ಉತ್ತಮ. ಹುಟ್ಟಿದ ಮೇಲೆ 7-14 ತಿಂಗಳೊಳಗೆ ಕುರಿ ಬೆದೆಗೆ ಬರಲು ಪ್ರಾರಂಭಿಸಿ, 7 ವರ್ಷಗಳ ವರೆಗೂ ಗರ್ಭಧರಿಸಬಲ್ಲುದು. ಉತ್ಕøಷ್ಟವಾದ ಫಲ ಪಡೆಯಲು 2 1/2 -2 ವರ್ಷದ, ಅಂದರೆ ನಾಲ್ಕು ಹಲ್ಲಿಕ್ಕಿದ ಕುರಿಯನ್ನು ಆರಿಸಬೇಕು. ಕ್ಷಾಮಪೀಡಿತ ಪ್ರದೇಶಗಳಲ್ಲಿ 3-4 ಮರಿಗಳನ್ನು ಹಾಕಿದ ಮೇಲೆ ಕುರಿಗಳು ಪುನರ್ಗರ್ಭಧಾರಣೆಗೆ ಯೋಗ್ಯವಲ್ಲ. ತಳದೂಗುವ ನೀಳವಾದ ಮೈಕಟ್ಟು , ಚೆನ್ನಾಗಿ ರೂಪುಗೊಂಡ ಕೆಚ್ಚಲು , ಚಟುವಟಿಕೆಯಿಂದ ಮೇಯುವ ಹಾಗು ಮರಿಗಳಿಗೆ ಹಾಲುಣಿಸುವುದರಲ್ಲಿ ಅತ್ಯುತ್ಸಾಹ ತೋರುವ ಕುರಿಗಳನ್ನು ಆರಿಸುವುದರಿಂದ ಉತ್ತಮ ಫಲ ದೊರಕುವುದು. ಉಣ್ಣೆಗಾಗಿ ಉಪಯೋಗಿಸುವ ಕುರಿಗಳನ್ನು ಉಣ್ಣೆಗೆ ಪ್ರಸಿದ್ಧಿಯಾದ ತಳಿಗಳಿಂದಲೇ ಆಯ್ಕೆ ಮಾಡಬೇಕು. ಬೆದೆಗೆ ಬರುವುದಕ್ಕೆ ಎರಡು ವಾರ ಮೊದಲೇ ಕಾಳು ಮುಂತಾದ ಧಾನ್ಯಗಳಿಂದ ಪೋಷಿಸಬೇಕು. ಗರ್ಭಧರಿಸಿದ ಕುರಿಗಳಿಗೆ ಪೌಷ್ಟಿಕಾಹಾರವನ್ನು ಕೊಟ್ಟರೆ, ಊನ ಹಾಗು ದುರ್ಬಲವಾದ ಮರಿಗಳು ಕಡಿಮೆಯಾಗಿ ರೋಗರುಜಿನಗಳಿಲ್ಲದೆ ಉತ್ತಮವಾದ ಮರಿಗಳ ಸಂಖ್ಯೆ ಹೆಚ್ಚುತ್ತದೆ. ಶ್ರೇಷ್ಠದರ್ಜೆಯ ಉಣ್ಣೆಯು ಹೆಚ್ಚುತ್ತದೆ. ಈನುವ ಕಾಲ ಬಂದಾಗ ಕುರಿಗಳನ್ನು ವಾತವರಣದ ವೈಪರೀತ್ಯದಿಂದ ರಕ್ಷಿಸಿದ ಕುರಿಹಟ್ಟಿಗಳಲ್ಲಿಡಬೇಕು. ಬಾಣಂತಿ ಕುರಿಗಳನ್ನು ಕೆಲವು ದಿನಗಳವರೆಗೆ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅಂತೆಯೇ ಮೊದಲ 48 ಗಂಟೆಗಳ ಕಾಲ ಅಥವಾ ತಾವೇ ಹಾಲುಣ್ಣಲು ಪ್ರಯತ್ನಿಸುವ ತನಕ ಮರಿಗಳಿಗೆ ಆರೈಕೆ ಮಾಡುವುದು ಉತ್ತಮ. ಹುಟ್ಟಿದ 7-14 ದಿವಸಗಳ ಅವಧಿಯ ಮರಿಗಳಿಗೆ ಹಿಡ ಮಾಡಲು ಯೋಗ್ಯವಾದ ಕಾಲ. ಈ ಅವಧಿಯಲ್ಲೇ ಚಾಕು ಅಥವಾ ಕಾದ ಕಬ್ಬಿಣದಿಂದ ಬಾಲವನ್ನು ಕತ್ತರಿಸಬಹುದು(ಡಾಕಿಂಗ್). ಇದರಿಂದ ಮಲ ಶೇಖರಣೆಯಿಂದ ಉದ್ಭವಿಸುವ ಕೀಟವ್ಯಾಧಿಗಳಿಂದ ಕುರಿಗಳನ್ನು ರಕ್ಷಿಸಬಹುದು. ಕುರಿಹಟ್ಟಿಗಳ ನಿರ್ಮಾಣಕ್ಕೆ ಅಷ್ಟೇನೂ ಖರ್ಚು ತಗುಲುವುದಿಲ್ಲ. ಎತ್ತರವಾದ ಪ್ರದೇಶಗಳಲ್ಲಿ ಹಗುರವಾದ ಗೂಟಗಳನ್ನು ನೆಟ್ಟು ರಕ್ಷಿಸಬಹುದು. ಕೂಡಿಟ್ಟು ಸಾಕುವ ಕುರಿಗಳಿಗೆ ಕುರಿಹಟ್ಟಿಗಳಲ್ಲಿ ಚರಣೆಗೆ ಮತ್ತು ತೊಟ್ಟಿ ಮುಂತಾದ ಸೌಲಭ್ಯಗಳಿರಬೇಕು.

ಸ್ವಕೀಯ ತಳೀಕರಣ

[ಬದಲಾಯಿಸಿ]

ಶ್ರೇಷ್ಠ ಗುಣಗಳುಳ್ಳ ಅನೇಕ ಟಗರುಗಳನ್ನಾರಿಸಿ ಒಂದು ಮಂದೆಗೆ ಒಂದರಂತೆ ಅದೇ ತಳಿಯ ವಿವಿಧ ಕುರಿಮಂದೆಗಳಿಗೆ ಬಿಡುವುದರಿಂದ, ತಾಯಿಕುರಿಗಳಿಗಿಂತಲೂ ಶ್ರೇಷ್ಠಗುಣಗಳುಳ್ಳ ಉತ್ಕøಷ್ಟ ಮರಿಗಳನ್ನು ಯಾವ ಟಗರಿನಿಂದ ಪಡೆಯಬಹುದೆಂಬ ಅಂಶವನ್ನು ನಿರ್ಧರಿಸಬಹುದು. ಅನಂತರ ಅಂಥ ಉತ್ತಮ ಟಗರುಗಳನ್ನೇ ತಳೀಕರಣಕ್ಕಾಗಿ ಉಪಯೋಗಿಸಿದರೆ ಮುಂಬರುವ ಪೀಳಿಗೆಯ ಗುಣಮೌಲ್ಯ ಉತ್ತಮಗೊಳ್ಳುತ್ತದೆ. ಈ ಬಗೆಯ ಸ್ವಕೀಯ ತಳೀಕರಣದಿಂದ ದುರ್ಬಲ ಮರಿಗಳು ಆಕಸ್ಮಿಕವಾಗಿ ಉದ್ಭವಿಸಿದರೆ ಅವನ್ನು ತ್ಯಜಿಸುವುದು ಒಳ್ಳೆಯದು.

ಪರಕೀಯ ತಳೀಕರಣ

[ಬದಲಾಯಿಸಿ]

ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಪಂಜಾಬು, ಜಮ್ಮು ಮತ್ತು ಕಾಶ್ಮೀರಗಳಲ್ಲಿ ನಾಜೂಕಾದ ಉಣ್ಣೆಗಾಗಿ ನವ್ಯ ತಳಿಯನ್ನು ಪಡೆಯಲು ಈ ವಿಧಾನವನ್ನು ಅನುಸರಿಸುತ್ತಾರೆ. ಸ್ವದೇಶಿ ತಳಿಯ ಕುರಿಗಳಿಗೆ ಅನ್ಯ ತಳಿಯಾದ ಮೆರೀನೋ ಟಗರನ್ನು ಅಡ್ಡ ಹಾಯಿಸುವರು. ಇದರಿಂದ ತಾಯಿ ತಳಿಗಿಂತಲೂ ಶ್ರೇಷ್ಠದರ್ಜೆಯ ಉಣ್ಣೆ ನೀಡುವ ಮೊದಲ ಪೀಳಿಗೆಯ ಮರಿಗಳು ಹುಟ್ಟುತ್ತವೆ. ಈ ಪೀಳಿಗೆಯ ಮರಿಗಳಿಗೆ ಮೆರಿನೋ ಟಗರುಗಳನ್ನು ಮತ್ತೆ ಹಾಯಿಸುವುದರಿಂದ ಉದ್ಭವಿಸುವ ಎರಡನೆ ಪೀಳಿಗೆ ಮೊದಲ ಪೀಳಿಗೆಗಿಂತ ಶ್ರೇಷ್ಠವಾಗಿರುತ್ತವೆ. ಈ ಬಗೆಯ, ಅಡ್ಡಹಾಯುವಿಕೆಯನ್ನು ಮುಂದುವರಿಸಿದರೆ, ಕ್ರಮೇಣ ಸ್ವದೇಶೀ ಮತ್ತು ಅನ್ಯ ತಳಿಗಳ ಶ್ರೇಷ್ಠ ಗುಣಗಳುಳ್ಳ ಒಂದು ನೂತನ ಮಿಶ್ರತಳಿ ಉದ್ಭವವಾಗುತ್ತದೆ. ಈ ರೀತಿಯ ಪರಕೀಯ ತಳೀಕರಣದಿಂದ ನಾಜೂಕಾದ ತುಪ್ಪಟವೀಯುವ ಹಿಸಾರ್ಡೇಲ್ ಎಂಬ ವಿನೂತನ ತಳಿಯನ್ನು ಹರಿಯಾಣದ ಹಿಸ್ಸಾರ್ ಪಟ್ಟಣದಲ್ಲಿ ಪಡೆಯಲಾಗಿದೆ.

ಅಂತಸ್ತುಗೊಳಿಸಿಕೆ

[ಬದಲಾಯಿಸಿ]

ಯಾವುದಾದರೊಂದು ತಳಿಯ ಕುರಿಗಳ ಮಾಂಸ ಅಥವಾ ತುಪ್ಪಟವನ್ನು ಸುಧಾರಿಸಲು ಈ ಕ್ರಮವನ್ನು ಅನುಸರಿಸುತ್ತಾರೆ. ಯಾವ ತಳಿಯಲ್ಲಿ ಇಚ್ಛಿಸಿದ ಗುಣ ವೃದ್ಧಿಯಾಗಬೇಕೋ ಆ ತಳಿಯ ಕುರಿಮಂದೆಗೆ ಉತ್ಕøಷ್ಟ ಗುಣವುಳ್ಳ ಒಂದು ಶುದ್ಧ ತಳಿಯ ಟಗರನ್ನು ಬಿಡುತ್ತಾರೆ. ಇದರಿಂದ ಪ್ರಥಮ ಪೀಳಿಗೆಯ 50%ರಷ್ಟು ಸುಧಾರಿಸುತ್ತದೆ. ಆದರೂ ಐದನೆಯ ಪೀಳಿಗೆಯ ತನಕವೂ ಎಲ್ಲ ಪೀಳಿಗೆಯ ಕುರಿಗಳಿಗೂ ಸತತವಾಗಿ ಶುದ್ಧ ತಳಿಯ ಟಗರನ್ನು ಅಡ್ಡ ಹಾಯಿಸುತ್ತಾರೆ. ನಿರೀಕ್ಷಿಸಿದ ಮಟ್ಟಕ್ಕೆ ಎಲ್ಲ ಕುರಿಗಳ ಗುಣವರ್ಧನೆಯಾಗುವವರೆಗೂ ಪ್ರತಿ ಪೀಳಿಗೆಯ ಗಂಡು ಮರಿಗಳಿಗೆ ಅವು ಪ್ರಾಯಕ್ಕೆ ಬರುವುದಕ್ಕೆ ಮೊದಲೇ ಗರ್ಭಾದಾನಕ್ಕೆ ಅವಕಾಶಕೊಡುವುದಿಲ್ಲ.

ಕೃತಕ ಗರ್ಭಾಧಾನ

[ಬದಲಾಯಿಸಿ]

ಕುರಿಗಳ ಪಾಲನೆ, ಪೋಷಣೆ ಮತ್ತು ಸಂತಾನಕ್ರಿಯೆಗಳನ್ನು ಮೇಲ್ಕಂಡ ಸುಧಾರಿತ ಕ್ರಮಗಳಿಂದ ಉತ್ತಮಪಡಿಸಿದರೂ ಸ್ವದೇಶೀ ತಳಿಗಳ ದೇಹ ಪ್ರಕೃತಿಯನ್ನು ಸುಧಾರಿಸಿದ ಹೊರತೂ ಭಾರತದಲ್ಲಿ ಕುರಿಕೃಷಿ ಏಳಿಗೆ ಹೊಂದಲಾರದು. ಉತ್ತಮವಾದ ವಿದೇಶೀ ತಳಿಗಳು ಭಾರತದ ಹವೆಗೆ ಒಗ್ಗದಿರುವುದರಿಂದಲೂ ಉತ್ಕೃಷ್ಟಗುಣಗುಳುಳ್ಳ ಟಗರುಗಳ ಸಂಖ್ಯೆ ಅತ್ಯಲ್ಪವಾದ್ದರಿಂದಲೂ ಅಧಿಕ ಸಂಖ್ಯೆಯ ಕುರಿಗಳು ಏಕಕಾಲದಲ್ಲಿ ಬೆದೆಗೆ ಬರುವುದರಿಂದಲೂ ಕೃತಕ ಗರ್ಭಾಧಾನ ಕ್ರಮ ಅನಿವಾರ್ಯ. ಟಗರು ಸ್ಖಲಿಸಿದ ವೀರ್ಯವನ್ನು ಕಡಿಮೆ ಉಷ್ಣತೆಯಲ್ಲಿಟ್ಟರೆ ಒಂದು ವಾರದವರೆಗೂ ಕೆಡದಂತೆ ರಕ್ಷಿಸಬಹುದು. ಅಲ್ಲದೆ ವೀರ್ಯಕಾರಕಗಳಾದ ಎಗ್-ಯೋಕ್ ಸಿಟ್ರೇಟ್ ಮತ್ತು ಬೈಕಾರ್ಬೊನೇಟ್-ಫಾಸ್ಫೇಟ್‍ಗಳಲ್ಲಿ 1-00ಸೆ. ಅಥವಾ 150-200 ಸೆ. ಉಷ್ಣತೆಯಲ್ಲಿ ಶೇಖರಿಸಿಟ್ಟರೆ ಬಹು ದೀರ್ಘಕಾಲ ರಕ್ಷಿಸಬಹುದೆಂದು ತಿಳಿದುಬಂದಿದೆ. ಹೀಗೆ ಶೇಖರಿಸಿಟ್ಟ ವೀರ್ಯದ ಪ್ರಮಾಣವನ್ನು ಹೆಚ್ಚಿಸಿ ಕುರಿಗಳು ಬೆದೆಗೆ ಬಂದಾಗ ಯೋನಿಯ ಮೂಲಕ ಕೃತಕವಾಗಿ ಸೇರಿಸಿ ಗರ್ಭಾಧಾನ ಮಾಡಬಹುದು. ಒಂದು ಶ್ರೇಷ್ಠ ಟಗರು ಒಮ್ಮೆ ಸ್ಖಲಿಸಿದ ವೀರ್ಯದಿಂದ ಸುಮಾರು 30-40 ಕುರಿಗಳಿಗೆ ಗರ್ಭಾಧಾನ ಮಾಡಬಹುದು.

