ವಿಷಯಕ್ಕೆ ಹೋಗು

ಹೈಡ್ರೊಕಾರ್ಬನ್ನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀಥೇನ್ ಅಣುವಿನ ಬಾಲ್ ಮತ್ತು ಸ್ಟಿಕ್ ಮಾದರಿ, CH₄. ಮೀಥೇನ್, ಏಕಬಂಧಗಳನ್ನು ಹೊಂದಿರುವ, ಆಲ್ಕೇನುಗಳೆಂದು ಕರೆಯಲ್ಪಡುವ ಸಜಾತೀಯ ಶ್ರೇಣಿಯ ಭಾಗವಾಗಿದೆ.

ಹೈಡ್ರೊಕಾರ್ಬನ್ನುಗಳು ಎಂದರೆ ಹೈಡ್ರೊಜನ್ ಮತ್ತು ಕಾರ್ಬನ್‌ಗಳನ್ನಷ್ಟೆ ಒಳಗೊಂಡಿರುವ ಆರ್ಗ್ಯಾನಿಕ್ (ಅಥವಾ ಕಾರ್ಬನಿಕ) ಸಂಯುಕ್ತಗಳು.[]: 620  ಈ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ನೇರ ಸರಪಳಿ ರೂಪಿಸಿರಬಹುದು, ಟಿಸಿಲೊಡೆದ ಸರಪಳಿ ರೂಪಿಸಿರಬಹುದು ಅಥವಾ ಚಕ್ರಗಳನ್ನು ರೂಪಿಸಿರಬಹುದು. ವೇಲೆನ್ಸಿಗಳೆಲ್ಲ ಪರ್ಯಾಪ್ತವಾಗಿರಬಹುದು, ಅಪರ್ಯಾಪ್ತವಾಗಿ ದ್ವಿಬಂಧ ಅಥವಾ ತ್ರಿಬಂಧಗಳಿರಬಹುದು. ಹೈಡ್ರೋಕಾರ್ಬನಗಳಿಂದ ಒಂದು ಹೈಡ್ರೋಜೆನನ್ನು ತೆಗೆದಾಗ ಉಂಟಾಗುವ ಕಾರ್ಯಕಾರಿ ಗುಂಪು ಹೊಂದಿರುವ ಸಂಯುಕ್ತಗಳನ್ನು ಹೈಡ್ರೋಕಾರ್ಬೈಲ್‍ಗಳೆಂದು ಕರೆಯುತ್ತಾರೆ.

ಇವು ಅಚಕ್ರೀಯ (Aliphatic), ಚಕ್ರೀಯ (Alicyclic) ಅಥವಾ ಆರೊಮ್ಯಾಟಿಕ್ (Aromatic) ವರ್ಗಗಳಿಗೆ ಸೇರಿರಬಹುದು. ಶಾಖಾಯುಕ್ತ ಅಥವಾ ಶಾಖಾರಹಿತ ವಿವೃತಸರಪಣಿಸಂರಚನೆ (open chain structure) ಉಳ್ಳವು ಅಚಕ್ರೀಯ. ಒಂದು ಅಥವಾ ಹೆಚ್ಚು ಸಂವೃತದ (ರಿಂಗ್) ಸಂರಚನೆಯುಳ್ಳವು ಚಕ್ರೀಯ ಹೈಡ್ರೊಕಾರ್ಬನುಗಳು. ಅಚಕ್ರೀಯ ಹೈಡ್ರೊಕಾರ್ಬನ್‌ಗಳನ್ನು ಆಲಿಫ್ಯಾಟಿಕ್ ಹೈಡ್ರೊಕಾರ್ಬನ್‍ಗಳು ಎಂದೂ ಕರೆಯುತ್ತಾರೆ. ಇವುಗಳಲ್ಲಿ ಎರಡು ವರ್ಗ: ಪರ್ಯಾಪ್ತ, ಅಪರ್ಯಾಪ್ತ. ಅಚಕ್ರೀಯ ಅಥವಾ ಚಕ್ರೀಯ ಸಂಯುಕ್ತಗಳಾಗಿರುವಾಗ ದ್ವಿಬಂಧ, ತ್ರಿಬಂಧಗಳನ್ನೊಡಗೊಂಡು ಅಪರ್ಯಾಪ್ತ (unsaturated) ಸಂಯುಕ್ತಗಳಾಗಿರಬಹುದು ಅಥವಾ ಏಕಬಂಧಗಳನ್ನು ಮಾತ್ರ ಒಳಗೊಂಡ ಪರ್ಯಾಪ್ತ (saturated) ಸಂಯುಕ್ತಗಳಾಗಿರಬಹುದು. ಆರೊಮ್ಯಾಟಿಕ್ ಸಂಯುಕ್ತಗಳು ಒಂದು ವಿಶಿಷ್ಟ ರೀತಿಯ ಅಪರ್ಯಾಪ್ತ ಸಂಯುಕ್ತಗಳು. ಪರ್ಯಾಪ್ತ ಸಂಯುಕ್ತಗಳು ಆಲ್ಕೇನು ಅಥವಾ ಸೈಕ್ಲೋಆಲ್ಕೇನುಗಳೆನ್ನಿಸಿಕೊಳ್ಳುತ್ತವೆ.

ಪರಮಾಣುಗಳ ಏಕಬಂಧ ಜೋಡಣೆಗಳು ಮಾತ್ರವಿರುವಂಥವು ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೊಕಾರ್ಬನ್‌ಗಳು. ಪ್ಯಾರಫಿನ್ ಹೈಡ್ರೊಕಾರ್ಬನ್‌ಗಳು, ಪ್ಯಾರಫಿನ್‌ಗಳು, ಆಲ್ಕೇನ್‌ಗಳು-ಇವು ಪರ್ಯಾಯ ನಾಮಗಳು. ಸಾರ್ವತ್ರಿಕ ಸೂತ್ರ CnH2n+2.[]: 623  ಉದಾ: ಮೀಥೇನ್ ಮತ್ತು ಅದರ ಸಮಾನರೂಪಿಗಳು (ಹೊಮಾಲೊಗ್ಸ್). ಸಂತೃಪ್ತ ಹೈಡ್ರೋಕಾರ್ಬನ್‍ಗಳು ಪೆಟ್ರೋಲಿಯಂ ಇಂಧನಗಳ ಮೂಲಗಳಾಗಿವೆ ಮತ್ತು ಅವು ಸಾಮಾನ್ಯವಾಗಿ ನೇರ ಅಥವಾ ಕವಲೊಡೆದ ಸರಪಣಿ ಜಾತಿಯದ್ದಾಗಿವೆ. ಪರ್ಯಾಯ ರಾಸಾಯನಿಕ ಪ್ರತಿಕ್ರಿಯೆಗಳು ಅವುಗಳ ಲಕ್ಷಣವಾಗಿದೆ.

ಅಪರ್ಯಾಪ್ತ ಸಂಯುಕ್ತಗಳು ದ್ವಿಬಂಧವುಳ್ಳ (ಆರೊಮೆಟಿಕ್ ಸಂಯುಕ್ತಗಳನ್ನು ಬಿಟ್ಟು) ಆಲ್ಕೀನು ಅಥವಾ ಸೈಕ್ಲೋಆಲ್ಕೀನುಗಳು ಮತ್ತು ತ್ರಿಬಂಧವುಳ್ಳ ಸಂಯುಕ್ತಗಳು ಆಲ್ಕೈನುಗಳು. ಪರಮಾಣು ಜೋಡಣಾಬಂಧಗಳ ಪೈಕಿ ಒಂದು ದ್ವಿಬಂಧವಿರುವ ಓಲೆಫಿನ್ ಅಥವಾ ಆಲ್ಕೀನ್‌ಗಳು (ಸಾರ್ವತ್ರಿಕ ಸೂತ್ರ: CnH2n;[]: 628  ಉದಾ: ಎಥಿಲೀನ್ ಮತ್ತು ಅದರ ಸಮಾನರೂಪಿಗಳು), ಒಂದು ತ್ರಿಬಂಧವಿರುವ ಎಸೆಟಲೀನ್ ಅಥವಾ ಆಲ್ಕೈನ್‌ಗಳು (ಸಾರ್ವತ್ರಿಕ ಸೂತ್ರ: CnH2n-2;[]: 631  ಉದಾ: ಎಸೆಟಲೀನ್ ಮತ್ತು ಅದರ ಸಮಾನರೂಪಿಗಳು),  ಮತ್ತೊಂದು ದ್ವಿಬಂಧಗಳಿರುವ ಡೈಓಲೆಫಿನ್‌ಗಳು ಅಥವಾ ಆಲ್ಕಡೈಯೀನ್‌ಗಳು, ಅನೇಕ ದ್ವಿ ಅಥವಾ ತ್ರಿಬಂಧಗಳು ಅಥವಾ ಇವೆರಡೂ ಇರುವ ಆಲ್ಕಟ್ರೈಯೀನ್, ಆಲ್ಕಟೆಟ್ರಯೀನ್ ಮುಂತಾದ ಅನೇಕ ಸಂಯುಕ್ತಗಳೆಲ್ಲ ಅಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೊಕಾರ್ಬನ್‌ಗಳು.

ಚಕ್ರೀಯ ಹೈಡ್ರೊಕಾರ್ಬನುಗಳಲ್ಲಿ ಎರಡು ಪ್ರಭೇದಗಳಿವೆ: ಆಲಿಸೈಕ್ಲಿಕ್ ಮತ್ತು ಆರೊಮ್ಯಾಟಿಕ್. ಒಂದು ಅಥವಾ ಹೆಚ್ಚು ರಿಂಗುಗಳುಳ್ಳ ಅನಾರೊಮ್ಯಾಟಿಕ್ ಪರ್ಯಾಪ್ತ ಹಾಗೂ ಅಪರ್ಯಾಪ್ತ ಹೈಡ್ರೊಕಾರ್ಬನುಗಳೇ ಆಲಿಸೈಕ್ಲಿಕ್ ಹೈಡ್ರೊಕಾರ್ಬನುಗಳು. ಕನಿಷ್ಠ ಒಂದು ಬೆನ್ಝೀನ್ ರಿಂಗ್‌ಉಳ್ಳವೇ ಆರೊಮ್ಯಾಟಿಕ್ ಹೈಡ್ರೊಕಾರ್ಬನುಗಳು.

ಪರ್ಯಾಪ್ತ ಆಲಿಸೈಕ್ಲಿಕ್ ಹೈಡ್ರೊಕಾರ್ಬನುಗಳು ಏಕಚಕ್ರೀಯ ಸಂಯುಕ್ತಗಳು. ಇವುಗಳ ಪರ್ಯಾಯ ನಾಮ: ಸೈಕ್ಲೊಪ್ಯಾರಫಿನ್ ಅಥವಾ ಸೈಕ್ಲೊಆಲ್ಕೇನ್‌ಗಳು. ಈ ಸಂಯುಕ್ತಗಳ ಪೈಕಿ  ಕೆಲವನ್ನು ಪೆಟ್ರೋಲಿಯಮಿನ ನ್ಯಾಫ್ತಾದಿಂದ ಪಡೆಯುವುದರಿಂದ ನ್ಯಾಫ್ತೀನ್ ಎಂದು ಕರೆಯುವುದೂ ಉಂಟು (ಉದಾ: ಸೈಕ್ಲೊಪೆಂಟೇನ್, ಸೈಕ್ಲೊಹೆಕ್ಸೇನ್). ಬಹುಸಂಖ್ಯಾ ಸಮಾನರೂಪೀ  ಸಂಯುಕ್ತಗಳುಳ್ಳ ಶ್ರೇಣಿ ಇದು. ರಿಂಗಿನಲ್ಲಿ 5 ಅಥವಾ 6 ಕಾರ್ಬನ್ ಪರಮಾಣುಗಳುಳ್ಳವು ಸ್ಥಿರ ಸಂಯುಕ್ತಗಳು. ಏಕಚಕ್ರೀಯ ಸೈಕ್ಲೊಓಲೆಫಿನ್ ಅಥವಾ ಸೈಕ್ಲೊಆಲ್ಕೀನ್‌ಗಳು, ಸೈಕ್ಲೊಡೈಓಲೆಫಿನ್‌ಗಳು ಅಥವಾ ಸೈಕ್ಲೊಆಲ್ಕಡೈಯೀನ್‍ಗಳು ಅಪರ್ಯಾಪ್ತ ಹೈಡ್ರೊಕಾರ್ಬನುಗಳು. ಸೈಕ್ಲೊಎಸೆಟಲೀನ್ ಅಥವಾ ಸೈಕ್ಲೊಆಲ್ಕೈನ್‍ಗಳು ವಿರಳ. ಒಂದಕ್ಕಿಂತ ಹೆಚ್ಚು ರಿಂಗುಗಳ ವಿಶಿಷ್ಟ  ಜೋಡಣೆಯ ಬಹುಚಕ್ರೀಯ ಆಲಿಸೈಕ್ಲಿಕ್ ಹೈಡ್ರೊಕಾರ್ಬನುಗಳೂ ಉಂಟು (ಉದಾ: ಡೈಸೈಕ್ಲೊಪೆಂಟೈಲ್ ಮೀಥೇನ್, ಬೈಸೈಕ್ಲೊಹೆಕ್ಸೈಲ್‌ಗಳು).

