ವಿಷಯಕ್ಕೆ ಹೋಗು

ಅಯೊಡಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐಯೋಡಿನ್ ಇಂದ ಪುನರ್ನಿರ್ದೇಶಿತ)


53 ಟೆಲ್ಲುರಿಯಮ್ಅಯೊಡಿನ್ಜೀನಾನ್
ಬ್ರೋಮಿನ್

I

ಆಸ್ಟಟೈನ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಅಯೊಡಿನ್, I, 53
ರಾಸಾಯನಿಕ ಸರಣಿhalogens
ಗುಂಪು, ಆವರ್ತ, ಖಂಡ 17, 5, p
ಸ್ವರೂಪನೇರಳೆ ಅಥವಾ ಗಾಢ ಬೂದು
ಅಣುವಿನ ತೂಕ 126.90447 g·mol−1
ಋಣವಿದ್ಯುತ್ಕಣ ಜೋಡಣೆ [Kr] 4d10 5s2 5p5
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 7
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)4.933 g·cm−3
ಕರಗುವ ತಾಪಮಾನ386.85 K
(113.7 °C, 236.66 °ಎಫ್)
ಕುದಿಯುವ ತಾಪಮಾನ457.4 K
(184.3 °C, 363.7 °F)
ತ್ರಿಗುಣ ಬಿಂದು386.65 K, 12.1x10 kPa
ಕ್ರಾಂತಿಬಿಂದು819 K, 11.7 MPa
ಸಮ್ಮಿಲನದ ಉಷ್ಣಾಂಶ15.52 kJ·mol−1
ಭಾಷ್ಪೀಕರಣ ಉಷ್ಣಾಂಶ41.57 kJ·mol−1
ಉಷ್ಣ ಸಾಮರ್ಥ್ಯ(25 °C) 54.44 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 260 282 309 342 381 457
ಅಣುವಿನ ಗುಣಗಳು
ಸ್ಪಟಿಕ ಸ್ವರೂಪorthorhombic
ಆಕ್ಸಿಡೀಕರಣ ಸ್ಥಿತಿಗಳು±1, 5, 7
(strongly acidic oxide)
ವಿದ್ಯುದೃಣತ್ವ2.66 (Pauling scale)
ಅಣುವಿನ ತ್ರಿಜ್ಯ140 pm
ಅಣುವಿನ ತ್ರಿಜ್ಯ (ಲೆಖ್ಕಿತ)115 pm
ತ್ರಿಜ್ಯ ಸಹಾಂಕ133 pm
ವಾನ್ ಡೆರ್ ವಾಲ್ಸ್ ತ್ರಿಜ್ಯ198 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ವಿದ್ಯುತ್ ರೋಧಶೀಲತೆ(0 °C) 1.3x10Ω·m
ಉಷ್ಣ ವಾಹಕತೆ(300 K) 0.449 W·m−1·K−1
ಸಗಟು ಮಾಪನಾಂಕ7.7 GPa
ಸಿಎಎಸ್ ನೋಂದಾವಣೆ ಸಂಖ್ಯೆ7553-56-2
ಉಲ್ಲೇಖನೆಗಳು

ಅಯೊಡೀನ್ ಒಂದು ಅಲೋಹ ಮೂಲವಸ್ತು. ಇದು ೧೮೧೧ ರಲ್ಲಿ ಫ್ರಾನ್ಸ್ಬರ್ನಾರ್ಡ್ ಕುರ್ಟೋಯಿಸ್ ಎಂಬವರಿಂದ ಕಂಡುಹಿಡಿಯಲ್ಪಟ್ಟಿತು.[][] ಅದರೆ ೧೮೧೪ ರಲ್ಲಿ ಅದೇ ದೇಶದ ಜೋಸೆಫ್ ಗೆ ಲುಸಾಕ್ ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು. ಇದು ಥೈರಾಯಿಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.[] ಇದರ ಕೊರತೆಯಿಂದ ಗಳಗಂಡ (goitre) ಎಂಬ ರೋಗ ಬರುತ್ತದೆ.

ಅಯೊಡೀನ್ ಮೂಲವಸ್ತುವಿನ ಸಂಕೇತ I. ಪರಮಾಣು ಸಂಖ್ಯೆ 53. ಪರಮಾಣು ತೂಕ 126.904. ಎಲೆಕ್ಟ್ರಾನ್ ಜೋಡಣೆ 2, 8, 8, 18, 10, 7 ಅಥವಾ [Kr] 4d10 5s2 5p5. ಮೂಲವಸ್ತುಗಳ ಆವರ್ತಕ ಕೋಷ್ಟಕದಲ್ಲಿ ಏಳನೆಯ ಗುಂಪಿಗೆ ಸೇರಿರುವ ಮೂಲವಸ್ತು. ಈ ಗುಂಪಿನಲ್ಲಿರುವ ಎಲ್ಲ ಮೂಲವಸ್ತುಗಳನ್ನೂ ಹ್ಯಾಲೊಜಿನ್‍ಗಳು ಎಂದು ಕರೆಯುವುದು ವಾಡಿಕೆ. ಹ್ಯಾಲೋಸ್ Haslos ಎಂದರೆ ಗ್ರೀಕ್ ಭಾಷೆಯಲ್ಲಿ ಲವಣಗಳು ಎಂದರ್ಥ. ಹಾಗೆಯೇ ಜೀನ್ಸ್ genes ಎಂದರೆ ಉತ್ಪತ್ತಿ ಅಥವಾ ಜನನ ಎಂದರ್ಥ. ಈ ಗುಂಪಿನ ಮೂಲವಸ್ತುಗಳೆಲ್ಲವೂ ಲೋಹಗಳೊಂದಿಗೆ ಸಂಯೋಗ ಹೊಂದಿ ಲವಣಗಳನ್ನು ಉತ್ಪತ್ತಿಮಾಡುವುದರಿಂದಲೇ ಅವುಗಳನ್ನು ಹ್ಯಾಲೊಜಿನ್‍ಗಳೆಂದು ಕರೆಯುವುದು ವಾಡಿಕೆಯಾಯಿತು.

ಇತಿಹಾಸ

[ಬದಲಾಯಿಸಿ]

ನೆಪೊಲಿಯನ್ ಚಕ್ರವರ್ತಿಯ ಸೈನ್ಯಗಳಿಗೆ ಮದ್ದುಗುಂಡುಗಳನ್ನು ತಯಾರಿಸುವ ಕಾರ್ಯದಲ್ಲಿ ಅವಶ್ಯವಾದ ಪೊಟಾಸಿಯಂ ನೈಟ್ರೇಟ್ ಲವಣವನ್ನು ಉತ್ಪಾದಿಸುವ ಕೆಲಸದಲ್ಲಿ ನಿರತನಾಗಿದ್ದಾಗ ಬರ್ನಾರ್ಡ್ ತಾನು ಉಪಯೋಗಿಸುತ್ತಿದ್ದ ತಾಮ್ರದ ಪಾತ್ರೆಗಳು ತುಕ್ಕು ಹಿಡಿಯುವುದನ್ನು ಗಮನಿಸಿದ. ಅದಕ್ಕೆ ಕಾರಣ ಕೆಲವು ಸಮುದ್ರಸಸ್ಯಗಳ ಮೂಲದಿಂದ ತಾನು ತಯಾರಿಸುತ್ತಿದ್ದ ಸೋಡಿಯಂ ಕಾರ್ಬೊನೇಟ್‍ನಲ್ಲಿನ ಕಶ್ಮಲಗಳೆಂದು ತಿಳಿದುಬಂದಿತು. ಸಲ್ಫ್ಯೂರಿಕ್ ಆಮ್ಲವನ್ನು ಹಾಕಿದಾಗ ಕಶ್ಮಲ ಕಪ್ಪುಪುಡಿಯ ರೂಪದಲ್ಲಿ ಹೊರಬಿದ್ದಿತು. ಕಾಯಿಸಿದರೆ ವಿಶಿಷ್ಟ ನೇರಳೆಬಣ್ಣದ ಆವಿಯಾಗಿ ಹೊರಬೀಳುವುದನ್ನು ಗಮನಿಸಿ ತನ್ನ ಈ ನೂತನ ವಸ್ತುವಿಶೇಷವನ್ನು ಗೇ ಲ್ಯೂಸಾಕ್ ಎಂಬ ವಿಜ್ಞಾನಿಗೆ ಕಳುಹಿಸಿಕೊಟ್ಟ. ಆತ ಅದು ಒಂದು ಹೊಸ ಮೂಲವಸ್ತು ಎಂದು ಖಚಿತವಾಗಿ ನಿರ್ಧಾರ ಮಾಡಿ ಅಯೋಡೀನ್ ಎಂದು ಹೆಸರಿಟ್ಟ. ಗ್ರೀಕ್ ಭಾಷೆಯಲ್ಲಿ ನೇರಳೆಬಣ್ಣಕ್ಕೆ ಅಯೊಡೆಸ್ (Iodes) ಎಂಬ ಪದವಿರುವುದರಿಂದ ಅಯೊಡೀನ್ ಎಂದು ಹೆಸರಿಡಲು ಪ್ರೇರಕವಾಯಿತು. ಹೊಸ ಮೂಲವಸ್ತುವಿನ ಅನೇಕ ಸಂಯುಕ್ತಗಳನ್ನು ತಯಾರಿಸಿ, ತನ್ನ ಸಂಶೋಧನ ವರದಿಯನ್ನು 1914ರಲ್ಲಿ ಒಂದು ಕಿರುಹೊತ್ತಿಗೆಯ ರೂಪದಲ್ಲಿ ಪ್ರಕಟಿಸಿದ. ನಿಸರ್ಗದಲ್ಲಿ ಅಧಿಕ್ಯ ಪ್ರಮಾಣದ ದೃಷ್ಟಿಯಿಂದ ಅಯೊಡೀನ್ ಒಂದು ವಿರಳ ಮೂಲವಸ್ತು. ಇದು 19ನೆಯ ಶತಮಾನದ ಎರಡನೆಯ ದಶಕದಿಂದಲೂ ಸುಪರಿಚಿತ ಮೂಲವಸ್ತು.

ಉಪಯೋಗಗಳು

[ಬದಲಾಯಿಸಿ]

ಟಿಂಕ್ಚರ್ ಅಯೊಡೀನನ್ನು 1828 ರಿಂದಲೇ ಔಷಧಿಯಾಗಿ ಬಳಸಲಾಗುತ್ತಿದೆ. ಗಳಗಂಡರೋಗಕ್ಕೆ ಅಯೊಡೀನ್ ಒಂದು ಪರಿಣಾಮಕಾರಿ ಔಷಧಿ ಎಂದು 1819ರಲ್ಲಿಯೇ ತಿಳಿದಿತ್ತು. ರಾಸಾಯನಿಕ ಪ್ರಯೋಗ ಮಂದಿರಗಳಲ್ಲಿ ಅಯೊಡೀನಿನ ಮೌಲ್ಯ ಉತ್ಕೃಷ್ಟವಾದುದೆಂದು ಬಲು ಬೇಗ ಖಚಿತವಾಯಿತು. ಅನೇಕ ರಾಸಾಯನಿಕ ವಸ್ತು ವಿಶ್ಲೇಷಣ ಕ್ರಿಯೆಗಳಲ್ಲಿಯೂ ಇಂಗಾಲ ಸಂಯುಕ್ತಗಳ ಸಂಶ್ಲೇಷಣೆಯಲ್ಲಿಯೂ ಅಯೊಡೀನಿನ ಪಾತ್ರ ಬಲು ಹಿರಿದು. ಉದಾಹರಣೆಗೆ, ಡೈಕ್ತೋಮೈಟ್, ತಾಮ್ರ, ಕಬ್ಬಿಣ, ಸೋಡಿಯಂ ಥಯೋಸಲ್ಫೇಟ್‍ಗಳ ಪ್ರಮಾಣಮಾಪನದಲ್ಲಿಯೂ ಹಾಫ್‍ಮನ್ (1850), ವಿಲಿಯಂ ಸನ್ (1851), ವುರ್ಟ್ಸ್, (1855), ಗ್ರಿನಾರ್ಡ್ (1950) ರವರ ಸಂಶ್ಲೇಷಣೆಗಳಲ್ಲಿಯೂ ಅಯೊಡೀನ್ ಮತ್ತು ಅಯೊಡೀನ್ ಸಂಯುಕ್ತಗಳ ಉಪಯುಕ್ತತೆ ರಸಾಯನಶಾಸ್ತ್ರಜ್ಞರಿಗೆ ಮನದಟ್ಟಾಗಿರುವ ವಿಷಯ. ಛಾಯಾಚಿತ್ರಗ್ರಹಣದಲ್ಲಿ ಬೆಳ್ಳಿಯ ಅಯೊಡೈಡ್‍ನ ಉಪಯೋಗ 1839ರಿಂದಲೇ ವಾಣಿಜ್ಯ ಪ್ರಮಾಣದಲ್ಲಿ ಆರಂಭವಾಯಿತು. ಹೀಗೆ ಔಷಧಿಗಳ ತಯಾರಿಕೆ, ರಾಸಾಯನಿಕ ಸಂಶೋಧನೆ, ಛಾಯಾಚಿತ್ರಗ್ರಹಣ ಮುಂತಾದ ಬಹು ಬಳಕೆಯ ಉಪಯೋಗಗಳಿಂದ ಅಯೊಡೀನ್ ಒಂದು ಸುಪರಿಚಿತ ಮೂಲವಸ್ತುವಾಯಿತು.

ಅಯೊಡೀನ್ ಮತ್ತು ಅಯೊಡೈಡ್‍ಗಳ ಕೆಲವು ಇತರ ಉಪಯೋಗಗಳು-ಜ಼ರ್ಕೋನಿಯಂ, ಟೈಟಾನಿಯಂ, ಹ್ಯಾಫ್‍ನಿಯಂ ಮುಂತಾದ ಕೆಲ ಅತ್ಯುಷ್ಣ ಸಹಿಷ್ಟು ಲೋಹಗಳ ಶುದ್ಧೀಕರಣಕಾರ್ಯ (ವ್ಯಾನ್ ಆರ್ಕೆಲ್ ಮತ್ತು ಡಿಬೋಯರ್ ವಿಧಾನ). ಟೈಟಾನಿಯಂ ಮತ್ತು ಸ್ಟೇನ್‍ಲೆಸ್‍ಸ್ಟೀಲ್‍ಗಳಿಗೆ ಕೀಲುಎಣ್ಣೆ ತಯಾರಿಕೆ, ಸಂಧಿವಾತ, ಪರಂಗಿಹುಣ್ಣಿನರೋಗ (ಸಿಫಿಲಿಸ್) ಮತ್ತು ಚರ್ಮಸಂಬಂಧರೋಗಗಳಿಗೆ ಮದ್ದು ತಯಾರಿಕೆ, ವಿದ್ಯುತ್‍ದೀಪಗಳ ಗಾಜಿನ ಬುರುಡೆಯೊಳಗೆ ಮಿಶ್ರ ಮಾಡುವುದರಿಂದ ಟಂಗ್‍ಸ್ಟನ್ ತಂತಿಯ ಜೀವಮಾನದ ಏರಿಕೆ ಇತ್ಯಾದಿ. ಪ್ರಬಲ ದ್ರಾವಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಅಯೊಡೀನ್ ಸಂಕ್ಷಾರಕ ಮತ್ತು ವಿಷವಸ್ತು. ಆದರೆ ಮಾನವಶರೀರಕ್ಕೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಅಯೊಡೀನಿನ ಪೂರೈಕೆ ಅತ್ಯಾವಶ್ಯಕ. ಇಲ್ಲವಾದರೆ ಅನಾರೋಗ್ಯ. ಈ ಕಾರಣದಿಂದಲೇ ಊಟದ ಉಪ್ಪಿಗೆ ಸ್ವಲ್ಪ ಅಯೊಡೈಡ್ ವಿಶ್ರಮಾಡುವುದು ಸರ್ವಸಾಮಾನ್ಯ. ಎಮ್ಮೆ, ಹಸುಗಳು ಗರ್ಭವಾದಾಗ ಅವುಗಳ ಆಹಾರದಲ್ಲಿ ಅಯೊಡೈಡ್ ಕಡ್ಡಾಯವಾಗಿ ಇರಲೇಬೇಕು. ಇಲ್ಲವಾದರೆ ಜನಿಸಿದ ಕರುಗಳು ಪೂರ್ಣ ಆರೋಗ್ಯದಿಂದ ಇರುವುದಿಲ್ಲ. ಹಾಲು ಸಮೃದ್ಧಿಯಾಗಿ ಕೊಡಲು ಅಯೊಡೈಡ್ ಪ್ರೇರಕ. ಕೋಳಿಮೊಟ್ಟೆಗಳ ಉತ್ಪಾದನೆಯ ಏರಿಕೆಗೂ ಅಯೊಡೈಡ್ ಸಹಾಯಕಾರಿ. ಕೃತಕಮಳೆ ಬರಿಸುವ ಪ್ರಯೋಗಗಳಲ್ಲಿ ಮೋಡಗಳು ನೀರಾಗುವಂತೆ ಮಾಡಲು ಬೆಳ್ಳಿಯ ಅಯೊಡೈಡ್‍ನ ದೂಳನ್ನು ಎರಚುವರು. ಕುಡಿಯುವ ನೀರು, ಈಜುಕೊಳದ ನೀರು ಇವೆಲ್ಲವನ್ನು ಶುದ್ಧೀಕರಿಸಲು ಅಯೊಡೀನ್ ಉಪಯೋಗಿಸುವರು.

ದೊರಕುವಿಕೆ

[ಬದಲಾಯಿಸಿ]

ಪ್ರಕೃತಿಯಲ್ಲಿ ಇದು ಮೂಲವಸ್ತು ಸ್ವರೂಪದಲ್ಲಿ ಎಲ್ಲಿಯೂ ದೊರೆಯುವುದಿಲ್ಲ. ಇತರ ಹ್ಯಾಲೊಜಿನ್‍ಗಳಂತೆ ತನ್ನ ರಾಸಾಯನಿಕ ಚಟುವಟಿಕೆಯ ಪರಿಣಾಮವಾಗಿ ಸಂಯುಕ್ತಗಳ ರೂಪದಲ್ಲೇ ದೊರಕುವುದು. ಇವುಗಳಲ್ಲಿ ಮುಖ್ಯವಾದುವು ಆಯೊಡೈಡ್ ಮತ್ತು ಅಯೊಡೇಟ್‍ಗಳು. ಅಯೊಡೀನಿನ ಪ್ತಕೃತಿಮೂಲಗಳಲ್ಲಿ ಅಗ್ರಸ್ಥಾನ ದೊರಕಬೇಕಾದುದು ಸಮುದ್ರದ ಕೆಲ ವಿಶಿಷ್ಟಜಾತಿಯ ಸಸ್ಯವರ್ಗಕ್ಕೆ. ಅವು ಸಮುದ್ರದ ನೀರಿನಲ್ಲಿ ಲೀನವಾಗಿರುವ ಅಯೊಡೀನನನು ತಮ್ಮಲ್ಲಿ ಶೇಖರಿಸಿಕೊಳ್ಳುವ ಒಂದು ವಿಶಿಷ್ಟ ಲಕ್ಷಣ ಹೊಂದಿವೆ. ಇವುಗಳಿಂದಲೇ ಮೊದಲು ಕೈಗಾರಿಕಾಪ್ರಮಾಣದಲ್ಲಿ ಅಯೊಡೀನನ್ನು ಪ್ರತ್ಯೇಕಿಸಿದುದು. ಈಗ ಇತರ ಉತ್ಕೃಷ್ಟ ಮೂಲಗಳು ತಿಳಿದುಬಂದಿವೆಯಾದರೂ, ಜಪಾನ್ ದೇಶ ಈಗಲೂ ಗಣನೀಯ ಪ್ರಮಾಣದಲ್ಲಿ ಈ ಕೈಗಾರಿಕೆಯನ್ನು ಪೋಷಿಸುತ್ತಿದೆ. ಅತ್ಯಂತ ಪ್ರಮುಖ ಪ್ರಕೃತಿ ಮೂಲ ಈಗ ಚಿಲಿದೇಶದಲ್ಲಿ ದೊರಕುವ ನೈಟ್ರೇಟ್ ಲವಣಗಳ ನಿಕ್ಷೇಪ. ಈ ನಿಕ್ಷೇಪಗಳು ಚಿಲಿ ಸಾಲ್ಟ್ ಪೀಟರ್ ಅಥವಾ ಕ್ಯಾಲಿಚೆ ಎಂದು ಜಗತ್ಪ್ರಸಿದ್ಧವಾಗಿವೆ. ಮುಖ್ಯವಾಗಿ ಸೋಡಿಯಂ ನೈಟ್ರೇಟ್ ಲವಣವಾದ ಖ ನಿಕ್ಷೇಪದಲ್ಲಿ ಅಯೊಡೀನ್ ಅಯೊಡೇಟ್‍ಗಳ ಸಂಯುಕ್ತರೂಪದಲ್ಲಿದೆ. 1840ರಲ್ಲೇ ತಿಳಿದುಬಂದ ಈ ವಿಷಯವನ್ನು, 1868ರಲ್ಲಿ ಮೊದಲು ಉಪಯೋಗಿಸಿದರು. ಚಿಲಿದೇಶದಿಂದ ಅಯೊಡೀನಿನ ರಫ್ತುವ್ಯಾಪಾರ ಆರಂಭವಾಯಿತು. ಈಗಲೂ ಪ್ರಪಂಚದಲ್ಲೆಲ್ಲ ಅತಿಮುಖ್ಯ ಅಯೊಡೀನಿನ ಉತ್ಪಾದನರಾಷ್ಟ್ರ ಚಿಲಿದೇಶ. ಅಯೊಡೀನಿನ ಮತ್ತೊಂದು ಮೂಲ ಪೆಟ್ರೋಲಿಯಂ ಎಣ್ಣೆ ಬಾವಿಗಳಿಂದ ಹೊರಬೀಳುವ ಉಪ್ಪು ನೀರು ಎಂದು 1926ರಲ್ಲಿ ತಿಳಿಯಿತು.

ಉತ್ಪಾದನೆ

[ಬದಲಾಯಿಸಿ]

ಈ ಮೂರು ಪ್ರಮುಖ ಪ್ರಕೃತಿಮೂಲಗಳಿಂದಲೂ ಅಯೊಡೀನನ್ನು ವಿವಿಧ ರಾಸಾಯನಿಕ ಕ್ರಮಗಳಿಂದ ಪಡೆಯುತ್ತಾರೆ. ಮೂಲತಃ ಅಯೊಡೈಡನ್ನು ಉತ್ಕರ್ಷಿಸುವುದು ಅಥವಾ ಅಯೊಡೇಟನ್ನು ಅಪಕರ್ಷಿಸುವುದು ಇವೇ ಆ ಕ್ರಮಗಳು. ಸಾಗರಗಳ ನೀರಿನಲ್ಲಿ ಅಯೊಡೀನಿನ ಪ್ರಮಾಣಾಂಶ ಅತ್ಯಲ್ಪವಾದರೂ (ಸುಮಾರು ದಶಲಕ್ಷಕ್ಕೆ 0.05 ಭಾಗ) ಲ್ಯಾಮಿನೇರಿಯ ಮತ್ತು ಫ್ಯೂಕಸ್ ಕುಟುಂಬಕ್ಕೆ ಸೇರಿದ ಕೆಲವು ಕಂದು ಬಣ್ಣದ ವಿಶಿಷ್ಟ ಸಸ್ಯವರ್ಗಗಳು ಅಯೊಡೀನನ್ನು ಗಣನೀಯ ಪ್ರಮಾಣದಲ್ಲಿ ಶೇಖರಿಸಬಲ್ಲವು. ಈ ಸಸ್ಯಗಳನ್ನು ಕಿತ್ತು ಒಣಗಿಸಿ ಅಯೊಡೀನ್ ನಾಶವಾಗದಂತೆ ಎಚ್ಚರದಿಂದ ಸುಟ್ಟು ಬೂದಿಮಾಡುವುದು ಮೊದಲ ಹಂತ. ಅನಂತರ ಬೂದಿಯನ್ನು ನೀರಿನಲ್ಲಿ ಕದಡಿ ಕಬ್ಬಿಣದ ಪಾತ್ರೆಗಳಲ್ಲಿ ನೀರಿನ ಹಬೆಯಿಂದ ಕಾಯಿಸಿದರೆ, ದ್ರಾವಣ ಕ್ರಮೇಣ ಜಲಾಂಶವನ್ನು ಕಳೆದುಕೊಂಡು ಪ್ರಬಲವಾಗುತ್ತದೆ. ಆಗ ಸಲ್ಫೇಟ್ ಕ್ಲೋರೈಡ್‍ಗಳು ಮೊದಲು ಘನೀಭೂತವಾಗಿ, ಉಳಿಕೆಯ ದ್ರಾವಣದಲ್ಲಿ ಅಯೊಡೈಡ್ ಲೀನವಾಗಿಯೇ ಇರುತ್ತದೆ. ಈ ಉಳಿಕೆಯ ದ್ರವಣಕ್ಕೆ ಸಲ್ಫ್ಯೂರಿಕ್ ಆಮ್ಲವನ್ನು ಹಾಕುವುದರಿಂದ ದ್ರಾವಣದಲ್ಲಿನ ಸಲ್ಫೈಡ್ ಸಂಯುಕ್ತಗಳಿಂದ ಗಂಧಕ ಹೊರಬೀಳುವುದು. ಅನಂತರ ಮೇಲಿನ ತಿಳಿದ್ರಾವಣವನ್ನು ಮಾತ್ರ ಸಲ್ಫ್ಯೂರಿಕ್ ಆಮ್ಲ ಮತ್ತು ಮ್ಯಾಂಗನೀಸ್ ಡೈ ಆಕ್ಸೈಡ್‍ಗಳೊಡನೆ ಬೆರೆಸಿ, ಕಾಯಿಸಿ, ಬಟ್ಟಿ ಇಳಿಸಿದರೆ, ಅಯೊಡೀನ್ ಆವಿಯಾಗಿ ಹೊರಬಿದ್ದು ತಂಪಾದೊಡನೆ ಘನೀಭೂತವಾಗುವುದು. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಈ ಕೆಳಗಿನ ಸಮೀಕರಣದ ರೂಪದಲ್ಲಿ ಬರೆಯಬಹುದು.

2Nal + 3H2SO4 + MnO2 ⇄ I2 + 2NaHSO4 + MnSO4 + 2H2O

ಚಿಲಿ ನೈಟ್ರೇಟ್ ಲವಣನಿಕ್ಷೇಪಗಳಲ್ಲಿ ಸೋಡಿಯಂ ಅಯೊಡೇಟ್ ರೂಪದಲ್ಲಿ ಅಯೊಡೀನ್ ಇದೆ. ನೀರಿನಲ್ಲಿ ಸೋಡಿಯಂ ಅಯೊಡೇಟ್ ಹೆಚ್ಚಾಗಿ ಲೀನವಾಗುವ ಸ್ವಭಾವಿ. ಆದ್ದರಿಂದ ನೈಟ್ರೇಟ್ ಲವಣಗಳನ್ನು ಪುಡಿಮಾಡಿ ನೀರಿನಲ್ಲಿ ಕರಗಿಸಿ ಅನಂತರ ದ್ರಾಣವನ್ನು ಸ್ಫಟಿಕೀಕರಣಕ್ಕೊಳಪಡಿಸಿದರೆ ಸೋಡಿಯಂ ನೈಟ್ರೇಟ್ ಲವಣ ಮೊದಲು ಹೊರಬೀಳುತ್ತದೆ. ಉಳಿಕೆಯ ದ್ರಾವಣದಲ್ಲಿ ಈಗ ಸೋಡಿಯಂ ಅಯೊಡೇಟ್ ಅಂಶ ಹೆಚ್ಚಾಗಿರುತ್ತದೆ. ಆ ದ್ರಾವಣವನ್ನು ಸೂಕ್ತ ಪ್ರಮಾಣದ ಸೋಡಿಯಂ ಹೈಡ್ರೊಜನ್ ಸಲ್ಫೈಟ್‍ನೊಡನೆ ಬೆರೆಸಿ ಅಪಕರ್ಷಿಸಿದರೆ ಅಯೊಡೀನ್ ಘನರೂಪದಲ್ಲಿ ಬೇರೆಯಾಗುತ್ತದೆ.[]

2NaIO3 + 5NaHSO3 → 3NaHSO4 + 2Na2SO4 + I2 ↓ + H2O

ಅದನ್ನು ನೀರಿನಲ್ಲಿ ತೊಳೆದು ಒತ್ತಡಕ್ಕೆ ಒಳಪಡಿಸುವುದರಿಂದ ದಟ್ಟ ಹರಳುಗಳು ದೊರೆಯುತ್ತವೆ. ಈ ಘನ ಅಯೊಡೀನನ್ನು ಕಾಯಿಸಿ ಬಟ್ಟಿ ಇಳಿಸುವುದರ ಮೂಲಕ ಬಹು ಶುದ್ಧ ಅಯೊಡೀನನ್ನು ಪಡೆಯುವರು.

ಪೆಟ್ರೋಲಿಯಂ ಎಣ್ಣೆ ಬಾವಿಗಳಲ್ಲಿ ದೊರಕುವ ಉಪ್ಪುನೀರಿನಿಂದ ಅಯೊಡೀನನ್ನು ವಿವಿಧರೀತಿಯಲ್ಲಿ ಪಡೆಯಲು ಸಾಧ್ಯ. ಸಮುದ್ರದ ನೀರಿನಿಂದ ಬ್ರೋಮಿನ್ ಮೂಲವಸ್ತುವನ್ನು ಪಡೆಯುವ ವಿಧಾನವನ್ನು ಇಲ್ಲಿಯೂ ಅನುಸರಿಸಬಹುದು. ಉಪ್ಪುನೀರನ್ನು ಕಾಯಿಸಿ ಜಲಾಂಶವನ್ನು ಕಡಿಮೆಮಾಡಿ ಫಲಿತದ್ರಾವಣದೊಳಕ್ಕೆ ಕ್ಲೋರಿನ್ ಅನಿಲವನ್ನು ಹಾಯಿಸಿದರೆ ಅಯೊಡೀನ್ ಹೊರಬೀಳುವುದು.[][]

2NaI + Cl2 → 2NaCl + I2

ಫಲಿತದ್ರಾವಣವನ್ನು ತಾಮ್ರದ ತಂತಿಗಳ ಕಟ್ಟುಗಳ ಮೇಲೆ ಹಾಯಿಸಿದರೆ, ಅದರಲ್ಲಿನ ತಾಮ್ರ (I) ತಾಮ್ರದ ಅಯೊಡೈಡ್ (ಕ್ಯುಪ್ರಸ್ ಅಯೊಡೈಡ್) ಆಗುತ್ತದೆ. ಇದು ನೀರಿನಲ್ಲಿ ಲೀನವಾಗುವುದಿಲ್ಲ. ತಂತಿಯ ಕಟ್ಟುಗಳನ್ನು ಆಗಾಗ್ಗೆ ಒದರುವುದರ ಮೂಲಕ ಅದರ ಮೇಲೆ ಶೇಖರವಾಗಿರುವ ತಾಮ್ರ (I) ಅಯೊಡೈಡನ್ನು ಪ್ರತ್ಯೇಕಿಸಿ, ಸೋಸಿ, ತೊಳೆದು, ಒಣಗಿಸಿ ಹಾಗೆಯೇ ಉಪಯೋಗಿಸಬಹುದು ಅಥವಾ ಎಣ್ಣೆ ಬಾವಿಗಳಿಂದ ದೊರೆತ ಉಪ್ಪುನೀರಿಗೆ ಬೆಳ್ಳಿಯ ನೈಟ್ರೇಟ್(ಸಿಲ್ವರ್ ನೈಟ್ರೇಟ್) ದ್ರಾವಣವನ್ನು ಮಿಶ್ರಮಾಡುವುದರಿಂದ ಹಳದಿಬಣ್ಣದ ಘನ ಬೆಳ್ಳಿಯ ಅಯೊಡೈಡ್ ಹೊರಬೀಳುತ್ತದೆ. ಬೆಳ್ಳಿಯ ಅಯೊಡೈಡನ್ನು ಶೋಧಿಸಿ ಕಬ್ಬಿಣ (I) ಅಯೊಡೈಡ್ ದ್ರಾವಣಗಳು ಉತ್ಪಾದಿತವಾಗುತ್ತವೆ. ಪುನರ್ಜನಿತ ಬೆಳ್ಳಿಯನ್ನು ಮತ್ತೆ ಉಪಯೋಗಿಸಬಹುದು. ಕಬ್ಬಿಣ (I) ಅಯೊಡೈಡ್ ದ್ರಾವಣದೊಳಕ್ಕೆ ಕ್ಲೋರಿನ್ ಅನಿಲವನ್ನು ಹಾಯಿಸುವುದರಿಂದ ಅಯೊಡೀನನ್ನು ಬೇರ್ಪಡಿಸಬಹುದು.

AgI + Fe → FeI + Ag

ಪುನರ್ಜನಿತ ಬೆಳ್ಳಿಯನ್ನು ಮತ್ತೆ ಉಪಯೋಗಿಸಬಹುದು. ಕಬ್ಬಿಣ (I) ಅಯೊಡೈಡ್ ದ್ರಾವಣದೊಳಕ್ಕೆ ಕ್ಲೋರಿನ್ ಅನಿಲವನ್ನು ಹಾಯಿಸುವುದರಿಂದ ಅಯೊಡೀನನ್ನು ಬೇರ್ಪಡಿಸಬಹುದು.[]

ಗುಣಗಳು

[ಬದಲಾಯಿಸಿ]

ಅಯೋಡೀನ್ ಗುಂಪಿನ ಮೂಲವಸ್ತುಗಳ ಪೈಕಿ ಇದೊಂದೇ ಘನ ಮೂಲವಸ್ತು. ಘನವಸ್ತುವಿನ ಸಾಪೇಕ್ಷಸಾಂದ್ರತೆ 4.94. ಘನ ರೂಪದಲ್ಲಿ ಹೆಚ್ಚು ಕಡಿಮೆ ಊದಾ ಕಪ್ಪು ಬಣ್ಣವಾಗಿದ್ದು, ಹೊಳಪಿನಿಂದ ಕೂಡಿ, ಲೋಹಗಳಂತೆ ಕಾಂತಿಯುತವಾಗಿದೆ. ಹ್ಯಾಲೊಜಿನ್‍ಗಳಲ್ಲಿ ಇದು ಉತ್ತಮ ವಿದ್ಯುದ್ವಾಹಕವೂ ಹೌದು. ಕಾಯಿಸಿದರೆ (113.70) ಸೆಂ.ಗ್ರೇ.ನಲ್ಲಿ ದ್ರವವಾಗಿ, (1830) ಸೆಂ.ಗ್ರೇ.ನಲ್ಲಿ ಕುದಿಯುತ್ತದೆ. ಆದರೆ ಕಾಯಿಸಿದಾಗ ಘನವಸ್ತುವಾಗಿ ನೇರಳೆಬಣ್ಣದ ಭಾರವಾದ (ಗಾಳಿಗಿಂತ 10 ಪಟ್ಟು ಭಾರ) ಆವಿಯಾಗುತ್ತದೆ. ನೀರಿನಲ್ಲಿ ಬಲು ಸ್ವಲ್ಪ ಪ್ರಮಾಣದಲ್ಲಿ ಲೀನವಾಗುತ್ತದೆ (ಸುಮಾರು 0.33 ಗ್ರಾಂ 1ಲೀಟರ್‍ಗೆ, (250) ಸೆಂ.ದ್ರೇ.). ಆದರೆ ಪೊಟಾಸಿಯಂ ಅಯೊಡೈಡ್‍ನ ಸಾಂದ್ರ ಅಥವಾ ಪ್ರಬಲ ದ್ರಾವಣದಲ್ಲಿ ಸುಲಭವಾಗಿ ಕರಗಿ ನೇರಳೆಬಣ್ಣದ ದ್ರಾವಣ ಉಂಟಾಗುತ್ತದೆ. ಅದಕ್ಕೆ ಕಾರಣ ಈ ಕೆಳಗೆ ನಿರೂಪಿಸಿರುವ ರಾಸಾಯನಿಕ ಕ್ರಿಯೆ ಎಂದು ಭಾವಿಸಲಾಗಿದೆ.

I2 + I → I3

ಇಂಗಾಲ ಸಂಯುಕ್ತ ವಿಲೀನಕಾರಿಗಳಾದ ಈಥರ್, ಕ್ಲೋರೋಫಾರಂ, ಆಲ್ಕೊಹಾಲ್ ಮುಂತಾದವುಗಳಲ್ಲಿ ಅಯೋಡೀನ್ ಸುಲಭವಾಗಿ ಲೀನವಾಗಿ ಕೆಲವದರಲ್ಲಿ ನೇರಳೆ ಮತ್ತು ಕೆಲವದರಲ್ಲಿ ಕಂದು ಕೆಂಪುಬಣ್ಣದ ದ್ರಾವಣಗಳುಂಟಾಗುತ್ತವೆ.

ಅಯೊಡೀನ್ ಆವಿ ಸಾಧಾರಣವಾಗಿ ದ್ವಿಪರಮಾಣುಗಳ ಕೂಟದಿಂದಾಗುವ (I2) ಅಣುಗಳ ರೂಪದಲ್ಲಿದೆ. ಆದರೆ ಉಷ್ಣತೆ ಹೆಚ್ಚಿದಂತೆಲ್ಲ ಏಕಪರಮಾಣು ರೂಪಾಂತರ ಹೆಚ್ಚಾಗುವುದು. (I2 ⇄ 2I), ಪ್ರಕೃತಿಮೂಲ ಅಯೊಡೀನ್ ಪರಮಾಣುಗಳು ಸ್ಥಿರ. ಪರಮಾಣು ತೂಕ (127) ರ ಸಮಸ್ಥಾನಿ ರಚಿತ. ಆದರೆ ಕೃತಕವಾಗಿ ಬಹುಸಂಖ್ಯಾತ. ಪರಮಾಣು ತೂಕ (119)ರಿಂದ ಹಿಡಿದು (139)ರ ವರೆಗಿನ ಎಲ್ಲ ಸಮಸ್ಥಾನಿಗಳನ್ನೂ ನಿರ್ಮಿಸಲಾಗಿದೆ. ಅವೆಲ್ಲ ಅಸ್ಥಿರ, ವಿಕಿರಣಶೀಲ ಸಮಸ್ಥಾನಿಗಳು. ಅವುಗಳ ಪೈಕಿ ಪರಮಾಣು ತೂಕ (131)ರ, ಅರ್ಧಾಯುಷ್ಯ (8) ದಿವಸಗಳಿರುವ ಸಮಸ್ಥಾನಿಯೇ ಬಹು ಮುಖ್ಯವಾದುದು.

ಇದರ ಉಪಯೋಗಗಳು: ಥೈರಾಯಿಡ್ ಗ್ರಂಥಿಯ ಸಂಬಂಧಿತ ರೋಗರುಜಿನಗಳ ಗುರುತಿಸುವಿಕೆ, ನಿವಾರಣೆ ಮುಂತಾದ ಸಂಶೋಧನೆಗಳಲ್ಲಿ ಅದರ ಪಾತ್ರ ಅಮೂಲ್ಯವಾದುದು. ಅದನ್ನು ಛಾಯಾಚಿತ್ರ ಗ್ರಹಣ ಪಟಲಗಳ ದಪ್ಪವನ್ನು ಅಳೆದು ನಿಯಂತ್ರಿಸುವುದರಲ್ಲೂ ಉಪಯೋಗಿಸುವರು. ಪರಮಾಣು ವಿದಳನಕ್ರಿಯೆಯಿಂದ I131 ಸಮಸ್ಥಾನಿಗಳನ್ನು ಹೊಂದಬಹುದು.

ರಾಸಾಯನಿಕವಾಗಿ ಅಯೊಡೀನ್ ಒಂದು ತೀವ್ರ ಚಟುವಟಿಕೆಕಾರಿ ಅಲೋಹ. ಸೆಲೇನಿಯಂ, ಗಂಧಕ, ಕೋಬಾಲ್ಟ್ (111), ಹೀಲಿಯಂ ಗುಂಪಿನ ವಿರಳ ಜಡನಿಲಗಳ ಹೊರತು ಮಿಕ್ಕೆಲ್ಲ ಮೂಲವಸ್ತುಗಳೊಡನೆಯೂ ಸುಲಭವಾಗಿ ಸಂಯೋಗಹೊಂದುವ ಸಾಮರ್ಥ್ಯಹೊಂದಿದೆ. ಪ್ಲಾಟಿನಂ ಹೊರತು ಮಿಕ್ಕೆಲ್ಲ ಲೋಹಗಳೊಡನೆಯೂ ಸಂಯೋಗ ಹೊಂದಬಲ್ಲದು. ಗಾಜು, ಪಿಂಗಾಣಿ, ಎನಾಮಲ್, ಆವೃತತುಕ್ಕು, ಮರ, ಇಂಗಾಲ, ಪಾಲಿಥೀನ್ ಶ್ರೇಣಿಯ ಕೆಲ ಕೃತಕ ವಸ್ತುಗಳು-ಇವು ಅಯೊಡೀನಿನೊಡನೆ ರಾಸಾಯನಿಕ ಕ್ರಿಯೆಗೊಳಗಾಗುವುದಿಲ್ಲ. ಆದುದರಿಂದ ಅಯೊಡೀನ್ ಶೇಖರಣೆ ಮತ್ತು ಸಾಗಾಣಿಕೆಗೆ ಮೇಲಿನ ವಸ್ತುಗಳಿಂದ ಮಾಡಿದ ಡಬ್ಬ, ಶೀಷೆ ಅಥವಾ ಡ್ರಮ್‍ಗಳನ್ನು ಉಪಯೋಗಿಸಬಹುದು. (-1,) (+1,) (+3,) (+4,) (+5,) (+7,) ಹೀಗೆ ವಿವಿಧ ಸಂಯೋಗಶಕ್ತಿಯನ್ನು ಪ್ರದರ್ಶಿಸಬಲ್ಲದು. ಉದಾಹರಣೆಗೆ, KI, ICl, ICl3, IO2, IF5, I2O5, IF7, Na5IO6 ಇತ್ಯಾದಿ. ಹ್ಯಾಲೊಜಿನ್‍ಗಳ ಪೈಕಿ ರಾಸಾಯನಿಕವಾಗಿ ಇದೇ ಅತ್ಯಂತ ಕಡಿಮೆ ಚಟುವಟಿಕೆಯ ಅಲೋಹ. ಆಮ್ಲಗಳ ಮಾಧ್ಯಮದಲ್ಲಿ ಅಯೊಡೀನ್ ಒಂದು ಸೌಮ್ಯ ಉತ್ಕರ್ಷಣಕಾರಿ. ಅಮೋನಿಯದೊಂದಿಗೆ ಸಾರಜನಕದ ಟ್ರೈ ಅಯೊಡೈಡ್ ಎಂಬ ಬಹು ಅಪಾಯಕಾರಿ ಆಸ್ಫೋಟನ ಸಂಯುಕ್ತ ಉಂಟಾಗುತ್ತದೆ. ಪರಮಾಣು ತೂಕ, ಗಾತ್ರ ಎಲ್ಲದರಲ್ಲೂ ಹಿರಿದಾದ ಹ್ಯಾಲೊಜಿನ್ ಮೂಲವಸ್ತು ಅಯೊಡೀನ್. ಸ್ವಲ್ಪಮಟ್ಟಿಗೆ ಲೋಹಪ್ರವೃತ್ತಿಯನ್ನೂ ಪ್ರದರ್ಶಿಸುವುದು. ಪಾದರಸ, ರಂಜಕ, ಆಂಟಿಮೊನಿಗಳೊಂದಿಗೆ ನೇರವಾಗಿ ಸಂಯೋಗಹೊಂದುವುದು, ಪಾದರಸದ ಅಯೊಡೈಡ್ ಪೊಟಾಸಿಯಂ ಅಯೊಡೈಡ್ ದ್ರಾವಣದಲ್ಲಿ ಲೀನವಾಗಿ ನೆಸಲರ್‌ನ ಕಾರಕ ಎಂಬ ಅಮೋನಿಯವನ್ನು ಗುರುತಿಸಲು ಸಹಾಯಕಾರಿಯಾದ ದ್ರಾವಣವನ್ನು ಕೊಡುತ್ತದೆ. ಇತರ ಹ್ಯಾಲೊಜಿನ್‍ಗಳಾದ ಫ್ಲೊರಿನ್, ಕ್ಲೋರಿನ್ ಮತ್ತು ಬ್ರೋಮಿನ್‍ಗಳೊಡನೆ ನೇರವಾಗಿ ಸಂಯೋಗ ಹೊಂದಬಲ್ಲದು. ಪರಿಣಾಮ ಅಂತರ್ ಹ್ಯಾಲೊಜಿನ್ ಸಂಯುಕ್ತಗಳ ಉದ್ಬವ. ಆಮ್ಲಜನಕದೊಡನೆ ನೇರವಾಗಿ ಸಂಯೋಗ ಹೊಂದಲಾರದ್ದಾದರೂ ಬಳಸುಕ್ರಮದಿಂದ IO2, I4O9, I2O5, I2O3 ಮತ್ತು I2O7 ಹೀಗೆ ವಿವಿಧ ಆಕ್ಸೈಡ್‍ಗಳನ್ನು ತಯಾರಿಸಲಾಗಿದೆ.

ಅಯೊಡೀನಿನ ಸಂಯುಕ್ತಗಳಲ್ಲೆಲ್ಲ ಅತಿ ಮುಖ್ಯವಾದುದು ಪೊಟಾಸಿಯಂ ಅಯೊಡೈಡ್. ಕಬ್ಬಿಣ (II) ಅಯೊಡೈಡ್ ಅಥವಾ ತಾಮ್ರ (I) ಅಯೊಡೈಡ್ ಮತ್ತು ಪೊಟಾಸಿಯಂ ಕಾರ್ಬೊನೇಟ್‍ಗಳನ್ನು ರಾಸಾಯನಿಕ ಕ್ರಿಯೆಗೊಳಪಡಿಸಿ ಪೊಟಾಸಿಯಂ ಅಯೊಡೈಡ್ ತಯಾರಿಸುವರು.

2FeI2 + 2K2CO3 + ½O2 → 4KI + Fe2O3 + 2CO2

2CuI + K2CO3 → 2KI + CO2 + Cu2

ಅಯೋಡಿನ್‍ನ್ನು ಗುರುತಿಸುವ ಪರೀಕ್ಷೆಗಳು

[ಬದಲಾಯಿಸಿ]

ಪಿಷ್ಟ ಪದಾರ್ಥದೊಂದಿಗೆ ಅಯೊಡೀನ್ ಅತ್ಯಲ್ಪ ಪ್ರಮಾಣದಲ್ಲಿದ್ದರೂ ಒಂದು ವಿಶಿಷ್ಟರೀತಿಯಲ್ಲಿ ಕ್ರಿಯೆಹೊಂದಿ ದಟ್ಟ ನೀಲಿಬಣ್ಣವನ್ನು ಉಂಟುಮಾಡುತ್ತದೆ. ಈ ಪ್ರಯೋಗವನ್ನು ಅಯೊಡೀನ್ ಗುರುತಿಸಲು ಉಪಯೋಗಿಸುತ್ತಾರೆ.[] ಕಾಯಿಸಿದಾಗ ತನ್ನದೇ ಆದ ವಿಶಿಷ್ಟ ನೇರಳೆಬಣ್ಣದ ಅನಿಲಸ್ವರೂಪಕ್ಕೆ ಸುಲಭವಾಗಿ ಪರಿವರ್ತನೆ ಹೊಂದುವುದು, ಅನೇಕ ಇಂಗಾಲ ಸಂಯುಕ್ತಗಳಲ್ಲಿ ಲೀನವಾಗಿ ನೇರಳೆಬಣ್ಣದ ದ್ರಾವಣ ಉತ್ಪಾದನೆ, ಆಲ್ಕೊಹಾಲ್ ಮತ್ತು ಸೋಡಾಕ್ಷರದೊಡನೆ ಮಿಶ್ರಿತವಾದಾಗ ತನ್ನದೇ ಆದ ವಿಶಿಷ್ಟ ವಾಸನೆಯುಳ್ಳ ಅಯೊಡೋಫಾರಂ ಉತ್ಪಾದನೆ-ಇವೂ ಕೂಡ ಅಯೊಡೀನನ್ನು ಗುರುತಿಸಲು ಉಪಯೋಗಿಸುವ ಸಾಮಾನ್ಯ ಪರೀಕ್ಷಾಕ್ರಮಗಳು. ಬೆಳ್ಳಿಯ ನೈಟ್ರೇಟ್‍ನೊಡನೆ ಹಳದಿಬಣ್ಣದ ಬೆಳ್ಳಿಯ ಅಯೊಡೈಡ್ ಬೇರ್ಪಡುವಿಕೆಯ ಅಯೊಡೈಡ್‍ಗಳ ಗುರುತಿಸುವಿಕೆಯಲ್ಲಿ ಬಳಕೆಯಲ್ಲಿರುವ ಒಂದು ಸುಪರಿಚಿತ ಪರೀಕ್ಷಾ ವಿಧಾನ. ಈ ಕ್ರಿಯೆ ಬೆಳ್ಳಿ ಅಥವಾ ಅಯೊಡೈಡ್‍ನ ಪ್ರಮಾಣಮಾಪನೆಗೂ ಆಧಾರ.[][೧೦]

ವೈದ್ಯಶಾಸ್ತ್ರದಲ್ಲಿ ಅಯೋಡಿನ್ ಬಳಕೆ

[ಬದಲಾಯಿಸಿ]

ಜೈವಿಕ ರಾಸಾಯನಿಕ ತಯಾರಿಕೆಯಲ್ಲಿ ಅಯೊಡೀನ್ ಬಳಕೆಯಲ್ಲಿದೆ. ತಿಂದ ಆಹಾರ ಅರಗಿ ರಕ್ತಗತವಾಗಿ ಮೈಬಳಸಿಕೊಂಡು ಬಿಡುವುದರಲ್ಲಿ ನೆರವಾಗುವ ಗುರಾಣಿಕ (ಥೈರಾಯ್ಡ್) ಗ್ರಂಥಯ ರಸದ ತಯಾರಿಕೆಗೆ ಬೇಕಿರುವುದರಿಂದ ಆರೋಗ್ಯವಂತನಲ್ಲೂ ಅಯೊಡೀನ್ ಮುಖ್ಯ. ಹಿಮಾಲಯದ ತಪ್ಪಲುವಾಸಿಗಳಲ್ಲಿ ಸಾಮಾನ್ಯವಾಗಿರುವಂತೆ, ಆಹಾರದಲ್ಲಿ ಅಯೊಡೀನ್ ಸಾಲದಿದ್ದರೆ, ಒಳ್ನಾಡಿಕ ಗಳಗಂಡ (ಎಂಡೆಮಿಕ್ ಗಾಯ್ಟರ್), ಲೋಳುಬ್ಬರ (ಮಿಕ್ಸಿಡೀಮ) ರೋಗಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ಅಡಿಗೆ ಉಪ್ಪಿನಲ್ಲಿ ದಿನವೂ ಬೇಕಿರುವಷ್ಟು ಅಯೊಡೀನ್ ಇರುವುದು. ಅಯೊಡೀನ್ ದ್ರಾವಣ ಏಕಾಣುಜೀವಿಮಾರಕ, ಅಣಬಡಮಾರಕ, ಆದ್ದರಿಂದ, ಚರ್ಮವನ್ನು ಜೀವಮಿಡಿ ಮಾಡಲು (ಸ್ಟರಿಲೆಸ್) ಶಸ್ತ್ರವೈದ್ಯರಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಇದರ ಪ್ರಮಾಣ ಮಿತಿಮೀರಿದರೆ, ತಗುಲಿದ ಭಾಗಗಳನ್ನು ಸುಟ್ಟುಹಾಕುವುದು. ಪುಪ್ಪಸ ರೋಗಗಳಲ್ಲಿ ತೆಮಡೆಯನ್ನು ಸಡಿಲಿಸಿ ಹೊರಗೆಡವಲೂ, ಕೀಲು ನೋವುಗಳಲ್ಲೂ ಅಯೊಡೈಡುಗಳು ನೆರವಿನ ಮದ್ದುಗಳು.[೧೧]

ಎಂಟು ದಿನಗಳ ಅರೆಬಾಳು ಇರುವ I131 (ಸೋಡಿಯಂ ರೇಡಿಯೋ ಅಯೊಡೈಡು) ದ್ರಾವಣ ಕೃತಕ ಸಮಸ್ಥಾನಿಗಳಲ್ಲೆಲ್ಲ (ಐಸೊಟೋಪ್ಸ್) ಹೆಚ್ಚು ಬಳಕೆಯಲ್ಲಿದೆ. ಇದನ್ನು ರೋಗಿಗೆ ಕುಡಿಸಿದರೆ ಇಲ್ಲವೆ ರಕ್ತನಾಳಾಂತರ ಕೊಟ್ಟರೆ ಗುರಾಣಿಕ ಗ್ರಂಥಿಯಲ್ಲಿ ನೆಲೆಸುವುದರಿಂದ ಇದರಲ್ಲಿ ಸಾಂದ್ರವಾಗುವ ವೇಗದಿಂದ ಗ್ರಂಥಿಯ ನಿಜಗೆಲಸದ ಮಟ್ಟವನ್ನು ತಿಳಿಯಬಹುದು; ಗ್ರಂಥಿಯ ಏಡಗಂತಿ ಮತ್ತಿತರ ಗಂತಿಗಳನ್ನು ಅಣಗಿಸುವ ಚಿಕಿತ್ಸೆಮಾಡಬಹುದು; ಅಲ್ಲದೆ, ತಲೆಬುರುಡೆಯಲ್ಲಿ ಮಿದುಳಿನ ಗಂತಿಗಳ ನೆಲೆಯನ್ನೂ ಗುರುತಿಸಬಹುದು. ಹಲವಾರು ಸಂಯುಕ್ತಗಳೊಂದಿಗೆ ಪ್ರಾಣಿಗಳು, ಗಿಡಮರಗಳಿಗೆ ಕೊಟ್ಟು ಅವುಗಳ ಗತಿ ಯಾವೆಡೆಯಲ್ಲಿ ಏನಾಗುವುದೆಂದು, ರಾಸಾಯನಿಕ, ಜೀವ ರಾಸಾಯನಿಕ, ನಿಜಗೆಲಸಿಕ, ಮತ್ತಿತರ ರೀತಿಗಳಲ್ಲಿ ತಿಳಿಯಲು ಹೆಚ್ಚು ಬಳಸುವ ಕೃತಕ ಸಮಸ್ಥಾನಿಗಳಲ್ಲಿ I131 ಕೂಡ ಒಂದು. ಹೀಗೆ ಅಣುಗಳ ರಚನೆಯನ್ನು ಬಿಡಿಸಿ ತಿಳಿಯಲೂ ನೆರವಾಗುವುದು.

ಎಣ್ಣೆಗಳಲ್ಲಿ ಅಯೊಡೀನ್ ಅಂಶ

[ಬದಲಾಯಿಸಿ]

೧೦೦ ಗ್ರಾಂ ಎಣ್ಣೆಯೊಡನೆ ಸಂಕಲನ ರಸಾಯನ ಕ್ರಿಯೆ (ಅಡಿಷನ್ ರಿಅ್ಯಕ್ಷನ್) ಹೊಂದುವ ಅಯೊಡೀನಿನ ಗ್ರಾಂ ತೂಕ ಆ ಎಣ್ಣೆಯ ಅಯೊಡೀನ್ ಅಂಶ. ಮೇದಸ್ಸಿನಲ್ಲಿರುವ ಆಮ್ಲಗಳಲ್ಲಿ ಸಂಯೋಜನಾಶಕ್ತಿ ಪೂರ್ಣವಾಗಿ ತೃಪ್ತಿಹೊಂದಿರದ ಇಂಗಾಲದ ಪರಮಾಣುಗಳು ಇರುತ್ತವೆ. ಈ ರೀತಿಯ ಇಂಗಾಲದ ಪರಮಾಣುಗಳನ್ನು ಸೇರಿಸುವ ಅತೃಪ್ತ ಬಂಧನ (ಅನ್‍ಸ್ಯಾಚುರೇಟೆಡ್ ಬಾಂಡ್) ಇರುವ ಆಮ್ಲಗಳು ಅಯೊಡೀನನ್ನು ಹೀರಿಕೊಳ್ಳುವುದರಿಂದ ಅಯೊಡೀನ್ ಅಂಶ ಎಣ್ಣೆಯಲ್ಲಿ ಅತೃಪ್ತ ಬಂಧಗಳಿವೆ ಎಂಬುದನ್ನು ತೋರಿಸುತ್ತದೆ. ಹೆಚ್ಚು ಅತೃಪ್ತ ಬಂಧಗಳನ್ನು ಹೊಂದಿರುವ ಎಣ್ಣೆಗಳು ಸುಲಭವಾಗಿ ಒಣಗಿ, ಪಾರದರ್ಶಕ ಘನ ಪದಾರ್ಥಗಳಾಗುತ್ತವೆ. ಆದುದರಿಂದ ಅಯೊಡೀನ್ ಅಂಶ (150)ಕ್ಕಿಂತ ಹೆಚ್ಚಿದ್ದರೆ ಒಣಗುವ ಎಣ್ಣೆಗಳೆಂದೂ, (100)ಕ್ಕಿಂತ ಕಡಿಮೆಯಿದ್ದರೆ ಒಣಗದ ಎಣ್ಣೆಗಳೆಂದೂ, (100-150) ಇದ್ದರೆ ಅತಿ ಒಣಗುವ ಎಣ್ಣೆಗಳೆಂದು ಕರೆಯುತ್ತಾರೆ. ಒಣಗುವ ಎಣ್ಣೆಗಳಲ್ಲಿ ಅಗಸೆ ಎಣ್ಣೆ ಮುಖ್ಯವಾದುದು. ಇದನ್ನು ಬಣ್ಣದ ದ್ರಾವಣ, ಮೆರುಗೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಎಣ್ಣೆಗಳು ವಿಲೀನಕಾರಿಯಾಗಿ ಕೆಲಸ ಮಾಡುವುದಲ್ಲದೆ ಆರಿದ ಮೇಲೆ ಮರ ಮುಂತಾದವುಗಳಿಗೆ ರಕ್ಷಣೆಯನ್ನೂ ಕೊಡುತ್ತವೆ. ಬಳಕೆಯಲ್ಲಿರುವ ಮುಖ್ಯ ಎಣ್ಣೆಗಳ ಅಯೊಡೀನ್ ಅಂಶಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ.

ಎಣ್ಣೆ ಅಯೋಡಿನ್ ಅಂಶ
ಅಗಸೆ ೧೭೫ - ೨೦೫
ಎಳ್ಳು ೧೦೩ - ೧೧೮
ಸೋಯ ಬೀನ್ ೧೧೫ - ೧೩೦
ಹತ್ತಿ ಬೀಜ ೧೧೦ - ೧೧೬
ಕಡಲೆಕಾಯಿ ೮೫ - ೧೦೦
ಹರಳು ೮೦ - ೯೦
ಆಲಿವ್ ೭೫ - ೯೫
ಬೆಣ್ಣೆ ೨೫ - ೪೦
ಪ್ರಾಣಿಗಳ ಕೊಬ್ಬು ೩೦ - ೭೦

ಉಲ್ಲೇಖಗಳು

[ಬದಲಾಯಿಸಿ]
  1. Courtois B (1813). "Découverte d'une substance nouvelle dans le Vareck" [Discovery of a new substance in seaweed]. Annales de chimie (in French). 88: 304–310.{{cite journal}}: CS1 maint: unrecognized language (link) In French, seaweed that had been washed onto the shore was called "varec", "varech", or "vareck", whence the English word "wrack". Later, "varec" also referred to the ashes of such seaweed: the ashes were used as a source of iodine and salts of sodium and potassium.
  2. Swain PA (2005). "Bernard Courtois (1777–1838) famed for discovering iodine (1811), and his life in Paris from 1798" (PDF). Bulletin for the History of Chemistry. 30 (2): 103. Archived from the original (PDF) on 14 July 2010. Retrieved 2 April 2009.
  3. "Iodine". Micronutrient Information Center, Linus Pauling Institute, Oregon State University, Corvallis. 2015. Retrieved 20 November 2017.
  4. Greenwood and Earnshaw, pp. 800–4
  5. Kogel JE, Trivedi NC, Barker JM, Krukowski ST, eds. (2006). Industrial Minerals & Rocks: Commodities, Markets, and Uses. SME. pp. 541–552. ISBN 978-0-87335-233-8.
  6. Maekawa T, Igari SI, Kaneko N (2006). "Chemical and isotopic compositions of brines from dissolved-in-water type natural gas fields in Chiba, Japan". Geochemical Journal. 40 (5): 475. Bibcode:2006GeocJ..40..475M. doi:10.2343/geochemj.40.475.
  7. Greenwood and Earnshaw, p. 799.
  8. Emsley J (2001). Nature's Building Blocks (Hardcover, First ed.). Oxford University Press. pp. 244–250. ISBN 978-0-19-850340-8.
  9. http://www.sciencebuddies.org/science-fair-projects/project_ideas/FoodSci_p011.shtml
  10. Greenwood and Earnshaw, pp. 821–4
  11. http://www.sweetclinic.in/index.php/kd/educational-info-kan/thyroid-sep-kan/hyperthyroidism-excess-thyroid-hormone-kan/radio-iodine-a-permanent-cure-for-hyperthyhroidism-kan
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಯೊಡಿನ್&oldid=1201503" ಇಂದ ಪಡೆಯಲ್ಪಟ್ಟಿದೆ