ಕುರಿಗಳ ಆಹಾರ

[ಬದಲಾಯಿಸಿ]
Head of polled, domesticated sheep in the long grass

ಸಸಾರಜನಕ ವಸ್ತುಗಳು, ಕ್ಯಾಲ್ಸಿಯಂ ಮತ್ತು ರಂಜಕವೇ ಮುಂತಾದ ಖನಿಜಾಂಶಗಳು, ಶರ್ಕರ ಪಿಷ್ಟಾದಿಗಳು, ಕೊಬ್ಬು ಮತ್ತು ಜೀವಸತ್ವಗಳು ಕುರಿಗಳ ಬೆಳೆವಣಿಗೆಗೆ ಅತ್ಯವಶ್ಯಕವಾದ ಪದಾರ್ಥಗಳು. ಸಾಮಾನ್ಯವಾಗಿ ತೇವಾಂಶವಿಲ್ಲದ ಎಳಸಾದ ಹುಲ್ಲು, ಗರಿಕೆ, ಚಿಗುರು, ದ್ವಿದಳ ಧಾನ್ಯ, ತವುಡು, ಹಿಂಡಿ ಮುಂತಾದ ವಸ್ತುಗಳನ್ನು ಕೊಡಬೇಕು. ದ್ವಿದಳ ಸಸ್ಯಗಳಾದ ಅಲಸಂದೆ, ಹುರುಳಿ, ಹೆಸರು, ಉದ್ದು, ಕುದುರೆಮಸಾಲೆಸೊಪ್ಪು, ಮುಂತಾದ ಗಿಡಗಳ ಎಲೆಗಳನ್ನೂ ಅಗಸೆ ಮತ್ತು ಗೊಬ್ಬಳಿಯ ಕಾಯಿ ಮತ್ತು ಎಲೆಗಳೆರಡನ್ನೂ ಕಂಡರೆ ಕುರಿಗಳಿಗೆ ಬಲು ಪ್ರೀತಿ. ಗೆಣಸಿನ ಬಳ್ಳಿಗಳು ಕುರಿಮರಿಗಳಿಗೆ ಬಲು ಅಚ್ಚುಮೆಚ್ಚಿನ ಆಹಾರ. ವಯಸ್ಸು ಮತ್ತು ತೂಕಕ್ಕನುಗುಣವಾಗಿ ದಿನಕ್ಕೆ ತಲಾ 1-2 ಕೆ. ಜಿ.ಗಳಷ್ಟು ದ್ವಿದಳಸಸ್ಯಗಳ ಸೊಪ್ಪು ಬೇಕಾಗುವುದು. ಅಭಾವ ಕಾಲದಲ್ಲಿ 110-225 ಗ್ರಾಂ ಗಳಷ್ಟು ಕಡಲೇಕಾಯಿ ಮತ್ತು ಎಳ್ಳು ಹಿಂಡಿಯನ್ನು ಕೊಟ್ಟು ಸಾಕಬಹುದು. ಸುಣ್ಣ ಮತ್ತು ಉಪ್ಪನ್ನು ಸಮಪ್ರಮಾಣದಲ್ಲಿ ಬೆರಸಿ, ಹುಲ್ಲು ಮತ್ತು ಚಿಗುರೆಲೆಗಳೊಡನೆ ಮಿಶ್ರಾಹಾರವಾಗಿ ಕೊಡುವುದು ಉತ್ತಮ. ಹುಲ್ಲು ಬಲಿತಿದ್ದರೆ ಸಸಾರಜನಕಾಂಶ ಕಡಿಮೆಯಾಗಿಯೂ ತೇವದಿಂದ ಕೂಡಿದ್ದರೆ ಪರತಂತ್ರ ಜೀವಿಗಳ ಕಾಟ ಅತಿಯಾಗಿಯೂ ಇರುವುದರಿಂದ ಯಾವಾಗಲೂ ತೇವರಹಿತವಾದ ಮತ್ತು ಎಳಸಾದ ಹುಲ್ಲನ್ನೇ ಕೊಡಬೇಕು. ಗರ್ಭಾದಾನಕ್ಕಾಗಿ ಉಪಯೋಗಿಸುವ ಟಗರುಗಳಿಗೆ ದಿನಕ್ಕೆ 200-450 ಗ್ರಾಂ ಮಿಶ್ರಾಹಾರ ಕೊಡಬೇಕು. ಪ್ರಾಯದ ಕುರಿಗಳು ಬೇಗ ಬೆದೆಗೆ ಬರುವುದಕ್ಕಾಗಿ ದಿನಕ್ಕೆ 200-250 ಗ್ರಾಂ ಗಳಷ್ಟು ಬಾರ್ಲಿ, ಓಟ್ಸ್, ಮತ್ತು ಜೋಳವನ್ನು ಕೊಡಬೇಕು. ಕುರಿಗಳು ಬಹು ಸ್ಥೂಲವಾಗಿದ್ದರೆ ಮೊದಲು ಶರೀರವನ್ನು ಕ್ಷೀಣಿಸಿ, ಅನಂತರ ಬೆದೆಗೆ ಬರಲು ಅನುಕೂಲವಾಗುವ ಆಹಾರವನ್ನು ಕೊಡುವುದು ಉತ್ತಮ. ಎಲ್ಲ ಕುರಿಗಳಿಗೂ ಕುಡಿಯಲು ದಿನವೂ ಸಾಕಷ್ಟು ನೀರನ್ನು ಒದಗಿಸಬೇಕು. ಗರ್ಭ ಧರಿಸಿದ ಕುರಿಗೆ ಮೊದಲು ಕೊಡುತ್ತಿದ್ದ ಆಹಾರದ ಜೊತೆಗೆ, 110 ಗ್ರಾಂನಿಂದ ಕ್ರಮೇಣ 225 ಗ್ರಾಂ ಗಳಷ್ಟು ಹೆಚ್ಚುವರಿ ಧಾನ್ಯ ಕೊಡಬೇಕು. ಮಾಂಸಕ್ಕಾಗಿಯೇ ಬೆಳೆಸುವ ಪ್ರತಿ ಕುರಿಮರಿಗೆ ದಿನಕ್ಕೆ 110-450 ಗ್ರಾಂಗಳಷ್ಟು ಮಿಶ್ರಾಹಾರವನ್ನು ( 1 ಭಾಗ ತವುಡು + 2 ಭಾಗ ಧಾನ್ಯ + 3 ಭಾಗ ಹಿಂಡಿಯ ಮಿಶ್ರಣ) ಕೊಡುವುದು ಉತ್ತಮ. ಭಾರತೀಯ ತಳಿಗಳ ಗುಣಮೌಲ್ಯ ಹಾಗೂ ಸಂಖ್ಯಾಭಿವೃದ್ಧಿಗಾಗಿ ಕೆಳಕಂಡ ಮೂರು ವಿಧಾನಗಳನ್ನು ಅನುಸರಿಸುವರು. 1 ಸ್ವಕೀಯ ತಳೀಕರಣ, 2 ಪರಕೀಯ ತಳೀಕರಣ, 3 ಅಂತಸ್ತು ಗೊಳಿಸುವಿಕೆ(ಗ್ರೇಡಿಂಗ್).

ಕುರಿಸಾಕಣೆಯ ಉದ್ಯೋಗ

[ಬದಲಾಯಿಸಿ]
A flock of sheep following a leader
Sheep showing flocking behavior during a sheepdog trial
Escaped sheep being led back to pasture with the enticement of food. This method of moving sheep works best with smaller flocks.

