ಆಧುನಿಕ ಕರ್ನಾಟಕ ಶಾಸ್ತ್ರೀಯ ಸಂಗೀತ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

Compositions

ವರ್ಣಂಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಖಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಆಧುನಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಆಧುನಿಕವೆಂಬ ಮಾತಿಗೆ ಪ್ರಾಚೀನವಲ್ಲದುದು, ಇಂದಿನದು ಎಂಬ ಎರಡು ಅರ್ಥಗಳಲ್ಲಿ ವ್ಯವಹಾರವಿದೆ. ಈ ಎರಡು ಅರ್ಥ ವಿನ್ಯಾಸಗಳಿಂದಲೂ ಆಧುನಿಕ ಸಂಗೀತದ ವ್ಯಾಪ್ತಿ ಸ್ವಲ್ಪಮಟ್ಟಿಗೆ ಬೇರೆಯೇ ಆಗುತ್ತದೆ. ಅರ್ವಾಚೀನವಾದುದು ಎಂಬ ಅರ್ಥದಲ್ಲಿ ಪ್ರಾಚೀನ ಸಂಗೀತದಿಂದ ಹೇಗೆ ಭಿನ್ನವಾಗಿದೆ ಎಚಿದೂ, ಇಂದಿನದು ಎಂಬ ಅರ್ಥದಲ್ಲಿ ಕೇವಲ ಸಮಸಾಮಯಿಕವಾಗಿದ್ದು ಸಂಗೀತವೆಂಬುದರ ಹೆಸರಿನಲ್ಲಿ ಏನೇನೆಲ್ಲ ಒಳಗೊಂಡಿದೆಯೋ ಅದರ ಮೊತ್ತ ಎಂದೂ ಭಾವ. ಇವೆರಡರ ಸಂಪೂರ್ಣ ಅಧ್ಯಯನ ಈ ಹ್ರಸ್ವ ಲೇಖನದ ವ್ಯಾಪ್ತಿಯನ್ನು ಮೀರಿದುದು. ಉದಾಹರಣೆಗೆ, ಆಧುನಿಕವೆನ್ನುವ ಹೆಸರಿನಲ್ಲಿ ಲಘು ಅಥವಾ ಸುಗಮ ಸಂಗೀತ, ಮೇಳ (ಆರ್ಕೆಸ್ಟ್ರ), ಚಲನಚಿತ್ರ ಸಂಗೀತ, ಜಾನಪದ ಸಂಗೀತ, ಹಿಪ್ಪಿ ಸಂಗೀತ, ಬೀಟ್ಲ್ ಸಂಗೀತ ಮುಂತಾದವೆಲ್ಲ ಶಾಸ್ತ್ರೀಯದಷ್ಟೇ ವಿವಕ್ಷಿತವಾಗಿವೆ. ಆದರೆ ಇವುಗಳನ್ನೆಲ್ಲ ಬಿಟ್ಟು ಶಾಸ್ತ್ರೀಯ ಸಂಗೀತವನ್ನು ಮಾತ್ರ ಕುರಿತು ಇಲ್ಲಿ ವಿವೇಚಿಸಿದೆ. ಅಂತೆಯೇ ಸಂಗೀತವೆನ್ನುವ ಮಾತಿನ ವ್ಯಾಪ್ತಿಯೂ ಬಹು ವಿಸ್ತಾರವಾದುದೇ. ವಿವಿಧ ದೇಶಗಳ ಸಂಗೀತದ ಸಮಷ್ಟಿಯನ್ನಾಗಲಿ, ಅದರ ಹಿನ್ನೆಲೆಯಲ್ಲಿ ಭಾರತೀಯ ಸಂಗೀತ ಮಾತ್ರವನ್ನಾಗಲಿ ಇಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಸಂಗೀತಕ್ಕೆ ಗೀತವಾದನ ನರ್ತನಗಳ ಸಮುಚ್ಚಯವೆಂಬ ಅರ್ಥವೇ ಬಹುಕಾಲ ಇದ್ದು ಅನಂತರ ಗೀತಾವಾದನಗಳ ಕೂಟವೆಂಬ ಅರ್ಥ ನಿಂತಿತು. ಇಂದು ಶ್ರೀಸಾಮಾನ್ಯನ ವಾಣಿಯಲ್ಲಿ ಸಂಗೀತವೆಂದರೆ ಹಾಡಿಕೆಯೆಂಬ ಅರ್ಥವೇ ಪ್ರಧಾನವಾಗಿ ನಿಂತಿದೆ. ಆದರೂ ಆಧುನಿಕ ಸಂಗೀತವೆಂದರೆ ಕರ್ಣಾಟಕ ಸಂಗೀತದಲ್ಲಿ ಇಂದಿನ ಗೀತಾವಾದನಗಳ ಕೂಟ ಎಂದು ಇಲ್ಲಿ ವ್ಯವಹರಿಸಿದೆ.

ಪ್ರಾಚೀನ ಸಂಗೀತದ ಭಿನ್ನತೆ[ಬದಲಾಯಿಸಿ]

ಶ್ಯಾಮಾ ಶಾಸ್ತ್ರಿಗಳು
ಶ್ರೀ ತ್ಯಾಗರಾಜರು (೧೭೬೭? - ೧೮೪೭)

ಆಧುನಿಕ ಸಂಗೀತಕ್ಕೂ ಪ್ರಾಚೀನ ಸಂಗೀತಕ್ಕೂ ಕೆಲವು ವಿಷಯಗಳಲ್ಲಿ ಸಾದೃಶ್ಯವೂ ಉಳಿದಂತೆ ವೈದೃಶ್ಯವೂ ಇದೆ. ಹಿಂದೆ ಉಪಯೋಗಿಸುತ್ತಿದ್ದ ಎರಡು ಆಧಾರ ಸ್ವರಗಳ ಬದಲು ಸಪ್ತಸ್ವರಗಳಲ್ಲಿ ಅತ್ಯಂತ ಕೆಳಮಟ್ಟದ ಮೊದಲನೆಯ ಸ್ವರವನ್ನು ಮಾತ್ರ ಆಧಾರ ಸ್ವರವಾಗಿ ಬಳಸುತ್ತಾರೆ. ಅನಿಶ್ಚಿತವೂ ಸಂಕೀರ್ಣವೂ ಆಗಿದ್ದ ಅಂತರ, ಕಾಕಲೀ ಸ್ವರಗಳ ಸ್ಥಾನಗಳು ಈಗ ನಿಷ್ಕೃಷ್ಟವಾಗಿವೆ. ಪ್ರತಿಮಧ್ಯಮದ ಬಳಕೆ ಈಗ ಹೆಚ್ಚು ಅನುಬಂಧಿತವಾಗಿಯೂ ವ್ಯಾಪಕವಾಗಿಯೂ ಬೆಳೆದಿದೆ. ರಾಗ, ತಾಳ, ಹಾಡುಗಳಲ್ಲಿ ವೈವಿಧ್ಯ, ಬಹುಮುಖಿತ್ವಗಳ ಬದಲು ಏಕಾಗ್ರ ವಿಕಾಸದೆಡೆಗೆ ಓಟವಿದೆ. ಈ ಮೂರರ ಲಕ್ಷ್ಯ ಲಕ್ಷಣಗಳಲ್ಲಿ ತೀವ್ರವಾದ ಮಾರ್ಪಾಟುಗಳಾಗಿವೆ. ಸ್ವಾಭಾವಿಕವಾಗಿಯೇ ಕಾಲಪ್ರವಾಹ ಇವುಗಳಲ್ಲಿ ಹಳೆಯದನ್ನು ಕಳೆದು ಹೊಸತನ್ನು ತಂದಿದೆ. ಈ ದೃಷ್ಟಿಯಲ್ಲಿ ಆಧುನಿಕ ಸಂಗೀತ ಸಾವಿರಾರು ವರ್ಷಗಳ ಮಾತಿರಲಿ, ಕೇವಲ ಮುನ್ನೂರು ವರ್ಷಗಳಷ್ಟು ಹಿಂದಿನ ಸಂಗೀತದಿಂದ ಸಹ ತೀರಾ ಭಿನ್ನವಾಗಿ ತೋರುತ್ತಿದೆ. ಆದರೂ ಇಂದು ಪ್ರಾಯೋಗಿಕ ಹಾಗೂ ತಾಂತ್ರಿಕ ವ್ಯತ್ಯಾಸಗಳಿದ್ದರೂ ಇವುಗಳ ತಾಯಿಬೇರು ಒಂದೇ ಆದುದರಿಂದ ಎರಡರಲ್ಲೂ ಕಾಣುವ ಕೆಲವು ಸಾಮ್ಯ, ಸಾದೃಶ್ಯಗಳು ಸಂಪ್ರದಾಯದ ಅವಿಚ್ಛಿನ್ನತೆಯಿಂದಾಗಿ ಉಳಿದುಬಂದಿದೆ. ಹೀಗೆ, ಸ್ವರಾನುಕ್ರಮಣದ ಕಾರಣದಿಂದ ಹುಟ್ಟುವ ಸ್ಥಾನಗಳು, ಗಮಕಗಳು, ರಾಗತ್ವ ಮುಂತಾದುವುಗಳಿಂದಲೂ ಶ್ರುತಿ, ಮೂರ್ಛನೆ, ವರ್ಣಾಲಂಕಾರಗಳು, ತಾಳಪ್ರಾಣಗಳು ಇತ್ಯಾದಿಗಳಿಂದಲೂ ನಮ್ಮ ಸಂಗೀತದಲ್ಲಿ ಪ್ರಾಚೀನತೆಯಿಂದ ಆಧುನಿಕತೆಯವರೆಗೆ ಪರಂಪರೆಯ ಅವಿಚ್ಛಿನ್ನತೆ ಉಳಿದುಬಂದಿದೆ.

ಆಧುನಿಕತೆಯ ಉಗಮ[ಬದಲಾಯಿಸಿ]

ಕರ್ನಾಟಕ ಸಂಗೀತದಲ್ಲಿ ಆಧುನಿಕ ಯುಗದ ಬೇರು ಹದಿನೈದನೆಯ ಶತಮಾನದಲ್ಲಿ ಹುಟ್ಟಿ, ಹದಿನಾರನೆಯ ಶತಮಾನದಲ್ಲಿ ಬಲಿತು, ಹದಿನೇಳನೆಯ ಶತಮಾನದಲ್ಲಿ ಮೊಳೆತು ಮೇಲೆದ್ದು ಕಾಣಿಸಿಕೊಳ್ಳುತ್ತದೆ. ಸ್ವರ ವ್ಯವಸ್ಥೆಯಲ್ಲೂ ರಾಗಲಕ್ಷಣಗಳಲ್ಲೂ ತಾಳ ವ್ಯವಸ್ಥೆಯಲ್ಲೂ ಪ್ರಾರಂಭವಾದ ಬದಲಾವಣೆಗಳು ಹದಿನೈದನೆಯ ಶತಮಾನದಲ್ಲಿ ಶಾಙ್ರ್ಗದೇವಸಂಗೀತರತ್ನಾಕರಕ್ಕೆ ಕಲ್ಲಿನಾಥ ಬರೆದ ಸಂಗೀತ ಕಲಾನಿಧಿ ವ್ಯಾಖ್ಯಾನದಲ್ಲಿ ಮೊದಲಬಾರಿಗೆ ಕಾಣಿಸಿಕೊಳ್ಳುತ್ತದೆ. ಇವು ಹದಿನಾರನೆಯ ಶತಮಾನದಲ್ಲಿ ರಚಿತವಾದ ರಾಮಾಮಾತ್ಯನ ಸ್ವರಮೇಳ ಕಳಾನಿಧಿಯಲ್ಲೂ ಪುಂಡರೀಕವಿಠಲನ ಸದ್ರಾಗಚಂದ್ರೋದಯ, ನರ್ತನನಿರ್ಣಯಗಳಲ್ಲೂ ಬೆಳೆದು ಬಲಿಯುತ್ತವೆ. ಹನ್ನೆರಡು ಸ್ವರಸ್ಥಾನಗಳಲ್ಲಿ ಏಳನ್ನು ವಿವಿಧರೀತಿಗಳಲ್ಲಿ ವೈಜ್ಞಾನಿಕವಾಗಿ ಸಂಯೋಜಿಸುವ ಗಣಿತ ಪ್ರಕ್ರಿಯೆಯನ್ನೂ ಅವುಗಳ ಚೌಕಟ್ಟಿನಲ್ಲಿ ಸಮಸಾಮಯಿಕವಾದ ಎಲ್ಲ ರಾಗಗಳನ್ನೂ ಜನಕಜನ್ಯಭಾವದಲ್ಲಿ ಅಡಗಿಸುವ ಪದ್ಧತಿಯನ್ನೂ ಮೊದಲಬಾರಿಗೆ ಪುಂಡರೀಕವಿಠಲನಲ್ಲೂ ಅನಂತರ ಸ್ವಲ್ಪ ಭಿನ್ನವಾದ ಕ್ರಮದಲ್ಲಿ ವೆಂಕಟಮಖಿಯಲ್ಲೂ ಕಾಣುತ್ತೇವೆ. ಹದಿನಾಲ್ಕನೆಯ ಶತಮಾನದಲ್ಲಿ ವಿದ್ಯಾರಣ್ಯ ಯತಿ ಉದ್ಘಾಟಿಸಿದ ಮೇಳದ ಕಲ್ಪನೆ ಹದಿನೇಳನೆಯ ಶತಮಾನದಲ್ಲಿ ಗೋವಿಂದ ದೀಕ್ಷಿತನ ಸಂಗೀತಸುಧೆಯಲ್ಲಿ ಬೆಳೆಯಿತು. ಆದರೂ ಆಧುನಿಕ ಸಂಗೀತಕ್ಕೆ ನಾಂದೀರೂಪವಾದುದು ಗೋವಿಂದ ದೀಕ್ಷಿತನ ಮಗನಾದ ವೆಂಕಟಮಖಿ ಬರೆದ ಚತುರ್ದಂಡಿಪ್ರಕಾಶಿಕೆಯೇ. ಹದಿನಾರನೆಯ ಶತಮಾನದಲ್ಲಿ ಆಧುನಿಕ ತಾಳಪದ್ಧತಿಯನ್ನೂ ಆಧುನಿಕ ರಾಗಲಕ್ಷಣಗಳನ್ನೂ ಹರಿದಾಸರು ರೂಢಿಗೆ ತಂದರು. ಶಿವಶರಣರ ಕೃತಿ ರಚನೆಗಳೂ ಈ ನಿಟ್ಟಿನಲ್ಲಿ ಸ್ವಲ್ಪ ಸಹಕಾರಿಗಳಾದುವು. ಆಧುನಿಕ ಶಿಕ್ಷಣ ಕ್ರಮಕ್ಕೂ ರಾಗತಾಳಗಳಿಗೂ ಬುನಾದಿಯನ್ನು ಕಲ್ಪಿಸಿಕೊಟ್ಟ ಪುರಂದರದಾಸರನ್ನು ಕರ್ಣಾಟಕ ಸಂಗೀತ ಪಿತಾಮಹನೆಂದು ಎಲ್ಲರೂ ಒಪ್ಪುತ್ತಾರೆ. ಇವರೆಲ್ಲರೂ ಕನ್ನಡಿಗರೆಂಬುದನ್ನು ಇಲ್ಲಿ ಸ್ಮರಿಸಬಹುದು. ಇಂದು ರೂಢಿಯಲ್ಲಿರುವ ರೂಪದಲ್ಲಿ ಕರ್ನಾಟಕ ಸಂಗೀತ ಪ್ರಾರಂಭವಾದುದು ಸುಮಾರು ಹದಿನೆಂಟನೆಯ ಶತಮಾನದ ಮಧ್ಯದಲ್ಲಿ. ನಮ್ಮ ಸಂಗೀತದ ತ್ರಿಮೂರ್ತಿಗಳೆಂದು ಪ್ರಸಿದ್ಧರಾದ ತ್ಯಾಗರಾಜ, ಮುತ್ತುಸ್ವಾಮೀ ದೀಕ್ಷಿತ ಮತ್ತು ಶಾಮಾಶಾಸ್ತ್ರಿಗಳು ತಂಜಾವೂರಿನಲ್ಲಿ ಉದಯಿಸಿದಾಗ, ಮಹಾಪ್ರತಿಭಾವಂತರೂ ಸಮಾಜ ಸುಧಾರಕರೂ ಆದ ಈ ಮೂವರು ಸ್ವತಃ ಶ್ರೇಷ್ಠ ಸಂಗೀತ ವಿದ್ವಾಂಸರಾಗಿದ್ದುದಲ್ಲದೇ ವೆಂಕಟಮಖಿಯ ಶಾಸ್ತ್ರೀಯ ಕಲ್ಪನೆಗಳನ್ನೇ ಮೈಗೂಡಿಸಿಕೊಂಡ ನೂರಾರು ಸಂಗೀತರಚನೆಗಳನ್ನು ಮಾಡಿ ತಮ್ಮ ಹಲವಾರು ಶಿಷ್ಯಪ್ರಶಿಷ್ಯರಿಂದ ದಕ್ಷಿಣ ಭಾರತದಲ್ಲೆಲ್ಲ ಕೇವಲ ಐವತ್ತು ವರ್ಷಗಳಲ್ಲಿ ಪ್ರಸಾರ ಮಾಡಿ ಊರ್ಜಿತ ಮಾಡಿದರು. ಆದುದರಿಂದ, ಕಾಲದೇಶಗಳಲ್ಲಿ ಐಕ್ಯವನ್ನೂ ಸ್ಥಿರತೆಯನ್ನೂ ಪಡೆಯಲು ಸಾಮಾನ್ಯವಾಗಿ ಹೆಚ್ಚು ಕಾಲವನ್ನು ಅಪೇಕ್ಷಿಸುವ ಈ ವಿಕಾಸಕ್ರಿಯೆ ತನ್ನ ವೇಗವನ್ನು ವಿಶೇಷವಾಗಿ ವರ್ಧಿಸಿಕೊಂಡು ಇಂದಿನ ಸಂಗೀತದ ಘಟ್ಟವನ್ನು ಕೇವಲ ನೂರು ವರ್ಷಗಳಲ್ಲಿ ತಲುಪಿತು. ಈ ತ್ರಿಮೂರ್ತಿಗಳು ಸಾಧಿಸಿಕೊಟ್ಟ ಆಧುನಿಕತೆಗೆ ಅರ್ವಾಚೀನರು ಕಳೆದ ಒಂದು ಶತಮಾನದಲ್ಲಿ ಕೆಲವು ಹೊಸರಾಗಗಳ, ಹೊಸರಚನೆಗಳ ವಿವರಗಳನ್ನು ಬಿಟ್ಟರೆ ಹೊಸತೇನನ್ನೂ ಸೇರಿಸಿಲ್ಲವೆಂದೇ ಹೇಳಬೇಕು.

ಆಧುನಿಕ ಸಂಗೀತದ ಲಕ್ಷಣಗಳು[ಬದಲಾಯಿಸಿ]

ಹೀಗೆ, ಆಧುನಿಕ ಕರ್ನಾಟಕ ಸಂಗೀತವೆಂದರೆ ಎಪ್ಪತ್ತೆರಡು ಮೇಳಕರ್ತಗಳ ಯೋಜನೆಯ ಆಶ್ರಯದಲ್ಲಿ ಸಂಪೂರ್ಣ ಷಾಡವ, ಔಡುವ, ಶುದ್ಧ, ವಕ್ರ ಎಂಬ ಭೇದಗಳನ್ನುಳ್ಳ, ರಾಗಾಂಗ, ಉಪಾಂಗ, ಭಾಷಾಂಗ ಎಂಬ ಜಾತಿಗಳುಳ್ಳ ಜನಕ - ಜನ್ಯ ರಾಗಗಳನ್ನೂ ಸುಳಾದಿ ತಾಳಗಳನ್ನೂ ಅಳವಡಿಸಿ ರಚಿಸಲಾಗಿರುವ ಹಾಡುಗಳನ್ನು ಒಳಗೊಂಡ ಪದ್ಧತಿಯೆನ್ನಬಹುದು. ಇದೇ ರೀತಿಯಲ್ಲಿ, ಕಛೇರಿ ಪದ್ಧತಿಗೆ ವರ್ಣ, ಕೃತಿ, ಪದ, ತಿಲ್ಲಾನ, ದೇವರ ನಾಮ, ದಸರು, ಜಾವಳಿ, ಶ್ಲೋಕ, ಪಲ್ಲವಿ, ಎಂಬ ರಚನಾ ರೀತಿಗಳನ್ನೂ ರಾಗಾಲಾಪನೆ, ನೆರವಲು ಸ್ವರ ಕಲ್ಪನೆ ಮತ್ತು ತಾನ ಎಂಬ ಹೆಸರುಗಳಲ್ಲಿ ಸಂಗೀತ ವಿದ್ವಾಂಸ ವೇದಿಕೆಯ ಮೇಲೆಯೇ ತನ್ನ ಮನೋಧರ್ಮಕ್ಕೆ ಅನುಸಾರವಾಗಿ ಸ್ವತಂತ್ರವಾಗಿಯೂ ಸ್ವಯಂ ಸ್ಫೂರ್ತಿಯಿಂದಲೂ ಪೂರ್ವನಿಯೋಜನವಿಲ್ಲದೆಯೂ ಸೃಷ್ಟಿಸುವ ಅಂಶಗಳನ್ನೂ ಒಳಗೊಂಡಿದ್ದು ಆಧುನಿಕ ಕರ್ಣಾಟಕ ಸಂಗೀತವೆನ್ನಬಹುದು. ಈ ಹಾಡಿನ ರೀತಿಗಳಲ್ಲಿ ಹಲವು ಪ್ರಾಚೀನವಾದುವುಗಳೇ : ದೇವರನಾಮ ಐನೂರು ವರ್ಷಗಳಷ್ಟಾದರೂ ಹಳೆಯದು. ಇದೇ ಕೃತಿಗೆ ಮಾತೃಕೆಯೂ ಹೌದು. ಪದ ಸುಮಾರು ಮುನ್ನೂರು ವರ್ಷಗಳಷ್ಟಾದರೂ ಹಳೆಯದು. ತಿಲ್ಲಾನದ ಮೂಲ ಸ್ವರೂಪವಾದ ಕೈವಾಡವೆಂಬ ಸಂಗೀತ ಪ್ರಬಂಧ ಕಡೆಯ ಪಕ್ಷ ಸಾವಿರದ ಐನೂರು ವರ್ಷಗಳಷ್ಟು ಹಳೆಯದು. ಆದರೂ ಇವೆಲ್ಲವೂ ಆಧುನಿಕ ರೂಪವನ್ನು ಸಂಕಲಿತ ಹಾಗೂ ವ್ಯವಸ್ಥಿತ ಪ್ರಯೋಗವನ್ನೂ ಪಡೆದುದು ಸುಮಾರು ಇನ್ನೂರು ವರ್ಷಗಳಷ್ಟು ಹಿಂದೆ ಮಾತ್ರ. ಉಳಿದ ವರ್ಣ, ಪಲ್ಲವಿ, ನೆರವಲು, ಸ್ವರಕಲ್ಪನೆ, ತಾನ, ಆಧುನಿಕ ರೂಪದ ಜಾವಳಿ -- ಇವು ಸುಮಾರು ಎರಡು ಶತಮಾನಗಳಷ್ಟು ಪ್ರಾಚೀನ.

ಮೃದಂಗ
ಘಟಂ
ಖಂಜೀರ

ಅಲ್ಲದೆ ಆಧುನಿಕ ಸಂಗೀತವನ್ನು ಅದರ ಕಛೇರಿ ಪದ್ಧತಿಯಲ್ಲಿ ಬಳಕೆಯಾಗುವ ವಾದ್ಯಗಳು, ಶಿಕ್ಷಣ, ಕ್ರಮ ಮತ್ತು ಮುನ್ನೋಟದ ದಿಕ್ಕುಗಳಿಂದಲೂ ವರ್ಣಿಸಬಹುದು. ಈಗ ಕರ್ಣಾಟಕ ಸಂಗೀತದ ಕಛೇರಿಗಳು ವರ್ಣದಿಂದ ಪ್ರಾರಂಭವಾಗಿ, ಗಣಪತಿಯ ಸ್ತುತಿಯ ಒಂದು ಕೃತಿ, ಶಾರದಾಸ್ತುತಿ, ಗುರುಸ್ತುತಿಗಳಲ್ಲಿ ಐಚ್ಛಿಕವಾಗಿ ಒಂದೊಂದು ಕೃತಿ, ಅಲ್ಪ ರಾಗಾಲಾಪನೆ, ಹ್ರಸ್ವ ಸ್ವರಕಲ್ಪನೆಗಳುಳ್ಳ ಕೆಲವು ಪುಟ್ಟ ಕೃತಿಗಳು, ಕಛೇರಿಯ ಪ್ರಧಾನ ಅಂಗವಾಗಿ ಅದರ ಮಧ್ಯದಲ್ಲಿ ನಿರೂಪಿತವಾಗುವ ಒಂದು ಕೃತಿಗೆ ವಿಸ್ತಾರವಾದ ರಾಗಾಲಾಪನೆ, ಕೃತಿಯಲ್ಲಿ ನೆರವಲು ಮತ್ತು ಸ್ವರ ಕಲ್ಪನೆಗಳು, ಅನಂತರ ಐಚ್ಛಿಕವಾಗಿ ರಾಗ, ತಾನ ಮತ್ತು ಪಲ್ಲವಿ, ಆಮೇಲೆ ಪದ, ತಿಲ್ಲಾನ, ಒಂದೆರಡು ಕನ್ನಡ ದೇವರ ನಾಮಗಳು, ಐಚ್ಛಿಕವಾಗಿ ಜಾವಳಿ, ದರು, ಕಡೆಯಲ್ಲಿ ಶ್ಲೋಕ ಮತ್ತು ಮಂಗಳ - ಹೀಗೆ ನಡೆದು ಮುಗಿಯುತ್ತದೆ. ಹದಿನೆಂಟನೆಯ ಶತಮಾನದ ಮೊದಲಲ್ಲಿ ಕನ್ನಡ ನಾಡಿನಲ್ಲಿ ಮೊದಲಾದ ಪಿಟೀಲು ವಾದ್ಯ ಪಕ್ಕವಾದ್ಯವಾಗಿ ಬಳಸಲ್ಪಟ್ಟು ಅನಂತರ ದಕ್ಷಿಣ ಭಾರತದಲ್ಲೆಲ್ಲ ಹರಡಿತು. ಮೃದಂಗ, ಕಂಜಿರ, ಘಟಗಳೂ ಪಕ್ಕವಾದ್ಯಗಳಾಗತೊಡಗಿದುದು ಈ ಸುಮಾರಿನಲ್ಲಿಯೇ. ಅಂತೆಯೇ ವೀಣೆ, ಕೊಳಲುಗಳು ಹಾಡಿಕೆಯಿಂದ ಬೇರ್ಪಟ್ಟು ಸ್ವತಂತ್ರವೂ ಪ್ರಧಾನವೂ ಆದ ತನಿಕಚೇರಿಯ ವಾದ್ಯಗಳಾದುದು. ಪುರಂದರದಾಸನಿಗೆ ಪೂರ್ವದಲ್ಲಿ ನಮ್ಮ ಸಂಗೀತ ಗುರುಗಳು ಯಾವ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿದ್ದರೆಂದು ಹೇಳುವುದು ಕಷ್ಟ. ಮಾಯಮಾಳವಗೌಳ ರಾಗದಲ್ಲಿ ಆದಿ ತಾಳದಲ್ಲಿ ಪುರಂದರ ರಚಿಸಿಕೊಟ್ಟ ಸರಳೆವರಸೆಗಳು, ಜಂಟಿಸ್ವರ ವರಸೆಗಳು, ಸುಳಾದಿ ಸಪ್ತ ತಾಳಗಳ ಐದು ಜಾತಿಗಳಲ್ಲಿ ರಚಿಸಿದ ತಾಳಾಲಂಕಾರಗಳು, ಪಿಳ್ಳರಿ ಸಂಚಾರಿ ಗೀತಗಳು -- ಇವುಗಳಿಂದಲೇ ಇಂದಿಗೂ ಸಂಗೀತ ಪಾಠ ಪ್ರಾರಂಭವಾಗುತ್ತದೆ. ಇದಾದ ಮೇಲೆ, ಸ್ವರಜತಿ, ವರ್ಣ, ಕೃತಿ; ಅನಂತರ ಮನೋಧರ್ಮ ಸೃಷ್ಟಿಯ ಸ್ವರ ಕಲ್ಪನೆ, ರಾಗಾಲಾಪನೆ, ನೆರವಲು; ಆಮೇಲೆ ಪದ, ತಿಲ್ಲಾನ, ದರು, ಜಾವಳಿ, ಶ್ಲೋಕ; ಕಡೆಯಲ್ಲಿ ತಾನ, ಪಲ್ಲವಿ - ಹೀಗೆ ನಮ್ಮ ಆಧುನಿಕ ಸಂಗೀತದ ಪಠ್ಯಕ್ರಮ. ಸಂಗೀತದ ಶಿಕ್ಷಣಕ್ಕೆಂದೇ ಏರ್ಪಟ್ಟ ಶಾಲೆಗಳೂ ಸರ್ಕಾರಗಳ ವಿದ್ಯಾ ಇಲಾಖೆಗಳು ಸಿದ್ಧಗೊಳಿಸಿದ ಪಠ್ಯಕ್ರಮವೂ ಅದರಂತೆ ನಡೆಸುವ ವಾರ್ಷಿಕ ಪರೀಕ್ಷೆಗಳೂ ಶಾಲಾ ಕಾಲೇಜುಗಳಲ್ಲೂ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲೂ ಸಂಗೀತವನ್ನು ಪಠ್ಯ ವಿಷಯವಾಗಿ ಇಟ್ಟಿರುವುದೂ ಆಧುನಿಕ ಸಂಗೀತದ ಲಕ್ಷಣಗಳೇ.

ಮುನ್ನೋಟ[ಬದಲಾಯಿಸಿ]

ಆಧುನಿಕ ಸಂಗೀತ ಆಧ್ಯಾತ್ಮ ಮೌಲ್ಯಗಳಿಂದ ಸಾಮಾಜಿಕ ಮೌಲ್ಯಗಳಿಗೆ ವಾಲುತ್ತಿದೆ. ಸಾಂಪ್ರದಾಯಿಕ ರೂಪು ನಿರ್ಬಂಧಗಳು ಸಡಿಲವಾಗುತ್ತಿವೆ. ಕೆಲವು ಶ್ರೀಮಂತರ ಸ್ವತ್ತಾಗಿದ್ದ ಸಂಗೀತ ಈಗ ಜನತೆಯ ಮನೆಬಾಗಿಲಿಗೆ ಬಂದ ಭಾಗೀರಥಿಯಾಗಿದೆ. ಆಸಕ್ತರ, ಕಲಿಯುವವರ ಸಂಖ್ಯೆ ಬೆಳೆದು ಅದರ ಗಾತ್ರ ಹಿಗ್ಗಿದೆ. ಗುಂದ ಔನತ್ಯವೂ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಆಧುನಿಕ ಸಂಗೀತದ ದೇಹದಲ್ಲೂ ಬದಲಾವಣೆಗಳಾಗುತ್ತಿವೆ : ಹಿಂದೂಸ್ಥಾನೀ ಸಂಗೀತದ, ದೇಶ್ಯ ಪ್ರಯೋಗದ ಮತ್ತು ಭಾಷಾಂಗ ಜಾತಿಯ ರಾಗಗಳು ಹೆಚ್ಚುತ್ತವೆ; ಕೃತಿ ರಚನೆಯಲ್ಲೂ ಕಚೇರಿ ಪದ್ಧತಿಯಲ್ಲೂ ನವ್ಯ ಪ್ರಯೋಗಗಳು ನಡೆಯುತ್ತಿವೆ ; ವಾದ್ಯಮೇಳಗಳ ಸಂಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಹಾಗೆಯೇ ಲಘು ಸಂಗೀತದ ಹೆಸರಿನಲ್ಲಿ ವಿಷಾದನೀಯವಾದ ಅಂಧಾನುಕರಣೆಯೂ ಗದ್ದಲಮಯವಾದ ಕೂಗಾಟ ಚೀರಾಟಗಳೂ ಸಮಾಜದಲ್ಲಿ ಪ್ರವೇಶ ಮಾಡಿವೆ. ಆಧುನಿಕ ಸಂಗೀತದ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳು ಆಧುನಿಕ ಸಮಾಜಕ್ಕೆ ಕನ್ನಡಿಯನ್ನೇನೋ ಹಿಡಿಯುತ್ತವೆ. ಆದರೆ ಇವುಗಳಲ್ಲಿ ಆರೋಗ್ಯಸೂಚಕವಾದ ನೈಸರ್ಗಿಕ ಬದಲಾಣೆಗಳು ಎಷ್ಟು, ರೋಗಮೂಲವಾದುವುಗಳು ಎಷ್ಟು ಎಂಬುದನ್ನು ಕಾಲ ನಿರ್ಧರಿಸಿ ಹೇಳಬೇಕು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: