ಎಸ್. ಆರ್. ಬೊಮ್ಮಾಯಿ
ಎಸ್.ಆರ್.ಬೊಮ್ಮಾಯಿ | |
---|---|
Born | 6 ಜೂನ್ 1924 ಕಾರಡಗಿ, ಶಿಗ್ಗಾಂವ, ಹಾವೇರಿ ಜಿಲ್ಲೆ |
Died | 10 ಅಕ್ಟೋಬರ್ 2007, 84ನೇ ವಯಸ್ಸಿನಲ್ಲಿ |
Office | ಕರ್ನಾಟಕದ ಮುಖ್ಯಮಂತ್ರಿ |
Predecessor | ರಾಮಕೃಷ್ಣ ಹೆಗಡೆ |
Successor | ರಾಷ್ಟ್ರಪತಿ ಆಡಳಿತ |
Political party | ಜನತಾ ಪಕ್ಷ |
Spouse | ಗಂಗಮ್ಮ ಬೊಮ್ಮಾಯಿ |
ಎಸ್.ಆರ್.ಬೊಮ್ಮಾಯಿ(ಸೋಮಪ್ಪ ರಾಯಪ್ಪ ಬೊಮ್ಮಾಯಿ)ರವರು ಆಗಸ್ಟ್ ೧೩, ೧೯೮೮ ರಿಂದ ಏಪ್ರಿಲ್ ೨೧, ೧೯೮೯ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರು ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಹಲವು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬೊಮ್ಮಾಯಿರವರು ಕರ್ನಾಟಕದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜನನ
[ಬದಲಾಯಿಸಿ]ಎಸ್.ಆರ್.ಬೊಮ್ಮಾಯಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ 6 ಜೂನ್ 1924ರಲ್ಲಿ ಜನಿಸಿದರು.
ರಾಜಕೀಯ
[ಬದಲಾಯಿಸಿ]1962ರಲ್ಲಿ ತಮ್ಮ ಕ್ಷೇತ್ರ ಬದಲಾಯಿಸಿದ ಎಸ್.ಆರ್.ಬೊಮ್ಮಾಯಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1967ರಲ್ಲಿ ಸ್ಪರ್ಧಿಸಿದ ಎಸ್.ಆರ್.ಬೊಮ್ಮಾಯಿ 20,291 ಮತಗಳಿಂದ ಗೆಲುವು ಸಾಧಿಸಿದರು.
1978ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜೆಎನ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್.ಆರ್.ಬೊಮ್ಮಾಯಿ ಗೆಲುವು ಸಾಧಿಸಿದರು. ನಂತರ 1983, 85ರ ಚುನಾವಣೆಯಲ್ಲಿಯೂ ಜಯಗಳಿಸಿದ್ದಾರೆ. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಸಾಂಡ್ರಾ ವಿರುದ್ಧ ಸೋಲು ಅನುಭವಿಸಿದರು.
ಮುಖ್ಯಮಂತ್ರಿ
[ಬದಲಾಯಿಸಿ]1985ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಎಸ್.ಆರ್.ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು.
ಸರ್ಕಾರ ವಜಾ ಪ್ರಕರಣ
[ಬದಲಾಯಿಸಿ]1989 ರಲ್ಲಿ ಕೆಲವು ಶಾಸಕರು ಅಂದಿನ ರಾಜ್ಯಪಾಲರಿಗೆ ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಪತ್ರ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಸರ್ಕಾರ ವಜಾ ಪ್ರಕರಣ ವಿರುದ್ಧ ಸಂವಿಧಾನ ಪೀಠ 1994 ರಲ್ಲಿ ಪ್ರಕಟಿಸಿದ ಈ ಮಹತ್ವದ ತೀರ್ಪು ಹಲವು ಸರ್ಕಾರಗಳಿಗೆ ಮರು ಜೀವ ದೊರಕಿಸಿ ಕೊಟ್ಟಿದೆ.[೧]
ಒಂಭತ್ತು ನ್ಯಾಯಾಧೀಶರನ್ನೊಳಗೊಂಡ ಸವೋಚ್ಚ ನ್ಯಾಯಾಲಯದ ಸಂವಿಧಾನಪೀಠ ಎಸ್.ಆರ್ ಬೊಮ್ಮಾಯಿ ಹಾಗೂ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 1994, ಮಾರ್ಚ್ 11ರಂದು ನೀಡಿದ ತೀರ್ಪು ಸಂವಿಧಾನದ ಘನತೆ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಕಾರಣೀಕರ್ತವಾಯಿತು.
1989ರ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ನಡೆದ ನಾಟಕೀಯ ಘಟನೆಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಕರ್ನಾಟಕದ ಅಂದಿನ ರಾಜ್ಯಪಾಲರಾದ ವೆಂಕಟಸುಬ್ಬಯ್ಯನವರು 1989ರ ಏಪ್ರಿಲ್ 21ರಂದು ಎಸ್.ಆರ್. ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ, ಜನರಿಂದ ಆಯ್ಕೆಯಾದ ಬಹುಮತವುಳ್ಳ ಸರ್ಕಾರವನ್ನು ವಜಾಗೊಳಿಸಿದರು. ಅಂದಿನವರೆಗೆ ಸರ್ಕಾರವನ್ನು ವಜಾಗೊಳಿಸುವುದು ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರದ ಸ್ವೇಚ್ಛೆಯಾಗಿತ್ತು. ಬಹುಮತವಿದ್ದರೂ ಕೂಡ, ಬಹುಮತ ಸಾಬೀತಿಗೆ ವಿಧಾನಸಭೆಯಲ್ಲಿ ಅವಕಾಶ ಕೊಡದೆ, ತಮ್ಮ ಪಕ್ಷಕ್ಕೆ ವ್ಯತಿರಿಕ್ತವಾದ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವುದು ಕೇಂದ್ರ ಸರ್ಕಾರಕ್ಕೆ ಅತಿ ಸುಲಭವಾದ ರಾಜಕೀಯ ಒಳಸಂಚು ಆಗಿತ್ತು. ಹಾಗೆಯೇ ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗಿತ್ತು. ಇದು ಸ್ವಾತಂತ್ರ್ಯಾನಂತರ ನಾಲ್ಕು ದಶಕಗಳ ಕಾಲ ಅವ್ಯಾಹತವಾಗಿ ನಡೆದು ಬಂದಿತ್ತು. ಇದನ್ನು ಪ್ರಶ್ನಿಸುವ ಎದೆಗಾರಿಕೆ ಯಾರಿಗೂ ಇರಲಿಲ್ಲ. ಇದನ್ನು ಮೊದಲ ಬಾರಿ ಪ್ರಶ್ನಿಸಿದವರು ಎಸ್.ಆರ್ ಬೊಮ್ಮಾಯಿ.
ಬೊಮ್ಮಾಯಿಯವರು ಕಾಲೇಜು ದಿನಗಳಿಂದಲೇ ಕ್ರಾಂತಿಕಾರಕ, ವಿನೂತನ ರಾಜಕೀಯ ಸಿದ್ಧಾಂತ ಹೊಂದಿದವರಾಗಿದ್ದರು. ಬಂಗಾಲದ ರ್ಯಾಡಿಕಲ್ ಹ್ಯುಮನಿಸ್ಟ್ ಪಕ್ಷದ ಪ್ರತಿಪಾದಕರಾಗಿದ್ದ ಎಂ.ಎನ್.ರಾಯ್ರವರ ಅನುಯಾಯಿಯಾಗಿದ್ದರು, ಮೂಲಭೂತ ಪರಿವರ್ತನವಾದಿಗಳಾಗಿದ್ದರು. ಕಮ್ಯುನಿಸಂ ಬೆನ್ನುಹತ್ತಿ, ಬ್ರಿಟಿಷರ ವಿರುದ್ಧ ಸಶಸ್ತ್ರದಂಗೆಗೆ ಮುಂದಾಗಿ, ಭಾರತದ ಸ್ವಾತಂತ್ರ್ಯ್ಕಾಗಿ ತಹತಹಿಸಿ, ಕೊನೆಗೆ ‘ಪೀಪಲ್ ಪ್ಲಾನ್’ ಎನ್ನುವ ಅಧಿಕಾರ ವಿಕೇಂದ್ರೀಕರಣದ, ಸಾಮಾನ್ಯ ಪ್ರಜೆಗಳ ಕೈಬಲಪಡಿಸುವ ಸಿದ್ಧಾಂತವನ್ನೇ ಹುಟ್ಟುಹಾಕಿದರು. ಎಂ.ಎನ್ ರಾಯ್ ಸೈದ್ಧಾಂತಿಕ ಗರಡಿಯಲ್ಲಿ ಬೆಳೆದ ಎಸ್.ಆರ್. ಬೊಮ್ಮಾಯಿಯವರಿಗೆ ರಾಜಕೀಯ ಧೈರ್ಯ, ಸೈದ್ಧಾಂತಿಕ ಬದ್ಧತೆಗೆ ಯಾವ ಕೊರತೆಯೂ ಇರಲಿಲ್ಲ. ಹೀಗಾಗಿ ಜನರಿಂದ ಆಯ್ಕೆಯಾದ, ಬಹುಮತವುಳ್ಳ, ಸರ್ಕಾರವನ್ನು ವಜಾಗೊಳಿಸಿದ ಆದೇಶವನ್ನು ಮೊದಲು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ವಿಫಲರಾದರೂ, ಧೈರ್ಯಗುಂದದೇ ಸವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಪ್ರಶ್ನಿಸಿ ವಿಜಯಶೀಲರಾದರು.
1994ರ ಮಾರ್ಚ್ 11ರಂದು ಪ್ರಕಟವಾದ ಸವೋಚ್ಚ ನ್ಯಾಯಾಲಯದ ಬೊಮ್ಮಾಯಿ ಪ್ರಕರಣದ ತೀರ್ಪು ಐತಿಹಾಸಿಕ ನಿರ್ಣಯವಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಬಹುಮತವನ್ನು ವಿಧಾನಸಭೆಯಲ್ಲಿ ಮಾತ್ರ ಪರೀಕ್ಷೆಗೆ ಒಡ್ಡಬೇಕೇ ಹೊರತಾಗಿ, ರಾಜ್ಯಪಾಲರು ತಮ್ಮ ಬಣ್ಣದ ಚಾಳೀಸಿನಲ್ಲಿ ನೋಡಿ ನಿರ್ಣಯಿಸತಕ್ಕದ್ದಲ್ಲ ಎಂದು ಸಂವಿಧಾನದ ವಿಧಿ 356ನ್ನು ಆಮೂಲಾಗ್ರವಾಗಿ ವಿಶ್ಲೇಷಿಸಿ ವಿಸõತವಾದ ತೀರ್ಪು ಕೊಟ್ಟಿತು. ಯಾವುದೇ ವಿಧಾನಸಭೆಯ ವಿಸರ್ಜನೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು ಎನ್ನುವ ವಿಶ್ಲೇಷಣೆ ಹೊರಬಂದಿತು. ಈ ಚಾರಿತ್ರಿಕ ತೀರ್ಪಿನಿಂದಾಗಿ ಕೇಂದ್ರ ಸರ್ಕಾರದ ಕೋಡುಗಳು ಮುರಿದು ಬಿದ್ದವು. ಭಾರತದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾದವು.
ಹೋರಾಟ
[ಬದಲಾಯಿಸಿ]ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ್ದು, ಭೂಸುಧಾರಣಾ ಕಾಯ್ದೆ ಬರುವ ಮುಂಚೆ ಬಡ ಗೇಣಿದಾರರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದು, ತುರ್ತು ಪರಿಸ್ಥಿತಿಯ ದುರಾಡಳಿತದ ವಿರುದ್ಧ ಸೆಣಸಿದ್ದು ಹಾಗೂ ಲೋಕನಾಯಕ ಜಯಪ್ರಕಾಶ ನಾರಾಯಣರೊಂದಿಗೆ ಉತ್ತರ ಕರ್ನಾಟಕದಲ್ಲಿ ಸಂಚರಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕಾರಣ ಹುಟ್ಟುಹಾಕಿ ಜನತಾ ಪಕ್ಷ ಸ್ಥಾಪಿಸಿದ್ದು, ರೈತರು, ದಲಿತರು, ಕನ್ನಡಪರ ಹೋರಾಟಗಾರರನ್ನು ಒಗ್ಗೂಡಿಸಿದ್ದು, ಕರ್ನಾಟಕವನ್ನು ಪರ್ಯಾಯ ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿ ಯಶಸ್ಸು ಸಾಧಿಸಿ ಸರ್ಕಾರಗಳನ್ನು ರಚಿಸಿದ್ದು, ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಿ ಅಧಿಕಾರ ವಿಕೇಂದ್ರೀಕರಣದ ಸ್ವರೂಪದಲ್ಲಿ ಜನರ ಅಧಿಕಾರವನ್ನು ಜನರಿಗೇ ಒಪ್ಪಿಸಿದ್ದು, ಅವರ ರಾಜಕಾರಣದ ಐತಿಹಾಸಿಕ ಘಟನೆಗಳಾಗಿವೆ.
ರಾಜ್ಯ ಹಾಗೂ ರಾಷ್ಟ್ರದ ಮಂತ್ರಿ ಸ್ಥಾನದಲ್ಲಿದ್ದಾಗ ಕೈಗೊಂಡ ಹಲವಾರು ಯೋಜನೆಗಳು ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ. 1983ರಲ್ಲಿ ಕೈಗಾರಿಕಾ ಮಂತ್ರಿಯಾಗಿದ್ದಾಗ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ 2ನೇಯ ಹಾಗೂ 3ನೇ ಹಂತವಲ್ಲದೇ, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಕೈಗಾರಿಕಾ ಪ್ರದೇಶಗಳು ಸ್ಥಾಪನೆಗೊಂಡವು. ಅವರು ಹಣಕಾಸು ಖಾತೆ ಹೊಂದಿದಾಗ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಎರಡು ರೂಪಾಯಿಗೆ 1 ಕೆ.ಜಿ ಅಕ್ಕಿ, ಗೋಧಿ, ರಿಯಾಯಿತಿ ದರದಲ್ಲಿ ಧೋತಿ ಪಂಚೆ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತಂದರು.
ನಿಧನ
[ಬದಲಾಯಿಸಿ]ಬೊಮ್ಮಯಿರವರು ಅಕ್ಟೋಬರ್ ೧೦, ೨೦೦೭ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.[೨]
ಮೂಲಗಳು
[ಬದಲಾಯಿಸಿ]- ↑ https://kannada.oneindia.com/news/karnataka/s-r-bommai-was-greatest-politician-karnataka-siddaramaiah-085869.html
- ↑ "ಆರ್ಕೈವ್ ನಕಲು". Archived from the original on 2007-10-11. Retrieved 2007-10-11.