ಕುರಿಯಿಂದ ನಮಗೆ ಮಾಂಸ, ಹೊದಿಕೆ ತಯಾರಿಸಲು ಉಣ್ಣೆ, ದೊರಕುತ್ತವೆ; ಇವಲ್ಲದೆ ಗೊಬ್ಬರ, ಚರ್ಮ, ಹಾಲು ಮುಂತಾದವುಗಳೂ ದೊರಕುತ್ತವೆ. ಭಾರತದ ಒಟ್ಟು ಉಣ್ಣೆಯ ವಾರ್ಷಿಕ ಉತ್ಪಾದನೆ 54 ದಶಲಕ್ಷ ಪೌಂಡುಗಳಷ್ಟಾಗುವುದು. ಉಣ್ಣೆ ಸಾಮಾನ್ಯವಾಗಿ ಕೆಳದರ್ಜೆಯದಾಗಿದ್ದು ಕೂದಲು ಮಿಶ್ರಿತವಾಗಿರುತ್ತದೆ. ಅಲ್ಲದೆ ಅದರಲ್ಲಿ ಕಪ್ಪು ಮತ್ತು ಬೇರೆಬೇರೆ ಬಣ್ಣದ ಉಣ್ಣೆಯೇ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಉಣ್ಣೆಯ ತಲಾವಾರ್ಷಿಕ ಉತ್ಪಾದನೆ ಬೇರೆ ಬೇರೆ ತಳಿಗಳಲ್ಲಿ ಬೇರೆಬೇರೆಯಾಗಿತ್ತದೆ. ಅಂದರೆ ಸುಮಾರು 8/3 ಪೌಂಡಿನಿಂದ 4 ಪೌಂಡಿನವರೆಗೆ ಇರುತ್ತದೆ. ಬಿಳಿಯ ಉಣ್ಣೆಗೆ ವಿದೇಶಗಳಿಂದ ಚೆನ್ನಾಗಿ ಬೇಡಿಕೆ ಇದ್ದು ಜಮಖಾನೆ, ರತ್ನಗಂಬಳಿಗಳನ್ನು ತಯಾರಿಸಲು ಅದನ್ನು ಬಳಸಲಾಗುತ್ತಿದೆ. ದೇಶದ ಬಟ್ಟು ಉತ್ಪಾದನೆಯಲ್ಲಿ ಸುಮಾರು ಅರ್ಧದಷ್ಟು ಎಂದರೆ ಸುಮಾರು 8 ಕೋಟಿ ರೂಪಾಯಿಗಳ ಬೆಲೆಯ ಉಣ್ಣೆಯನ್ನು ಪರದೇಶಗಳಿಗೆ ರಫ್ತುಮಾಡಲಾಗುತ್ತದೆ. ದೇಶದ ಆಂತರಿಕ ಬೇಡಿಕೆ ಅಂದರೆ ಮಿಲ್ಲುಗಳಿಗೆ ಹಾಗೂ ಗೃಹಕೈಗಾರಿಕೆಗಳಿಗೆ ವರ್ಷಕ್ಕೆ ಸುಮಾರು 32-63 ದಶಲಕ್ಷ ಪೌಂಡು ಉಣ್ಣೆಯ ಆವಶ್ಯಕತೆ ಇದೆ. ದೇಶದ ಬಹು ಸಂಖ್ಯಾತ ಜನರಿಗೆ ಉಣ್ಣೆಯ ಆವಶ್ಯಕತೆ ಇರುವುದಲ್ಲದೆ ನಮ್ಮ ಸಂರಕ್ಷಣಾ ಪಡೆಗಳಿಗೂ ಉಣ್ಣೆಯ ಬಟ್ಟೆಗಳ ಆವಶ್ಯಕತೆ ಅಧಿಕವಾಗಿದೆ. ದೇಶದ ಉಣ್ಣೆಯ ಆಂತರಿಕ ಬಳಕೆಯ ಸೇಕಡಾ ಪ್ರಮಾಣವನ್ನು ಕೆಳಗಿನಂತೆ 5 ಭಾಗಗಳಾಗಿ ವರ್ಗೀಕರಿಸಬಹುದು. (i) ಕಂಬಳಿಗಳ ತಯಾರಿಕೆಗೆ 49.6, (ii) ಬಟ್ಟೆ ಹಾಗೂ ಹೆಣೆಯುವ ನೂಲು ತಯಾರಿಸಲು 28.7, (iii) ಜಮಖಾನೆ ಹಾಗೂ ಹಾಸುಗಂಬಳಿಗಳಿಗೆ 11.6, (iv) ಗೃಹಕೈಗಾರಿಕೆಗೆ ಬೇಕಾದ ನೂಲು ತಯಾರಿಕೆಗೆ 6.8 (v) ಶಾಲು ತಯಾರಿಕೆ ಮುಂತಾದ ಇತರ ಉದ್ಯೋಗಗಳಿಗೆ 3.3. ಉಣ್ಣೆಯ ಗಿರಣಿಗಳು ಪಂಜಾಬ್, ಉತ್ತರ ಪ್ರದೇಶ, ಮುಂಬಯಿ, ಬೆಂಗಳೂರು ಮತ್ತು ಕಾಶ್ಮೀರಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ.