ಮೊದಲು ಆವಿಷ್ಕರಿಸಿದ ಆರೊಮ್ಯಾಟಿಕ್ ಹೈಡ್ರೊಕಾರ್ಬನುಗಳ ಘಾಟುವಾಸನೆ ಈ ನಾಮಕರಣಕ್ಕೆ ಕಾರಣ (ಆರೋಮಾ: ಸುಗಂಧ). ಅನೇಕ ರಿಂಗುಗಳಲ್ಲಿ ಪರ್ಯಾಪ್ತ ಮತ್ತು ಅಪರ್ಯಾಪ್ತ ಪಾರ್ಶ್ವ ಸರಪಣಿಗಳು ಆದೇಶ್ಯಗಳು. ಆರೊಮ್ಯಾಟಿಕ್  ಹೈಡ್ರೊಕಾರ್ಬನುಗಳಲ್ಲಿ 4 ಉಪವರ್ಗಗಳು:

  1. ಬೆಂಝೀನ್ ಹಾಗೂ ಆಲ್ಕೈಲ್, ಆಲ್ಕೀನೈಲ್ ಮತ್ತು ಆಲ್ಕೈನೈಲ್ ಬೆಂಝೀನ್‌ಗಳು;
  2. ಸೈಕ್ಲೊಆಲ್ಕೈಲ್ ಮತ್ತು ಸೈಕ್ಲೊಆಲ್ಕೀನೈಲ್ ಬೆಂಝೀನ್‌ಗಳು;
  3. ಇಂಡೀನ್, ನ್ಯಾಫ್ತಲಿನ್ ಮುಂತಾದ ಸಮ್ಮಿಲಿತ ರಿಂಗುಗಳ ಬಹುಬೈಜಿಕ ಹೈಡ್ರೊಕಾರ್ಬನುಗಳು;
  4. ನೇರವಾಗಿ ಅಥವಾ ಆಲಿಫ್ಯಾಟಿಕ್ ಕಾರ್ಬನ್ ಮುಖೇನ ಜೋಡಣೆಯಾದ ರಿಂಗುಗಳುಳ್ಳ ಬಹುಬೈಜಿಕ ಆರೊಮ್ಯಾಟಿಕ್ ಹೈಡ್ರೊಕಾರ್ಬನುಗಳು (ಉದಾ: ಬೈಫಿನೈಲ್‌ಗಳು, ಡೈಫಿನೈಲ್ ಮೀಥೇನ್).

ಬಹು ದ್ವಿಬಂಧಗಳನ್ನುಳ್ಳ ಅನೇಕ ಸಂಯುಕ್ತಗಳು ಸ್ಕ್ವಾಲೀನ್, ಅಲ್ಲೀನ್, ಬ್ಯೂಟಡಯೀನ್, 2, 3 - ಡೈಮೀಥೈಲ್ ಬ್ಯೂಟಡಯೀನ್, ಐಸೊಪ್ರೀನ್, ಕ್ಲೋರೋಪ್ರೀನ್ ಮೊದಲಾದವು-ಕಾರ್ಬಾನು ಸಂಯುಕ್ತ ರಸಾಯನಶಾಸ್ತ್ರದಲ್ಲಿ ಹಲವು ಪ್ರಮುಖ ಸಂಯುಕ್ತಗಳಾಗಿವೆ.

ತ್ರಿಬಂಧವುಳ್ಳ ಆ್ಯಲಿಫ್ಯಾಟಿಕ್ ಸಂಯುಕ್ತಗಳು ಅಸಿಟಲೀನ್ ಅಥವಾ ಆಲ್ಕೈನ್‍ಗಳು. ಪ್ರಕೃತಿಯಲ್ಲಿ ಅಲ್ಲಲ್ಲಿ ತ್ರಿಬಂಧಪೂರಿತ ಸಂಯುಕ್ತಗಳು ದೊರೆಯುವುವಾದರೂ ಅವು ಬಲು ವಿರಳ. ಸಾಮಾನ್ಯವಾಗಿ ಇವನ್ನು ಕೃತಕವಾಗಿ ಸಂಯೋಜಿಸಲಾಗುತ್ತದೆ. ಅತಿ ಸರಳ ಆಲ್ಕೈನ್ ಗುಂಪಿನ ಹೈಡ್ರೊಕಾರ್ಬನ್ ಆದ ಅಸಿಟಲೀನನ್ನು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ವರ್ತನೆಯಿಂದ ಪಡೆಯಬಹುದು.[] ದ್ವಿಬಂಧ ಸಂಯುಕ್ತಗಳಿಂದ ತ್ರಿಬಂಧ ಸಂಯುಕ್ತಗಳನ್ನು ತಯಾರಿಸಬಹುದು. ತ್ರಿಬಂಧ ಸಂಯುಕ್ತಗಳು ದ್ವಿಬಂಧ ಸಂಯುಕ್ತಗಳಿಗಿಂತಲೂ ಬಲು ಅಸ್ಥಿರ ಅಥವಾ ಪಟು. ಆಲ್ಕೀನುಗಳಂತೆಯೇ ಆಲ್ಕೈನುಗಳೂ ಸಂಕಲನ ಕ್ರಿಯೆಗಳಲ್ಲಿ ಭಾಗವಹಿಸಬಲ್ಲವು. ತ್ರಿಬಂಧ ಇಂಗಾಲಕ್ಕೆ ಸೇರಿದ ಹೈಡ್ರೊಜನ್ ಪರಮಾಣು ಬಲು ಪಟು. ಇದನ್ನು ಸುಲಭವಾಗಿ ಸೋಡಿಯಮ್‍ನಂಥ ಪಟು ಲೋಹಗಳ ಪರಮಾಣುಗಳಿಂದ ಪಲ್ಲಟಿಸಬಹುದು. ಹಾಗೆ ದೊರೆತ ಅಸಿಟಲೈಡುಗಳೆಂಬ ಆರ್ಗ್ಯನೋಲೋಹ ಸಂಯುಕ್ತಗಳು ಅನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಬಲು ಉಪಯುಕ್ತ ಮಧ್ಯವರ್ತಿಗಳು.

ಹೈಡ್ರೊಕಾರ್ಬನ್‍ಗಳ ಗುಣಧರ್ಮಗಳು

[ಬದಲಾಯಿಸಿ]

ರಾಸಾಯನಿಕ ಬಂಧಗಳು

[ಬದಲಾಯಿಸಿ]

ಒಂದು ಕಾರ್ಬನ್ನಿನ ಪರಮಾಣು ಹಾಗೂ ನಾಲ್ಕು ಹೈಡ್ರೋಜನ್‍ವುಳ್ಳ ಮೀಥೇನ್ ಅನಿಲ, ಹೈಡ್ರೋಕಾರ್ಬನ್ ಕುಟುಂಬದ ಮೊದಲ ಸದಸ್ಯ. ಕಾರ್ಬನ್ನಿನ ಪರಮಾಣುವಿನಿಂದ ಹೊರಟ ನಾಲ್ಕು ಗೆರೆಗಳು ಅದರ ನಾಲ್ಕು ಬಂಧಗಳನ್ನು ಪ್ರತಿನಿಧಿಸುತ್ತದೆ.

ಈ ಬಂಧಗಳೇ ಕಾರ್ಬನ್ನನ್ನು ನಾಲ್ಕು ಹೈಡ್ರೋಜನ್ ಪರಮಾಣುಗಳಿಗೆ ಬಂಧಿಸಿ ಅಣುವನ್ನು ಒಟ್ಟಾರೆ ಧಾರಣ ಮಾಡಿ ಅದಕ್ಕೆ ಒಂದು ಆಕೃತಿಯನ್ನು ಕೊಡುತ್ತವೆ. ಕಾರ್ಬನ್ನಿನ ಪರಮಾಣು ಯಾವುದೇ ಅಣುವಿನಲ್ಲಿರಲಿ ಅದರ ಈ ನಾಲ್ಕು ಬಂಧಗಳಲ್ಲಿ ಪ್ರತಿಯೊಂದು ಬಂಧ ಬೇರೊಂದು ಪರಮಾಣುವಿನ ಬಂಧದೊಡನೆ ಜೋಡನೆ ಹೊಂದಿರುತ್ತದೆ. ಹೀಗಾಗಿ ಹೈಡ್ರೋಕಾರ್ಬನ್ನಿನ ಉಚ್ಚ ಸದಸ್ಯ ಅಣುಗಳಲ್ಲಿ ಪ್ರತಿಯೊಂದು ಕಾರ್ಬನ್ ಪರಮಾಣುವಿನ ನಾಲ್ಕು ಬಂಧಗಳೂ ಹೈಡ್ರೋಜನ್ ಪರಮಾಣುವಿನ ಜೊತೆ ಅಥವಾ ಬಾಕಿ ಕಾರ್ಬನ್ನಿನ ಪರಮಾಣುವಿನ ಜೊತೆ ಬಂಧಿತವಾಗಿರುತ್ತದೆ. ಕಾರ್ಬನ್ನಿನ ಪರಮಾಣುವಿಗೆ ನಾಲ್ಕು ಬಂಧಗಳಿವೆ ಅಂದರೆ "ಕಾರ್ಬನ್ನಿನ ವೇಲೆನ್ಸಿ" ನಾಲ್ಕು ಎಂದರ್ಥ. ಅದೇ ರೀತಿ ಬೇರೆ ಧಾತುಗಳ ಬಂಧಸಂಖ್ಯೆ ಬೇರೆ ಇದ್ದು ಅವುಗಳ ಸಂಖ್ಯೆ ಕಾರ್ಬನ್ನಿಗಿಂತ ಬೇರೆಯಾಗಿರುತ್ತದೆ. ಉದಾಹರಣೆಗೆ, ಹೈಡ್ರೋಜನ್ನಿಗೆ ಇರುವುದು ಒಂದೇ ಬಂಧ. ಹೈಡ್ರೋಕಾರ್ಬನ್ನುಗಳಲ್ಲಿ ಈ ಬಂಧ ಕಾರ್ಬನ್ನಿನ ನಾಲ್ಕು ಬಂಧಗಳ ಪೈಕಿ ಒಂದರೊಂದಿಗೆ ಜೋಡಣೆ ಆಗಿರುತ್ತದೆ.

ಕಾರ್ಬನ್ನಿನ ನಾಲ್ಕು ಬಂಧಗಳು ನಾಲ್ಕು ಪರಮಾಣುಗಳ ಬಂಧದೊಡನೆ ಪ್ರತ್ಯೇಕವಾಗಿ ಜೋಡಣೆ ಹೊಂದಿದಾಗ ಅಂಥ ಅಣು "ಪರ್ಯಾಪ್ತ ಅಣು". ಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ರಾಸಾಯನಿಕ ದೃಷ್ಟಿಯಿಂದ ಜಡ ಪದಾರ್ಥಗಳು. ಸುಲಭವಾಗಿ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದಲೇ ಅವುಗಳಿಗೆ "ಪ್ಯಾರಫಿನ್ನುಗಳು" ಅನ್ನುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಪ್ಯಾರಮ್ ಅಂದರೆ 'ಅಲ್ಪ';' ಅಫಿನಿಸ್' ಅಂದರೆ ಒಲವು. ಈ ಕುಟುಂಬದ ಸದಸ್ಯರಲ್ಲಿ ಒಂದರಿಂದ ನಾಲ್ಕು ಕಾರ್ಬನ್ನಿನ ಪರಮಾಣುಗಳನ್ನು ಹೊಂದಿದ ಹೈಡ್ರೋಕಾರ್ಬನ್ನುಗಳು ಅನಿಲ ರೂಪದಲ್ಲಿರುತ್ತವೆ. ಇವುಗಳನ್ನು ನೈಸರ್ಗಿಕವಾಗಿ ಪಡೆಯಬಹುದು.

