ಘಟಪ್ರಭಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಕಾಕ್ ಜಲಪಾತ

ಘಟಪ್ರಭಾ ಕೃಷ್ಣಾ ನದಿಯ ಉಪನದಿ.

ಉಗಮ[ಬದಲಾಯಿಸಿ]

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿ.ಮೀ ವಿಸ್ತಾರವಾಗಿದೆ.

ಉಪನದಿಗಳು[ಬದಲಾಯಿಸಿ]

ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಆಣೆಕಟ್ಟುಗಳು[ಬದಲಾಯಿಸಿ]

ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿ.ಮೀ ವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಮುಂದಿನ ಯೋಜನೆ[ಬದಲಾಯಿಸಿ]

ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.

ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು.

ಜಲಪಾತ[ಬದಲಾಯಿಸಿ]

ಗೋಕಾಕ ಪಟ್ಟಣದಿಂದ ೧೦ ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.

"https://kn.wikipedia.org/w/index.php?title=ಘಟಪ್ರಭಾ&oldid=1152439" ಇಂದ ಪಡೆಯಲ್ಪಟ್ಟಿದೆ