ಕುರಿಯ ಮಾಂಸ ಬಳ್ಳೆಯ ಪೌಷ್ಟಿಕ ಆಹಾರವಾಗಿದ್ದು ಭಾರತದ ಬಹುಸಂಖ್ಯಾತ ಜನರಿಗೆ ಅತ್ಯವಶ್ಯವಾಗಿದೆ. ಭಾರತದ ಆಂತರಿಕ ಬೇಡಿಕೆ ದಿನೇ ದಿನೇ ಹೆಚ್ಚುತ್ತ ನಡೆದಿದೆ. ಕುರಿಯಿಂದ ದೊರೆವ ಮತ್ತೊಂದು ಹೆಚ್ಚುವಳಿಯೆಂದರೆ ಅದರ ಗೊಬ್ಬರ. ಕುರಿಯ ಗೊಬ್ಬರ ಬೆಳೆಗಳಿಗೆ ಮಹತ್ವದ ಆಹಾರಫಟಕಗಳನ್ನು ಒದಗಿಸುತ್ತದೆ. ಸಾಗುವಳಿ ಪ್ರದೇಶಗಳಲ್ಲಿ ಇದಕ್ಕೆ ಬಹಳ ಬೇಡಿಕೆಯುಂಟು. ಒಂದು ಕುರಿಯಿಂದ ವರ್ಷಕ್ಕೆ ಸುಮಾರು 0.5 ಟನ್ನಿನಿಂದ 0.7 ಟನ್ನಿನಷ್ಟು ಗೊಬ್ಬರ ದೊರಕುತ್ತದೆ. ಕುರಿಯ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕಗಳ ಪ್ರಮಾಣ ದನಗಳ ಗೊಬ್ಬರದಲ್ಲಿರುವ ಪ್ರಮಾಣಕ್ಕಿಂತ ಇಮ್ಮಡಿ. ಕುರಿಗಳ ಹಾಲು, ಚರ್ಮದಿಂದಲೂ ಕೊಂಚಮಟ್ಟಗೆ ಉತ್ಪನ್ನ ಬರುತ್ತದೆ. ಕುರಿಗಳು ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಜೀವಿಸಲಾರವು. ಕಡಿಮೆ ಮಳೆಯಾಗುವ ಮತ್ತು ಒಣಹವೆಯ ಪ್ರದೇಶಗಳಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ. ಮೂವತ್ತು ಅಂಗುಲಕ್ಕಿಂತ ಕಡಿಮೆ ಮಳೆಯಾಗುವ ಪ್ರದೇಶಗಳಲಿಯೇ ಕುರಿಗಳ ಸಂಖ್ಯೆ ನಿಬಿಡವಾಗಿದೆ. ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕುರಿಗಳ ರಕ್ಷಣೆಗೆ ಕೊಟ್ಟಿಗೆ ಅವಶ್ಯವಾಗಿ ಬೇಕು. ಜೌಗು ಪ್ರದೇಶ ಕುರಿಗಳಿಗೆ ಮಾರಕವೆನಿಸುವುದು. ತಮ್ಮ ಮುಂದಾಳನ್ನು ಹಿಂಬಾಲಿಸಿ ಹೋಗುವುದು ಕುರಿಗಳಲ್ಲಿ ಬಂದ ರಕ್ತಗತ ಗುಣ. ಈ ಕಾರಣದಿಂದ ಕುರಿ ಸಾಕುವವರು ತಮ್ಮ ಹಿಂಡುಗಳಲ್ಲಿ ಕೆಲವು ಆಡುಗಳನ್ನು ಸಾಕುತ್ತಾರೆ. ಸ್ಥಳದಿಂದ ಸ್ಥಳಕ್ಕೆ ಹೋಗುವಾಗ ಕುರಿಗಳು ಈ ಆಡುಗಳನ್ನು ಹಿಂಬಾಲಿಸಿ ಹೋಗುತ್ತವೆ. ಸಾಗುವಳಿ ಪ್ರದೇಶಗಳಲ್ಲಿ ಕುರಿಗಳನ್ನು ಸಾಕಿದವರು, ಕುರಿಗಳ ಈ ಸ್ವಭಾವದ ಲಾಭವನ್ನು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಕುರಿಗಳ ಆಯುರ್ಮಾನ ಸಾಮಾನ್ಯವಾಗಿ 10 ರಿಂದ 12 ವರ್ಷಗಳು. ಆದರೆ ಕುರಿ ಸಹಜವಾಗಿ ಸಾಯುವವರೆಗೆ ಅದನ್ನು ಯಾರೂ ಇರಗೊಡುವುದಿಲ್ಲ. ಅದರಿಂದ ಉತ್ಪಾದನೆ ಕಡಿಮೆಯಾದೊಡನೆ ಅದನ್ನು ಮಾಂಸಕ್ಕಾಗಿ ಮಾರುವುದುಂಟು. ಚೆನ್ನಾಗಿ ಸಾಕಿದ ನಿರೋಗಿ ಕುರಿಯನ್ನು 7 ವರ್ಷ ವಯಸ್ಸಿನವರೆಗೆ ಸಾಕುವರು. ಆದರೆ ಅಭಾವ ಪ್ರದೇಶಗಳಲ್ಲಿ 4 ಅಥವಾ 5 ವರ್ಷಗಳ ಅನಂತರ ಮಾರಿಬಿಡುವರು. ಟಗರು ಸರಿಯಾಗಿ ಬೆಳೆವಣಿಗೆ ಹೊಂದಿದ ಮೇಲೆ ಅಂದರೆ ಸುಮಾರು 10-12 ತಿಂಗಳ ವಯಸ್ಸಿಗೆ ಮಾರಲು ಯೋಗ್ಯವಾಗುತ್ತದೆಂದು ಹೇಳಬಹುದು.

ಸಂತಾನೋತ್ಪತ್ತಿ

[ಬದಲಾಯಿಸಿ]

