ನರೇಂದ್ರ ಮೋದಿ

ವಿಕಿಪೀಡಿಯ ಇಂದ
Jump to navigation Jump to search
ನರೇಂದ್ರ ಮೋದಿ
Modi bhai.jpg

ಭಾರತದ ೧೫ ನೇ ಪ್ರಧಾನಮಂತ್ರಿ
ಹಾಲಿ
ಅಧಿಕಾರ ಸ್ವೀಕಾರ 
೨೬ ನೇ ಮೇ ೨೦೧೪
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಮ್ ನಾಥ್ ಕೋವಿಂದ್
ಪೂರ್ವಾಧಿಕಾರಿ ಮನಮೋಹನ್ ಸಿಂಗ್

ಗುಜರಾತ್ ರಾಜ್ಯದ ೧೪ನೆಯ ಮುಖ್ಯಮಂತ್ರಿ ,ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ
7 ಅಕ್ಟೋಬರ್ 2001 – 22 May 2014
ರಾಜ್ಯಪಾಲ ಸುಂದರ್ ಸಿಂಗ್ ಭಂಡಾರಿ
ಕೈಲಾಸಪತಿ ಮಿಶ್ರಾ
ಬಲರಾಮ್ ಜಾಖಡ್
ನವಲ್ ಕಿಶೋರ್ ಶರ್ಮ
ಎಸ್.ಸಿ.ಜಮೀರ್
ಕಮಲಾ ಬೆನಿವಾಲ್
ಪೂರ್ವಾಧಿಕಾರಿ ಕೇಶುಭಾಯಿ ಪಟೇಲ್
ಉತ್ತರಾಧಿಕಾರಿ ಆನಂದಿ ಬೆನ್ ಪಟೇಲ್
ವೈಯುಕ್ತಿಕ ಮಾಹಿತಿ
ಜನನ ನರೇಂದ್ರ ದಾಮೋದರದಾಸ್ ಮೋದಿ
17 ಸಪ್ಟೆಂಬರ್ 1950
ವಡನಗರ, ಮೆಹಸಾನಾ, ಗುಜರಾತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಅಭ್ಯಸಿಸಿದ ವಿದ್ಯಾಪೀಠ ಗುಜರಾತ್ ವಿಶ್ವವಿದ್ಯಾಲಯ
ಧರ್ಮ ಹಿಂದೂ
ಸಹಿ
ಜಾಲತಾಣ Official website
ನರೇಂದ್ರ ಮೋದಿ

ನರೇಂದ್ರ ದಾಮೋದರದಾಸ್ ಮೋದಿ [೧](ಸೆಪ್ಟೆಂಬರ್ ೧೭, ೧೯೫೦) ಇವರು ಭಾರತದ ಪ್ರಧಾನ ಮಂತ್ರಿಗಳು.[೨] ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಎನ್.ಡಿ.ಎ. ಮೈತ್ರಿಕೂಟ) ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದು ಭಾರತದ ೧೫ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು,ಗುಜರಾತ್ ನ ವಡೋದರ,[೩] ಹಾಗೂ ವಾರಣಾಸಿ [೪] ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಪ್ರಸಕ್ತ ವಾರಣಾಸಿಯ ಸಂಸದರಾಗಿದ್ದಾರೆ.

ಬಾಲ್ಯ[ಬದಲಾಯಿಸಿ]

ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರ[೫]ಮೋದಿ ಪರಿವಾರದಲ್ಲಿ ೪ ಮಕ್ಕಳ ಪೈಕಿ ಮೂರನೆಯವರಾಗಿ, ೧೭ ಸೆಪ್ಟೆಂಬರ್ ೧೯೫೦ ರಲ್ಲಿ ಅತ್ಯಂತ ಹಿಂದುಳಿದ ಮೋಧ್ ಗಂಜಿ ತೇಲಿ (ಗಾಣಿಗ) ಜಾತಿಯ ಅತಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ - ದಾಮೋದರ ದಾಸ್ ಮುಲಚಂದ್ ಮೋದಿ ಮತ್ತು ತಾಯಿ - ಹೀರಾ ಬೆನ್.