೫-೧೦ ಕಾರ್ಬನ್ನಿನ ಪರಮಾಣುಗಳನ್ನೂ ಮತ್ತು ಅದಕ್ಕೆ ತಕ್ಕಂತೆ ಹೆಚ್ಚಿನ ಹೈಡ್ರೋಜನ್ ಪರಮಾಣುಗಳನ್ನು ಹೊಂದಿರುವ ಹೈಡ್ರೋಕಾರ್ಬನ್ನುಗಳು ದ್ರವರೂಪದಲ್ಲಿರುತ್ತವೆ. ಹೈಡ್ರೋಕಾರ್ಬನ್ನುಗಳಲ್ಲಿ ಕಾರ್ಬನ್ನಿನ ಪರಮಾಣುಗಳ ಸಂಖ್ಯೆ ೧೧-೧೯ರವರೆಗೆ ಏರುತ್ತಾ ಹೋದಂತೆ ಅವುಗಳ ಸ್ನಿಗ್ಧತೆ ಹೆಚ್ಚುತ್ತಾ ಹೋಗುತ್ತದೆ. ಈ ಹೈಡ್ರೋಕಾರ್ಬನ್ನುಗಳು ಸೀಮೆಎಣ್ಣೆ, ಡೀಸೆಲ್ ಎಣ್ಣೆಗಳಲ್ಲಿ ಇರುತ್ತವೆ. ಕಾರ್ಬನ್ನಿನ ಪರಮಾಣುಗಳ ಸಂಖ್ಯೆ ಇನ್ನೂ ಹೆಚ್ಚಾದಂತೆ ಹೈಡ್ರೋಕಾರ್ಬನ್ನುಗಳು ಘನರೂಪ ತಾಳುತ್ತವೆ. ವಿಟಮಿನ್ನುಗಳು, ಮೇಣಗಳಲ್ಲಿ ಇಂಥ ಹೈಡ್ರೋಕಾರ್ಬನ್ನುಗಳು ಇರುತ್ತವೆ.

ಗುಣಧರ್ಮದ ಮೇಲೆ ಆಕಾರದ ಕೊಡುಗೆ

[ಬದಲಾಯಿಸಿ]

ಹೈಡ್ರೋಕಾರ್ಬನ್ ಅಣುಗಳ ಗಾತ್ರವು ಅವುಗಳ ಅನಿಲ, ದ್ರವ ಹಾಗೂ ಘನರೂಪಗಳನ್ನು ನಿರ್ಧರಿಸುವಂತೆ ಅವುಗಳ ಆಕಾರ (ರಚನೆ) ಕೂಡ ಅವುಗಳ ಗುಣಧರ್ಮಗಳನ್ನು ನಿರ್ಧರಿಸುತ್ತದೆ. ಕಾರ್ಬನ್ನಿನ ಪರಮಾಣುಗಳು ನೇರ ಶ್ರೇಣೆಯಲ್ಲಿದ್ದರೆ ಅಂಥ ಹೈಡ್ರೋಕಾರ್ಬನ್ನುಗಳಿಗೆ 'ಸಾಮಾನ್ಯ ಹೈಡ್ರೋಕಾರ್ಬನ್' ಅಥವಾ n ಆಕ್ಟೇನು (n=ನಾರ್ಮಲ್) ಎನ್ನುತ್ತೇವೆ. ಕಾರ್ಬನ್ನುಗಳು ಟಿಸಿಲೊಡೆದ (ಶಾಖಾ) ಶ್ರೇಣಿಯಲ್ಲಿದ್ದರೆ ಅದಕ್ಕೆ 'ಐಸೋಹೈಡ್ರೋಕಾರ್ಬನ್' ಎನ್ನುತ್ತೇವೆ. ಉದಾಹರಣೆಗೆ, ಐಸೋಆಕ್ಟೇನು. ನೇರಶ್ರೇಣಿಯ ಆಕ್ಟೇನಿಗಿಂತ ಟಿಸಿಲೊಡೆದ ಆಕ್ಟೇನು ಮೋಟಾರು ಎಂಜಿನುಗಳಲ್ಲಿ ಹೆಚ್ಚು ಉಪಯುಕ್ತ.[][] ತೆರೆದ ಶ್ರೇಣಿಯ ಹೈಡ್ರೋಕಾರ್ಬನ್ನುಗಳಲ್ಲದೇ ಚಕ್ರಾಕೃತಿಯ (ಉಂಗುರಾಕೃತಿ) ಹೈಡ್ರೋಕಾರ್ಬನ್ನುಗಳಿವೆ. ಇವುಗಳನ್ನು ಸೈಕ್ಲೊಪ್ಯಾರಾಫಿನ್ನುಗಳು ಅನ್ನುತ್ತಾರೆ. ಉದಾಹರಣೆ, ಸೈಕ್ಲೊಪೆಂಟೇನು. ಸೈಕ್ಲೊಪೆಂಟೇನಿನಲ್ಲಿ ಐದು ಕಾರ್ಬನ್ನು ಹಾಗೂ ಹತ್ತು ಹೈಡ್ರೋಜನ್ ಪರಮಾಣುಗಳಿರುತ್ತವೆ. ಆದ್ದರಿಂದ ಕಾರ್ಬನ್ನಿನ ಪ್ರಮಾಣ ಸ್ವಲ್ಪ ಜಾಸ್ತಿ. ಆದರೂ ಪ್ರತಿಯೊಂದು ಕಾರ್ಬನ್ನಿನ ನಾಲ್ಕೂ ಬಂಧಗಳು ಪ್ರತ್ಯೇಕವಾಗಿ ಬೇರೆ ಬೇರೆ ಪರಮಾಣುಗಳೊಂದಿಗೆ ಬಂಧಿಸಿಕೊಂಡು ಪರ್ಯಾಪ್ತವಾಗಿವೆ.

ಆದರೆ ಇನ್ನು ಕೆಲವು ಹೈಡ್ರೋಕಾರ್ಬಾನ್ನುಗಳಲ್ಲಿ ಕಾರ್ಬನ್ನಿನ ಎಲ್ಲಾ ವೇಲೆನ್ಸಿಗಳನ್ನೂ ಪ್ರತ್ಯೇಕ ಪರಮಾಣುಗಳೊಂದಿಗೆ ಬಂಧಿಸಿ ಪರ್ಯಾಪ್ತಪಡಿಸುವಷ್ಟು ಇತರ ಪರಮಾಣುಗಳು ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಎರಡು ಅಕ್ಕಪಕ್ಕದ ಕಾರ್ಬನ್ನುಗಳಲ್ಲಿ ಪ್ರತಿಯೊಂದು ಎರಡು ಪ್ರತ್ಯೇಕ ಪರಮಾಣುಗಳ ಜೊತೆ ಬಂಧಿಸಿಕೊಂಡು ಉಳಿದ ಎರಡು ಬಂಧಗಳಿಂದ ಪರಸ್ಪರ ಅಂಟಿಕೊಳ್ಳುತ್ತವೆ. ಇಂಥ ಬಂಧಕ್ಕೆ 'ದ್ವಿಬಂಧ' ಅನ್ನುತ್ತಾರೆ. ಈ ರೀತಿಯ ದ್ವಿಬಂಧಗಳುಳ್ಳ ಹೈಡ್ರೋಕಾರ್ಬನ್ನುಗಳಿಗೆ ಅಪರ್ಯಾಪ್ತ ಹೈಡ್ರೋಕಾರ್ಬನ್ನುಗಳು ಅಥವಾ ಓಲಿಫಿನ್ನುಗಳು ಅನ್ನುತ್ತಾರೆ. ದ್ವಿಬಂಧ ಏಕಬಂಧದಷ್ಟು ಬಲವಾಗಿರುವುದಿಲ್ಲ, ಆದ್ದರಿಂದ ದ್ವಿಬಂಧವುಳ್ಳ ಹೈಡ್ರೋಕಾರ್ಬನ್ನುಗಳು ರಾಸಾಯನಿಕ ಕ್ರಿಯೆಯಲ್ಲಿ ಪಟುತ್ವದಿಂದ ಭಾಗವಹಿಸುತ್ತವೆ.

ಮತ್ತೊಂದು ವಿಧದ ಹೈಡ್ರೋಕಾರ್ಬನ್ನುಗಳು ಸೈಕ್ಲೊಪ್ಯಾರಫಿನ್ನುಗಳಿಗಿಂತ ಭಿನ್ನ. ಇವೂ ಸಹ ಉಂಗುರಾಕಾರದವು (ಚಕ್ರಾಕಾರದವು). ಉದಾಹರಣೆಗೆ ಬೆಂಜೀನು. ಉಂಗುರದಲ್ಲಿ ಆರು ಕಾರ್ಬನ್ನಿನ ಪರಮಾಣುಗಳಿದ್ದು ಪ್ರತಿಯೊಂದು ಒಂದೊಂದು ಹೈಡ್ರೋಜನ್ ಪರಮಾಣುವಿನ ಜೊತೆ ಬಂಧಿಸಿಕೊಂಡಿರುತ್ತದೆ. ಆದ್ದರಿಂದ ಸಾಪೇಕ್ಷವಾಗಿ ಕಾರ್ಬನ್ನಿನ ಪ್ರಮಾಣ ಜಾಸ್ತಿ. ಹೀಗಾಗಿ ಕಾರ್ಬನ್ನಿನ ಪರಮಾಣುಗಳು ಅಪರ್ಯಾಪ್ತ. ಇವುಗಳನ್ನು ಪರ್ಯಾಪ್ತ ಮಾಡಲು ಉಂಗುರದಲ್ಲಿ ಮೂರು ದ್ವಿಬಂಧ ಮತ್ತು ಮೂರು ಏಕಬಂಧಗಳಿರುತ್ತವೆ. ಇಂಥ ಉಂಗುರವುಳ್ಳ ಸಂಯುಕ್ತಗಳಿಗೆ "ಆರೋಮ್ಯಾಟಿಕ್"ಅನ್ನುತ್ತಾರೆ. ‍ಆರೋಮ್ಯಾಟಿಕ್‍ಗಳಲ್ಲಿ ದ್ವಿಬಂಧವಿದ್ದರೂ ಅವು ರಾಸಾಯನಿಕವಾಗಿ ಚುರುಕಾಗಿಲ್ಲ. ಅವು ಓಲಿಫಿನ್ನುಗಳಿಗಿಂತ ಸ್ಥಿರವಾದವುಗಳು. ಉಂಗುರದಲ್ಲಿ ಏಕಬಂಧ ಹಾಗೂ ದ್ವಿಬಂಧ ಇವು ಒಂದರ ಅನಂತರ ಒಂದು ಇರುವುದೇ ಸ್ಥಿರತೆಗೆ ಕಾರಣ.

ದೊರಕುವಿಕೆ

[ಬದಲಾಯಿಸಿ]

ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ಪೆಟ್ರೋಲಿಯಮ್‌ಗಳು ಸಾಮಾನ್ಯವಾಗಿ ಭೂಮಿಯ ಮೇಲೆ ಹೈಡ್ರೊಕಾರ್ಬನುಗಳ ಅತಿ ದೊಡ್ಡ ಆಕರಗಳು. ಸಸ್ಯಮೂಲಗಳಿಂದಲೂ ಕೆಲವು ಲಭ್ಯ. ಇದು ಅನೇಕ ಸಾವಯವ ವಸ್ತುಗಳ ಕೊಳೆಯುವಿಕೆಯಿಂದ ಉಂಟಾಗುವುದಲ್ಲದೇ, ಜಲಜನಕ ಹಾಗೂ ಆಮ್ಲಜನಕಗಳು ಭಾರಿ ಪ್ರಮಾಣದಲ್ಲಿ ಕೊಂಡಿಕೂಡಣೆ ವಿಧಾನದಿಂದಾದ ಬಂಧಗಳಿಂದ ಅನೇಕ ಸರಪಣಿಗಳ ಸೇರುವಿಕೆಯಿಂದ ಉಂಟಾಗಿದೆ.

ಎಲ್ಲ ಬಗೆಯ ಹೈಡ್ರೊಕಾರ್ಬನ್ನುಗಳು ಪ್ರಕೃತಿಯಲ್ಲಿ ಪೆಟ್ರೋಲಿಯಮ್ ಎಣ್ಣೆಯಲ್ಲಿ ದೊರೆಯುತ್ತವೆ. ಆರೊಮೆಟಿಕ್ ಸಂಯುಕ್ತಗಳು ತಕ್ಕಮಟ್ಟಿನ ಪ್ರಮಾಣದಲ್ಲಿ ಕಲ್ಲಿದ್ದಲಿನಲ್ಲಿಯೂ ದೊರೆಯುತ್ತವೆ.

ಓಲಿಫಿನ್ನುಗಳು ಮಾತ್ರ ಅದರಲ್ಲಿರುವುದಿಲ್ಲ. ಅವುಗಳನ್ನು ಟೊಮೇಟೊ ಹಾಗೂ ಗಜ್ಜರಿ ಬಣ್ಣಗಳಿಂದ ಪಡೆಯಬಹುದು. ರಬ್ಬರಿನಲ್ಲಿ ಅದು ಪಾಲಿಮರ್ ರೂಪದಲ್ಲಿರುತ್ತದೆ. ಕೆಲವು ಮರಗಿಡಗಳಲ್ಲಿ ಸಹ ಹೈಡ್ರೋಕಾರ್ಬನ್ನುಗಳು ಇರುತ್ತವೆ. ಉದಾಹರಣೆಗೆ ಪೈನೀನ್, ಟರ್ಪೆಂಟೈನ್.[]

ಸರಳ ಹೈಡ್ರೋಕಾರ್ಬನ್‍ಗಳು ಮತ್ತು ಅವುಗಳ ವ್ಯತ್ಯಾಸಗಳು

[ಬದಲಾಯಿಸಿ]
ಕಾರ್ಬನ್ ಅಣುಗಳ ಸಂಖ್ಯೆ ಅಲ್ಕೇನು (ಏಕಬಂಧ) ಅಲ್ಕೀನು (ದ್ವಿಬಂಧ) ಅಲ್ಕೈನು (ತ್ರಿಬಂಧ) ಸೈಕ್ಲೊಅಲ್ಕೇನು ಅಲ್ಕಡಯೀನ್
1 ಮೀಥೇನ್ - - - -
2 ಈಥೇನ್ ಈಥೀನ್ (ಎಥಿಲೀನ್) ಈಥೈನ್ (ಅಸಿಟಿಲೀನ್)
3 ಪ್ರೋಪೇನ್ ಪ್ರೊಪೀನ್ (ಪ್ರೊಪಿಲೀನ್) ಪ್ರೊಪೈನ್ (ಮೀಥೈಲ್ಅಸಿಟಿಲೀನ್) ಸೈಕ್ಲೊಪ್ರೋಪೇನ್ ಪ್ರೋಪಡಯೀನ್ (ಅಲೀನ್)
4 ಬ್ಯೂಟೇನ್ ಬ್ಯೂಟೀನ್ (ಬ್ಯುಟಿಲಿನ್) ಬ್ಯೂಟೈನ್ ಸೈಕ್ಲೊಬ್ಯೂಟೇನ್ ಬ್ಯೂಟಾಡಯೀನ್
5 ಪೆಂಟೇನ್ ಪೆಂಟೀನ್ ಪೆಂಟೈನ್ ಸೈಕ್ಲೊಪೆಂಟೇನ್ ಪೆಂಟಾಡಯೀನ್ (ಪೈಪರಿಲೀನ್)
6 ಹೆಕ್ಸೇನ್ ಹೆಕ್ಸೀನ್ ಹೆಕ್ಸೈನ್ ಸೈಕ್ಲೊಹೆಕ್ಸೇನ್ ಹೆಕ್ಸಾಡಯೀನ್
7 ಹೆಪ್ಟೇನ್ ಹೆಪ್ಟೀನ್ ಹೆಪ್ಟೈನ್ ಸೈಕ್ಲೊಹೆಪ್ಟೇನ್ ಹೆಪ್ಟಾಡಯೀನ್
8 ಆಕ್ಟೇನ್ ಆಕ್ಟೀನ್ ಆಕ್ಟೈನ್ ಸೈಕ್ಲೊಆಕ್ಟೇನ್ ಆಕ್ಟಾಡಯೀನ್
9 ನೊನೆನ್ ನೊನೀನ್ ನೊನೈನ್ ಸೈಕ್ಲೊನೊನೇನ್ ನೊನಾಡಯೀನ್
10 ಡೆಕೇನ್ ಡೆಕೀನ್ ಡೆಕೈನ್ ಸೈಕ್ಲೊಡೆಕೇನ್ ಡೆಕಾಡಯೀನ್

ಗುಣಗಳು ಮತ್ತು ಉಪಯೋಗಗಳು

[ಬದಲಾಯಿಸಿ]

ಹೈಡ್ರೋಕಾರ್ಬನ್ನುಗಳು ಒಳ್ಳೆಯ ಇಂಧನಗಳು. ಇವು ನೀರಿನಲ್ಲಿ ವಿಲೀನವಾಗುವುದಿಲ್ಲ. ಪರ್ಯಾಪ್ತ ಹೈಡ್ರೋಕಾರ್ಬನ್ನುಗಳನ್ನು ಕ್ಲೋರೀನಿನಂತಹ ಕ್ರಿಯಾಪಟುಗಳ ಸಂಪರ್ಕಕ್ಕೆ ಒಡ್ಡಿ ಉತ್ಪನ್ನಗಳನ್ನು ಪಡೆದು ಅದರಿಂದ ಅನೇಕ ಸಂಯುಕ್ತಗಳನ್ನು ಪಡೆಯಲು ಸಾಧ್ಯ, ಉದಾಹರಣೆಗೆ ಕೃತಕ ರಬ್ಬರು.

  • ಪ್ರಸ್ತುತ ನಾಗರೀಕತೆಯ ಪ್ರಾಥಮಿಕ ಶಕ್ತಿಯ ಮೂಲವೇ ಹೈಡ್ರೋಕಾರ್ಬನ್‍ಗಳಾಗಿವೆ. ಪ್ರಧಾನವಾಗಿ ಹೈಡ್ರೋಕಾರ್ಬನ್‍ಗಳನ್ನು ಇಂಧನ ಮೂಲಗಳಾಗಿ ಬಳಸಲಾಗುತ್ತಿದೆ. ಹೈಡ್ರೋಕಾರ್ಬನಗಳ ಘನ ರೂಪವೇ ಅಸ್ಫಾಲ್ಟ್ (ಬಿಟುಮೆನ್)
  • ಬಾಷ್ಪಶೀಲ ಹೈಡ್ರೋಕಾರ್ಬನ್‍ಗಳ ಮಿಶ್ರಣಗಳನ್ನು ಹೆಚ್ಚಾಗಿ ವಾಯುದ್ರವ ತುಂತುರುಗಳಲ್ಲಿನ ನೋದನಕಾರಿಗಳಾಗಿ, ಕ್ಲೋರೋಫ್ಲೂರೋಕಾರ್ಬನ್‍ಗಳಾಗಿ ಬಳಸಲಾಗುತ್ತದೆ.
  • ಬ್ಯೂಟೇನ್ ಅನಿಲವನ್ನು ಹೆಚ್ಚಿನ ಒತ್ತಡಕ್ಕೊಳಪಡಿಸಿ ಸುರಕ್ಷಿತವಾದ ರೀತಿಯಲ್ಲಿ ಪಾಕೆಟ್ ಲೈಟರ್‌ಗಳಲ್ಲಿ ಬಳಸಲಾಗುತ್ತಿದೆ. ಪೆಂಟೇನ್ ಕೊಠಡಿಯ ಉಷ್ಣತೆಯಲ್ಲಿ ದ್ರವ ಸ್ಥಿತಿಯಲ್ಲಿದ್ದು ಔದ್ಯೋಗಿಕ ಕ್ಷೇತ್ರದಲ್ಲಿ ಇದನ್ನು ಮೇಣಗಳನ್ನು ಕರಗಿಸುವ ದ್ರಾವಕವಾಗಿ ಬಳಸಲಾಗುತ್ತಿದೆ. ಹೆಕ್ಸೇನ್ ಅನಿಲವು ವಾಸನೆ ರಹಿತ ಹಾಗೂ ಅಧ್ರುವೀಕೃತ ಲಕ್ಷಣ ಹೊಂದಿದ್ದು ವಿಮಾನಗಳಲ್ಲಿ ಬಳಸುವ ಗ್ಯಾಸೋಲಿನ್‍ನಲ್ಲಿ ಬಳಸಲಾಗುತ್ತಿದೆ. ಪ್ರಗತಿಯುತವಾಗಿ ಇಂಗಾಲದ ಕಣಗಳನ್ನು ಸೇರಿಸುವಿಕೆಯಿಂದ ಉಂಟಾಗುವ ಉಂಗುರ ರಹಿತ ಹೈಡ್ರೋಕಾರ್ಬನಗಳು ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದ್ದು ನಯಗೊಳಿಸುವ ಸಾಧನವಾಗಿ ಬಳಸಲಾಗುತ್ತಿದೆ.

ವಿಷಗೊಳ್ಳುವಿಕೆ

[ಬದಲಾಯಿಸಿ]

ಪೆಟ್ರೋಲ್ ಅಥವಾ ಬೆಂಜೀನ್‍ಗಳನ್ನು ಆಕಸ್ಮಿಕವಾಗಿ ಉಸಿರಾಡುವುದರಿಂದ ಅಥವಾ ಜೀವಕೋಶೀಯ ವಿಷವಾಗುವಿಕೆಯಂತಹ ವಸ್ತುಗಳನ್ನು ಸೇವಿಸಿದಾಗ ಹೈಡ್ರೋಕಾರ್ಬನ್‍ಗಳಿಂದ ವಿಷಗೊಳ್ಳುವಿಕೆ ಉಂಟಾಗುತ್ತದೆ. ಅಭಿಧಮನಿಗಳಲ್ಲಿ ಅಥವಾ ಮೇಲ್ಚರ್ಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಳ್ಳುವ ಪೆಟ್ರೋಲಿಯಂ ಲಸಿಕೆ ಹಾಗೂ ನಿಂದನಾ ರೂಪದ ಅತಿರೇಕ ಪ್ರಮಾಣದಲ್ಲಿ ದೇಹವನ್ನು ಘಾಸಿಗೊಳಿಸಬಹುದಾದ ಉದಾಹರಣೆಗೆ-ಅಂಗಾಂಶ ನೆಕ್ರಾಸಿಸ್, ಬಾವು ರಚನೆ, ಉಸಿರಾಟ ವ್ಯವಸ್ಥೆಯ ನಿಲ್ಲುವಿಕೆ ಮತ್ತು ಮೂತ್ರಪಿಂಡಗಳ, ಮೆದುಳು ಹಾಗೂ ನರಮಂಡಲದ ಭಾಗಶಃ ಹಾಳಾಗುವಿಕೆ ಉಂಟಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Silberberg, Martin (2004). Chemistry: The Molecular Nature Of Matter and Change. New York: McGraw-Hill Companies. ISBN 0-07-310169-9.
  2. Wohler (1862) "Bildung des Acetylens durch Kohlenstoffcalcium" Archived 12 May 2016 ವೇಬ್ಯಾಕ್ ಮೆಷಿನ್ ನಲ್ಲಿ. (Formation of actylene by calcium carbide), Annalen der Chemie und Pharmacie, 124: 220.
  3. Werner Dabelstein; Arno Reglitzky; Andrea Schütze; Klaus Reders (2007). "Automotive Fuels". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a16_719.pub2. ISBN 978-3527306732.
  4. Richardson, KA; Wilmer, JL; Smith-Simpson, D; Skopek, TR (February 1986). "Assessment of the genotoxic potential of unleaded gasoline and 2,2,4-trimethylpentane in human lymphoblasts in vitro". Toxicology and Applied Pharmacology. 82 (2): 316–22. doi:10.1016/0041-008x(86)90207-3. PMID 3945956.
  5. Gscheidmeier, Manfred; Fleig, Helmut (2000). "Turpentines". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a27_267. {{cite encyclopedia}}: Cite has empty unknown parameter: |authors= (help)


ಹೊರಗಿನ ಕೊಂಡಿಗಳು

[ಬದಲಾಯಿಸಿ]
  1. IUPAC Goldbook oldbook.iupac.org/H02891.html
  2. Clayden, J., Greeves, N., et al. (2001) Organic Chemistry Oxfordhttps://en.wikipedia.org/wiki/Special:BookSources/0495118370
  3. Mason OU, Nakagawa T, Rosner M, Van Nostrand JD, Zhou J, Maruyama A, Fisk MR, Giovannoni SJ. (2010).https://www.ncbi.nlm.nih.gov/pmc/articles/PMC2974637/
  4. M.M. Yakimov, K.N. Timmis & P.N. Golyshin (2007). "Obligate oil-degrading marine bacteria". Curr. Opin. Biotech. 18 (3): 257–266. http://linkinghub.elsevier.com/retrieve/pii/S0958166907000559
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: