ವಿಷಯಕ್ಕೆ ಹೋಗು

ಎಸ್ ಆರ್ ಕಂಠಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್ ಆರ್ ಕಂಠಿ

ಅಧಿಕಾರ ಅವಧಿ
14 March 1962 – 20 June 1962
ರಾಜ್ಯಪಾಲ ಜಯಚಾಮರಾಜ ಒಡೆಯರ
ಪೂರ್ವಾಧಿಕಾರಿ ಬಿ.ಡಿ.ಜತ್ತಿ
ಉತ್ತರಾಧಿಕಾರಿ ಎಸ್.ನಿಜಲಿಂಗಪ್ಪ
ವೈಯಕ್ತಿಕ ಮಾಹಿತಿ
ಜನನ (೧೯೦೮-೧೨-೨೧)೨೧ ಡಿಸೆಂಬರ್ ೧೯೦೮
ಕೆರೂರ, ಬದಾಮಿ, ಬಾಗಲಕೋಟೆ ಜಿಲ್ಲೆ
ರಾಜಕೀಯ ಪಕ್ಷ ಕಾಂಗ್ರೆಸ್

ಎಸ್ ಆರ್ ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ )ಯವರು ಬಾಗಲಕೋಟ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ನಗರದವರು. 1962ರಲ್ಲಿ ಅಲ್ಪ ಕಾಲ ಕರ್ನಾಟಕ (ಆಗಿನ ಮೈಸೂರು) ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಜನನ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

ಬಾಗಲಕೋಟೆ(ಹಳೆಯ ಬಿಜಾಪುರ) ಜಿಲ್ಲೆಯ ಬದಾಮಿ ತಾಲ್ಲೂಕಿನ ಕೆರೂರನಲ್ಲಿ 1908 ಡಿಸೆಂಬರ್ 21ರಂದು ಜನಿಸಿದರು.ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಇವರು ಬಾಗಲಕೋಟೆಯಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.

ಸಮಾಜ ಸೇವೆ

[ಬದಲಾಯಿಸಿ]

ಹರಿಜನರ, ರೈತರ ಮತ್ತು ನೇಕಾರರ ಏಳ್ಗೆಗಾಗಿ ಶ್ರಮಿಸಿದರು. 1939ರಲ್ಲಿ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿಗಳಿಗೆ ಸದಸ್ಯರಾಗಿ ಆಯ್ಕೆಯಾದರು. 1940-41ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಸತ್ಯಾಗ್ರಹ ವ್ಯವಸ್ಥೆ ಮಾಡಿ 10 ತಿಂಗಳ ಸೆರೆಮನೆವಾಸ ಅನುಭವಿಸಿದರು. 1942ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮತ್ತೊಮ್ಮೆ ಸೆರೆಯಾಗಿ ಅದೇ ವರ್ಷ ಬಿಡುಗಡೆ ಹೊಂದಿದರು. ಅನಂತರ ಮುಂಬಯಿ ಸ್ಥಳೀಯ ಆಹಾರ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿದ್ದುಕೊಂಡು ಕ್ಷಾಮ ಪರಿಹಾರ ಸಮಿತಿಯ ಪರವಾಗಿ ಕ್ಷಾಮಪೀಡಿತ ಪ್ರದೇಶಗಳಿಗೆ ಊಟ, ಬಟ್ಟೆ ಇತ್ಯಾದಿ ಸರಬರಾಜು ಮಾಡುವ ಸಾರ್ವಜನಿಕ ಸೇವೆಯಲ್ಲಿ ಪ್ರವೃತ್ತರಾದರು.

ಹೋರಾಟ

[ಬದಲಾಯಿಸಿ]

1946ರಲ್ಲಿ ಬಿಜಾಪುರ ಜಿಲ್ಲೆಯ ರೈತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ಅಂದಿನ ಮುಂಬಯಿ ಮಂತ್ರಿ ಮಂಡಲದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು 6 ವರ್ಷಗಳ ಕಾಲ ಸೇವೆಸಲ್ಲಿಸಿದರು (1946-52). ಆಗ ಸುಮಾರು ಎರಡು ವರ್ಷಗಳ ಕಾಲ ಹಣಕಾಸಿನ ಶಾಖೆಯನ್ನು ಹಾಗೂ ಮೂರು ವರ್ಷಗಳ ಕಾಲ ವ್ಯವಸಾಯ, ಅರಣ್ಯ ಮತ್ತು ಸಹಕಾರ ಇಲಾಖೆಗಳ ಅದಿsಕಾರವನ್ನು ವಹಿಸಿಕೊಂಡಿದ್ದರು. 1952-56ರ ವರೆಗೆ ಮುಂಬಯಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ರಾಜ್ಯದ ನಿರ್ಮಾಣದ ಬಗ್ಗೆ ವಿಷಯ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ರಚಿಸಿದ ಸಮಿತಿಗೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತ್ತು.

ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ 1956ರಲ್ಲಿ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾದ ಕಂಠಿಯವರು ಸುಮಾರು 6 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. 1961ರಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂಸದೀಯ ನಿಯೋಗಕ್ಕೆ ಇವರು ಮುಖ್ಯಸ್ಥರಾಗಿದ್ದರು. ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು 1962 ಮಾರ್ಚ್ 9ರಿಂದ 1962 ಜುಲೈ 20ರವರೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನಂತರ 1962 ಜುಲೈ 21ರಂದು ವಿದ್ಯಾಮಂತ್ರಿಯಾಗಿ ನೇಮಕಗೊಂಡರು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಇವರು ವಿದ್ಯಾಮಂತ್ರಿಯಾಗಿದ್ದಾಗ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾಗಿ 1967 ಮಾರ್ಚ್ 14ರಿಂದ 1968 ಏಪ್ರಿಲ್ 29ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು. ಇವರು ಕೆಲಕಾಲ ಕರ್ನಾಟಕ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರೂ ಮೈಸೂರು ಪ್ರದೇಶದ ಭಾರತ ಸೇವಕ ಸಮಾಜದ ಅಧ್ಯಕ್ಷರೂ ಆಗಿದ್ದರು. 1959ರಲ್ಲಿ ಲಂಡನಿನಲ್ಲಿ ನಡೆದ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಇವರನ್ನು ತನ್ನ ಪ್ರತಿನಿದಿsಯನ್ನಾಗಿ ಕಳಿಸಿತ್ತು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಇವರು ನೋಟ್ಸ್‌ ಆನ್ ದಿ ಪಾರ್ಲಿಮೆಂಟರಿ ಕೋರ್ಸ್ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ.

ಮುಖ್ಯಮಂತ್ರಿ

[ಬದಲಾಯಿಸಿ]

1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು. ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ನ ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ವಹಿಸಲಾಯಿತು. ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನ್ನು 'ಆಧುನಿಕ ಕರ್ನಾಟಕದ ನಿರ್ಮಾತೃ' ಎಂದೂ ಕರೆಯಲಾಗುತ್ತಿತ್ತು. ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು.

ನಿರ್ವಹಿಸಿದ ಹುದ್ದೆಗಳು

[ಬದಲಾಯಿಸಿ]
  • ಕರ್ನಾಟಕ ಸಾಹಿತ್ಯ ಅಕಾಡೆಮೆಯ ಅಧ್ಯಕ್ಷರು (1961-1966)
  • ಕರ್ನಾಟಕ ವಿಧಾನಸಭಾ ಸದಸ್ಯರು (1957 - 1962)
  • ಕರ್ನಾಟಕ ವಿಧಾನಸಭಾ ಸಭಾಪತಿ (19 ಡಿಸೆಂಬರ್ 1956- 9 ಮಾರ್ಚ್ 1962)
  • ಕರ್ನಾಟಕದ ಮುಖ್ಯಮಂತ್ರಿ (1962 ಮಾರ್ಚ್ 9ರಿಂದ 1962 ಜುಲೈ 20)
  • ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ

ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ

[ಬದಲಾಯಿಸಿ]

ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಕಂಠಿ ಅವರ ದೂರದೃಷ್ಟಿಯಿಂದ 1969 ರಲ್ಲಿ ಆರಂಭವಾದ ಈ ಶಾಲೆಯು ಬಾಲಕಿಯರಿಗಾಗಿ ಸೈನಿಕ ಶಿಕ್ಷಣ ನೀಡುವ ಏಕೈಕ ಶಾಲೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರ ಇರುವ ಈ ಶಾಲೆಯಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದ್ದು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.

ಕರ್ನಾಟಕದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಕಂಠಿಯವರು ರಾಜ್ಯ ವಿಧಾನಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ನಿಧನ ಹೊಂದಿದರು.