ಸಹೋದರರು[ಬದಲಾಯಿಸಿ]

 • ಸೋಮ್ ಮೋದಿ- ನಿವೃತ್ತ ಆರೋಗ್ಯಾಧಿಕಾರಿ ಈಗ ಅಹ್ಮದಾಬಾದ್ ನಲ್ಲಿ ಒಂದು ವೃದ್ಧಾಶ್ರಮ ನಡೆಸುತ್ತಿದ್ದಾರೆ.
 • ಪ್ರಹ್ಲಾದ್ ಮೋದಿ- ಅಹ್ಮದಾಬಾದ್ ನಗರದಲ್ಲಿ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಶಾಪ್ ಮಾಲೀಕರ ಯೂನಿಯನ್ ನಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದಾರೆ.
 • ಪಂಕಜ್ ಮೋದಿ- ಗಾಂಧಿನಗರದಲ್ಲಿ ರಾಜ್ಯಸರ್ಕಾರದ ವಾರ್ತಾ ಇಲಾಖೆಯಲ್ಲಿ ಕೆಲಸದಲ್ಲಿದ್ದಾರೆ.

'ವಾದ್ ನಗರ ರೈಲ್ವೆ ನಿಲ್ದಾಣ'ದಲ್ಲಿ ಒಂದು 'ಚಹ ಅಂಗಡಿ'ಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು.[೬] ಮುಂದೆ ಅವರ ಸೋದರ ಬಸ್ ಸ್ಟಾಂಡ್ ನಲ್ಲಿ ಚಹ ಅಂಗಡಿ ತೆರೆದಾಗ ಅವರಿಗೂ ನೆರವಾಗಿ ಕೆಲಸ ಮಾಡಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು. ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. ೧೯೬೭ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರ್. ಎಸ್. ಎಸ್.ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು. ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಃಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಮದುವೆ[ಬದಲಾಯಿಸಿ]

೧೩ ನೆಯ ವಯಸ್ಸಿನಲ್ಲೇ ಮೋದಿಯವರಿಗೆ ಜಶೋದಾ ಬೆನ್ ಚಿಮಣ್ ಲಾಲ್ ಜೊತೆ ಮದುವೆ ನಿಶ್ಚಿತಾರ್ಥವಾಯಿತು. ೧೮ನೇ ವರ್ಷದಲ್ಲಿ ಮದುವೆ ನೆರವೇರಿತು. ಬಾಲ ದಂಪತಿಗಳು ಜೊತೆಗಿದ್ದದ್ದು ಕೇವಲ ಒಂದೆರಡು ತಿಂಗಳು ಮಾತ್ರ. ಮೋದಿಯವರಿಗೆ ಸಮಾಜಸೇವೆಯೇ ಜೀವನದ ಪರಮಾದರ್ಶವಾಗಿತ್ತು. ಪತ್ನಿಯನ್ನು ತೊರೆದರು. 'ಜಶೋದಾಬೆನ್' ತಮ್ಮ ಜೀವನವನ್ನೆಲ್ಲಾ ಶಿಕ್ಷಕಿಯಾಗಿ ಕಳೆದು ಈಗ ನಿವೃತ್ತರಾಗಿದ್ದಾರೆ .

ಆರ್.ಎಸ್.ಎಸ್.ನ ಜೊತೆ ಸಂಪರ್ಕ[ಬದಲಾಯಿಸಿ]

'ರಾಷ್ಟ್ರಿಯ ಸ್ವಯಂ ಸೇವಕ ಸಂಘ'ದಲ್ಲಿ ಸೇರಿ ಬಹಳ ಸಕ್ರಿಯವಾಗಿ ಕೆಲಸ ಮಾಡಿದರು. ಭಾರತೀಯ ಇತಿಹಾಸವನ್ನು ಆಳವಾಗಿ ಅಭ್ಯಾಸಮಾಡಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಬಗ್ಗೆ ಅರಿತರು. ೧೯೭೫ ರಲ್ಲಿ ಇಂದಿರಾಗಾಂಧಿ ಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ವಿರೋಧಿಸಿ ತಮ್ಮದೇ ರೀತಿಯಲ್ಲಿ ಕಾಣಿಕೆಯನ್ನು ನೀಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ಮುಖಂಡನಾಗಿ ಸೇವೆ ಸಲ್ಲಿಸಿದರು.

ಏಕತಾಯಾತ್ರೆ[ಬದಲಾಯಿಸಿ]

 • ರಾಷ್ಟ್ರೀಯ ಪ್ರಾಮುಖ್ಯತೆಗೆ ಬಂದಿದ್ದು ಹಿರಿಯ ನಾಯಕ ಮುರುಳಿ ಮನೋಹರ ಜೋಶಿಯವರ ೧೯೯೧ ರ ಏಕತಾಯಾತ್ರೆ ನಡೆಸಿದಾಗ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಏಕತಾಯಾತ್ರೆಯ ಸಾರಥ್ಯವನ್ನು ಮೋದಿಯವರು ವಹಿಸಿಕೊಂಡಿದ್ದರು.
 • ಸಂಘಪರಿವಾರ ಹಾಗೂ ಬಿಜೆಪಿ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ಮೋದಿಯವರು, ಗುಜರಾತ್ ರಾಜ್ಯದ ಆಧುನಿಕ ಹರಿಕಾರನೆಂದು ಪ್ರಸಿದ್ಧರಾಗಿದ್ದಾರೆ. ತಮ್ಮ ೧೨ ವರ್ಷಗಳ ಮುಖ್ಯಮಂತ್ರಿಯ ನಾಯಕತ್ವದಲ್ಲಿ ಗುಜರಾತಿನ ಚಿತ್ರಣವನ್ನೇ ಬದಲಾಯಿಸಿದ್ದಾರೆ.
 • ಗುಜರಾತಿಗೆ ಗುಜರಾತ್ ಅಭಿವೃದ್ಧಿ ಮಾದರಿ ಬಹಳ ಪ್ರಸಿದ್ಧಿ ಗಳಿಸಿದೆ. ಮೋದಿಯವರ ದೀರ್ಘಾವಧಿ ಸಾರ್ವಜನಿಕ ಸೇವಾವಲಯದಲ್ಲಿ ೨೦೦೨ ರಲ್ಲಿ ಉಂಟಾದ ಗುಜರಾತ್ ಮುಸ್ಲಿಮ್ ವಿರೋಧಿ ದಂಗೆಗಳ ನಿರ್ವಹಣೆಯ ವಿಷಯದಲ್ಲಿ ಅವರ ರಾಜಕೀಯ ಜೀವನದಲ್ಲಿ ಏರುಪೇರಾಯಿತು.

ಶಿಕ್ಷಣ[ಬದಲಾಯಿಸಿ]

 • ಚಿಕ್ಕಂದಿನಿಂದಲೇ ಹಲವಾರು ಕಷ್ಟ ಕೋಟಲೆಗಳನ್ನು ಸಮರ್ಥವಾಗಿ ಎದುರಿಸಬೇಕಾಯಿತು. ಆದರೆ ಅಡೆತಡೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಕೇವಲ ವ್ಯಕ್ತಿತ್ವದ ಶಕ್ತಿ ಮತ್ತು ಧೈರ್ಯದಿಂದಲೇ ಸವಾಲುಗಳನ್ನು ಅವಕಾಶಗಳನ್ನಾಗಿ ಅವರು ಬದಲಿಸುತ್ತಿದ್ದರು.
 • ಅದರಲ್ಲೂ ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು. ಬದುಕೆಂಬ ಯುದ್ಧದಲ್ಲಿ ನೈಜ ಸೈನಿಕನಂತೆ ಹೋರಾಟ ನಡೆಸಿಕೊಂಡು ಬಂದರು. ಸೋಲುವುದು, ಹಿಂಜರಿಕೆ ವಿರುದ್ಧ ಪ್ರಬಲವಾಗಿ ಮುನ್ನುಗ್ಗುತ್ತಿದ್ದರು.
 • ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ಆರೆಸ್ಸೆಸ್‍ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು.
 • ಪ್ರಮುಖವಾಗಿ ೧೯೭೪ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ ೧೯ ತಿಂಗಳ (ಜೂನ್ ೧೯೭೫ ರಿಂದ ಜನವರಿ ೧೯೭೭) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು.

ರಾಜಕೀಯ[ಬದಲಾಯಿಸಿ]

 • ೧೯೮೭ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮೋದಿ ಧುಮುಕಿದರು. ಪಕ್ಷ ಸೇರಿದ ಒಂದು ವರ್ಷದಲ್ಲೇ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಆ ಹೊತ್ತಿಗಾಗಲೆ ಅವರು ಅತ್ಯಂತ ಸಮರ್ಥ ಸಂಘಟನಾಕಾರ ಎಂದು ಎಲ್ಲೆಡೆ ಗುರುತಿಸಿ ಕೊಂಡಿದ್ದರು. ರಾಜಕೀಯವಾಗಿ ಪ್ರಗತಿ ಕಂಡ ಪಕ್ಷದಿಂದ ೧೯೯೦ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಸಾಧ್ಯವಾಯಿತು.
 • ೧೯೮೮ ಮತ್ತು ೧೯೯೫ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಅವಧಿಯಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಮಟದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ನೀಡಲಾಯಿತು.
 • ಎಲ್. ಕೆ. ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ(ದಕ್ಷಿಣ ಭಾರತ ತುತ್ತತುದಿ)ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. ೧೯೯೮ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ ಎನ್ನಲಾಗಿದೆ.
 • ೧೯೯೫ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. ೧೯೯೮ರಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆ ಅಲಂಕರಿಸಿದರು. ೨೦೦೧ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು.
 • ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಯವರು ಕರ್ತವ್ಯ ನಿಭಾಯಿಸುತ್ತಿದ್ದಾಗ, ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ, ಮತ್ತು ಅಷ್ಟೇ ಸೂಕ್ಷ್ಮವಾಗಿದ್ದ ಈಶಾನ್ಯ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಪಕ್ಷದ ವ್ಯವಹಾರ ಉಸ್ತುವಾರಿಯನ್ನು ವಹಿಸಲಾಯಿತು. ಅನೇಕ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಪುನರಾಚಿಸಿ ಪಕ್ಷದ ಬಲವರ್ಧನೆಗೆ ಮೋದಿ ಕಾರಣರಾದರು.
 • ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅನೇಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಅವಧಿಯಲ್ಲಿ ಮೋದಿ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ವಿವಿಧ ದೇಶದ ಪ್ರಮುಖ ನಾಯಕರನ್ನು ಭೇಟಿ ಮಾಡಿದರು. ಈ ಪ್ರವಾಸ ಅನುಭವ ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಯಿತು.

ಮುಖ್ಯಮಂತ್ರಿ[ಬದಲಾಯಿಸಿ]

 • ೨೦೦೧ ಅಕ್ಟೋಬರ್ ನಲ್ಲಿ ಗುಜರಾತ್ ಸರಕಾರವನ್ನು ಮುನ್ನಡೆಸಬೇಕೆಂದು ಅವರಿಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತು. ಮೋದಿ ಅವರ ಸರಕಾರ ಅಕ್ಟೋಬರ್ ೭, ೨೦೦೧ರಂದು ಅಧಿಕಾರವಹಿಸಿಕೊಂಡಾಗ ಗುಜರಾತಿನ ಆರ್ಥಿಕ ಪರಿಸ್ಥಿತಿ ಅನೇಕ ಪ್ರಾಕೃತಿಕ ವಿಕೋಪಗಳ ಜೊತೆ ಹೋರಾಟ ನಡೆಸಿತ್ತು.
 • ಅದೇ ವರ್ಷ ಜನವರಿಯಲ್ಲಿ ಸಂಭವಿಸಿದ ಭಾರಿ ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ಅನಾಹುತಗಳು ಸರಕಾರವನ್ನು ಕಂಗೆಡಿಸಿತ್ತು. ಆದರೆ, ದೇಶ ವಿದೇಶಗಳನ್ನು ಸುತ್ತಾಡಿ ವಿಪತ್ತು ನಿರ್ವಹಣೆ ಅನುಭವ ಪಡೆದಿದ್ದ ಮೋದಿ ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು.
 • ಜನವರಿ ೨೦೦೧ರ ಭೀಕರ ಭೂಕಂಪದಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವುದು, ಪುನರ್ನಿಮಾಣ ಕಾರ್ಯ ಮುಖ್ಯಮಂತ್ರಿ ಮೋದಿ ಅವರು ಎದುರಿಸಿದ ಅತಿ ದೊಡ್ಡ ಸವಾಲಾಗಿತ್ತು. ತೀವ್ರ ಹಾನಿಗೊಳಗಾಗಿದ್ದ ಭುಜ್ ನಗರ ಸಂಪೂರ್ಣ ನಿರ್ನಾಮವಾಗಿತ್ತು .
 • ಸಾವಿರಾರು ನಿರಾಶ್ರಿತರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಭುಜ್ ಅಚ್ಚರಿಪಡುವಂತೆ ಅಭಿವೃದ್ಧಿ ಕಂಡಿದೆ. ಗುಜರಾತ್ ಯಾವಾಗಲೂ ಔದ್ಯಮಿಕ ಪ್ರಗತಿಯತ್ತ ತನ್ನ ದೃಷ್ಟಿ ನೆಟ್ಟಿದೆ. ಸಾಮಾಜಿಕ-ಆರ್ಥಿಕ ಬೆಳವಣಿಗೆಗಾಗಿ ಸಾಮಾಜಿಕ ವಲಯದಲ್ಲಿ ಉಂಟಾಗಿದ್ದ ಅಸಮತೋಲನವನ್ನು ಸರಿಪಡಿಸಲು ಮೋದಿ ಅಂದೇ ನಿರ್ಧರಿಸಿದ್ದರು.
 • ರಾಜ್ಯದ ಪ್ರಗತಿಗಾಗಿ ಐದು ಅಂಶಗಳ ಸಮನ್ವಯ ಅಭಿವೃದ್ಧಿ ಯೋಜನೆ ಪಂಚಾಮೃತ್ ಯೋಜನೆ ಹುಟ್ಟುಹಾಕಿದರು. ಅವರ ನಾಯಕತ್ವದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳು ಭಾರಿ ಪರಿವರ್ತನೆಯನ್ನು ಕಂಡಿವೆ. ರಾಜ್ಯದ ಭವಿಷ್ಯತ್ತಿನ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ ಮೋದಿ, ಅನೇಕ ಪರಿವರ್ತನಾ ಕಾರ್ಯಕ್ರಮಗಳನ್ನು ಆರಂಭಿಸಿದರು, ಅವರು ಅಧಿಕಾರಕ್ಕೆ ಬಂದು ೧೦೦ ದಿನಗಳಲ್ಲೇ ಅವರ ಸಾಮರ್ಥ್ಯ, ಆಕಾಂಕ್ಷೆಗಳು ಗೋಚರಿಸ ತೊಡಗಿದವು.
 • ಆಡಳಿತ ನಡೆಸುವ ಸಾಮರ್ಥ್ಯ, ಸ್ಪಷ್ಟ ನಿಲುವು ಮತ್ತು ದೃಢ ವ್ಯಕ್ತಿತ್ವದಿಂದಾಗಿ ೨೦೦೨ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ೧೮೨ ಸೀಟುಗಳ ಪೈಕಿ ೧೨೮ ಸೀಟುಗಳನ್ನು ಪಡೆದು ಭರ್ಜರಿ ಗೆಲುವಿನಿಂದಾಗಿ ಮೋದಿ ಮತ್ತೆ ಅಧಿಕಾರಕ್ಕೆ ಮರಳಿ ಬಂದರು. ಇದೇ ರೀತಿ ಸಾಧನೆ ೨೦೦೭ರಲ್ಲೂ ಮುಂದುವರೆಯಿತು ಮತ್ತೊಂದು ಚುನಾವಣೆಯಲ್ಲಿ ಮೋದಿ ಅವರ ನೇತೃತ್ವದ ಬಿಜೆಪಿ ದಾಖಲೆಯ ವಿಜಯ ಸಾಧಿಸಿತು.
 • ೨೦೧೨ ಸೆಪ್ಟೆಂಬರ್ ೧೭ರಂದು ನರೇಂದ್ರ ಮೋದಿ ಅವರು ಗುಜರಾತಿನ ಜನರ ಸೇವೆ ಸಲ್ಲಿಸಲು ಅಧಿಕಾರ ವಹಿಸಿಕೊಂಡು ೪,೦೦೦ ದಿನ ಯಶಸ್ವಿಯಾಗಿ ಪೂರೈಸಿದರು. ಸತತ ಮೂರು ಚುನಾವಣೆಯಲ್ಲಿ ಮೋದಿ ಅವರಿಗೆ ಗುಜರಾತಿನ ಜನರ ಬೆಂಬಲ, ಮನ್ನಣೆ ಸಿಕ್ಕಿತು. ೨೦೦೨ ಹಾಗೂ ೨೦೦೭ (೧೧೭ ಸೀಟುಗಳು)ರಲ್ಲಿ ಪಕ್ಷವನ್ನು ಗೆಲ್ಲುವಂತೆ ಮಾಡಿದ ಮೋದಿ ಅವರು ೨೦೧೨ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು.
 • ಈ ಚುನಾವಣೆಯಲ್ಲಿ ಬಿಜೆಪಿ ೧೧೫ ಸೀಟುಗಳೊಂದಿಗೆ ವಿಜಯ ಪತಾಕೆ ಹಾರಿಸಿತು. ನರೇಂದ್ರ ಮೋದಿ ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ೨೦೧೨ರ ಡಿಸೆಂಬರ್ ೧೨ರಂದು ಪ್ರಮಾಣ ವಚನ ಸ್ವೀಕರಿಸಿದರು. ಇ-ಆಡಳಿತ, ಬಂಡವಾಳ ಹೂಡಿಕೆ, ಬಡತನ ನಿರ್ಮೂಲನ, ಇಂಧನ, ಎಸ್ಇಜೆಡ್, ರಸ್ತೆ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ.
 • ಗುಜರಾತಿನ ಪ್ರಗತಿ ಕಥೆ ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಆಧಾರವಾಗಿಲ್ಲ, ಬದಲಿಗೆ ಎಲ್ಲಾ ಮೂರು ಪ್ರಮುಖ ಕ್ಷೇತ್ರ (ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರ)ಗಳ ಅಭಿವೃದ್ಧಿಯ ದ್ಯೋತಕವಾಗಿದೆ. ಗುಜರಾತಿನ ತ್ವರಿತ ಪ್ರಗತಿಗೆ ಮೋದಿ ಅವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಹಾಗೂ ಜನಪರ, ಉತ್ತಮ ಆಡಳಿತ ಪರ(P೨G೨) ಮಂತ್ರವೇ ಕಾರಣವಾಗಿದೆ.
 • ಇವರು ಭಾರಿ ಪ್ರತಿರೋಧದ ನಡುವೆಯೂ ನರ್ಮದಾ ಅಣೆಕಟ್ಟನ್ನು ೧೨೧.೯ ಮೀಟರ್ ಎತ್ತರಕ್ಕೇರಿಸಲು ಹೋರಾಟ ನಡೆಸಿದರು. ನಿರ್ಮಾಣಕ್ಕೆ ಅಡ್ಡಿ ಪಡಿಸುವ ವಿರೋಧಿಗಳನ್ನು ಹಿಮ್ಮೆಟ್ಟಿಸಲು ಅವರು ಉಪವಾಸ ಸತ್ಯಾಗ್ರಹವನ್ನೂ ಮಾಡಿದರು. ಜಲ ಸಂಪನ್ಮೂಲ ರಕ್ಷಣೆ ಮತ್ತು ನಿರ್ವಹಣೆ, ಸದ್ಬಳಕೆಗಾಗಿ ಗುಜರಾತಿನಲ್ಲಿ ಅವರು ಪ್ರಾರಂಭಿಸಿದ 'ಸುಜಲಾಂ ಸುಫಲಾಂ' ಯೋಜನೆ ಮಹತ್ವದ್ದಾಗಿದೆ.
 • ಮಣ್ಣು ಫಲವತ್ತತೆ ಕಾರ್ಡ್, ರೋಮಿಂಗ್ ರೇಷನ್ ಕಾರ್ಡ್ ಹಾಗೂ ರೋಮಿಂಗ್ ಶಾಲೆ ಕಾರ್ಡ್ ಯೋಜನೆಗಳು ಮೋದಿ ಅವರಿಗಿರುವ ಜನ ಸಾಮಾನ್ಯರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ವಿವಿಧ ಆಯಾಮಗಳಲ್ಲಿ ಗುಜರಾತಿನ ಅಭಿವೃದ್ಧಿಗಾಗಿ ಕೃಷಿ ಮಹೋತ್ಸವ, ಚಿರಂಜೀವಿ ಯೋಜನೆ, ಮಾತೃ ವಂದನಾ, ಬೇಟಿ ಬಚಾವೋ (ಹೆಣ್ಣುಮಗುವನ್ನು ಉಳಿಸಿ) ಆಂದೋಲನ, ಜ್ಯೋತಿಗ್ರಾಮ ಯೋಜನೆ, ಕರ್ಮಯೋಗಿ ಅಭಿಯಾನ, ಇ-ಮಮತಾ, ಇ-ಎಂಪವರ್, ಸ್ಕೋಪ್, ಐಕ್ರಿಯೇಟ್ ಇತ್ಯಾದಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.

ಪ್ರಶಸ್ತಿ/ಗೌರವ[ಬದಲಾಯಿಸಿ]

 • ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ವಿಶ್ವದೆಲ್ಲೆಡೆಯಿಂದ ಗುಜರಾತಿಗೆ ಹಲವಾರು ಪ್ರಶಸ್ತಿ ಹಾಗೂ ಮನ್ನಣೆಗಳು ಸಂದಿವೆ.
 • ವಿಕೋಪದ ಪರಿಣಾಮ ತಗ್ಗಿಸಿದ್ದಕ್ಕಾಗಿ ನೀಡುವ ಯುಎನ್ ಸಸಕಾವಾ ಪ್ರಶಸ್ತಿ,
 • ಆಡಳಿತದಲ್ಲಿ ಹೊಸ ಬದಲಾವಣೆ ತಂದಿದ್ದಕ್ಕಾಗಿ ಕಾಮನ್ವೆಲ್ತ್ ಅಸೋಸಿಯೇಷನ್ ಫಾರ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅಂಡ್ ಮ್ಯಾನೇಜ್ ಮೆಂಟ್ ಪ್ರಶಸ್ತಿ, ಯುನೆಸ್ಕೋ ಪ್ರಶಸ್ತಿ,
 • ಇ-ಆಡಳಿತಕ್ಕಾಗಿ ಸಿಎಸ್ಐ ಪ್ರಶಸ್ತಿ ಮುಂತಾದ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಗುಜರಾತ್ ಪಾತ್ರವಾಗಿದೆ. ಸಾರ್ವಜನಿಕರಿಂದ ಸತತ ಹದಿಮೂರು ವರ್ಷ ದೇಶದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಅವರನ್ನು ಗುರುತಿಸಲಾಗಿದೆ.

ಪ್ರಧಾನಿ[ಬದಲಾಯಿಸಿ]

 • ೨೦೧೪ ಏಪ್ರಿಲ್-ಮೇ ತಿಂಗಳುಗಳಲ್ಲಿ ಭಾರತದ ಲೋಕಸಭೆಗೆ ಜರಗಿದ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ "ಭಾರತೀಯ ಜನತಾಪಕ್ಷ" ನಿಚ್ಚಳ ಬಹುಮತ ಪಡೆದಿದೆ. ನರೇಂದ್ರಮೋದಿಯವರನ್ನು ರಾಷ್ಟ್ರಾಧ್ಯಕ್ಷರಾದ ಪ್ರಣಬ್ ಮುಖರ್ಜಿಯವರು ಭಾರತದ ಪ್ರಧಾನ ಮಂತ್ರಿಯಾಗಿ ನೇಮಿಸಿದ್ದಾರೆ.
 • ದಿನಾಂಕ ೨೬-೦೫-೨೦೧೪ರಂದು ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಭಾರತದ ೧೫ನೆಯ ಪ್ರಧಾನ ಮಂತ್ರಿಯಾಗಿದ್ದಾರೆ. ಪ್ರಧಾನ ಮಂತ್ರಿಯಾದ ದಿನದಂದೇ ಮೊದಲ ಸಂಪುಟ ಸಭೆ ಕರೆದಿದ್ದಾರೆ.

ಇತರ ಸಾಧನೆ[ಬದಲಾಯಿಸಿ]

 • ಗುಜರಾತನ್ನು ಜಾಗತಿಕ ನಕಾಶೆಯಲ್ಲಿ ಗೋಚರಿಸುವಂತೆ ಮಾಡಿರುವ ವೈಬ್ರಂಟ್ ಗುಜರಾತ್, ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ರಾಜ್ಯವಾಗಿ ಹೊರಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ಗುಜರಾತ್ ಸಂಪದ್ಭರಿತ ರಾಜ್ಯವಾಗಿ ಮುನ್ನಡೆದಿದೆ.
 • ೨೦೧೩ರ ವೈಬ್ರಂಟ್ ಗುಜರಾತ್ ಕಾರ್ಯಾಗಾರದಲ್ಲಿ ವಿಶ್ವದೆಲ್ಲೆಡೆಯಿಂದ ಸುಮಾರು ೧೨೦ಕ್ಕೂ ಅಧಿಕ ರಾಷ್ಟ್ರಗಳು ಪಾಲ್ಗೊಂಡಿದ್ದು, ಈ ಯೋಜನೆಯ ಶಕ್ತಿಯನ್ನು ಸಾರುತ್ತದೆ.
 • ಕಳೆದ ಕೆಲವು ವರ್ಷಗಳಿಂದ ಗುಜರಾತ್ ರಾಜ್ಯವನ್ನು ಎರಡಂಕಿ ಪ್ರಗತಿಪಥದಲ್ಲಿ ಮುನ್ನಡೆಸುತ್ತಾ ಪ್ರಗತಿ ಮತ್ತು ಅಭಿವೃದ್ಧಿ ಪಥವನ್ನು ನಿರಂತರವಾಗಿ ಕಾಯ್ದುಕೊಂಡಿದ್ದಾರೆ.
 • ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿ ಕೊಟ್ಟಿದ್ದಾರೆ.
 • ನಿಷ್ಕಳಂಕ ಸೇವಾ ಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ, ಅಪಾರ ಪ್ರೀತಿ ಗಳಿಸಿರುವ ಏಕೈಕ ವ್ಯಕ್ತಿಯನ್ನು ಕಾಣುವುದು ದುರ್ಲಭ. ಅತ್ಯಂತ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಸಾಧಿಸಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅತಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಮೋದಿ ಹೊಸಮನೆ ಹೇಗಿದೆ ? ವಿಜಯ ಕರ್ನಾಟಕ, ಪುಟ.೯, ಮೇ, ೨೯, ೨೦೧೪

After a long freeze-out, U.S. reaches out to India’s new prime minister,The Washington post, May, 28, 2014