ವಿಷಯಕ್ಕೆ ಹೋಗು

ಈಥೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಥೇನ್ ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್ನುಗಳಾದ ಪ್ಯಾರಾಫಿನ್ ಅಥವಾ ಆಲ್ಕೇನ್ ವರ್ಗಕ್ಕೆ ಸೇರಿದ ಸಂಯುಕ್ತ. ರಚನಾ ಸೂತ್ರ C2H6.[೧]

ರಚನಾ ಸೂತ್ರ
ರಚನಾ ಸೂತ್ರ
ಮೂರು ಆಯಾಮದ ಚೆಂಡು ಹಾಗೂ ಕೋಲಿನ ಮಾದರಿ

ಪಡೆಯುವ ವಿಧಾನಗಳು[ಬದಲಾಯಿಸಿ]

ವಿಧಾನ-೧[ಬದಲಾಯಿಸಿ]

ನೈಸರ್ಗಿಕ ಅನಿಲದಲ್ಲಿ ೫% - ೨೦% ಈಥೇನಿರುತ್ತದೆ. ಮೀಥೇನ್ ತಯಾರಿಸಲು ನಾವು ಬಳಸುವ ಸಾರ್ವತ್ರಿಕ ವಿಧಾನಗಳು ಇದಕ್ಕೂ ಅನ್ವಯಿಸುತ್ತವೆ. ಸೋಡಿಯಂ ಪ್ರೊಪಿಯೊನೇಟನ್ನು ಸೋಡಾ ಸುಣ್ಣದೊಡನೆ ಕಾಯಿಸಿ ಈಥೇನ್ ಪಡೆಯಬಹುದು.

ವಿಧಾನ-೨[ಬದಲಾಯಿಸಿ]

ಈಥೈಲ್ ಆಲ್ಕೊಹಾಲಿನ ಸಮ್ಮುಖದಲ್ಲಿ ಸತು-ತಾಮ್ರದ ಜೋಡಿಯಿಂದ ಈಥೈಲ್ ಅಯೋಡೈಡನ್ನು ಅಪಕರ್ಷಿಸಿದಾಗ ಪರಿಶುದ್ಧ ಈಥೇನ್ ದೊರೆಯುವುದು.

CH3.CH2.I + 2[H] → CH3-CH3 + HI

ವಿಧಾನ-೩[ಬದಲಾಯಿಸಿ]

ಶುಷ್ಕ ಈಥರ್ ದ್ರಾವಣದಲ್ಲಿ ಮೀಥೈಲ್ ಅಯೋಡೈಡ್ ಮತ್ತು ಶುದ್ಧ ಸೋಡಿಯಂ ಲೋಹ ಪರಸ್ಪರ ವರ್ತಿಸಿದಾಗ ಈಥೇನ್ ಹುಟ್ಟುವುದು.

ವುರ್ಟ್ಸ್ ಎಂಬ ಫ್ರೆಂಚ್ ರಸಾಯನ ವಿಜ್ಞಾನಿ ೧೮೫೫ರಲ್ಲಿ ಈ ಕ್ರಿಯಾ ವಿಧಾನವನ್ನು ಕಂಡುಹಿಡಿದ. ಆದ್ದರಿಂದ ಇದಕ್ಕೆ ವುರ್ಟ್ಸ್ ಸಂಯೋಜನೆ ಎಂದು ಹೆಸರಾಗಿದೆ.

ವಿಧಾನ-೪[ಬದಲಾಯಿಸಿ]

ಸೋಡಿಯಂ ಅಸಿಟೇಟಿನ ಪ್ರಬಲ ನೀರಿನ ದ್ರಾವಣವನ್ನು ಪ್ಲ್ಯಾಟಿನಂ ಧನಧ್ರುವದ ನೆರವಿನಿಂದ ವಿದ್ಯುದ್ವಿಭಜನೆ ಮಾಡಿದಾಗ ಈಥೇನ್ ಮತ್ತು ಇಂಗಾಲದ ಡೈಆಕ್ಸೈಡುಗಳು ಧನುಧ್ರುವದಲ್ಲೂ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೊಜನ್ ಋಣ ಧ್ರುವದಲ್ಲೂ ಬಿಡುಗಡೆಯಾಗುವುವು.

2CH3COONa + 2H2O → CH3CH3 + 2NaOH+ 2CO2 + H2

೧೮೪೮ರಲ್ಲಿ ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಎ.ಡಬ್ಲು.ಎಚ್.ಕೋಲ್ಬೆ ಈ ಕ್ರಿಯಾ ವಿಧಾನವನ್ನು ಶೋಧಿಸಿದುದರಿಂದ ಇದಕ್ಕೆ ಕೋಲ್ಬೆ ಸಂಯೋಜನೆ ಎಂಬ ಹೆಸರು ಬಂದಿದೆ.

ವಿಧಾನ-೫[ಬದಲಾಯಿಸಿ]

ಎಥಿಲೀನ್ ಮತ್ತು ಹೈಡ್ರೋಜನ್ನುಗಳ ಮಿಶ್ರಣವನ್ನು ಉನ್ನತ ಉಷ್ಣತೆಯಲ್ಲಿ ಸೂಕ್ಷ್ಮಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕದ ಮೇಲೆ ಹಾಯಿಸಿಯೂ ಈಥೇನ್ ತಯಾರಿಸಬಹುದು.

CH2=CH2 + H2 → CH3-CH3

ಈಥೇನ್‍ನ ಗುಣಗಳು[ಬದಲಾಯಿಸಿ]

ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಈಥೇನ್ ಮೀಥೇನನ್ನು ಹೋಲುವುದು. ಇದು ಬಣ್ಣ ವಾಸನೆಗಳಿಲ್ಲದ ಅನಿಲ. ೪ ಸೆಂ.ಗ್ರೇ. ಉಷ್ಣತೆ ಮತ್ತು ೪೬ ವಾಯುಭಾರ ಒತ್ತಡದಲ್ಲಿ ದ್ರವರೂಪ ತಳೆಯುವುದು (ಕುದಿಯುವ ಬಿಂದು -೮೮.೬ ಸೆಂ.ಗ್ರೇ.) ನೀರಿನಲ್ಲಿ ಅದ್ರಾವ್ಯವಾದರೂ ಆಲ್ಕೊಹಾಲಿನಲ್ಲಿ ಲೀನವಾಗುವುದು. ರಾಸಾಯನಿಕವಾಗಿ ಮೀಥೇನಿನಂತೆಯೇ ಜಡವಾದ ಅನಿಲ. ಕ್ಲೋರಿನ್ನಿನೊಡನೆ ವರ್ತಿಸಿದಾಗ ಈಥೇನಿನ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಕ್ರಮೇಣ ಪಲ್ಲಟಿತವಾಗುವುವು.

 C2H6 + Cl2 →  C2H5Cl   + HCl
(ethane)   (chloroethane)
  C2H5Cl   + Cl2 →   C2H4Cl2  + HCl
(chloroethane)    (dichloroethane)
  C2H4Cl2   + Cl2 →   C2H3Cl3    + HCl
(dichloroethane)    (trichloroethane)
   C2H3Cl3   + Cl2 →   C2H2Cl4    + HCl
(trichloroethane)    (tetrachloroethane)
   C2H2Cl4    + Cl2 →    C2HCl5    + HCl
(tetrachloroethane)     (pentachloroethane)
   C2HCl5    + Cl2 →    C2Cl6    + HCl
(pentachloroethane)     (hexachloroethane)

ಸುಮಾರು ೮೦೦o ಸೆಂ.ಗ್ರೇ. ಉಷ್ಣತೆಯಲ್ಲಿ ಹೈಡ್ರೊಜನನ್ನು ಕಳೆದುಕೊಂಡು ಎಥಿಲೀನ್ ಆಗುವುದು. ನೈಸರ್ಗಿಕ ಅನಿಲದಲ್ಲಿರುವ ಈಥೇನ್ ಮತ್ತು ಪ್ರೋಪೇನ್ ಭಾಗವನ್ನು ಹೀಗೆ ಲಾಭದಾಯಕವಾಗಿ ಎಥಿಲೀನಿಗೆ ಪರಿವರ್ತಿಸುವರು. ಶೈತ್ಯಕಾರಕ ಯಂತ್ರಗಳಲ್ಲಿ ಈಥೇನನ್ನು ಸಹ ಉಪಯೋಗಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

 1. PubChem

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಈಥೇನ್&oldid=1153250" ಇಂದ ಪಡೆಯಲ್ಪಟ್ಟಿದೆ