ವಿಷಯಕ್ಕೆ ಹೋಗು

ಟಿಂಕ್ಚರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಂಕ್ಚರ್- ಪ್ರಾಣಿಜನ್ಯ ಅಥವಾ ಸಸ್ಯಜನ್ಯ ಔಷಧವಸ್ತುಗಳನ್ನು ಆಲ್ಕೊಹಾಲ್‍ಯುಕ್ತ ದ್ರಾವಕಗಳಿಂದ ಸಂಸ್ಕರಿಸಿ ಪಡೆದ ದ್ರಾವಣ; ಔಷಧವಸ್ತುಗಳ ಆಲ್ಕೊಹಾಲ್‍ಯುಕ್ತ ಸಾರ. ಆದರೆ ಇಂಥದೇ ಸಾರವಾದ ಸ್ಪಿರಿಟ್ ಎಂಬ ದ್ರಾವಣಕ್ಕಿಂತ ಬೇರೆ ಆದದ್ದು ಟಿಂಕ್ಚರ್. ಸ್ಪಿರಿಟ್ಟುಗಳಲ್ಲಿ ಸಾಮಾನ್ಯವಾಗಿ ಔಷಧವಸ್ತುವೂ ಬಾಷ್ಪಶೀಲ. ಅಯೊಡೀನಿನ ಟಿಂಕ್ಚರ್ ಮತ್ತಿತರ ಒಂದೆರಡು ಟಿಂಕ್ಚರುಗಳಲ್ಲಿ ಮಾತ್ರ ಔಷಧವಸ್ತುವೂ ಬಾಷ್ಪಶೀಲವಾಗಿರುವುದು. ಶುದ್ಧ ಆಲ್ಕೊಹಾಲ್, ಆಲ್ಕೊಹಾಲ್ ಮತ್ತು ನೀರಿನ ವಿವಿಧ ಪ್ರಮಾಣದ ಮಿಶ್ರಣ, ಸ್ಪಿರಿಟ್ಸ್ ಅಮೋನಿಯ ಆರೋಮ್ಯಾಟಿಕಸ್, ಸ್ಪಿರಿಟ್ಸ್ ಈಥೆರಿಸ್ ಹಾಗೂ ಆಲ್ಕೊಹಾಲ್, ಗ್ಲಿಸರೀನ್ ಮತ್ತು ನೀರಿನ ಮಿಶ್ರಣ ಇವು ಸಾರಸಂಗ್ರಹಣೆಗೆ ಅರ್ಥಾತ್ ಟಿಂಕ್ಚರಿನ ತಯಾರಿಕೆಗೆ ಉಪಯೋಗಿಸುವ ದ್ರಾವಕಗಳು.