ಕುರಿ ಸುಮಾರು 9 ರಿಂದ 14 ತಿಂಗಳು ವಯಸ್ಸಿನಲ್ಲಿ ಮೊದಲನೆಯ ಬಾರಿ ಗರ್ಭಧರಿಸುತ್ತದೆ. ಈ ವಯೋಮಿತಿ ವಿವಿಧ ತಳಿಗಳಲ್ಲಿ ವಿವಿಧ ರೀತಿ, ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ಅವುಗಳ ಬೆಳೆವಣಿಗೆ ಸರಿಯಾಗಿ ಆಗುವುದಿಲ್ಲ. ಅಲ್ಲದೆ ಹುಟ್ಟಿದ ಮರಿಯೂ ಸದೃಢವಾಗಲಾರದು. ಕಾರಣ ವಯಸ್ಸಿನ 15 ನೆಯ ತಿಂಗಳ ಅನಂತರ ಟಗರು ಕೊಡುವುದು ಒಳ್ಳೆಯದು. ಒಂದು ವರ್ಷ ವಯಸ್ಸಿಗೆ ಟಗರು ಗರ್ಭದಾನ ಮಾಡಲು ಸಮರ್ಥವಾಗುತ್ತದೆ. ಆದರೆ ಟಗರನ್ನು 2 ವರ್ಷ ವಯಸ್ಸಿನವರೆಗೆ ಬೀಜಕ್ಕಾಗಿ ಉಪಯೋಗಿಸುವುದು ಒಳ್ಳೆಯದಲ್ಲ. ಮುಂದೆ 7 ವರ್ಷ ವಯಸ್ಸಿನವರೆಗೆ ಬೀಜಕ್ಕಾಗಿ ಉಪಯೋಗಿಸಬಹುದು. ಸುಮಾರು 30 ರಿಂದ 50 ಕುರಿಗಳಿಗೆ ಒಂದು ಟಗರು ಬೇಕಾಗುವುದು. ಕುರಿ ಗರ್ಭಧರಿಸಿದ ಅನಂತರ 147 ರಿಂದ 152 ದಿವಸಗಳಲ್ಲಿ ಮರಿಹಾಕುವುದು. ಕುರಿಗಳಲ್ಲಿ ಗರ್ಭೋತ್ಪತ್ತಿ ಕಾಲಗಳು ಈ ಕೆಳಗಿನಂತೆ 3 ಇವೆಯೆಂದು ಕಂಡುಬರುತ್ತದೆ. 1. ಬೇಸಗೆ ಕಾಲ . . . . ಮಾರ್ಚ್ - ಏಪ್ರಿಲ್ 2. ಶರದೃತುವಿನ ಕಾಲ . . . . ಜೂನ್ - ಜುಲೈ 3. ಚಳಿಗಾಲ . . . . ಅಕ್ಟೋಬರ್ - ನವೆಂಬರ್ ಮಾರ್ಚ್ ಏಪ್ರಿಲ್ ತಿಂಗಳುಗಳಲ್ಲಿ ಹಿಂಡಿನಲ್ಲಿಯ ಕುರಿಗಳ 15%-20% ಕುರಿಗಳು ಗರ್ಭ ಧರಿಸುವುವು. ಬಹುಸಂಖ್ಯಾತ ಕುರಿಗಳು ಅಂದರೆ ಹಿಂಡಿನಲ್ಲಿಯ 50%-80% ಕುರಿಗಳು ಜೂನ್ ಜುಲೈ ತಿಂಗಳುಗಳಲ್ಲಿ ಬೆದೆಗೆ ಬರುತ್ತವೆ. ಉಳಿದ ಅಲ್ಪಸ್ವಲ್ಪ ಕುರಿಗಳು ಅಕ್ಟೋಬರಿನಲ್ಲಿ ಗರ್ಭಧರಿಸುವುವು. ಕುರಿಗಳ ಗರ್ಭಧಾರಣೆಯ ಮೇಲೆ ಹತೋಟಿ ಇರುವುದು ಒಳ್ಳೆಯದು. ಆಹಾರದ ಅಭಾವದ ಮೂಲಕ ಕುರಿಗಳು ಅಶಕ್ತವಾದರೆ ವೇಳೆಗೆ ಸರಿಯಾಗಿ ಬೆದೆಗೆ ಬಾರದೆ ಗರ್ಭಧಾರಣೆ ವಿಲಂಬವಾಗಬಹುದು. ತಡವಾಗಿ ಗರ್ಭಧರಿಸಿದ ಕುರಿಗಳು ಚಳಿಗಾಲದ ಮಧ್ಯದ ಸುಮಾರಿಗೆ ಇಲ್ಲವೆ ಬೇಸಗೆ ಆರಂಭವಾದ ಮೇಲೆ ಮರಿಹಾಕುವುವು. ಆ ವೇಳೆಗೆ ಹುಲ್ಲುಗಾವಲುಗಳಲ್ಲಿ ಹುಲ್ಲು ಒಣಗಿರುತ್ತದೆ. ಮರಿಹುಟ್ಟಿದಾಗ ತಾಯಿಕುರಿಗೆ ಸಾಕಷ್ಟು ಹಸಿರು ಹುಲ್ಲು ಸಿಗದಿದ್ದರೆ ಹಾಲು ಕಡಿಮೆಯಾಗಿ ಮರಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಬೇಸಗೆಯಲ್ಲಿ ಮೇವಿನ ಅಭಾವದ ಮೂಲಕ ಸಾಕುವವರು ತಮ್ಮ ಕುರಿಹಿಂಡುಗಳೊಂದಿಗೆ ದೂರದವರೆಗೆ ಪ್ರಯಾಣಕ್ಕೆ ಅಲೆಯಬೇಕಾಗುವುದು. ಚಿಕ್ಕ ಚಿಕ್ಕ ಮರಿಗಳೊಂದಿಗೆ ದೂರದ ವರೆಗೆ ಪ್ರಯಾಣ ಮಾಡುವುದು ಹಿತಕರವಲ್ಲ. ಈ ಕಾರಣದಿಂದ ಬೆದೆಯಕಾಲದ ಮೇಲೆ ಹತೋಟಿ ಇಟ್ಟರೆ ಕುರಿಗಳಿಗೆ ಸಾಕಷ್ಟು ಹುಲ್ಲು ಲಭ್ಯವಿದ್ದಾಗಲೇ ಮರಿಗಳು ಹುಟ್ಟಿ ಕುರಿಸಂಗೋಪನೆ ಲಾಭದಾಯಕವಾಗುವುದು. ಬೆದೆಯ ಕಾಲ ಕುರಿಗಳಲ್ಲಿ ಸರಾಸರಿ 27 ಗಂಟೆಗಳ ವರೆಗೆ ಇರುವುದು. ಗರ್ಭೋತ್ಪತ್ತಿಯಾದ 5ನೆಯ ತಿಂಗಳ ಅನಂತರ ಈನುವುವು. ಗರ್ಭಕಾಲದ ಅವಧಿಯಲ್ಲಿ ಕುರಿಗಳಿಗೆ ಸರಿಯಾದ ಆಹಾರದ ಅಭಾವ ಮತ್ತಿತರ ಕಾರಣಗಳ ಮೂಲಕ ಕುರಿಗಳು ಅಶಕ್ತವಾದರೆ ಗರ್ಭಪಾತವಾಗುವ ಸಂಭವ ಹೆಚ್ಚು. ಗಬ್ಬವಿದ್ದ ಕುರಿಯನ್ನು ಚೆನ್ನಾಗಿ ಆರೈಕೆಮಾಡಿದರೆ ಗರ್ಭಸ್ಥ ಮರಿ ಸರಿಯಾಗಿ ಬೆಳೆಯುವುದು; ಹುಟ್ಟಿದ ಮೇಲೂ ಅದಕ್ಕೆ ಸಾಕಷ್ಟು ಹಾಲು ಲಭ್ಯವಾಗಿ ಬೆಳೆವಣಿಗೆ ಚೆನ್ನಾಗಿ ಆಗುವುದು. ಈನುವ ವೇಳೆ ಸಮೀಪಿಸಿದಂತೆ ಕುರಿಯ ನಡಿಗೆ ಮಂದವಾಗುತ್ತದೆ; ಬಾಲವನ್ನು ವಿಚಿತ್ರರೀತಿಯಲ್ಲಿ ಅಲ್ಲಾಡಿಸುತ್ತದೆ. ಮರಿಹಾಕುವಾಗ ಹಿಂಡಿನಿಂದ ಬೇರೆಯಾಗಿಬಿಡುತ್ತದೆ. ಮುಂಗಾಲಿನಿಂದ ನೆಲವನ್ನು ಕೆರೆಯುತ್ತ ಮಲಗುವುದು, ಏಳುವುದು, ಹೊರಳಾಡುವುದು, ಒದರುವುದು, ನಾಲ್ಕು ಕಾಲುಗಳನ್ನು ನೆಟ್ಟಗೆ ಚಾಚುವುದು ಸಾಮಾನ್ಯ. ನೀರಿನ ಚೀಲ ಕಂಡಮೇಲೆ ಮರಿ ಹಾಕುವ ವೇಳೆ ಸಮೀಪಿಸಿತೆಂದು ತಿಳಿಯಬೇಕು. ಆ ವೇಳೆಗೆ ಕುರಿ ಮಗ್ಗಲಾಗಿ ಮಲಗಿ ನಾಲ್ಕೂ ಕಾಲು ಚಾಚಿ ಮರಿಯನ್ನು ಹೊರಗೆ ಹಾಕಲು ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಮರಿ ಜನಿಸುವಾಗ ತನ್ನ ತಲೆಯನ್ನು ಎರಡೂ ಮುಂಗಾಲುಗಳ ಮಧ್ಯದಲ್ಲಿಟ್ಟುಕೊಂಡಿರುತ್ತದೆ. ಈ ರೀತಿಯಾಗದಿದ್ದಲ್ಲಿ ಅನುಭವಿ ಮನುಷ್ಯನ ಸಹಾಯ ಕೂಡಲೇ ಪಡೆದುಕೊಳ್ಳಬೇಕು. ಇಲ್ಲವಾದರೆ ಈನುವಾಗ ಕುರಿಗಳಿಗೆ ಯಾವ ಸಹಾಯವೂ ಬೇಕಾಗುವುದಿಲ್ಲ. ಆರೋಗ್ಯಕರವಾದ ಮರಿ ಹುಟ್ಟಿದ ಕೆಲವೇ ಮಿನಿಟುಗಳಲ್ಲಿ ನಿಂತು ಮೊಲೆ ಉಣ್ಣಲಾರಂಭಿಸುತ್ತದೆ. ಮರಿಗಳು ಅಶಕ್ತವಿದ್ದರೆ ಮೊಲೆ ಕುಡಿಯಲು ಸಹಾಯ ಮಾಡಬೇಕಾಗುವುದು. ಬಹಳ ಚಳಿ ಇದ್ದರೆ ಅದೇ ಹುಟ್ಟಿದ ಮರಿಯನ್ನು ಬೆಚ್ಚಗಿನ ಸ್ಥಳದಲ್ಲಿ ಇಡಬೇಕು. ರಾತ್ರಿಯ ಕಾಲದಲ್ಲಿ ಕುರಿ ಈನುವುದಿದ್ದರೆ ಅದನ್ನು ಸಾಕಷ್ಟು ಸ್ಥಳಾವಕಾಶ ಇರುವಲ್ಲಿಗೆ ಸ್ಥಳಾಂತರಿಸುವುದು ಒಳ್ಳೆಯದು. ಏಕೆಂದರೆ ತಾಯಿಕುರಿಗೆ ಬೇರೆಯಾಗಲು ಮತ್ತು ಮರಿಯನ್ನು ಆರೈಕೆ ಮಾಡಲು ಸಾಕಷ್ಟು ಸ್ಥಳ ಬೇಕಾಗುತ್ತದೆ. ಅದೇ ಹುಟ್ಟಿದ ಮರಿಯ ತೂಕ ಸುಮಾರು 5 ರಿಂದ 8 ಪೌಂಡ್ ಇರುತ್ತದೆ. ಮೊದಲ ಮೂರು ತಿಂಗಳುಗಳಲ್ಲಿ ಮರಿ ಶೀಘ್ರಗತಿಯಿಂದ ಬೆಳೆಯುತ್ತದೆ. ಮುಂದೆ 12 ತಿಂಗಳ ವಯಸ್ಸಿನ ವರೆಗೆ ಬೆಳವಣಿಗೆ ಸಾಮಾನ್ಯವಾಗಿರುತ್ತದೆ. 1 1/2 ಯಿಂದ 2 ವರ್ಷಗಳ ನಡುವೆ ದೇಹದ ಸಂಪೂರ್ಣ ಬೆಳವಣಿಗೆಯಾಗುತ್ತದೆಂದು ಹೇಳಬಹುದು. ಪೂರ್ಣಬೆಳೆದ ಕುರಿಯ ತೂಕ 50 ರಿಂದ 60 ಪೌಂಡ್ ಇದ್ದರೆ, ಟಗರಿನ ತೂಕ 80 ರಿಂದ 100 ಪೌಂಡುಗಳವರೆಗೆ ಇರುತ್ತದೆ. ಕುರಿ ಸಂಗೋಪನೆಯಲ್ಲಿ ಮರಿಗಳ ಆರೈಕೆಯ ಕಡೆ ತಕ್ಕಷ್ಟು ಗಮನ ಕೊಡಬೇಕು. ಎಳೆಯವಿದ್ದಾಗ ಮರಿಗಳಿಗೆ ಸಹಜವಾಗಿ ಪಚನವಾಗುವಂಥ ರಸಭರಿತ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಬೇಕು. ತಾಯಿಕುರಿಗಳಿಗೆ ಉತ್ತಮ ಆಹಾರ ಪೂರೈಸಿದರೆ ಮರಿಗಳಿಗೆ ಸಾಕಷ್ಟು ಹಾಲು ದೊರಕುವುದು. ಮರಿಗಳು ಪುಷ್ಟವಾಗಿ ಕುರಿ ಸಾಕುವಿಕೆ ಲಾಭದಾಯಕವಾಗಿ ಪರಿಣಮಿಸುವುದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕುರಿ&oldid=1090940" ಇಂದ ಪಡೆಯಲ್ಪಟ್ಟಿದೆ