ವಿಷಯಕ್ಕೆ ಹೋಗು

ಬಾದಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬದಾಮಿ ಇಂದ ಪುನರ್ನಿರ್ದೇಶಿತ)

ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಕರಕುಶಲತೆಯ ಮೂಲಕ ನಡೆಯಲು ಕರ್ನಾಟಕ ಯಾವಾಗಲೂ ಸರಿಯಾದ ಧ್ವನಿಯನ್ನು ಹೊಂದಿಸಿದೆ. ಅಂತಹ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಒಂದು ಬಾದಾಮಿ (ವಾತಾಪಿ).

ಬಾದಾಮಿ

ಬಾದಾಮಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 15° N 75° E
ವಿಸ್ತಾರ
 - ಎತ್ತರ
12.6 km²
 - 586 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೫೮೫೧
 - - /ಕಿಮಿ2 (-/ಚದರ ಮಿ)/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೨ ೨೦೧
 - +೯೧ (೦) ೮೩೫೭
 - ಕೆಎ-೨೯
ಅಂತರ್ಜಾಲ ತಾಣ: gmail
Old Kannada inscription of Chalukya King Mangalesha dated 578 CE at Badami cave temple no.3
Bhuthanatha group of temples facing the Agasythya thertha
Mallikarjuna group of temples at Badami in Bagalkot district, Karnataka
Shiva image in Cave temple no. 1
Vishnu image in Cave temple No. 3
Badami Caves

ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.

ಇತಿಹಾಸ

[ಬದಲಾಯಿಸಿ]

ಚಾಳುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯವಾದ ಕದಂಬರ ಆಳ್ವಿಕೆಯಲ್ಲಿ ದಂಡಾಧಿಕಾಕಾರಿಯಾಗಿದ್ದ ಜಯಸಿಂಹನೆಂಬುವನು ಕ್ರಿ ಶ ೫೦೦ ರಲ್ಲಿ ಸಿಡಿದುಹೋಗಿ ಹೊಸ ತಂಡವೊಂದನ್ನು ಕಟ್ಟಿ, ಈಗಿನ ಬಾದಾಮಿ ಪ್ರದೇಶದಲ್ಲಿ ಹೊಸ ರಾಜ್ಯ ಸ್ಥಾಪಿಸಿದ. ಇದೇ ಮುಂದೆ ಇತಿಹಾಸದಲ್ಲಿ ಚಾಳುಕ್ಯ ರಾಜ ಮನೆತನವೆಂದು ಪ್ರಸಿದ್ಧವಾಯಿತು. ಅಂದರೆ ಚಾಳುಕ್ಯರು ಕದಂಬ ವಂಶಸ್ಥರೇ ಆಗಿದ್ದು ಕದಂಬರ ಆಡಳಿತದ ಮುಂದುವರಿದ ಭಾಗವೆಂದು ಹೇಳಬಹುದು. ಬಾದಾಮಿಯಲ್ಲಿ ಸಿಕ್ಕ ಶಾಸನದಲ್ಲಿ ಉಲ್ಲೇಖಿಸಿರುವಂತೆ ಚಾಳುಕ್ಯರು ಮಾನವ್ಯ ಗೋತ್ರದ ವಂಶಜರು. ಕದಂಬರೂ ಕೂಡ ಇದೇ ವಂಶಕ್ಕೆ ಸೇರಿದವರು. ಆದ್ದರಿಂದ ಇವರದ್ದೂ ಕದಂಬರ ಕುಲವೇ ಆಗಿದೆ. ಅಲ್ಲದೆ ಚಾಳುಕ್ಯ ಎಂಬುದು ಸಲಿಕೆ, ಚಲಿಕೆ ಶಬ್ದಗಳಿಂದ ನಿಷ್ಪತ್ತಿಯಾಗಿದೆಯೆಂದು ಅಭಿಪ್ರಾಯಪಡಲಾಗಿದೆ.ಇವುಗಳು ಅಚ್ಚ ಕನ್ನಡ ಪದಗಳಾಗಿದ್ದು ವ್ಯವಸಾಯದಲ್ಲಿ ಉಪಯೋಗಿಸುವ ವಸ್ತುಗಳಾಗಿವೆ. ಆದ್ದರಿಂದ ಚಾಳುಕ್ಯರು ಕನ್ನಡಿಗರೇ ಹೊರತು ಬೇರೆಲ್ಲಿಂದಲೋ ಬಂದು ಆಕ್ರಮಣ ಮಾಡಿ ರಾಜ್ಯಸ್ಥಾಪನೆ ಮಾಡಿದವರಲ್ಲ ಎಂಬುದು ಇತಿಹಾಸಜ್ಞರ ಒಟ್ಟಾರೆ ಅಭಿಪ್ರಾಯವಾಗಿದೆ. ಇವರ ರಾಜಲಾಂಛನ ವರಾಹ! ಮೂಲತ: ವೈಷ್ಣವ ಮತಾವಲಂಬಿಗಳಾಗಿದ್ದ ಇವರು ೧ನೇ ವಿಕ್ರಮಾದಿತ್ಯನ ಕಾಲದಿಂದ 'ಶಿವಮಂಡಲ ದೀಕ್ಷೆ' ಪಡೆದು ಶೈವ ಸಂಪ್ರದಾಯವನ್ನು ಅನುಸರಿಸಲು ಶುರುಮಾಡಿದರು.ಕದಂಬರ ಆಡಳಿತದಲ್ಲಿ ದಂಡಾಧೀಶನಾಗಿ ಈ ಪ್ರಾಂತದಲ್ಲಿ ನಿಯುಕ್ತನಾಗಿದ್ದ ಜಯಸಿಂಹನೆಂಬುವವ ಮೊತ್ತಮೊದಲು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತಾನೆ. ಇವನೇ ಚಾಳುಕ್ಯರ ಮೂಲವಂಶಸ್ಥ. ನಂತರದಲ್ಲಿ ರಣರಾಗ, ೧ನೇ ಪುಲಿಕೇಶಿ, ೧ನೇ ಕೀರ್ತಿವರ್ಮ ಹೀಗೆ ವಂಶ ಮುಂದುವರಿಯುತ್ತದೆ. ಕೀರ್ತಿವರ್ಮ ಕ್ರಿ ಶ 597ರಲ್ಲಿ ನಡೆದ ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದಾಗ 2ನೇ ಪುಲಿಕೇಶಿಯೂ ಸೇರಿದಂತೆ ಅವನ ಮಕ್ಕಳೆಲ್ಲ ಚಿಕ್ಕವರಿದ್ದರು. ಆದ್ದರಿಂದ ಕೀರ್ತಿವರ್ಮನ ತಮ್ಮನಾದ ಮಂಗಳೇಶನು ಸುಮಾರು 12ವರ್ಷ ರಾಜ್ಯವಾಳಿದ. 2ನೇ ಪುಲಿಕೇಶಿ ವಯಸ್ಸಿಗೆ ಬಂದಾಗ ಕೀರ್ತಿವರ್ಮ ರಾಜಧರ್ಮದ ಶಿಷ್ಟಾಚಾರದಂತೆ ಅವನಿಗೆ ರಾಜ್ಯ ಒಪ್ಪಿಸಲು ಹಿಂದೇಟು ಹಾಕಿ ತನ್ನ ಮಕ್ಕಳಿಗೆ ಅಧಿಕಾರ ಹಸ್ತಾಂತರಿಸುವ ಹುನ್ನಾರ ಮಾಡಿದ. ಆಗ 2ನೇ ಪುಲಕೇಶಿಯು ಚಿಕ್ಕಪ್ಪನನ್ನು ಕೊಂದು ಅಧಿಕಾರ ಕಿತ್ತುಕೊಂಡ. ಚಾಲುಕ್ಯರಲ್ಲಿ ಅತ್ಯಂತ ಪ್ರಬಲ ಆಡಳಿತ ನೀಡಿದ ಕಣ್ಣು ಕೋರೈಸುವ ಶೂರ ದೊರೆ ಈತ ಎಂದೂ ಪ್ರಸಿದ್ಧನಾಗಿದ್ದಾನೆ. ಇವನ ನಂತರ ಈ ವಂಶದ ಹೆಸರಿಸಬಹುದಾದ ರಾಜರುಗಳೆಂದರೆ ೧ನೇ ವಿಕ್ರಮಾದಿತ್ಯ, ವಿನಯಾದಿತ್ಯ, ವಿಜಯಾದಿತ್ಯ ಹಾಗು ೨ನೇ ವಿಕ್ರಮಾದಿತ್ಯ. ೨ನೇ ವಿಕ್ರಮಾದಿತ್ಯ ತನ್ನ ಮುತ್ತಾತನಂತೆ ಅತ್ಯಂತ ಶೂರ ದೊರೆಯಾಗಿದ್ದು ತಮ್ಮ ಪಾರಂಪರಿಕ ವೈರಿಗಳಾಗಿದ್ದ ಪಲ್ಲವರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಕಂಚಿಯ ಕೈಲಾಸನಾಥರ್ ದೇವಾಲಯದಲ್ಲಿ ಕನ್ನಡ ಶಾಸನೊವೊಂದನ್ನು ನೆಡೆಸುತ್ತಾನೆ.

ಇಂಥ ಹೆಮ್ಮೆಯ ಸಾಮ್ರಾಜ್ಯ ಕ್ರಿ ಶ 753ರಲ್ಲಿ ಕೀರ್ತಿವರ್ಮನಿಂದ ಕೊನೆಯಾಗುತ್ತದೆ. ತಮ್ಮ ಕೈಕೆಳಗೆ ಮಾಡಲೀಕರಾಗಿದ್ದ ರಾಷ್ಟ್ರಕೂಟರ ದಂತಿವರ್ಮನಿಗೆ ಸೋಲುವ ಮೂಲಕ ಚಾಲುಕ್ಯರು ಆಳ್ವಿಕೆ ತಾತ್ಕಾಲಿಕವಾಗಿ ಕೊನೆಯಾಗುತ್ತದೆ.

ನಂತರ ರಾಷ್ಟ್ರಕೂಟರು ಸುಮಾರು 250 ವರ್ಷ ಆಡಳಿತ ನಡೆಸುತ್ತಾರೆ. ಇತಿಹಾಸದ ಕಾಲಚಕ್ರ ಉರುಳುತ್ತದೆ. ಕ್ರಿ ಶ 973ರಲ್ಲಿ ಮತ್ತೆ ಚಾಲುಕ್ಯರು 2ನೇ ತೈಲಪನು ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸುವ ಮೂಲಕ ಆಡಳಿತವನ್ನು ಹಿಂದಕ್ಕೆ ಪಡೆಯುತ್ತಾನೆ.

ಇಲ್ಲಿಯವರೆಗೆ ಅಳಿದುಳಿದ ಚಾಲುಕ್ಯರು ಈಗಿನ ಬೀದರ್ ನ ಬಸವಕಲ್ಯಾಣವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರಿಂದ ಇಲ್ಲಿಂದ ಮುಂದೆ ಈ ಗುಂಪನ್ನು ಇತಿಹಾಸದಲ್ಲಿ "ಕಲ್ಯಾಣ ಚಾಳುಕ್ಯ"ರು ಎಂದು ಗುರುತಿಸಲಾಗುತ್ತದೆ ಅಲ್ಲದೇ ಬಾದಾಮಿಯನ್ನು ವಶಪಡಿಸಿಕೊಂಡ ನಂತರವೂ ಅಲ್ಲಿಂದಲೇ ಆಡಳಿತವನ್ನು ಮುಂದುವರಿಸುತ್ತಾರೆ. ಈ ಆಳ್ವಿಕೆ ಕ್ರಿ ಶ 12ನೇ ಶತಮಾನದವರೆಗೆ ಮುಂದುವರಿಯುತ್ತದೆ.

ಈಗಿನ ತೆಲಂಗಾಣದ ಅಲಂಪುರ ಪ್ರದೇಶದಲ್ಲಿ "ವೆಂಗಿ ಚಾಳುಕ್ಯ"ರು ಎಂದು ಗುರುತಿಸಲ್ಪಡುವ ಇನ್ನೊಂದು ಗುಂಪು ಆಡಳಿತ ನಡೆಸಿದ್ದು ಕಂಡುಬರುತ್ತದೆ. ಇದು ಕೂಡ ಚಾಲುಕ್ಯರ ವಂಶಾಡಳಿತವೆ. ಕ್ರಿ ಶ 616ರಲ್ಲಿ 2ನೇ ಪುಲಿಕೇಶಿ ತನ್ನ ಶೌರ್ಯ-ಸಾಹಸಗಳಿಂದ ಆಂಧ್ರಪ್ರದೇಶದ ಕೆಲ ಭಾಗಗಳನ್ನು ಗೆದ್ದುಕೊಂಡ. ಅಲ್ಲಿನ ಆಡಳಿತ ನೋಡಿಕೊಳ್ಳಲು ತನ್ನ ಸೋದರನಾದ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯನ್ನಾಗಿ ನೇಮಿಸಿದ. ಇವನು ಅಣ್ಣನ ಮರಣದ ನಂತರ ಸ್ವತಂತ್ರ ಆಡಳಿತ ನಡೆಸುವ ಮೂಲಕ ವೆಂಗಿ ಚಾಳುಕ್ಯ ವಂಶದ ಉದಯಕ್ಕೆ ಕಾರಣನಾಗುತ್ತಾನೆ.

ಇಡೀ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ. ಅದರಲ್ಲೂ ಭಾರತೀಯ ದೇವಾಲಯ ವಾಸ್ತುವಿನ "ತೊಟ್ಟಿಲು" ಎಂದು ಪ್ರಸಿದ್ಧವಾದ ಪಟ್ಟದಕಲ್ಲು ಚಾಳುಕ್ಯ ಅರಸರೆಲ್ಲರೂ ಪಟ್ಟಾಭಿಷಿಕ್ತರಾಗುತ್ತಿದ್ದ ಸ್ಥಳ. ಇಲ್ಲಿ ಸುತ್ತ-ಮುತ್ತಲಿರುವ ಐಹೊಳೆ,ಪಟ್ಟದಕಲ್ಲು ಹಾಗು ಮಹಾಕೂಟಗಳಲ್ಲೆಲ್ಲ ಚಾಳುಕ್ಯರ ಬಿಟ್ಟುಹೋಗಿರುವ ಐತಿಹಾಸಿಕ ಅವಶೇಷಗಳನ್ನು ಕಾಣಬಹುದು.

ಬಾದಾಮಿಯು ಚಾಳುಕ್ಯರ ವಂಶಾಡಳಿತಕ್ಕೆ ನಾಂದಿ ಹಾಡಿದ ಸ್ಥಳ. ಇತಿಹಾಸದಲ್ಲೇ ಇಷ್ಟೊಂದು ಭವ್ಯ,ಬೃಹತ್ ಹಾಗು ಕಲಾನೈಪುಣ್ಯತೆಯಿಂದ ಕೂಡಿದ ಗುಹಾಲಯ ಇನ್ನೊಂದಿಲ್ಲ. ಇಲ್ಲಿ ಒಟ್ಟು ೪ ಗುಹಾಲಯಗಳಿದ್ದು ಅವು ಅನುಕ್ರಮವಾಗಿ ಶೈವ, ವೈಷ್ಣವ,ಜೈನ ಹಾಗು ಬೌದ್ಧ ಧರ್ಮವನ್ನು ಬಿಂಬಿಸುತ್ತವೆ. ಇಲ್ಲಿ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ. ಅಪಾರ ಶ್ರಮ, ಸಹನೆ ಹಾಗು ಸಂಪತ್ತನ್ನು ಬೇಡುವ ಈ ಕೆಲಸ ಚಾಳುಕ್ಯರ ಮಹತ್ವಾಕಾಂಕ್ಷೆಯಲ್ಲಿ ಅರಳಿ ನಿಂತಿರುವುದು ಕಂಡುಬರುತ್ತದೆ.

ಇಲ್ಲಿನ ೧ನೇ ಗುಹಾಲಯ ಶೈವ ಸಂಪ್ರದಾಯಕ್ಕೆ ಸೇರಿದೆ. ಇದನ್ನು ೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ೧ನೇ ಪುಲಿಕೇಶಿಯ ಕಾಲದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಹರಿಹರ, ಅರ್ಧನಾರೀಶ್ವರ, ವಾತಾಪಿ ಗಣಪತಿ, ಕಾರ್ತಿಕೇಯ ಹಾಗು ನಟರಾಜ ಶಿಲ್ಪಗಳಿವೆ. ಸಭಾಮಂಟಪದಲ್ಲಿನ ಚೌಕಾಕಾರದ ಬೃಹತ್ ಕಂಬಗಳೂ, ಅದರ ಮೇಲೆ ಮೂಡಿಸಿರುವ ಮಣಿ ಕೆತ್ತನೆಗಳು ಅಲ್ಲಿನದೇ ಛತ್ತನಲ್ಲಿ ಆಕಾಶದಲ್ಲಿ ತೇಲಾಡುತ್ತಿರುವಂತೆ ಕೆತ್ತಿರುವ ಗಂಧರ್ವ ಪ್ರೇಮಿಗಳ ಶಿಲ್ಪಗಳು ಆಕರ್ಷಕವಾಗಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪವೂ ತನ್ನದೇ ಆದ ವೈವಿಧ್ಯತೆಯಿಂದ ವಿವರಪೂರ್ಣವಾಗಿವೆ. ಅದರಲ್ಲೂ 18ಕೈಗಳ ನಟರಾಜ, ಅದರ ಪ್ರತಿಯೊಂದು ಕೈಯಲ್ಲಿ ಹಿಡಿದ ವಿವಿಧ ಆಯುಧಗಳು, ಅದರ ನರ್ತನದ ವಿಶೇಷ ಭಂಗಿ ಮೋಹಕವಾಗಿದೆ. ಇಷ್ಟೊಂದು ಬಾಹುಗಳುಳ್ಳ ನಟರಾಜನ ಶಿಲ್ಪ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಸಿಗುವುದಿಲ್ಲ. ಅಲ್ಲಿನ ಇನ್ನೊಂದು ವಿಶೇಷ ಶಿಲ್ಪ ಅರ್ಧನಾರೀಶ್ವರನದ್ದು ಇದರಲ್ಲಿನ ಪಾರ್ವತಿ ಭಾಗದಲ್ಲಿನ ಕಿರೀಟ, ಕರ್ಣಕುಂಡಲ, ಬಳೆಗಳು, ತೋಳ್ಬಂದಿ ಮುಂತಾದವುಗಳು ಹಾಗು ಶಿವನ ಭಾಗದಲ್ಲಿನ ಜಟಾಮುಕುಟ, ನಾಗಪರಶು, ಅರ್ಧಚಕ್ರ ಹಾಗು ನಂದಿಯ ಕೆತ್ತನೆಗಳು ಆಕರ್ಷಕವಾಗಿವೆ. ಅಲ್ಲೇ ಬುಡದಲ್ಲಿ ಶಿವನ ಈ 'ಅರ್ಧನಾರೀಶ್ವರ'ನ ರೂಪಕ್ಕೆ ಕಾರಣನಾದ ಅಸ್ಥಿಪಂಜರದ ಭೃಂಗಋಷಿಯ ಕೆತ್ತನೆಯನ್ನು ವಿಶೇಷವಾಗಿ ಗಮನಿಸಬೇಕು. ಮತ್ತೊಂದು ಗಮನ ಸೆಳೆಯುವ ಶಿಲ್ಪವೆಂದರೆ ಲಕ್ಷ್ಮಿ-ಪಾರ್ವತಿ ಸಹಿತನಾಗಿರುವ ಹರಿ-ಹರನ ಶಿಲ್ಪ. ಇದರಲ್ಲೂ ಶಿವನ ಭಾಗದಲ್ಲಿರುವ ಜಟಾಮುಕುಟ, ಸರ್ಪಕುಂಡಲ, ಸರ್ಪಯಜ್ಞೋಪವೀತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಇಲ್ಲಿನ ತ್ರಿಶೂಲಧಾರಿ ದ್ವಾರಪಾಲಕರು, ಐದುಹೆಡೆಯ ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ.

೨ನೇ ಗುಹಾಲಯ ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಕೀರ್ತಿವರ್ಮನ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳನ್ನು ಹೊಂದಿದ್ದು ಪ್ರವೇಶದ್ವಾರದ ಎಡ-ಬಲ ಬದಿಯಲ್ಲಿ ಬೃಹತ್ ದ್ವಾರಪಾಲಕರು ಸ್ವಾಗತಿಸುತ್ತಾರೆ. ಇಲ್ಲಿನ ಭೂವರಾಹ ಮೂರ್ತಿ, ವಿರಾಟ್ ರೂಪದ ವಾಮನ-ತ್ರಿವಿಕ್ರಮನ ಶಿಲ್ಪ, ಶುಕ್ರಾಚಾರ್ಯರು ವಿಷ್ಣುವಿಗೆ ಅರ್ಘ್ಯ ಸಮರ್ಪಿಸಿತ್ತಿರುವುದು, ಬಲಿಚಕ್ರವರ್ತಿಯ ಸಂಹಾರ ಮುಂತಾದವುಗಳು ಗಮನ ಸೆಳೆಯುತ್ತವೆ.

೩ನೇ ಗುಹಾಲಯ ಮತ್ತೊಂದು ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಮಂಗಳೇಶನು ತನ್ನ ಸಹೋದರ ಕೀರ್ತಿವರ್ಮನ ಪಟ್ಟಾಭಿಷೇಕದ ನೆನಪಿಗೆ ನಿರ್ಮಿಸಿದ್ದಾನೆ. ಇದು ಇಲ್ಲಿರುವ ಎಲ್ಲ ಗುಹಾಲಯಗಳಲ್ಲಿ ಅತಿ ದೊಡ್ಡದು. ಇಲ್ಲೂ ಕೂಡ ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳು ಇವೆ. ಇಲ್ಲಿನ ೮ ಕೈಗಳ ವಿಷ್ಣುವಿನ ಬೃಹತ್ ಶಿಲ್ಪ, ಆ ಕೈಗಳಲ್ಲಿ ಹಿಡಿದಿರುವ ವಿವಿಧ ಆಯುಧಗಳ ವಿವರಪೂರ್ಣ ಕೆತ್ತನೆ, ಹಾಗು ಇದರ ಎದುರಲ್ಲೇ ವಾಮನಾವತಾರದ ಬೃಹತ್ ಶಿಲ್ಪ ಮೋಹಕವಾಗಿವೆ. ಇಷ್ಟೇ ಅಲ್ಲದೆ ಶೇಷಶಯನ ವಿಷ್ಣು, ಬೃಹದಾಕಾರದ ಭೂವರಾಹ ಶಿಲ್ಪಗಳು, ನರಸಿಂಹ, ಹರಿಹರ ಹಾಗು ವಿಷ್ಣುಪುರಾಣದ ಕಥಾನಕದ ದೃಶ್ಯಾವಳಿಯ ಕೆತ್ತನೆಗಳನ್ನು ಕಾಣಬಹುದು.

೪ನೇ ಗುಹಾಲಯ ಜೈನ ಮತಾವಲಂಬದ್ದು. ಇಲ್ಲಿನ ಗರ್ಭಗೃಹದಲ್ಲಿ ಮಹಾವೀರನ ಮೂರ್ತಿ ಇದೆ. ಮುಖ ಮಂಟಪದಲ್ಲಿ ಪಾರ್ಶ್ವನಾಥ-ಬಾಹುಬಲಿಯರ ಬೃಹತ್ತ ಶಿಲ್ಪಗಳಿವೆ. ಇಲ್ಲಿರುವ ಬಾಹುಬಲಿಯ ಮೂರ್ತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನ ಮೂರ್ತಿಯೆಂಬ ಖ್ಯಾತಿ ಇದೆ.

ಇದಲ್ಲದೇ ಇಲ್ಲಿ ಜಂಬುಲಿಂಗ ದೇವಾಲಯ, ಕೆಳಗಿನ ಶಿವಾಲಯ ಹಾಗು ಮೇಲಿನ ಶಿವಾಲಯ ಹಾಗು ಭೂತನಾತ ದೇವಾಲಯಗಳಲ್ಲದೇ ಅಲ್ಲಲ್ಲಿ ಚಿಕ್ಕ-ಪುಟ್ಟ ಅಸಂಖ್ಯ ಗುಡಿ-ಗುಂಡಾರಗಳಿವೆ. ಅವುಗಳ ಮಧ್ಯದಲ್ಲೇ ಐತಿಹಾಸಿಕ ಮಹತ್ವದ ಕಪ್ಪೆಅರೆಭಟ್ಟನ ಶಾಸನವಿದೆ. ರಬಕವಿ ಬನಹಟ್ಟಿ

ಜನಸಂಖ್ಯೆ

[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ ಬಾದಾಮಿ ಪಟ್ಟಣದ ಜನಸಂಖ್ಯೆ 25847 (೨೦೦೧ ರ ಜನಗಣತಿ ಪ್ರಕಾರ) ಇಲ್ಲಿನ ಸಾಕ್ಷರತೆ ಪ್ರಮಾಣ ೬೦%.

ಶೈಕ್ಷಣಿಕ

[ಬದಲಾಯಿಸಿ]

ಪ್ರಮುಖ ವಿದ್ಯಾಸಂಸ್ಥೆಗಳು

  • ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ.
  • ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ
  • ಶ್ರೀ ವೀರಶೈವ ಶಾಲೆ, ಬಾದಾಮಿ
  • ಸ್ವಾಮಿ ವಿವೇಕಾನಂದ ಶಾಲೆ, ಬಾದಾಮಿ

ಪ್ರಮುಖ ಬೆಳೆಗಳು

[ಬದಲಾಯಿಸಿ]

ಜೋಳ, ಸಜ್ಜೆ, ಶೇಂಗಾ, ಸೂರ್ಯಪಾನ (ಸೂರ್ಯ ಕಾಂತಿ), ಉಳ್ಳಾಗಡ್ಡಿ(ಈರುಳ್ಳಿ). ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ, ಬೇಳೆಕಾಳುಗಳು.

ಹವಾಮಾನ

[ಬದಲಾಯಿಸಿ]
  • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೇಸಿಗೆ - °C-೩೯°C , ಚಳಿಗಾಲ - °C-°C
  • ಮಳೆ - ಪ್ರತಿ ವರ್ಷ ಮಳೆ ಸರಾಸರಿ ಮಿಮಿ ಗಳಷ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ಕಿಮಿ/ಗಂ (ಜೂನ), ಕಿಮಿ/ಗಂ (ಜುಲೈ)ಹಾಗೂ ಕಿಮಿ/ಗಂ (ಅಗಸ್ಟ) ಇರುತ್ತದೆ.

ಸಮೀಪದ ಸ್ಥಳಗಳು

[ಬದಲಾಯಿಸಿ]

‍* ಪಟ್ಟದಕಲ್ಲು

ಪ್ರವಾಸ

[ಬದಲಾಯಿಸಿ]

ಮಲ್ಲಿಕಾರ್ಜುನ ದೇವಾಲಯ

[ಬದಲಾಯಿಸಿ]

ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ. ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ. ಈ ದೇವಾಲಯದಲ್ಲಿ ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ ಕೆತ್ತನೆಗಳಿದ್ದು ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು ಹರಿಹರನ ಬಲಕ್ಕೆ ಮತ್ತು ವಿಷ್ಣುವನ್ನು ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ, ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು.

ಎರಡನೇ ಗುಹೆ ಸ್ವಾಮಿ ವಿಷ್ಣುವಿಗೆ ಸಮರ್ಪಿಸಲಾಗಿದ್ದು ಇಲ್ಲಿನ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ. ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು. 100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ. ಇದರ ಜೊತೆಗೆ ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ದೇವಾಲಯ ಜೈನ ಧರ್ಮಕ್ಕೆ ಸಮರ್ಪಿತವಾಗಿದ್ದು ಮಹಾವೀರನು ಕುಳಿತಿರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು.

ಭೂತನಾಥ ದೇವಾಲಯ

[ಬದಲಾಯಿಸಿ]

ಭೂತನಾಥ ದೇವಾಲಯಗಳ ಸಮೂಹದ ಒಂದು ಭಾಗವಾಗಿಹ ಮಲ್ಲಿಕಾರ್ಜುನ ದೇವಾಲಯವು ಗುಂಪಿನ ಎರಡನೇ ಮಹತ್ವದ ದೇವಾಲಯವಾಗಿದೆ. ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ. ದೇವಾಲಯವು ಸಮಾಂತರವಾದ ವೇದಿಕೆಗಳು, ಬೃಹತ್ ಚೌಕ ಗೋಪುರಾಕೃತಿ ಮತ್ತು ಸಾದಾ ಗೋಡೆಗಳು ಮತ್ತು ಕೋನವಾದ ಛಾವಣಿಗಳುಳ್ಳ ತೆರೆದ ಮಂಟಪಗಳನ್ನು ಹೊಂದಿದೆ. ಬಾದಾಮಿಯನ್ನು ಪ್ರವಾಸಿಸುವವರು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ಸೇರಿಸಿಕೊಳ್ಳಬಹುದು.

ಪುರಾತನ ವಸ್ತುಸಂಗ್ರಹಾಲಯ

[ಬದಲಾಯಿಸಿ]

ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತಿತ್ತು. ಆದರೆ 1982 ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು.

ಈ ಸಂಗ್ರಹಾಲಯವನ್ನು ಸಂದರ್ಶಿಸುವ ಸಮಯದಲ್ಲಿ ಪ್ರವಾಸಿಗರು ಸಮೃದ್ಧಿ ಗೆ ಹೆಸರಾದ ಲಜ್ಜಾ ಗೌರಿ ಆಕೃತಿಗಳು ಮತ್ತು 6ನೇ ಶತಮಾನದಿಂದ 16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ 4 ಪ್ರದರ್ಶನಾ ಘಟಕಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಬಿಸುವ ಹಲವು ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತವೆ. ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನಾಗೂಡುಗಳಿದ್ದು ಮುಂಭಾಗದಲ್ಲಿ ಮತ್ತು ವರಾಂಡದಲ್ಲಿಯೂ ಸಹ ತೆರೆದ ಪ್ರದರ್ಶನಾ ಗೂಡುಗಳಿವೆ. ಇಲ್ಲಿನ ಪ್ರದರ್ಶನಗೂಡುಗಳಲ್ಲಿ ಒಂದರಲ್ಲಿರುವ ಶಿಡ್ಲಫಡಿ ಗುಹೆಯೂ ಪ್ರಾಚೀನ ಕಾಲದ ಕಲ್ಲಿನ ನೆಲೆಗೆ ಸಾಕ್ಷಿಯಾಗಿದೆ. ಕಲ್ಲಿನ ಕಲಾಕೃತಿಗಳೊಂದಿಗೆ ಈ ಪ್ರದರ್ಶನಾಗೂಡು ಪ್ರಾಚೀನ ಕಲೆ ಹಾಗೂ ಹಲವು ಶಾಸನಗಳನ್ನು ಪ್ರದರ್ಶಿಸುತ್ತದೆ. ಅಲ್ಲಿರುವ ತೆರೆದ ವರಾಂಡ ಪ್ರದರ್ಶನಾಗೂಡಿನಲ್ಲಿ ಪ್ರವಾಸಿಗರು ವೀರಗಲ್ಲುಗಳನ್ನು, ದ್ವಾರಪಾಲಕ ಜೋಡಿಯ ಆಕರ್ಷಕ ಚಿತ್ರಕಲೆ ಮತ್ತು ಶಾಸನಗಳನ್ನು ನೋಡಬಹುದು. ಸಂಗ್ರಹಾಲಯದ ಹೊಸ ಪ್ರದರ್ಶನಾಗೂಡಿನಲ್ಲಿ ಹಲವು ಶಿಲಾಶಾಸನ ವಿವರಗಳು ಮತ್ತು ವಾಸ್ತುಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

ರಸ್ತೆ ಸಾರಿಗೆ

[ಬದಲಾಯಿಸಿ]

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಬಾದಾಮಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ನಗರ ಆಡಳಿತ

[ಬದಲಾಯಿಸಿ]

ವಾರ್ಡ್ ಗಳು ನಗರದಲ್ಲಿ ಒಟ್ಟು [೨೨] ವಾರ್ಡ್ ಗಳು ಇರುತ್ತವೆ.

ಬಾದಾಮಿ ಪ್ರಮುಖ ಬಡಾವಣೆಗಳು

  • ಚಾಲುಕ್ಯ ನಗರ, ವಿದ್ಯಾ ನಗರ, ಆನಂದ ನಗರ, ಬ್ಯಾಂಕ ಕಾಲೊನಿ, ಮೆಣಬಸದಿ ರಸ್ತೆ, ಉಳ್ಳಾಗಡ್ಡಿ ಓಣಿ,
  • ತಟಕೋಟಿ, ಕೀಲ್ಲಾ ಓಣಿ, ತಲವಾರ ಓಣಿ, ಗಾಂಧಿ ನಗರ,

ಸಿನಿಮಾ ಚಿತ್ರ ಮಂದಿರಗಳು ಶ್ರೀ ಮಹಾಕೂಟೆಶ್ವರ, ಶ್ರೀ ಕುಮಾರೆಶ್ವರ, ಶೀತಲ್

ಖಾದ್ಯ

[ಬದಲಾಯಿಸಿ]

ರೊಟ್ಟಿ , ಪಲ್ಯ, ಚಪಾತಿ, ಹೋಳಿಗಿ, ಕಡುಬು, ಸಿರಾ, ಉಪ್ಪಿಟ್ಟು, ಅವಲಕ್ಕಿ ವಗ್ಗರಣೆ, ಬಜ್ಜಿ, ಚೂಡಾ, ಇತ್ಯಾದಿ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಟಿಪ್ಪಣಿಗಳು

[ಬದಲಾಯಿಸಿ]

೧. The Chalukyas of Badami Ed. Dr. M. S. Nagaraja Rao, The Mythic Society, Bangalore 1978

೨. ಪಲ್ಲವ ಸೈನಿಕರು ಬಾದಾಮಿಯಿಂದ ಕೊಂಡೊಯ್ದ ಗಣಪನ ಪ್ರತಿಮೆಯೊಂದನ್ನು ಕಂಚಿಯ ದೇವಾಲಯದ ಪ್ರಾಕಾರದಲ್ಲಿ ಪ್ರತಿಷ್ಠಾಪಿಸಲಾಯಿತು. ಇದುವೆ ವಾತಾಪಿ ಗಣಪತಿ. ಮುತ್ತುಸ್ವಾಮಿ ದೀಕ್ಷಿತರು ತಮ್ಮ ಪ್ರಸಿದ್ಢ ಕೃತಿಯಲ್ಲಿ ಭಜಿಸಿದ್ದು ಈ ಗಣಪನನ್ನೆ. ವಾತಾಪಿಯೆಂದರೆ ಬಾದಾಮಿಯೆ.



"https://kn.wikipedia.org/w/index.php?title=ಬಾದಾಮಿ&oldid=1233990" ಇಂದ ಪಡೆಯಲ್ಪಟ್ಟಿದೆ