ವಿಷಯಕ್ಕೆ ಹೋಗು

ಸುಗಮ ಸಂಗೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಪ್ಪತ್ತನೇ ಶತಮಾನದ ಕಾಣಿಕೆಯಾದ ಸುಗಮ ಸಂಗೀತವು ತನ್ನ ಹೆಸರಿನಲ್ಲಿಯೇ ಹೇಳುವಂತೆ ಸುಗಮವಾಗಿ ಹರಿಯುವಂತಹ ಒಂದು ಗಾಯನ ನಿರೂಪಣೆ ಶೈಲಿ. ಇದು ಹುಟ್ಟುವುದೇ ಕವಿತೆಯ ದರ್ಶನದಿಂದ. ಶಾಸ್ತ್ರೀಯ ಸಂಗೀತ ಸಂಗೀತವನ್ನು ಹೊತ್ತು ತಂದರೆ ಇದರ ಪರಮಗುರಿ. ಇದು ಕವಿತೆಯ ಅರ್ಥವನ್ನು ತನ್ನ ನಿರೂಪಣೆಯಿಂದ ವ್ಯಾಖ್ಯಾನಿಸಿ ಅದರ ಅರ್ಥವನ್ನು ವಿಸ್ತರಿಸುವುದೇ ಇದರ ಪರಮಗುರಿ. ಇದು ಒಂದು ರೀತಿಯ ಕವಿತಾ ಸಂಗೀತ ಸಂಗೀತದ ಸ್ವರಗಳ ಬಣ್ಣದಲ್ಲಿ ಕಾವ್ಯದ ಚಿತ್ರವನ್ನು ಯಥಾವತ್ತಾಗಿ, ಸುಂದರವಾಗಿ, ಅರ್ಥಪೂರ್ಣವಾಗಿ ಬಿಡಿಸುವುದೇ ಇದರ ಸಂಕಲ್ಪ ಸಂಗೀತದ ಮೂಲಕ ಸಾಹಿತ್ಯದ ಎದೆಮಿಡಿತವನ್ನು ಹಿಡಿದು ತೋರಿಸುವ ಈ ಗಾಯನ ಪ್ರಕಾಶದಲ್ಲಿ ಸಂಗೀತಕ್ಕಾಗಿ ಸಾಹಿತ್ಯವಿಲ್ಲ. ಸಾಹಿತ್ಯಕ್ಕಾಗಿ ಸಂಗೀತ.

ಸುಗಮಸಂಗೀತದ ಮೂಲ

[ಬದಲಾಯಿಸಿ]

ಸುಗಮ ಸಂಗೀತವೆಂಬ ಗಾಯನಶೈಲಿಗೆ ಅದರ ಹೆಸರು ಮಾತ್ರ ಹೊಸದು. ಆದರೆ ಅಂತರಾತ್ಮ ಸಾವಿರಾರು ವರ್ಷಗಳಷ್ಟು ಹಿಂದಿನದ್ದು. ಈ ಗಾಯನ ಪದ್ಧತಿಗೆ ಹತ್ತಾರು ಮೂಲ ಆಕರಗಳು ನಮಗೆ ದೊರೆಯುತ್ತವೆ. ಸುಗಮ ಸಂಗೀತದ ಮೂಲ ಆಕರಗಳನ್ನು ಹೀಗೆ ಸ್ಥೂಲವಾಗಿ ಹೆಸರಿಸಬಹುದು. 1) ಜನಪದ ಗೀತೆಗಳು 2) ಕಾವ್ಯಗಾಯನ ಕಲೆ 3) ಹೊಸಗನ್ನಡದ ಭಾಷೆ 4) ಪಾಶ್ಚಾತ್ಯ ಚಿಂತನೆಯ ವಸ್ತು-ವಿಚಾರ 5) ರಂಗಗೀತೆಗಳು 6) ಮರಾಠಿ ಗೋಡಗಾಣ್ ಗೀತೆಗಳು. ಇವೆಲ್ಲವುಗಳಿಂದ ಬೇರೆಯೇ ಆದ ಸುಗಮಸಂಗೀತ ತನ್ನದೇ ಆದ ಒಂದು ವಿಶಿಷ್ಟ ಹದದಲ್ಲಿ ಇವೆಲ್ಲವನ್ನೂ ಮೈಗೊಸಿಕೊಂಡು ಸ್ವತಂತ್ರ್ಯವಾದ ಹಾಡುಗಾರಿಕೆ. ಕವಿತೆಯ ಭಾವತೀವ್ರತೆ, ಆರ್ತತೆ, ನಿವೇದನೆಗಳನ್ನು ಧ್ವನಿ ವೈಶಿಷ್ಟ್ಯಗಳನ್ನು ಶಬ್ಧ ಶಕ್ತಿಯ ಅರ್ಥವಂತಿಕೆಯನ್ನು ಸ್ವರಗಳ ಮೂಲಕ ಅನಾವರಣಗೊಳಿಸುತ್ತದೆ. ಬದುಕಿನ ಸಂಕೀರ್ಣ ಅನುಭವಗಳನ್ನು ವಸ್ತುವನ್ನಾಗಿಟ್ಟುಕೊಂಡ ಸುಗಮ ಸಂಗೀತ ದಿನದಿನಕ್ಕೆ ಎತ್ತರ ಬಿತ್ತರಕ್ಕೆ ಏರುತ್ತಾ ಹರಡಿಕೊಳ್ಳುತ್ತಾ ಅರ್ಥಪೂರ್ಣವಾಗಿ ಬೆಳೆಯುತ್ತಿದೆ.

ಸಂಗೀತ ಮತ್ತು ಸಾಹಿತ್ಯದ ಅನುಪಮ ದಾಂಪತ್ಯದ ಜೋಡಿಯಾದ ಈ ಗಾಯನ ಪ್ರಕಾರ, ಕನ್ನಡನಾಡಿನಲ್ಲಿ ಯಾವದಿನ ಭಾವಗೀತೆ ತನ್ನ ಸಂಪೂರ್ಣತೆಯಿಂದ ಅನಾವರಣಗೊಂಡಿತೋ ಅಂದೆ, ಆ ವೇಳಯಲ್ಲೇ, ಅ ಅಮೃತಗಳಿಗೆಯಲ್ಲೇ ಕಾವ್ಯದ ದನಿಯಾಗಿ ಹುಟ್ಟಿಕೊಂಡಿದೆ. ಕವಿ ತನ್ನ ಎದೆಯಾಳದಲ್ಲಿ ತಾನೆ ಹಾಡಿಕೊಂಡ ಸಂವೇದನೆಯೇ ಹಾಡಾಗಿ ಹರಿದು ಸುಗಮಸಂಗೀತವಾಗಿದೆ. ಸುಗಮ ಸಂಗೀತ ಕವಿಯ ಕವನವನ್ನು ತನ್ನ ಸ್ವರ ಸಾಮಥ್ರ್ಯದಿಂದ ಪುನರ್ ಸೃಷ್ಟಿ ಮಾಡಿ ಕವಿಯ ಮನೋಭೂಮಿಯಲ್ಲಿ ಹುಟ್ಟಿಕೊಂಡ ಭಾವನಗಳನ್ನು ವಿಚಾರಗಳನ್ನು ಜನಸಾಮಾನ್ಯರಿಗೆ ಸುಗಮವಾಗಿ ಸುಲಭವಾಗಿ ತಲುಪಿಸುವ ಮಾಧ್ಯಮ. ಕವಿತೆಯ ಶಬ್ಧಗಳಿಗೆ ಹೊಸ ಅರ್ಥವನ್ನು ನೀಡುತ್ತಾ ಕಾವ್ಯಾರ್ಥವನ್ನು ವಿಸ್ತಾರವಾಘಿ ಹಿಗ್ಗಿಸುವುದೇ ಇದರ ವೈಶಿಷ್ಟ್ಯವಾಗಿದೆ. ಈ ಪ್ರಕಾರದ ಸಂಗೀತ ಮಾರ್ಗದ ಸುಗಮತ್ವವು ಅದರಲ್ಲಿರುವ ಎರಡು ಸೌಲಭ್ಯಗಳಲ್ಲಿ ಕಾಣುತ್ತದೆ. ಮೊದಲನೆಯದು ಪೂರ್ವಸಿದ್ಧತೆಯಿಲ್ಲದೆಯೇ ರಸಿಕರು ಸುಗಮಸಂಗೀತವನ್ನು ಆಸ್ವಾದಿಸಲು ಸಾಧ್ಯ ಎಂಬುದಾದರೆ, ಎರಡನೇಯದು ಸುಗಮಸಂಗೀತದ ಅಭ್ಯಾಸಿಗಳಿಗೆ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಆರಂಭಿಕ ಹಂತಗಳ ಕಠಿಣ ಶಿಕ್ಷಣ ಇದರಲ್ಲಿಲ್ಲ ಎಂಬುದು.

ಶಾಸ್ತ್ರೀಯ ಸಂಗೀತ ಮತ್ತು ಸುಗಮಸಂಗೀತ ಎರಡನ್ನು ಹೋಲಿಸಿ ಸುಮಸಂಗೀತಕ್ಕೆ ರಾಗದ ಮಿತಿಯಾಗಲಿ, ಚೌಕಟ್ಟಾಗಲಿ ಇಲ್ಲ. ಆದರೆ ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಒಂದು ಚೌಕಟ್ಟು ಮತ್ತು ಒಂದು ರೀತಿಯ ನಿರ್ಬಂಧಕ್ಕೊಳಪಟ್ಟಿ ಪರಿಮಿತಿಯಿರುತ್ತದೆ. ಸುಗಮಸಂಗೀತಕ್ಕೆ ಬೇಕಾಗಿರುವುದು ಶಬ್ಧಚಿತ್ರಗಳ ಅಭಿಚಿತ್ರಗಳ ಅಭಿವ್ಯಕ್ತಿಗೆ ಹೊಂದುವಂತಹ ಸ್ವರಸಂಯೋಜನೆ. ಅದು ಒಂದೇ ರಾಗವಾದರೂ ಆಗಿರಬಹುದು ಅಥವಾ ಯಾವ ರಾಗಕ್ಕೂ ಹೊಂದದಂತಹ ಹೊಸ ಸ್ವರ ಸಂಚಾರಗಳೂ ಆಗಿರಬಹುದು. ಅದು ಕವಿತೆಯನ್ನು ಸ್ವರಗಳ ಮೂಲಕ ಅರ್ಥೈಸುತ್ತದೆ. ಕಿವಿಗೆ ಕೇಳುವ ಅರ್ಥವತ್ತಾದ ಶಬ್ದಗಳು ಸ್ವರಗಳು ಉಪಯೋಗಿಸಿಕೊಂಡ ವಾದ್ಯಗಳಿಂದ ಚಿತ್ರವಾಗಿ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಕಂಡ ಅನುಭವವನ್ನು ನಿರ್ಮಾಣ ಮಾಡುತ್ತವೆ. ಶಾಸ್ತ್ರೀಯ ಸಂಗೀತದಲ್ಲಿ ರಾಗ ವಿಜೃಂಭಿಸಿದರೆ, ಸುಗಮ ಸಂಗೀತದಲ್ಲಿ ಕವಿತೆ ಗರಿಬಿಚ್ಚಿ ಕುಣಿಯುತ್ತದೆ. ವಾದ್ಯ ಸಂಯೋಜನೆ, ಕವಿತೆಗೆ ಅರ್ಥಪೂರ್ಣ ಆವರಣವನ್ನು ಸೃಷ್ಟಿ ಮಾಡುತ್ತದೆ.

ಸುಗಮ ಸಂಗೀತದ ಇತಿಹಾಸ

[ಬದಲಾಯಿಸಿ]

ಇಂದು ಸುಗಮ ಸಂಗೀತವೆಂದು ಜನಪ್ರಿಯವಾಗುತ್ತಿರುವ ಗಾಯನ ಪದ್ಧತಿಗೆ ಎಂಟು ದಶಕಗಳ ಇತಿಹಾಸವಿದೆ. ಭಾವಗೀತೆ ಎಂದು ತನ್ನ ದನಿತೆರೆಯಿತೋ, ಭಾವದ ಹಕ್ಕಿ ಎಂದು ತನ್ನ ಗುರಿಗಳನ್ನು ಮೂಡಿಸಿಕೊಂಡು ಹಾರಲು ಸಜ್ಜಾಯಿತೋ ಅಂದೇ ಸುಗಮ ಸಂಗೀತ ಹುಟ್ಟಿತು. ಸುಗಮಸಂಗೀತ (1957)ವೆಂಬ ಹೆಸರು ಪಡೆಯುವ ಮುನ್ನ `ಲಘು ಸಂಗೀತ ಅಥವಾ light music — ಎನ್ನುವ ತಲೆ ಬರಹದಡಿ ಆಶ್ರಯ ಪಡೆದಿತ್ತು. ಶಾಸ್ತ್ರೀಯ ಸಂಗೀತದಿಂದ ವ್ಯಕ್ತಪಡಿಸಲು `ಲಘು ಎಂದರೆ ಹಗುರವಾದ, ಎಂಬ ಶೀರ್ಷಿಕೆ ಪಡೆದಿತ್ತು. `ಲಘು ಸಂಗೀತ ಎಂಬ ತಲೆಯ ಬರಹದಿಂದ ಇದು ಸಂಗೀತ ಪ್ರಕಾರಕ್ಕೆ ಸೇರಿದ್ದಲ್ಲದೆ, ಸಾಹಿತ್ಯ ಪ್ರಕಾರಕ್ಕಲ್ಲ ಎಂಬುದನ್ನು ಹೆಸರೇ ವ್ಯಕ್ತಪಡಿಸಿತ್ತು. ಸಂಗೀತವೇ ಜೀವನಾಡಿಯಾಗಿ ಆದರೆ ಶಾಸ್ತ್ರೀಯಕ್ಕಿಂತ ಭಿನ್ನವಾಘಿ ಸ್ವಚ್ಛಂದರಾಗ, ಭಾವಗಳಿಂದ ರಂಜಿಸುತ್ತಿತ್ತು. ಈ ಸಂಗೀತ ಪ್ರಕಾರಕ್ಕೆ ನಿರ್ದಿಷ್ಟವಾದ ವಸ್ತುವೇ ಇರಲಿಲ್ಲ. ನಿರ್ದಿಷ್ಟವಾದ ಭಾಷೆಯೂ ಇರಲಿಲ್ಲ. ದೇವರನಾಮ, ಗಝಲ್, ದೇಶಭಕ್ತಿಗೀತೆ, ಜನಪದಗೀತೆ, ವಚನ, ಕನ್ನಡಗೀತೆ, ಮೀರಾಭಜನೆಗಳು, ಹೀಗೆ ಯಾವುದೇ ಪ್ರಕಾರವೂ ಲಘು ಸಂಗೀತದ ವಸ್ತು ವಿಚಾರಗಳಾಗಿದ್ದವು. ಸಂಗೀತದಲಲಿ ನಾವಿನ್ಯತೆಯನ್ನು ಮಾತ್ರ ಶ್ರೋತೃಗಳಯ ಬಯಸುತ್ತಿದ್ದರು. ಸಾಹಿತ್ಯ ಗೌಣವಾಗಿತ್ತು. ಆತ್ಮಕ್ಕಿಂತ ಶರೀರದ ಮೋಹವೇ ಹೆಚ್ಚಾದಂತೆ, ಹಾಡುಗಾರಿಕೆಗೆ ಮಾತ್ರ ಬೆಲೆಯಿತ್ತು. ಶಾಸ್ತ್ರೀಯ ಸಂಗೀತದ ಹಾಡುಗಾರರಿಗೆ ಲಘು ಸಂಗೀತದ ಬಗೆಗೆ ತಾತ್ಸಾರ ಭಾವನೆಯಿದ್ದರೂ, ತಮ್ಮ ಕಛೇರಿಯ ಕಾರ್ಯಕ್ರಮಗಳಲ್ಲಿ ಶ್ರೋತೃಗಳ ಬೇಡಿಕೆಯ ಮೇರೆಗೆ, ದಾಸರಪದ, ವಚನ, ಭಜನ್‍ಗಳನ್ನು ಹಾಡುತ್ತಿದ್ದರು. `ಚಾವಳಿ ಅಂತಹ ಲಘು ಶೃಂಗಾರದ ಗೀತೆಗಳನ್ನು ಹಾಡುವುದೇ ಒಂದು ಆಕರ್ಷಣೆಯಾಗಿತ್ತು.

ಶ್ರೀ ಅವರ ಇಂಗ್ಲೀಷ್ ಗೀತೆಗಳು (1924) ಪ್ರಕಟವಾದ ಕೂಡಲೇ ಕನ್ನಡತನದ ತೇಜಸ್ಸು ಸಾವಿರಾರು ಹೃದಯಗಳಲ್ಲಿ ಒಮ್ಮೆಲೆ ಹರಿಯತೊಡಗಿತು. ಕಾವ್ಯ ಸ್ವಷ್ಟಿಯೊಡನೆ ಕವಿಗಳ ಸೃಷ್ಟಿಯಾಯಿತು. ಮಬ್ಬಿನ ಮುಸುಕು ಸರಿದು ಬೆಳಗು ಮೂಡಿತು. ಕಾವ್ಯದ ವಸ್ತು, ರೀತಿ, ಭಾವ, ವರ್ಣನೆ, ಶೈಲಿ, ರೂಪ. ಇವುಗಳ ಸಾಕ್ಷಾತ್ಯಾರವಾಯಿತು. ಇವುಗಳ ಅಭಿವ್ಯಕ್ತಿಗೆ ಸಂಗೀತ ಮಾಧ್ಯಮವಾಗಲು ಪ್ರಾರಂಭಿಸಿತು.

ಇಂಗ್ಲೀಷಿನ `ಐಥಿಡಿiಛಿs' ಮಾದರಿ ಅನುಸರಿಸಿ, ಕನ್ನಡ ಕವಿಗಳು ರಚಿಸತೊಡಗಿದ ಭಾವಗೀತೆಗಳು ಸಾಂಪ್ರದಾಯಿಕ ಗೀತ, ಕೀರ್ತನೆ, ಪದಗಳಿಗಿಂತ ಭಿನ್ನವೂ, ಆಗಿದ್ದು ಅವು ತಾಳಿದ ಧೋರಣೆಗಳಲ್ಲಿ. ಈ ಭಾವಗೀತೆಗಳು ಮತ, ಧರ್ಮ, ಸಾಂಪ್ರದಾಯಿಕ ಭಕ್ತಿ-ಶ್ರದ್ಧೆಗಳಿಂದ ಮುಕ್ತವಾಗಿದ್ದವು. ಇವು ಭಾವಗೀತಾಕಾರನ ವೈಯುಕ್ತಿಕ (ಖಾಸಗೀ) ಭಾವನೆಗಳ ಅನಿಸಿಕೆಗಳ ವಾಹಕಗಳಾಗಿದ್ದುವು. ನಿಸರ್ಗದ ಅನೂಹ್ಯ ಶಕ್ತಿ ಸೌಂದರ್ಯ, ವೈಯಕ್ತಿಕ ಹಂಬಲ, ದುಃಖ, ಅನಂದಗಳ ಅಭಿವ್ಯಕ್ತಿಗಾಗಿ ಬಳಕೆಯಾದ ಕವಿತೆಯೇ ಭಾವಗೀತೆಯಾಯಿತು. ಶ್ರೀ ಅವರಿಂದ ಪ್ರಾರಂಭಿಸಿದ ಈ ಕಾವ್ಯ ಜ್ಯೋತಿ ಅವರ ಶಿಷ್ಯರಾದ ಮಾಸ್ತಿ ಕುವೆಂಪು, ಪು.ತಿ.ನ. ಮುಂತಾದ ಎಳೆಯ ಕವಿಗಳಿಂದ ಬೆಳಗುತ್ತ ಬೆಳಗುತ್ತಾ ನಿರಂತರವಾದ ಉಜ್ವಲ ಬೆಳಕಾಯಿತು.

ಸುಗಮ ಸಂಗೀತದ ಕಲ್ಪನೆ ಮೊದಲು ಮೂಡಿ ಬಂದುದು ಪ್ರಾಯಶಃ ರವೀಂದ್ರನಾಥ ಠಾಕೂರ್ ಅವರ ಗೀತೆಗಳಲ್ಲಿ. ಅವರ ಗೀತೆಗಳೆಲ್ಲಾ ರಾಗಪ್ರಧಾನ, ಕಾವ್ಯಪ್ರಧಾನ, ರಚನೆಗಳು ಅನೇಕ ಗೀತೆಗಳಲ್ಲಿ ಶಾಸ್ತ್ರೀಯ ಸಂಗೀತದ ರಾಗಗಳನ್ನು ಬಳಸಿದ್ದರೂ, ಗೀತೆಯ ಭಾವಕ್ಕನುಗುಣವಾಗಿ ರಾಗವನ್ನು ತಿಳಿಯಾದ ಮತ್ತು ಸರಳವಾದ ರೂಪದಲ್ಲಿ ಪ್ರಯೋಗಿಸಿದ್ದಾರೆ. ರವೀಂದ್ರನಾಥ ಠಾಕೂರರನ್ನು ಭಾರತೀಯ ಸುಗಮಸಂಗೀತದ ಹರಿಕಾರರೆನ್ನಬಹುದು. ಅವರ `ಗೀತಾಂಜಲಿ ಸಾಧಕನೊಬ್ಬನ ಮನೋಗತವನ್ನು ನಿವೇದಿಸುವ ಬಂಗಾಳಿ ಭಾವಗೀತೆಗಲ ಸಂಕಲನ ಯಾವುದೇ ಒಂದು ಮತದ ಮೇಲಿನ ನಂಬಿಕೆ ಶ್ರದ್ಧೆ ಅಥವಾ ಪಂಥ, ದೇವರುಗಳ ಮೇಲಿನ ಅವಲಂಬನಕ್ಕೆ ಹೊರತಾದ, ಕೇವಲ ಆತ್ಮದ ಅವಲೋಕನ; ಸೃಷ್ಟಿಕರ್ತನ ಆರಾಧನೆಗೆ ಕವಿಯ ಕಾತರ ಕಳವಳಗಳ ಭಾವ ಇಲ್ಲಿದೆ. ರವೀಂದ್ರರು ಸ್ವತಃ ಸಂಗೀತಕಾರರಾಗಿದ್ದರಿಂದ `ಗೀತಾಂಜಲಿಯಲ್ಲಿಯ ಶುದ್ಧ ಹಾಡುಗಳು ಅಧುನಿಕ ಸ್ವರೂಪಕ್ಕೆ ಮಾದರಿಯಾದವು.

ಮುಂದೆ ಈ ಜಾಡನ್ನೇ ಹಿಡಿದ ತೆಲಗು, ಮರಾಠಿ ಮುಂತಾದ ಭಾಷೆಗಳಲ್ಲಿಯೂ ಈ ರೀತಿಯ ಕಾವ್ಯದ ಎತ್ತಿ ತೋರುವ ಕಾವ್ಯ ಪ್ರಧಾನ ಭಾವಗೀತೆಗಳು ಬೇಕಾದಷ್ಟು ರಚಿತವಾದವು. ಕರ್ನಾಟಕವು ಇದೇ ಜಾಡನ್ನು ಹಿಡಿದು ಈ ಬಗೆಯ ಸರಳ ಛಾಯೆಯನ್ನು ಒಳಗೊಂಡ ಭಾವಗೀತೆಗಳು ಪ್ರಚಾರಕ್ಕೆ ಬರಲು ಆರಂಭವಾಯಿತು. ಕವಿಗಳು ಆ ಕಾವ್ಯಗುಣವನ್ನು ಪ್ರತಿಧ್ವನಿಸುವ ಕವಿತೆಗಳನ್ನು ರಚಿಸಿ ಅದಕ್ಕೆ ತಿಳಿಯಾದ ರಾಗದ ಕವಚವನ್ನು ಹೊಂದಿಸಿ ಪ್ರಚಾರಕ್ಕೆ ತಂದು ಜನಪ್ರಿಯಗೊಳಿಸುವ ಪ್ರವೃತ್ತಿ ಪ್ರಾರಂಭವಾಯಿತು. ಅಂದರೆ ಕವಿಗಳು ಅರ್ಥ ಮತ್ತು ಭಾವಪೂರಿತವಾದ ಕವನಗಳನ್ನು ರಚಿಸಿದಲ್ಲಿ ಅದಕ್ಕೆ ಇಂಪು ಕೊಡುವ ರಾಗ ಅನ್ಯಸ್ವರಗಳು ಬೆರೆತು ಮಟ್ಟುಗಳನ್ನು ಸ್ವಲ್ಪ ವಿಶಾಲ ದೃಷ್ಟಿಯ ಸಂಗೀತಗಾರರು ಒದಗಿಸಲಾರಂಭಿಸಿದರು.

ಸುಗಮ ಸಂಗೀತ ದಕ್ಷಿಣ ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯಗಳಲ್ಲಿ

[ಬದಲಾಯಿಸಿ]

ವೀಸೀ ಅವರ ಗೀತೆಗಳು ಕವಿತಾಸಂಕಲನದಿಂದ (1931) ಹಳೇ ಮೈಸೂರು ಪ್ರಾಂತ್ಯದಲ್ಲಿ ಸುಗಮ ಸಂಗೀತ ಚಿಗುರಲು ಪದವಿಟ್ಟಿತು. ನಮ್ಮ ಕರ್ನಾಟಕದ ಗಮಕಿಗಳು ಹೊಸಗನ್ನಡದ ಪದ್ಯಗಳನ್ನು ವಾಚಿಸಲು ಉತ್ಸುಕರಾದರು. ಶಾಸ್ತ್ರೀಯ ಸಂಗೀತದ ಮೂಲಧಾಟಿಯನ್ನು ಹಿಡಿದುಕೊಂಡೇ ಹೊಸಗಾಯನ ಪದ್ಧತಿ ಆವಿಷ್ಕಾರಗೊಂಡಿತು. ಕರ್ನಾಟಕದಲ್ಲಿ 'ಶ್ಲೋಕ ಸಂಗೀತ ಪಟು'- ಎಂದೇ ಬಿರುದಾಂಕಿತರಾಗಿದ್ದ (ನಂಜನಗೂಡಿನ ಬಳಿ ಇರುವ) ಕಳಲೆ ಸಂಪತ್ಕುಮಾರಾಚಾರ್ಯರು ಆಧುನಿಕ ಕವಿತೆಗಳ ಪ್ರತ್ಯೇಕ ಕಾರ್ಯಕ್ರಮಗಳನ್ನು ಪಕ್ಕ ವಾದ್ಯದೊಂದಿಗೆ ನಡೆಸಿದ್ದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪದ್ಧತಿಗಳನ್ನು ಶಾಸ್ತ್ರೀಯವಾಗಿ ಅಭ್ಯಾಸಮಾಡಿದ್ದ ಸಂಪತ್ತುಮಾರಾಚಾರ್ಯರು ತಮ್ಮ ಗಂಡುದನಿಯ ಗಾಯನಕ್ಕೆ ಹೆಸರುವಾಸಿಯಾಗಿದ್ದರು. ಭಾವಪೂರ್ಣ ಗಾಯನಕ್ಕೆ ಹೆಸರಾಗಿದ್ದರು. 1902ರಲ್ಲಿ ಹುಟ್ಟಿ 1945ರವರೆಗೆ ಮಾತ್ರ ಜೀವಿಸಿದ್ದ ಆಚಾರ್ಯರ ಕೀರ್ತಿ ದೊಡ್ಡದು. ಭಾವಗೀತೆಯ ಹಾಡುಗಾರಿಕೆಯ ಸಂಪ್ರದಾಯವನ್ನು ಮೊದಲು ಪ್ರಾರಂಭಿಸಿದವರೆನ್ನಬಹುದು. ಅವರು ಹಾಡುತ್ತಿದ್ದ ವೀಸೀ ಅವರ `ಎಮ್ಮೆ ಮನೆಯಂಗಳದಿ ಶ್ರೀ ಅವರ, `ಕರುಣಾಳು ಬಾ ಬಳಕೆ ಡಿವಿಜಿಯವರ `ವನಸುಮದೊಳೆನ್ನ ಜೀವನವು ಮುಂತಾದ ಗೀತೆಗಳು ಆಚಾರರ್ಯರು ಸುಗಮಸಂಗೀತ ಪ್ರಕಾರಕ್ಕೆ ಹಾಕಿಕೊಟ್ಟ ಆರೋಹಣ ಗೀತೆಗಳೆನ್ನಬಹುದು. ಪುರಂದರದಾಸರ ದೇವರನಾಮವನ್ನು ಭಜನೆಗಳಲ್ಲಿ ಅಲ್ಲದೆ, ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುವುದು ಹೀನಾಯವೆಂದು ತಿಳಿದಿದ್ದ ಅಂದಿನ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಆಚಾರ್ಯರು ಆಧುನಿಕ ಕವಿತೆಯ ಕಾರ್ಯಕ್ರಮವನ್ನೇ ಪ್ರತ್ಯೇಕವಾಗಿ ನೀಡುತ್ತಿದ್ದರು. `ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಆಚಾರ್ಯರ ನಾಂದಿಗೀತೆಯಾಗಿತ್ತು. ಯಾವುದೇ ಮದುವೆಗೆ ಹೋದಾಗಲೂ `ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು (ಭೂಪರಾಗದ) ಗೀತೆಯನ್ನು ಹಾಡದೆ, ಬರುತ್ತಿರಲಿಲ್ಲ. ಹೊಣ್ಣೊಪ್ಪಿಸುವಾಗ ಈ ಗೀತೆಯನ್ನು ಕೇಳಿ ಬಂಧುಬಾಂಧವರ ಕಣ್ಣಲಿ ನೀರು ಸುರಿಯುವುದು ಸಾಮಾನ್ಯವಾಗಿತ್ತು.

ಒಂದು ಕಡೆ ರೆಸಿಡೆಂಟರ ಆಡಳಿತದಿಂದ ಪ್ರಭಾವಿತವಾದ ಜೀವನಕ್ರಮ ಇನ್ನೊಂದೆಡೆ ಸದಾ ಹೊಸತನ ಬಯಸುತ್ತಿದ್ದ ಮೈಸೂರಿನ ಅರಸರ ಕಾವ್ಯನಾಟಕಗಳ ಆಸಕ್ತಿ ಇತ್ತಲಾಗಿ ಹರಿದು ಬರುತ್ತಿದ್ದ ಪಾಶ್ಚಾತ್ಯದ ಹೊಸ ಸಾಹಿತ್ಯ ಪ್ರಭಾವ ಇವೆಲ್ಲದರ ಹೊಸಕಾಟದಲ್ಲಿ ಕನ್ನಡದ ಆಧುನಿಕ ಸಾಹಿತ್ಯ ಹೊಸತನ ಕಂಡು ಸ್ವಚ್ಛಂದವೂ, ಸ್ವತಂತ್ರವೂ ಆಯಿತು. ಆದರೆ ಸುಗಮಸಂಗೀತದ ಹಾಡುಗಾರಿಕೆ ಮತ್ತು ಸಂಯೋಜನೆಯ ಶೈಲಿಯಲ್ಲಿ ಹೊಸತನವೇನೂ ಬರಲಿಲ್ಲ. ಶಾಸ್ತ್ರೀಯ ಸಂಗೀತ ಮುಂದುವರಿಕೆಯಂತೆಯೇ ಗೀತೆಗಳು ಸಂಯೋಜನೆಗೊಂಡವು. ಶಾಸ್ತ್ರೀಯ ಸಂಗೀತದ ಪರಿಮಿತಿಯಲ್ಲೇ ಹೊಸಗನ್ನಡ ಸಾಹಿತ್ಯವು ಹಾಡತೊಡಗಿತು. ಕರ್ನಾಟಕದ ಗಮಕಿಗಳೇ ಹಾಡಲು ಪ್ರಾರಂಭಿಸಿದರು.

ಶಾಸ್ತ್ರೀಯ ಸಂಗೀತಶೈಲಿಯ ಏಕತಾನತೆಯ ಕಬಂಧ ಬಾಹುವಿನಿಂದ ಭಾವಗೀತಾ ಗಾಯನಕ್ಕೆ ಒಂದು ರೀತಿಯ ಬಿಡುಗಡೆ ನೀಡಿ ಹೊಸತನ ತಂದವರು, ಬೆಳದಿಂಗಳ ಹಕ್ಕಿ ಕನ್ನಡದ ಕೋಗಿಲೆ ಎಂದೇ ಹೆಸರಾದ ಪಾಂಡೇಶ್ವರದ (ದ. ಕ) ಕಾಳಿಂಗರಾವ್ ಅವರು.[][][][] ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ಎರಡೂ ಗಾಯನ ಪದ್ಧತಿಗಳಲ್ಲೂ ರಾಯರ ಸವ್ಯಸಾಚಿಯಾಗಿದ್ದರು. ರಂಗ ಸಂಗೀತ, ಚಿತ್ರ ಸಂಗೀತ, ಜಾನಪದ ಸಂಗೀತ, ಪಾಶ್ಚಾತ್ಯ ಸಂಗೀತ - ಹೀಗೆ ಬಗೆ ಬಗೆ ಪ್ರಕಾರದಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಪಡೆದಿದ್ದ ಕಾಳಿಂಗರಾಯರೇ ನಿಜವಾಗಿ ಸುಗಮಸಂಗೀತವನ್ನು ರೂಪಿಸಿದರೆನ್ನಬಹುದು.

ಹಳೆ ಮೈಸೂರು ಪ್ರಾಂತ್ಯದಲ್ಲಿ ಸುಗಮಸಂಗೀತಕ್ಕೆ ಅಧಾರವಾಗಿ ನಿಂತವರೆಂದರೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ. ವಿ. ಕೃಷ್ಣಮಾಚಾರ್ ಅವರು. ಶಾಸ್ತ್ರೀಯ ಸಂಗೀತ ನುಡಿಸುವಾಗ ಕೃಷ್ಣಮಾಚಾರ್ ಎಂದು ಹೆಸರು ನೀಡುತ್ತಾ ಸುಗಮ ಸಂಗೀತ ನಿರ್ದೇಶನ ಮಾಡುವಾಗ `ಪದ್ಮಚರಣ್ ಎಂಬ ನವಿರುಭಾವನೆಯ ಕಾವ್ಯನಾಮ ನೀಡಿದ್ದರು. ಮೈಸೂರು ಮತ್ತು ಬೆಂಗಳೂರು ಆಕಾಶವಾಣಿಯಲ್ಲಿ ನಿಲಯದ ಕಲಾವಿದರಾಗಿ ತಮ್ಮ ಜೀವಿತವನ್ನೇ ಸಂಗೀತಕ್ಕೆ ಹೆಣ್ಣುಮಕ್ಕಳ ಕಾರ್ಯಕ್ರಮಕ್ಕೆ, ನಾಟಕಕ್ಕೆ ಪಕ್ಕವಾದ್ಯ ನುಡಿಸುವವರನ್ನು ಮಡಿವಂತರೂ, ಶಾಸ್ತ್ರೀಯ ವಿದ್ವಾಂಸರೂ ಸರಿಸಮಾನವಾಗಿ ಭಾವಿಸದ ಐವತ್ತರ ದಶಕದಲ್ಲಿ, ಆಚಾರ್ಯರು ಹಠತೊಟ್ಟು ಹಿಂದಿನ ಸಂಪ್ರದಾಯವನ್ನು ಮುರಿದರು.

ಸುಗಮ ಸಂಗೀತದ ಗಾಯಕಿಯರು

[ಬದಲಾಯಿಸಿ]

ಮಂಗಳೂರಿನ ಜಯಂತಿದೇವಿ ಹಿರೇಬೆಟ್ (1927) ಅವರು ಸುಗಮಸಂಗೀತದ ಆರೋಹಣದ ಸ್ಥಿತಿಗೆ ಕಾರಣರಾದ ಮತ್ತೊಬ್ಬ ಗಾಯಕಿ. 1944ರಲ್ಲಿಯೇ ಇವರು ಹಾಡಿದ 'ಭಾಗ್ಯದ ಲಕ್ಷ್ಮೀ ಬಾರಮ್ಮ ಮತ್ತು `ಹೂವ ತರುವರ ಮನೆಗೆ ಹುಲ್ಲ ತರುವ ಎಂಬ ಪುರಂದರದಾಸರ ಪದಗಳು ಎಚ್.ಎಂ.ವಿ ಧ್ವನಿಮುದ್ರಿಕೆ ಕಂಪನಿಯ ಮೂಲಕ ಮದರಾಸಿನಲ್ಲಿ ಧ್ವನಿಮುದ್ರಿತವಾಗಿತ್ತು. 1952ರಲ್ಲಿ ಮುಂಬಯಿಯಲ್ಲಿ ಮತ್ತೆ ಇದೇ ಕಂಪನಿಯವರು ಭಾವಗೀತೆಗಳನ್ನು ಧ್ವನಿಮುದ್ರಿಸಿದರು. `ವಾರಿ ನೋಟ ಹಾರತಿತ್ತ (ಬೇಂದ್ರೆ) `ಹತ್ತು ವರುಷದ ಹಿಂದೆ (ಕೆ. ಎಸ್. ನರಸಿಂಹಸ್ವಾಮಿ) ಮುಂತಾದ ಹಾಡುಗಳು ಎಚ್. ಎಂ. ವಿ ಕಂಪನಿಯಲ್ಲಿ ಮುದ್ರಿತವಾಗಿ ಅತ್ಯಂತ ಜನಪ್ರಿಯವಾದವು. ಕನ್ನಡ ವಚನಗಳನ್ನು ದಾಸರಪದಗಳನ್ನು ಸುಗಮ ಸಂಗೀತ ಶೈಲಿಗೆ ಅಳವಡಿಸಿದ ಮೊದಲಿಗರೆಂಬ ಕೀರ್ತಿ ಜಯಂತಿದೇವಿಯರದಾಯಿತು. `ಮಹಾತ್ಮಗಾಂಧಿ ಅವರ ಮುಂದೆ `ವಂದೇ ಮಾತರಂ' ಹಾಡಿ ಮೆಚ್ಚುಗೆ ಗಳಿಸಿದ ಜಯಂತಿ ಅವರು ಕನ್ನಡ, ಮರಾಠೀ, ಕೊಂಕಣಿ ಮುಂತಾದ ಭಾಷೆಗಳಲ್ಲಿ ಜನಪ್ರಿಯ ಗೀತೆಗಳನ್ನು ಹಾಡಿ ಜನಸಾಮಾನ್ಯರನ್ನು ಆಕರ್ಷಸಿದರು. `ಶಿಶುನಾಳ ಷರೀಫರ ಪ್ರಶಸ್ತಿಯನ್ನು ಪಡೆದವರಲ್ಲಿ ಮೊದಲಿಗರಾದರು.

ಸುಗಮ ಸಂಗೀತದ ಮೊದಲು ಹಾಡಿಗೆ ದನಿಯಾದವರು ಮತ್ತು ಈ ಸಂಗೀತ ಪ್ರಕಾರಕ್ಕೆ ಅಪಾರವಾದ ಕಾಣಿಕೆ ಕೊಟ್ಟವರು ನಮ್ಮ ಗಾಯಕಿಯರೇ ಎನ್ನುವುದು ಅಚ್ಚರಿಯ ಸಂಗತಿ. 1949ರಲ್ಲಿ ಮೈಸೂರಿನಲ್ಲಿ ಡಾ|| ಶಮಂತಕಮಣಿಯವರಿಂದ ಭಾವಗೀತಾಗಾಯನ ಆರಂಭವಾಯಿತು. ಡಾ|| ಶಮಂತಕಮಣಿಯವರು ಹಾಡಿದ ಕುವೆಂಪುರವರ `ಕರೆಯುತಿದೆ ಓ ದೂರದಾಹ್ವಾನವಾಣಿ — `ಶೂನ್ಯತೆ ಏನಿದು ಹೃದಯದಲ್ಲಿ — `ನಾನಿನ್ನು ಮರೆಯೆ, `ಕರೆಯೆಂದು ಬರುವುದೋ ಎಂಬ ನಾಲ್ಕು ಗೀತೆಗಳ ಪದ್ಮಚರಣರ ಪ್ರಥಮ ಶಿಷ್ಯೆ ಎನ್ನಬಹುದು. ಇವರ ನಂತರ 1950ರಲ್ಲಿ ಆಗಸ್ಟ್ 14ರಂದು ಆಕಾಶವಾಣಿ ಕೃಷಿರಂಗ ಕಾರ್ಯಕ್ರಮದಲ್ಲಿ `ಗೌರಿ ತವರಿಗೆ ಹೋಗಿ ಬಂದದ್ದೇ — ಎಂಬ ಜಾನಪದ ಹಾಡಿನ ಮೂಲಕ ಜನಪ್ರೀಯ ಗಾಯಕಿಯಾಗಿ ಮಹಾನ್ ತಾರೆಯಾಗಿ ಮೆರೆವರು ಶ್ರೀಮತಿ ಹೆಚ್. ಆರ್. ಲೀಲಾವತಿ. ಪದ್ಮಚರಣ್‍ರ ಬಳಿ ಇಪ್ಪತ್ತನಾಲ್ಕು ವರ್ಚಗಳ ಕಾಲ ಸುಗಮಸಂಗೀತವನ್ನು ಕಲಿತು ಅವರ ಸಂಯೋಜನೆಗಳಿಗೆ ದನಿಯಾದವರು ಲೀಲಾವತಿ. ಕರ್ನಾಟಕದ ಲತಾಮಂಗೇಶ್ವರ್ ಎಂದೇ ಪ್ರಖ್ಯಾತಿ ಪಡೆದ ಲೀಲಾವತಿಯವರು ಗಾಯಕಿಯಾಗಿ, ಸಂಯೋಜಕಿಯಾಗಿ, ಲೇಖಕಿಯಾಗಿದ್ದುದೇ ಅಲ್ಲದೆ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕಿಯಾಗಿ ಹೆಸರು ಮಾಡಿದರು. ಐವತ್ತರ ದಶಕದಿಂದ ಸುಮಾರು ಮೂರು ದಶಕಗಳವರೆಗೆ `ಗಾನ ಸಾಮ್ರಾಜ್ಞಿಯಾಗಿ ಮೆರೆದ ಅವರ ಗಾಯನದ ನಾದಸುಖ ಕೇಳಿದವರಿಗಷ್ಟೆ ಅನುಭವ, ಶಾಂತ, ಗಂಭೀರಶೈಲಿಯ ಮಾಧುರ್ಯದ ಮಹತ್ ಸ್ಪರ್ಶವೇ ಅವರ ಗಾಯನದ ಮುಖ್ಯ ಗುಣ. ಲೀಲಾವತಿಯವರ ಸಹಪಾಠಿಯಾಗಿದ್ದ ಎಂ. ವಿ. ಮಾಲತಿಯವರು ಶಾಸ್ತ್ರೀಯ ಸಂಗೀತದಲ್ಲಿ ಅರ್. ಕೆ. ಶ್ರೀಕಂಠನ್ ಅವರ ಶಿಷ್ಯೆಯಾಗಿದ್ದು, ಸುಗಮಸಂಗೀತದಲ್ಲಿ ಪದ್ಮಚರಣ ಶಿಷ್ಯೆಯಾಗಿದ್ದರು. ಅಡಿಗರ 'ಇಂದು ಕೆಂದಾವರೆ ಬೇಂದ್ರೆಯವರ `ಎನ್ನ ಹರಣ ನಿನಗೆ ಶರಣ' - ಹಾಡುಗಳ ಮೂಲಕ ಮನೆ ಮನೆಯ ಮಾತಾಗಿದ್ದರು. ಜಯಚಾಮರಾಜ ಒಡೆಯರ್ `ಎದುರಿನಲ್ಲಿ ನನ್ನ ಹರಣ' ಭಾವಗೀತೆ ಹಾಡಿ ಮೆಚ್ಚುಗೆ ಪಡೆದಿದ್ದರು. ಪದ್ಮಚರಣ್‍ರ ಶಿಷ್ಯೆಯರಾದ ರೇಖಾ ಮತ್ತು ಕೃಪಾ ಅವರು ಆಲ್ ಇಂಡಿಯಾ ರೇಡಿಯೋವಿನಲ್ಲಿ ಡೆಲ್ಲಿಯಲ್ಲಿ ನಡೆದ ಹದಿನಾಲ್ಕು ಭಾಷೆಗಳ ಹದಿನಾಲ್ಕು ಗೀತೆಗಳಲ್ಲಿ ಪದ್ಮಚರಣ್‍ರ ಸಂಯೋಜನೆಯಾದ ಈ ಗೀತೆ ಅತ್ಯುತ್ತಮವೆಂದು ಮೆಚ್ಚುಗೆ ಗಳಿಸಿತ್ತು. ಪದ್ಮಚರಣ್‍ರ ಮತ್ತೊಬ್ಬ ಶಿಷ್ಯೆ ಡಾ|| ಮಾಧವಿರಾಜ, ಸಿ. ಕೆ. ತಾರಾ ಮತ್ತು ವೈ. ಎಸ್. ಇಂದ್ರಾ ಜೋಡಿಗಾಯನದಲ್ಲಿ ಅನೇಕ ಗೀತೆಗಳನ್ನು ಪ್ರಸಿದ್ಧಿಗೆ ತಂದರು. ನಿಸಾರರು ರಚಿಸಿದ `ಆತ್ಮಾರ್ಪಣೆ ಎನ್ನುವ ಬಾನುಲಿರೂಪಕದಲ್ಲಿ ಕಾಳಿಂಗರಾವ್‍ರವರೊಂದಿಗೆ ಎಂ. ಎನ್. ರತ್ನ ಹಾಡಿದ್ದರು. ಪದ್ಮಚರಣ್ ಅವರು ಸಂಯೋಜಿಸಿದ್ದ ವೀಸೀ ಅವರ `ಮಾನವನೆತ್ತರ ಅಗಸದೇರಿಗೆ ಎಂಬ ಕವಿತೆಯನ್ನು ಮದರಾಸಿನ ಪ್ರಸಿದ್ಧ ಹಿನ್ನೆಲೆ ಗಾಯಕಿ ಪಿ. ಲೀಲಾ ಅವರು ಹಾಡಿದ್ದರು. ಮುಂಬಾಯಿಯಿಂದ ಕರ್ನಾಟPಕ್ಕೆ ಬಂದಿದ್ದ ರಾಗ ಖ್ಯಾತ ಹಿಂದೂಸ್ತಾನೀ ಸಂಗೀತ ಗಾಯಕಿ ಶ್ರೀಮತಿ ಲಕ್ಷ್ಮೀಶಂಕರ್ ಅವರು ಪದ್ಮಚರಣ್ ಸಂಯೋಜಿಸಿದ್ದ 'ಸ್ವಾಗತ ಸ್ವಾಗತ ಸ್ವಾಗತವು ಕವಿವಾಣಿಗೆ — ಎಂಬ ಗೀತೆಯನ್ನು ಹಾಡಿದ್ದರು. ಕರ್ನಾಟಕ ಸಂಗೀತದ ಪಿಟೀಲು ವಿದ್ವಾಂಸೆಯಾದ ಟಿ. ರುಕ್ಮಿಣಿ ಮತ್ತು ಕರ್ನಾಟಕ ಸಂಗೀತ ಸಾಮ್ರಾಟ ಡಾ|| ಎಂ. ಬಾಲಮುರಳೀಕೃಷ್ಣ ಇಬ್ಬರೂ ಆಕಾಶವಾಣಿಯ ನವಸುಮ ಕಾರ್ಯಕ್ರಮಕ್ಕಾಗಿ ಮಾಸ್ತಿ ಅವರ 'ಕೋಗಿಲೆ ಕೋಗಿಲೆ ಗೀತೆಯನ್ನು ಹಾಡಿದ್ದರು. ಪದ್ಮಚರಣ್ ಈ ಗೀತೆಗೆ ರಾಗಸಂಯೋಜಿಸಿದ್ದರು.

ಟಿ. ರುಕ್ಮಿಣಿ ಮತ್ತು ಬಾಲಮುರಳಿಯವರು ಬೇಂದ್ರೆಯವರ `ನೀ ಮಳ್ಳ ಜಾತಿಯ ಹೆಣ್ಣು ಗೀತೆಯ ಮೂಲಕ ಹೆಸರು ಮಾಡಿದ್ದರು. ಟಿ. ರುಕ್ಮಿಣಿಯವರು ಹಾಡಿದ್ದ ಕೆ. ಎಸ್. ನರಸಿಂಹಸ್ವಾಮಿಗಳ `ಮುಗಿಲೆ ಮತ್ತು `ಶ್ರೀಕೃಷ್ಣನಂತಹ ಮುಗಿಲು ಮತ್ತು ಅಡಿಗರ `ಹಿಂದುಮುಂದಿನೆಣಿಕೆ ಏಕೆ? ಮುಂತಾದ ಗೀತೆಗಳು ಜನಪ್ರಿಯವಾಗಿದ್ದವು.

ಕಾಳಿಂಗರಾವ್ ಅವರೊಂದಿಗೆ ಮೂರು ದಶಕಗಳ ಕಾಲ ಹಾಡಿ ಅವರ ಎಲ್ಲ ಹಾಡುಗಾರಿಕೆಗೆ ಕಾರ್ಯಕ್ರಮಗಳಿಗೆ ಶ್ರುತಿಯಂತೆ ಇದ್ದ ಸೋದರಿಯರಾದ ಮೋಹನ್‍ಕುಮಾರಿ ಮತ್ತು ಸೋಹನ್‍ಕುಮಾರಿಯವರೂ ಸುಗಮಸಂಗೀತ ಗಾಯಕಿರಲ್ಲಿ ಪ್ರಮುಖರು. ಹೆಚ್. ಎಂ. ವಿ.ಯಲ್ಲಿ ಧ್ವನಿಮುದ್ರಿತವಾಗಿದ್ದ 'ಜೋ ಜೋ ಬಾಲಕೃಷ್ಣ ಅಂದಿನ ಜನಪ್ರಿಯ ಹಾಡಾಗಿತ್ತು.

ಎಸ್. ಕೆ ವಸುಮತಿ, ಸಿ. ಕೆ. ತಾರಾ, ಶ್ಯಾಮಲ ಜಾಗಿರ್‍ದಾರ್ ಮುಂತಾದವರು ಸುಗಮ ಸಂಗೀತದ ಹಾದಿಗೆ ಹೂವು ಚಿಲ್ಲಿದವರು. ಬಾನುಲಿ ಗೀತರೂಪಕಗಳಲ್ಲಿ ಮಿಂಚಿದವರು ಪು.ತಿ.ನ. ಅವರ ಗೀತರೂಪಕಗಳಿಗೆ ಬಹುಪಾಲು ದನಿ ನೀಡಿದವರು ಎಸ್. ಕೆ. ವಸುಮತಿ, ಪು.ತಿ.ನ. ಅವರ 'ಗೋಕುಲ ನಿರ್ಗಮನ, ಹರಿಣಾಭಿಸರಣ, ದೀಪಲಕ್ಷ್ಮಿ ಮುಂತಾದ ರೂಪಕಗಳ ಜನಪ್ರಿಯವಾಯಿತು. ತಾರಾ ಮತ್ತು ವಸುಮತಿಯವರು ತಯಾರು ಮಾಡಿದ ಅಸಂಖ್ಯಾತ ಶಿಷ್ಯರಿಂದ ಮೈಸೂರು, ಬೆಂಗಳೂರು ಪ್ರಾಂತ್ಯಗಳಲ್ಲಿ ಸಉಗಮ ಸಂಗೀತದ ವೃಕ್ಷ ಟಸಿಲೊಡೆದುದು ಸಂತಸದ ಘಟ್ಟ ಎನ್ನಬಹುದು. ಶ್ಯಾಮಲಾ ಜಾಗಿರ್‍ದಾರ್ 1957ರಲ್ಲೇ ರಷ್ಯಾದ ಅಧ್ಯಕ್ಷ ಹಾಗೂ ಪ್ರಧಾನಿಗಳ ಮುಂದೆ ಮೊದಲ ಕಾರ್ಯಕ್ರಮವನ್ನು ನೀಡಿದವರು. ವಚನ, ದಾಸರಪದ ಭಾವಗೀತೆಗಳ ಗಾಯನದ ಮೂಲಕ ಮನಸೆಳೆದರು. ತಮ್ಮ ಇಂಪಾದ ಗಾಯನಕ್ಕಾಗಿ 1956ರಲ್ಲಿ `ಸ್ವೀಟ್ ವಾಯ್ಸ್ ಆಫ್ ಮೈಸೂರ್ 1962ರಲ್ಲಿ ಸ್ವೀಟ್ ಮೆಲೋಡಿ ಆಫ್ ಕರ್ನಾಟಕ, ಕರ್ನಾಟಕ ಕೋಗಿಲೆ ಪ್ರಶಸ್ತಿಗಳಿಂದ ಪುರಸ್ಕøತರಾದವರು ಹತ್ತಾರು ಗೀತೆಗಳನ್ನು ಧ್ವನಿ ಮುದ್ರಿಸಿಕೊಂಡಿತು. `ರಂಗನಾಥನ ಪಾದವ ತೊಳೆಯೆ ಕಾವೇರಿ ಬಂದಳು — `ಕಲ್ಲಿನಲಿ ಕೆತ್ತಿದನು ಆನೆ ಬಂದಿತಮ್ಮಾ `ನಿನ್ನ ಬಾಂದಳದಂತೆ ಮೈಸೂರು ಸುತ್ತ ಸಾಲು ತೆಂಗಿನಮರ, ಮುಂತಾದ ಹಾಡುಗಳು ಶ್ಯಾಮಲಾ ಜಾಗಿರ್‍ದಾರ್ ಅವರ ಜನಪ್ರಿಯ ಗೀತೆಗಳು.

ಶ್ಯಾಮಲಾ ಜಿ. ಭಾವೆ (1941) ಉಭಯಗಾನ ವಿದುಷಿ ಎಂಬ ಬಿರುದು ಪಡೆದು ಶಾಸ್ತ್ರೀಯ ಪ್ರಕಾರಗಳಲ್ಲಿ ಭಾವಗೀತಾ ಪ್ರಕಾರಗಳಲ್ಲಿ ಪ್ರಸಿದ್ಧಿ ಮಾಡಿದವರು. ಸುಗಮ ಸಂಗೀತದ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿರುವ ಶ್ಯಾಮಲಾ ಭಾವೆ ಹತ್ತಾರು ಧ್ವನಿಸುರುಳಿಗಳನ್ನು ತಂದರು. 'ಸುವರ್ಣಭಾರತ- ಉತ್ಸವ ದರ್ಶನ- ಗೀತತರಂಗ — ಭಾವೈಕ್ಕೆ ಭಾರತಿ' — ವಚನ ಸುಧಾ — ಇವುಗಳು ಶ್ಯಾಮಲಾ ಭಾವೆಯವರ ಅತ್ಯುತ್ತಮ ಸಂಯೋಜನೆಯಿರುವ ಧ್ವನಿಸುರುಳಿಗಳು. ಶ್ಯಾಮಲಾ ಅತಿ ಸೂಕ್ಷ್ಮ ಭಾವನೆಯ ಗೀತ ಸಂಯೋಜಕರು. ತಾಯಿ ಲಕ್ಷ್ಮೀಭಾವೆ ತಂದೆ ಗೋವಿಂದ ವಿಠಲ ಭಾವೆಯವರು ಸ್ಥಾಪಿಸಿದ ಸರಸ್ವತಿ ಸಂಗೀತ ವಿದ್ಯಾಲಯ ಪ್ರಾಚಾರ್ಯಯಾಗಿ, ನಾಡಿನ ಎಲ್ಲ ಕವಿಗಳ ಎಲ್ಲ ರಚನೆಗಳನ್ನು ಹಾಡುತ್ತಾ ಬಂದವರು.

ಮೈಸೂರು ಅನಂತಸ್ವಾಮಿಯವರ ಕೊಡುಗೆ

[ಬದಲಾಯಿಸಿ]

ಸುಗಮ ಸಂಗೀತಕ್ಕೆ ಪ್ರಮುಖ ಚಾಲನೆಕೊಟ್ಟವರು ಮೈಸೂರು ಅನಂತಸ್ವಾಮಿ. ಸುಗಮ ಸಂಗೀತದ ಪ್ರಕಾರಕ್ಕೆ ಅನಂತಸ್ವಾಮಿಗಳು ಕೊಟ್ಟ ಕೊಡುಗೆ ಅಪಾರ. ಕಾಳಿಂಗರಾಯರ ನಂತರ ಅವರ ಉತ್ತರಾಧಿಕಾರಿಗಳಂತೆ ಬಂದವರು. ತಮ್ಮ ಗಾಯನ ಮತ್ತು ಸಂಯೋಜನೆಗಳಿಂದ ಸುಗಮ ಸಂಗೀತವನ್ನು ಜನರ ಬಳಿಗೆ ತಂದವರು. ಮೈಸೂರು ಅರಸರ ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರ ಮೊಮ್ಮಗನಾದ ಅನಂತಸ್ವಾಮಿ ಅವರ ಪ್ರಪಥಮ ಸಂಯೋಜನೆಯೇ `ಬಾಗಿಲೊಳು ಕೈ ಮುಗಿದು' ಎಂಬ ಕುವೆಂಪು ಅವರ ಕವಿತೆ. ಮೈಸೂರಿನಲ್ಲೇ ಇದ್ದ ಅನಂತಸ್ವಾಮಿಯವರು ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವಾರು ಗಾಯಕರನ್ನು ಪೋಷಿಸಿದರು.

ಕುವೆಂಪು ಅವರ `ಬಾಗಿಲೊಳು ಕೈಮುಗಿದು ಗೀತೆಯಿಂದ ಸುಗಮ ಸಂಗೀತ ಕ್ಷೇತ್ರ ಪ್ರವೇಶ ಮಾಡಿದ ಅವರು, ಹಿರಿಯ ಕವಿಗಳಾದ ಬೇಂದ್ರೆ, ಕುವೆಂಪು, ಪು.ತಿ.ನ., ಡಿ.ವಿ.ಜಿ. ಪರಮೇಶ್ವರ ಭಟ್ಟ, ಮಾಸ್ತಿ ಮುಂತಾದವರಿಂಂದ ಹಿಡಿದು ಹೊಸ ಕವಿಗಳ ಬರಹಗಳನ್ನು ಹಾಡಾಗಿಸಿದರು. ಬಿಎಂಶ್ರೀ ಅವರ, `ಕರುಣಾಳು ಬಾ ಬಳಕೆ; ಅಡಿಗರ, `ಇಂದು ಕೆಂದಾವರೆ; ನಿಸಾರರ 'ಬೆಣ್ಣೆಕದ್ದ'; ಡಿವಿಜಿಯವರ ಅಂತಃಪುರ ಗೀತೆಗಳು; ರಾಜರತ್ನಂ ಅವರ 'ರತ್ನನ್ ಪದಗಳು'; ಜಿ. ಎಸ್. ಶಿವರುದ್ರಪ್ಪನವರ 'ಎದೆ ತುಂಬಿ ಹಾಡಿದೆನು'; ಅಡಿಗರ 'ಯಾವ ಮೋಹನ' ಹೀಗೆ ಸುಮಾರು ಸಾವಿರಕ್ಕೂ ಹೆಚ್ಚು ಕವಿತೆಗಳಿಗೆ ಸಂಯೋಜನೆ ಮಾಡಿದರು.

ಪ್ರಮುಖ ಗಾಯಕರು

[ಬದಲಾಯಿಸಿ]

`ಯಾವ ಮೋಹನ ಮುರಳಿ ಕರೆಯಿತು ಗೀತೆಯಿಂದ ತಮ್ಮ ಮಧುರ ಕಂಠದ ಸಿರಿ ತೆರೆದ ರತ್ನಮಾಲ ಪ್ರಕಾಶ್ ರವರು `ಸುಗಮ ಸಂಗೀತವೆಂದರೆ ರತ್ನಮಾಲಾ, ರತ್ನಮಾಲಾ ಎಂದರೆ ಸುಗಮ ಸಂಗೀತ ಎನಿಸುವಷ್ಟು ಪ್ರಸಿದ್ಧರಾದರು. `ಬಾಗಿಲೊಳು ಕೈ ಮುಗಿದು ಎದೆ ತುಂಬಿ ಹಾಡಿದೆನು`ಯಾವ ಮೋಹನ ಮುರಲಿ ಉಡುಗಣ ವೇಷ್ಟಿತ ನಿಲ್ಲಿಸದಿರು ವನಮಾಲಿ, ಮೊದಲ ದಿನ ಮೌನ, ಏನೀ ಮಹಾನಂದವೇ,' `ತೌರಸುಖದೊಳಗೆನ್ನ ಮುಂತಾದ ಭಾವಗೀತೆಗಳಿಂದ ಕೇಳುಗರ ಮನಸ್ಸನ್ನು ಸುರೆ ಮಾಡಿದರು.

ಎಂ. ಮೈಸೂರು ಸೌಟ್ಸ್ ಇಂಟರ್ ನ್ಯಾಷನಲ್ (ಎಂ. ಎಸ್. ಐ. ಎಲ್) ಮೂಲಕ ಬೆಳಕಿಗೆ ಬಂದ ಗಾಯಕಿ ಬಿ. ಕೆ ಸುಮಿತ್ರ ಅವರು, (1946) ಕಲಿತಿದ್ದು ಅಪ್ಪಟ ಶಾಸ್ತ್ರೀಯ ಸಂಗೀತ, ಹೆಸರು ಮಾಡಿದ್ದು `ಜಾನಪದ ಗೀತೆಗಳಲ್ಲಿ ಚಿತ್ರಗೀತೆಗಳಲ್ಲಿ ಒಲವು ಮೂಡಿದ್ದು ಸುಗಮ ಸಂಗೀತದಲ್ಲಿ, ಸ್ಪಷ್ಟ ದನಿಯ ಸುಮಿತ್ರ 'ಕನ್ನಡ ಕೋಗಿಲೆ`ಗಾನಪ್ರವೀಣೆ ಬಿರುದಾಂಕಿತರು, `ಬೃಂದಾವನಕ (ಕುವೆಂಪು) ಬೆಣ್ಣೆಕದ್ದ (ನಿಸಾರ್) ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿದ್ದಾರೆ.

ಎಂ. ಎಸ್. ಐ ಎಲ್ ಗೀತೆಗಳ ಮೂಲಕ ಪ್ರಸಿದ್ಧಿಗೆ ಬಂದವರು ಗಾಯಕ ಸಂಯೋಜಕ ಅಶ್ವತ್ಥ್ (1939) ಬಾಲ್ಯದಲ್ಲಿ ಚಲನಚಿತ್ರ ಗೀತೆಗಳಿಂದ ಪ್ರಭಾವಿತರಾದ ಅಶ್ವತ್ಥ್ ಮಹಮದ್ ರಫೀ ಅವರ ಅಭಿಮಾನಿ, 1965ರಲ್ಲೇ ಆಕಾಶವಾಣಿಯ ಮೂಲಕ ಹಾಡುತ್ತಿದ್ದರೂ ಎಂ. ಎಸ್. ಐ. ಎಲ್. ಗೀತೆಗಳಿಂದ ಜನಪ್ರಿಯರಾದರು, ಷರೀಫ್ ಕ್ಯಾಸೆಟ್ಟಿನಿಂದ ಒಮ್ಮೆಲೆ ಹೊಸ ಅಲೆ ತಂದರು. `ದೀಪಿಕಾ, `ಬಾರೋವಸಂತ, 'ಮೈಸೂರು ಮಲ್ಲಿಗೆ, ಮಾವುಬೇವು, ಶ್ರಾವಣ ಹೀಗೆ ಸುಮಾರು ಸಾವಿರ ಹಾಡಿನತ್ತ ದಾಪುಗಾಲನಿಟ್ಟರು. ಅಶ್ವಥ್ ಒಮ್ಮಲೆ ಈ ಕ್ಷೇತ್ರಕ್ಕೆ ಪರಿಚಿತರಾಗಿ ಬೆಳಗಾಗುವುದರಲ್ಲಿ ಮನೆಮನೆಯನ್ನೂ, ಹಳ್ಳಿ ಹಳ್ಳಿಯನ್ನು ತಲುಪಿದರು. ಸುಗಮಸಂಗೀತದ ದಿಕ್ಕನ್ನೇ ಬದಲಾಯಿಸಿದರು. ಪುಸ್ತಕದೊಳಗೆ ಅರೆಬಿರಿದ ಮೊಗ್ಗಾಗಿದ್ದ ನೂರಾರು ಗೀತೆಗಳು ಅರಳುತ್ತಾ, ಪರಿಮಳ ಬೀರುವ ಪುಷ್ಪಗಳಾದವು. ಅಶ್ವಥ್ ತಮ್ಮ ಸ್ನೇಹಿತ ಕವಿಗಳಾದ ಹೆಚ್. ಎಸ್. ವೆಂಕಟೇಶಮೂರ್ತಿ, ವ್ಯಾಸರಾವ್, ಲಕ್ಷಣ್ ರಾವ್, ಮುಂತಾದವರಿಂದ ನೂರಾರು ಗೀತೆಗಳನ್ನು ಬರೆಯಿಸಿದರು, ಹೊಸ ಹೊಸ ವಿಚಾರಗಳು ಹುಟ್ಟಿಕೊಂಡು ಹಾಡುವುದು. ಸುಗಮ ಸಂಗೀತಕ್ಕೆ ಗೀತಕಾರರು, ಸಂಗೀತ ಸಂಯೋಜಕರು, ಗಾಯಕರು ಮುನ್ನುಗ್ಗುತ್ತಾ ಬಂದರು.

ಮೈಸೂರು ಅನಂತಸ್ವಾಮಿಯವರೊಡನೆ ಸುಮಾರು 35 ವರುಷ ಸತತವಾಗಿ ಸುಗಮ ಸಂಗೀತ ಹಿರಿಮೆ ಎಂ. ಕೆ. ಜಯಶ್ರೀ ಅವರದು (1955) 5 ವರುಷದ ಬಾಲಕಿಯಾಗಿರುವಾಗಲೇ ಹಾಡುತ್ತಾ ಬೆಳೆದು ಜಯಶ್ರೀಯವರು ಮಧುರ ಸ್ನಿಗ್ಥ ಕಂಠ, ಸುಗಮ ಸಂಗೀತ ಬಾಲ್ಯದಿಂದಲೇ ಆರಂಭ. ಶಾಸ್ತ್ರೀಯ ಸಂಗೀತಲ್ಲೂ ಪಾಂಡಿತ್ಯವುಳ್ಳವರು. ನಿತ್ಯೋತ್ಸವ ಪ್ರಪ್ರಥಮ ಧ್ವನಿಸುರುಳಿಯಲ್ಲಿ ಹೆಚ್ಚು ಹಾಡು ಹಾಡಿದ ದಾಖಲೊಯೊಂದಿಗೆ ಎಂ. ಎಸ್. ಐ ಎಲ್. ಗೀತೆಗಳ ಮೂಲಕ ಜನಪ್ರಿಯವಾದರು. ಪ್ರಭಾತ್ ರಂಗತಂಡದೊಂದಿಗೆ ನಿರಂತರವಾಗಿ ಹತ್ತಾರು ಗೀತರೂಪಕಗಳಿಗೆ ದನಿಯಾದವರು. 1999ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು. ಇವರು ಹಾಡಿದ (ನಿಸಾರರ) `ಮತ್ತದೇ ಬೇಸರ `ನನ್ನ ನಲಿವಿನ ಬಳ್ಳಿ ಇಂದು ಕೆಂದಾವರೆ (ಅಡಿಗ) ತುಂಬ ತಿಂಗಳಿನ, (ಕೆ. ಎಸ್. ನ) `ಈ ಬಾನು ಈ ಚುಕ್ಕಿ (ಎನ್. ಎಸ್. ಎಲ್. ಭಟ್ಟ) ಬಾ ಸವಿ ತಾ (ಡಿವಿಜಿ) ಹೂಹೂಹೂ (ಸುಮತೀಂದ್ರ ನಾಡಿಗ್) `ನಾ ಕುಣಿಬೇಕ (ಬೇಂದ್ರ) ಮುಂತಾದ ಹಾಡುಗಳು ಕೇಳುಗರ ಕಿವಿಯಲ್ಲಿ ರಿಂಗಣಿಸುತ್ತವೆ.

ಸುಲೋಚನಾ ಸುಗಮಸಂಗೀತದ ಮತ್ತೊಬ್ಬ ಪ್ರಮುಖ ಗಾಯಕಿ. ಅವರ ಎಲ್ಲಿ ಜಾರಿತೋ ಮನವು ಮತ್ತು ಅತ್ತಿತ್ತ ನೋಡದಿರು ಮೊದಲಾದ ಹಾಡುಗಳು ಜನಪ್ರಿಯವಾಗಿವೆ.

ಇಂದಿನ ಸುಗಮ ಸಂಗೀತ ಗಾಯಕಿಯರಲ್ಲಿ ಹೆಸರಿಸಬೇಕಾದವರು ಡಾ || ರೋಹಿಣಿ ಮೋಹನ್, ಕೆ. ಎಸ್. ಸುರೇಖಾ, ಅರ್ಚನಾ ಉಡುಪ, ಪಿ. ಎ. ಮಂಗಳ ಮುಂತಾದವರು.

ಉತ್ತರ ಕರ್ನಾಟಕ ಸಂಗೀತ ಮತ್ತು ಮರಾಠಿಯ ಪ್ರಭಾವ

[ಬದಲಾಯಿಸಿ]

ಉತ್ತರ ಕರ್ನಾಟಕದ ರಂಗ ಸಂಗೀತ ಹಿಂದೂಸ್ತಾನಿ ಪದ್ಧತಿಯ ಮರಾಠೀ ಹಾಡುಗಳನ್ನು ಅವಲಂಬಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ಮರಾಠೀಯಲ್ಲಿ `ಗೋಡಗಾಣ' ಎಂಬ ರಸಾಲ ರಚನೆಗಳು ಸಂಗೀತಮಯವಾಗಿದ್ದು ಮಂಜುಳ ಲಲಿತ ಶಬ್ಧಗಳಿಂದ ಕೂಡಿ ಅತಿ ಮಧುರವಾದ ಗೀತೆಗಳಾಗಿದ್ದವು. ಇವು ಸಾಹಿತ್ಯಕ ಕಾವ್ಯದಿಂದ ಭಿನ್ನವಾಗಿದ್ದವು. ಸಂಗೀತದ ಮೂಲಕ ಬಾಯಿಗೆ ಸವಿಯೆನಿಸುವ ಗೀತೆಗಳಾಗಿದ್ದವು. ಮಧುರವಾದ ಗೀತೆಗಳಾಗಿದ್ದವು. ಇವು ಸಾಹಿತ್ಯಕ ಕಾವ್ಯದಿಂದ ಭಿನ್ನವಾಗಿದ್ದವು. ಸಂಗೀತದ ಮೂಲಕ ಬಾಯಿಗೆ ಸವಿಯೆನಿಸುವ ಗೀತೆಗಳಾಗಿದ್ದವು.

ಹೀರಾಬಾಯಿ ಬಡೋದೆಕರ ಅವರಿಂದ ಪ್ರಾರಂಭವಾದ ಭಾವಗೀತೆಗಳನ್ನು (ಮರಾಠೀ) ಹಾಡುವ ಪರಿಪಾಠ ಸುಗಮಸಂಗೀತಕ್ಕೆ ದಿಕ್ಸೂಚಿಯಾಯಿತು. ಮಾಧವ ಜ್ಯೂಲಿಯನ್ ಅವರ `ಪಾಕವ ಮಧುಬೋಲ ಕೋಕಿಲ ಮತ್ತು `ಉಪವನಿಗಾತಕೋಕಿಳಾ ಅಂದು ಆತ್ಯಂತ ಪ್ರಚಲಿತವಾದ ಹಾಡುಗಳು `ಹೀ ಏಕ್ ಆಸಮಸಿ ಮುರಲೀ ಕನ್ಹಯ್ಯ,`ಬಜಾವ್ ಬಜಾವ್ ಮುರಲಿ ಎಂ ಗೀತೆ 1937ರಲ್ಲೇ ಧ್ವನಿಯಮುದ್ರಿತವಾಗಿತ್ತು.

ಹೀರಾಬಾಯಿ ಅವರ ಶಿಷ್ಯಯಾದ ಸೀತಾಮುಲ್ಕಿ (ಗುಗಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಎನ್ಕೆ ಕುಲಕರ್ಣಿಯವರ ಶಿಷ್ಯೆಯಾಗಿದ್ದವರು) ಯವರು ಮುಂಬಾಯಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಮರಾಠೀ ಗೋಡಗಾಣದಲ್ಲಿ ದೊಡ್ಡ ಹೆಸರು ಮಾಡಿದ್ದರು. 1946ರಲ್ಲಿ ಎನ್ಕೆಯವರು ಮುಂಬಾಯಿ ಆಕಾಶವಾಣಿಗೆ ಸೇರಿದಾಗ ಗುರುಗಳನ್ನು ಭೇಟಿ ಮಡಲು ಬಂದರು. ನಿಲಯದ ಕಲಾವಿದರಾಗಿದ್ದ ಎನ್ಕೆಯವರು ಸೀತಾ ಅವರನ್ನು `ನೀವು ಕನ್ನಡ ಯಾಕೆ ಹಾಡುವುದಿಲ್ಲ ಎಂದಾಗ `ನಾನು ಹೇಳುವ ಧಾಟಿಗೆ ನೀವು ಗೋಡಗೀತ ರಚಿಸಿಕೊಟ್ಟರೆ ಹಾಡುತ್ತೇನೆ — ಎಂದರು. ಆ ಒಂದು ಸಂಭಾಷಣೆ, ಆಲೋಚನೆ, ಸುಗಮಸಂಗೀತದ ಪಾಲಿಗೆ ಅಮೃತ ಸಿಂಚನವಾಯಿತು. ಸೀತಾಮುಲ್ಕಿಯರು ಹಾಡುತ್ತಿದ್ದ. - 'ತಮಬಿನ ಮೇರಿ ಕೊನ ಖಬರಲೆ ಗೋವರಧನ ಗಿರಿಧಾರಿ" ಎನ್ನುವ ಯಮನ್ (ಕಲ್ಯಾಣಿ) ರಾಗದ ಹಿಂದಿ ಭಜನೆ - `ಗಿಡಗಿಡದಲಿ ಹಾರಾಡುವ ಗಿಳೆಯೆ ನುಡಿ ನುಡಿ ಕನ್ನಡವ ಎಂದು ಸುಂದರ ರೂಪ ಪಡೆದು ಅಂದಿನ ಅನಗತ್ಯವಾದ ಕನ್ನಡಾಭಿಮಾನವನ್ನೂ ಗೀತೆಯ ಮೋಡಿಯನ್ನು ಮೂಡಿಸಿತು. ಕನ್ನಡ ವಿಭಾಗದ ಈ ಕಾರ್ಯಕ್ರಮ ಸವಿಕಟ್ಟಾಗಿ, ಸೂಗಸಾಗಿ, ಹೊಸರುಚಿಯನ್ನು ಸೃಷ್ಟಿ ಮಾಡಿತು. ಹಾಗೆಯೇ ಮುಂದುವರೆದು `ವಿನವಿತ ಶಬರೀ ರಘುರಾಮೋ ತುಜ ಸಾಠಿ ವೇಚಲೆ ಬೋರೆ ಎಂದು ಸೀತಾಮುಲ್ಕಿಯವರು ಹಾಡಿದ ಧಾಟಿಗೆ, ನುಡಿದಳು ಶಬರೀ ರಘುವರಗೆ - ಎಂಬ ಮತ್ತೊಂದು ರಸಾಲಗೀತ ಎನ್ಕೆಯವರಿಂದ ಸೃಷ್ಟಿಯಾಯಿತು. ವೀಸೀಯವರ `ಕಾದಿರುವಳು ಶಬರಿ'ಯಂತೆ ಈ ಹಾಡೂ ಜಗಜನಿತವಾಯಿತು. ಆಗ ವೀಸೀಯವರಾಗಲಿ, ಬೇಂದ್ರೆ, ಗೋಕಾಕರಾಗಲೀ `ಮುಗಳಿಯವರಾಗಲಿ ಆಕಾಶವಾಣಿಯ ಒಪ್ಪಂದದ ಕವಿಗಳಾಗಿಲ್ಲದೇ ಇದ್ದಿದ್ದರಿಂದ ಎನ್ಕೆಯವರೇ ಆ ಕೆಲಸವನ್ನು ನಿಭಾಯಿಸಬೇಕಾಯಿತು. ಗೀತರಚನಾಕಾರರಾಗಿಯೂ ಅವರು ಪ್ರಸಿದ್ಧರಾಗಲು ಆಕಾಶವಾಣಿಯು ನೀಡಿದ ಅವಕಾಶವೇ ಮೂಲಧಾರವಾಯಿತು.

ಸೀತಾಮುಲ್ಕಿಯವರ ಈ ಕನ್ನಡ ಸುಗಮ, ಲಲಿತ ಗೀತ ರಚನೆಗಳ ಗಾಯನದ ಎಷ್ಟಾಯಿತೆಂದರೆ ಕನ್ನಡೇತರರಿಗೂ ಹಾಡುವ ಬಯಕೆ ಅದಮ್ಯವಾಯಿತು. ಮರಾಠೀ ಗಾಯನದ ಮತ್ತೊಬ್ಬ ಕಲಾವಿದೆ ವಿಜಯಾ ದೇಸಾಯಿ ಆಕಾಶವಾಣಿಗೆ ಬಂದು ಎನ್ಕೆಯವರಿಗೆ "ನೀವೇ ಗೀತ ರಚಿಸಿಕೊಡಿರಿ ನಾನು ಚಾಲೀ ಹಚ್ಚುತ್ತೇನೆ," ಎಂದು ದುಂಬಾಲು ಬಿದ್ದರು.

ಮುಂಬಯಿ ಗಾಯಕಿಯರಾದ `ಅಮೀರ್ ಬಾಯಿ ಕರ್ನಾಟಕ, ಸೀತಾಮುಲ್ಕಿ, ಸುಶೀಲಾಟೇಂಬೆ, ವಿಜಯಾ ದೇಸಾಯಿ, ಮುಂತಾದವರಲ್ಲದೆ ಧಾರವಾಡ ಕೇಂದ್ರದ ಕೃಷ್ಣಾ ಹಾನಗಲ್, ನೀಲಮ್ಮ ಕೊಡ್ಲಿ (ಮೊದಲು ಮನ್ಸೂರ್) ಬಾಳಪ್ಪ ಹುಕ್ಕೇರಿ, ಅನುರಾಧಾ ಧಾರೇಶ್ವರ್, ಉಷಾ ಖಾಡಿಲಕರ, ಅರ್, ಎಸ್, ಜಂತ್ಲಿ, ಎಸ್. ಕೆ. ದೇಶಪಾಂಡೆ, ಸಿದ್ಧರಾಮ ಜಂಬಲದಿನ್ನಿ, ಶಾರದಾ ಹಾನಗಲ್ ಮುಂತಾದವರು ಸೋನುಬಾಯಿ ದೊಡ್ಡಮನಿ, ದೇವೇಂದ್ರ ಪತ್ತಾರ್, ಈಶ್ವರಪ್ಪ ಮಿಣಜಿ, ಎ. ಜಿ. ನೀಲಗಾರ ಮೊದಲಾದ ಕಲಾವಿದರೆಲ್ಲ ಉತ್ತರಕರ್ನಾಟಕದ ಸುಗಮ ಸಂಗೀತಕ್ಕೆ ಸೌರಭ ನೀಡಿದರು.

ಸಾವಿರ ಹಾಡುಗಳ ಸರದಾರ - ಹುಕ್ಕೇರಿ

[ಬದಲಾಯಿಸಿ]

ಉತ್ತರ ಕರ್ನಾಟಕದ ದಿಮಂತ ಗಾಯಕ ಬಾಳಪ್ಪ ಹುಕ್ಕೇರಿ (21.8.1915) ಮನೋರಂಜನಗಾನ ತಮ್ಮ ಸಂಗೀತವನ್ನು ಮಿಸಲಿಡಲ್ಲಿಲ. ಸುಗಮ ಸಂಗೀತದ ಮೂಲಕ ಭಾವೈಕ್ಯತೆ ಒಲವಿನ ಉತ್ಕಲತೆ ಉತ್ಸುಕತೆ ಅನತ ವಿನೋಧ, ಇವೆಲ್ಲವನ್ನು ತಮ್ಮ ಹಾಡಿನಲ್ಲಿ ತಂದರು. ಸುಗಮ ಸಂಗಿತದ ಮೂಲಕ ಹಳ್ಳಿಯ ಜೀವನ್ನು ತಿದ್ದಿದರು.

ಸ್ವಾತಂತ್ರ್ಯ ಚಳುವಲ್ಲಿ ಕಾಲದಲ್ಲಿ ತಮ್ಮ ಹಾಡುಗಳ ಮೂಲಕ ಜನರನ್ನು ಹುರಿದುಂಬಿಸಿದ್ದರು. ಸಾವಿರ ಹಾಡಿನ ಸರದಾರ ಜಾನಪದ ಗಾರುಡಿಗ ಮೂರ್ತಿಕಾರ ಜನಪದ ರತ್ನ ಹೀಗೆ ಹತ್ತಾರು ಬಿರುದಗಳು ರಾಜ್ಯ ಸಂಗೀತ ನಾಟಕ ಪ್ರಶಸ್ತಿ 1959 ತಂದಿತ್ತು. ಕೇಂದ್ರ ಸಂಗೀತ ನಾಟಕ ಪ್ರಶಸ್ತಿ ದಕ್ಷಿಣ ಹಿಂದೂಸ್ತಾನದ ಸಾಂಸ್ಕøತಿ ಸಂಸ್ಥೆ ಪ್ರಶಸ್ತಿ 1982 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1986 ಒಡರ ಬಾಳಪ್ಪನವರ ಕೀರಿಟಕೆ ಮಧ್ಯಪ್ರದೇಶ ಸರ್ಕಾರ ತುಳನಿ ಸಂಮಿಳನ್ನ ಪ್ರಶಸ್ತಿ ಗರಿ.

ಉತ್ತರ ಕರ್ನಾಟಕದ ಗಾಯಕರು

[ಬದಲಾಯಿಸಿ]

ಉತ್ತರ ಕರ್ನಾಟಕದ ಹೆಸರಿನಲ್ಲಿ ಚಿರಸ್ಥಾಯಿಯಾಗುವ ಮತ್ತೊಂದು ಹೆಸರು ಶ್ರೀಮತಿ ಅನುರಾಧಾ ಧಾರೇಶ್ವರ್ (1938). ಅನುರಾಧಾ ಅವರ ಮೊದಲ ಹೆಸರು ಶಾಂತವತಿ ಗಂಗೊಳ್ಳಿ, ಸೂಕ್ಷ್ಮಭಾವವನ್ನು ಪ್ರಕಟಿಸುವ ಪಾರದರ್ಶಕವಾದ ಸವಿದನಿಯುಳ್ಳ ಅನುರಾಧ ಅವರು 1969ರಲ್ಲಿ ಎನ್ಕೆಯವರ 'ತಿಂಗಳಲೋಕದ ಅಂಗಳ ರೂಪಕದಲ್ಲಿನ ಗೀತೆಗಳು - ಕಿತ್ತೂರ ಕೇಸರಿಣಿ (ಎನ್ಕೆ) ರೂಪಕದಲ್ಲಿ ಚಿನ್ನಮ್ಮನ ಪಾತ್ರದ ಹಾಡುಗಳನ್ನು ಕಾಳಿಂಗರಾಯರ ಜೊತೆ ಹಾಡಿದರು.

1969ರಲ್ಲಿ ಗಾಂಧೀಜಿ ಶತಮಾನೋತ್ಸವ ಸಂದರ್ಭದಲ್ಲಿ ಎನ್ಕೆಯವರು ಬರೆದು ಎಪ್ಪತ್ತೈದು ಗೀತೆಗಳನ್ನು ಅನುರಾಧಾ ಹಾಡಿದ್ದು ಅಪೂರ್ವ ಸಂದರ್ಭವಾಯಿತು. ರವೀಂದ್ರನಾಥ ಟ್ಯಾಗೋರರು 40 ವರುಷಗಳ ಹಿಂದೆ ಧಾರವಾಡಕ್ಕೆ ಬಂದಾಗ, ಅವರೆದುರಿನಲ್ಲಿ ಬಂಗಾಳಿ ಗೀತೆಯನ್ನು ಹಾಡಿ ಭೇಷ್ ಎನಿಸಿಕೊಂಡರು. 1965ರಲ್ಲಿ ಭಾರತದ ಮೇಲೆ ಚೀನಾ ಅಕ್ರಮಣ ನಡೆಸಿದ ಸಂದರ್ಭದಲ್ಲಿ ರಾಘವೇಂದ್ರ ಇಟಗಿಯವರು ಹಿಂದಿಯಿಂದ ಅನುವಾದಿಸಿದ `ಓ ಎನ್ನ ದೇಶ ಬಾಂಧವರೇ ಎಂಬ ಗೀತೆಯನ್ನು ಹಾಡಿದ ಅನುರಾಧ `ಕನ್ನಡ ಕೋಗಿಲೆ ಎಂದು ಅಭಿಮಾನಿಗಳಿಂದ ಕರೆಸಿಕೊಂಡರು. ಇದೇ ಹಾಡನ್ನು ಕಾರ್ಗಿಲ್ ಯುದ್ಧದ ಸಮಯದಲ್ಲಿ ಹುತಾತ್ಮರ ದಿನಾಚರಣೆಯಂದು ಹಾಡಿದಾಗ ಶ್ರೋತೃಗಳು ಕಣ್ಣೀರಿಟ್ಟರು.

ಅನುರಾಧಾ ಅವರು ಹಾಡಿರುವ (ಎನ್ಕೆ ಅವರ) `ನಾವು ನಾಡಾಗುವ ನಾವು ಹಾಡಾಗುವ ನಾನು ಬಡವಿ ಆತ ಬಡವ (ಬೇಂದ್ರೆ) ಯಾರು ಕೇಳುತ್ತಾರೆ ಹೇಳಿರಣ್ಣ (ಕಣವಿ) `ಓ ನನ್ನ ದೇಶ ಬಾಂಧಾವರೇ (ರಾಘವೇಂದ್ರ ಇಟಗಿ) ಜನಪ್ರಿಯವಾಗಿ ಅವರ ಹೆಸರು ಹೇಳುತ್ತವೆ.

ಅನುರಾಧಾ ಧಾರೇಶ್ವರ ನಂತರ ಅನೇಕ ಗಾಯಕಿಯರು ಬಂದರೂ ಅವರಷ್ಟು ಹೆಸರು ಮಾಡಲಿಲ್ಲವೆಂದು ಹೇಳಬಹುದು.

ಆಕಾಶವಾಣಿಯ ಕೊಡುಗೆ

[ಬದಲಾಯಿಸಿ]

ನಮ್ಮ ಇಂದಿನ ಸುಗಮಸಂಗೀತಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟ ಮಾಧ್ಯಮಗಳಲ್ಲಿ ಸ್ಥಾನದಲ್ಲಿ ನಿಲ್ಲುವುದು ಆಕಾಶವಾಣಿ. ಇದಕ್ಕೂ ಸುಗಮ ಸಂಗೀತಕ್ಕೆ ಇರುವ ಬೆಸುಗೆ ನಿರಂತರವಾದದ್ದು, ಶಾಶ್ವತವಾದದ್ದು. ಆಕಾಶವಾಣಿಯಿಂದ ಬಿತ್ತರಗೊಂಡ ಶಾಸ್ತ್ರೀಯ ಸಂಗೀತದ ಮರುಹುಟ್ಟೀ ಇಂದಿನ ಸುಗಮಸಂಗೀತವಾಯಿತೆಂಬುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ.

ಪು. ತಿ. ನ. ರವರ ಗೀತರೂಪಕಕ್ಕೆ ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರು ಹಾಡಿರುವುದು ಸುಗಮ ಸಂಗೀತದ ಇತಿಹಾಸಕ್ಕೆ ವಿಶೇಷವಾದ ಮೈಲಿಗಲ್ಲು. ತಿಟ್ಟಿ ಕೃಷ್ಣಯ್ಯಂಗರ್ ಅವರೂ ಕೂಡ ಗೀತರೂಪಕದ ಗೀತೆಗಳನ್ನು ಹಾಡಿದ್ದುದು ಭಾವಗೀತಾ ಪ್ರಕಾರಕ್ಕೆ ಹೆಮ್ಮಯ ದಾಖಲೆ ಎನ್ನಬಹುದು.

1957ರಲ್ಲಿ ವಿವಿಧ ಭಾರತಿ ಪ್ರಾರಂಭವಾದಾಗ `ಸುಗಮ ಸಂಗೀತ ಎಂದು ನಾಮಕರಣ ಮಾಡಿತು. ಶಾಸ್ತ್ರೀಯ ಸಂಗೀತವಲ್ಲದ ಪ್ರಕಾರಗಳನ್ನು ಸುಗಮ ಸಂಗೀತವೆಂದು ಕರೆಯಿತು. ಆಕಾಶವಾಣಿಯಲ್ಲಿ ತಮ್ಮ ಕವಿತೆ ಬಿತ್ತರಿಸಲು, ತಮ್ಮ ಕೊರಳು ಕೇಳಲು ಕವಿ ಕಲಾವಿದರು ಹಾತೊರೆಯುತ್ತಿದ್ದುದು ಸಾಮ್ಯಾವಾಗಿತ್ತು. ಇದು ಭಾರತದ ಎಲ್ಲಾ ಭಾಷೆಯಲ್ಲೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಬೆಳೆಯುತ್ತ ಬಂದಿತೆನ್ನಬಹುದು.

ಸುಗಮ ಸಂಗೀತಕ್ಕೆ ಹರೆಯ ಬಂದಂತೆ, ಎಲ್ಲ ಕಡೆಯಲ್ಲೂ ಶ್ರೋತೃಗಳ ಪ್ರೋತ್ಸಾಹ, ಜನಪ್ರಿಯತೆಗಳು ದುಪ್ಪಟ್ಟಾದವು. ಆಕಾಶವಾಣಿಯ ಕಾರ್ಯಕ್ರಮಕ್ಕಾಗಿ ಜನರು ಹಾತೊರೆಯುತ್ತಿದ್ದರು. ಲಘುಸಂಗೀತವೆಂದೂ, ಲಲಿತಸಂಗೀತವೆಂದೂ, ಭಾವಗೀತೆ ಎಂದೋ ಕರೆಯುತ್ತಿದ್ದುದು. `ಸುಗಮ ಸಂಗೀತ ಸರಳವಾಗಿ, ಸರಾಗವಾಗಿ ಎಲ್ಲ ಶ್ರೋತೃಗಳನ್ನು ರಂಜಿಸಬಲ್ಲದ್ದು ಎಂಬ ಕಾರಣದಿಂದ ಸುಗಮಸಂಗೀತವಾಯಿತು.

ಎಸ್. ಕೆ. ವಸುಮತಿ, ಸರೋಜಾದೇವಿ, ಎನ್. ಎಸ್. ರಾಮನ್ ಮುಂತಾದವರು ಆಕಾಶವಾಣಿಯಲ್ಲಿ ಪ್ರಸಿದ್ಧರಾದರು. `ಪದ್ಮಚರಣ್ ಸುಗಮಸಂಗೀತವನ್ನು ಉನ್ನತ ಶ್ರೇಣಿಗೇರಿಸಿದವರಲ್ಲಿ ಪ್ರಮುಖರಾದರು. ಹೆಚ್. ಆರ್. ಲೀಲಾವತಿ, ಹೆಚ್. ಕೆ. ನಾರಯಣ್ ಇವರೆಲ್ಲ ಆಕಾಶವಾಣಿಯ ಗೀತರೂಪಕಗಳಲ್ಲಿನ ಪ್ರಮುಖ ದನಿಗಳಾದರು. ಆ ಒಂದು ಕಾಲದಲ್ಲಿ ಗೀತರೂಪಕಗಳು ಹುಚ್ಚಿಬ್ಬಿಸುವಷ್ಟು ಪ್ರಸಿದ್ಧಿಗಳಿಸಿದ್ದವು. ಎಸ್. ಕೃಷ್ಣಮೂರ್ತಿ, ವೀ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರು ಕಾರಂತರ ಕಿಸಾಗೌತಮಿ, ಪು. ತಿ. ನ. ಅವರ ಎಲ್ಲಾ ಗೀತರೂಪಕಗಳನ್ನು ಸಂಗೀತಕ್ಕೆ ಅಳವಡಿಸಿ ಪ್ರಸಾರ ಮಾಡಿದರು. 1975ರವರೆವಿಗೆ ಇದು ಹೀಗೆಯೇ ನಡೆದು ಸುಗಮಸಂಗೀತ ಬಹುಮುಖಿಯಾಗಲು ತೊಡಗಿತು.

1975ರಲ್ಲಿ `ನವಸುಮ ಎಂಬ ಕಾರ್ಯಕ್ರಮ ಪ್ರಾರಂಭವಾಯಿತು. ತಿಂಗಳ ಹೊಸ ಹಾಡಾಗಿ ಕವಿಯ ಕವಿತೆಯನ್ನು ಆಯ್ಕೆ ಮಾಡಿ ಸಂಯೋಜಿಸಿ ಹಾಡುವುದು ಆರಂಭವಾಗಿ, ಸಮೃದ್ಧವಾದ ಕವಿತೆಗಳ ಸೃಷ್ಟಿಯಾಯಿತು. ಹಾಡುವುದಕ್ಕಾಗಿಯೇ ಗೀತೆಗಳು ಬರೆಯಲ್ಪಟ್ಟವು. ರಾಮಚಂದ್ರಶರ್ಮ, ಅಡಿಗ, ಬೇಂದ್ರೆ, ಡಿ. ವಿ. ಜಿ. ವೀಸೀ. ಕುವೆಂಪು, ಪು.ತಿ.ನ. ರಾಜರತ್ನಂ, ಸಂದರ್ಭದ ಕೋರಿಕೆಗೆ ಬರೆಯಲು ಹೊರಟು `ನವಸುಮಕ್ಕೆ ತಮ್ಮ ಕವಿತಾಮಾಲೆಯನ್ನು ಸೇರಿಸಿದರು. ಹಿರಿಯ ಕವಿಗಳಿಂದ ಆರಂಭವಾದ ಈ ಸಂಪ್ರದಾಯಕ್ಕೆ ಕಿರಿಯ ಕವಿಗಳೂ ಸೇರಿಕೊಂಡರು.

ಆಕಾಶವಾಣಿ ಶ್ರೋತೃಗಳಿಗೆ ಮನರಂಜನೆಯ ಜೊತೆ ಜೊತೆಗೆ ವೈಚಾರಿಕ ಸಂದೇಶಗಳನ್ನು ಬಿತ್ತರಿಸುತ್ತಾ. ವಾಸ್ತವ ಸ್ಥಿತಿಗೆ ಸ್ಪಂದಿಸುತ್ತಾ ಸಂಸ್ಕøತಿಯ ಪ್ರಸಾರ ಮಾಡಿತು ಎಂಬುದು ಗಮನಾರ್ಹ. ಮನೋರಂಜನೆಯ ಮಾಧ್ಯಮವೊಂದು ಜನಪ್ರಿಯವಾಗಿ ಜನರಮನವನ್ನು ಗೆದ್ದು ಅವರಿಗೆ ಚಿಂತನಶೀಲತೆಯನ್ನು ತಂದುಕೊಟ್ಟಿತು. ಜೊತೆಗೆ ಹಳ್ಳಿಹಳ್ಳಿಗೆ ಸಂಸ್ಕøತಿಯನ್ನು ಪ್ರಸಾರ ಮಾಡಿತು. ಉತ್ತಮ ಅಭಿರುಚಿಯನ್ನು ಬಿತ್ತಿತು. ಕರ್ಣ ಮನರಂಜನೆಯ ಏಕೈಕ ಮಾಧ್ಯಮವಾಗಿದ್ದ ಆಕಾಶವಾಣಿಗೆ ಅವಶ್ಯಕವಾದ, ಗೀತರಚನೆ ಮಾಡಲು ಅನೇಕ ಪ್ರಸಿದ್ಧ ಕವಿಗಳು, ರಚನಾಕಾರರು ಸಿದ್ಧರಿದ್ದರು. ರಚನೆಗಳನ್ನು ಸುಶ್ರಾವ್ಯವಾಗಿ ಅರ್ಥವತ್ತಾಗಿ ಹಾಡಲು ಹಲವಾರು ಕಲಾವಿದರು ಸಿದ್ಧರಾಗಿದ್ದರು. ಇದಕ್ಕೆ ಕಾರಣ ಶಾಸ್ತ್ರೀಯ ಸಂಗೀತದ ಮುಂಚೂಣಿಯಲ್ಲಿದ್ದ ಅನೇಕ ಕಲಾವಿದರು (ಸುಗಮ ಸಂಗೀತದ) ಲಲಿತ ಸಂಗೀತದ ಅಲೆಯನ್ನು ಉಕ್ಕಿಸಿದ್ದರು.

ಎಂ.ಎಸ್.ಐ.ಎಲ್. ಗೀತೆಗಳು

[ಬದಲಾಯಿಸಿ]

1972 ನಂತರ ನವೋದಯದ ಸಂಭ್ರಮ ಎಲ್ಲಾ ಗಾಯಕರ ಕೊರಳಲ್ಲೂ ಝೇಂಕರಿಸುತ್ತಿತ್ತು. ಹಳೆಯ ಮೈಸೂರಿನಲ್ಲಿ, ಲೀಲಾವತಿ, ವಸುಮತಿ, ಪದ್ಮಚರಣ್ (ಸಂಯೋಜಕರು) ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಎಂ. ಕೆ. ಜಯಶ್ರೀ, ಧಾರವಾಡ ದತ್ತ, ಬಾಳಪ್ಪ ಹುಕ್ಕೇರಿ, ಭಾಗವತ, ಅನುರಾಧ ಧಾರೇಶ್ವರ್ ಮುಂತಾದವರು ರಸಿಕರ ಹೃದಯದಲ್ಲಿ ಸ್ಥಾಪಿತರಾಗಿದ್ದರು. ಭರಾಟೆಯಿಂದ ಹಬ್ಬುತ್ತಿದ್ದ ಭಾವಗೀತೆಗಳೋ ದಾಪುಗಾಲನಿಕ್ಕುವಂತಹ ಸಂದರ್ಭ. ಆದರೆ ಹಿಂದಿ ಚಿತ್ರಗಳ ಸೆಳೆತದಿಂದ ತಪ್ಪಿಸಿಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಸಾಲದ್ದಕ್ಕೆ ಹಿಂದಿಯ ಗಾಯಕರು ಮಹಾನ್ ಮೇರುಸ್ಥಿತಿಯಲ್ಲಿದ್ದವರು. ಈ ಪರಿಸ್ಥಿತಿಯಲ್ಲಿ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಶಿವರುದ್ರಪ್ಪ, ಮುಂತಾದ ಶ್ರೇಷ್ಠ ಕವಿಗಳು ಬರೆದಂತ ಹತ್ತಾರು ಹಾಡುಗಳು ಆದಾಗಲೇ ಪ್ರಸಿದ್ಧವಾಗಿದ್ದವು. `ಇಳಿದು ಬಾ ತಾಯಿ `ರಾಯರು ಬಂದರು, `ಹೌದೇನೇ ಉಮಾ, `ಅಳುವ ಕಡಲಲಿ, `ಬಾಗಿಲೊಳು ಕೈಮುಗಿದು `ಹೃದಯ ಕಮಲದಿ ಮಧುರ ಪ್ರೇಮ ಮಕರಂದ ಮುಂತಾದ ಭಾವಗೀತೆಗಳು ಸಾಹಿತ್ಯ ಸಂಗೀತ ಪ್ರಿಯರ ಹೃದಯಕ್ಕೆ ಆಗಲೇ ಲಗ್ಗೆ ಹಾಕಿದ್ದವು.

ಭರಾಟೆಯಿಂದ ಹಬ್ಬುತ್ತಿದ್ದ ಈ ಭಾವಗೀತೆಯ ಬಳ್ಳಿಗೆ ಒಂದು ಆಸರೆಯಾಗಿ ಬದಗಿ, ಅದನ್ನು ನಾಡಿನ ಎಲ್ಲ ದಿಕ್ಕಿಗೆ ಹಬ್ಬಿಸಿದ ಕೀರ್ತಿ, ಎಂ.ಎಸ್.ಐ.ಎಲ್ ಸಂಸ್ಥೆಯದು. ಈ ಸಂಸ್ಥೆ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ವಾಣಿಜ್ಯ ಕೇಂದ್ರಗಳಿಂದ (ಸುಮಾರು ಮೂರು ವರುಷ) ಪ್ರತಿ ಬುಧವಾರ ಮೂರು ಮೂರು ಭಾವಗೀತೆಗಳನ್ನು ಎಂ.ಎಸ್.ಎ.ಎಲ್. ಗೀತೆಗಳು ಎಂಬ ಹೆಸರಿನಲ್ಲಿ ಪ್ರಸಾರ ಮಾಡಿತು. ಇವುಗಳಿಗೆ ಸಂಗೀತ ಸಂಯೋಜನೆ ಮಾಡಿದ ಮತ್ತು ಹಾಡಿದ ಪ್ರತಿಭೆಗಳು ಎಷ್ಟು ಉತ್ತಮ ಮಟ್ಟದಲ್ಲಿದ್ದವೆಂದರೆ ಒಂದು ವರ್ಷ ಕಳೆಯುವುದರೊಳಗಾಗಿ ಹಿಂದಿ ಚಿತ್ರಗೀತೆಗಳ ದಾಸರಾಗಿದ್ದ ಸಾವಿರಾರು ಕನ್ನಡ ರಸಿಕರು ಕನ್ನಡದ ಕವಿಶ್ರೇಷ್ಠರ ಭಾವಗೀತೆಗಳುನ್ನು ಗುಣುಗುಣಿಸಲಾರಂಭಿಸಿದರು.

ಈ ಕಾರ್ಯಕ್ರಮ ಜನಪ್ರಿಯವಾಗುತ್ತಿದ್ದಂತೆ, ಸಿ. ಅಶ್ವಥ್, ಚಂದ್ರಶೇಖರ ಕಂಬಾರ, ಪರ್ವತವಾಣಿ, ಶ್ಯಾಮಲಾಭಾವೆ ಹೀಗೆ ದಿನದಿಂದ ದಿನಕ್ಕೆ ಕಲಾವಿದರ ಸೇರ್ಪಡೆಯಾಗುತ್ತಲೇ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿತ್ತು. ಕವಿ ಲಕ್ಷ್ಮೀನಾರಾಯಣ ಭಟ್ಟರು ಜಯದೇವ ಅವರಿಗೆ ಸಾಹಿತ್ಯ ಸಲಹೆಗಾರರಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಿ.ಆರ್. ಸಿಂಹ, ಆರ್. ನಾಗೇಶ್, ಒಮ್ಮೊಮ್ಮೊ ಲಕ್ಷ್ಮೀನಾರಾಯಣ ಭಟ್ಟ ಅವರೂ ಮಾಡುತ್ತಿದ್ದರು. ಕುವೆಂಪು, ಬೇಂದ್ರೆ ಮುಂತಾದ ಕವಿಗಳ ಹಾಡುಗಳೂ ಧ್ವನಿಮುದ್ರಿತವಾದವು. ಕವಿಗಳು ಅವರ ಕವಿತೆಯನ್ನು ಓದುವುದು ಗಾಯಕರು ಆ ಕೂಡಲೆ ಆ ಹಾಡನ್ನು ಹಾಡುವುದು. ಇದು ಪರಿಪಾಠವಾಗಿತ್ತು. ಕವಿಗಳು ಹೆಸರನ್ನು ಹೇಳಿ ಅವರಿಂದ ಎಂ.ಎಸ್.ಐ.ಎಲ್. ಗೀತೆಗಳು ಎಂದು ಪ್ರಸಾರವಾಗುತ್ತಿತ್ತು. ಆಗ ಆಕಾಶವಾಣಿಯ ನಿರ್ದೇಶಕರಾಗಿದ್ದ ಎನ್.ಎಸ್. ಕೃಷ್ಣಮೂರ್ತಿಯವರು ಇದನ್ನು ಕೇಂದ್ರ ಆಕಾಶವಾಣಿಯ ಸಮ್ಮೇಳನದಲ್ಲಿ ಪ್ರಶಂಸಿದ್ದರು.

ಎಂ.ಎಸ್.ಐ.ಎಲ್. ಕಾರ್ಯಕ್ರಮದ ಮೂಲಕ ಹತ್ತಾರು ಮಂದಿ ಹೊಸ ಗಾಯಕರು ಬಂದರು. ರತ್ನಮಾಲಾ, ಬಿ.ಕೆ. ಸುಮಿತ್ರ. ಕಸ್ತೂರಿ ಶಂಕರ್, ಶಿವಮೊಗ್ಗ ಸುಬ್ಬಣ್ಣ, ಮಾಲತಿ, ಪುಷ್ಪಾಜಗದೀಶ್, ಟಿ.ಆರ್. ಶ್ರೀನಿವಾಸನ್, ಜಯಪಾಲ್, ಮುಂತಾದ ಗಾಯಕರು ಪ್ರಕಾಶಮಾನಕ್ಕೆ ಬಂದರು. ಎಂ.ಎಸ್.ಐ.ಎಲ್ ತನ್ನ ಹೆಸರನ್ನು ಪ್ರಸಿದ್ದಿಗೊಳಿಸಲು ಒಂದು ಜಾಹೀರಾತಿನ ತಂತ್ರವಾಗಿ ಪ್ರಾರಂಭಿಸಿದ ಈ ಯೋಜನೆ ಒಂದು ಹೊಸ ಸಂಸ್ಕøತಿಯನ್ನು ಒಂದು ಗಾಯನ ಕಲಾ ಪ್ರಕಾರವನ್ನು ಬೆಳಕಿಗೆ ತಂದಿತು. ತಾನೂ ಬೆಳಗಿ ಇತರರನ್ನೂ ಬೆಳಗಿಸಿತು. ಅದೇ ಸಂಸ್ಥೆಯ ಎಚ್. ಜಯದೇವ್ ಅವರ ಸದಭಿರುಚಿ, ದೂರದೃಷ್ಟಿ, ನಿಸ್ವಾರ್ಥ ಸೇವೆಗಳಿಂದ ಒಂದು ಜನಪ್ರಿಯ ಸಂಗೀತ ಪ್ರಕಾರ ಪ್ರಸಿದ್ಧಿಗೆ ಬಂದಿತು.

(2000) ರಲ್ಲಿ ಇಪ್ಪತ್ತು ವರ್ಷಗಳ ಅನಂತರ ಜಯದೇವ್ ಅವರಂತೆ ಆಸೆ ಹೊತ್ತ ಮತ್ತೊಬ್ಬ ಅಧಿಕಾರಿ ವಿಠಲಮೂರ್ತಿಯವರ ಆಗಮನದಿಂದ `ನಿತ್ಯೋತ್ಸವ ಎನ್ನುವ ಸುಂದರ ಶೀರ್ಷಿಕೆಯೊಡನೆ ಮತ್ತೊಮ್ಮೆ ಸುಗಮ ಸಂಗೀತ ದನಿ ತೆರೆಯಿತು. ಆದರೆ ಅದರ ರೂಪುರೇಖೆಗಳು ಹೊಚ್ಚ ಹೊಸದಾಗಿದ್ದವು. ನಾಡಿನ ಎಲ್ಲೆಡೆ ಇರುವ ಯುವಗಾಯನದ ಪ್ರತಿಭಾನ್ವೇಷಣೆ ಮತ್ತು ಅವರಿಗೆ ಪ್ರೋತ್ಸಾಹ ಕೊಡಬೇಕೆಂಬುದೇ ವಿಠಲಮೂರ್ತಿಗಳ ಆಸಯವಾಗಿತ್ತು. ಅವರ ನಿರೀಕ್ಷೆಗೂ ಮೀರಿ ಸುಮಾರು ಯುವಪ್ರತಿಭೆಗಳು ಬಂದರು. ಆಯ್ಕೆಯಾದವರಿಗಾಗಿ ವಿವಿಧ ಕವಿಗಳ ಆಯ್ದ ಕವಿತೆಗಳ ಧ್ವನಿ ಸುರುಳಿಯನ್ನು ತಯಾರಿಸಲಾಯಿತು. ಆರು ಮಂದಿ ಸಂಗೀತ ನಿರ್ದೇಶಕರಿಂದ ಆರು ಧ್ವನಿಸುರುಳಿಗಳು ಸಿದ್ಧವಾದವು. `ನಿತ್ಯೋತ್ಸವ ಗೀತ ಸಂಕಲನ ಹೀಗೆ ನವ್ಯದ ಕಾವ್ಯಮಾರ್ಗದಿಂದ ಗೇಯಮಾರ್ಗಕ್ಕೆ ಕವಿಗಳನ್ನು ತಂದಂತೆ ಶಾಸ್ತ್ರೀಯ ಸಂಗೀತ ಮಾರ್ಗದಿಂದ ಸುಗಮ ಮಾರ್ಗಕ್ಕೆ ಸಂಗೀತ ಕಲಾವಿದರನ್ನೂ ತಂದಿತು. ಎಂ.ಎಸ್.ಐ.ಎಲ್. ಇದಕ್ಕೆ ಮಾಧ್ಯಮವಾಯಿತು.

೭೦ರ ದಶಕ ಮತ್ತು ನಂತರ

[ಬದಲಾಯಿಸಿ]

1978ರಲ್ಲಿ `ನಿತ್ಯೋತ್ಸವ ಕ್ಯಾಸೆಟ್ ಬಂದ ಮೇಲೆ ಸುಗಮ ಸಂಗೀತದ ದಾರಿ ಸುಗಮವಾಗಿ ಹಲವಾರು ದಾರಿಗಳಾಗಿ ಸಾಗಿ ತನ್ನ ವಿಸ್ತೀರ್ಣವನ್ನು ಹತ್ತು ಪಟ್ಟು ನೂರು ಪಟ್ಟು ಹೆಚ್ಚಿಸಿಕೊಂಡಿತು. ಒಬ್ಬ ಪ್ರಜ್ಞಾವಂತ ಕವಿ ಒಬ್ಬ ಭಾವುಕ ಸಂಗೀತ ಸಂಯೋಜಕನ ಸಾಹಸದಿಂದ. ಸುಗಮ ಸಂಗೀತಕ್ಕೆ ಬೆಳಕಾಯಿತು. ಹತ್ತಾರು ಗಾಯಕರು ದಿನ ಬೆಳಗಾಗುವುದರಲ್ಲಿ ಕೇಳುಗರ ಕಣ್ಮಣಿಗಾಳಾದರು. `ಜೋಗದ ಸಿರಿ ಬೆಳಕಿನಲ್ಲಿ, `ಬೆಣ್ಣೆ ಕದ್ದ, `ಕುರಿಗಳು ಸಾರ್ ಕುರಿಗಳು, `ಎಲ್ಲ ಮರೆತಿರುವಾಗ, `ನನ್ನ ನಲವಿನ ಬಳ್ಳಿ ನೀ ನುಡಿಯದಿರಲೇನು - ಒಂದೊಂದು ಹಾಡೂ ಅನಂತಸ್ವಾಮಿಯವರ ಸಂಯೋಜನೆಗೆ ಸವಾಲಿನಂತೆ ಇದ್ದವು. ಭಾವಕ್ಕೆ ಪ್ರಾಶಸ್ತ್ಯ ಕೊಟ್ಟು ಕನ್ನಡಿಸಿದ್ದ `ಮತ್ತೆ ಬೇಸರ ಅದೇ (ಫಿರ್ ವಹಿ ಶ್ಯಾಮ್ ಫಜಲ್) ಸಂಜೆ ಅದೇ ಏಕಾಂತ ಗೀತೆ ಕೇಳುಗರ ಕಿವಿಯಲ್ಲಿ ರಿಂಗಣಿಸಿತು. ಕ್ಯಾಸೆಟ್ ಲೋಕ ಕಣ್ತೆರೆಯಿತು. ಸುಂದರ ಕ್ಯಾಸೆಟ್ ಆಗಿ ಮೂಡಿ ಬಂದ `ನಿತ್ಯೋತ್ಸವವನ್ನು ಅಮರನಾಥ್ ಕಂಪನಿ ತೆಗೆದುಕೊಂದು ಮಾರಾಟ ಮಾಡಿತು. ಮಾರಾಟದಲ್ಲಿ ದಾಖಲೆಯಾಯಿತು. ಭಾರತೀಯ ಭಾಷೆಗಳಲ್ಲಿಯೇ ಭಾವಗೀತೆಗಳ ಮೊದಲ ಕ್ಯಾಸೆಟ್ ಎನ್ನುವ ದಾಖಲೆಯ ಹೆಮ್ಮೆಯೂ ಅದರದಾಯಿತು. ನಂತರ 1980 ಮಾರ್ಚ್ ತಿಂಗಳಲ್ಲಿ ಪ್ರಾರಂಭವಾದ ಎಚ್.ಎಂ. ಮಹೇಶ್ ಅವರ ಸಂಗೀತ ಕ್ಯಾಸೆಟ್ ಕಂಪನಿ ಭಾವಗೀತೆಗಳ ಮಹಾಪೂರವನ್ನೇ ಹರಿಸಿತು. (ಕವಿ ಲಕ್ಷ್ಮೀನಾರಾಯಣ ಭಟ್ಟರು ಸಂಗ್ರಹಿಸಿ ಪ್ರಕಟಿಸಿ ಅಶ್ವಥ್ ಸ್ವರ ಸಂಯೋಜಿಸಿದ್ದ ಶಿಶುನಾಳ ಷರೀಫರ ಕ್ಯಾಸೆಟ್, ಕವಿ ಲಕ್ಷ್ಮೀನಾರಾಯಣ ಭಟ್ಟರ `ಬಾರೋವಸಂತ `ದೀಪಿಕಾ, ಕೆ.ಎಸ್. ನರಸಿಂಹಸ್ವಾಮಿಗಳ `ಮೈಸೂರು ಮಲ್ಲಿಗೆ ಇರುವಂತಿಗೆ, ಕೆಂಪುಗುಲಾಬಿ, ಅನುರಾಗ, ಮಾವುಬೇವು, ಉಂಗುರ, ಶ್ರೀಮುಖ ಕನ್ನಡವೇ ಸತ್ಯ, ಮುಂತಾದ ದನಿಸುರುಳಿಗಳು, ಮೈಸೂರು ಅನಂತಸ್ವಾಮಿಯವರ ಸಂಗೀತ ಸಂಯೋಜಸಿದ `ಭಾವಸಂಗಮ ದೀಪೋತ್ಸವ, ಮುಂತಾದ ಕ್ಯಾಸೆಟ್ಗಳ ಸುರಿಮಳೆಯಾಯಿತು.

ಸಿ. ಅಶ್ವಥ್ ಷರೀಫರ ಪ್ರತಿನಿಧಿಯಾದರು. ನಾಡಿನಾದ್ಯಂತ ಅವರ ಧ್ವನಿ ಅರ್ಥಪೂರ್ಣವಾಗಿ ಅವರಿಸಿಕೊಂಡಿತು. ಅಶ್ವಥ ಸುಗಮ ಸಂಗೀತದ ದಿಕ್ಕನ್ನೇ ಬದಲಾಯಿಸಿದರು. ನಾಡಿನ ಪ್ರಮುಖ ಕವಿಗಳ ಎಲ್ಲಾ ಗೀತೆಗಳನ್ನೂ ಸುಗಮ ಸಂಗೀತಕ್ಕೆ ಅಳವಡಿಸಲು ತೊಡಗಿದರು. ಅದುವರೆವಿಗೂ ಪುಸ್ತಕದಲ್ಲಿ ಅಡಗಿದ್ದ ಅನೇಕ ಭಾವಗೀತೆಗಳು ಮೇಲೆದ್ದು ಬಂದು ಜೀವಂತವಾದವು. ಸಂಗೀತ ಕಂಪನಿ ಸ್ಥಾಪಕರೂ ನಿರ್ದೇಶಕರೂ ಆಗಿದ್ದ ಹೆಚ್. ಎಂ. ಮಹೇಶ್ ಅವರು ಕಲಾವಿದರೂ ಸಾಹಿತ್ಯಜ್ಞರೂ ಆಗಿದ್ದರಿಂದ, ನೂರಾರು ಭಾವಗೀತೆಯ ಧ್ವನಿಸುರುಳಿಗಳು ಹೊರಬಂದವು. ಕರ್ನಾಟಕದ ಎಲ್ಲಾ ಕಲಾವಿದರ ಕಂಠಸಿರಿಯೂ `ಸಂಗೀತಾ ಸಂಸ್ಥೆಯಲ್ಲಿ ದಾಖಲಾಯಿತು. `ಸಂಗೀತಾ ಸಂಸ್ಥೆ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಿತಲ್ಲದೆ ಪ್ರಚಾರ, ಪ್ರಸಿದ್ಧಿಗಳನ್ನೂ ಒದಗಿಸಿಕೊಟ್ಟಿತು. `ಸಂಗೀತಾ ಸಂಸ್ಥೆಯಲ್ಲಿ `ತಮ್ಮ ಧ್ವನಿ ಇರುವುದೇ ಕಲಾವಿದರಿಗೆ ಹೆಮ್ಮೆಯ ವಿಷಯವಾಗಿತ್ತು. ತಮ್ಮ ಸಂಸ್ಥೆಯಲ್ಲಿ ಹಾಡುವ ಕಲಾವಿದ, ಸಂಯೋಜಕರು ಬೇರೆ ಯಾವ ಕಂಪನಿಗೂ ಹಾಡಬಾರದೆಂಬ ಕರಾರಿಗೆ ಸಿದ್ಧವಾಗಿಯೇ ಬದ್ಧವಾಗಿಯೇ ಬೆಳೆದ ಸಂಸ್ಥೆಯ ಘನತೆ ಗೌರವಗಳನ್ನೂ ಬೆಳೆಸಿದರು. ದಕ್ಷಿಣ ಕನ್ನಡ ಎಲ್ಲ ಭಾಷೆಗಳಲ್ಲಿ ಭಾವಗೀತೆ - ಚಿತ್ರಗೀತೆ ಎಲ್ಲ ಪ್ರಕಾರವೂ ಸೇರಿ ಸುಮಾರು 4000ಕ್ಕಿಂತಲೂ ಹೆಚ್ಚು ದನಿಸುರುಳಿಗಳನ್ನು ಧ್ವನಿ ಮುದ್ರಿಸಿದ ಮಂಗಳೂರು ಕನ್ನಡಿಗ ಮಹೇಶ್ ಅವರು ಪ್ರಾಮುಖ್ಯತೆ ನೀಡಿದ್ದು ಕನ್ನಡ ಭಾವಗೀತೆಗಳ ಧ್ವನಿಸುರುಳಿಗಳಿಗೆ ನಾಡಗೀತೆಯಿಂದ, ತತ್ತ್ವಪದದವರೆವಿಗೆ, ಜನಪದ ಗೀತೆಯಿಂದ ಭಾವಗೀತೆ, ಭಕ್ತಿಗೀತೆಯವರೆವಿಗೆ, ವ್ಯಕ್ತಿ, ವಿಷಯ, ವಿಚಾರಗಳ ವೈವಿಧ್ಯತೆಯನ್ನು ತಮ್ಮ ನಿರ್ಮಾಣಗಳಲ್ಲಿ ತಂದ ಮಹೇಶ್ ಅವರನ್ನು ಕರ್ನಾಟಕ ಸರ್ಕಾರ 1992-93ರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತು. ಇದು ಸುಗಮ ಸಂಗೀತಕ್ಕೆ ಅದರ ಪ್ರಸರಣಕ್ಕೆ ಸಂದ ಮೊಟ್ಟ ಮೊದಲನೆಯ ಗೌರವವಾಯಿತು.

ಸುಗಮ ಸಂಗೀತ ಮತ್ತು ದೂರದರ್ಶನ

[ಬದಲಾಯಿಸಿ]

1986ರಲ್ಲಿ ಬೆಂಗಳೂರಿಗೆ ದೂರದರ್ಶನ ಬಂದಿತು. ಭಾವಗೀತೆಯನ್ನು ದೃಶ್ಯ ಮಾಧ್ಯಮಕ್ಕೆ ಅನ್ವಯಿಸಿ ತೋರಿಸುವ ಹೊಸ ಪ್ರಯತ್ನದ ಫಲವೇ `ಗೀತೆಚಿತ್ರವಾಗಿ ರೂಪುಗೊಂಡಿತು. ದೂರದರ್ಶನದ ಮೊದಲ ಗೀತಚಿತ್ರವೇ ಜಿ.ಎಸ್.ಶಿವರುದ್ರಪ್ಪನವರು ರಚಿಸಿದ `ಎಲ್ಲೋ ಹುಡುಕಿದೆ ಇಲ್ಲದ ದೇವರ ಮತ್ತು ಪ್ರೋ|| ಚೆನ್ನವೀರ ಕಣವಿಯವರ `ಹೂವು ಹೊರಳುತಿದೆ ಎಂಬು ಗೀತೆಗಳು. ಪದ್ಮಚರಣರ ರಾಗಸಂಯೋಜನೆಯಲ್ಲಿ ಈ ಕವನಗಳು ಸುಂದರ ಗೀತಚಿತ್ರಗಳಾಗಿ ಮೂಡಿದವು. ಭಾವಗೀತೆಗಳು ಶ್ರವ್ಯದಿಂದ ದೃಶ್ಯವಾಗಿ ಮೂಡಲು ಆರಂಭಿಸಿದವು. ಪ್ರಭಾತ್ ಕಲಾವಿದರು ಇದನ್ನು ವೇದಿಕೆಯ ಮೇಲೆ ದಶಕಗಳ ಹಿಂದೆಯೇ ಅಭಿನಯಿಸಲು ಪ್ರಾರಂಭಿಸಿದ್ದರು. ದೂರದರ್ಶನ ಭಾವಗೀತೆಗಳನ್ನು ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿ ಹಾಡಿಗೆ ಬೇಕಾದ ಅಭಿನಯವನ್ನು (ನೃತ್ಯವನ್ನಲ್ಲ) ಚಿತ್ರೀಕರಿಸಿಕೊಂಡಿತು. ಬೆಂಗಳೂರು ದೂರದರ್ಶನದಲ್ಲಿ ಮೊದಲ ಗೀತಚಿತ್ರದ ಸಂಗೀತ ನಿರ್ದೇಶಕರೆಂಬ ಹೆಮ್ಮೆ ಪದ್ಮಚರಣರದಾಯಿತು. ಅನಂತ ಹಲವಾರು ಭಾವಗೀತೆಗಳುನ್ನು ಹಲವಾರು ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ದೂರದರ್ಶನ ಚಿತ್ರೀಕರಿಸಿತು. ಅಶ್ವಥ್‍ರವರ `ಬಣ್ಣದಹಕ್ಕಿ ಮಕ್ಕಳ ಧ್ವನಿಸುರುಳಿ ದೂರದರ್ಶನದ ಚಿತ್ರೀಕರಣಕ್ಕೆ ಒಳಪಟ್ಟು ಜನಪ್ರಿಯವಾಯಿತು. ಡಾ || ಎಚ್.ಎಸ್. ವೆಂಕಟೇಶ ಮೂರ್ತಿರವರ `ಹಕ್ಕಿಸಾಲು ಮಕ್ಕಳ ಗೀತಸಂಕಲನದಿಂದ ಆರಿಸಲಾದ ಮೇಲಿನ ಗೀತೆಗಳು ಎಷ್ಟು ಜನಪ್ರಿಯವಾಯಿತೆಂದರೆ ದಿನಕ್ಕೊಮ್ಮೆಯಾದರೂ ಅದು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು.

1890ರಲ್ಲಿ ರಾಜರತ್ನಂ ಅವರ `ತುತ್ತೂರಿ' ಮಕ್ಕಳ ಗೀತೆಯಿಂದ ಮೂವತ್ತೆಂಟು ಮಕ್ಕಳ ಗೀತೆಗಳನ್ನಾಧರಿಸಿ `ಕಂದನ ಕಾವ್ಯ ಎಂಬ ದೂರದರ್ಶನ ಧಾರವಾಹಿ ಪ್ರಸಾರವಾಯಿತು. `ಜಯಶ್ರೀ ಅರವಿಂದ್‍ರವರ ಸಂಗೀತ ನಿರ್ದೇಶನದಲ್ಲಿ ಈ ಧಾರವಾಹಿ ಅತ್ಯಂತ ಜನಪ್ರಿಯವಾಗಿತ್ತು. `ಬಣ್ಣದ ತಗಡಿನ ತತ್ತೂರಿ' ಕುರಿಮರಿ ಬ್ಯಾ `ಟಂಟಂ' ರೊಟ್ಟಿ ಅಂಗಡಿ ಕಿಟ್ಪಪ್ಪ `ಜುಟ್ಟು ಮೀಸೆ ಇಟ್ಟುಕೊಂಡು, `ಕಾಳನ ಪೀಪಿ ಹತ್ತು ಹತ್ತು ಇಪ್ಪತ್ತು , ಮುಂತಾದ ಅನೇಕ ಹಾಡುಗಳ ದೂರದರ್ಶನದಲ್ಲಿ ಜಯಪ್ರಿಯವಾದವು. ದೃಶ್ಯ ಮಾಧ್ಯಮದಿಂದ ಭಾವಗೀತೆಗಳು ಬಣ್ಣ ಪಡೆದವು. ಪುಸ್ತಕದಲ್ಲಿರುವ ಕವಿತೆ ಓದುವ ಕವಿತೆಯಾಗಿರುತ್ತದೆ. ಕೇಳಿದಾಗ ಕೇಳುವ ಪುಸ್ತಕವಾಗುತ್ತದೆ. ನೋಡುವಾಗ ನೋಡುವ ಕವಿತೆಯಾಗುತ್ತದೆ. ದೃಶ್ಯಮಾಧ್ಯಮದಲ್ಲಿ ಈ ಮೂರು ಕ್ರಿಯೆಗಳೂ ಒಂದಾಗುತ್ತವೆ. ಓದುವ, ಕೇಳುವ, ನೋಡುವ, ಈ ಮೂರು ಮಾಧ್ಯಮಗಳಿಂದ ಕವಿತೆ ಹೃದ್ಯವಾಗುತ್ತದೆ ವೇದ್ಯವಾಗುತ್ತದೆ. ಮನೋವೇಗದಲ್ಲಿ ಕವಿಯ ಮನಸ್ಸಿನೊಂದಿಗೆ, ಭಾವನೆಗಳೊಂದಿಗೆ ಬೆರೆತು ಹೋಗುತ್ತದೆ.

1995-96 ಚಲನಚಿತ್ರ ನಿರ್ದೇಶಕರು ಆದ ನಾಗಾಭರಣ ಮತ್ತು ಅಶ್ವಥ್ಥ್‍ರವರು ಸೇರಿ ಸುಗಮಸಂಗೀರವಸ್ತುವನ್ನೇ ಧಾರವಾಹಿಯಾಗಿ ಹದಿಮೂರು ಕಂತುಗಳಲ್ಲಿ ದೂರದರ್ಶನಕ್ಕಾಗಿ ಚಿತ್ರೀಕರಿಸಿದರು. ಅಶ್ವಥ್ ಅನಂತಸ್ವಾಮಿ, ಜಯಶ್ರೀ ಅರವಿಂದ್, ಬಿ.ಕೆ. ಚಂದ್ರಶೇಖರ್ ರಾಗಸಂಯೋಜಿಸಿದ್ದ ಸುಮಾರು 80 ಹಾಡುಗಳನ್ನು ದೃಶ್ಯ ಮಾಧ್ಯಮಕ್ಕೆ `ನಾಗಾಭರಣ' ಅವರು ಅಳವಡಿಸಿದ್ದರು. ಹದಿಮೂರು ಕವಿಗಳ, ವಿವಿಧ ಮನೋಭಾವ, ವ್ಯಕ್ತಿತ್ವವನ್ನು ಮೂರ್ತೀಕರಿಸುವ ಭಾವಗೀತೆಗಳು ಕಿರುತೆರೆಯಲ್ಲಿ ಮೂಡಿಬಂದವು. ಕವಿಗಳ ವಿಭಿನ್ನ ಶೈಲಿ ವ್ಯಕ್ತಿತ್ವವನ್ನು ನಿರೂಪಿಸುವ ಕವಿತೆಗಳನ್ನು ಆರಿಸಿ ಕವಿತೆಯ ಅಂತರಾಳದೊಳಗಿಳಿದು, ಚಿತ್ರೀಕರಿಸಿದ `ಗೀತಮಾಧುರಿ' ತನ್ನ ಸವಿನೆನಪನ್ನು ಪೇಕ್ಷಕರಲ್ಲಿ ಬಹುಕಾಲ ಉಳಿಸಿತು. ಕುವೆಂಪು, ಬೇಂದ್ರೆ, ಪು.ತಿ.ನ., ಅಡಿಗ, ಶಿವರುದ್ರಪ್ಪ ಲಕ್ಷ್ಮೀನಾರಾಯಣಭಟ್ಟ, ಕುಂಬಾರ. ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ಚೆನ್ನವೀರ ಕಣವಿ, ಬಿ.ಟಿ. ಲಲಿತಾನಾಯಕ್ ಅವರ ವ್ಯಕ್ತಿತ್ವ ಪರಿಚಯದೊಂದಿಗೆ ಅವರ ಕಾವ್ಯ ಪರಿಚಯವನ್ನೂ ಮಾಡಿಕೊಟ್ಟವು.

ಸುಗಮ ಸಂಗೀತವನ್ನು ಸಂಘಟಿಸುವ ಪ್ರಮುಖ ಸಂಸ್ಥೆಗಳು

[ಬದಲಾಯಿಸಿ]
  • ಸಿ, ಅಶ್ವಥ್ ಮತ್ತು ಮುದ್ದುಕೃಷ್ಣ ಅವರ ಧ್ವನಿ ಸಂಸ್ಥೆ 1
  • ಶ್ರೀಮತಿ ಹೆಚ್. ಆರ್. ಲೀಲಾವತಿ ರಘುರಾಂ ಅವರ ಸುಗಮ ಸಂಗೀತ ಅಕಾಡೆಮಿ (ಮೈಸೂರು)
  • ಲಯವಾದಕ, ಸಂಯೋಜಕ ಬಾಲಿ ಅವರ ರಮ್ಯ ಕಲ್ಚರಲ್ ಅಕಾಡೆಮಿ (9-11-1993)
  • ಗಾಯಕ, ಸಂಗೀತ ನಿರ್ದೇಶಕ ಜಿ.ವಿ. ಅತ್ರಿ ಅವರ ಸಂಸ್ಥೆ ಸಂಗೀತಾ ಗಂಗಾ
  • ಹೆಚ್. ಫಲ್ಗುಣ ಅವರ ಸಂಸ್ಥೆ ಹೊಂಬಾಳೆ (1995)
  • ಕಿಕ್ಕೇರಿ ಕೃಷ್ಣಮೂರ್ತಿ ಅವರ ಆದರ್ಶ ಸುಗಮ ಸಂಗೀತ ಅಕಾಡೆಮಿ
  • ಗಾಯಕ ಜೆ. ಮೋಹನ್ ಅವರ ಸಂಸ್ಥೆ ಉಪಾಸನಾ - ಇವುಗಳು ಗಮನಾರ್ಹವಾಗಿ ಸುಗಮಸಂಗೀತದ ಪ್ರಸಾರಕ್ಕೆ ಪೂರಕವಾದವು.
  • ಸಂಘಟಕ ವೈ,ಕೆ ಮುದ್ದು ಕೃಷ್ಣ - ವೈ.ಕೆ ಮುದ್ದುಕೃಷ್ಣ ಪ್ರಮುಖ ಸುಗಮ ಸಂಗೀತಗಾರರು ಹಲವಾರು ಹಾಡಿರುವ ಧ್ವನಿಸುರುಳಿಗಳು ಜನಪ್ರಿಯವಾಗಿವೆ. ಈ ರಾಜ್ಯದ ಕನ್ನಡ ಸಂಸ್ಕøತಿ ಇಲಾಖೆಯವರ ಉನ್ನತ ಹುದ್ದೆಗಳಲ್ಲಿ ದುಡಿಯುತ್ತಿರುವ ಮುದ್ದುಕೃಷ್ಣ ಅವರ ಕೊಡುಗೆ ಸುಗಮ ಸಂಗೀತಗಾರರ ಸಂಘಟನೆ. ಸುಗಮ ಸಂಗೀತಗಾರರನ್ನೆಲ್ಲಾ ಒಂದೇ ವೇದಿಕೆಯ ಮೇಲೆ ತಂದು 1991ರಲ್ಲಿ ಧ್ವನಿ ಸುಗಮ ಸಂಗೀತ ಕೇಂದ್ರ ಸ್ಥಾಪನೆ, ಅನಂತರ ನಡೆ ನಡೆ ಮೈಸೂರಿನಿಂದ ಬೀದರವರೆಗೆ ನಡೆದ, ಸುಗಮ ಸಂಗೀತಗಾಯನ ಯಾತ್ರೆ ಒಂದು ವಿಶಿಷ್ಟ ಪ್ರಯೋಗ.

ದಸರಾ ಉತ್ಸವಕಾಲದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲೂ ಶಾಸ್ತ್ರೀಯ ಸಂಗೀತಗಾರರಿಗೆ ಮೀಸಲಾಗಿದ್ದನ್ನು ತಪ್ಪಿಸಿ, ದರ್ಬಾರ್ ಹಾಲಿಗೆ ಸುಗಮ ಸಂಗೀತಗಾರರಿಗೂ ಅಮಂತ್ರಣ ದೊರೆಯುವಂತಾದುದು ಮುದ್ದುಕೃಷ್ಣ ಅವರ ಪ್ರಯತ್ನದಿಂದ.

ಸುಗಮಸಂಗೀತ ಸಾಗುತ್ತಿರುವ ಹಾದಿ

[ಬದಲಾಯಿಸಿ]

ಸುಗಮಸಂಗೀತ ಇಂದು ಅನಕ್ಷರಸ್ಥರಿಗೂ ಕವಿಯ ಕಾವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುತ್ತಿದೆ. ಕವಿತೆಯ ಸಾಲುಸಾಲುಗಳನ್ನು ಗಾಯನದ ಮೂಲಕ ವ್ಯಾಖ್ಯಾನಿಸುತ್ತಾ, ಜನಪ್ರಿಯವಾಗುತ್ತಿರುವ ಈ ಗಾಯಕ ಪ್ರಕಾರ ಜನಪರವಾದುದೂ ಆಗಿದೆ. ಕೇವಲ ಶ್ರಾವ್ಯ ಮಾಧ್ಯಮವಾಗಿ ಬಂದ ಈ ಗಾಯನ ಪ್ರಕಾರ ಈಗ ದೃಶ್ಯ ಮಾಧ್ಯಮವನ್ನು ಆಕರ್ಷಿಸಿದೆ. ಕವಿಯ ಕಾವ್ಯದ ಅರ್ಥವ್ಯಾಪ್ತಿಯನ್ನು ಅಭಿನಯದಿಂದ ಹಿಗ್ಗಿಸುತ್ತಾ ಪರಿಣಾಮಕಾರಿಯಾಗಿ ಮೂಡಿಸುತ್ತಿದೆ. ವಿವಿಧ ರಸಗಳನ್ನು ಪ್ರಕಾಶಪಡಿಸುವ ರಾಗರಾಗಗಳ ಸುಮಧುರ ಎಳೆಗಳಿಂದ ಭಾವಜ್ಯೋತಿಯನ್ನು ಬೆಳಗುತ್ತಿದೆ. ಮನದಿಂದ ಮನಕ್ಕೆ ಬೆಳಕನ್ನು ಹರಿಯಿಸುತ್ತಿದೆ.ಇದರಿಂದ ಆತ್ಮಾವಲೋಕನವೂ ಆಗುತ್ತಿದೆ. ಭಾವೋದ್ದೀಪನಗೊಳಿಸುವ ಶಕ್ತಿ ಇರುವ ಸುಗಮ ಸಂಗೀತ ಕಾವ್ಯದ ಉದ್ದೇಶಗಳನ್ನು ಸೃಷ್ಟೀಕರಿಸುತ್ತಿದೆ. ನಿಸರ್ಗದ ಚೆಲುವನ್ನು ಕುರಿತ ಕವನಗಳನ್ನು ಕೇಳಿದಾಗ ಅದರ ಅಂತರಾರ್ಥದ ವಿಶೇಷ ಅನುಭವವಾಗುತ್ತದೆ. ದೇಶಭಕ್ತಿಯ ಗೀತೆಗಳನ್ನು ಕೇಳಿದಾಗ ದೇಶಾಭಿಮಾನ ಮೂಡುತ್ತದೆ. ಪ್ರೇಮಗೀತೆಗಳನ್ನು ಕೇಳಿದಾಗ ಪ್ರೇಮದ ಔನ್ನತ್ವವನ್ನು, ಅನಿರ್ವಚನೀಯವಾಗಿ ತಿಳಿಸುತ್ತದೆ. ಸುಗಮಸಂಗೀತ ಹೀಗೆ ಕವಿಗೂ ಸಹೃದಯನಿಗೂ ರಸ ಸೇತುವೆಯಾದುದೇ ಅದರ ವೈಶಿಷ್ಟ್ಯತೆಯಾಗಿದೆ.

ಸುಗಮ ಸಂಗೀತದ ಮಹತ್ ಸಾಧನೆ ಎಂದರೆಹೊತ್ತಿಗೆಯಲ್ಲಿ ಮಲಗಿದ್ದ ಕಾವ್ಯ ಕನ್ಕಿಕೆಯನ್ನು ಎಬ್ಬಿಸಿ ವೇದಿಕೆಗೆ ಬರಮಾಡಿದ್ದು ಕಾವ್ಯ ರಸಿಕರನ್ನು ಹುಟ್ಟುಹಾಕಿದ್ದು, ಕವಿ-ಸಂಯೋಜಕ-ಗಾಯಕ-ರಸಿಕರ ನಡುವೆ ಭಾವಸಂವಾದವನ್ನು ಹುಟ್ಟು ಹಾಕಿದ್ದು. ಇದು ಇಪ್ಪತ್ತನೆಯ ಶತಮಾನ ಕೊನೆಯಲ್ಲಿನ ದೊಡ್ಡ ಸಾಧನೆ. ಅತಿ ಸಂಕೀರ್ಣವಾದುದನ್ನೂ, ಅತೀ ಶಾಸ್ತ್ರೀಯವಾದುದನ್ನೂ ಅರಗಿಸಿಕೊಳ್ಳಲು ಸಮಯ ಸಂಯಮವಿಲ್ಲದ, ಇಂದಿನ ಗಡಿಬಿಡಿಯ ಪೀಳಿಗೆಗೆಮ, ಸುಗಮಸಂಗೀತ ಒಂದು ವರವಾಗಿದೆ, ಕಾಲದ ಬೇಡಿಕೆ ಮತ್ತು ಅಭಿರುಚಿಗೆ ಸ್ಪಂದಿಸುವ ಸಂಗೀತ ಪದ್ಧತಿಯಾಗಿದೆ. ಸುಗಮವಾಗಿ ದೊರಕುತ್ತಲೂ ಇದೆ. ಸರಳವಾಗಿ ಸೆಳೆಯುತ್ಲೂ ಇದೆ.

ಇಂದಿನ ಸುಗಮಸಂಗೀತದ ಹಿರಿಮೆ ಎಂದರೆ ಇತರ ಯಾವುದೇ ಸಂಗೀತ ಪದ್ಧತಿಗಳಲ್ಲಿರುವ ಸಾಹಿತ್ಯಕ್ಕಿಂತ, ಉತ್ಕøಷ್ಟವಾದ ಸಾಹಿತ್ಯವನ್ನು ಪಡೆದಿರುವುದು. ಶಾಸ್ತ್ರೀಯ ಸಂಗೀತದ ಸಾಹಿತ್ಯ, ಪುರಾಣಕಥೆಗಳ, ಮತಧರ್ಮಗಳ, ದೇವದೇವಿಯರ, ಭಕ್ತಿರೂಪದಲ್ಲಿರುತ್ತದೆ. ಆದರೆ ಸುಗಮಸಂಗೀತದಲ್ಲಿ ಬೆಳಗಿಸುವ ಭಾವನೆಗಳಿರುತ್ತವೆ. ಅದು ಕಾವ್ಯಕ್ಕೆ ಬಣ್ಣ ತುಂಬುತ್ತದೆ, ರಂಗೇರಿಸುತ್ತದೆ.

ಕವಿ ನಿಸ್ಸಾರ್ ಅವರು ಪ್ರಾರಂಭಿಸಿದ ಕ್ಯಾಸೆಟ್ ಮಾಧ್ಯಮವನ್ನು ಮುನ್ನಡೆಸಿದವರು ಕವಿ ಲಕ್ಷ್ಮೀನಾರಾಯಣ ಭಟ್, ಕವಿ ಡಾ || ಹೆಚ್. ಎಸ್. ವೆಂಕಟೇಶಮೂರ್ತಿ, ಲಕ್ಷ್ಮಣರಾವ್ ಮತ್ತು ಎಂ.ಎನ್. ವ್ಯಾಸರಾವ್ ಮುಂತಾದವರು.

ಇಂದು ಸುಗಮ ಸಂಗೀತಕ್ಷೇತ್ರದಲ್ಲಿ ಗುಣ ಮತ್ತು ದೋಷಗಳು ಒಟ್ಟೋಟ್ಟಿಗೆ ಬೆಳೆಯುತ್ತಿವೆ. ಕ್ಯಾಸೆಟ್ ಸಂಸ್ಕøತಿಯಿಂದ ಸಾವಿರಾರು. ಹಾಡುಗಳು ಜನ್ಮತಳೆದಿವೆ. ನೂರಾರು ಗಾಯಕರು ಬೆಳಕಿಗೆ ಬಂದಿದ್ದಾರೆ. ಗಾಯನದ ಶೈಲಿಯ ಜೊತೆಗೆ ವಾದ್ಯಗಳು ಬಳಕೆಯಲ್ಲೂ ಹೊಸತನ ಬಂದಿದೆ. ಪಿಟೀಲು, ತಬಲ, ಕೊಳಲುಗಳ ಜೊತೆಗೆ ಎಲೆಕ್ಟ್ರಾನಿಕ್ ಸಾಧನಗಳೂ ಬಂದಿವೆ. ನಾದ ವೈಜ್ಞಾನಿಕ ತಂತ್ರಜ್ಞತೆಯಲ್ಲಿ ಪ್ರಗತಿ ಕಂಡಿದೆ. ಧ್ವನಿಮುದ್ರಣದಲ್ಲೂ ತಾಂತ್ರಿಕತೆ ಹೊಸತನವಾಗಿದೆ. ಟ್ರ್ಯಾಕ್‍ಸಿಸ್ಟಂ ಮತ್ತು ಪಂಚಿಂಗ್ ಪದ್ಧತಿಗಳೂ ಒಂದು ಧ್ವನಿಮುದ್ರಣ ಕಲೆ ಗಾಯಕರಿಗೆ ಅನುಕೂಲವನ್ನು ತಂದಿದೆ. ಧ್ವನಿಯ ಸೂಕ್ಷ್ಮತೆಗಳನ್ನು ಮತ್ತಷ್ಟು ತೀವ್ರವಾಗಿ ಮಾಡಿ ಚಂದ ಮಾಡಿವೆ. ಹೊಸ ಪ್ರಯೋಗಶೀಲತೆ,ಹೊಸ ವಿಚಾರಗಳು, ಕೀರ್ತಿಯ ಅಮಿಷಗಳು ಸುಗಮಸಂಗೀತಕ್ಕೆ ಒಂದು ಸವಾಲಾಗಿದೆ. ಸುಗಮವೆಂದರೆ ಕೇಳುಗನಿಗೆ ಮಾತ್ರ ಶಾಸ್ತ್ರೀಯ ಜ್ಞಾನದ ಅಗತ್ಯಬೇಕಾಗಿಲ್ಲ ಎಂದು ಅರ್ಥ ಮಾಡಬೇಕಾಗಿದೆ. ಕಲಿಯುವವನಿಗೆ ಶಾಸ್ತ್ರೀಯ ಜ್ಞಾನ ಬೇಡ ಎಂದು ಅರ್ಥಮಾಡಬಾರದು. ಕನ್ನಡತನದ ಭಾವ ಸಂಸ್ಕøತಿಯ ಅವರಣದಲ್ಲಿಯೇ ಇದರ ಸಫಲತೆಯನ್ನು ಕಾಣುವುದು ಇಂದಿನ ಸವಾಲಾಗಿದೆ. ಮಹಾಕವಿ ಕುವೆಂಪು ಅವರು ಕಾಳಿಂಗರಾವ್ ಅವರಿಗೆ ನೀಡಿದ ಪ್ರಶಸ್ತಿ ಪತ್ರವೊಂದರಲ್ಲಿ ಸುಗಮಸಂಗೀತಗಾರರು ಸಾಹಿತ್ಯವನ್ನು ಹೊತ್ತುಕೊಂಡು ರಸಯಾನ ಮಾಡಬೇಕೇ ವಿನಃ ಹತ್ತಿಕೊಂಡು ಅಲ್ಲ - ಎಂದು ತಿಳಿಸಿದ್ದಾರೆ ಸುಗಮ ಸಂಗೀತ ಗಾಯಕನಾದವನು ಕವಿಯ ಕಾವ್ಯಭಾವವನ್ನು ಪ್ರೀತಿ ಭಕ್ತಿಯಿಂದ ಹೊತ್ತು ಸಾಗಿಸಬೇಕು. ಉದ್ಧಟತನದಿಂದ ಅದರ ಮೇಲೆಯೇ ಹತ್ತಿ `ಕುಳಿತು ಅಲ್ಲ -ಇಂದಿನ ಸುಗಮ ಸಂಗೀತದಲ್ಲಿ ಬೆಳಕೂ ಇದೆ ಥಳುಕೂ ಇದೆ. ಬಂಗಾರವೂ ಇದೆ ಹಿತ್ತಾಳೆಯೂ ಇದೆ. ಇಂದಿನ ಚಲನಚಿತ್ರ ಗೀತೆಗಳ ಕೆಟ್ಟ ಪ್ರಭಾವವೂ ಇದೆ. ಸುಗಮಸಂಗೀತ ಸಂಯೋಜಕರು ಚಲನಚಿತ್ರಗೀತೆಯ ಸಂಯೋಜನೆಗೂ ಸುಗಮಸಂಗೀತ ಸಂಯೋಜನೆಗೂ ದೂರ ಕಾಯ್ದುಕೊಳ್ಳಬೇಕಾಗಿದೆ. ಕವಿತೆಯ ಭಾವ ಬಂಧಗಳನ್ನು ಆಶಯಗಳನ್ನು ತನಗೆ, ಅರ್ಥವಾಗಿದ್ದಲ್ಲಿ ತಿಳಿದವರೊಂದಿಗೆ ಚರ್ಚಿಸಿ ತಿಳಿದುಕೊಳ್ಳಬೇಕು. ವಾದ್ಯಗಳ ಬಳಕೆಯಲ್ಲಿ, ಗಾಯಕರ ಕಂಠಸಿರಿಯಲ್ಲಿ ಸ್ಫುಟವಾಗಿ ಭಾವ ಹೊಮ್ಮುವಂತಿರಬೇಕು. ಪ್ರಸ್ತುತ ವಿಷಯ ವಿಚಾರಗಳಿಗೆ ಒಪ್ಪುವಂತಹ, ಸಹಜ ಸುಂದರ ಕವಿತೆಗಳಾಗಿರಬೇಕು. ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳುವಂತಹ ರಾಗ ಸಂಯೋಜನೆ, ಲಯವೈವಿಧ್ಯಗಳು ಸುಗಮ ಸಂಗೀತದ ಮಧುರ ಆಕರ್ಷಣೆಗಳಾಗಿವೆ. ಸಂಸ್ಕøತಿ ಎಂದರೆ ಮಾಧುರ್ಯ ಮತ್ತು ಬೆಳಕು ಎರಡನ್ನೂ ಚೆಲ್ಲಬೇಕು ಎಂದು ಮ್ಯಾಥ್ಯೂ ಅರ್ನಾಲ್ಡ್ ಹೇಳಿದ್ದಾನೆ. ನಮ್ಮ ಸುಗಮಸಂಗೀತಕ್ಕೂ ಈ ಮಾತು ಅನ್ವಯಿಸುತ್ತದೆ. ಅದು ಎಲ್ಲಿಯವರೆವಿಗೆ ತನ್ನ ಮಾಧುರ್ಯವನ್ನು ಉಳಿಸಿಕೊಳ್ಳುತ್ತದೋ, ಅಲ್ಲಿಯವರೆವಿಗೆ ಬೆಳಕನ್ನು ಚೆಲ್ಲುತ್ತದೆ. ಎಲ್ಲಯವರೆವಿಗೆ ಬೆಳಕು ಚೆಲ್ಲುತ್ತದೋ ಅಲ್ಲಿಯವರೆವಿಗೆ ಮಾಧುರ್ಯವನ್ನು ಉಳಿಸಿಕೊಳ್ಳುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Kalinga Rao remembered". Karnataka: The Hindu. 4 January 2009. Retrieved 16 December 2013.
  2. "Kalinga Rao: Nightingale of Karnataka". Karnataka: OurKarnataka.Com,Inc. 4 January 2009. Archived from the original on 24 ನವೆಂಬರ್ 2005. Retrieved 18 December 2013.
  3. "Down memory lane with Kalinga Rao". India: The Hindu. 4 April 2004. Archived from the original on 19 ಡಿಸೆಂಬರ್ 2013. Retrieved 16 December 2013.
  4. Kumar Das, Sisir (2011). History of Indian Literature: 1911-1956, struggle for freedom : triumph and tragedy. Sahitya Akademi. p. 25. ISBN 9788172017989.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: