ವಿಷಯಕ್ಕೆ ಹೋಗು

ಗಟಪರ್ಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಟಪರ್ಚದ ರಾಸಾಯನಿಕ ರಚನೆ[]

ಗಟಪರ್ಚ ಎನ್ನುವುದು ಸಪೋಟೇಸೀ ಕುಟುಂಬಕ್ಕೆ ಸೇರಿದ ಪಲೇಕ್ವಿಯಂ ಜಾತಿಯ ಮರಗಳ ಹಾಲ್ನೊರೆಯನ್ನು ಘನೀಭವಿಸಿ ಪಡೆಯಲಾಗುವ ವಸ್ತು. ರಬ್ಬರನ್ನು ಹೋಲುತ್ತದೆ. ಪಲೇಕ್ವಿಯಂ ಜಾತಿಯ ಹಲವಾರು ಪ್ರಭೇದಗಳು ಮುಖ್ಯವಾಗಿ ಪ. ಗಟ, ಪ. ಆಬ್ಲಾಂಗಿಫೋಲಿಯ, ಪ. ಎಲಿಪ್ಟಿಕಂ ಮತ್ತು ಪ. ಆಬ್‌ಒವೇಟಂಗಳು ಈ ದೃಷ್ಟಿಯಿಂದ ಬಹು ಮುಖ್ಯವಾದವು. ಈ ಮರಗಳು ಮಲಯ ದ್ವೀಪಸ್ತೋಮ, ಬ್ರಜಿಲ್ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಪ. ಗಟ ಪ್ರಭೇದದಿಂದ ದೊರೆಯುವ ಗಟಪರ್ಚ ಉತ್ತಮ ದರ್ಜೆಯದು.

ಗಟಪರ್ಚ ತಯಾರಿಕೆ

[ಬದಲಾಯಿಸಿ]

ಮರಗಳಿಗೆ ಸಾಮಾನ್ಯವಾಗಿ 30 ವರ್ಷ ವಯಸ್ಸಾದ ಅನಂತರ ಹಾಲ್ನೊರೆ ತೆಗೆಯುವುದು ಸೂಕ್ತ. ಹಾಲ್ನೊರೆಯನ್ನು ಕಾಂಡದಿಂದ ತೆಗೆಯುವುದು ವಾಡಿಕೆಯಾದರೂ ಎಲೆ ಮತ್ತು ಇತರ ಭಾಗಗಳಿಂದಲೂ ತೆಗೆಯಬಹುದು. ಹಿಂದೆ ಒಂದು ಕಾಲದಲ್ಲಿ ಹಾಲ್ನೊರೆಯನ್ನು ತೆಗೆಯಲು ಇಡೀ ಮರವನ್ನು ಕತ್ತರಿಸಿದ ತೊಗಟೆಯ ಮೇಲೆ 1' ಅಂತರಕ್ಕೊಂದರಂತೆ 6'' ಅಗಲದ ಹಲವಾರು ಕಾಲುವೆಗಳನ್ನು ಕೊರೆದು ಹಾಲ್ನೊರೆ ಒಸುರುವಂತೆ ಮಾಡಿ ಅದು ಗಟ್ಟಿಯಾದ ಮೇಲೆ ಸಂಗ್ರಹಿಸುತ್ತಿದ್ದರು. ಈಗಲೂ ಮಲಯದಲ್ಲಿ ಈ ವಿಧಾನ ಬಳಕೆಯಲ್ಲಿದೆ. ಆದರೆ ಈಚೆಗೆ ರಬ್ಬರ್ ಮರಗಳಿಂದ ರಬ್ಬರ್ ಹಾಲನ್ನು ತೆಗೆಯುವ ರೀತಿಯಲ್ಲಿ, ಅಂದರೆ ಮರಗಳ ಮೇಲೆ ಕಾಲುವೆಗಳನ್ನು ಮಾಡಿ ಇವುಗಳಿಂದ ಒಸರುವ ಹಾಲ್ನೊರೆಯನ್ನು ಸಂಗ್ರಹಿಸುತ್ತಾರೆ. ಅನಂತರ ಇದನ್ನು ಅಗಲವಾದ ಬಾಯುಳ್ಳ ಪಾತ್ರೆಯಲ್ಲಿ ಕುದಿಸಿ ಸೂಕ್ತ ದ್ರಾವಣಗಳಿಂದ ಗಟಪರ್ಚವನ್ನು ಬೇರ್ಪಡಿಸುತ್ತಾರೆ. ಹಾಲ್ನೊರೆ ಬಲು ಗಟ್ಟಿಯಾಗಿದ್ದರೆ ಕುದಿಸುವ ಮುನ್ನ ಕೊಂಚ ನೀರನ್ನು ಸೇರಿಸುವುದುಂಟು.

ಎಲೆಗಳಿಂದ ಗಟಪರ್ಚವನ್ನು ಪಡೆಯಬೇಕಾದರೆ ಬಲಿತ ಎಲೆಗಳನ್ನು ಸಂಗ್ರಹಿಸಿ ಬೀಸುವ ಯಂತ್ರಗಳಲ್ಲಿ ಪುಡಿ ಮಾಡಿ ಕಡ್ಡಿ ಮುಂತಾದುವನ್ನು ಬೇರ್ಪಡಿಸುತ್ತಾರೆ. ಅನಂತರ 700 ಸೆಂ. ಉಷ್ಣತೆಯುಳ್ಳ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸುತ್ತಾರೆ. ಆಲ್ಕೊಹಾಲ್ ಅಥವಾ ಕ್ರಿಯೊಸೋಟ್ ಮಿಶ್ರಣಗಳನ್ನು ಸೇರಿಸಿ ಗಟಪರ್ಚವನ್ನು ಪ್ರತ್ಯೇಕಿಸುತ್ತಾರೆ. ಶುದ್ಧೀಕರಿಸಲೆಂದು ಗಟಪರ್ಚವನ್ನು ತೊಳೆಯುವುದೂ ಉಂಟು. ಆದರೆ ಈ ವಿಧಾನ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾಗಿಲ್ಲ.

ಗಟಪರ್ಚದ ಮರಗಳಲ್ಲಿ ಹಾಲ್ನೊರೆಯ ಪರಿಮಾಣ ಮಳೆಗಾಲದಲ್ಲಿ ಮಾತ್ರ ಹೆಚ್ಚಾಗಿರುವುದರಿಂದ ಹಾಲ್ನೊರೆಯನ್ನು ಶೇಖರಿಸುವ ಕೆಲಸ ಈ ಕಾಲದಲ್ಲೇ ಹೆಚ್ಚು. ಪ್ರತಿಯೊಂದು ಮರದಿಂದಲೂ ಸುಮಾರು 5 ರಿಂದ 6 ಲೀಟರಿನಷ್ಟು ಹಾಲ್ನೊರೆಯನ್ನು ಪಡೆಯಬಹುದು.

ಗುಣಗಳು

[ಬದಲಾಯಿಸಿ]

ಗಟಪರ್ಚ ಸಾಮಾನ್ಯ ಉಷ್ಣತೆಯಲ್ಲಿ ಗಡುಸಾಗಿರುವ ಒಂದು ಊದಾ ಬಣ್ಣದ ಅಪುಟಿತ ಘನವಸ್ತು. ಬಿಸಿ ಮಾಡಿದಾಗ ಮೃದುವಾಗುತ್ತದೆ. ಈ ಗುಣದಿಂದಾಗಿ ಕೆಲವು ಸುಂದರ ವಸ್ತುಗಳ ತಯಾರಿಕೆಯಲ್ಲಿ ಗಟಪರ್ಚ ಬಹಳ ಉಪಯುಕ್ತವಾಗಿದೆ. ಗಟಪರ್ಚ ವಿದ್ಯತ್‌ವಾಹಿಯಲ್ಲ. ಇದರ ಕರಗುವ ಬಿಂದು  650 ಸೆಂ. ಈ ಉಷ್ಣತೆಗಿಂತ ಹೆಚ್ಚಿನ ಉಷ್ಣತೆಯಲ್ಲಿ ಮೃದುವಾದ ಆಲ್ಫ ಬಗೆಯ ಪ್ಲಾಸ್ಟಿಕ್ ರೂಪ ತಾಳುತ್ತದೆ. ನಿಧಾನವಾಗಿ ತಂಪು ಮಾಡಿದಲ್ಲಿ ಅದು ತನ್ನ ಮುಂಚಿನ ಘನರೂಪಕ್ಕೆ ಬರುತ್ತದೆ. ಅತಿ ಜಾಗ್ರತೆಯಿಂದ ತಂಪು ಮಾಡಿದಲ್ಲಿ ಅದು 560 ಸೆಂ. ನಲ್ಲಿ ಕರಗುವ ಬೇರೆ ರೀತಿಯ ಅಂದರೆ ಬೀಟ ರೂಪದ ಘನವಾಗುತ್ತದೆ. ಈ ಎರಡು ಘನರೂಪಗಳು ನೋಡಲು ಒಂದೇ ರೀತಿಯಲ್ಲಿದ್ದರೂ ಇವನ್ನು ಕ್ಷ-ಕಿರಣಗಳ ಮೂಲಕ ಗುರುತಿಸಬಹುದು.[]

ಕಾರ್ಬನ್ ಡೈಸಲ್ಫೈಡ್, ಬೆಂಜೀ಼ನ್ ಮತ್ತು ಕ್ಲೋರೋಫಾರಮುಗಳಲ್ಲಿ ಗಟಪರ್ಚ ಸುಲಭವಾಗಿ ಕರಗುತ್ತದೆ. ಆದರೆ ಆಲ್ಕೊಹಾಲ್ ಮತ್ತು ಇತರ ದುರ್ಬಲ ಆಮ್ಲಗಳು ಇದರ ಮೇಲೆ ಯಾವ ವಿಧದಲ್ಲೂ ಪರಿಣಾಮಕಾರಿಗಳಲ್ಲ. ಸಾಂದ್ರ ಸಲ್ಫ್ಯೂರಿಕ್ ಆಮ್ಲ ಇದನ್ನು ಸುಟ್ಟು ಹಾಕುತ್ತದೆ. ಮತ್ತು ಸಾಂದ್ರ ನೈಟ್ರಿಕ್ ಆಮ್ಲ ಇದನ್ನು ಪೂರ್ತಿ ಉತ್ಕರ್ಷಿಸುತ್ತದೆ. ಗಾಳಿ ಮತ್ತು ಬೆಳಕಿನ ಸಂಪರ್ಕಕ್ಕೆ ಬಂದರೆ ಇದು ಬಹುಬೇಗ ಹಾಳಾಗುತ್ತದೆ. ಅಲ್ಲದೆ ಗಾಳಿಯಲ್ಲಿನ ಆಮ್ಲಜನಕವನ್ನು ಹೀರಿ ಗಟ್ಟಿಯಾದ ರಾಳದಂಥ ವಸ್ತುವಾಗಿ ಮಾರ್ಪಡುತ್ತದೆ. ಓಜೋ಼ನ್ ಕೂಡ ಗಟಪರ್ಚದ ಮೇಲೆ ಹೆಚ್ಚು ಕಡಿಮೆ ಇದೇ ಪ್ರಭಾವವನ್ನು ಬೀರುತ್ತದೆ. ಈ ಕ್ರಿಯೆಯನ್ನು ತಡೆಗಟ್ಟಲು ಕೆಲುವು ಉತ್ಕರ್ಷಣ ಪ್ರತಿವಸ್ತುಗಳನ್ನು ಬಳಸುತ್ತಾರೆ.

ರಾಸಾಯನಿಕವಾಗಿ ರಬ್ಬರಿನಂತೆಯ ಗಟಪರ್ಚ ಕೂಡ ಒಂದು ಹೈಡ್ರೊಕಾರ್ಬನ್. ಈ ಎರಡರ ಸೂತ್ರ ಒಂದೇ ಆಗಿದ್ದರೂ ಇವುಗಳ ಅಣುಗಳ ಜೋಡಣೆಯ ವಿನ್ಯಾಸ ಬೇರೆ ಬೇರೆ. ರಬ್ಬರ್ ಸಿಸ್-ಪ್ರತಿರೂಪವಾದರೆ ಗಟಪರ್ಚ ಟ್ರಾನ್ಸ್-ಪ್ರತಿರೂಪ.[] ಗಟಪರ್ಚ ಹೈಡ್ರೊ ಕಾರ್ಬನಿನ ಅಣು ತೂಕ 30,000. ರಬ್ಬರಿನ ಜೊತೆ ಗಟಪರ್ಚ ಬಹಳ ಸುಲಭವಾಗಿ ಬೆರೆಯುತ್ತದೆ. ಗಟಪರ್ಚವನ್ನು ವಲ್ಕನೈಸ್ ಮಾಡಿ ರಬ್ಬರಿನಂತೆಯೇ ಉಪಯೋಗಿಸಬಹುದು.

ಉಪಯೋಗಗಳು

[ಬದಲಾಯಿಸಿ]
ಗ್ರೀನ್‍ವಿಚ್, ಲಂಡನ್‍ನಲ್ಲಿನ ಟೆಲಿಗ್ರಾಫ಼್ ಕನ್‍ಸ್ಟ್ರಕ್ಷನ್ ಆಂಡ್ ಮೇಂಟೆನೆನ್ಸ್ ಕಂಪನಿಯಲ್ಲಿ ಗಟಪರ್ಚದಿಂದ ಕೇಬಲ್ ತಯಾರಿಕೆ, ಸುಮಾರು 1865

