ವಿಷಯಕ್ಕೆ ಹೋಗು

ಖನಿಜ ತೈಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆನಡಾದಲ್ಲಿ ಮಾರಾಟ ಮಾಡಲಾಗುವ ಖನಿಜ ತೈಲದ ಬಾಟಲಿ.

ಖನಿಜ ತೈಲ ಎಂದರೆ ಖನಿಜ ಮೂಲದ ಮತ್ತು ತೈಲಗಳಿಗೆ ವಿಧಿಸಲಾಗಿರುವ ಶ್ಯಾನತ್ವದ (ವಿಸ್ಕಾಸಿಟಿ) ಪರಿಮಿತಿಗಳ ಒಳಗೆ ಇರುವ ದ್ರವ (ಮಿನರಲ್ ಆಯಿಲ್). ಖನಿಜತೈಲಗಳಲ್ಲಿ ಪ್ರಧಾನವಾದದ್ದು ಪೆಟ್ರೋಲಿಯಮ್. ಖನಿಜ ತೈಲವು ವರ್ಣರಹಿತ, ಪಾರದರ್ಶಕವಾಗಿದ್ದು, ಉನ್ನತ ಆಲ್ಕೇನ್‍ಗಳ ಹಗುರ ಮಿಶ್ರಣವಾಗಿರುತ್ತದೆ.[] ವಿಶೇಷವಾಗಿ ಇದು ಪೆಟ್ರೋಲಿಯಮ್‍ನ ಆಸವವಾಗಿರುತ್ತದೆ.[] ಆಧುನಿಕ ಉದ್ಯೋಗ, ವಾಹನ ಮತ್ತು ಯುದ್ಧ ಸಾಧನ ಸಲಕರಣೆಗಳು ಮುಖ್ಯವಾಗಿ ಪೆಟ್ರೋಲಿಯಮಿನ ಮೇಲೆ ಅವಲಂಬಿಸಿವೆ. ಇದು ದ್ರವರೂಪದಲ್ಲಿರುವುದರಿಂದ ಇದನ್ನು ಭೂಮಿಯಿಂದ ತುಂಬ ಅಗ್ಗವಾಗಿ ಪಡೆಯಬಹುದು. ಇದನ್ನು ಒಯ್ಯುವುದಕ್ಕೂ, ವಿತರಿಸುವುದಕ್ಕೂ ಹೆಚ್ಚಾಗಿ ವೆಚ್ಚ ತಗಲುವುದಿಲ್ಲ.

ಇದರ ಸಾಂದ್ರತೆ ಸುಮಾರು 0.8–0.87 g/cm3 ಆಗಿರುತ್ತದೆ.[]

ರಾಸಾಯನಿಕ ಸಂಯೋಜನೆ

[ಬದಲಾಯಿಸಿ]

ರಚನೆಯಲ್ಲಿ ಪೆಟ್ರೋಲಿಯಂ ಅಲ್ಪ ಮೊತ್ತದಲ್ಲಿ ಆಕ್ಸಿಜನ್, ನೈಟ್ರೊಜನ್ ಮತ್ತು ಸ್ವಲ್ಪ ಗಂಧಕ ಬೆರೆತಿರುವ ಒಂದು ಹೈಡ್ರೊಕಾರ್ಬನ್. ಹೈಡ್ರೊಕಾರ್ಬನ್ ಶ್ರೇಣಿಯ ಅಸಂಖ್ಯಾತ ಸದಸ್ಯರುಗಳಿಗೆ ವಿಧವಿಧವಾದ ರಾಸಾಯನಿಕ ಮತ್ತು ಭೌತಗುಣಗಳು ಇವೆ. ಸಾಮಾನ್ಯ ಉಷ್ಣತಾಮಾನಗಳಲ್ಲಿ ಕೆಲವು ಅನಿಲ ರೂಪದಲ್ಲೂ, ಕೆಲವು ದ್ರವ ರೂಪದಲ್ಲೂ ಇದ್ದರೆ ಮತ್ತೆ ಕೆಲವು ಮೇಣದಂತಿರುತ್ತವೆ. ಆದ್ದರಿಂದ ಯಾವ ಎರಡು ತೈಲಗಳೂ ಒಂದರಂತೆ ಒಂದಿರುವುದಿಲ್ಲ.

ಜಲಜಶಿಲೆಗಳು ಪೆಟ್ರೋಲಿಯಮಿನ ಪ್ರಧಾನ ಆಕರಗಳು. ಮರುಳುಗಳು, ಮರಳುಕಲ್ಲುಗಳು, ಕಂಗ್ಲಾಮಿರೇಟುಗಳು, ಡೋಲೊಮೈಟುಗಳು ಮತ್ತು ಅಪೂರ್ವವಾಗಿ ಬಿರುಕುಗಳಿಂದ ಕೂಡಿದ ಶೇಲುಗಳು ವಾಣಿಜ್ಯಕ್ಕೆ ಅರ್ಹವಾದ ಬಾವಿಗಳ ತೈಲಾಕರ ಶಿಲೆಗಳು. ಸಾಗರದ ಪದರಗಳೂ ಜತೆಗೆ ಅವುಗಳಿಗೆ ಸಂಬಂಧಪಟ್ಟ ಭೂಖಂಡಗಳ ಅಧಃಸ್ಥಳಗಳೂ ತೈಲೋತ್ಪಾದನೆಗೆ ಮುಖ್ಯ ಕ್ಷೇತ್ರಗಳಾಗಿವೆ. ಕೇಂಬ್ರಿಯನ್ ಯುಗದಿಂದ ಪ್ಲಿಯೋಸೀನ್ ಯುಗದವರೆಗಿನ ಎಲ್ಲ ಅವಧಿಗಳಲ್ಲೂ ಪೆಟ್ರೋಲಿಯಂ ಸಿಕ್ಕುತ್ತದೆ. ಟರ್ಷಿಯರಿ ಯುಗದ ಶಿಲೆಗಳಲ್ಲಿ ಇದರ ಪರಿಮಾಣ ಅತ್ಯಧಿಕವಾಗಿದೆ. ಪೆಟ್ರೋಲಿಯಂ ಉದ್ಭವಿಸಿದ್ದು ಜೀವಿಗಳಿಂದ ಎಂದು ಈಗ ಎಲ್ಲರೂ ಒಪ್ಪುತ್ತಾರೆ. ಸಂಕ್ಷೇಪವಾಗಿ ಹೇಳುವುದಾದರೆ ಸಮುದ್ರದ ಮಣ್ಣುಗಳಲ್ಲಿ ಹೂತುಹೋದ ಜೀವಿ ವಸ್ತುಗಳು ರಾಸಾಯನಿಕ ಪರಿವರ್ತನೆಯನ್ನು ಹೊಂದಿ ಪ್ರಾಕೃತಿಕ ಹೈಡ್ರೊಕಾರ್ಬನ್ನುಗಳಾಗುತ್ತವೆ. ತರುವಾಯ ಇವು ಸರಂಧ್ರ ಶಿಲೆಗಳೆಡೆಗೆ ಚಲಿಸಿ ಅಲ್ಲಿ ಶೇಖರಗೊಂಡು ವಾಣಿಜ್ಯಾರ್ಹ ತೈಲಕೂಪಗಳಾಗಿ ಪರಿಣಮಿಸುತ್ತವೆ. ಸಂಘಟನೆ (ಕಾಂಪೇಕ್ಷನ್), ಲೋಮನಾಳತ್ವ (ಕ್ಯಾಪಿಲ್ಲಾರಿಟಿ), ಉತ್ಪ್ಲವನತೆ (ಬಾಯೆನ್ಸಿ), ಗುರುತ್ವ, ಪ್ರವಾಹಗಳು ಮೊದಲಾದ ಕ್ರಿಯೆಗಳು ಒಂದುಗೂಡಿ ಈ ಚಲನೆ ಏರ್ಪಡುವ ಹಾಗೆ ತೋರುತ್ತದೆ. ಅಭಿನತಿಕ ಶಿಲಾಮಡಿಕೆಗಳು (ಸಿಂಕ್ಲೈನಲ್ ಫೋಲ್ಡ್ಸ್), ಸ್ತರಭಂಗ ಪಾಶಗಳು, ಲವಣಗುಮ್ಮಟಗಳು, ಬಿರುಕಿನ ಬೆಣೆಗಳು, ಹೆಣಿಗೆ ಟ್ರ್ಯಾಪುಗಳು ಮತ್ತು ಇವುಗಳ ವಿವಿಧ ಜೋಡಣೆಗಳಲ್ಲಿ ತೈಲ ಸಂಗ್ರಹವಾಗಬಹುದು.

ಜಲಜ ಶಿಲೆಗಳಲ್ಲಿ ತೈಲ ಅಷ್ಟು ಆಳವಿಲ್ಲದ ಜಾಗಗಳಿಂದ ಹಿಡಿದು (ಎಂದರೆ ಸುಮಾರು 1213.33 ಮೀ. ಆಳ) ಸುಮಾರು 6067 ಮೀ.-9100 ಮೀ. ವರೆಗಿನ ಸ್ಥಳಗಳಲ್ಲಿ ನೆಲೆಗೊಂಡಿವೆ. ಕೊರೆಯುವ ತಂತ್ರಗಳಲ್ಲಿ ಸಾಕಷ್ಟು ಸುಧಾರಣೆ ಆಗಿರುವುದರಿಂದ ಅಧಿಕಾಧಿಕವಾದ ಆಳಗಳಿಗೆ ಇಳಿದು ಗುರಿಮುಟ್ಟುವುದು ಈಗ ಸಾಧ್ಯವಾಗಿದೆ. ತೈಲ ಸಾಮಾನ್ಯವಾಗಿ ಒಳತಳದಲ್ಲಿ ಸ್ವಲ್ಪ ಒತ್ತಡಕ್ಕೆ ಒಳಪಟ್ಟು ಇರುತ್ತದೆ. ಈ ಒತ್ತಡವೇ ಎಣ್ಣೆಯನ್ನು ಬಾವಿಗೂ, ಬಾವಿಯಿಂದ ಮೇಲಕ್ಕೂ ಚಿಮ್ಮಿಬರುವಂತೆ ಮಾಡುತ್ತದೆ. ತೈಲಾಕರದ ಒತ್ತಡಕ್ಕೆ ತೈಲಕ್ಷೇತ್ರದಲ್ಲಿನ (oil field) ವಿಲೀನಾನಿಲ (soluble gas), ಜಲಸ್ಥಿತಿ ಮೂಲ (ಹೈಡ್ರೋಸ್ಟ್ಯಾಟಿಕ್ ಹೆಡ್), ಪಟಲವಿರೂಪಣ (ಡಯಾಸ್ಟ್ರಾಫಿಸಂ), ಉಷ್ಣತಾ ಓಟ (ಟೆಂಪರೇಚರ್ ಗ್ರೇಡಿಯಂಟ್), ದ್ರವಗತಿಕ ಪರಿಸ್ಥಿತಿಗಳು ಮತ್ತು ಖನಿಜ ಪರಿವರ್ತನೆಗಳು ಕಾರಣಗಳು.

ಎಣ್ಣೆಬಾವಿಗಳನ್ನು ಪತ್ತೆಮಾಡುವ ಕೆಲಸ ಮೇಲುತಳ ಮತ್ತು ಒಳತಳಗಳ ಭೂಶಾಸ್ತ್ರೀಯ ವಿಧಾನಗಳಿಂದ ಸಾಮಾನ್ಯವಾಗಿ ಜರಗಿಸಲ್ಪಡುತ್ತದೆ. ಮತ್ತು ಆವೃತ ಕ್ಷೇತ್ರಗಳಲ್ಲಿ ಭೂಭೌತ ಸರ್ವೇಕ್ಷಣಗಳಿಂದ ಈ ಕಾರ್ಯ ಜರಗುತ್ತದೆ.

ಪ್ರಪಂಚದ ತೈಲನಿಧಿಗಳು

[ಬದಲಾಯಿಸಿ]

ಅಂಕೆ ಅಂಶಗಳು ತಿಳಿಸುವ ಹಾಗೆ 1950ರಲ್ಲಿ ಮೂರು ಶತಕೋಟಿ ಬ್ಯಾರೆಲ್ಲುಗಳಷ್ಟು ಎಣ್ಣೆಯ ಉತ್ಪಾದನೆ ಆಗಿದೆ. ಅಧಿಕ ಸಂಖ್ಯೆಯಲ್ಲಿ ತೈಲಕ್ಷೇತ್ರಗಳನ್ನು, ಅದರಲ್ಲೂ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಕಂಡು ಹಿಡಿಯುತ್ತಿರುವ ಹಾಗೆಲ್ಲ ಈ ಉತ್ಪಾದನ ಪರಿಮಾಣ ಕ್ರಮೇಣ ಏರುತ್ತಲೇ ಇದೆ.

ಉಪಯೋಗಗಳು

[ಬದಲಾಯಿಸಿ]

ಸಾಮರ್ಥ್ಯದ (ಪವರ್) ಉತ್ಪಾದನೆಯಲ್ಲಿ ಶಕ್ತಿಯ ಮೂಲವಾಗಿಯೂ, ಸ್ನೇಹಕ ದ್ರವ್ಯವಾಗಿಯೂ (ಲ್ಯೂಬ್ರಿಕೆಂಟ್) ಖನಿಜ ತೈಲಗಳ ಮುಖ್ಯ ಉಪಯೋಗ ಉಂಟು. ಮಾನವ ಬಳಸುತ್ತಿರುವ ಪೆಟ್ರೋಲಿಯಮಿನ ಮೊತ್ತದ 90% ಭಾಗದಷ್ಟು ಈ ಎರಡು ಉಪಯೋಗಗಳಾಗಿ ವ್ಯಯವಾಗುತ್ತಿದೆ. ಕಚ್ಚಾತೈಲಗಳ (crude oil) ಶುದ್ಧೀಕರಣ ಪ್ರಕ್ರಿಯೆ ಹಲವಾರು ಗೌಣೋತ್ಪನ್ನಗಳಿಗೆ ದಾರಿಮಾಡಿ ಕೊಡುತ್ತದೆ. ಇವುಗಳಲ್ಲಿ ವಿಧವಿಧವಾದ ರಾಸಾಯನಿಕ ವಸ್ತುಗಳು, ಔಷಧಿಗಳು, ದ್ರಾವಕಗಳು (ಸಾಲ್ವೆಂಟ್ಸ್),[] ರಾಳಗಳು, ಬಣ್ಣಗಳು, ಸ್ಫೋಟಕಗಳು, ಪೂತಿನಾಶಕಗಳು, ರಬ್ಬರ್ ಸುಗಂಧಗಳು ಇತ್ಯಾದಿಗಳು ಸೇರಿವೆ.

ಖನಿಜ ತೈಲವು ಲಿಥಿಯಮ್, ಪೊಟ್ಯಾಶಿಯಮ್ ಮತ್ತು ಸೋಡಿಯಮ್‍ ಮುಂತಾದ ಕ್ಷಾರ ಲೋಹಗಳಂತಹ ಪ್ರತಿಕ್ರಿಯಾತ್ಮಕ ಲೋಹಗಳನ್ನು ಸಂಗ್ರಹಿಸಿಡಲು ಒಂದು ಅಗ್ಗದ ಪರ್ಯಾಯವಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Opinion of the Scientific Panel on Food Additives, Flavourings, Processing Aids and Materials in Contact with Food (AFC) on a request from the Commission related the use of mineral oils in jute and sisal bags" (PDF). The EFSA Journal. 2004. Archived from the original (PDF) on 3 June 2018. Retrieved 2007-01-27.
  2. Mineral oil (Dictionary.com) Archived 30 September 2015 ವೇಬ್ಯಾಕ್ ಮೆಷಿನ್ ನಲ್ಲಿ.
  3. "Mechanical properties of materials". Kaye and Laby Tables of Physical and Chemical Constants. National Physical Laboratory. Archived from the original on 11 March 2008. Retrieved 2008-03-06.
  4. Hess, J.; Bednarz, D.; Bae, J.; Pierce, J. (2011). "Petroleum and health care: Evaluating and managing health care's vulnerability to petroleum supply shifts". American Journal of Public Health. 101 (9): 1568–1579. doi:10.2105/AJPH.2011.300233. PMC 3154246. PMID 21778473.
  5. "Information on alkali metals". Stanford Environmental Health & Safety (in ಅಮೆರಿಕನ್ ಇಂಗ್ಲಿಷ್). Palo Alto, CA: Stanford University. Retrieved 2022-05-10.

ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: