ವಿಷಯಕ್ಕೆ ಹೋಗು

ವಿದುಷಿ.ಉಮಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ, ಬಿ.ಎಂ.ಶ್ರೀಕಂಠಯ್ಯ ನವರ ಹತ್ತಿರದ ಸಂಬಂಧಿಕರಾಗಿ ಸಾಹಿತಿಕ ಹಿನ್ನೆಲೆಯಿರುವ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಉಮಾರಾವ್, 'ಪ್ರೊಫೆಸರ್ ತೀರ್ಥರಾವ್ ಆಜಾದ್' ಅವರ ಮಾರ್ಗದರ್ಶನದಲ್ಲಿ 'ಕಥಕ್ ನೃತ್ಯ ಶೈಲಿ'ಯನ್ನು ಅಭ್ಯಾಸ ಮಾಡಿದರು.

ಗುರುಗಳು

[ಬದಲಾಯಿಸಿ]
  • ಪದ್ಮಶ್ರೀ ಎಂ.ಡಿ. ರಾಮನಾಥನ್ ಮತ್ತು ಬೂದನೂರು ಕೃಷ್ಣಮೂರ್ತಿಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತ,
  • ಚಂದು ಪಣಿಕರ್ ಅವರಿಂದ ಕಥಕ್ಕಳಿ ನಾಟ್ಯ ಪ್ರಕಾರ,
  • ಶ್ರೀಮತಿ ಕಲ್ಯಾಣಿ ಕುಟ್ಟಿ ಅಮ್ಮ ಅವರಿಂದ ಮೋಹಿನಿ ಅಟ್ಟಂ ನೃತ್ಯ ಶೈಲಿಗಳನ್ನೂ ಅಭ್ಯಾಸ ಮಾಡಿದರು.

'ಬಾಲಿವುಡ್‌ನ ಮೆಟ್ರೋ ಗೋಲ್ಡ್‌ವಿನ್ ಮೇಯರ್ (ಭಾರತ) ಲಾಂಛನದಲ್ಲಿ ನಿರ್ಮಿಸಿದ 'ಮಾಯಾ ಚಿತ್ರ'ದಲ್ಲಿ ನಟಿಸುವ ಅವಕಾಶ ಪಡೆದ ಬಾಲಕಲಾವಿದೆ ಉಮಾ, ಆ ಚಿತ್ರದಿಂದ ಸಿನಿಮಾ ಪ್ರಪಂಚದಲ್ಲಿ ಒಂದು ಪುಟ್ಟ ಪ್ರತಿಭೆಯಾಗಿ ಗುರುತಿಸಲ್ಪಟ್ಟರು.

ಮದ್ರಾಸ್ ನ ಕಲಾಕ್ಷೇತ್ರದಲ್ಲಿ

[ಬದಲಾಯಿಸಿ]

ನೃತ್ಯದ ಬಗ್ಗೆ ತಮಗಿದ್ದ ಗೀಳಿನಿಂದಾಗಿ ಅತ್ಯಾಕರ್ಷಕ ಸಿನಿಮಾರಂಗವನ್ನು ಬಿಡಬೇಕಾಯಿತು. ನಂತರ, ಮದ್ರಾಸ್ ನಗರದಲ್ಲಿ ಭರತನಾಟ್ಯದ ಸುಪ್ರಸಿದ್ಧ ಗುರು, ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್ ಅವರ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿದರು. ರುಕ್ಮಿಣಿದೇವಿ ಅರುಂಡೇಲ್ ಆಯೋಜಿಸಿದ ಎಲ್ಲಾ ನೃತ್ಯ ನಾಟಕಗಳಲ್ಲಿ ಪ್ರಮುಖ ಪಾತ್ರನಿರ್ವಹಿಸಿ ತನ್ಮೂಲಕ ವಿಶ್ವದಲ್ಲೆಲ್ಲಾ ಪ್ರವಾಸ ಮಾಡಿದರು. ಉಮಾರ ವರ್ಚಸ್ಸು ,ಮತ್ತು ಬಹುಮುಖ ಪ್ರತಿಭೆಗಳನ್ನು ಗುರುತಿಸಿದ ತಮಿಳುನಾಡಿನ ಕಲಾವಂತ ಮುಖ್ಯಮಂತ್ರಿ, ಎಂ.ಜಿ.ರಾಮಚಂದ್ರನ್ ಉಮಾರ ಬೆಳವಣಿಗೆಗೆ ಸೂಕ್ತವಾದ ಮಾರ್ಗದರ್ಶನ ಮಾಡಿದರು

ಸಿಂಗಪುರ್ ನಲ್ಲಿ

[ಬದಲಾಯಿಸಿ]

ನಂತರ, 'ಸಿಂಗಪೂರ್ ಇಂಡಿಯನ್ ಫೈನ್ ಆರ್ಟ್ಸ್ ಸಂಸ್ಥೆ'ಯಲ್ಲಿ 'ಭರತನಾಟ್ಯ ವಿಭಾಗದ ಮುಖ್ಯಸ್ಥೆ'ಯಾಗಿ ಸೇರಿ, ಅಲ್ಲಿದ್ದ ಮೂರು ವರ್ಷಗಳ ಅವಧಿಯಲ್ಲಿ ತಮ್ಮ ಸುಂದರ ನೃತ್ಯ ರೂಪಕಗಳು, ಬೋಧನೆಗಳಲ್ಲಿ ತೋರಿಸುತ್ತಿದ್ದ ಶ್ರದ್ಧೆ ,ಮುಂದಾಳತ್ವ ಮೊದಲಾದವುಗಳಿಂದ ಅಲ್ಲಿನ ನಾಟ್ಯ ರಸಿಕರ, ವಿದ್ಯಾರ್ಥಿಗಳ, ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿ, ಓರ್ವ ಪರಿಪೂರ್ಣ ನೃತ್ಯ ಕಲಾವಿದೆಯೆಂದು ಗುರುತಿಸಲ್ಪಟ್ಟರು.

ಪ್ರಶಸ್ತಿ, ಗೌರವಗಳು

[ಬದಲಾಯಿಸಿ]
  • ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.