ಗಟಪರ್ಚಕ್ಕೆ ಹಲವಾರು ಉಪಯೋಗಗಳಿವೆ. ವಿದ್ಯುದ್ರೋಧಕವಾದ್ದರಿಂದ[] ಇದನ್ನು ವಿದ್ಯುದ್ರೋಧಕ ವಸ್ತುಗಳ ತಯಾರಿಕೆಯಲ್ಲಿ ಮುಖ್ಯವಾಗಿ, ಸಬ್‌ಮರೀನ್ ಕೇಬಲ್ ಸರ್ವಿಸಿನಲ್ಲಿ ಕೇಬಲುಗಳನ್ನು ವಿದ್ಯದ್ರೋಧಕಗಳಾಗಿ ಮಾಡಲು ಉಪಯೋಗಿಸುತ್ತಾರೆ.[] ಕೇಬಲ್ ರಕ್ಷಣೆಗೆ ಉಪಯೋಗಿಸಿದ ವಸ್ತು ನೀರಿನ ಉಷ್ಣತೆಯ ವ್ಯತ್ಯಾಸಗಳಿಂದ ಹಾಳಾಗಬಾರದು. ಅಂಥ ಗುಣ ಗಟಪರ್ಚಕ್ಕಿದೆ. ಆದ್ದರಿಂದ ಸಮುದ್ರದಲ್ಲಿ ದೂರವಾಣಿ ಸಂದೇಶಕ್ಕಾಗಿ ಬಳಸುವ ಕೇಬಲ್‌ಗಳನ್ನು ಸುರಕ್ಷಿತವಾಗಿರಿಸಲು ಇತ್ತೀಚಿನವರೆಗೂ ಇದನ್ನು ಉಪಯೋಗಿಸುತ್ತಿದ್ದರು. ಆದರೆ ಇತ್ತೀಚೆಗೆ ಕೃತಕ ವಸ್ತುಗಳಾದ ಪಾಲಿಎತಿಲೀನ್, ವೀನೈಲ್ ರೆಸಿ಼ನ್, ನೈಲಾನ್ ಮುಂತಾದವುಗಳ ಬಳಕೆ ಹೆಚ್ಚಾಗುತ್ತಿದ್ದು ಗಟಪರ್ಚದ ಜನಪ್ರಿಯತೆ ಇಳಿಮುಖವಾಗಿದೆ.[] ಗಾಲ್ಫ್ ಚೆಂಡುಗಳು,[] ಕೆಲವು ಬಗೆಯ ಪೈಪುಗಳು, ಟೆಲಿಫೋನ್ ರಿಸೀವರ್‌ಗಳು, ವೈದ್ಯಕೀಯ ಉಪಕರಣಗಳು, ಒಂದು ಮಾದರಿಯ ಹಲ್ಲಿನ ಸಿಮೆಂಟ್ ಮತ್ತು ವಾಕಿಂಗ್ ಸ್ಟಿಕ್‌ಗಳ ತಯಾರಿಕೆಯಲ್ಲಿ ಗಟಪರ್ಚವನ್ನು ಬಹುವಾಗಿ ಉಪಯೋಗಿಸುತ್ತಾರೆ. ಕೆಲವು ರೀತಿಯ ಅಂಟು ಪದಾರ್ಥಗಳನ್ನೂ, ಚೂಯಿಂಗ್ ಗಮ್ಮನ್ನೂ ಇದರಿಂದ ತಯಾರಿಸುವುದಿದೆ. ಈ ವಸ್ತುಗಳ ತಯಾರಿಕೆಯಲ್ಲಿ ಪ. ಗಟ ಪ್ರಭೇದದಿಂದ ತೆಗೆದ ಗಟಪರ್ಚ ಅತಿ ಉತ್ತಮವಾದದ್ದು. ಆದರೆ ಉತ್ತಮ ಗಟಪರ್ಚದ ಕೊರತೆಯಿರುವುದರಿಂದ ಮಿಕ್ಕ ಪ್ರಭೇದಗಳಿಂದ ಬಂದ ಗಟಪರ್ಚವನ್ನೇ ಇದರ ಜೊತೆ ಮಿಶ್ರಣ ಮಾಡಿ ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. B.K. Sharma, Industrial Chemistry, p. 1117, Krishna Prakashan Media, 1991 ISBN 8187224991
  2. Text Book of Endodontics (in ಇಂಗ್ಲಿಷ್). Elsevier India. 2009. p. 186. ISBN 978-81-312-2181-5.
  3. Alamgir, A. N. M. (23 June 2018). Therapeutic Use of Medicinal Plants and their Extracts: Volume 2: Phytochemistry and Bioactive Compounds (in ಇಂಗ್ಲಿಷ್). Springer. p. 183. ISBN 978-3-319-92387-1.
  4. Manappallil, John J. (30 November 2015). Basic Dental Materials (in ಇಂಗ್ಲಿಷ್). JP Medical Ltd. p. 219. ISBN 978-93-5250-048-2.
  5. Bill Burns, The Gutta Percha Company, atlantic-cable.com, accessed 6 October 2010.
  6. Aitken, Frederic; Foulc, Jean-Numa (30 April 2019). From Deep Sea to Laboratory 1: The First Explorations of the Deep Sea by H.M.S. Challenger (1872-1876) (in ಇಂಗ್ಲಿಷ್). John Wiley & Sons. p. 20. ISBN 978-1-78630-374-5.
  7. Burke, James (8 September 2003). Circles: Fifty Round Trips Through History Technology Science Culture (in ಇಂಗ್ಲಿಷ್). Simon and Schuster. p. 86. ISBN 978-0-7432-4976-8.


ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಟಪರ್ಚ&oldid=1243484" ಇಂದ ಪಡೆಯಲ್ಪಟ್ಟಿದೆ