ಔಷಧಸಾರವನ್ನು ಆಲ್ಕೊಹಾಲಿನಲ್ಲಿ ವಿಲೀನೀಕರಿಸಿ ಪಡೆದು ಉಪಯೋಗಿಸುವುದು ಬಲು ಹಿಂದಿನಿಂದಲೂ ತಿಳಿದ ವಿಷಯ. ಆದರೆ ಕಾಲಕ್ರಮೇಣ ಅನುಭವದಿಂದ ಉಪಯುಕ್ತ ದ್ರವ್ಯವನ್ನು ವಿಲೀನೀಕರಿಸಿ ಮೂಲವಸ್ತುವಿನಿಂದ ಬೇರ್ಪಡಿಸುವಷ್ಟು ಮಾತ್ರ ಇರಬೇಕಾದ ಆಲ್ಕೊಹಾಲಿನ ಪ್ರಮಾಣ ಇರುವ ದ್ರಾವಕ ಯಾವುದೆಂಬುದು ವ್ಯಕ್ತಪಟ್ಟಿದೆ. ಅಲ್ಲದೆ ಇದಕ್ಕಾಗಿ ಎಷ್ಟು ನಿರ್ಬಲ ಆಲ್ಕೊಹಾಲ್ ಸಾಕಾಗುತ್ತದೊ ಅಷ್ಟು ಮಾತ್ರ ಉಪಯೋಗಿಸಬೇಕೆಂಬುದೂ ತಿಳಿದಿದೆ. ಪ್ರಬಲ ಆಲ್ಕೊಹಾಲ್ ಸಾರಗಳನ್ನು ನೀರು ಔಷಧಗಳ ಜೊತೆ ಸೇರಿಸಿದರೆ ಸಾರದಲ್ಲಿರುವ ದ್ರವ್ಯ ಬೇರ್ಪಟ್ಟು ತಳ ಸೇರಬಹುದಾದರಿಂದ ಇಂಥ ಜ್ಞಾನ ಅಗತ್ಯ. ಕೆಲವು ಟಿಂಕ್ಚರುಗಳಲ್ಲಿರುವ ದ್ರವ್ಯ ಕಾಲಾಂತರದಲ್ಲಿ ತಾನಾಗಿಯೆ ಬೇರ್ಪಟ್ಟು ತಳ ಸೇರುವುದನ್ನು ತಪ್ಪಿಸಲು ಇಂಥ ಟಿಂಕ್ಚರುಗಳಿಗೆ ಗ್ಲಿಸರಿನ್ ಸೇರಿಸುವುದು ರೂಢಿಗೆ ಬಂದಿದೆ. ಟಿಂಕ್ಚರುಗಳಲ್ಲಿ ಉಪಯುಕ್ತದ್ರವ್ಯ ನಿರ್ದಿಷ್ಟಪ್ರಮಾಣದಲ್ಲಿ ಇರಬೇಕೆಂಬುದು ವ್ಯಕ್ತ. ಪ್ರತಿ ಟಿಂಕ್ಚರಿನಲ್ಲಿಯೂ ಇರಬೇಕಾದ ಈ ಪ್ರಮಾಣ ಮಟ್ಟವನ್ನು 1902ರಲ್ಲಿ ಸೇರಿದ್ದ ಬ್ರಸೆಲ್ಸ್ ಪ್ರೋಟೊಕೋಲಿನಲ್ಲಿ ನಿರ್ಧರಿಸಲಾಯಿತು. ಸಾಮಾನ್ಯವಾಗಿ 100 ಛಿಛಿ ಆಲ್ಕೊಹಾಲ್ ಇರುವಷ್ಟು ಪ್ರಬಲ ಟಿಂಕ್ಚರಿನಲ್ಲಿ ಔಷಧ ದ್ರವ್ಯಗಳು 10 ಗ್ರಾಮುಗಳಷ್ಟೂ ನಿರ್ಬಲ ದ್ರವ್ಯಗಳು 20 ಗ್ರಾಮುಗಳಷ್ಟೂ ಇರುವಂತೆ ಟಿಂಕ್ಚರುಗಳನ್ನು ತಯಾರಿಸಲಾಗುತ್ತದೆ. ಪ್ರಬಲ ಟಿಂಕ್ಚರ್ ಅಯೊಡೀನಿನಲ್ಲಿ 7% ಅಯೊಡೀನ್ ಇರುವುದೂ ಸಾಮಾನ್ಯ ಟಿಂಕ್ಚರ್ ಅಯೊಡೀನಿನಲ್ಲಿ 2% ಅಯೊಡೀನ್ ಇರುವುದೂ ಕಿತ್ತಳೆ ಹಾಗೂ ಹೆರಳೆ ಸಿಪ್ಪೆಗಳ ಟಿಂಕ್ಚರಿನಲ್ಲಿ 50% ಇರುವುದೂ ಅಪರೂಪ ಸಂದರ್ಭಗಳು.

ಟಿಂಕ್ಚರುಗಳ ತಯಾರಿಕೆ

[ಬದಲಾಯಿಸಿ]

ಟಿಂಕ್ಚರುಗಳ ತಯಾರಿಕೆಯಲ್ಲಿ ಮೂರು ವಿಧಾನಗಳನ್ನು ಅನುಸರಿಸುತ್ತಾರೆ. ಕ್ಷರಣ (ಪರ್ಕೊಲೇಷನ್), ದ್ರವಸಂಮರ್ದನ (ಮ್ಯಾಸಿರೇಷನ್) ಮತ್ತು ದ್ರಾವಣ (ಸಲ್ಯೂಷನ್). ಶೀಘ್ರ ಮತ್ತು ಸುಲಭವಾದ್ದರಿಂದ ಸಾಮಾನ್ಯವಾಗಿ ಅನುಸರಿಸುವ ವಿಧಾನ ಕ್ಷರಣ. ಚೆನ್ನಾಗಿ ನುಣ್ಣಗೆ ಪುಡಿಮಾಡಿದ ಒಂದೇ ವಸ್ತು ಅಥವಾ ಅನೇಕ ವಸ್ತುಗಳ ಮಿಶ್ರಣದ ನಿರ್ದಿಷ್ಟ ಪ್ರಮಾಣವನ್ನು ನಿರ್ದಿಷ್ಟ ಪ್ರಬಲತೆಯ ಆಲ್ಕೊಹಾಲ್ ಅಥವಾ ತಕ್ಕ ದ್ರಾವಕದಲ್ಲಿ ನೆನೆಸಿ ಸುಮಾರು ಕಾಲುಗಂಟೆ ಇಟ್ಟು ಅದನ್ನು ಬಸಿಕೆಯಲ್ಲಿ (ಪರ್ಕೊಲೇಟರ್) ತುಂಬಿ ಅದರ ಮೇಲೆ ದ್ರಾವಕವನ್ನು ಸುರಿದು ಮುಚ್ಚಿ ಒಂದು ದಿವಸ ಪೂರ್ತಿ ಬಿಟ್ಟಿರಬೇಕು. ಬಳಿಕ ಬಸಿಕೆಯಿಂದ ಶೋಧಿತ ದ್ರಾವಣವನ್ನು ಸಂಗ್ರಹಿಸಬೇಕು. ಆಗಿಂದಾಗ್ಗೆ ಹೆಚ್ಚು ದ್ರಾವಕವನ್ನು ಬಸಿಕೆಗೆ ಸೇರಿಸುತ್ತ ಒಟ್ಟು ಸುಮಾರು 950 ಸಿಸಿ ದ್ರಾವಣವನ್ನು ಪಡೆಯಬೇಕು. ಇದರಲ್ಲಿ ಉಪಯುಕ್ತ ವಸ್ತುವಿನ ಪ್ರಮಾಣ ಸರಿಯಾಗಿದೆ ಎಂದು ಪ್ರಾಣಿಗಳ ಮೇಲಿನ ಪ್ರಯೋಗಗಳಿಂದ ಇಲ್ಲವೇ ಇತರ ವಿಧಾನಗಳಿಂದ ನಿರ್ಧರಿಸಿಕೊಂಡು, ಅಗತ್ಯ ಬಿದ್ದಷ್ಟು, ಅಂತೂ ಒಟ್ಟಿನಲ್ಲಿ ಒಂದು ಲೀಟರಿಗೆ ಮೀರದಂತೆ ಆಗುವಷ್ಟು ದ್ರಾವಕವನ್ನು ಸೇರಿಸಿ ಟಿಂಕ್ಚರನ್ನು ತಯಾರಿಸಬೇಕು. ಗೋಂದು, ರಾಳ, ಸಾಬೂನು ಮುಂತಾದ ವಸ್ತುಗಳು ಅಧಿಕವಾಗಿರುವ ಮೂಲಗಳ ಟಿಂಕ್ಚರುಗಳನ್ನು ತಯಾರಿಸಲು ದ್ರವಸಂಮರ್ದನ ವಿಧಾನವನ್ನು ಅನುಸರಿಸುತ್ತಾರೆ. ನಿರ್ದಿಷ್ಟ ದ್ರಾವಕ ಪ್ರಮಾಣದ ಮುಕ್ಕಾಲು ಭಾಗವನ್ನು ನಿರ್ದಿಷ್ಟ ಪ್ರಮಾಣ ಮೂಲವಸ್ತು ಚೂರ್ಣದೊಡನೆ ಸೇರಿಸಿ, ಮುಚ್ಚಿ, ಶಾಖವಾದ ಸ್ಥಳದಲ್ಲಿ ಮೂರು ದಿವಸಗಳ ಕಾಲ ಇಡಬೇಕು. ಆಗಿಂದಾಗ್ಗೆ ಅದನ್ನು ಚೆನ್ನಾಗಿ ಕದಡುತ್ತಿರಬೇಕು. ಅನಂತರ ಅದನ್ನು ಸೋಸಿಕೊಳ್ಳಬೇಕು. ಗಷ್ಟನ್ನು ಕೊಂಚ ದ್ರಾವಕದಲ್ಲಿ ತೊಳೆದು ಸೋಸಿ ಸೇರಿಸಿಕೊಳ್ಳಬೇಕು. ಪುನಃ ಪುನಃ ಹೀಗೆ ಮಾಡುತ್ತ ಪೂರ್ಣ ಪ್ರಮಾಣದಲ್ಲಿ ಟಿಂಕ್ಚರನ್ನು ಸಂಗ್ರಹಿಸಬೇಕು. ಅಯೊಡೀನ್ ಹಾಗೂ ಫೆರಿಕ್ ಕ್ಲೋರೈಡುಗಳ ಟಿಂಕ್ಚರುಗಳನ್ನು ತಯಾರಿಸಲು ದ್ರಾವಣ ವಿಧಾನವನ್ನು ಅನುಸರಿಸುತ್ತಾರೆ. ನಿರ್ದಿಷ್ಟ ಪ್ರಮಾಣದ ದುರ್ಬಲ ಆಲ್ಕೊಹಾಲನ್ನು ವಿಲೀನಕಾರಿಯಾಗಿ ಉಪಯೋಗಿಸಲಾಗುತ್ತದೆ. ಕಷಾಯಗಳಿಗಿಂತಲೂ ಟಿಂಕ್ಚರುಗಳಲ್ಲಿ ಉಪಯುಕ್ತ ವಸ್ತುವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕುಡಿಯುವ ಔಷಧಗಳ ತಯಾರಿಕೆಯಲ್ಲಿ ಕಷಾಯಗಳಿಗಿಂತ ಟಿಂಕ್ಚರುಗಳ ಬಳಕೆಯೇ ಹೆಚ್ಚಾಗಿದೆ. ಮೂಲವಸ್ತುವಿನಲ್ಲಿರುವ ಔಷಧದ್ರವ ಇತರ ವಸ್ತುಗಳಿಂದ ಬೇರ್ಪಟ್ಟು ದ್ರಾವಣದಲ್ಲಿ ಅಡಗಿರುವುದರಿಂದ ಈ ದ್ರಾವಣಗಳು ಮೂಲವಸ್ತುಗಳಿಗಿಂತ ಪ್ರಬಲವಾಗಿ ಕೆಲಸ ಮಾಡುತ್ತವೆ. ಅಲ್ಲದೆ ಘನವಸ್ತುವಿಗಿಂತ ಜಾಗ್ರತೆಯಾಗಿ ರಕ್ತಗತವಾಗುತ್ತವೆ. ಕುಡಿಯುವ ಔಷಧದಲ್ಲಿರುವ ಈಥರ್, ಅಸೆಟಿಕ್ ಆಮ್ಲ, ಸುಗಂಧ ತೈಲಗಳು, ಹರಳೆಣ್ಣೆ, ರಾಳ, ಗೋಂದು, ಕ್ಷಾರ, ಸಕ್ಕರೆ ಮುಂತಾದ ಇತರ ದ್ರವ್ಯಗಳೊಡನೆ ಟಿಂಕ್ಚರುಗಳು ವಿಲೀನವಾಗಬಲ್ಲವು. ಇದರಿಂದ ಕುಡಿಯುವ ಔಷಧಗಳ ತಯಾರಿಕೆಗೆ ಅನುಕೂಲ. ನೀರು ಮತ್ತಿತರ ದ್ರಾವಕಗಳೊಡನೆ ಟಿಕ್ಚರುಗಳನ್ನು ಸೇರಿಸುವಾಗ ಟಿಂಕ್ಚರಿನ ಪ್ರಮಾಣ ಬಲು ಕಡಿಮೆ ಆಗಿರಬಾರದು. ಕೆಲವು ಟಿಂಕ್ಚರುಗಳು ಆಮ್ಲ ಇಲ್ಲವೆ ಪ್ರತ್ಯಾಮ್ಲ ಸ್ವಭಾವದವಾದ್ದರಿಂದ ಇವು ಪ್ರತಿಯೊಂದು ವಸ್ತುವಿನೊಡನೆ ಬೆರಕೆ ಆಗಿ ನಿಷ್ಕ್ರಿಯೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.

ಬಳಕೆಯಲ್ಲಿ

[ಬದಲಾಯಿಸಿ]

ಸಾರವನ್ನು ತೆಗೆದು ಬಲುಕಾಲ ಸಂಗ್ರಹಿಸಿ ಇಡಬಹುದಾದ ವಿಧಾನವಾಗಿ ಟಿಂಕ್ಚರುಗಳು ಕೆಲಕಾಲದ ಹಿಂದೆ ಬಹುವಾಗಿ ಬಳಕೆಗೆ ಬಂದಿದ್ದರೂ ಈಚೆಗೆ ಉಪಯುಕ್ತ ವಸ್ತುಗಳ ಬೇರ್ಪಡೆ ವಿಧಾನಗಳು ಹೆಚ್ಚು ವಿಶದವಾಗಿರುವುದರಿಂದ ಶುದ್ಧ ಉಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಔಷಧಗಳೊಡನೆ ಸೇರಿಸುವುದು ರೂಢಿಗೆ ಬಂದಿದೆ. ಮಾತ್ರೆಗಳು, ಕ್ಯಾಪ್ಸೂಲುಗಳು, ಚುಚ್ಚುಮದ್ದುಗಳು ಇವುಗಳಲ್ಲಿ ಶುದ್ಧವಸ್ತುವನ್ನು ಸೇರಿಸುತ್ತಾರಾಗಿ ಟಿಂಕ್ಚರುಗಳ ಬಳಕೆ ಕಡಿಮೆ ಆಗುತ್ತ ಬಂದಿದೆ.ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: